
5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕರಾಳ ಮುಖ
ನೀತಿ ಆಯೋಗದ ಮುಖ್ಯಸ್ಥರು ಐಎಂಎಫ್‌ನ ಭಾರತದ ಜಿಡಿಪಿ ಬೆಳವಣಿಗೆಯ ಅಂದಾಜುಗಳನ್ನು ಉಲ್ಲೇಖಿಸಿ, ಭಾರತವು ಈಗಾಗಲೇ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಇದು ಕೇವಲ ಊಹಾತ್ಮಕ ಅಂದಾಜು ಎಂಬುದು ವಾಸ್ತವ. ಈ ಅಂದಾಜುಗಳು ಬಿಜೆಪಿ ಸರ್ಕಾರಕ್ಕೆ ಆತ್ಮ-ವೈಭವದ ಭ್ರಮೆಯನ್ನು ಸೃಷ್ಟಿಸಲು ಸಹಾಯ ಮಾಡಬಹುದಾದರೂ, ಐಎಂಎಫ್ ಪ್ರತಿನಿಧಿಯು ಭಾರತವು 2025 ರ ಅಂತ್ಯದ ವೇಳೆಗೆ ಕೇವಲ $4 ಟ್ರಿಲಿಯನ್ ಆರ್ಥಿಕತೆಯ ಗುರಿಯನ್ನು ತಲುಪುವ ಸಾಧ್ಯತೆಯಿದೆ ಎಂದು ಘೋಷಿಸಿದಾಗ ಈ ಭ್ರಮೆ ಒಡೆದುಹೋಯಿತು.
ದೇಶದಲ್ಲಿ ಸೃಷ್ಟಿಯಾಗುವ ಸಂಪತ್ತಿನ ಹಂಚಿಕೆಯ ಮಾದರಿಯು ಜಿಡಿಪಿ ಬೆಳವಣಿಗೆಯಲ್ಲಿ ಪ್ರತಿಫಲಿಸುವುದಿಲ್ಲ ಎಂದು ನಾವು ಪದೇ ಪದೇ ಹೇಳಿದ್ದೇವೆ. ಅಸಮಾನತೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ದೇಶದ ಒಟ್ಟು ಸಂಪತ್ತಿನ 77% ಅನ್ನು 10% ಅಗ್ರ ಶ್ರೀಮಂತರು ಹೊಂದಿದ್ದಾರೆ. ಆದರೆ, 67 ಕೋಟಿ ಬಡ ಜನರು ತಮ್ಮ ಸಂಪತ್ತಿನಲ್ಲಿ ಕೇವಲ 1% ಏರಿಕೆಯನ್ನು ಕಂಡಿದ್ದಾರೆ. ಹೀಗಾಗಿ, ಜಿಡಿಪಿ ಆಧಾರಿತ ಬೆಳವಣಿಗೆಯು ತಪ್ಪು ಕಲ್ಪನೆಯಾಗಿದೆ.
ಅದೇ ರೀತಿ, ತಲಾ ಆದಾಯ (Per Capita Income) ಕೂಡಾ ಅಷ್ಟೇ ಆಧಾರರಹಿತವಾಗಿದೆ. ತಲಾ ಆದಾಯ ಎಂದರೆ ಒಟ್ಟು ಸಂಪತ್ತನ್ನು ಒಟ್ಟು ಜನಸಂಖ್ಯೆಯಿಂದ ಭಾಗಿಸುವುದು. 16 ಜನರ ಸಂಪತ್ತು 60 ಕೋಟಿ ಜನರ ಸಂಪತ್ತಿಗೆ ಸಮನಾಗಿದ್ದರೆ, ಕೇವಲ ಅಂಕಿಅಂಶಗಳ ಸರಾಸರಿಯಾಗಿರುವ ತಲಾ ಆದಾಯವು ಯಾವುದಾದರೂ ಅರ್ಥವನ್ನು ನೀಡುತ್ತದೆಯೇ?
ಭಾರತದ ಬಾಹ್ಯ ಸಾಲವು (exಣeಡಿಟಿಚಿಟ ಜebಣ) ಕಳೆದ ಒಂಬತ್ತು ವರ್ಷಗಳಲ್ಲಿ 174% ರಷ್ಟು ಹೆಚ್ಚಾಗಿದೆ. ಅಂದರೆ, 2013-14 ಮತ್ತು 2022-23ರ ನಡುವೆ ಬಾಹ್ಯ ಸಾಲದಲ್ಲಿ 100% ಹೆಚ್ಚಳ ಕಂಡುಬಂದಿದೆ. ಬಾಹ್ಯ ಸಾಲವು ಸರ್ಕಾರದ ಒಟ್ಟು ಸಾಲದ ಒಂದು ಭಾಗವಾಗಿದೆ. 2014ರ ಮಾರ್ಚ್ 31ರಂದು ಕೇಂದ್ರ ಸರ್ಕಾರದ ಸಾಲವು 58.6 ಲಕ್ಷ ಕೋಟಿ ರೂ. (ಒಟ್ಟು ದೇಶೀಯ ಉತ್ಪನ್ನದ 52.2%) ಇತ್ತು, ಇದು 2024ರಲ್ಲಿ ಸುಮಾರು 205 ಲಕ್ಷ ಕೋಟಿ ರೂ.ಗಳಿಗೆ ಏರಿದೆ. ಹೀಗಾಗಿ, 2024 ರಲ್ಲಿ ಭಾರತದ ಸರ್ಕಾರದ ಸಾಲ-ಜಿಡಿಪಿ ಅನುಪಾತ (The first day of the week) 81.29%ಕ್ಕೆ ತಲುಪಿದೆ. ಇದರರ್ಥ, ಪ್ರಧಾನಿ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರವು “ವಿಕಸಿತ ಭಾರತ”ವನ್ನು ನಿರ್ಮಿಸುವ ಭರದಲ್ಲಿ 2014ರಿಂದೀಚೆಗೆ ಭಾರತದ ಜನಸಂಖ್ಯೆಯನ್ನು ನಾಲ್ಕು ಪಟ್ಟು ಹೆಚ್ಚು ಸಾಲದಲ್ಲಿ ಮುಳುಗಿಸಿದೆ.
ಮತ್ತೊಂದೆಡೆ, ಆಡಳಿತಾರೂಢ ಸರ್ಕಾರದ ಪ್ರಕಾರ ಭಾರತವು ಗಮನಾರ್ಹ ಆರ್ಥಿಕ ಬೆಳವಣಿಗೆಯನ್ನು ಸಾಧಿಸುತ್ತಿದ್ದರೂ, ಭಾರತದ ಸುಮಾರು 130 ಕೋಟಿ ಜನಸಂಖ್ಯೆಯ ಪೈಕಿ ಸುಮಾರು 60% ಜನರು ವಿಶ್ವಬ್ಯಾಂಕಿನ ಬಡತನ ರೇಖೆಯ (World Bank’s Median Poverty Line) ಪ್ರಕಾರ ದಿನಕ್ಕೆ 250 ರೂ.ಗಿಂತ ಕಡಿಮೆ ಆದಾಯದಲ್ಲಿ ಬದುಕುತ್ತಿದ್ದಾರೆ ಎಂದು ವರದಿಯಾಗಿದೆ. ಮತ್ತು 21% ಅಥವಾ 25 ಕೋಟಿಗೂ ಹೆಚ್ಚು ಜನರು ದಿನಕ್ಕೆ 166 ರೂ.ಗಿಂತ ಕಡಿಮೆ ಆದಾಯದಲ್ಲಿ ಬದುಕುಳಿದಿದ್ದಾರೆ.
ನಿರುದ್ಯೋಗವು ಉತ್ತುಂಗವನ್ನು ತಲುಪಿದೆ. ರಾಜಸ್ಥಾನದಲ್ಲಿ 53,749 ಗುಮಾಸ್ತ ಹುದ್ದೆಗಳಿಗೆ ಪಿಎಚ್‌ಡಿ, ಎಂಬಿಎ, ಕಾನೂನು ಪದವೀಧರರು ಮತ್ತು ಸಿವಿಲ್ ಸೇವಾ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಸೇರಿದಂತೆ 24.76 ಲಕ್ಷಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದಾರೆ. ಒಂದು ಮಾಧ್ಯಮ ವರದಿಯ ಪ್ರಕಾರ, ಉತ್ತರ ಪ್ರದೇಶದ ಪೊಲೀಸರಲ್ಲಿ ಮೆಸೆಂಜರ್‌ಗಳ 62 ಹುದ್ದೆಗಳಿಗೆ 3,700 ಪಿಎಚ್‌ಡಿ ಪದವೀಧರರು, 50,000 ಪದವೀಧರರು, 28,000 ಸ್ನಾತಕೋತ್ತರ ಪದವೀಧರರು ಅರ್ಜಿ ಸಲ್ಲಿಸಿದ್ದಾರೆ. ಈ ಹುದ್ದೆಗೆ ಕನಿಷ್ಠ ಐದನೇ ತರಗತಿಯ ಅರ್ಹತೆ ಸಾಕಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಸ್ನಾತಕೋತ್ತರ ಪದವೀಧರರು ಶವಾಗಾರ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವುದು ಕಂಡುಬಂದಿದೆ. ಇನ್ನೊಂದೆಡೆ, ಸಾಮಾನ್ಯ ಜನರ ಕೊಳ್ಳುವ ಶಕ್ತಿ ಪ್ರತಿ ಗಂಟೆಯೂ ಕುಸಿಯುತ್ತಿದೆ.
ಹಾಗಾದರೆ, 4 ಟ್ರಿಲಿಯನ್ ಆರ್ಥಿಕತೆಯು ಶ್ರಮಜೀವಿ ಭಾರತೀಯರ ಯಾವುದೇ ಮೂಲಭೂತ ಸಮಸ್ಯೆಗೆ ಪರಿಹಾರ ಒದಗಿಸಿಲ್ಲ. ಬದಲಿಗೆ, ಅವರ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಹೀಗಿರುವಾಗ, ಜಿಡಿಪಿ ಬೆಳವಣಿಗೆಯ ಬಗ್ಗೆ ಅಥವಾ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಓಟದ ಬಗ್ಗೆ ಸಂಭ್ರಮಿಸಲು ಏನಿದೆ?
ಇನ್ನೊಂದೆಡೆ, ಆಡಳಿತಾರೂಢರ ದೃಷ್ಟಿಕೋನದಿಂದ ನೋಡಿದರೆ ಪರಿಸ್ಥಿತಿ ಎಷ್ಟು ಆಶಾದಾಯಕವಾಗಿದೆ? ರಾಷ್ಟ್ರೀಯ ದತ್ತಾಂಶ ಕಚೇರಿಯ (NSO) ಪ್ರಕಾರ, ಕೈಗಾರಿಕಾ ಉತ್ಪಾದನೆಯ ಬೆಳವಣಿಗೆಯ ದರವು (Rate of Industrial Production) 2.7% ಕ್ಕೆ ಇಳಿದಿದೆ. ಮಾರುಕಟ್ಟೆಯಲ್ಲಿನ ಬೇಡಿಕೆಯನ್ನು ಅವಲಂಬಿಸಿ ಕೈಗಾರಿಕಾ ಉತ್ಪಾದನೆ ನಿರ್ಧಾರವಾಗುತ್ತದೆ ಎಂದು ಖ್ಯಾತ ಅರ್ಥಶಾಸ್ತ್ರಜ್ಞರೊಬ್ಬರು ಒಪ್ಪಿಕೊಂಡಿದ್ದಾರೆ. ಆದರೆ, ಜನರಲ್ಲಿ ಕೊಳ್ಳುವ ಶಕ್ತಿ ಇಲ್ಲದ ಕಾರಣ ಬೇಡಿಕೆ ಕುಸಿಯುತ್ತಿದೆ.
ಭಾರತದಲ್ಲಿನ ನೇರ ವಿದೇಶಿ ಹೂಡಿಕೆ (FII) ಬಂಡವಾಳಶಾಹಿಗಳ ದೃಷ್ಟಿಯಿಂದ ಆತಂಕಕಾರಿ ಮಟ್ಟಕ್ಕೆ ಇಳಿದಿದೆ. ಇದು ವಿದೇಶಿ ಉದ್ಯಮಿಗಳಿಗೆ ಭಾರತದಲ್ಲಿ ಯಾವುದೇ ಭವಿಷ್ಯವಿಲ್ಲ ಎಂಬುದನ್ನು ಸೂಚಿಸುತ್ತದೆ. ಭಾರತೀಯ ಕಾರ್ಪೊರೇಟ್‌ಗಳು ಸಹ ಯಾವುದೇ ಹೊಸ ಹೂಡಿಕೆ ಮಾಡಲು ಹಿಂಜರಿಯುತ್ತಿದ್ದಾರೆ. ಸಂಗ್ರಹವಾದ ಬಂಡವಾಳವನ್ನು ಊಹಾತ್ಮಕ ಷೇರು ಮಾರುಕಟ್ಟೆಗೆ ಪಂಪ್ ಮಾಡಲಾಗುತ್ತದೆ. ಇದು ಕೃತಕ ಏರಿಕೆಯನ್ನು ಉತ್ತೇಜಿಸುತ್ತದೆ, ಆದರೆ ಇದು ಆರ್ಥಿಕ ಬೆಳವಣಿಗೆಯ ಸೂಚಕವಲ್ಲ, ಬದಲಿಗೆ ಅಸ್ವಸ್ಥತೆಯ ಸಂಕೇತ ಎಂದು ನಾವು ಪದೇ ಪದೇ ಹೇಳುತ್ತಿದ್ದೇವೆ.
2016 ರ ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ, ಪ್ರಧಾನಿ ಮೋದಿ ಅವರು ಕಪ್ಪು ಹಣವನ್ನು ಹೊರತರಲಾಗುತ್ತದೆ, ನಕಲಿ ನೋಟುಗಳು ಅಮಾನ್ಯವಾಗುತ್ತವೆ ಮತ್ತು ಭಯೋತ್ಪಾದಕರಿಗೆ ಹಣಕಾಸು ನೆರವು ನಿಲ್ಲುತ್ತದೆ ಎಂದು ಹೇಳಿಕೊಂಡಿದ್ದರು. ಇವುಗಳಲ್ಲಿ ಯಾವುದೂ ನಿಜವಾಗಲಿಲ್ಲ.
ಕಪ್ಪುಹಣ ತಾಂಡವವಾಡುತ್ತಿದೆ. ಸಿಬಿಐನ ಮಾಜಿ ನಿರ್ದೇಶಕರೊಬ್ಬರು ಭಾರತದಲ್ಲಿನ ಒಟ್ಟು ಕಪ್ಪು ಹಣ ಸುಮಾರು 500 ಬಿಲಿಯನ್ ಡಾಲರ್ (43.5 ಲಕ್ಷ ಕೋಟಿ ರೂ.) ಎಂದು ಹೇಳಿದ್ದಾರೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪತ್ತೆಯಾದ 500 ರೂ. ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆ 2023-24ರಲ್ಲಿ 85, 711 ರಿಂದ 2024-25ರಲ್ಲಿ 1,17,722 ಕ್ಕೆ ವಾರ್ಷಿಕ 37.35 ಶೇಕಡಾ ಏರಿಕೆಯಾಗಿದೆ. ಇದು ಆರು ವರ್ಷಗಳಲ್ಲಿ (2020ರ ಆರ್ಥಿಕ ವರ್ಷದಿಂದ) ಅತಿ ಹೆಚ್ಚು ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ವಾರ್ಷಿಕ ವರದಿ ಕಳೆದ ಮೇ ತಿಂಗಳಲ್ಲಿ ತೋರಿಸಿದೆ. ಮತ್ತು ಗೃಹ ವ್ಯವಹಾರಗಳ ರಾಜ್ಯ ಸಚಿವರು 2023ರ ಆಗಸ್ಟ್ ೯ರಂದು ಲೋಕಸಭೆಯಲ್ಲಿ, ಕಾಶ್ಮೀರ ಒಂದರಲ್ಲಿಯೇ 2018 ಮತ್ತು 2023ರ ಜುಲೈ 31ರ ನಡುವೆ 793 ಭಯೋತ್ಪಾದಕ ಹಿಂಸಾಚಾರ ಘಟನೆಗಳು ಸಂಭವಿಸಿವೆ ಎಂದು ಹೇಳಿಕೆ ನೀಡಿದ್ದಾರೆ. ಹಾಗಾದರೆ, 105 ಕ್ಕೂ ಹೆಚ್ಚು ಅಮೂಲ್ಯ ಜೀವಗಳನ್ನು ಬಲಿ ತೆಗೆದುಕೊಂಡು ಮತ್ತು 99% ಕರೆನ್ಸಿಗಳನ್ನು ಬ್ಯಾಂಕಿನಲ್ಲಿ ಜಮಾ ಮಾಡಿದ ನೋಟು ಅಮಾನ್ಯೀಕರಣದ ರಾತ್ರೋರಾತ್ರಿಯ ಘೋಷಣೆಯ ಪ್ರಯೋಜನವೇನು?
ಕೈಗಾರಿಕಾ ಉತ್ಪಾದನೆ ಕುಸಿದಿದೆ, ನಿರುದ್ಯೋಗ ಹೆಚ್ಚುತ್ತಿದೆ. ಜನರ ಆದಾಯ ಕುಗ್ಗುತ್ತಿದೆ, ಕೇವಲ ಕೈಗಾರಿಕಾ ದಿಗ್ಗಜರ ಮತ್ತು ಬೆರಳೆಣಿಕೆಯಷ್ಟು ಬಿಲಿಯನೇರ್‌ಗಳ, ಭ್ರಷ್ಟ ರಾಜಕಾರಣಿಗಳ ಮತ್ತು ಅಧಿಕಾರಿಗಳ ಖಜಾನೆಗಳು ೫ ಟ್ರಿಲಿಯನ್ ಆರ್ಥಿಕತೆಯತ್ತ ಸಾಗುವ ಹಾದಿಯಲ್ಲಿ ಹಿಗ್ಗುತ್ತಿವೆ. ಆಡಳಿತಾರೂಢ ಬಿಜೆಪಿ ಮತ್ತು ಪ್ರಧಾನಿ ಮೋದಿಗೆ ಆಪ್ತರೆಂದು ಹೇಳಲಾದ ಕೆಲವರು ವಂಚಕ ಉದ್ಯಮಿಗಳು 69,000 ಕೋಟಿ ರೂ. ಬ್ಯಾಂಕ್ ಸಾಲಗಳನ್ನು ಮರುಪಾವತಿಸದೆ ದೇಶದಿಂದ ಪರಾರಿಯಾಗಿದ್ದಾರೆ. ಈ ಸುಸ್ತಿದಾರ ಉದ್ಯಮಿಗಳು ವಿದೇಶಗಳಲ್ಲಿ ಮಜಾ ಮಾಡುತ್ತಿರುವುದರಿಂದ ಆ ಹಣವನ್ನು ವಸೂಲಿ ಮಾಡುವುದರ ಬಗ್ಗೆ ಆರ್‌ಬಿಐ ಭರವಸೆ ಕಳೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ, ಕಳೆದ 11 ವರ್ಷಗಳಲ್ಲಿ ಬ್ಯಾಂಕ್ ವಂಚನೆಗಳಲ್ಲಿ 416% ರಷ್ಟು ಭಾರಿ ಹೆಚ್ಚಳ ವಾಗಿದ್ದು 6,36,992ಕೋಟಿ ರೂ.ಗಳನ್ನು ತಲುಪಿದೆ ಎಂದು ವರದಿಯಾಗಿವೆ.
ಹಾಗಾದರೆ, ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ದಿಟ್ಟ ಹೆಜ್ಜೆಗಳನ್ನು ಇಡುತ್ತಿದೆ ಎಂದು ನಿರಂತರ ತುತ್ತೂರಿ ಊದುವುದರ ಕುರಿತು ಯಾವ ತೀರ್ಮಾನಕ್ಕೆ ಬರಬಹುದು? ಇದು ಭಾರತದ ದುಡಿಯುವ ಜನರ ಗೋರಿಗಳ ಮೇಲೆ ಕಟ್ಟುವ ಅರಮನೆಯಲ್ಲವೇ?