Loading..

ಜಾಗತಿಕ ತಾಪಮಾನ ಏರಿಕೆ:
ದೊಡ್ಡ ರಾಷ್ಟ್ರಗಳ ಲಾಭ, ಬಡವರ ಬಲಿ-ಹವಾಮಾನ ಸಮ್ಮೇಳನ ಎಂಬ ಪ್ರಹಸನ
ದೆಹಲಿಯ ಗಾಳಿ ಈಗ ವಿಷಕಾರಿಯಾಗುತ್ತಿದೆ. ಹಸಿಬರ, ನೆರೆ ಹಾವಳಿ ಹೆಚ್ಚಾಗುತ್ತಿವೆ, ಬೇಸಿಗೆಯ ಬಿಸಿಲಿಗೆ ಜೀವಗಳು ತತ್ತರಿಸುತ್ತಿವೆ, ಹವಾಮಾನ ವೈಪರಿತ್ಯ ವಿಪರೀತವಾಗುತ್ತಿದೆ. ಜಾಗತಿಕ ತಾಪಮಾನ ಏರಿಕೆ ಈಗ ಮನುಕುಲವನ್ನೇ ಬಾಧಿಸುತ್ತಿರುವ ಸಮಸ್ಯೆಯಾಗಿದೆ.
ಹವಾಮಾನ ಬದಲಾವಣೆಯ ಕುರಿತಾದ ವಿಶ್ವಸಂಸ್ಥೆಯ ಸಮಾವೇಶ (UNFCCC) ಎಂಬುದು ಹವಾಮಾನ ಬದಲಾವಣೆಯ ಅಪಾಯಕಾರಿ ಮಾನವ ಹಸ್ತಕ್ಷೇಪವನ್ನು ತಡೆಗಟ್ಟಲು 1992 ರಲ್ಲಿ ಸ್ಥಾಪಿಸಲಾದ ಅಂತರರಾಷ್ಟ್ರೀಯ ಪರಿಸರ ಒಪ್ಪಂದವಾಗಿದೆ. ಹವಾಮಾನ ವೈಪರಿತ್ಯಕ್ಕೆ ಅತೀ ಹೆಚ್ಚು ಕಾರಣಕರ್ತರಾದ ಮುಂದುವರೆದ ದೇಶಗಳನ್ನು ಜವಾಬ್ದಾರಿಯುತರನ್ನಾಗಿಸಿ, ಈ ಸಮಸ್ಯೆಯಿಂದ ತತ್ತರಿಸುತ್ತಿರುವ ಹಿಂದುಳಿದ ದೇಶಗಳಿಗೆ ನೆರವು ಒದಗಿಸುವ ಹಾಗೂ ಮಾಲಿನ್ಯ ನಿಯಂತ್ರಣ ಕೆಲಸಗಳನ್ನು ಈ ದೊಡ್ಡ ರಾಷ್ಟ್ರಗಳಿಂದ ಮಾಡಿಸುವುದು ಈ ಸಂಸ್ಥೆಯ ಮೂಲ ಉದ್ದೇಶ. ಇಷ್ಟು ವರ್ಷಗಳಲ್ಲಿ ಇದರ ಕಾರ್ಯನಿರ್ವಹಣೆ ಹೇಗೆ ಸಾಗಿದೆ? ಇದನ್ನೊಮ್ಮೆ ಪರಿಶೀಲಿಸೋಣ.
ಕೋಪನ್ ಹ್ಯಾಗನ್ ಸಭೆ
ಕೋಪನ್ ಹ್ಯಾಗನ್ ನಲ್ಲಿ 2009 ರಲ್ಲಿ UNFCCC ನ ಸರ್ವ ಪಕ್ಷಗಳ ಸಮ್ಮೇಳನ ಜರುಗಿತು. ಸಭೆಯ ಉದ್ದೇಶವೇ ಬೇರೆ, ಅಲ್ಲಿ ಆದದ್ದೇ ಬೇರೆ. ಅತೀ ದೊಡ್ಡ ಮುಂದುವರೆದ ಕೈಗಾರಿಕಾ ರಾಷ್ಟ್ರಗಳನ್ನು ಅವುಗಳ ಮಾಲಿನ್ಯ ನಿಯಂತ್ರಿಸುವಂತೆ ಹಾಗೂ ಅದಕ್ಕಾಗಿ ಹಣ ಬಿಡುಗಡೆ ಮಾಡುವಂತೆ ಹಾಗೂ ಪೂರಕ ತಂತ್ರಜ್ಞಾನ ಅಭಿವೃದ್ಧಿಪಡಿಸುವಂತೆ ಅವುಗಳನ್ನು ಒತ್ತಾಯಿಸಬೇಕಿತ್ತು. ಆದರೆ ಇದು ಯಾವುದೂ ಸಾಧ್ಯವಾಗಲಿಲ್ಲ. ವಿಶ್ವಸಂಸ್ಥೆಯ ಈ ವೈಫಲ್ಯದ ವಿರುದ್ಧ ಪ್ರತಿರೋಧ ಪ್ರಬಲವಾಗಿ ಬೆಳೆಯಿತು. ದೊಡ್ಡ ದೇಶಗಳಿಗೆ ತಾಕೀತು ಮಾಡಲೂ ಸಾಧ್ಯವಾಗದ ವಿಶ್ವ ಸಂಸ್ಥೆಯ ಕುರಿತಾಗಿ ಜನರ ವಿಶ್ವಾಸ ಕುಗ್ಗಿತು. ಒಳಗೊಳಗೇ ನಡೆದ ಚರ್ಚೆಗಳು ಈ ಸಂಸ್ಥೆಯು ಪಾರದರ್ಶಕವೇ ಎಂಬ ಪ್ರಶ್ನೆಯನ್ನೂ ಹುಟ್ಟು ಹಾಕಿತು.
ಪ್ಯಾರಿಸ್ ಸಭೆ: ಮತ್ತೊಂದು ಸೋಲು
ಜನರಲ್ಲಿ ವಿಶ್ವಸಂಸ್ಥೆಯ ಬಗ್ಗೆ ಭರವಸೆ ತುಂಬಲು ಪ್ಯಾರಿಸ್ ಸಭೆಯನ್ನು ಮತ್ತಷ್ಟು ಪ್ರಚಾರದೊಂದಿಗೆ 2015 ರಲ್ಲಿ ಸಂಘಟಿಸಲಾಯಿತು. ಇಲ್ಲಿ ನಡೆದಿದ್ದು ಒಪ್ಪಂದಗಳಲ್ಲ, ಪ್ರಹಸನ. ದೇಶಗಳು ತಾವಾಗೇ ತಮ್ಮ ನಿರ್ಬಂಧನೆಗಳನ್ನು ಹೇರಿಕೊಳ್ಳಲು ಹಾಗೂ ತಾವಾಗಿಯೇ ತಮ್ಮಿಂದಾದಷ್ಟು ಹಣ ನೀಡುವಂತೆ ‘ಪ್ರೇರೇಪಿಸಲಾಯಿತು’. ಜನಗಳ ಒತ್ತಾಯದ ಮೇರೆಗೆ ಒಟ್ಟು ಜಾಗತಿಕ ತಾಪಮಾನ ಏರಿಕೆಯನ್ನು 2ಲಿ ಯಿಂದ 1.5ಲಿ ಗೆ ನಿಯಂತ್ರಿಸುವ ಹೊಸ ಗುರಿಯನ್ನು ಘೋಷಿಸಿದ್ದನ್ನು ಹೊರತುಪಡಿಸಿ ಇನ್ನಾವ ಯಶಸ್ಸನ್ನೂ ಈ ಸಭೆ ಕಾಣಲಿಲ್ಲ. ಪ್ಯಾರಿಸ್ ಒಪ್ಪಂದದಲ್ಲಿ ಭರವಸೆ ನೀಡಿದಂತೆ ಮುಂದುವರೆದ ರಾಷ್ಟ್ರಗಳು ವರ್ಷಕ್ಕೆ 100 ಬಿಲಿಯನ್ ಡಾಲರ್ ಹಣವನ್ನು ಬಡ ರಾಷ್ಟ್ರಗಳಿಗೆ ನೀಡಬೇಕಿತ್ತು. ಆದರೆ ಈ ಭರವಸೆ ಇಂದಿಗೂ ಕಾಗದದ ಮೇಲೆಯೇ ಉಳಿದಿದೆ. ತಂತ್ರಜ್ಞಾನ ಹಂಚಿಕೆಯಲ್ಲೂ ಸಹ ಶ್ರೀಮಂತ ರಾಷ್ಟ್ರಗಳು ಪೇಟೆಂಟ್ ಮತ್ತು ಲಾಭದ ಉದ್ದೇಶವನ್ನೇ ಹೊಂದಿವೆ!
ಗ್ಲಾಸ್ ಗೋ ಸಭೆ: ಮಗದೊಂದು ಸೋಲು
2021 ರಷ್ಟರಲ್ಲಿ ಜಗತ್ತಿನಾದ್ಯಂತ ಹೋರಾಟಗಳು ಭುಗಿಲೆದ್ದಿದ್ದವು. ಕಲ್ಲಿದ್ದಲನ್ನು ಬಳಸುತ್ತಿರುವ ಬೃಹತ್ ಕೈಗಾರಿಕೆಗಳ ಮೇಲೆ, ದೊಡ್ಡ ದೊಡ್ಡ ಕೈಗಾರಿಕಾ ರಾಷ್ಟ್ರಗಳ ಮೇಲೆ ನಿರ್ಬಂಧ ಹೇರಬೇಕೆಂಬ ಕರೆ ಸಣ್ಣ ಸಣ್ಣ ರಾಷ್ಟ್ರಗಳಿಂದ, ಜನಸಾಮಾನ್ಯರಿಂದ ಕೂಗಿ ಬಂತು. ಹವಾಮಾನ ವೈಪರಿತ್ಯದ ಕುರಿತಾಗಿ ವೈಜ್ಞಾನಿಕ ಪುರಾವೆಗಳು ಹೊರಬಂದರೂ ಗ್ಲಾಸ್ ಗೋ ಸಭೆ ಕಲಿದ್ದಲು ಗಣಿ ಧಣಿಗಳ, ದೊಡ್ಡ ರಾಷ್ಟ್ರಗಳ ತೋಳ್ಬಲಕ್ಕೆ ತನ್ನ ಉದ್ದೇಶ ಸಾಧಿಸುವಲ್ಲಿ ಸಂಪೂರ್ಣ ವಿಫಲತೆ ಕಂಡಿತು.
ಬೆಲೆಮ್ ಸಭೆ
ಈ ಬಾರಿ ಸಭೆ ನಡೆಯುವ ಸ್ಥಳವೇ ಸಂದೇಶ ಕೊಡುವಂತಿರಬೇಕೆಂದು ಅಮೆಜಾನ್ ನಲ್ಲಿ ಹಮ್ಮಿಕೊಳ್ಳಲಾಯಿತು. ಜಗತ್ತಿನ ಅತೀ ದೊಡ್ಡ ಕಾಡು ಅಮೆಜಾನ್ ಕಾಡು, ಅದರ ಹೆಬ್ಬಾಗಿಲು ಬೆಲೆಮ್. 2025 ರಲ್ಲಿ ನಡೆದ ಈ ಸಭೆಗೂ ಮುನ್ನ ಆದಿವಾಸಿಗಳು, ಪರಿಸರ ಸಂರಕ್ಷಣೆಗಾಗಿ ಹೋರಾಟ ನಿರತರು ಸಾವಿರಾರು ಸಂಖ್ಯೆಯಲ್ಲಿ ಬೀದಿಗಿಳಿದರು. ಈ ಹೋರಾಟಗಳನ್ನು ‘ಗ್ರೇಟ್ ಪೀಪಲ್ಸ್ ಮಾರ್ಚ್ ಎಂದು ಕೂಡ ಕರೆಯುತ್ತಾರೆ. ಸಾವಿರಾರು ಜನರ ಹೋರಾಟಗಳ ಕೂಗು ಇಡೀ ಜಗತ್ತಿನಾದ್ಯಂತ ಕೇಳಿತೇ ಹೊರತು, ಬೆಲೆಮ್ ಸಭೆಯ ಒಳಗೆ ಕೇಳಲಿಲ್ಲ. ಸಭೆಯಲ್ಲಿ ಕೆಲ ಆದಿವಾಸಿ ಜನರ ಪ್ರತಿನಿಧಿಗಳನ್ನು ಬಿಟ್ಟುಕೊಂಡರೇ ಹೊರತು ಅವರ ಕೂಗಿಗೆ ಕವಡೆ ಕಿಮ್ಮತ್ತನ್ನೂ ಕೊಡಲಿಲ್ಲ. ಇಂಧನಗಳ ಬಳಕೆಗೆ ನಿರ್ಬಂಧ ಹೇರುವಲ್ಲಿ, ದೊಡ್ಡ ರಾಷ್ಟ್ರಗಳಿಂದ ಹಣಕಾಸು ಪಡೆಯುವಲ್ಲಿ ಸಭೆ ವಿಫಲವಾಯಿತು. ದೊಡ್ಡ ರಾಷ್ಟ್ರಗಳ ಕಪಿಮುಷ್ಠಿಯಲ್ಲಿ ವಿಶ್ವ ಸಂಸ್ಥೆ ಬಂಧಿಯಾಗಿದೆ, ಕೈಗಾರಿಕೋದ್ಯಮಿಗಳ ದಾಳವಾಗಿದೆ ಎಂಬುದು ಮಗದೊಮ್ಮೆ ಸಾಬೀತಾಯಿತು.
ಜಾಗತಿಕ ಹವಾಮಾನ ವೈಪರಿತ್ಯಕ್ಕೆ ಮೂಲ ಕಾರಣ ಬೃಹತ್ ಕೈಗಾರೀಕರಣ ಹಾಗೂ ಅತಿಯಾದ ಇಂಧನ ಬಳಕೆ. ಇದರ ಹಿಂದೆ ದೊಡ್ಡ ರಾಷ್ಟ್ರಗಳು, ಬೃಹತ್ ಕೈಗಾರಿಕೋದ್ಯಮಿ ತಿಮಿಂಗಿಲಗಳಿವೆ. ತಮ್ಮ ಲಾಭಕ್ಕಾಗಿ ಇಡೀ ಮನುಕುಲವನ್ನೇ ಅಪಾಯಕ್ಕೆ ದೂಡುವ ಸಾಮ್ರಾಜ್ಯಶಾಹಿ ಶಕ್ತಿಗಳಿವೆ. ಕಾರ್ಪೋರೇಟ್ ಕಂಪನಿಗಳು ನಮ್ಮ ಭೂಮಿಯನ್ನು ಕೊರೆದು, ಸುಟ್ಟು, ಜಲ, ನೆಲ, ಗಾಳಿಯನ್ನು ವಿಷಕಾರಿಯಾಗಿಸಿ ವಿನಾಶದತ್ತ ತಳ್ಳುತ್ತಿವೆ. ಹವಾಮಾನ ವೈಪರಿತ್ಯಕ್ಕೆ ಇವುಗಳೇ ಕಾರಣ ಎಂಬುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಈ ಹವಾಮಾನ ವೈಪರಿತ್ಯದ ಪರಿಣಾಮವನ್ನು ಸಣ್ಣ ರಾಷ್ಟ್ರಗಳು, ದ್ವೀಪಗಳು ಹೆಚ್ಚಾಗಿ ಅನುಭವಿಸುತ್ತಿವೆ. ದೊಡ್ಡ ರಾಷ್ಟ್ರಗಳ ಲಾಭಕ್ಕಾಗಿ ಬಡ ರಾಷ್ಟ್ರಗಳು ಬೆಲೆತೆತ್ತುವಂತಾಗಿದೆ. ಈ ಸಣ್ಣ ಹಿಂದುಳಿದ ರಾಷ್ಟ್ರಗಳು ಹಾಗೂ ಜನಸಾಮಾನ್ಯರ ಹೋರಾಟಗಳಿಗೆ ಆಗಾಗ್ಗೆ ಸಮಾಧಾನ ಸೂಚಿಸುವಂತೆ ಈ ಸಭೆಗಳನ್ನು ಹಮ್ಮಿಕೊಳ್ಳಲಾಗುತ್ತಿವೆಯೇ ಹೊರತು ದೊಡ್ಡ ರಾಷ್ಟ್ರಗಳ ಮೇಲೆ ನಿಯಂತ್ರಣ ಹೇರುವಂತಹ ಯಾವ ಪರಿಣಾಮಕಾರಿ ನಡೆಗಳನ್ನು ಜಾರಿಗೆ ತರುವುದೂ ಈ ಸಭೆಗಳಿಂದ ಸಾಧ್ಯವಾಗುತ್ತಿಲ್ಲ.
ಜಾಗತಿಕ ತಾಪಮಾನ ಏರಿಕೆಯ ಪರಿಣಾಮ ಭೀಕರವಾಗುತ್ತಿದೆ. ಭೂಮಿಯ ದಕ್ಷಿಣ ಭಾಗದ ದೇಶಗಳು ಆಹಾರದ ಅಭಾವದಿಂದ ತತ್ತರಿಸುತ್ತಿವೆ. ಆರೋಗ್ಯದಂತಹ ಮೂಲಸೌಕರ್ಯಗಳಿಂದ ವಂಚಿತವಾಗುತ್ತಿವೆ. ವಿನಾಶಕಾರಿ ನೈಸರ್ಗಿಕ ವಿಕೋಪಗಳು ಜನರ ಪ್ರಾಣ ಹೀರುತ್ತಿವೆ. ಇಂತಹ ಸಂದರ್ಭದಲ್ಲಿ ಹವಾಮಾನ ವೈಪರಿತ್ಯ ತಡೆಯುವಲ್ಲಿ ಆಗುವ ಒಂದೊಂದು ನಿಮಿಷದ ವಿಳಂಬವೂ ಲಕ್ಷಾಂತರ ಜನರ ಪ್ರಾಣ ಸಂಕಟಕ್ಕೀಡುಮಾಡುತ್ತದೆ. ಈ ಸಭೆಗಳು, ಮಾತುಕತೆಗಳು ಜಾಗತಿಕ ಶಕ್ತಿಗಳ ಕೈಯಡಿ ನಡೆಯುವಂತಹವು. ಅವುಗಳ ಹಿತ ಕಾಪಾಡುವಂತೆಯೇ ನೀತಿಗಳು ರಚನೆಗೊಳ್ಳುತ್ತವೆ.
ವಿಶ್ವಸಂಸ್ಥೆಗಳ ಈ ಸಭೆಗಳು ಅವುಗಳ ದೌರ್ಬಲ್ಯದೊಂದಿಗೆ ಪ್ರಬಲ ರಾಷ್ಟ್ರಗಳ ಪ್ರಾಬಲ್ಯವನ್ನು ಜನರ ಮುಂದೆ ನಗ್ನಗೊಳಿಸಿವೆ. ವಿನಾಶದತ್ತ ಸಾಗುತ್ತಿರುವ ಈ ಭೂಮಿಯನ್ನು ವಿನಾಶಗೊಳಿಸಲಿರುವ ಲಾಭಕೋರ ರಣಹದ್ದುಗಳಿಂದ ಕಾಪಾಡುವುದು ಈಗ ಜನಸಾಮಾನ್ಯರ ಜವಾಬ್ದಾರಿಯಾಗಿದೆ.