Loading..

ಜಾಗತಿಕ ಪ್ರತಿಭಟನೆ: ಯುದ್ಧವನ್ನು ನಿಲ್ಲಿಸಲು ಅಮೇರಿಕ-ಇಸ್ರೇಲ್ ಮೇಲೆ ಒತ್ತಡ

ಅಮೇರಿಕ ಮತ್ತು ಇಸ್ರೇಲ್ ನಾಗರಿಕರು ಸೇರಿದಂತೆ ವಿಶ್ವದಾದ್ಯಂತ ಯುದ್ಧ ವಿರೋಧಿ, ಶಾಂತಿ ಪ್ರಿಯ ಜನರು ಅಮೇರಿಕನ್ ಆಡಳಿತಗಾರರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮೊದಲು ಪ್ಯಾಲೆಸ್ತೇನ್, ನಂತರ ಇರಾನ್ ವಿರುದ್ಧ ಜಿಯೋನಿಸ್ಟ್ ಇಸ್ರೇಲ್ ಅನ್ನು ಚಿಮ್ಮು ಹಲಗೆಯಾಗಿ ಬಳಸಿಕೊಂಡು ಅಮೇರಿಕಾ ದಾಳಿ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಬಹುತೇಕ ಎಲ್ಲಾ ಪ್ರಮುಖ ನಗರಗಳಲ್ಲಿ ಪ್ರತಿಭಟನಾಕಾರರು ‘ಇರಾನ್ ಮೇಲೆ ದಾಳಿ ಮಾಡಬೇಡಿ’ ಎಂಬ ಫಲಕಗಳನ್ನು ಹಿಡಿದಿದ್ದಾರೆ. ಅಲ್ಲದೆ, ಇಸ್ರೇಲಿನ ಶಾಂತಿಪ್ರಿಯ ನಾಗರಿಕರು ರಾಜಧಾನಿ ಟೆಲ್ ಅವೀವ್‌ನಲ್ಲಿ ಅಲ್ಲಿನ ಪ್ರಧಾನಿಯವರ ಅಪ್ರಚೋದಿತ ಯುದ್ಧವನ್ನು ಖಂಡಿಸಿ ರಾಲಿಗಳನ್ನು ನಡೆಸಿದ್ದಾರೆ. ಇರಾನ್ ಇಸ್ರೇಲ್ ಮೇಲೆ ದಾಳಿ ಮಾಡಲು ಸಜ್ಜಾಗಿದೆ; ಹಾಗಾಗಿ ಇರಾನ್ ಮೇಲೆ ನಾವು ಮಿಲಿಟರಿ ಕಾರ್ಯಾಚರಣೆ ಮಾಡುತ್ತೇವೆ ಎಂಬ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ಕುತ್ಸಿತ ವಾದವನ್ನು ಯಾರೂ ಒಪ್ಪಲು ತಯಾರಿಲ್ಲ. ಹೀಗಾಗಿ ಇರಾನಿನ ಜನರ ಜೊತೆ ನಿಂತ ಪ್ರತಿಭಟನಾಕಾರರು, “ನಮ್ಮನ್ನು ಕ್ಷಮಿಸಿ ಇರಾನಿನ ಸಹೋದರರೇ” ಎಂಬ ಘೋಷಣೆಯನ್ನು ಕೂಗುತ್ತಿದ್ದಾರೆ. ನ್ಯೂಯಾರ್ಕ್, ಲಾಸ್ ಏಂಜಲೀಸ್, ವಾಷಿಂಗ್ಟನ್ ಡಿಸಿ, ಬೋಸ್ಟನ್, ಷಿಕಾಗೋ, ಸ್ಯಾನ್ ಫ್ರಾನ್ಸಿಸ್ಕೋ, ಕೆನಡಾದ ಟೊರೆಂಟೋಗಳಲ್ಲಿ ‘ಇರಾನ್ ಮೇಲಿನ ದಾಳಿಯಿಂದ ಹಿಂದೆ ಸರಿಯಿರಿ’ ಮತ್ತು “ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಯುದ್ಧ ಬೇಡ” ಎಂಬ ಬ್ಯಾನರ್ ಹಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಪೋಸ್ಟ್ಗಳಲ್ಲಿ, ಪ್ರತಿಭಟನಾಕಾರರು ಯುದ್ಧ ವಿರೋಧಿ ಘೋಷಣೆಗಳನ್ನು ಕೂಗುತ್ತಾ, ಟ್ರಂಪ್ ಆಡಳಿತವು ಇಸ್ರೇಲಿಗೆ ಬೆಂಬಲ ನೀಡುವುದನ್ನು ನಿಲ್ಲಿಸುವಂತೆ ಹಾಗೂ ಹೆಚ್ಚುತ್ತಿರುವ ಸಂಘರ್ಷದಿಂದ ಹಿಂದೆ ಸರಿಯುವಂತೆ ಒತ್ತಾಯಿಸುತ್ತಿದ್ದಾರೆ. ಇರಾನಿನ ಧ್ವಜಗಳನ್ನು ಬೀಸುತ್ತ, “ಟ್ರಂಪ್ ಇರಾನ್ ಮೇಲೆ ಮೂರು ಬಾರಿ ಬಾಂಬ್ ದಾಳಿ ನಡೆಸಿದ್ದಾರೆ. ಇದು ಸಂಪೂರ್ಣ ಯುದ್ಧ ಅಪರಾಧ” ಎಂದು ಪ್ರತಿಭಟನಾಕಾರರೊಬ್ಬರು ಹೇಳಿದರು. “ನಾವು ಯುದ್ಧ ವಿರೋಧಿಗಳು. ನಾವು ಇರಾನಿನ ಜನರನ್ನು ಬೆಂಬಲಿಸುತ್ತೇವೆ. ಹೆಚ್ಚಿನ ಸಾವುಗಳು, ಹೆಚ್ಚಿನ ವಿನಾಶವನ್ನು ತಡೆಯಲು ನಾವು ಬಯಸುತ್ತೇವೆ” ಎಂದರು ಮತ್ತೊಬ್ಬ ಪ್ರತಿಭಟಜನಾಕಾರರು. ಅಮೇರಿಕಾದ ಜನತೆ ಈ ಯುದ್ಧಗಳ ವಿರುದ್ಧ ಕೋಪದಿಂದ ಕುದಿಯುತ್ತಿದ್ದಾರೆ. ಇರಾನ್ ಅನ್ನು ಅಪಾಯಕಾರಿ ಯುದ್ಧದ ಸನ್ನಿವೇಶಕ್ಕೆ ಎಳೆದಿದ್ದಕ್ಕಾಗಿ ಅಮೆರಿಕ ಮತ್ತು ಇಸ್ರೇಲಿನ ಕ್ರಮಗಳನ್ನು ಇಸ್ರೇಲ್ ಕಮ್ಯುನಿಸ್ಟ್ ಪಕ್ಷ ಮತ್ತು ಹದಶ್‌ನ ಎಡ ಒಕ್ಕೂಟ (ಶಾಂತಿ ಹಾಗೂ ಸಮಾನತೆಗಾಗಿನ ಪ್ರಜಾಸತ್ತಾತ್ಮಕ ಮುಂದಳ), ಅಮೆರಿಕ ಕಮ್ಯುನಿಸ್ಟ್ ಪಕ್ಷ ಮತ್ತು ವಿಶ್ವ ಕಾರ್ಮಿಕರ ಪಕ್ಷಗಳು ಖಂಡಿಸಿವೆ ಮತ್ತು ಇರಾನಿನ ಜನರೊಂದಿಗೆ ತಮ್ಮ ಸಂಪೂರ್ಣ ಐಕಮತ್ಯವನ್ನು ಘೋಷಿಸಿವೆ.
ಜಗತ್ತಿನಾದ್ಯಂತ ಭುಗಿಲೇಳುತ್ತಿರುವ ಬೃಹತ್ ಪ್ರತಿಭಟನೆಗಳು
ಇರಾನಿನ ಪರಮಾಣು ಸ್ಥಾವರಗಳ ಮೇಲೆ ದಾಳಿ ಮಾಡುವ ಡೊನಾಲ್ಡ್ ಟ್ರಂಪ್ ನಿರ್ಧಾರ ಮತ್ತು ಇಸ್ರೇಲ್ ಆಕ್ರಮಣದ ವಿರುದ್ಧ ಪ್ರತಿಭಟಿಸಲು ವಾರಾಂತ್ಯದಲ್ಲಿ ಪ್ರಪಂಚದಾದ್ಯಂತ ವಿವಿಧ ನಗರಗಳಲ್ಲಿ ಜನರು ಜಮಾಯಿಸಿದರು. ಯುರೋಪಿನಲ್ಲಿ ದಿ ಹೇಗ್, ಲಂಡನ್, ಪ್ಯಾರಿಸ್, ಬರ್ಲಿನ್ ಮತ್ತು ಬ್ರಸೆಲ್ಸ್ ನಂತಹ ನಗರಗಳಲ್ಲಿ ಹತ್ತಾರು ಸಾವಿರ ಜನರು ಬೀದಿಗಿಳಿದು ಗಾಜಾದಲ್ಲಿನ ನರಮೇಧವನ್ನು ಖಂಡಿಸಿ ಮತ್ತು ಅಮೇರಿಕಾ-ಇಸ್ರೇಲಿ ನೀತಿಗಳಿಗೆ ತಮ್ಮ ಸರ್ಕಾರಗಳ ಬೆಂಬಲವನ್ನು ವಿರೋಧಿಸಿದ್ದಾರೆ. ಇರಾನ್ ಮೇಲಿನ ಆಕ್ರಮಣವನ್ನು ಖಂಡಿಸಿ ಮತ್ತು ಉಲ್ಬಣಗೊಳ್ಳುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಕರೆ ನೀಡಿ ಮೆಲ್‌ಬೋರ್ನ್ನಲ್ಲಿ ನೂರಾರು ಜನರು ಮೆರವಣಿಗೆ ನಡೆಸಿದರು. ಮೊರಾಕೊ, ದಕ್ಷಿಣ ಆಫ್ರಿಕಾ, ಸೊಮಾಲಿಯಾ ಮತ್ತು ಪೋರ್ಚುಗಲ್‌ನಲ್ಲಿಯೂ ಸಹ ದೊಡ್ಡ ಪ್ರತಿಭಟನೆಗಳು ನಡೆದ ವರದಿಯಾಗಿದೆ. ಈ ಪ್ರದರ್ಶನಗಳು ಕದನ ವಿರಾಮಕ್ಕೆ ಒತ್ತಾಯಿಸುವುದಲ್ಲದೇ, ಸಾಮ್ರಾಜ್ಯಶಾಹಿ ಮತ್ತು ವಿದೇಶಿ ಹಸ್ತಕ್ಷೇಪವನ್ನು ಟೀಕಿಸಿವೆ. ಇರಾನಿನೊಂದಿಗೆ ಸಂಘರ್ಷವನ್ನು ಪ್ರಾರಂಭಿಸಿದ್ದಕ್ಕಾಗಿ ಮತ್ತು ಗಾಜಾದಲ್ಲಿ ನಡೆಸಿದ ವಿನಾಶದ ಯುದ್ಧಕ್ಕಾಗಿ ಇಸ್ರೇಲ್ ಅನ್ನು ಖಂಡಿಸಿದ್ದಾರೆ.
ಇರಾನ್‌ನ ಪ್ರತೀಕಾರ
ಆದರೆ ಇರಾನ್ ಮೇಲೆ ಕ್ಷಿಪಣಿ ದಾಳಿ ನಡೆಸಿದ ನಂತರ, ಇಸ್ರೇಲ್‌ಗಾಗಲಿ ಅಥವಾ ಅದರ ಗುರು ಅಮೆರಿಕಾಕ್ಕಾಗಲಿ ಇರಾನಿನ ಪ್ರತೀಕಾರದ ಶಕ್ತಿಯನ್ನು ಅಂದಾಜು ಮಾಡಲು ಸಾಧ್ಯವಾಗಿಲ್ಲ ಎಂದು ತೋರುತ್ತದೆ. ಇರಾನ್ ರಾತ್ರೋರಾತ್ರಿ ಮಾಡಿದ ಕ್ಷಿಪಣಿ ಪ್ರತಿದಾಳಿಗಳು ಇಸ್ರೇಲಿಗೆ ಅಪಾರ ಹಾನಿಯನ್ನುಂಟು ಮಾಡಿದವು. ಜೂನ್ ೨೨ ರಂದು, ಇರಾನಿನ ಪ್ರತೀಕಾರದ ಮಿಲಿಟರಿ ದಾಳಿದಿಂದಾಗಿ ಇಸ್ರೇಲ್‌ಗೆ ಹಿನ್ನಡೆಯಾಗಿದೆ ಎಂದರಿತ ಟ್ರಂಪ್ ಇರಾನಿನ ಮೂರು ಪ್ರಮುಖ ಪರಮಾಣು ಸ್ಥಾವರಗಳ ಮೇಲೆ ಬಿ-೨ ಸ್ಟೆಲ್ತ್ ಬಾಂಬರ್‌ಗಳಿಂದ ವೈಮಾನಿಕ ದಾಳಿ ಮಾಡಿದರು. ಟ್ರಂಪ್ ಈ ದಾಳಿಯನ್ನು “ಅದ್ಭುತ” ಯಶಸ್ಸು ಎಂದು ಹೇಳಿಕೊಂಡು, ಇರಾನಿನ ಪರಮಾಣು ತಾಣಗಳನ್ನು “ನಾಶಪಡಿಸಲಾಯಿತು” ಎಂದು ಹೊಗಳಿಕೊಂಡರೂ ಅಮೇರಿಕಾದ್ದೇ ಮಾಧ್ಯಮ ದೈತ್ಯ ಸಿಎನ್‌ಎನ್, ಅಮೇರಿಕಾದ ಗುಪ್ತಚರ ಮೂಲಗಳ ಮಾಹಿತಿ ಅನುಸರಿಸಿ, ಇರಾನಿನ ಪರಮಾಣು ಸ್ಥಾವರಗಳಿಗೆ ಹೆಚ್ಚಿನ ಹಾನಿಯಾಗಿಲ್ಲ ಎಂದು ವರದಿ ಮಾಡಿದೆ.
ವಿಶ್ವದ ಶಾಂತಿಪ್ರಿಯ ಜನರಿಗೆ ಜಯ
ಈ ದಾಳಿಯಿಂದ ವಿಶ್ವದ ಜನರ, ವಿಶೇಷವಾಗಿ ಅಮೆರಿಕಾ ಜನತೆಯ ಕೋಪ ತಾರಕಕ್ಕೇರಿತು. ಯುದ್ಧ ವಿರೋಧಿ ಪ್ರದರ್ಶನಗಳು ಮತ್ತಷ್ಟು ತೀವ್ರಗೊಂಡವು. ಈ ಬೃಹತ್ ಜನ ಚಳುವಳಿಗಳ ಒತ್ತಡ ಹಾಗೂ ಇರಾನ್ ಜನರ ಮಾತೃಭೂಮಿ ರಕ್ಷಣೆಯ ದೃಢಸಂಕಲ್ಪದಿಂದಾಗಿ, ಅಮೆರಿಕಾ ದಾಳಿ ಮಾಡಿದ ೪೮ ಗಂಟೆಗಳ ಒಳಗೆ, ಅಧ್ಯಕ್ಷ ಟ್ರಂಪ್ ಇಸ್ರೇಲ್ ಮತ್ತು ಇರಾನ್ ಎರಡೂ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಘೋಷಿಸಿದರು. ಅಮೆರಿಕ ಮತ್ತು ಇಸ್ರೇಲ್‌ಗಳು ಮಾನವೀಯತೆಯ ವಿರುದ್ಧ ಯುದ್ಧವನ್ನು ಪ್ರಾರಂಭಿಸಿದರೆ, ಪ್ರಪಂಚದ ಶಾಂತಿಪ್ರಿಯ ಜನರು ಇದರ ವಿರುದ್ಧ ಜಯ ಸಾಧಿಸಿದರು.
ಬದಲಾದ ಸನ್ನಿವೇಶ
ಆದರೆ ನಂತರ ಕಥಾವಸ್ತು ನಾಟಕೀಯವಾಗಿ ಬದಲಾಯಿತು. ಇರಾನ್ ಸ್ವಲ್ಪವೂ ಹೆದರದೇ ಜೂನ್ ೨೩ ರಂದು, ಕತಾರ್‌ನ ನಾಗರೀಕ ಸೌಲಭ್ಯಗಳು ಮತ್ತು ವಸತಿ ಪ್ರದೇಶಗಳಿಂದ ದೂರದಲ್ಲಿರುವ ಅಲ್-ಉದೈದ್‌ನಲ್ಲಿರುವ ಅಮೇರಿಕಾ ವಾಯುಪಡೆಯ ಪ್ರಧಾನ ಕಚೇರಿಯ ಮೇಲೆ ಶಕ್ತಿಶಾಲಿ ಕ್ಷಿಪಣಿಗಳೊಂದಿಗೆ ದಾಳಿ ಮಾಡಿತು. ಇರಾನು, “ತನ್ನ ಗುರಿ ಅಮೆರಿಕದ ಮಿಲಿಟರಿ ನೆಲೆಯಾಗಿದ್ದು, ಸ್ನೇಹಪರ ಮತ್ತು ಸಹೋದರ ರಾಷ್ಟ್ರವಾದ ಕತಾರ್ ಹಾಗೂ ಅದರ ಉದಾತ್ತ ಜನರಿಗೆ ಯಾವುದೇ ಬೆದರಿಕೆಯನ್ನು ಒಡ್ಡಿಲ್ಲ” ಎಂದು ಭರವಸೆ ನೀಡಿತು. ಇದರಿಂದ ಅಮೆರಿಕ ಮತ್ತು ಇಸ್ರೇಲ್ ಎರಡೂ ಬೆಚ್ಚಿಬಿದ್ದವು. ಅಲ್ಲದೆ, ದೇಶದ ಒಳಗಿನ ಮತ್ತು ಹೊರಗಿನ ಜನರ ತೀವ್ರ ಪ್ರತಿಭಟನೆಯಿಂದಾಗಿ ಅಮೆರಿಕವು ಮುಖಭಂಗ ತಪ್ಪಿಸಿಕೊಳ್ಳಲು ಕದನ ವಿರಾಮ ಘೋಷಿಸಬೇಕಾಯಿತು.
ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಜೋಡಿಯ ಈ ದ್ವೇಷ ಏಕೆ?
ಅಮೆರಿಕದ ಸಂಪೂರ್ಣ ಬೆಂಬಲದೊಂದಿಗೆ ಇಸ್ರೇಲ್ ಇರಾನ್ ವಿರುದ್ಧ ಯುದ್ಧ ಆರಂಭಿಸಲು ಈ ಕ್ಷಣವನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಪ್ರಮುಖ ಕಾರಣವೆಂದರೆ ಗಾಜಾವನ್ನು ಮರೆಯುವಂತೆ ಮಾಡುವುದು: ಹಮಾಸ್ ಮೇಲೆ ದಾಳಿ ಮಾಡುವಲ್ಲಿನ ತನ್ನ ವೈಫಲ್ಯವನ್ನು ಜನರು ಮರೆಯುವಂತೆ ಮಾಡುವುದು. ಇದು ಒಂದು ಕಾರಣವಾದರೆ, ಇತರ ಕಾರಣಗಳೂ ಇವೆ. ಮಧ್ಯಪ್ರಾಚ್ಯದ ಅರಬ್ ರಾಷ್ಟ್ರಗಳಲ್ಲಿ, ಇರಾನ್ ಪ್ರಮುಖ ಸ್ಥಾನವನ್ನು ಹೊಂದಿದೆ. ಇದು ಮಧ್ಯಪ್ರಾಚ್ಯದಲ್ಲಿ (ಸೌದಿ ಅರೇಬಿಯಾದ ನಂತರ) ೨ನೇ ಅತಿದೊಡ್ಡ ತೈಲ ನಿಕ್ಷೇಪಗಳನ್ನು ಹೊಂದಿದೆ ಮತ್ತು ವಿಶ್ವದಲ್ಲಿ ೪ನೇ ಸ್ಥಾನದಲ್ಲಿದೆ. ವಿಶ್ವದ ಎರಡನೇ ಅತಿದೊಡ್ಡ ನೈಸರ್ಗಿಕ ಅನಿಲ ನಿಕ್ಷೇಪಗಳನ್ನೂ, ಕಲ್ಲಿದ್ದಲು, ಗಂಧಕ ಮತ್ತು ಲೋಹದ ಖನಿಜಗಳಂತಹ ಇತರ ನೈಸರ್ಗಿಕ ಸಂಪನ್ಮೂಲಗಳ ಗಣನೀಯ ನಿಕ್ಷೇಪಗಳನ್ನು ಹೊಂದಿದೆ. ನೈಸರ್ಗಿಕ ಸಂಪನ್ಮೂಲಗಳಲ್ಲಿನ ಈ ಶ್ರೀಮಂತಿಕೆಯ ಜೊತೆಗೆ, ಇರಾನ್ ಅರಬ್ ರಾಷ್ಟ್ರಗಳಲ್ಲಿ ಶ್ರೇಷ್ಠ ಮಿಲಿಟರಿ ಶಕ್ತಿಯನ್ನು ಹೊಂದಿದೆ. ಹೀಗಾಗಿ ಇರಾನ್ ಅನ್ನು ಅಸ್ಥಿರಗೊಳಿಸಿ ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆಯುವುದು ಅಮೇರಿಕಾದ ಕುತಂತ್ರ. ಅಲ್ಲದೇ ಇರಾನು ಪಶ್ಚಿಮ ಏಷ್ಯಾದ ಜನರಲ್ಲಿ ರೂಪುಗೊಳ್ಳುತ್ತಿರುವ ಅಮೆರಿಕ ವಿರೋಧಿ ಪ್ರತಿರೋಧ ಚಳುವಳಿಗಳಿಗೆ ನೈತಿಕ ಬೆಂಬಲ ನೀಡುತ್ತದೆ. ಅದು ಪದೇಪದೇ ಅಮೆರಿಕದ ಆದೇಶಗಳ ಪಾಲಿಸಲು ನಿರಾಕರಿಸಿದೆ. ಆದ್ದರಿಂದ, ಅಮೇರಿಕದ ಆಳ್ವಿಕರು ಬಹಳ ಹಿಂದೆಯೇ ಇರಾನ್ ಅನ್ನು ‘ದುಷ್ಟ ರಾಷ್ಟ್ರ’ ಎಂದು ಹಣೆಪಟ್ಟಿ ಹಚ್ಚಿದ್ದರು, ಜೊತೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಐದು ಖಾಯಂ ಸದಸ್ಯರಾದ ಚೀನಾ, ಫ್ರಾನ್ಸ್, ರಷ್ಯಾ, ಯುಕೆ, ಅಮೇರಿಕಾ ಹಾಗೂ ಜರ್ಮನಿ ೨೦೧೫ರ ಜುಲೈನಲ್ಲಿ ಜಂಟಿ ಸಮಗ್ರ ಕ್ರಿಯಾ ಯೋಜನೆ (ಜೆಸಿಪಿಒಎ) ಎಂದು ಕರೆಯಲ್ಪಡುವ ಒಂದು ದೊಡ್ಡ ಒಪ್ಪಂದವನ್ನು ಮಾಡಿಕೊಂಡವು. ಅದು ಇರಾನಿನ ಪರಮಾಣು ಕಾರ್ಯಕ್ರಮವನ್ನು ವಿಪರೀತವಾಗಿ ಸೀಮಿತಗೊಳಿಸಿತು ಮತ್ತು ನಿರ್ಬಂಧಗಳನ್ನು ಹೇರಿ ಅವುಗಳ ಪರಿಹಾರಕ್ಕಾಗಿ ತಾನು ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸದಿರುವ ಭರವಸೆಯನ್ನು ಇರಾನ್‌ನಿಂದ ಪಡೆಯಲಾಯಿತು. ಮುಂದೆ, ಮಾನವ ಹಕ್ಕುಗಳ ಉಲ್ಲಂಘನೆಯ ನೆಪವನ್ನು ಸಿದ್ಧವಾಗಿಟ್ಟುಕೊಂಡು ಅವಕಾಶಕ್ಕಾಗಿ ಕಾತರಿಸಿ ಕಾಯುತ್ತಾ, ದೂರದಿಂದಲೇ ಜರುಗುತ್ತಿರುವ ಬೆಳವಣಿಗೆಗಳನ್ನು ಅಮೇರಿಕ ಸೂಕ್ಷ್ಮವಾಗಿ ಗಮನಿಸುತ್ತಿತ್ತು. ಡೊನಾಲ್ಡ್ ಟ್ರಂಪ್‌ರ ಮೊದಲ ಅವಧಿಯ ಆಡಳಿತ ಪ್ರಾರಂಭವಾದ ನಂತರ, ಪೆಂಟಗನ್ ಏಕಪಕ್ಷೀಯವಾಗಿ ಒಪ್ಪಂದದಿಂದ ಹೊರಬಂದಿತು. ಅಮೇರಿಕ, ಜೆಸಿಪಿಒಎ ದೇಶದ ರಾಷ್ಟ್ರೀಯ ಭದ್ರತಾ ಹಿತಾಸಕ್ತಿಯನ್ನು ಕಾಯುವಲ್ಲಿ ವಿಫಲವಾಗಿದೆ ಎಂದು ಗೊಣಗುತ್ತಾ ಇರಾನಿಗೆ ಮತ್ತಷ್ಟು ವ್ಯಾಪಕ ನಿರ್ಬಂಧಗಳನ್ನು ವಿಧಿಸಿತು; ಇರಾನಿನ ಇಂಧನ ಸಂಪನ್ಮೂಲ ವಲಯದ ಕತ್ತು ಹಿಸುಕಲು ಮತ್ತು ಇರಾಕ್ ಮತ್ತು ಅಫ್ಘಾನಿಸ್ತಾನದ ಮಾದರಿಯಲ್ಲಿ ಆ ದೇಶದಲ್ಲಿ ಆಡಳಿತ ಬದಲಾವಣೆಯನ್ನು ತರಲು ಬಯಸಿತು.
ಅತ್ಯಂತ ಕೆಟ್ಟ ಯುದ್ಧ ಅಪರಾಧಿ ಯಾರು?
೨೦೦೩ರ ಇರಾಕ್ ಆಕ್ರಮಣಕ್ಕೂ ಮುನ್ನ, ಇರಾಕ್ ಪರಮಾಣು ಶಸ್ತ್ರಾಸ್ತ್ರಗಳನ್ನು ಒಳಗೊಂಡಂತೆ ಸಾಮೂಹಿಕ ವಿನಾಶಕ ಶಸ್ತ್ರಾಸ್ತ್ರಗಳನ್ನು (WMD) ಹೊಂದಿದೆ ಮತ್ತು ಸದ್ದಾಂ ಹುಸೇನ್ ಆಡಳಿತವು ಜಾಗತಿಕ ಶಾಂತಿಗೆ ಬೆದರಿಕೆ ಒಡ್ಡಲು ಅಣಿಯಾಗುತ್ತಿದೆ ಎಂದು ಅಮೇರಿಕ ಪದೇಪದೇ ಕ್ಯಾತೆ ತೆಗೆಯಿತು. ಈ ನೆಪದಲ್ಲಿ ಇರಾಕ್ ಮೇಲೆ ಆಕ್ರಮಣಕಾರಿ ಯುದ್ಧವನ್ನು ಪ್ರಾರಂಭಿಸಿ ೫ ಲಕ್ಷಕ್ಕೂ ಹೆಚ್ಚು ಇರಾಕಿ ನಾಗರಿಕರನ್ನು ಕೊಂದು, ಆ ದೇಶದ ಸಾರ್ವಭೌಮತ್ವವನ್ನು ಬುಡಮೇಲು ಮಾಡಿದರು ತದನಂತರ, ನಾಚಿಕೆಯಿಲ್ಲದೇ ಆಗಿನ ಅಮೇರಿಕದ ಅಧ್ಯಕ್ಷ ಜಾರ್ಜ್ ಬುಷ್, ಪರಮಾಣು ಶಸ್ತ್ರಾಸ್ತ್ರಗಳು ಸೇರಿದಂತೆ ಇರಾಕಿನ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ಬಗ್ಗೆ ಯುದ್ಧಪೂರ್ವ ಗುಪ್ತಚರ ಮಾಹಿತಿಯು ದೋಷಪೂರಿತವಾಗಿದೆ ಎಂದು ಸಾರ್ವಜನಿಕವಾಗಿ ಒಪ್ಪಿಕೊಂಡರು.
ಇರಾನ್ ಕೂಡ ಒಂದು ಮಾದರಿ ಜನತಂತ್ರವೇನಲ್ಲ. ಅದು ಒಂದು ಧರ್ಮಾಧಾರಿತ ಬೂರ್ಜ್ವಾ ಪ್ರಭುತ್ವವಾಗಿದ್ದು, ತನ್ನದೇ ಜನರನ್ನು ಶೋಷಿಸುತ್ತಿದೆ ಮತ್ತು ಆಗಾಗ್ಗೆ ಜನ ಸಾಮಾನ್ಯರಿಂದ ಕೋಪಕ್ಕೆ ಗುರಿಯಾಗುತ್ತದೆ. ಆದರೆ ಇರಾನ್ ಎಂದೂ ಬೇರೆ ದೇಶದ ಮೇಲೆ ದಾಳಿ ಮಾಡಿದ ಉದಾಹರಣೆಯಿಲ್ಲ. ಆದರೆ ಅಮೆರಿಕವು ವಿವಿಧ ದೇಶಗಳಲ್ಲಿ ಆಡಳಿತ ಬದಲಾವಣೆಯ ಷಡ್ಯಂತ್ರವನ್ನು ಹೆಣೆಯುವ ಇತಿಹಾಸವನ್ನು ಹೊಂದಿದೆ. ವಿಯೆಟ್ನಾಂ, ಇರಾಕ್ ಮತ್ತು ಅಫ್ಘಾನಿಸ್ತಾನಗಳನ್ನು ಆಕ್ರಮಿಸಿಕೊಂಡಿರುವ ಇತಿಹಾಸ ಅದಕ್ಕಿದೆ. ಜೊತೆಗೆ, ಫೆಬ್ರವರಿ ೨೦೨೫ ರ ಹೊತ್ತಿಗೆ ೫೫ ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ೧೨೮ ಮಿಲಿಟರಿ ನೆಲೆಗಳನ್ನು ರಚಿಸಿದೆ. ಹಾಗಾದರೆ ವಿಶ್ವ ಶಾಂತಿಗೆ ಯಾರು ಬೆದರಿಕೆ? ಇರಾನೇ ಅಥವಾ ಅಮೇರಿಕವೇ?
ಭಾರತ ಸರ್ಕಾರದ ಮೌನ!
ಈ ಯುದ್ಧದ ಬಗ್ಗೆ ಭಾರತ ಸರ್ಕಾರದ ಪ್ರತಿಕ್ರಿಯೆ ನಿಜಕ್ಕೂ ವಿಚಿತ್ರವಾಗಿದೆ. ೨೦೨೫ರ ಜೂನ್ ೧೨ರಂದು, ಗಾಜಾದಲ್ಲಿ “ಎಲ್ಲಾ ಪಕ್ಷಗಳಿಂದ ತತ್‌ಕ್ಷಣದ, ಬೇಷರತ್ತಾದ ಮತ್ತು ಶಾಶ್ವತ ಕದನ ವಿರಾಮ”ಕ್ಕೆ ಕರೆ ನೀಡುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯಕ್ಕೆ ಜೊತೆಯಾಗಿ ಭಾರತವು ತನ್ನ ಮತವನ್ನು ಚಲಾಯಿಸಲಿಲ್ಲ. ಎರಡು ದಿನಗಳ ನಂತರ, ಇರಾನ್‌ನಲ್ಲಿನ ಮಿಲಿಟರಿ ನೆಲೆಗಳು, ಕ್ಷಿಪಣಿ ಸೌಲಭ್ಯಗಳು ಮತ್ತು ಪರಮಾಣು ಸ್ಥಾಪನೆಗಳ ಮೇಲೆ ಇಸ್ರೇಲ್ ನಡೆಸಿದ ಮಿಲಿಟರಿ ದಾಳಿಗಳನ್ನು “ಬಲವಾಗಿ ಖಂಡಿಸಿದ” ಶಾಂಘೈ ಸಹಕಾರ ಸಂಸ್ಥೆ(Sಅಔ)ಯಿಂದಲೂ ಭಾರತವು ಅಂತರವನ್ನು ಕಾಯ್ದಕೊಂಡಿತ್ತು. ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವ, ಇಸ್ರೇಲ್ ಇರಾನ್ ಎರಡರೊಂದಿಗೂ ದೂರವಾಣಿ ಚರ್ಚೆ ನಡೆಸಿದ್ದೇವೆ ಎಂದು ತೆಪ್ಪಗಾದರು. ಎಂತಹ ಪ್ರಹಸನ! ಶಸ್ತ್ರಾಸ್ತ್ರ ವ್ಯಾಪಾರದಲ್ಲಿ ಎರಡೂ ದೇಶಗಳು ತನ್ನ ಪಾಲುದಾರರಾಗಿರುವುದರಿಂದ ಭಾರತವು ಅಮೇರಿಕಾ ಅಥವಾ ಇಸ್ರೇಲ್‌ಗಳ ವಿರುದ್ಧ ನಿಲುವು ತೆಗೆದುಕೊಳ್ಳಲು ಸಾಧ್ಯವಿಲ್ಲ. ಮತ್ತೊಂದೆಡೆ, ೨೦೧೮-೧೯ರವರೆಗೆ ಇರಾನ್ ಭಾರತಕ್ಕೆ ಕಚ್ಚಾ ತೈಲ ಪೂರೈಕೆದಾರರ ಮೂರನೇ ಅತಿದೊಡ್ಡ ಮೂಲವಾಗಿತ್ತು ಮತ್ತು ಇರಾನ್ ಚಬಾಹಾರ್ ಬಂದರನ್ನು ಭಾರತವು ಇರಾನ್‌ನೊಂದಿಗೆ ದೀರ್ಘಾವಧಿಯ ಒಪ್ಪಂದದ ಮೂಲಕ ಅಭಿವೃದ್ಧಿಪಡಿಸಿ ನಿರ್ವಹಿಸುತ್ತಿದೆ.
ಆರ್ಥಿಕತೆಯ ಮಿಲಿಟರೀಕರಣ
ಅನೇಕರು ಕಡೆಗಣಿಸುವ ಒಂದು ಮಹತ್ವದ ಅಂಶವೆಂದರೆ ಸಾಯುತ್ತಿರುವ ಬಂಡವಾಳಶಾಹಿ ಆರ್ಥಿಕತೆ ಮತ್ತು ಸಾಮ್ರಾಜ್ಯಶಾಹಿ ಯುದ್ಧ ತಂತ್ರದ ನಡುವಿನ ಸಂಬಂಧ. ೬೩ ವರ್ಷಗಳ ಹಿಂದೆ, ಎಸ್‌ಯುಸಿಐ(ಸಿ) ಪಕ್ಷದ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಮತ್ತು ಈ ಯುಗದ ಓರ್ವ ಅಪ್ರತಿಮ ಮಾರ್ಕ್ಸವಾದಿ ಚಿಂತಕರಾದ ಕಾಮ್ರೇಡ್ ಶಿವದಾಸ್ ಘೋಷ್, ಬಂಡವಾಳಶಾಹಿ ವ್ಯವಸ್ಥೆಯ ಪರಿಹರಿಸಲಾಗದ ಮಾರುಕಟ್ಟೆ ಬಿಕ್ಕಟ್ಟಿನ ಉಲ್ಭಣದ ಬಗ್ಗೆ ಹೀಗೆ ಹೇಳಿದ್ದರು : “…ಮುಂದುವರಿದ ಬಂಡವಾಳಶಾಹಿ ದೇಶಗಳಲ್ಲಿನ ಹಾಗೂ ಹಿಂದುಳಿದ ದೇಶಗಳಲ್ಲಿನ ಬಂಡವಾಳಶಾಹಿಗಳು ಇಡೀ ಆರ್ಥಿಕತೆಯನ್ನು ಮಿಲಿಟರಿ ಆರ್ಥಿಕತೆಯೊಂದಿಗೆ ಸಂಯೋಜಿಸುತ್ತಿದ್ದಾರೆ. ಅಂದರೆ, ಆರ್ಥಿಕ ಬಿಕ್ಕಟ್ಟಿನಿಂದಾಗಿ ಮಾರುಕಟ್ಟೆಯ ಉಬ್ಬರವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲದ ಕಾರಣ, ಅದನ್ನು ಉತ್ತೇಜಿಸಲು ಕೃತಕವಾಗಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇದರರ್ಥವೇನೆಂದರೆ, ಸರ್ಕಾರವು ಜನರ ಹಣದಿಂದ ತಯಾರಾದ ಸರ್ಕಾರಿ ಬಜೆಟ್‌ನ ಅನುದಾನವನ್ನು ಬಳಸಿಕೊಂಡು ಮಾರುಕಟ್ಟೆಯಲ್ಲಿ ತಾನೇ ಖರೀದಿದಾರನಾಗಿ ಕಾಣಿಸಿಕೊಳ್ಳುತ್ತದೆ. …ಹೀಗೆ ತಾನು ಖರೀದಿ ಮಾಡಿದ ಯುದ್ಧ ಬಳಕೆಯ ಸಾಮಾಗ್ರಿಗಳಿಗೆ ಮಾರುಕಟ್ಟೆ ಲಭ್ಯವಾಗದಿದ್ದರೆ, ಕೈಗಾರಿಕೆಗಳ ಮಿಲಿಟರೀಕರಣದ ಮೂಲಕವೂ ಮಾರುಕಟ್ಟೆಯಲ್ಲಿ ಕೃತಕ ಉಬ್ಬರವನ್ನು ಕಾಯ್ದುಕೊಳ್ಳಲು ಅದಕ್ಕೆ ಸಾಧ್ಯವಾಗುವುದಿಲ್ಲ.” (ಸಂಪುಟ ೪) ವಿವಿಧ ಸ್ಥಳಗಳಲ್ಲಿ ಯುದ್ಧವನ್ನು ಆಯೋಜಿಸುವ ಮೂಲಕ, ಜಾಗತಿಕ ಸಾಮ್ರಾಜ್ಯಶಾಹಿಯ ಮುಖ್ಯಸ್ಥ ಅಮೇರಿಕ ಮತ್ತು ಅದರ ಸಹವರ್ತಿ ದೇಶಗಳು ತಮ್ಮ ಮಿಲಿಟರೀಕೃತ ಆರ್ಥಿಕತೆಗೆ ಉತ್ತೇಜನವನ್ನು ನೀಡಲು ಪ್ರಯತ್ನಿಸುತ್ತಿವೆ.
ಸಾಮ್ರಾಜ್ಯಶಾಹಿ ಯುದ್ಧ ಪ್ರಯತ್ನಗಳನ್ನು ವಿಫಲಗೊಳಿಸಬೇಕು
“ಸಾಮ್ರಾಜ್ಯವಾದ ಯುದ್ಧವನ್ನು ಸೃಷ್ಟಿಸುತ್ತದೆ” ಎಂದು ಒಂದು ಶತಮಾನಕ್ಕೂ ಹೆಚ್ಚು ಹಿಂದೆಯೇ ಮಹಾನ್ ಲೆನಿನ್ ಹೇಳಿದ್ದರು. ಏಕಸ್ವಾಮ್ಯ ಬಂಡವಾಳದ ಪ್ರಾಬಲ್ಯ ಮತ್ತು ಬಂಡವಾಳದ ರಫ್ತುಗಳಿಂದ ನಿರೂಪಿಸಲ್ಪಟ್ಟ ಸಾಮ್ರಾಜ್ಯಶಾಹಿಯ ಸ್ವರೂಪವು ಅಂತರ್ಗತವಾಗಿ ಯುದ್ಧಕ್ಕೆ ಕಾರಣವಾಗುತ್ತದೆ ಎಂದು ಅವರು ನಿರ್ವಿವಾದವಾಗಿ ಪ್ರತಿಪಾದಿಸಿದ್ದರು. ಬಂಡವಾಳಶಾಹಿ ಆರ್ಥಿಕತೆಗಳಲ್ಲಿನ ಲಾಭ ಮತ್ತು ವಿಸ್ತರಣೆಗಾಗಿನ ಉತ್ಕಟ ಆಕಾಂಕ್ಷೆಗೂ ಸಂಪನ್ಮೂಲಗಳು ಮತ್ತು ಮಾರುಕಟ್ಟೆಗಳನ್ನು ವಶಪಡಿಸಿಕೊಳ್ಳಲು ಸಾಮ್ರಾಜ್ಯಶಾಹಿ ಶಕ್ತಿಗಳ ನಡುವೆ ಅನಿವಾರ್ಯವಾಗಿ ನಡೆಯುವ ಸಂಘರ್ಷಕ್ಕೂ ಸಂಬಂಧವಿದೆ ಎಂದು ಅವರು ತೋರಿಸಿಕೊಟ್ಟಿದ್ದಾರೆ.
ಹಾಗಾಗಿ, ಮಾನವೀಯತೆಯ ಮೇಲಿನ ದುರುದ್ದೇಶಪೂರ್ವಕ ಅಪರಾಧವಾದ ಯುದ್ಧಗಳನ್ನು ತಡೆಗಟ್ಟುವುದು, ಮನುಕುಲ ಮತ್ತು ನಾಗರಿಕತೆಯನ್ನು ಉಳಿಸಲು ಅತ್ಯಗತ್ಯ. ಹಾಗಾಗಿ, ಅಮೇರಿಕದಂತಹ ಸಾಮ್ರಾಜ್ಯಶಾಹಿ ದೈತ್ಯರ ಈ ಪೈಶಾಚಿಕ ದಾಳಿಯ ವಿರುದ್ಧ ಚಳುವಳಿಯನ್ನು ತೀವ್ರಗೊಳಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಅಮೆರಿಕ-ಇಸ್ರೇಲ್ ಜೋಡಿ ಜನರ ಪ್ರತಿಭಟನೆಯಿಂದ ಬಾಲ ಮುದುರಿಕೊಂಡಿದ್ದನ್ನು ನೋಡಿದಾಗ ತಿಳಿದುಬರುವುದೇನೆಂದರೆ, ಅಂತಿಮ ಗೆಲುವು ಸರ್ವಾಧಿಕಾರಿಗಳಿಗಲ್ಲ. ಜನರಿಗೇ!