Loading..

ಗಾಜಾದಲ್ಲಿ ನಡೆಯುತ್ತಿರುವುದು ಭೀಕರ ನರಮೇಧ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಲೇಖನಕ್ಕೊಂದು ಪ್ರತ್ಯುತ್ತರ

ಅಮೇರಿಕಾದ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯು ಜುಲೈ 4 ರಂದು “ಗಾಜಾ ಮೇಲೆ ಇಸ್ರೇಲ್ ದಾಳಿಯನ್ನು ನರಮೇಧವೆಂದು ಕರೆಯುವುದು ಏಕೆ ತಪ್ಪಾಗುತ್ತದೆ?” ಎಂದು ಸಂಪಾದಕೀಯ ಲೇಖನವನ್ನು ಪ್ರಕಟಿಸಿತು. ಇದಕ್ಕೆ ಪ್ರತ್ಯುತ್ತರವಾಗಿ ‘ನಮ್ಮ ಕಾಲದ ಅಪರಾಧ: ಗಾಜಾ ಮೇಲೆ ಇಸ್ರೇಲ್ ದಾಳಿ ನರಮೇಧದ ವ್ಯಾಖ್ಯಾನಕ್ಕೆ ಸರಿಹೊಂದುವುದೇಕೆ?’ ಎನ್ನುವ ತುರ್ತಾದ ಹಾಗೂ ನಿರ್ಭಯ ಅಭಿಪ್ರಾಯವಿರುವ ಲೇಖನ, ನಮ್ಮ ಪಕ್ಷದ ಇಂಗ್ಲಿಷ್ ಮುಖಪತ್ರಿಕೆ ‘ಪ್ರೊಲೆಟೇರಿಯನ್ ಎರಾ’ದಲ್ಲಿ (ಸಂಪುಟ 58, ಸಂಚಿಕೆ 21) ಪ್ರಕಟವಾಯಿತು. ಅದರ ಅನುವಾದವನ್ನು ಕಾರ್ಮಿಕ ದೃಷ್ಟಿಕೋನ ಪ್ರಕಟಿಸುತ್ತಿದೆ.

ಗಾಜಾದಲ್ಲಿ ಬಾಂಬ್‌ಗಳ ಸುರಿಮಳೆಯಾಗುತ್ತಿದ್ದಂತೆ ನಾಗರಿಕತೆಯ ಕೇಂದ್ರ ನೆಲಸಮವಾಯಿತು; ಕಾನೂನಿನ ನೆಪ ಹಾಗೂ ಮಾತಿನ ಕಸರತ್ತುಗಳಿಂದ ನೈತಿಕ, ರಾಜಕೀಯ ಹಾಗೂ ಅನುಭವಗಳ ವಾಸ್ತವ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ. ಇದು ಯುದ್ಧವಲ್ಲ – ನರಮೇಧವನ್ನೇ ಗುರಿಯಾಗಿಸಿಕೊಂಡ ವಿನಾಶ.
ಗಾಜಾದ ಸುಟ್ಟು ಬೂದಿಯಾದ ಆಸ್ಪತ್ರೆಗಳ ಮತ್ತು ಶಾಲಾ ಆವರಣಗಳ ಅವಶೇಷಗಳನ್ನು ನೋಡಿದಾಗ ‘ನರಮೇಧ’ ಎನ್ನುವುದು ಅತಿಶಯೋಕ್ತಿಯಲ್ಲ. ಸೌಮ್ಯಪದಗಳಲ್ಲಿ ವಿವರಿಸಲಾಗದ ಕಟು ವಾಸ್ತವದ ಘೋರ ಚಿತ್ರಣವಾಗಿ ಆ ಪದಗಳು ಗಾಜಾದ ಸಮಾಧಿಗಳಿಂದ ಹುಟ್ಟಿ ಬಂದಿವೆ. ಹಾಗಿದ್ದರೂ ಕೂಡ, ಇತ್ತೀಚಿಗೆ ‘ಗಾಜಾದ ಮೇಲೆ ಇಸ್ರೇಲ್ ದಾಳಿಯನ್ನು ನರಮೇಧವೆಂದು ಕರೆಯುವುದು ಏಕೆ ತಪ್ಪಾಗುತ್ತದೆ’ ಎನ್ನುವ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಲೇಖನದಲ್ಲಿ ಕೊಟ್ಟಿರುವ ವಾದಗಳು, ಕೂದಲು ಸೀಳುವ ಕಾನೂನಿನ ವಾದದ, ರಾಜಕೀಯವಾಗಿ ದಿಕ್ಚುತಿಯ ಮತ್ತು ಸಾಂಸ್ಕೃತಿಕ ಆರೋಪಗಳ ಬೆಟ್ಟದಡಿಯಲ್ಲಿ ಸತ್ಯವನ್ನು ಹೂತು ಬಿಡುವ ಪ್ರಯತ್ನಗಳಷ್ಟೇ!
ಆದರೆ ನಾವು ವಿಷಯಗಳನ್ನು ಸ್ಪಷ್ಟವಾಗಿ ಹೇಳೋಣ: ಗಾಜಾದಲ್ಲಿ ನಡೆದದ್ದು ನರಮೇಧವಲ್ಲದಿದ್ದರೆ ನರಮೇಧವೆನ್ನುವ ಪದಕ್ಕೆ ಅರ್ಥವೇ ಇಲ್ಲ. ಇಂತಹ ವಿಷಯಗಳಲ್ಲಿ ಅತ್ಯುನ್ನತ ಕಾನೂನಿನ ಅಥಾರಿಟಿಯಾದ ಅಂತರರಾಷ್ಟ್ರೀಯ ನ್ಯಾಯಾಲಯವು (ಐಸಿಜೆ) ಇಸ್ರೇಲ್ ವಿರುದ್ಧ ದಕ್ಷಿಣ ಆಫ್ರಿಕಾ 2024
ರ ಜನವರಿಯಲ್ಲಿ ನರಮೇಧ ಸಮಾವೇಶದ (1948ರಲ್ಲಿ ವಿಶ್ವಸಂಸ್ಥೆ ಅಳವಡಿಸಿಕೊಂಡ ಅಂತರರಾಷ್ಟ್ರೀಯ ಒಪ್ಪಂದ) ಅಡಿಯಲ್ಲಿ ದಾಖಲಾದ ಪ್ರಕರಣದಲ್ಲಿ ನರಮೇಧ ‘ಸಂಭವನೀಯ’ವೆಂದು ತೀರ್ಪು ನೀಡಿತು.
ಇದರ ಬದಲಿಗೆ ನಮಗೆ, ಮೂರು ಸುಳ್ಳುಗಳ ಆಧಾರದ ಮೇಲೆ ಸಮರ್ಥನೆಗಳು ಬರುತ್ತಿವೆ. ಒಂದು – ಪ್ಯಾಲೆಸ್ತೇನ್ ಸಂಕಟಗಳಿಗೆ ಹಮಾಸ್ ಸಂಘಟನೆಯ ಮೇಲೆ ಮಾತ್ರ ತಪ್ಪು ಹೊರಿಸಬೇಕು; ಎರಡು – ಇಸ್ರೇಲ್ ದಾಳಿಗೆ ಮಿಲಿಟರಿ ಉದ್ದೇಶವಿತ್ತೇ ಹೊರತು ನರಮೇಧವಲ್ಲ; ಮೂರು – ನರಮೇಧದ ಆರೋಪಗಳೆಲ್ಲಾ ರಾಜಕೀಯ ಪ್ರೇರಿತವಾದವು ಮತ್ತು ಯಹೂದಿ ವಿರೋಧಿ ಭಾವನೆಗಳು.
ಹಮಾಸ್ ಹೆಸರಿನಲ್ಲಿ ಸಮರ್ಥನೆ – ನೈತಿಕ ದಿವಾಳಿತನ
ಹಮಾಸ್ ಸಂಘಟನೆ ಅಕ್ಟೋಬರ್ 7, 2023 ರಂದು ಇಸ್ರೇಲ್ ವಿರುದ್ಧ ಮಾಡಿದ ‘ಘೋರ ದಾಳಿ’ಯೇ ಗಾಜಾದ ಮೇಲಿನ ಮುಂದಿನ ಆಕ್ರಮಣಗಳಿಗೆ ಕಾರಣವೆಂದು ಇಸ್ರೇಲ್ ದಾಳಿಯ ಸಮರ್ಥಕರು ಸಮರ್ಥಿಸಿಕೊಳ್ಳುತ್ತಾರೆ. ಅಮೆರಿಕನ್ ಸಾಮ್ರಾಜ್ಯವಾದದ ಬೆಂಬಲದೊಂದಿಗೆ ಜಿಯೊನಿಸ್ಟ್ ಇಸ್ರೇಲ್ ಹಲವು ದಶಕಗಳಿಂದ ಪ್ಯಾಲೆಸ್ತೇನಿಯರನ್ನು ದಮನ ಮಾಡುತ್ತಿದೆ; ಪ್ಯಾಲೆಸ್ತೇನ್ ಮೇಲೆ ರಾಸಾಯನಿಕ ಶಸ್ತ್ರಗಳೂ ಸೇರಿದಂತೆ ಅತ್ಯಾಧುನಿಕ ಶಸ್ತ್ರಗಳಿಂದ ದಾಳಿ ಮಾಡುತ್ತಿದೆ. ಅವರು ಪ್ಯಾಲೆಸ್ತೇನ್ ಜನಾಂಗವನ್ನೇ ತೊಳೆದು ಹಾಕಿ, ಬಲಪ್ರಯೋಗದಿಂದ ನೆಲವನ್ನೆಲ್ಲಾ ಆಕ್ರಮಿಸಿಕೊಳ್ಳಲು ಹೊರಟಿದ್ದಾರೆ. ಅವರು ತಮ್ಮ ಕ್ರೂರ ಕೊಲೆಗಳನ್ನು ಸಮರ್ಥಿಸಿಕೊಂಡರೆ, ಕ್ರೌರ್ಯಕ್ಕೊಳಗಾದ, ಕೊಲೆಗೀಡಾಗುತ್ತಿರುವ ಪ್ಯಾಲೆಸ್ತೇನಿಯರಿಗೆ ತಮ್ಮನ್ನು ರಕ್ಷಿಸಿಕೊಳ್ಳುವ ಹಕ್ಕಿಲ್ಲವೆ? ಆದ್ದರಿಂದ ಪ್ರತೀಕಾರವಿದೆ; ಹಾಗಾದರೆ ಅದನ್ನೇ ನೆಪ ಮಾಡಿಕೊಂಡು ಪ್ಯಾಲೆಸ್ತೇನ್ ಮೇಲೆ ಅದರ ಹತ್ತರಷ್ಟು ಮಿಲಿಟರಿ ದಾಳಿ ಮಾಡುವುದನ್ನು ಸಮರ್ಥಿಸಿಕೊಳ್ಳಬಹುದೆ? ಮಕ್ಕಳನ್ನು ನಿರ್ದಯವಾಗಿ ಕೊಲ್ಲುವ, ಇಡೀ ಇಡೀ ಕುಟುಂಬಗಳನ್ನೇ ಸರ್ವನಾಶ ಮಾಡುವ, ಆಸ್ಪತ್ರೆಗಳನ್ನು ನೆಲಸಮ ಮಾಡುವ, ಬೇರೆ ದೇಶಗಳಿಂದ ಬರುವ ಆಹಾರ ಪದಾರ್ಥ ಹಾಗೂ ಔಷಧಗಳನ್ನು, ನೆರವು ಹಾಗೂ ಪರಿಹಾರಗಳನ್ನು ನಿಲ್ಲಿಸುವ ಅಮಾನವೀಯ ಕುಕೃತ್ಯಗಳನ್ನು ನರಮೇಧವೆನ್ನದೆ ಬೇರೇನೆಂದು ಕರೆಯಬೇಕು?
ವಿಶ್ವಸಂಸ್ಥೆಯ ಮಾನವೀಯ ವಿಷಯಗಳ ಸಂಯೋಜನಾ ಕಚೇರಿಯ ಪ್ರಕಾರ ಮತ್ತು ಮಾನವ ಹಕ್ಕು ವೀಕ್ಷಣಾ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಘಟನೆಯ ಸ್ವತಂತ್ರ ಅಂದಾಜಿನ ಪ್ರಕಾರ, 2025ರ ಮೇ ತಿಂಗಳವರೆಗೆ 37,000ಕ್ಕೂ ಹೆಚ್ಚು ಪ್ಯಾಲೆಸ್ತೇನಿಯರು – ಹೆಚ್ಚಿನವರು ಮಹಿಳೆಯರು ಹಾಗೂ ಮಕ್ಕಳು ಸತ್ತಿದ್ದಾರೆ. ನಾಗರಿಕ ರಿಜಿಸ್ಟರ್‌ಗಳಿಂದ ಕುಟುಂಬ ಕುಟುಂಬಗಳನ್ನೇ ಅಳಿಸಿರುವಾಗ, ಉತ್ತರ ಗಾಜಾದಲ್ಲಿ ಒಂದೇ ಒಂದು ಶಾಲೆ ಇಲ್ಲದಿರುವಾಗ, ಹಸಿವು-ನೀರಡಿಕೆಗಳಿಂದ ಸಾಯುತ್ತಿರುವ ಜನರಿಗೆ ಆಹಾರ ಮತ್ತು ನೀರನ್ನು ವ್ಯವಸ್ಥಿತವಾಗಿ ನಿರಾಕರಿಸಿದಾಗ, ಅಂತಹ ಯುದ್ಧ ಅಪರಾಧವನ್ನು ನರಮೇಧ ಎನ್ನುವುದಕ್ಕಿಂತ ಚೆನ್ನಾಗಿ ವಿವರಿಸುವ ಇನ್ನೊಂದು ಪದವಿದೆಯೇ?
ನರಮೇಧವೆಂದರೆ ಹೆಣಗಳ ಲೆಕ್ಕವಲ್ಲ – ಅದೊಂದು ಉದ್ದೇಶ
ವಿಶ್ವಸಂಸ್ಥೆಯ ನರಮೇಧ ಸಮಾವೇಶದ ವಿಧಿ 11 ಪ್ರಕಾರ, ನರಮೇಧವೆಂದರೆ ಕೇವಲ ನಾಗರಿಕರ ಸಾಮೂಹಿಕ ಕೊಲೆಯಲ್ಲ. ಅದು, “ಒಂದು ರಾಷ್ಟ್ರವನ್ನು, ಸಮುದಾಯವನ್ನು, ಜನಾಂಗವನ್ನು ಅಥವಾ ಧಾರ್ಮಿಕ ಗುಂಪನ್ನು ಸಂಪೂರ್ಣವಾಗಿ ಅಥವಾ ಭಾಗಶಃವಾಗಿ ನಾಶ ಮಾಡುವ ಉದ್ದೇಶ ಹೊಂದಿದ” ಕೃತ್ಯಗಳನ್ನು ಒಳಗೊಂಡಿದೆ.
ಇದರಲ್ಲಿ ಲೆಕ್ಕಾಚಾರದಿಂದ ಕೊಲೆ ಮಾಡಲು, ದೇಹಕ್ಕೆ ಮತ್ತು ಮನಸ್ಸಿಗೆ ಗಂಭೀರ ಹಿಂಸೆ ನೀಡಲು ಮತ್ತು ಜನರನ್ನು ಗುಂಪು ಗುಂಪಾಗಿ ನಾಶ ಮಾಡಲು ಬೇಕಾದ ಜೀವನದ ಪರಿಸ್ಥಿತಿಯನ್ನು ಸೃಷ್ಟಿಸುವುದೂ ಸೇರಿಕೊಂಡಿದೆ.
ಸ್ವತಃ ಇಸ್ರೇಲಿನ ಮಂತ್ರಿಯೇ ಗಾಜಾವನ್ನು ‘ಅಳಿಸಿ ಹಾಕುವ’ ಮಾತುಗಳನ್ನು ಆಡುತ್ತಿರುವಾಗ ಅವರ ಉದ್ದೇಶಕ್ಕೆ ಅದಕ್ಕಿಂತ ಹೆಚ್ಚಿನ ನೇರ ಪುರಾವೆ ಬೇಕೆ? ಹಣಕಾಸು ಸಚಿವ ಹೆಜಾರೆಲ್ ಸ್ಮೊತ್ರಿಚ್ 2023 ರ ನವೆಂಬರ್‌ನಲ್ಲಿ ‘ಗಾಜಾವನ್ನು ನಿರ್ಮೂಲನೆ ಮಾಡಬೇಕು’ ಎಂದು ಘೋಷಿಸಿದನು. ಪರಂಪರೆಯ ಸಚಿವ ಅಮಿಚಾಯ್ ಎಲಿಯಾಹು ಗಾಜಾ ಮೇಲೆ ನ್ಯೂಕ್ಲಿಯರ್ ಬಾಂಬ್ ಉಪಯೋಗಿಸಬೇಕೆಂದು ಸಾರ್ವಜನಿಕವಾಗಿ ಹೇಳಿದನು. ಇದು ಅಚಾನಕ್ಕಾಗಿ ಬಂದಿರುವ ಮಾತುಗಳಲ್ಲ. ಅದು ವ್ಯವಸ್ಥಿತವಾಗಿ ಮಾನವೀಯ ನೆರವುಗಳನ್ನು ತಡೆಹಿಡಿದ, ನಾಗರಿಕ ಸೌಲಭ್ಯಗಳನ್ನು ಹಾಳುಗೆಡವಿದ, ಕುಟುಂಬಗಳಿಗೆ ನೇರ-ಗುರಿ ಮಾಡಿ ಬಾಂಬ್ ದಾಳಿ ನಡೆಸಿದ ಜಿಯೊನಿಸ್ಟ್ ಕ್ಯಾಬಿನೆಟ್‌ನ ಸೈದ್ಧಾಂತಿಕ ಒಮ್ಮತದ ಪ್ರತಿಬಿಂಬ.
‘ಉದ್ದೇಶ’ವನ್ನು ಸಂಕುಚಿತ, ಸೂಕ್ಷ್ಮ ವಿಶ್ಲೇಷಣೆಗೆ ಒಳಪಡಿಸಬೇಕೆಂಬ ವಾಷಿಂಗ್ಟನ್ ಪೋಸ್ಟ್ನ ಒತ್ತಾಯವು, ಹೇಗೆ ಸಂರಚನಾ ನರಮೇಧವು ಒಂದು ಲಿಖಿತ ಆದೇಶದ ಬದಲು ರಾಜ್ಯಯಂತ್ರದ ಸರಣಿ ಹಿಂಸೆಯಾಗಿ ಮತ್ತು ಸೈದ್ಧಾಂತಿಕ ಅಮಾನುಷವಾಗಿ ಕೆಲಸ ಮಾಡುತ್ತದೆಯೆನ್ನುವುದನ್ನು ನಿರ್ಲಕ್ಷಿಸುತ್ತದೆ.
ಸಂಸ್ಕೃತಿ ಹಾಗೂ ನಾಗರಿಕತೆಯನ್ನು ಅಳಿಸಿ ಹಾಕುವುದೂ ಸಹ ನರಮೇಧ
ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯು ‘ಸಾಂಸ್ಕೃತಿಕ ನರಮೇಧ’ವೆಂದು ಹೇಳುವುದು ಅತಿಯಾಯಿತೆಂದು ಅದನ್ನು ಮೂಲೆಗೆ ತಳ್ಳುತ್ತಿದೆ. ಗಾಜಾದಲ್ಲಿ ನೆಲಕ್ಕುರುಳಿದ ವಿಶ್ವವಿದ್ಯಾನಿಲಯಗಳು, ಸಂಗ್ರಹಾಲಯಗಳು, ಧಾರ್ಮಿಕ ಸಂಸ್ಥೆಗಳು ಮತ್ತು ವೈದ್ಯಕೀಯ ಕೇಂದ್ರಗಳು – ಇವೆಲ್ಲವೂ ನರಮೇಧ ಸಮಾವೇಶದ ಸಾರಾಂಶದ ಪ್ರಕಾರವೇ ಜನರ ಸಾಂಸ್ಕೃತಿಕ ಅಸ್ಮಿತೆಗಳು. ಅಲ್-ಅಜರ್ ವಿಶ್ವವಿದ್ಯಾನಿಲಯ, ಗಾಜಾದ ಪ್ರಾಚೀನ ಮಸೀದಿಗಳ ನೆಲಸಮ ಮತ್ತು ನೂರಾರು ಕಲಾವಿದರ, ಪತ್ರಕರ್ತರ ಹಾಗೂ ಬುದ್ಧಿಜೀವಿಗಳ ಕೊಲೆಗಳು ಪ್ರಾಸಂಗಿಕವಾಗಿ ನಡೆದದ್ದಲ್ಲ.
ಬೊಸ್ನಿಯಾದಲ್ಲಿ ನಡೆದ ಅಂತರ್ಯುದ್ಧದ ಪ್ರಕರಣದಲ್ಲಿ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು ಯಾವುದೇ ಸಾಂಸ್ಕೃತಿಕ ಕೇಂದ್ರಗಳ ನಾಶ ಮತ್ತು ಒಂದು ಪ್ರದೇಶದ ಸಮುದಾಯದ ಜನಾಂಗೀಯ ಮನೋಸ್ಥಿತಿಯನ್ನು ಖಾಯಂ ಬದಲಾವಣೆ ಮಾಡಲು ಜನರನ್ನು ಬಲವಂತ ಮಾಡುವುದು ನರಮೇಧವೆಂದು ತೀರ್ಪು ನೀಡಿದೆ.
ಪುರಾವೆಗಳು ಅಗಾದವಾಗಿವೆ
ಗಾಜಾದ ಸಾವುನೋವುಗಳ ಸಂಖ್ಯೆಯ ವಿಶ್ವಾಸಾರ್ಹತೆಯ ಬಗ್ಗೆ ವಾಷಿಂಗ್ಟನ್ ಪೋಸ್ಟ್ ಅನುಮಾನ ವ್ಯಕ್ತಪಡಿಸುತ್ತಿದೆ; ಆದರೆ ಸೂಕ್ಷ್ಮ ಪರಿಶೀಲನೆಯ ಎದುರು ಅದರ ವಾದಗಳು ಮಣ್ಣು ಮುಕ್ಕುತ್ತಿವೆ. ‘ದಿ ಲೆಸೆಟ್’ – ಗೌರವಕ್ಕೆ ಪಾತ್ರವಾದ ಮತ್ತು ವೈಜ್ಞಾನಿಕ ಸಂಶೋಧನೆಗೆ ಹೆಸರುವಾಸಿಯಾದ ಪತ್ರಿಕೆಯು ದಾಖಲಾಗದ ಸಂಖ್ಯೆಯನ್ನೂ ಸೇರಿಸಿ ಒಟ್ಟು 1,86,000 ಸಾವುಗಳಾಗಿವೆಯೆಂದು ಅಂದಾಜು ಮಾಡಿದೆ. ಬಹಳ ಕಾಲದಿಂದ ಇಸ್ರೇಲ್ ಗೆಳೆತನ ಹೊಂದಿರುವ ಅಮೆರಿಕನ್ ಸರ್ಕಾರಿ ಇಲಾಖೆಯು ಮಾನವ ಸಾವುಗಳು ದೊಡ್ಡ ಅನಾಹುತವೆಂದು ಒಪ್ಪಿಕೊಂಡಿದೆ. ಈಗ ಬರ, ನಿರ್ಜಲನ (ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದು) ಮತ್ತು ಚಿಕಿತ್ಸೆ ಸಿಗದ ಗಾಯಗಳು ಬಾಂಬಿಗಿಂತ ಹೆಚ್ಚಿನ ಜನರನ್ನು ಕೊಲ್ಲುತ್ತಿವೆ.
ವಿಧಿ ವಿಜ್ಞಾನದ ಭಾಷೆಯಲ್ಲಿ ಹೇಳುವುದಾದರೆ, ಇದು ನಿರೀಕ್ಷಿತ ಮತ್ತು ಆಹಾರ, ನೀರು, ವಿದ್ಯುತ್ ಮತ್ತು ವೈದ್ಯಕೀಯ ಚಿಕಿತ್ಸೆಗಳನ್ನು ಬೇಕೆಂದೇ ತಡೆಹಿಡಿದುದರ ಪರಿಣಾಮ. ವಿಶ್ವಸಂಸ್ಥೆಯ ವಿಶೇಷ ವರದಿಗಾರ ಫ್ರಾನ್ಸೆಸಿಯಾ ಅಲ್ಬನೆಸೆ ಗಮನಿಸಿದ್ದೇನೆಂದರೆ, ಇಸ್ರೇಲ್ ನಡೆಗಳು ಖಚಿತವಾಗಿ ನರಮೇಧದ ಆಚರಣೆಯಾಗಿವೆ: “ಸಂಪೂರ್ಣ ದಿಗ್ಭಂಧನ, ಜನತೆಯ ಸ್ಥಳಾಂತರ ಮತ್ತು ವಸತಿ ಸ್ಥಳಗಳ ಮೇಲೆ ದಾಳಿಗಳು ಮತ್ತು ಯುದ್ಧಾಸ್ತ್ರವಾಗಿ ಹಸಿವು.”
ಇದು ಆಕಸ್ಮಿಕ ಹಾನಿಯಲ್ಲ. ಇದು ವಿನಾಶ ಮಾಡಲು ಬೇಕೆಂದೇ ಹೇರಿದ ಜೀವನ ಪರಿಸ್ಥಿತಿ.
ಕಾನೂನು ಪ್ರಕ್ರಿಯೆ ಆರಂಭವಾಗಿದೆ
ವಿಶ್ವಸಂಸ್ಥೆಯ ಹಿಂದಿನ ಅಧಿಕಾರಿಗಳು 2023ರಲ್ಲಿ ‘ನರಮೇಧ’ ಎಂಬ ಪದವನ್ನು ಉಪಯೋಗಿಸಲು ನಿರಾಕರಿಸಿದ್ದನ್ನು ವಾಷಿಂಗ್ಟನ್ ಪೋಸ್ಟ್ ಎತ್ತಿ ತೋರಿಸುತ್ತಿದೆ. ಆದರೆ, ‘ನರಮೇಧ’ ಹೌದೋ, ಅಲ್ಲವೋ ಎಂಬುದನ್ನು ನಿರ್ಧರಿಸುವವರು ಪತ್ರಕರ್ತರಲ್ಲ, ನ್ಯಾಯಾಲಯಗಳು. ಅಲ್ಲಿಂದಾಚೆಗೆ, ಯಾವುದೆಲ್ಲಾ ನರಮೇಧದ ಕೃತ್ಯಗಳೆಂದು ತೋರಿಸುವುದಕ್ಕೆ ಸಾಕಷ್ಟು ಪುರಾವೆಗಳನ್ನು ಅಂತರರಾಷ್ಟೀಯ ನ್ಯಾಯಾಲಯದ ಮುಂದಿಡಲಾಗಿದೆ.
ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯವು ಹಮಾಸ್ ನಾಯಕರ ಜೊತೆ ಬೆಂಜಮಿನ್ ನೇತನ್ಯಾಹು ಮತ್ತು ಯುವೊ ಗ್ಯಾಲಂಟ್ ಬಂಧನಕ್ಕೆ ವಾರಂಟ್ ಹೊರಡಿಸಿದೆ – ಈ ಸಮಾನ ನ್ಯಾಯವನ್ನು ವಾಷಿಂಗ್ಟನ್ ಪೋಸ್ಟ್ ಸುಮ್ಮನೆ ಕಡೆಗಣಿಸಿದೆ.
ಯಹೂದಿ ವಿರೋಧಿ ಬಣ್ಣ ಹಚ್ಚುವುದು ಅಪಾಯಕಾರಿ ದಿಕ್ಚ್ಯುತಿ
ಅಂತಿಮವಾಗಿ, ವಾಷಿಂಗ್ಟನ್ ಪೋಸ್ಟ್ ಇಸ್ರೇಲ್ ವಿರುದ್ಧದ ಟೀಕೆಯನ್ನು ಯಹೂದಿ ವಿರೋಧಿಯೆಂದು ಬಣ್ಣ ಹಚ್ಚುವ ಅಪಾಯಕಾರಿ ಕೆಲಸಕ್ಕೆ ಕೈ ಹಾಕಿದೆ. ಇದು ಬೌದ್ಧಿಕ ಅಪ್ರಾಮಾಣಿಕತೆಯಷ್ಟೇ ಅಲ್ಲ, ಜೊತೆಗೆ ಅಪಾಯಕಾರಿ ಸಿನಿಕತನವೂ ಹೌದು. ಜಿಯೊನಿಸ್ಟ್ ರಾಷ್ಟ್ರೀಯವಾದವನ್ನು ಯಹೂದಿ ಅಸ್ಮಿತೆಯೊಂದಿಗೆ ಒಂದುಗೂಡಿಸುವುದೆಂದರೆ, ಸರ್ಕಾರಿ ಹಿಂಸೆಗೆ ಯಹೂದಿವಾದದ ಕವಚ ತೊಡಿಸುವುದು ಎಂದರ್ಥ. ಇಸ್ರೇಲ್, ಅಮೆರಿಕಾ ಮತ್ತು ವಿಶ್ವದ ವಿವಿಧ ದೇಶಗಳಲ್ಲಿರುವ ಯಹೂದಿಗಳು ಯುದ್ಧದ ವಿರುದ್ಧ ಮಾತನಾಡಿದ್ದಾರೆ. ಜ್ಯೂಯಿಶ್ ವಾಯ್ಸ್ ಫಾರ್ ಪೀಸ್ (ಶಾಂತಿಗಾಗಿ ಯಹೂದಿ ಧ್ವನಿ), ಬಿ’ಸೆಲೆಮ್ ಮತ್ತು ಬ್ರೇಕಿಂಗ್ ದಿ ಸೈಲೆನ್ಸ್ (ಮೌನ ಮುರಿಯೋಣ), ಮುಂತಾದ ಸಂಘಟನೆಗಳು ‘ನಮ್ಮ ಹೆಸರಿನಲ್ಲಿ ಗಾಜಾದಲ್ಲಿ ನರಮೇಧ ನಡೆಸಲಾಗಿದೆ ಮತ್ತು ಅದನ್ನು ಖಂಡಿಸುತ್ತೇವೆ’ ಎಂದು ಘಂಟಾಘೋಷವಾಗಿ ಹೇಳಿವೆ.
ನಿಜವಾದ ಯಹೂದಿ ವಿರೋಧಿ ವಾದಗಳು ಬರುತ್ತಿವೆ ಮತ್ತು ಅದನ್ನು ವಿರೋಧಿಸಬೇಕು – ಆದರೆ ಅದರ ಆರೋಪಗಳಡಿಯಲ್ಲಿ ಪ್ಯಾಲೆಸ್ತೇನಿಯರನ್ನು ಹೂತು ಹಾಕುವ ಮೂಲಕ ಅಲ್ಲ. ನರಮೇಧವನ್ನು ದ್ವೇಷದ ಕೃತ್ಯವೆನ್ನದೆ, ಅದನ್ನು ನ್ಯಾಯಕ್ಕಾಗಿಯ ಕೂಗು ಎಂದು ಕರೆಯಬೇಕು ಎಂಬ ಸಲಹೆ, ನಾಜಿ಼ ಹತ್ಯಾಕಾಂಡದ ನೆನಪು ಮತ್ತು ಅಂತರರಾಷ್ಟ್ರೀಯ ಕಾನೂನು – ಎರಡಕ್ಕೂ ಮಾಡಿದ ಅಪಮಾನ.
ಸತ್ಯ ಒಪ್ಪಿಕೊಳ್ಳದೆ ಶಾಂತಿಯಿಲ್ಲ!
ಸತ್ಯವನ್ನು ಒಪ್ಪಿಕೊಳ್ಳದೆ ಗಾಜಾದಲ್ಲಿ ಶಾಂತಿ ನೆಲೆಸುವುದಿಲ್ಲ ಮತ್ತು ಸತ್ಯ ಬಹಳ ಕಹಿ. ಭಯೋತ್ಪಾದಕತೆಗೆ ಪ್ರತಿಕ್ರಿಯೆ ಎಂದು ಆರಂಭವಾದ ಪ್ಯಾಲೆಸ್ತೇನ್ ವಿರುದ್ಧದ ಯುದ್ಧ ಈಗ ಸರ್ಕಾರಿ ಪ್ರಾಯೋಜಿತ ಕಗ್ಗೊಲೆಯಾಗಿದೆ. ನಮ್ಮ ಮುಂದೆ ಬಹಿರಂಗಗೊಳ್ಳುತ್ತಿರುವುದು ಕೇವಲ ಯುದ್ಧವಲ್ಲ; ಅದು ವ್ಯವಸ್ಥಿತವಾಗಿ ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಮತ್ತು ದೈಹಿಕವಾಗಿ – ಜನರ ಬದುಕುವ ಹಕ್ಕುಗಳನ್ನೆಲ್ಲಾ ಕಸಿದುಕೊಳ್ಳುವುದು. ಇತಿಹಾಸ ಮೌನದಲ್ಲಿ ಮರೆಯಾಗುವುದಿಲ್ಲ. ನರಮೇಧ ಎನ್ನುವ ಆರೋಪವು ಕೇವಲ ಸಾಧ್ಯತೆಯಲ್ಲ, ಅದು ಕಟು ವಾಸ್ತವ. ಈಗ ಗಾಜಾದ ಅತ್ಯಂತ ಕರಾಳ ಸಮಯದಲ್ಲಿ ನರಮೇಧ ಎಂದು ಹೇಳಲು ನಿರಾಕರಿಸಿದರೆ, ನಾವು ಆ ಪದವನ್ನು ಇತಿಹಾಸದಲ್ಲಿ ಮರೆಮಾಚಿದಂತೆ ಮತ್ತು ಅಂತರರಾಷ್ಟ್ರೀಯ ನ್ಯಾಯವನ್ನು ಕೈಬಿಟ್ಟಂತೆ.