Loading..

ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿ ಕಡ್ಡಾಯವಲ್ಲ” ಸರ್ವೋಚ್ಛ ನ್ಯಾಯಾಲಯ

ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ಜಾರಿಗೆ ತರಲು ಯಾವುದೇ ರಾಜ್ಯವನ್ನು ಕೇಂದ್ರವು ಬಲವಂತಪಡಿಸುವಂತಿಲ್ಲ ಎಂದು 2024ರ ಮೇ 9ರಂದು ತನ್ನ ಮಹತ್ವದ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಶಿಕ್ಷಣವು ಭಾರತದ ಸಂವಿಧಾನದ ವಿಧಿ 32ರ ವ್ಯಾಪ್ತಿಯ ಹೊರಗೆ ಇರುವುದರಿಂದ ಕೇಂದ್ರ ಸರ್ಕಾರಕ್ಕೆ ಈ ವಿಷಯದಲ್ಲಿ ನಿರ್ದೇಶನ ನೀಡುವ ಅಧಿಕಾರವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇದೇ ಸಂದರ್ಭದಲ್ಲಿ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳಲ್ಲಿ ತ್ರಿಭಾಷಾ ನೀತಿಯನ್ನು ಜಾರಿಗೆ ತರಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ಸಹ ನ್ಯಾಯಾಲಯವು ಪುರಸ್ಕರಿಸಿಲ್ಲ. ಎನ್‌ಇಪಿ-2020 ಜಾರಿಯನ್ನು ವಿರೋಧಿಸಿ ದೇಶವ್ಯಾಪಿ ನಡೆಯುತ್ತಿರುವ ‘ಸಾರ್ವಜನಿಕ ಶಿಕ್ಷಣ ಉಳಿಸಿ’ ಹೋರಾಟಕ್ಕೆ ಸಂದ ಜಯ ಇದಾಗಿದೆ!
ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಇಡೀ ದೇಶವು ಸಂಪೂರ್ಣ ಲಾಕ್‌ಡೌನ್‌ನಲ್ಲಿದ್ದ ಅತ್ಯಂತ ಸಂಕಷ್ಟದ ಸಮಯದಲ್ಲಿ ಎನ್‌ಇಪಿ-2020ನ್ನು ಜಾರಿಗೊಳಿಸಲಾಯಿತು. ಶಿಕ್ಷಣತಜ್ಞರು, ಬುದ್ಧಿಜೀವಿಗಳು ಹಾಗೂ ಶಿಕ್ಷಣಪ್ರಿಯ ಜನತೆಯನ್ನು ತೊಡಗಿಸಿಕೊಂಡು ಯಾವುದೇ ದೇಶವ್ಯಾಪಿ ಚರ್ಚೆ, ಸಂವಾದ, ಅಭಿಪ್ರಾಯ ಸಂಗ್ರಹ, ಚಿಂತನೆಗಳನ್ನೂ ನಡೆಸದೆ ಸಂಪುಟದ ಏಕಪಕ್ಷೀಯ ನಿರ್ಧಾರವನ್ನು ದಿಢೀರನೆ ಹೇರಲಾದ ಶಿಕ್ಷಣ ನೀತಿ ಇದು. ಪ್ರಸ್ತಾವನೆಯನ್ನು ಸಂಸತ್ತಿನಲ್ಲಿ ಮಂಡಿಸುವ ಗೋಜಿಗೂ ಸರ್ಕಾರವು ಹೋಗಲಿಲ್ಲ. ಶಿಕ್ಷಣವು ಸಂಯುಕ್ತ ಪಟ್ಟಿಗೆ ಸೇರುತ್ತದೆಯಾದರೂ ಕೇಂದ್ರ ಸರ್ಕಾರವು ಈ ಕುರಿತಾಗಿ ರಾಜ್ಯಗಳ ಅಭಿಪ್ರಾಯವನ್ನೂ ಪಡೆಯಲಿಲ್ಲ. ಜನಗಳ ಅಭಿಪ್ರಾಯಗಳನ್ನು ಪಡೆಯುವ ಅಧಿಕೃತ ಪ್ರಹಸನ ನಡೆಸಿತು. ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಣ ತಜ್ಞರು ನೀಡಿದ ಅಭಿಪ್ರಾಯಗಳೆಲ್ಲಾ ಕಸದ ಬುಟ್ಟಿಯನ್ನು ಸೇರಿದವು.
ಬ್ರಿಟಿಷ್ ಪ್ರಭಾವದಿಂದ ಶಿಕ್ಷಣವನ್ನು ಮುಕ್ತಗೊಳಿಸುವ ಹಾಗೂ 21ನೇ ಶತಮಾನಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಪ್ರಮುಖ ಉದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ಜಾರಿಗೆ ತರಲಾಯಿತು ಎಂದು ಸರ್ಕಾರವು ಅಬ್ಬರಿಸುತ್ತದೆ. ಆದರೆ, ಈ ನೀತಿಯು ಶಿಕ್ಷಣದ ನೈಜ ಸಮಸ್ಯೆಗಳನ್ನು ಪರಿಹರಿಸುವ ಬದಲು, 21ನೇ ಶತಮಾನದ ಅವಶ್ಯಕತೆಯಾಗಿರುವ ಸಾರ್ವತ್ರಿಕವಾಗಿ ಲಭ್ಯವಿರಬೇಕಿರುವ ಪ್ರಜಾತಾಂತ್ರಿಕ, ಧರ್ಮನಿರಪೇಕ್ಷ ಹಾಗೂ ವೈಜ್ಞಾನಿಕ ಶಿಕ್ಷಣಕ್ಕೆ ಧಕ್ಕೆ ತಂದೊಡ್ಡಿದೆ. ಜನರನ್ನು ಶಿಕ್ಷಣದಿಂದ ವಂಚಿಸುವ, ಸಾರ್ವಜನಿಕ ಶಿಕ್ಷಣವನ್ನು ಧ್ವಂಸಗೊಳಿಸುವ ಜಾಗತೀಕರಣ, ಖಾಸಗೀಕರಣ, ವ್ಯಾಪಾರೀಕರಣ, ಕಾರ್ಪೋರೇಟೀಕರಣದ ನೀಲಿ ನಕ್ಷೆ ಇದಾಗಿದೆ. ಶಿಕ್ಷಣದ ಸ್ವಾಯತ್ತತೆಯನ್ನು ಸಂಪೂರ್ಣವಾಗಿ ಹಾಳುಗೆಡವಿ ಆಳುವ ವರ್ಗವು ತನ್ನ ಆಜ್ಞಾನುಯಾಯಿ ಕೇಂದ್ರ ಸರ್ಕಾರದ ಮೂಲಕ ಶಿಕ್ಷಣವನ್ನು ತನ್ನ ಅವಶ್ಯಕತೆಗೆ ಅನುಗುಣವಾಗಿ ತನ್ನಡಿಯಲ್ಲಿ ಕೇಂದ್ರೀಕರಿಸಿಕೊಳ್ಳುತ್ತಿದೆ.
ಈ ಶಿಕ್ಷಣ ನೀತಿಯು ಸಮಗ್ರವಾಗಿ ಆಲೋಚನೆ ಮಾಡುವ ಸಾಮರ್ಥ್ಯ ಹಾಗೂ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದಿಲ್ಲ. ತಾರ್ಕಿಕ ಚಿಂತನಾ ಕ್ರಮಕ್ಕೆ ಪೆಟ್ಟು ನೀಡುತ್ತಿದೆ. ಮಾನವರ ವ್ಯಕ್ತಿತ್ವ ನಿರ್ಮಾಣ ಮಾಡಲು ಅತ್ಯಾವಶ್ಯಕವಾಗಿರುವ ಮೌಲ್ಯಯುತ ಶಿಕ್ಷಣವನ್ನೂ ಇದು ಕಡೆಗಣಿಸುತ್ತಿದೆ. ಶಿಕ್ಷಣವನ್ನು ಜನರ ಕೈಗೆ ಎಟುಕದ ವ್ಯಾಪಾರದ ಸರಕನ್ನಾಗಿಸಲು ಅದನ್ನು ಖಾಸಗಿ ಮಾಲೀಕತ್ವದ ಸುಪರ್ದಿಗೆ ಒಪ್ಪಿಸಲಾಗುತ್ತಿದೆ ಹಾಗೂ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸಲಾಗುತ್ತಿದೆ. ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯು ಜನವೇದಿಕೆಯ ಮೂಲಕ ಇಡೀ ದೇಶದಾದ್ಯಂತ ಭುಗಿಲೇಳುತ್ತಿರುವ ಶಿಕ್ಷಣ ತಜ್ಞರು, ಬುದ್ಧಿಜೀವಿಗಳು, ನ್ಯಾಯಾಧೀಶರು, ಪತ್ರಕರ್ತರು ಹಾಗೂ ಅನೇಕ ಸ್ತರದ ಜನರನ್ನೊಳಗೊಂಡ ಹೋರಾಟವನ್ನು ಎಸ್‌ಯುಸಿಐ(ಸಿ) ಬೆಂಬಲಿಸುತ್ತಿದೆ.
ಕೇರಳ, ತಮಿಳುನಾಡು, ಕರ್ನಾಟಕ, ಪಶ್ಚಿಮ ಬಂಗಾಳ, ತ್ರಿಪುರ, ಈ ರಾಜ್ಯಗಳಲ್ಲಿ ಹಿಂದಿ ಭಾಷೆಯನ್ನು ತ್ರಿಭಾಷಾ ನೀತಿಯ ರೂಪದಲ್ಲಿ ಹೇರುವ ಷಡ್ಯಂತ್ರವನ್ನು ಕೇಂದ್ರ ಸರ್ಕಾರವು ಹೆಣೆದಿದೆ. 1960ರಲ್ಲೇ ಅಂದಿನ ಕಾಂಗ್ರೆಸ್ ಸರ್ಕಾರವು ‘ರಾಷ್ಟ್ರೀಯ ಭಾಷೆ’ ಎಂಬ ಹೆಸರಿನಲ್ಲಿ ಹಿಂದಿ ಭಾಷೆಯನ್ನು ದೇಶದಾದ್ಯಂತ ಹೇರಲು ಹೊರಟಾಗಲೇ ನಮ್ಮ ಪಕ್ಷವು ಈ ನಡೆಯನ್ನು ಈ ರೀತಿಯಲ್ಲಿ ವಿರೋಧಿಸಿತ್ತು: “ಭಾರತ ಒಕ್ಕೂಟಕ್ಕೆ ಒಂದು ಅಧಿಕೃತ ಭಾಷೆಯನ್ನು ಆಯ್ದುಕೊಳ್ಳಬೇಕು ಎಂಬ ವಿಷಯವನ್ನು ಕುರಿತಾಗಿ ತೀವ್ರ ಅಭಿಪ್ರಾಯಭೇದವಿದೆ. ಈ ವ್ಯತ್ಯಾಸವು ಒಂದೆಡೆ ಹಿಂದಿಯೇ ಮಹಾನ್ ಭಾಷೆ ಎಂಬ ದುರಭಿಮಾನದ ಭಾವನೆಯಿಂದ ಅಥವಾ ಸಂಕುಚಿತವಾದ ಸ್ಥಳೀಯ ರಾಷ್ಟ್ರವಾದ ಭಾವನೆಯಿಂದ ವ್ಯಕ್ತವಾಗುತ್ತಿವೆ. ಮನುಷ್ಯನಿಂದ ಮನುಷ್ಯನ ಮೇಲೆ ನಡೆಯುತ್ತಿರುವ ಪ್ರಸ್ತುತ ಶೋಷಣೆಯ ಈ ವ್ಯವಸ್ಥೆಯನ್ನು ಕೊನೆಗಾಣಿಸಿ ಹೊಸ ಸಮಾಜವನ್ನು ಕಟ್ಟಲು ಜನಸಮುದಾಯವನ್ನು ಒಟ್ಟುಗೂಡಿಸುವ ಕೆಲಸಕ್ಕೆ ಈ ಎರಡೂ ಅಂಧಾಭಿಮಾನಗಳು ಕೇಡನ್ನುಂಟು ಮಾಡುತ್ತವೆ. ಈ ರೀತಿಯ ‘ಮಹಾಗಲಭೆ’ಯ ನಡುವೆ ಈ ವಿಷಯದ ಕುರಿತಾಗಿ ಸರಿಯಾದ ನಿಲುವುಳ್ಳ ಪ್ರಜ್ಞಾವಂತರನ್ನು ದೂರತಳ್ಳಲಾಗಿದೆ. ಹಿಂದಿ-ಹಿಂದು-ಹಿಂದುಸ್ಥಾನ ಎಂದು ಅಬ್ಬರಿಸುವ ಅಂಧಾಭಿಮಾನವುಳ್ಳ ಶಕ್ತಿಗಳನ್ನು ಬೆಳೆಸಿ, ಹಿಂದಿ ಭಾಷಾಂಧಾಭಿಮಾನವನ್ನು ಕೆರಳಿಸಿ ನಮ್ಮ ದೇಶದ ಬಹು ದೊಡ್ಡ ಜನಸ್ತೋಮ ಅನುಸರಿಸುವ ವೈವಿಧ್ಯಮಯ ಸಂಸ್ಕೃತಿ, ಜೀವನ ಶೈಲಿ, ಜೀವಂತವಾಗಿರುವ ಅನೇಕ ಭಾಷೆಗಳೆಲ್ಲವನ್ನೂ ಕಡೆಗಣಿಸಿ ಒಂದೇ ಭಾಷೆ, ಒಂದೇ ಸಂಸ್ಕೃತಿಯನ್ನು ಜನರ ಮೇಲೆ ಹೇರುವ ದುರುದ್ದೇಶ ಸರ್ಕಾರಕ್ಕಿದೆ. ದೇಶದಲ್ಲಿರುವ ಎಲ್ಲಾ ಭಾಷೆಗಳಂತೆಯೇ ಇರುವ ಹಿಂದಿ ಭಾಷೆಗೆ ಹೆಚ್ಚು ಪ್ರಾಮುಖ್ಯತೆ ನೀಡಿ, ಬೇರೆ ಭಾಷೆಗಳೆಲ್ಲದರ ಸಮಾನ ಬೆಳವಣಿಗೆಗೆ ನೀಡಬೇಕಿದ್ದ ಅವಕಾಶಗಳನ್ನೆಲ್ಲಾ ಕಸಿದುಕೊಂಡು ಅವುಗಳನ್ನೆಲ್ಲಾ ಎರಡನೇ ದರ್ಜೆಗೆ ಇಳಿಸಲಾಗಿದೆ.” – (ಸೋಷಲಿಸ್ಟ್ ಯೂನಿಟಿ, ಸಂಪುಟ 2, ಸಂಚಿಕೆ 2, ನೂತನ ಸರಣಿ, ಜೂನ್ 1963)
‘ಡಬಲ್ ಎಂಜಿನ್ ಸರ್ಕಾರ’ಗಳು ಎನ್.ಇ.ಪಿ 2020ನ್ನು ತ್ವರಿತಗತಿಯಲ್ಲಿ ಜಾರಿಗೆ ತರಲು ನಿರತವಾಗಿವೆ. ಆದರೆ, ಇದರ ಜೊತೆಯಲ್ಲಿ ತೃಣಮೂಲ ಕಾಂಗ್ರೆಸ್ ನೇತೃತ್ವದ ಪಶ್ಚಿಮ ಬಂಗಾಳ ಹಾಗೂ ಸಿಪಿಎಂ ಆಡಳಿತ ನಡೆಸುವ ಕೇರಳದಲ್ಲಿಯೂ ಎನ್.ಇ.ಪಿ-2020ನ್ನು ಜಾರಿಗೆ ತರಲಾಗಿದೆ. ಈ ರಾಜ್ಯಗಳೂ ಸಹ ಸರ್ಕಾರಿ ಶಾಲೆಗಳನ್ನು ಮುಚ್ಚುವತ್ತ ಹೆಜ್ಜೆಯಿಟ್ಟಿವೆ. ಖಾಸಗೀಕರಣಕ್ಕೆ ಉತ್ತೇಜನ ನೀಡುತ್ತಿವೆ. ಈ ಮಧ್ಯದಲ್ಲಿ, ಮಧ್ಯಪ್ರದೇಶದಲ್ಲಿ ಸೆಮಿಸ್ಟರ್ ಪದ್ಧತಿಯ ವಿರುದ್ಧ ನಡೆದ ತೀವ್ರ ಹೋರಾಟ ಹಾಗೂ ನಮ್ಮ ರಾಜ್ಯದಲ್ಲಿ 4 ವರ್ಷದ ಪದವಿ ಕೋರ್ಸ್ ವಿರೋಧಿಸಿ ವಿದ್ಯಾರ್ಥಿಗಳು ಸಂಘಟಿಸಿದ ಪ್ರಬಲ ಹೋರಾಟಗಳು, ಹೋರಾಟವೇ ನಿರ್ಣಾಯಕ ಮಾರ್ಗ, ಕಾನೂನು ಹೋರಾಟಗಳು ಯಾವ ಅಂತಿಮ ಪರಿಹಾರವನ್ನೂ ನೀಡುವುದು ಸಾಧ್ಯವಿಲ್ಲ ಎಂಬ ಸತ್ಯವನ್ನು ಜನಸಾಮಾನ್ಯರ ನಡುವೆ ದೃಢಪಡಿಸಿವೆ.
ಈ ಹಿನ್ನೆಲೆಯಲ್ಲಿ, ‘ಶಿಕ್ಷಣ ಉಳಿಸುವ ಹೋರಾಟ’ವನ್ನು ಇನ್ನಷ್ಟು ತೀವ್ರ‍್ರಗೊಳಿಸುವ ಅಗತ್ಯವಿದೆ. ಎನ್.ಇ.ಪಿ 2020ನ್ನು ಹಿಂಪಡೆಯಲೇಬೇಕಾಗುವ ಮಟ್ಟಕ್ಕೆ ಜನಹೋರಾಟಗಳನ್ನು ಕಟ್ಟಿಬೆಳೆಸುವ ಅವಶ್ಯಕತೆ ಇದೆ. ಕಾನೂನಾತ್ಮಕ ಹೋರಾಟಗಳು ಅಲ್ಪಮಟ್ಟದ ಪರಿಹಾರವನ್ನು ನೀಡಬಹುದಾದರೂ ಸಹ ನಿರ್ಣಾಯಕ ಪಾತ್ರವನ್ನು ಜನರೇ ವಹಿಸಿಕೊಳ್ಳಬೇಕು.