ಕೃತಕ ಬುದ್ಧಿಮತ್ತೆಯ ಸವಾಲುಗಳು
ಇತ್ತೀಚಿನ ದಿನಗಳಲ್ಲಿ ಎಐ, ಅಂದರೆ ಕೃತಕ ಬುದ್ಧಿಮತ್ತೆಯ ಬಗ್ಗೆ ವ್ಯಾಪಕ ಚರ್ಚೆಗಳೆದ್ದಿವೆ. ಈ ಹೊಸ ತಂತ್ರಜ್ಞಾನವು ಕ್ರಾಂತಿಕಾರಕ ರೀತಿಯಲ್ಲಿ ಭಿನ್ನ ಕ್ಷೇತ್ರಗಳನ್ನು ಪ್ರಭಾವಿಸುತ್ತಿದೆ. ಮುಂದಿನ ದಿನಗಳಲ್ಲಿ ಇದು ಮಾನವ ನಾಗರಿಕತೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎನ್ನುವುದರ ಬಗ್ಗೆ ಭಿನ್ನ ಭಿನ್ನ ನೆಲೆಯಲ್ಲಿ ವಿಶ್ಲೇಷಿಸಲಾಗುತ್ತಿದೆ. ಒಟ್ಟಾರೆಯಾಗಿ ಇದರಿಂದ ಮಾನವತೆಗೆ ಒಳಿತಾಗುವುದೋ ಅಥವಾ ಕಂಟಕವಾಗುವುದೋ ಎನ್ನುವುದೇ ಈಗ ಸಮಾಜಮುಖಿ ಚಿಂತಕರ ಸಧ್ಯದ ಆತಂಕ. ಈಗಾಗಲೇ ಬಂಡವಾಳಶಾಹಿ ಸಾಮ್ರಾಜ್ಯಶಾಹಿ ಶಕ್ತಿಗಳು ಜನಸಾಮಾನ್ಯರ ಹಿತಾಸಕ್ತಿಯ ಬಗ್ಗೆ ಕಿಂಚಿತ್ತೂ ಯೋಚಿಸದೆ ಈ ಹೊಸ ತಂತ್ರಜ್ಞಾನವನ್ನು ತಮ್ಮ ಲಾಭಕ್ಕಾಗಿ ಬಳಸತೊಡಗಿವೆ. ಒಂದೆಡೆ ಎಐ ಬಳಕೆಯಿಂದಾಗಿ ಹೆಚ್ಚೆಚ್ಚು ನೌಕರರು ತಮ್ಮ ಉದ್ಯೋಗ ಕಳೆದುಕೊಳ್ಳುವ ಸಂಭವವಿದ್ದರೆ, ಇನ್ನೊಂದೆಡೆ, ಯುದ್ಧಗಳಲ್ಲಿಯೂ ಇದರ ದುರ್ಬಳಕೆ ಆರಂಭಗೊಂಡಿದ್ದು, ಮಾರಣಹೋಮ ನಡೆಸಲು ಮತ್ತೊಂದು ಹತ್ಯಾರ ಆಳುವ ವರ್ಗಕ್ಕೆ ಸಿಕ್ಕಿದಂತಾಗಿದೆ. ಅಲ್ಲದೆ, ಮನುಷ್ಯನ ಮಿದುಳಿನ ಕಾರ್ಯಚಟುವಟಿಕೆಗಳ ಮೇಲೆ ಇದು ಯಾವ ಪ್ರಭಾವ ಬೀರಬಹುದೆಂಬುದರ ಬಗ್ಗೆಯೂ ವಿಜ್ಞಾನಿಗಳು, ಮಾನಸಿಕ ತಜ್ಞರು ಚಿಂತಿಸತೊಡಗಿದ್ದಾರೆ ಹಾಗೂ ಆತಂಕ ವ್ಯಕ್ತಪಡಿಸಿದ್ದಾರೆ.
ಸಾಮ್ರಾಜ್ಯಶಾಹಿ ಯುದ್ಧೋಪಕರಣದಲ್ಲಿ ಎಐ ದುರ್ಬಳಕೆ – ಮಾನವತೆಗೆ ಕಂಟಕಪ್ರಾಯ
ಇತ್ತೀಚೆಗೆೆ ಸಾಮಾಜಿಕ ಜಾಲತಾಣದಲ್ಲೊಂದು ವಿಡಿಯೋ ವೈರಲ್ ಅಯಿತು. ದೈತ್ಯ ಬಹುರಾಷ್ಟ್ರೀಯ ಟೆಕ್ ಕಂಪನಿಯಾದ ಮೈಕ್ರೊಸಾಫ್ಟ್ ಉದ್ಯೋಗಿಯೊಬ್ಬರು ಕಂಪನಿಯ ೫೦ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರತಿಭಟಿಸಿದ ವಿಡಿಯೋ ಅದು. ಮೈಕ್ರೊಸಾಫ್ಟ್ ಎಐ ಸಿಇಒ ಮುಸ್ತಾಫ ಸುಲೆಮಾನ್ರವರು ಕಂಪನಿಯ ಹೊಸ ಎಐ ಉತ್ಪನ್ನಗಳ ಬಗ್ಗೆ ವಿವರ ನೀಡುವ ಸಂದರ್ಭದಲ್ಲಿ, ಮಿಸ್ ಇಬ್ತಿಹಲ್ ಅಬೌಸಾದ್ ಎಂಬುವವರು, ವೇದಿಕೆಯ ಹತ್ತಿರ ನಡೆದು, “ಮಿಸ್ಟರ್ ಮುಸ್ತಾಫಾ, ನಾಚಿಕೆಯಾಗುವುದಿಲ್ಲವೇ? ಧಿಕ್ಕಾರ ನಿನಗೆ….. ಎಐಯನ್ನು ನರಮೇಧಕ್ಕಾಗಿ ಬಳಸುವುದನ್ನು ನಿಲ್ಲಿಸಿ. ನೀವು ಯುದ್ಧದ ಲಾಭಪಿಪಾಸುಗಳು. ಇಡೀ ಮೈಕ್ರೊಸಾಫ್ಟ್ ಕೈಯ ಮೇಲೆ ರಕ್ತವಿದೆ.” ಎಂದರು. ಸೆಕ್ಯುರಿಟಿಯವರು ಅವರನ್ನು ಹೊರತಳ್ಳಿದಾಗಲೂ ಧೃತಿಗೆಡದೆ ಧೈರ್ಯದಿಂದ ಘೋಷಿಸಿದರು: “ನೀವು ಎಐಯನ್ನು ಒಳಿತಿಗಾಗಿ ಬಳಸುವ ಉದ್ದೇಶವಿದೆಯೆಂದು ಹೇಳಿಕೊಳ್ಳುತ್ತೀರಿ. ಆದರೆ, ಮೈಕ್ರೊಸಾಫ್ಟ್ ಎಐ ಅಸ್ತ್ರಗಳನ್ನು ಇಸ್ರೇಲಿ ಮಿಲಿಟರಿಗೆ ಮಾರಾಟಮಾಡುತ್ತಿದೆ. ಐವತ್ತು ಸಾವಿರ ಪ್ಯಾಲೆಸ್ತೇನಿಯರು ಸತ್ತಿದ್ದಾರೆ.” ಅವರು ಅಲ್ಲಿಗೇ ನಿಲ್ಲಿಸದೆ, ವೇದಿಕೆಯೆಡೆಗೆ ತಮ್ಮ ಸ್ಕಾರ್ಫನ್ನು ಎಸೆದು, ಪ್ಯಾಲೆಸ್ತೇನಿಯರ ಪರ ಸಾಂಕೇತಿಕ ಬೆಂಬಲ ಜಗಜ್ಜಾಹೀರುಗೊಳಿಸಿದರು.
ಇಂಥಹುದೇ ಮತ್ತೊಂದು ಸಂಭ್ರಮಾಚರಣೆಯ ಸಂದರ್ಭ. ಅಧ್ಯಕ್ಷತೆಯನ್ನು ಬಿಲ್ ಗೇಟ್ಸ್ ಹಾಗೂ ಸತ್ಯ ನಡೆಲ್ಲ ವಹಿಸಿಕೊಂಡಿದ್ದರು. ಅವರ ಸಮ್ಮುಖದಲ್ಲೇ, ಮಿಸ್ ವನಿಯಾ ಅಗರ್ವಾಲ್ ಎಂಬ ಭಾರತೀಯ ಮೂಲದ ಎಂಜಿನಿಯರ್, “ಮೈಕ್ರೊಸಾಫ್ಟ್ ತಾಂತ್ರಿಕ ನೆರವಿನಿಂದ ಗಾಜಾ಼ಪಟ್ಟಿಯಲ್ಲಿ ೫೦ ಸಾವಿರ ಪ್ಯಾಲೆಸ್ತೇನಿಯರ ಹತ್ಯೆ ನಡೆದಿದೆ. ಅವರ ನೆತ್ತರಿನ ಮೇಲೆ ನೀವು ನಡೆಸುತ್ತಿರುವ ಸಂಭ್ರಮಾಚರಣೆಗೆ ಧಿಕ್ಕಾರವಿರಲಿ!” ಎಂದು ದನಿ ಎತ್ತರಿಸಿ ಪ್ರತಿಭಟಿಸಿದರು. ಇಲ್ಲಿಯೂ ಸಹ ವನಿಯಾ ಅಗರ್ವಾಲರನ್ನು ಬಲವಂತವಾಗಿ ಸಭೆಯಿಂದ ಹೊರಹಾಕಲಾಯಿತು. ಕೆಲವೇ ದಿನಗಳಲ್ಲಿ, ಈ ಇಬ್ಬರೂ ಉದ್ಯೋಗಿಗಳನ್ನು, ಮೈಕ್ರೊಸಾಫ್ಟ್ ತೆಗೆದುಹಾಕಿತು. ಈ ಘಟನೆಗಳು ಜರುಗುವ ಮುನ್ನ, ಹಳೆಯ ಮತ್ತು ಈಗಿನ ಉದ್ಯೋಗಿಗಳು, ಒಂದು ಪ್ರತಿಭಟನಾ ರ್ಯಾಲಿ ಸಂಘಟಿಸಿದ್ದರು. ಅವರು ಹಿಡಿದಿದ್ದ ಬ್ಯಾನರಿನಲ್ಲಿ ಈ ರೀತಿ ಭಿತ್ತಿಸಲಾಗಿತ್ತು: “ನರಮೇಧಕ್ಕೆ ಮೈಕ್ರೋಸಾಫ್ಟ್ನ ಕುಮ್ಮಕ್ಕಿದೆ”. ಈ ಎಲ್ಲಾ ಬೆಳವಣಿಗೆಗಳ ಮೂಲಕ, ಹೇಗೆ ಸಾಮ್ರಾಜ್ಯಶಾಹಿ ಶಕ್ತಿಗಳು ಬಹುರಾಷ್ಟ್ರೀಯ ಕಂಪನಿಗಳ ಜತೆಗೂಡಿ, ಎಐಯನ್ನು ಯುದ್ಧಗಳಲ್ಲಿ ಬಳಸುತ್ತಾರೆ ಎಂಬುದು ಮುನ್ನೆಲೆಗೆ ಬರುವಂತಾಯಿತು.
ಅನೇಕ ಅಧ್ಯಯನಗಳಲ್ಲಿ, ರಷ್ಯಾ – ಉಕ್ರೇನ್ ಕದನ, ಇಸ್ರೇಲ್ ಗಾಜಾದ ಮೇಲೆ ನಡೆಸಿದ ವೈಮಾನಿಕ ದಾಳಿಗಳಲ್ಲೆಲ್ಲಾ ಎಐ ಚಾಲಿತ ಸ್ವಾಯತ್ತ ವೈಮಾನಿಕ ವ್ಯವಸ್ಥೆ (Autonomous Aviation Systems- AAS) ಯನ್ನು ವ್ಯಾಪಕವಾಗಿ ಬಳಸಿದ್ದರ ಬಗ್ಗೆ ಉಲ್ಲೇಖಗಳಿವೆ. ಇತ್ತೀಚೆಗೆ ಪಾಕಿಸ್ತಾನದ ಮೇಲೆ ಭಾರತದ ಮಿಲಿಟರಿ ದಾಳಿಯಲ್ಲಿಯೂ ಎಐ ಬಳಕೆಯಾಗಿದೆ, ವಿಶೇಷವಾಗಿ, ಗುರಿಯ ನಿಖರತೆ ಹಾಗೂ ಸಮನ್ವಯಿತ ದಾಳಿಗಳಲ್ಲಿ ಎಐ ಪ್ರಮುಖಪಾತ್ರ ವಹಿಸಿದೆ. ಎಐ ಚಾಲಿತ ಡ್ರೋನ್ಗಳು ಹಾಗೂ ಮಾನವರಹಿತ ವಾಹನಗಳು, ಕಣ್ಗಾವಲು ಮತ್ತು ಯುದ್ಧ ಕಾರ್ಯಾಚರಣೆಗಳನ್ನು ಮಾಡಬಲ್ಲವು. ಅದೂ ಕನಿಷ್ಠ ಮಾನವ ಹಸ್ತಕ್ಷೇಪದೊಂದಿಗೆ. ಇಷ್ಟೇ ಅಲ್ಲದೆ, ಸ್ಯಾಟೆಲೈಟ್ ತೆಗೆದ ಚಿತ್ರಗಳು, ಸೆನ್ಸಾರ್ಗಳು ಮುಂತಾದ ಭಿನ್ನ ಮೂಲಗಳಿಂದ ಬಂದ ರಾಶಿ ರಾಶಿ ದತ್ತಾಂಶವನ್ನು ಅದು ಅರಗಿಸಿಕೊಂಡು ಉಪಯೋಗಿಸಿಕೊಳ್ಳಬಲ್ಲದು. ಇದರಿಂದಾಗಿ, ರಿಯಲ್-ಟೈಂ ಒಳನೋಟಗಳು ಸಿಕ್ಕುತ್ತವೆ ಮತ್ತು ಸಾಂದರ್ಭಿಕ ಅರಿವೂ ತೀಕ್ಷ್ಣವಾಗುತ್ತದೆ. ಒಟ್ಟಾರೆಯಾಗಿ, ಯುದ್ಧಗಳಲ್ಲಿ, ಕಂಡರಿಯದ ರೀತಿಯಲ್ಲಿ ಅದು ಅತ್ಯಂತ ಮುಂದುವರೆದ ಸಾಮರ್ಥ್ಯಗಳನ್ನು ಒದಗಿಸುತ್ತದೆ. ಗಾಜಾದ ಮೇಲೆ ಎಐ ಸಿಸ್ಟಂಗಳಾದ, ‘ಗಾಸ್ಪೆಲ್’ ಮತ್ತು ‘ಲ್ಯಾವೆಂಡರ್’ ಬಳಸಲಾಗಿದೆಯಂತೆ. ಇಂತಹ ಎಷ್ಟೋ ಎಐ ಸಿಸ್ಟಂಗಳು ಇಂದು ಯುದ್ಧಪಿಪಾಸು ಬಂಡವಾಳಶಾಹಿ ಶಕ್ತಿಗಳ ಬಳಕೆಗಾಗಿ ಕಾದುಕುಳಿತಿವೆ.
ಹಿಂದೆ, ಬಂಡವಾಳಶಾಹಿಗಳು, ಯುದ್ಧ ಮೂಲಸೌಕರ್ಯಗಳು, ಅಂದರೆ, ಬಂದೂಕು, ಟ್ಯಾಂಕು, ಬಾಂಬುಗಳು, ವಿಮಾನ, ಮಿಸೈಲುಗಳು ಇತ್ಯಾದಿಗಳ ಮೇಲೆ ಹಣ ವ್ಯಯಿಸುತ್ತಿದ್ದರೆ, ಈಗ, ಎಐ ಬಂದಮೇಲೆ, ಸಾಮ್ರಾಜ್ಯಶಾಹಿಗಳು ತಮ್ಮ ಯುದ್ಧಚರ್ಯೆಯನ್ನು ಬದಲಿಸಿ, ಈ ಹೊಸ ತಂತ್ರಜ್ಞಾನದ ಮೇಲೆ ಹಣ ಸುರಿಯುತ್ತಿದ್ದಾರೆ.
ಒಂದು ಅಧ್ಯಯನದ ಪ್ರಕಾರ, ಅಮೆರಿಕಾದಲ್ಲಿ, ೨೦೨೨ ರಿಂದ ೨೦೨೩ ಅವಧಿ, ಅಂದರೆ ಕೇವಲ ಒಂದು ವರ್ಷದಲ್ಲಿ, ಎಐ ಮೇಲೆ ಹೂಡಿದ ಹಣ ಮೂರು ಪಟ್ಟು ಹೆಚ್ಚಾಗಿದೆ! ಈ ಸಂದರ್ಭದಲ್ಲಿ ಅಮೆರಿಕಾ ಹೊಸ ಉಪಕ್ರಮಗಳನ್ನು ಯೋಜಿಸಿದೆ. ಅಜುರ್ ಎನ್ನುವ ಮೈಕ್ರೊಸಾಫ್ಟ್ ಕ್ಲೌಡ್ ಕಂಪ್ಯೂಟಿಂಗ್ ವೇದಿಕೆಯನ್ನು ಕ್ಲೌಡ್ ದಾಸ್ತಾನಿಗಾಗಿ ನೇಮಿಸಿಕೊಂಡಿದೆ. ಗಾಜಾ ಮತ್ತು ಲೆಬನಾನ್ ಮೇಲೆ ಎಸಗಲಾದ ಬಾಂಬ್ ದಾಳಿಯಲ್ಲಿ, ನಿಖರವಾದ ಗುರಿಯನ್ನು ಗುರುತಿಸುವುದಕ್ಕೆ, ಮೈಕ್ರೊಸಾಫ್ಟ್ ಒದಗಿಸಿದ ಎಐ ಮಾಡಲ್ಅನ್ನು ಬಳಸಲಾಗಿದೆಯೆಂದು ತನಿಖಾ ವರದಿಗಳು ತಿಳಿಸುತ್ತವೆ. ಇದೇ ಕಾರಣಕ್ಕಾಗಿ, ಮೈಕ್ರೊಸಾಫ್ಟ್ನ ಮಾಜಿ ಮತ್ತು ಪ್ರಸಕ್ತ ಉದ್ಯೋಗಿಗಳು “ನೋ ಅಜುರ್ ಫಾರ್ ಅಪಾರ್ಥಿಯೇಡ್” ಎನ್ನುವ ಗುಂಪಿನ ಮೂಲಕ ಒಂದಾದ ಮೇಲೆ ಒಂದರಂತೆ ಪ್ರತಿಭಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಕಂಪನಿಯ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರತಿಭಟನೆಯ ಬಿಸಿ ಮುಟ್ಟಿಸಿದ್ದು ಇದೇ ಗುಂಪಿನ ಪ್ರತಿಭಟನೆಯ ಭಾಗ.
ಪ್ರತಿಕ್ರಾಂತಿಯ ನಂತರ, ಅಮೆರಿಕಾದಂತೆ ದೊಡ್ಡ ಸಾಮ್ರಾಜ್ಯಶಾಹಿ ಶಕ್ತಿಯಾಗಿ ಹೊರಹೊಮ್ಮಲು ಹವಣಿಸುತ್ತಿರುವ ಚೀನಾವೂ ಸಹ “ಮುಂದಿನ ಪೀಳಿಗೆಯ ಎಐ ಅಭಿವೃದ್ಧಿ ಯೋಜನೆ”ಯನ್ನು ರೂಪಿಸುತ್ತಿದೆ. ಮತ್ತು ೨೦೩೦ರ ಹೊತ್ತಿಗೆ ಎಐ ನಲ್ಲಿ ಜಗತ್ತಿನ ನಾಯಕನಾಗುವ ಆಕಾಂಕ್ಷೆಯನ್ನು ವ್ಯಕ್ತಪಡಿಸಿದೆ. ಹಾಗೆಯೇ ಮತ್ತೊಂದು ಸಾಮ್ರಾಜ್ಯಶಾಹಿ ರಾಷ್ಟ್ರ, ರಷ್ಯಾದ ಅಧ್ಯಕ್ಷ ಪುಟಿನ್, “ಎಐ ಕೇವಲ ರಷ್ಯಾ ಮಾತ್ರವಲ್ಲದೆ, ಇಡೀ ಮನುಕುಲದ ಭವಿಷ್ಯವಾಗಿದೆ. ಯಾರು ಈ ಕ್ಷೇತ್ರದಲ್ಲಿ ನಾಯಕರಾಗುತ್ತಾರೋ, ಅವರೇ ಜಗತ್ತಾನ್ನಾಳುವವರಾಗುತ್ತಾರೆ” ಎಂದರು. ಭಾರತವನ್ನೊಳಗೊಂಡಂತೆ, ಎಲ್ಲಾ ಬಂಡವಾಳಶಾಹಿ ದೇಶಗಳು ಈ ಸ್ಪರ್ಧೆಯಲ್ಲ್ಲಿ ಬಿದ್ದಿದ್ದಾರೆ. ಮಾನವಕುಲದ ಒಳಿತು ಮಾತ್ರ ಅವರ ಆದ್ಯತೆಯ ಪಟ್ಟಿಯಲ್ಲಿಲ್ಲ.
ಹೊಸ ತಂತ್ರಜ್ಞಾನವನ್ನು ಪರೀಕ್ಷಿಸಲು ಯುದ್ಧಭೂಮಿಯೇ ಪ್ರಯೋಗಾಲಯ!
ಎರಡನೆಯ ಜಾಗತಿಕ ಯುದ್ಧದ ಕೊನೆಯಲ್ಲಿ, ಹಿಟ್ಲರ್ನ ನಾಜಿ ಸೈನ್ಯವನ್ನು, ಮಹಾನ್ ಸ್ಟಾಲಿನ್ ನೇತೃತ್ವದ ಕೆಂಪು ಸೇನೆಯು ಮಣಿಸಿ ಯುದ್ಧದಲ್ಲಿ ಗೆಲ್ಲುತ್ತಿದ್ದಂತೆ, ಸಾಮ್ರಾಜ್ಯಶಾಹಿ ಅಮೇರಿಕಾ, ಆಗತಾನೆ ಅಭಿವೃದ್ಧಿ ಪಡಿಸಿದ ಅಣುಬಾಂಬನ್ನು ಪರೀಕ್ಷಿಸಲು ಈ ಸಂದರ್ಭವನ್ನು ಬಳಿಸಿಕೊಂಡಿತ್ತು! ಜಪಾನ್ ದೇಶದ ಹಿರೋಷಿಮಾ ಮತ್ತು ನಾಗಾಸಾಕಿ ನಗರಗಳ ಮೇಲೆ ಬಾಂಬುಗಳನ್ನು ಹಾಕಿ ಸಾವಿರಾರು ಮುಗ್ಧ ಜನತೆಯ ಮಾರಣಹೋಮಕ್ಕೆ ಕಾರಣವಾಯಿತು. ಈ ಕುಕೃತ್ಯಕ್ಕೆ ಬಹುವಾಗಿ ನೊಂದ ವಿಜ್ಞಾನಿ ಆಲ್ಬರ್ಟ್ ಐನ್ಸ್ಟೆೈನ್, ವಿಜ್ಞಾನದ ಹೊಸ ಆವಿಷ್ಕಾರಗಳು, ಮನುಕುಲವನ್ನು ಮೇಲೆತ್ತುತ್ತವೆ ವಿನಃ ಹಾಳುಗೆಡವುದಿಲ್ಲವೆಂದು ನಂಬಿದ್ದೆ ಎಂದು ತೀವ್ರವಾದ ವಿಷಾದ ವ್ಯಕ್ತಪಡಿಸಿದರು. ಆದರೆ, ಅಮೆರಿಕಾ ನೇತೃತ್ವದ ಸಾಮ್ರಾಜ್ಯಶಾಹಿ ದೇಶಗಳು ಇದ್ಯಾವುದನ್ನೂ ಕಿವಿಯಲ್ಲಿ ಹಾಕಿಕೊಳ್ಳದೆ, ಒಂದರ ಮೇಲೆ ಒಂದು, ಇನ್ನೂ ಹೆಚ್ಚು ಶಕ್ತಿಯುತ ಬಾಂಬುಗಳು, ಅಸ್ತ್ರಗಳನ್ನು ನಿರ್ಮಿಸತೊಡಗಿ, ತನ್ಮೂಲಕ ವಿಶ್ವವನ್ನು ತಮ್ಮ ಆಣತಿಯಲ್ಲಿಡಲು ಬಯಸಿದರು. ಪರಮಾಣು ಜಲಾಂತರ್ಯಾಮಿ ನೌಕೆಗಳು, ಖಂಡಾಂತರ ಬ್ಯಾಲಿಸ್ಟಿಕ್ ಮಿಸೈಲುಗಳು, ವಿಮಾನ ನಿರೋಧಕ ಮಿಸೈಲ್ ಸಿಸ್ಟೆಮ್ ಇತ್ಯಾದಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ನಿರ್ಮಿಸಿ, ಅವನ್ನು ಜಗತ್ತಿನ ವಿವಿಧೆಡೆ, ಸಾಮ್ರಾಜ್ಯಶಾಹಿಗಳೇ ಹುಟ್ಟುಹಾಕಿದ ಸ್ಥಳೀಯ ಮತ್ತು ಭಾಗಶಃ ಯುದ್ಧಗಳಲ್ಲಿ ಪ್ರಯೋಗಿಸಿ ಪರೀಕ್ಷಿಸತೊಡಗಿದ್ದಾರೆ. ಅಂತಹ ಒಂದು ತಾಜಾ ಉದಾಹರಣೆಯೆಂದರೆ, ಗಾಜಾ ಮೇಲೆ ನಡೆದ ಅಮಾನವೀಯ ದಾಳಿಯ ಮೂಲಕ, ಎಐ ತಂತ್ರಜ್ಞಾನದ ಪರೀಕ್ಷಾ ಪ್ರಕ್ರಿಯೆ.
ವಾಸ್ತವದಲ್ಲಿ, ಶಿಕ್ಷಣ, ಆರೋಗ್ಯ, ಸಂಪರ್ಕ, ಸಂಶೋಧನೆ ಇತ್ಯಾದಿ ಪ್ರತಿ ಕ್ಷೇತ್ರವನ್ನೂ ಎಐ ಪರಿವರ್ತಿಸುವ ಸಾಮರ್ಥ್ಯ ಹೊಂದಿದೆ. ಎಐ ಕ್ರಮಾವಳಿಗಳು (ಅಲ್ಗಾರಿದಮ್ಸ್) ಅಗಾಧ ಪ್ರಮಾಣದ ದತ್ತಾಂಶಗಳನ್ನು ಮಥಿಸಿ, ವಿಶ್ಲೇಷಿಸಿ, ಅತ್ಯಂತ ತ್ವರಿತವಾಗಿ ಕೆಲಸಕಾರ್ಯಗಳನ್ನು ನಿರ್ವಹಿಸಬಲ್ಲವು. ಆದರೆ, ಇತರ ಎಲ್ಲ ಹೊಸ ತಾಂತ್ರಿಕ ಬೆಳವಣಿಗೆಗಳಂತೆ, ಎಐಯೂ ಸಹ ಬಂಡವಾಳಿಗರ ಲಾಭದ ದುರುದ್ದೇಶದಿಂದ ಚಾಲಿತವಾಗಿದೆ ಮತ್ತು ನಿಯಂತ್ರಿತಗೊಂಡಿದೆ. ಇದು ಒಂದು ಆತಂಕಕಾರಿ ಬೆಳವಣಿಗೆಯೇ ಆಗಿದೆ.