Loading..

ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಸಂಪೂರ್ಣ ಯಶಸ್ವಿ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ, ಬಂಡವಾಳಶಾಹಿ ಪರ ನೀತಿಗಳಿಗೆ ಕಾರ್ಮಿಕರ ಧಿಕ್ಕಾರ!

ಜುಲೈ ೯ರಂದು ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದವು. ನಮ್ಮ ಪಕ್ಷದ ಕಾರ್ಮಿಕ ಸಂಘಟನೆ ಎಐಯುಟಿಯುಸಿ (ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್) ಒಳಗೊಂಡಂತೆ ಇತರೆ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಅತ್ಯಂತ ಸಕ್ರಿಯವಾಗಿ ಈ ಮುಷ್ಕರದಲ್ಲಿ ಭಾಗಿಯಾಗಿದ್ದವು. ಇಡೀ ದೇಶದಲ್ಲಿ ೨೫ ಕೋಟಿ ಕಾರ್ಮಿಕರು ರಸ್ತೆಗಿಳಿಯುತ್ತಾ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಧಿಕ್ಕಾರ ಕೂಗಿದರು. ಇಡೀ ದೇಶದಲ್ಲಿ ಕೆಂಪು ಧ್ವಜಗಳು ಎಲ್ಲೆಡೆ ರಾರಾಜಿಸಿದವು. ಮುಷ್ಕರವು ಅಭೂತಪೂರ್ವವಾಗಿ ಯಶಸ್ವಿಗೊಂಡಿತು. ಕಾರ್ಮಿಕ ವಿರೋಧಿ ಬಂಡವಾಳಶಾಹಿ ಪರ ನೀತಿಗಳನ್ನು ಒಪ್ಪುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕಾರ್ಮಿಕರು ದೇಶದಾದ್ಯಂತ ಮತ್ತೊಮ್ಮೆ ಮೊಳಗಿಸಿದರು. ರೈತ ಸಂಘಟನೆಗಳ ಬೃಹತ್ ವೇದಿಕೆಯಾದ ಸಂಯುಕ್ತ ಕಿಸಾನ್ ಮೋರ್ಚಾ ಸಹ ಈ ಮುಷ್ಕರಕ್ಕೆ ಬೆಂಬಲ ನೀಡಿದ್ದು, ಹೋರಾಟಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಿತು. ಕರ್ನಾಟಕದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆ ಸಿ ಟಿ ಯು) ಯ ನೇತೃತ್ವದಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಿವಿಧ ಸ್ವರೂಪದ ಬೃಹತ್ ಪ್ರತಿಭಟನೆಗಳು ನಡೆದವು. ತಮ್ಮ ಕೆಲಸಗಳನ್ನು ಬಹಿಷ್ಕರಿಸಿ ಕಾರ್ಮಿಕರು ಬಹಳ ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದರು. ಬೆಂಗಳೂರಿನ ಫೀಡಂ ಪಾರ್ಕ್ನಲ್ಲಿ ಸಾವಿರಾರು ಕಾರ್ಮಿಕರು ಜಮಾಯಿಸಿದ್ದರು. ಮೈಸೂರು, ಬಳ್ಳಾರಿ, ರಾಯಚೂರು, ಚಾಮರಾಜನಗರ, ದಾವಣಗೆರೆ, ಕೋಲಾರ, ಬಿಜಾಪುರ, ಕಲಬುರ್ಗಿ, ಚಿತ್ರದುರ್ಗ, ಧಾರವಾಡ-ಹುಬ್ಬಳ್ಳಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಎಐಯುಟಿಯುಸಿಗೆ ಸಂಯೋಜನೆಗೊಂಡ ಅನೇಕ ಕಾರ್ಮಿಕ ಸಂಘಟನೆಗಳು ಈ ಮುಷ್ಕರದಲ್ಲಿ ಸಕ್ರಿಯ ಪಾತ್ರ ವಹಿಸಿದ್ದವು. ಅವುಗಳಲ್ಲಿ ಬಳ್ಳಾರಿಯ ಕೇಂದ್ರ ಸರ್ಕಾರ ಸ್ವಾಮ್ಯದ ಎನ್.ಎಂ.ಡಿ.ಸಿ ಗಣಿಯ ಗುತ್ತಿಗೆ ಕಾರ್ಮಿಕರು, ಸ್ಪಾಂಜ್ ಐರನ್ ಕಾರ್ಖಾನೆಯ ಕಾರ್ಮಿಕರು; ಮೈಸೂರಿನ ರೀಡ್ ಅಂಡ್ ಟೈಲರ್ ಬಟ್ಟೆ ಕಾರ್ಖಾನೆ, ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆ, ಶ್ರೀ ಗ್ಲೂಕೊ ಬಯೋಟೆಕ್, ಗ್ರಾಮಾಕ್ಸ್ ಪೇಪರ್ ಮಿಲ್ ಹಾಗೂ ಇನ್ನಿತರ ಕಾರ್ಖಾನೆಗಳ ಕಾರ್ಮಿಕರು; ರಾಯಚೂರಿನ ರಾಯಕೆಮ್ ಹಾಗೂ ಶಿಲ್ಪ ಫಾರ್ಮಾ ಕಾರ್ಖಾನೆಯ ನೌಕರರು ಸೇರಿದಂತೆ, ಕೆಪಿಟಿಸಿಎಲ್ ಹಾಗೂ ಹೆಸ್ಕಾಂ ಗುತ್ತಿಗೆ ಕಾರ್ಮಿಕರು ಬಹಳ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡರು. ವಿಂಡ್ ಮಿಲ್ ಕಾರ್ಮಿಕರು ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರು, ಹಾಸ್ಟೆಲ್ ಕಾರ್ಮಿಕರು ಹಾಗೂ ಗಣಿ ಕಾರ್ಮಿಕರ ಯೂನಿಯನ್‌ಗಳು ಪ್ರಮುಖವಾದ ಪಾತ್ರವನ್ನು ವಹಿಸಿದವು. ವಿಶೇಷವೇನೆಂದರೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಆಶಾ ಕಾರ್ಯಕರ್ತೆಯರು ಸ್ಫೂರ್ತಿಯುತವಾಗಿ ಮುಷ್ಕರದಲ್ಲಿ ಪಾಲ್ಗೊಂಡಿದ್ದರು.
ಕಾರ್ಮಿಕ ವಿರೋಧಿ ಬಂಡವಾಳಶಾಹಿ ಪರ ಲೇಬರ್ ಕೋಡ್ ರದ್ದಾಗಬೇಕು, ವಿಮೆ, ಬ್ಯಾಂಕ್, ರೈಲ್ವೆ, ಮುಂತಾದ ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣ ನಿಲ್ಲಬೇಕು, ವಿದ್ಯುತ್ (ತಿದ್ದುಪಡಿ) ಮಸೂದೆ, ೨೦೨೨ ಅನ್ನು ಹಿಂತೆಗೆದುಕೊಳ್ಳಬೇಕು, ಆಶಾ, ಅಂಗನವಾಡಿ ಹಾಗೂ ಬಿಸಿಯೂಟ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು, ಗುತ್ತಿಗೆ ಪದ್ಧತಿ ರದ್ದುಗೊಳಿಸಬೇಕು, ಕನಿಷ್ಠ ವೇತನ ರೂ.೩೬,೦೦೦ ನಿಗದಿಪಡಿಸಬೇಕು, ದಿನಕ್ಕೆ ೮ ಗಂಟೆ ದುಡಿಮೆ ಖಾತ್ರಿಪಡಿಸಬೇಕು, ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಯಾಗಬೇಕು, ಬೆಲೆ ಏರಿಕೆ ನಿಲ್ಲಬೇಕು ಮುಂತಾದ ಬೇಡಿಕೆಗಳಿಗಾಗಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಹಮ್ಮಿಕೊಳ್ಳಲಾಗಿತ್ತು.

ಎಐಯುಟಿಯುಸಿ ರಾಜ್ಯ ಅಧ್ಯಕ್ಷರಾದ ಕಾ.ಕೆ.ಸೋಮಶೇಖರ್, ರಾಜ್ಯ ಉಪಾಧ್ಯಕ್ಷರಾದ ಕಾ.ಕೆ.ವಿ ಭಟ್, ರಾಜ್ಯ ಕಾರ್ಯದರ್ಶಿ ಕಾ.ಕೆ.ಸೋಮಶೇಖರ್ ಯಾದಗಿರಿ ಸೇರಿದಂತೆ ಇತರೆ ರಾಜ್ಯ ನಾಯಕರು ವಿವಿಧ ಜಿಲ್ಲೆಗಳಲ್ಲಿ ನಡೆದ ಮುಷ್ಕರದಲ್ಲಿ ಪಾಲ್ಗೊಂಡು, ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದರು.
ಭಾಷಣಗಳ ಸಾರಾಂಶ
ಮೂರನೇ ಅವಧಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತ್ರತ್ವದ ಎನ್‌ಡಿಎ ಸರ್ಕಾರ ದುಡಿಯುವ ಜನರ ಹಕ್ಕುಗಳನ್ನು ಕಸಿಯುತ್ತಿದೆ. ಶ್ರಮ ಜೀವಿಗಳ ಜೀವನ-ಜೀವನೋಪಾಯಗಳ ಮೇಲೆ ಕ್ರೂರ ದಾಳಿಗಳನ್ನು ಮಾಡುತ್ತಿದೆ. ಈ ಪರಿಸ್ಥಿತಿಗಳನ್ನು ಸುಧಾರಿಸಬೇಕಾದಂತಹ ಸರ್ಕಾರ ತದ್ವಿರುದ್ಧವಾಗಿ ೪ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರುವ ಮೂಲಕ ಇವುಗಳನ್ನು ದುಡಿಯುವ ಜನರ ಮೇಲೆ ಒತ್ತಾಯ ಪೂರ್ವಕವಾಗಿ ಹೇರುತ್ತಿದೆ. ಆ ಮೂಲಕ ಹಾಲಿ ಇರುವ ದುಡಿಯುವ ಜನರ ಹಕ್ಕುಗಳು ಮತ್ತು ಸವಲತ್ತುಗಳನ್ನು ಕಸಿಯಲು ಹೊರಟಿದೆ. ಕೆಲಸದ ಪರಿಸ್ಥಿತಿ, ಕಾರ್ಮಿಕರ ದುಡಿಯುವ ಅವಧಿ, ಕನಿಷ್ಠ ವೇತನ, ಸಾಮಾಜಿಕ ಭದ್ರತೆ, ಸಂಘಟನೆಯ ಹಕ್ಕು, ಸಾಮೂಹಿಕ ಒಪ್ಪಂದದ (ಚೌಕಾಸಿಯ) ಹಕ್ಕು, ಹೋರಾಟದ ಹಕ್ಕು ಮತ್ತು ಮುಷ್ಕರಗಳ ಹಕ್ಕುಗಳನ್ನು ದಮನಗೊಳಿಸುವ ನೀತಿಗಳು ಕಾಯ್ದೆಯಲ್ಲಿ ಒಳಗೊಂಡಿದೆ. ಕಾರ್ಮಿಕರು ತಮ್ಮ ನ್ಯಾಯೋಚಿತ ಹಕ್ಕುಗಳಿಗಾಗಿ ಹೋರಾಟ ಮಾಡುವುದನ್ನು ಕ್ರಿಮಿನಲ್ ಅಪರಾಧದ ಅಡಿ ತಂದಿರುವ ಕೇಂದ್ರ ಸರ್ಕಾರ, ಕಾರ್ಪೋರೇಟ್ ದೊಡ್ಡ ವ್ಯವಹಾರ ನಡೆಸುವವರು ಕಾಯ್ದೆಗಳನ್ನು ಉಲ್ಲಂಘನೆ ಮಾಡಲು ಮುಕ್ತ ಅವಕಾಶ ಕಲ್ಪಿಸುತ್ತಿದೆ. ಇದು ವ್ಯಾಪಾರ ಸುಲಭಗೊಳಿಸುವುದಾಕ್ಕಾಗಿ ಎಂದು ಸರ್ಕಾರ ನಾಚಿಕೆಯಿಲ್ಲದೆ ಹೇಳುತ್ತಿದೆ.
ಮತ್ತೊಂದೆಡೆ ಅಂಬಾನಿ, ಅದಾನಿ ಸೇರಿದಂತೆ ಬೆರಳೆಣಿಕೆಯ ಕಾರ್ಪೋರೇಟ್ ಮಾಲೀಕರಿಗೆ ಲಕ್ಷಾಂತರ ಕೋಟಿ ತೆರಿಗೆ ರಿಯಾಯಿತಿ ನೀಡುತ್ತಿದೆ, ಸಾಲ ಮನ್ನಾ ಮಾಡುತ್ತಿದೆ. ಅಲ್ಲದೆ ಜನರ ತೆರಿಗೆ ಹಣದಿಂದ, ನೌಕರರ ಶ್ರಮದಿಂದ ಕಟ್ಟಿದ ಸಾರ್ವಜನಿಕ ಉದ್ಯಮಗಳಾದ ವಿಮೆ, ಬ್ಯಾಂಕ್, ರೈಲ್ವೆ, ದೂರ ಸಂಪರ್ಕ, ಬಂದರು, ಗಣಿ, ವಿಮಾನ ಮುಂತಾದವುಗಳನ್ನು ಕಾರ್ಪೋರೇಟ್ ಮಾಲೀಕರಿಗೆ ಬಿಡಿಗಾಸಿಗೆ ಮಾರಾಟ ಮಾಡುತ್ತಿದೆ. ಇವು ೧೯೯೧ರಲ್ಲಿ ಜಾರಿಗೆ ಬಂದ ಖಾಸಗೀಕರಣ-ಉದಾರೀಕರಣ ನೀತಿಗಳ ಫಲಶ್ರುತಿ. ಸಾಮ್ರಾಜ್ಯಶಾಹಿ-ಬಂಡವಾಳಶಾಹಿಗಳ ಪರವಾದ ಈ ನೀತಿಗಳಿಗೆ ಮೊದಲು ಬುನಾದಿ ಹಾಕಿದ್ದೇ ಅಂದಿನ ಕಾಂಗ್ರೆಸ್ ಸರ್ಕಾರ. ಈಗ ಪ್ರಸಕ್ತ ಬಿಜೆಪಿ ಸರ್ಕಾರ ಈ ನೀತಿಗಳನ್ನೇ ಅತ್ಯಂತ ವೇಗವಾಗಿ ಜಾರಿಗೆ ತರುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರಗಳು ಸಂಪೂರ್ಣವಾಗಿ ಕಾರ್ಮಿಕ ವಿರೋಧಿ, ಜನ ವಿರೋಧಿಯಾಗಿವೆ.
ರಾಜ್ಯದಲ್ಲಿಯೂ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ದುಡಿತದ ಅವಧಿಯ ಹೆಚ್ಚಳವನ್ನು ಮತ್ತು ಹಿಂದಿನ ಸರ್ಕಾರ ತಂದ ಕೃಷಿ ಕಾಯ್ದೆಗಳನ್ನು ಮುಂದುವರಿಸುತ್ತಿದೆ. ಫ್ಯಾಕ್ಟರಿ ಕಾಯ್ದೆಗೆ ತಿದ್ದುಪಡಿ ತರಲು, ಮಹಿಳೆಯರಿಗೆ ರಾತ್ರಿ ಪಾಳಿ, ಅಪಾಯಕಾರಿ ಕಾರ್ಖಾನೆಗಳ ಸ್ಥಳಗಳಲ್ಲಿ ಮಹಿಳೆಯರ ನಿರ್ಬಂಧವನ್ನು ತೆಗೆಯುವುದು, ಲಕ್ಷಾಂತರ ಕಾರ್ಮಿಕರನ್ನು ಕಾರ್ಖಾನೆ ಕಾಯ್ದೆಯಿಂದ ಹೊರಗಿಡಲು ಹೊರಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಬೆಲೆ ಏರಿಕೆಗೆ ಯಾವುದೇ ಕಡಿವಾಣವಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಮಿಕ ಹಾಗೂ ರೈತ ಸಂಘಟನೆಗಳು ಒಗ್ಗೂಡಿ ಬಲಿಷ್ಠ ಹೋರಾಟಗಳನ್ನು ರೂಪಿಸುವ ಅವಶ್ಯಕತೆಯಿದೆ. ಈ ಮೂಲಕ ಬಂಡವಾಳಶಾಹಿ ಪರ ನೀತಿಗಳನ್ನು ಹಿಮ್ಮೆಟ್ಟಿಸಬೇಕು ಎಂದು ಕರೆ ನೀಡಿದರು