Loading..

ದೇವನಹಳ್ಳಿ ರೈತರ ಸುದೀರ್ಘ ಹೋರಾಟಕ್ಕೆ ಸಿಕ್ಕ ಜಯ ಭೂಸ್ವಾಧೀನ ಪ್ರಕ್ರಿಯೆ ಹಿಂದಕ್ಕೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ರೈತರು ಮಹತ್ವ ಪೂರ್ಣ ವಿಜಯವನ್ನು ಸಾಧಿಸಿದ್ದಾರೆ. ಸರ್ಕಾರದ ಭೂಸ್ವಾಧೀನದ ಆಕ್ರಮಣಕಾರಿ ನಾಗಾಲೋಟಕ್ಕೆ ಒಂದು ತಡೆ ಬಿದ್ದಿದೆ. ರೈತರ ಬದುಕನ್ನೇ ಬಲಿಕೊಟ್ಟು ಕಾರ್ಪೊರೇಟ್ ಕಂಪೆನಿಗಳಿಗೆ ಭೂಮಿಕೊಡುವ ಸರ್ಕಾರದ ನಿರಂಕುಶ ಧೋರಣೆಗೆ ಅಂಕುಶವೊಂದು ಬಿದ್ದಿದೆ. ದಮನಕಾರಿ ಸರ್ಕಾರಗಳ ವಿರುದ್ಧ ರೈತ ಸಮುದಾಯ ಒಂದಾಗಿ, ಎಲ್ಲಾ ದುಡಿಯುವ ಜನತೆಯ ಸಹಯೋಗದೊಂದಿಗೆ, ಪ್ರಗತಿಪರ ಆಶಯಗಳುಳ್ಳ ಜನರ ಜೊತೆ ನಡೆಸುವ ದೀರ್ಘಕಾಲದ ಮತ್ತು ರಾಜಿರಹಿತ ಹೋರಾಟ ಗೆಲುವನ್ನು ತರಬಲ್ಲುದು ಎನ್ನುವುದನ್ನು (ಚನ್ನರಾಯಪಟ್ಟಣ ಹೋಬಳಿ)ದೇವನಹಳ್ಳಿ ಹೋರಾಟ ಸಾಬೀತುಪಡಿಸಿದೆ. ಆ ಚಳುವಳಿಗೆ ಪಶ್ಚಿಮ ಬಂಗಾಳದ ನಂದಿಗ್ರಾಮ ಹಾಗೂ ಸಿಂಗೂರಿನಲ್ಲಿ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಮಾರ್ಗದರ್ಶನದಲ್ಲಿ ನಡೆದ ಯಶಸ್ವಿ ಧೀರೋದಾತ್ತ ಹೋರಾಟ, ದೆಹಲಿಯಲ್ಲಿ, 750ಕ್ಕೂ ಹೆಚ್ಚು ರೈತರನ್ನು ಕಳೆದುಕೊಂಡು ಒಂದು ವರ್ಷ ಕಾಲ ನಡೆಸಿದ ಸುದೀರ್ಘ ರೈತ ಹೋರಾಟ ಇತ್ಯಾದಿಗಳು ಸ್ಫೂರ್ತಿಯ ಸೆಲೆ. ಸುಮಾರು ಮೂರು ವರ್ಷಗಳ ಕಾಲ ಅವಿರತವಾಗಿ ಸರ್ಕಾರದ ಬಲವಂತದ ಭೂಸ್ವಾಧೀನವನ್ನು ಪ್ರತಿರೋಧಿಸಿಕೊಂಡು ಬಂದ ದೇವನಹಳ್ಳಿ ರೈತರು ಅಂತಿಮ ಗೆಲುವಿನ ನಗೆಯನ್ನು ಬೀರಿದರು.
ಈ ಹೋರಾಟ ಇಷ್ಟು ದೀರ್ಘಕಾಲ ನಡೆಯಲು ಕಾರಣವೇನು?
ರಾಜ್ಯ ಸರ್ಕಾರವು ಡಿಫೆನ್ಸ್ ಏರೋಸ್ಪೇಸ್ ಪಾರ್ಕ್ ಅಭಿವೃದ್ಧಿ ಪಡಿಸಲೆಂದು ಕೆಐಎಡಿಬಿ ಮೂಲಕ ದೇವನಹಳ್ಳಿ ತಾಲೂಕಿನ 13 ಹಳ್ಳಿಗಳ 1777 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಏಪ್ರಿಲ್ 2022ರಲ್ಲಿ ಆದೇಶ ಹೊರಡಿಸಿತು. ಅದನ್ನು ತೀವ್ರವಾಗಿ ವಿರೋಧಿಸಲು ಕಾರಣವೇನೆಂದರೆ, ಈ ಸ್ವಾಧೀನದ ಅಧಿಸೂಚನೆಗೆ ಒಳಪಟ್ಟಿರುವ ಭೂಮಿಯಲ್ಲಿ ಸಾವಿರಾರು ಟನ್ ರಾಗಿ, ದ್ರಾಕ್ಷಿ, ಹೂ, ತರಕಾರಿಯನ್ನು ಬೆಳೆಯಲಾಗುತ್ತಿದ್ದು, ಪಶು ಸಂಗೋಪನೆಯಿಂದ ಪ್ರತಿದಿನ 6000-8000 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಉತ್ತಮ ಗುಣಮಟ್ಟದ ರೇಷ್ಮೆಗೂಡು ಮತ್ತು ಬೆಂಗಳೂರು ದ್ರಾಕ್ಷಿ ಉತ್ಪಾದನೆ ಕೂಡ ಇಲ್ಲಿನ ವಿಶೇಷವಾಗಿದ್ದು, ಕೃಷಿ ಮತ್ತು ಪೂರಕ ಉದ್ದಿಮೆಗಳಲ್ಲಿ ಇಲ್ಲಿನ ಜನ ತೊಡಗಿದ್ದಾರೆ.
ಇದು ಸಮೃದ್ಧ ಕೃಷಿ ಭೂಮಿಯಾಗಿರುವುದರಿಂದ, ಅದನ್ನು ನಂಬಿ ಸಾವಿರಾರು ಮಂದಿಯ ಜೀವನೋಪಾಯ ನಡೆಯುತ್ತಿದೆ. ಈ ವ್ಯಾಪ್ತಿಯಲ್ಲಿ ಬರುವ ಬಹುತೇಕರು ಸಣ್ಣ ಹಿಡುವಳಿದಾರರು. ಈ ಭೂ ಸ್ವಾಧೀನ 600 ಕುಟುಂಬಗಳ ಮೇಲೆ ಪರಿಣಾಮ ಬೀರಲಿದ್ದು, 387 ಕುಟುಂಬಗಳು ಸಂಪೂರ್ಣ ಭೂರಹಿತವಾಗಲಿವೆ. ಈ ಭೂಮಿಯನ್ನು ಅವಲಂಬಿಸಿ ಬದುಕುತ್ತಿರುವವರ ಬದುಕು ಬೀದಿಗೆ ಬೀಳುತ್ತದೆ. ಇದರಲ್ಲಿ ಬಡರೈತರು, ದಲಿತರು, ಕೃಷಿ ಕೂಲಿ ಕಾರ್ಮಿಕರೂ ಸೇರಿದಂತೆ ಅನಕ್ಷರಸ್ತರು, ಕಡಿಮೆ ವಿದ್ಯಾರ್ಹತೆ ಹೊಂದಿದವರು ಹೆಚ್ಚಾಗಿದ್ದಾರೆ.
ನಿಜಕ್ಕೂ ಇಡೀ ಜನ ಸಮುದಾಯದ ಹಿತಕ್ಕಾಗಿ ಭೂಸ್ವಾಧೀನವಾಗಿದ್ದರೆ ಜನರು ವಿರೋಧಿಸುತ್ತಿರಲಿಲ್ಲ. ಆದರೆ ಇಂದಿನ ಸರ್ಕಾರಗಳ ಅಭಿವೃದ್ಧಿಯೆಂದರೆ ಅದು ಬಂಡವಾಳಿಗರ ಅಭಿವೃದ್ಧಿ. ಬಂಡವಾಳಿಗರು ಮತ್ತು ದುಡಿಯುವ ಜನತೆ ಏಕಕಾಲದಲ್ಲಿ ಅಭಿವೃಧ್ಧಿಯಾಗುವುದಿಲ್ಲ. ಇದು ಬಂಡವಾಳಶಾಹಿ ಆರ್ಥಿಕತೆಯ ನಿಯಮ. ಬಂಡವಾಳಿಗರಿಗೆ ಲಾಭವೆಂದರೆ ಕಾರ್ಮಿಕರ ಶ್ರಮದ ಶೋಷಣೆ ಮತ್ತು ಸ್ವಾಭಾವಿಕ ಸಂಪನ್ಮೂಲಗಳ ಶೋಷಣೆ. ಹಿಂದೆ ಸರ್ಕಾರಗಳು ಶಾಲೆ, ಆಸ್ಪತ್ರೆ, ಮುಂತಾದ ಜನೋಪಯೋಗಿ ಕಾರ್ಯಗಳಿಗೆ ಭೂಮಿಯನ್ನು ಕೇಳಿದಾಗ ಎಲ್ಲಾ ವಿಭಾಗದ ಜನರು ತಾ ಮುಂದು ನಾ ಮುಂದು ಎಂದು ಭೂಮಿಯನ್ನು ಕೊಟ್ಟಿದ್ದಾರೆ. ಹಿಂದಿನ ಕಾಲದ ಹೆಚ್ಚಿನ ಸರ್ಕಾರಿ ಶಾಲಾ ಕಾಲೇಜುಗಳು, ಆಸ್ಪತ್ರೆಗಳಿಗೆ ಭೂಮಿ ಅಂತಹ ಭೂದಾನಗಳಿಂದಲೇ ಬಂದಿದೆ. ಆದರೆ ಈಗ ಸರ್ಕಾರ ಭೂಸ್ವಾಧೀನ ಮಾಡಿಕೊಳ್ಳುತ್ತಿರುವುದು ಬಂಡವಾಳಿಗರಿಗೆ ಯಥೇಚ್ಛ ಲಾಭ ಮಾಡಿಕೊಡುವುದಕ್ಕೆ. ಭೂಮಿಯನ್ನು ನಂಬಿ ಬದುಕುತ್ತಿರುವವರ ಕೈಯಿಂದ ಸರ್ಕಾರ ಪುಡಿಗಾಸಿಗೆ ಭೂಮಿ ಕಸಿದುಕೊಂಡು ಬಂಡವಾಳಶಾಹಿ ತಿಮಿಂಗಿಲಗಳ ಬಾಯಿಗೆ ಹಾಕುತ್ತಿದೆ. ಕೈಗಾರಿಕೆ ಸ್ಥಾಪನೆಯಾದರೆ ಜನರಿಗೆ ಉದ್ಯೋಗ ದೊರೆಯುತ್ತದೆಯೆಂದು ಕಥೆಯನ್ನು ಹೇಳಲಾಗುತ್ತದೆ. ಆದರೆ ವಾಸ್ತವವೇನು?
ರೈತರ ಫಲವತ್ತಾದ ಭೂಮಿ ಕಿತ್ತುಕೊಂಡು ಕೈಗಾರಿಕೆಗಳನ್ನು ಸ್ಥಾಪಿಸಿ, ಆ ಭಾಗದ ಜನರಿಗೆ ಉದ್ಯೋಗ ನೀಡುತ್ತೇವೆ ಎನ್ನುವ ಸರ್ಕಾರ ಮತ್ತು ಕಂಪನಿಗಳ ಭರವಸೆಗಳು ಇಂದು ಉಪಯೋಗಕ್ಕೆ ಇಲ್ಲದಂತಾಗಿವೆ. ಕೈಗಾರಿಕಾ ಎಸ್ಟೇಟ್ ಅಭಿವೃದ್ಧಿಗೆಂದು ಸ್ವಾಧೀನಪಡಿಸಿಕೊಂಡ ಎಷ್ಟೋ ಕಡೆ ಕೈಗಾರಿಕೆಗಳು ಸ್ಥಾಪನೆಯಾಗದೆ ಬಿಕೋ ಎನ್ನುತ್ತಿವೆ. ಬೆಳೆಯನ್ನು ಬೆಳೆಯಲೂ ಸಹ ಆ ಭೂಮಿ ಸಿಗದೆ ಇರುವಂತಹ ಸ್ಥಿತಿ ಒಂದು ಕಡೆ. ಇನ್ನೊಂದು ಕಡೆ, ಸರ್ಕಾರದ ಕಾನೂನಿನ ಪ್ರಕಾರವೇ ಕಾರ್ಖಾನೆ ಸ್ಥಾಪಿಸಿದ ಮೇಲೆ ಭೂಸಂತ್ರಸ್ರರಿಗೆ ಉದ್ಯೋಗ ನೀಡಬೇಕು. ಅದರೆ ಉದ್ಯೋಗ ನೀಡದೆ ಜನರನ್ನು ವಂಚಿಸಿದ ಮತ್ತು ವಂಚಿಸುತ್ತಿರುವ ಎಷ್ಟೋ ಉದಾಹರಣೆಗಳು ಕಣ್ಮುಂದೆ ನಡೆಯುತ್ತಿವೆ. ಇತ್ತೀಚೆಗೆ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯು (ಎಐಕೆಕೆಎಂಎಸ್) ಮೈಸೂರಿನ ನಂಜನಗೂಡು ತಾಲೂಕಿನಲ್ಲಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಕಾರ್ಖಾನೆಗೆಂದು ಸ್ವಾಧೀನ ಮಾಡಿಕೊಂಡ ಮೇಲೆ ಭೂಸಂತ್ರಸ್ತರಿಗೆ ಉದ್ಯೋಗ ನೀಡದೆ ಸತಾಯಿಸುತ್ತಿದ್ದ ಕಾರ್ಖಾನೆಗಳ ವಿರುದ್ಧ ಒಂದು ವರ್ಷಕ್ಕೂ ಹೆಚ್ಚು ಕಾಲ ಹೋರಾಟ ನಡೆಸಿ ನೂರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕೊಡುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಸಮರಶೀಲ ಹೋರಾಟ
ಅಂತೆಯೇ ಭೂ ಸ್ವಾಧೀನವನ್ನು ವಿರೋಧಿಸಿ ಅಲ್ಲಿನ ರೈತರು 2022ರ ಏಪ್ರಿಲ್ 4 ರಿಂದ ಚನ್ನರಾಯಪಟ್ಟಣ ಹೋಬಳಿ (ದೇವನಹಳ್ಳಿ ತಾಲೂಕು) ನಾಡಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಿದರು. ಸತತ ಮೂರು ವರ್ಷಗಳ ಕಾಲ ರೈತರು ಪಟ್ಟು ಬಿಡದೆ ಹೋರಾಟ ಮುಂದುವರೆಸಿದರು. ನ್ಯಾಯಬದ್ಧ ಹೋರಾಟದಲ್ಲಿ ನಿರತರಾದ ರೈತರನ್ನು ಕರೆದು ಸಮಸ್ಯೆ ಬಗೆಹರಿಸುವುದು ಪ್ರಜಾತಂತ್ರದಲ್ಲಿ ಸರ್ಕಾರದ ಕರ್ತವ್ಯ. ಆದರೆ ಜನ ವಿರೋಧಿ, ಪ್ರಜಾತಂತ್ರ ವಿರೋಧಿ ಸರ್ಕಾರ ಪ್ರತಿಭಟನಾ ನಿರತ ರೈತರ ಮೇಲೆ ದೇವನಹಳ್ಳಿ ಟೌನ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿತು, ರೈತ ಮಹಿಳೆಯರು ತಮ್ಮ ಭೂಮಿ ತಮ್ಮ ಹಕ್ಕು ಎಂದಿದ್ದಕ್ಕೆ ನ್ಯಾಯಾಲಯದ ಸುತ್ತ ಅಲೆಯುವಂತಾಗಿದೆ. ಇಷ್ಟೇ ಅಲ್ಲ, 75ನೇ ಸ್ವಾತಂತ್ರೋತ್ಸವ ಸಮಾರಂಭದ ದಿನ ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಲಾಠಿಚಾರ್ಜ್ ಮಾಡಲಾಗಿತ್ತು. 1947ಕ್ಕೆ ಮುಂಚೆ ಬ್ರಿಟಿಷ್ ಸರ್ಕಾರ ಪ್ರತಿಭಟನೆಯ ಹಕ್ಕನ್ನು ದಮನ ಮಾಡಿತ್ತು. ಇಂದು ಸ್ವತಂತ್ರ ಭಾರತದ ಸರ್ಕಾರ ಪ್ರತಿಭಟನೆಯ ಹಕ್ಕನ್ನು ದಮನ ಮಾಡುತ್ತಿದೆ. ಇಂತಹ ಎಷ್ಟೋ ಅನೇಕ ಘಟನೆಗಳು ನಡೆದಿವೆ, ನಡೆಯುತ್ತಲೇ ಇವೆ. ಸರ್ಕಾರ ಸಾಧ್ಯವಿರುವ ಎಲ್ಲಾ ರೀತಿಯಿಂದಲೂ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂಬುದು ಇಂತಹ ಘಟನೆಗಳಿಂದ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಆದರೆ ಅಲ್ಲಿನ ರೈತರು ಎಷ್ಟೇ ದಮನ, ದಬ್ಬಾಳಿಕೆ ಮಾಡಿದರೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎನ್ನುವ ಗಟ್ಟಿ ನಿರ್ಧಾರದಿಂದ ಹೋರಾಟ ನಡೆಸಿದರು.
ಈ ಹೋರಾಟ ಶಾಂತಿಯುತವಾಗಿ ನಡೆಯುತ್ತಲೇ ಇತ್ತು. ಇತ್ತೀಚೆಗೆ ಸರ್ಕಾರ ಭೂ ಸ್ವಾಧೀನದ ಬಗ್ಗೆ ಅಂತಿಮ ಅಧಿಸೂಚನೆ ಹೊರಡಿಸಿದಾಗ, ಅಲ್ಲಿನ ರೈತರು ತಮ್ಮ ಹೋರಾಟವನ್ನು ತೀವ್ರಗೊಳಿಸಬಹುದು ಎಂಬುದನ್ನು ಗ್ರಹಿಸಿ, ದೇವನಹಳ್ಳಿಯಲ್ಲಿ ಹೋರಾಟ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬ ಕುಂಟು ನೆಪವೊಡ್ಡಿ, ಜೂನ್ 25 ರಂದು ರೈತರ ಹೋರಾಟವನ್ನು ಹತ್ತಿಕ್ಕಲು ಹೋರಾಟ ನಿರತ ರೈತರು, ರೈತ ಮುಖಂಡರನ್ನು ಬಂಧಿಸಿದರು. ಇದು ಹೋರಾಟದ ಕಿಡಿಜ್ವಾಲೆಯಾಗಿ ಬೆಳೆಯಲು ಕಾರಣವಾಯಿತು. ಅಂದು ಎಐಕೆಕೆಎಂಎಸ್ ಸೇರಿದಂತೆ ಎಲ್ಲಾ ರೈತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ಪ್ರಗತಿಪರರು ಭಾಗವಹಿಸಿದ್ದರು.
ಮರುದಿನದಿಂದ ಹೋರಾಟ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನಕ್ಕೆ ಸ್ಥಳಾಂತರವಾಯಿತು. ಈ ಭೂಸ್ವಾಧೀನದ ಆರಂಭದಿಂದಲೂ ಯಾವುದೇ ರೀತಿಯ ಕಾನೂನನ್ನು ಪಾಲಿಸದ ಸರ್ಕಾರ ತಮ್ಮ ಹಕ್ಕಿಗಾಗಿ ಹೋರಾಡುತ್ತಿರುವ ರೈತರು ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಿದ್ದಾರೆ ಎನ್ನುತ್ತಿರುವುದು ಸೋಜಿಗವೆನಿಸಿತ್ತು. ಆದರೂ ರೈತರು ಅಲ್ಲಿಯೂ ಸಹ ಶಾಂತಿಯುತ ಹೋರಾಟವನ್ನು ಮುಂದುವರೆಸಿದರು. ನಂತರ ಹೋರಾಟವು ರಾಷ್ಟ್ರೀಯ ಸ್ವರೂಪ ಪಡೆದು, ರಾಷ್ಟ್ರ ಮಟ್ಟದ ರೈತ ಸಂಘಟನೆಗಳ ಒಕ್ಕೂಟ ವೇದಿಕೆಯಾದ ಸಂಯುಕ್ತ ಕಿಸಾನ್ ಮೋರ್ಚಾದ ಬೆಂಬಲವನ್ನು ಸಹ ಪಡೆಯಿತು. ಜುಲೈ 4 ರಂದು ಎಸ್‌ಕೆಎಂ ನೇತೃತ್ವದಲ್ಲಿ ಭಾರಿ ಬಹಿರಂಗ ಸಭೆ ನಡೆಯಿತು. ಸಂಯುಕ್ತ ಕಿಸಾನ್ ಮೋರ್ಚಾದ ಅಖಿಲ ಭಾರತ ನಾಯಕರು ಭಾಗಿಯಾಗಿ ಈ ಹೋರಾಟವನ್ನು ಸಂಪೂರ್ಣವಾಗಿ ಬೆಂಬಲಿಸಿದರು, ಈ ಸಂದರ್ಭದಲ್ಲಿ ಎಐಕೆಕೆಎಂಎಸ್ ರೈತ ಸಂಘಟನೆಯ ರಾಜ್ಯ ಕಾರ್ಯದರ್ಶಿಗಳಾದ ಕಾಮ್ರೇಡ್ ಭಗವಾನ್‌ರೆಡ್ಡಿ ಮತ್ತು ರಾಜ್ಯ ಉಪಾಧ್ಯಕ್ಷರಲ್ಲೊಬ್ಬರಾದ ಕಾಮ್ರೇಡ್ ಎಚ್.ಪಿ.ಶಿವಪ್ರಕಾಶ್ ಅವರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯ ನಾಯಕರು, ಪದಾಧಿಕಾರಿಗಳು ಭಾಗಿಯಾಗಿದ್ದರು. ಜುಲೈ 4 ರ ಹೋರಾಟ ಬೃಹತ್ತಾಗಿ ಬೆಳೆದಿದ್ದರಿಂದ ರಾಜ್ಯದ ಮುಖ್ಯಮಂತ್ರಿಗಳು ಅದೇ ದಿನ ರೈತರ ಸಭೆ ಕರೆದರು. ಭೂಸ್ವಾಧೀನದ ವಿಷಯದಲ್ಲಿ ರೈತರ ಪರವಾಗಿ ನಿರ್ಧಾರ ತೆಗೆದುಕೊಳ್ಳುವುದಾಗಿ 10 ದಿನಗಳ ಗಡುವು ಕೇಳಿದರು. ಈ ಮಧ್ಯೆ ಭೂಸ್ವಾಧೀನದಿಂದ ಜಮೀನು ಕಳೆದುಕೊಳ್ಳುವ ಕೆಲವು ಪುಡಾರಿಗಳು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಭೂಸ್ವಾಧೀನಕ್ಕೆ ತಮ್ಮ ಒಪ್ಪಿಗೆಯನ್ನು ಬಹಿರಂಗಪಡಿಸಿದರು. ಹೀಗೆ ಚಳುವಳಿಯ ಹಾದಿಯನ್ನು ತಪ್ಪಿಸಲು ಪ್ರಯತ್ನ ನಡೆಸಿದರು. ಆದರೆ ರೈತರು ದಾರಿತಪ್ಪಲಿಲ್ಲ, ಅಷ್ಟೇ ಅಲ್ಲ ಅವರು ರೈತರಿಗಿಂತ ಹೆಚ್ಚಾಗಿ ರಿಯಲ್ ಎಸ್ಟೇಟ್ ದಂಧೆಯಲ್ಲಿರುವವರು ಎನ್ನುವುದನ್ನು ಜಗಜ್ಜಾಹೀರುಗೊಳಿಸಿದರು. ತಮ್ಮ ಹಳ್ಳಿಗಳಲ್ಲಿಯೇ ಹೋರಾಟ ಮುಂದುವರೆಸಿದರು.
ಅಂತಿಮವಾಗಿ ಸರ್ಕಾರ ರೈತರ ಜೊತೆ ನಡೆದ ಜುಲೈ 15ರ ಸಭೆಯಲ್ಲಿ ಭೂಸ್ವಾಧೀನವನ್ನು ಸಂಪೂರ್ಣವಾಗಿ ವಾಪಸ್ ತೆಗೆದಕೊಳ್ಳುವುದೆಂದು ಘೋಷಿಸಿತು. ಒಟ್ಟಾರೆ ಈ ಭಾಗದ ಭೂಮಿಯನ್ನು ಕಿತ್ತು, ಬೃಹತ್ ಕಂಪನಿಗಳ ಕೈಗಿಟ್ಟು, ಈ ದೇಶದ ಬಂಡವಾಳಶಾಹಿಗಳ ಸೇವೆಗೈಯಲು ಸದಾ ಸಿದ್ಧ ಎನ್ನುವ ಸಂದೇಶವನ್ನು ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಪಕ್ಷ ಮತ್ತು ಈಗ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷಗಳು ನೀಡುತ್ತಿವೆ. ಇದರಿಂದ ಈ ದೇಶದ ಆಳ್ವಿಕೆ ಶ್ರೀಮಂತ ಬಂಡವಾಳಶಾಹಿಗಳ ಪರವಾಗಿ ನಡೆಯುತ್ತಿದೆಯೇ ಹೊರತು, ದುಡಿಯುವ ಮತ್ತು ತಮ್ಮ ಬೆವರು, ರಕ್ತ ಸುರಿಸಿ ದೇಶ ಕಟ್ಟುವ ರೈತ – ಕಾರ್ಮಿಕರ ಪರವಾಗಿ ಅಲ್ಲ ಎಂಬುದನ್ನು ತೋರಿಸಿವೆ. ಆದ್ದರಿಂದಲೇ ಸರ್ಕಾರ ಭೂ ಸ್ವಾಧೀನವನ್ನು ಕೈಬಿಡುತ್ತಿರುವಾಗಲೇ ತನ್ನ ಅನುಯಾಯಿಗಳನ್ನು ಮುಂದಿಟ್ಟುಕೊಂಡು ತಾವಾಗಿಯೇ ಭೂಮಿಯನ್ನು ಕೊಡುವವರಿಗೆ ಹೆಚ್ಚಿನ ಪರಿಹಾರ ಹಾಗೂ ಅಭಿವೃದ್ಧಿಪಡಿಸಿದ ಭೂಮಿಯನ್ನು ಕೊಡುತ್ತೇವೆಂದು ಘೋಷಿಸಿದೆ. ಹೀಗೆ ಹಿಂಬಾಗಿಲಿನಿಂದ, ರೈತರಿಗೆ ಆಮಿಷಗಳನ್ನು ಒಡ್ಡಿ ಭೂಸ್ವಾಧೀನಕ್ಕೆ ಮುಂದಾಗುತ್ತಿದೆ. ಸರ್ಕಾರದ ಈ ಹುನ್ನಾರವನ್ನು ಸೋಲಿಸಬೇಕು.
ಬೇಕು ಸಮಾಜವಾದಿ ಕೃಷಿ ಪದ್ಧತಿ
ಅದಕ್ಕಾಗಿ ರೈತರು ಯಾವುದೇ ಕಾರಣಕ್ಕೂ ಮರುಳಾಗಬಾರದು. ತಮ್ಮದೇ ಆದ ರಾಜಿರಹಿತ ಸಂಘಟನೆಯನ್ನು ಕಟ್ಟಿಕೊಳ್ಳಬೇಕು. ಅವರು ಸರ್ಕಾರದ ಎಲ್ಲಾ ರೈತ ವಿರೋಧಿ ಹೋರಾಟಗಳಲ್ಲಿ ಭಾಗವಹಿಸಬೇಕು. ಜೊತೆಗೆ ಕೃಷಿಯನ್ನು ಉಳಿಸಿಕೊಳ್ಳಲು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸುತ್ತಿರುವ ರೈತ ವಿರೋಧಿ ನೀತಿಗಳ ವಿರುದ್ಧ ಸಮರಶೀಲ ಹೋರಾಟವನ್ನು ಕಟ್ಟಬೇಕು. ತಮ್ಮ ಹೋರಾಟಗಳನ್ನು ಅಂತಿಮವಾಗಿ ಇಂತಹ ನೀತಿಗಳಿಗೆ ಕಾರಣವಾದ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ತಿರುಗಿಸಬೇಕು. ಅವರು ಕಾರ್ಮಿಕರ ಜೊತೆ ಸೇರಿಕೊಂಡು ಭೂಹೀನ, ಬಡ ಮತ್ತು ಮಧ್ಯಮ ರೈತರಿಗೆ ನಿಜವಾದ ಆದಾಯವನ್ನು ತಂದುಕೊಡಬಲ್ಲ, ಸುಸ್ಥಿರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಿಸುವ ಸಮಾಜವಾದಿ ಕೃಷಿ ಪದ್ಧತಿಗಾಗಿ ಹೋರಾಡಬೇಕು!