
ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿವೆ ಎನ್ನಲಾದ ನೂರಾರು ಅಸಹಜ ಸಾವುಗಳ ಕುರಿತು ನಿಷ್ಪಕ್ಷಪಾತ ತನಿಖೆಯಾಗಲಿ - ಎಸ್‌ಯುಸಿಐ(ಸಿ)
ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವೊಂದರ ಸುತ್ತಮುತ್ತ ಕಳೆದೆರಡು ದಶಕಗಳಲ್ಲಿ ನೂರಾರು ಅಸಹಜ ಸಾವುಗಳು ಸಂಭವಿಸಿವೆ ಎಂಬ ಆರೋಪ ನಿರಂತರವಾಗಿ ಕೇಳಿ ಬರುತ್ತಲೇ ಇದೆ. ಅನನ್ಯಾ ಭಟ್, ಸೌಜನ್ಯ ಮೊದಲಾದ ಎಳೆಯ ಹುಡುಗಿಯರ ಸಾವಿನ ತನಿಖೆ ಕೊನೆ ಮುಟ್ಟಲೇ ಇಲ್ಲ, ತಪ್ಪಿತಸ್ಥರು ಯಾರೆಂಬುದು ಹೊರ ಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅಲ್ಲಿನ ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡಿದ ಪೌರಕಾರ್ಮಿಕನೊಬ್ಬ ಮೈ ನಡುಕ ಹುಟ್ಟಿಸುವಂತಹ ಆರೋಪ ಮಾಡಿದ್ದಾರೆ. ತಾನು ನೂರಾರು ಎಳೆಯ ಬಾಲಕಿಯರ ಮತ್ತು ವಯಸ್ಕ ಹೆಣ್ಣುಮಕ್ಕಳ ಶವಗಳನ್ನು ಹೂತಿರುವುದಾಗಿ ದೂರು ದಾಖಲಿಸಿದ್ದೇ ಅಲ್ಲದೆ ಅದರ ಪರಿಣಾಮವಾಗಿ ರಾಜ್ಯ ಸರ್ಕಾರವು ವಿಶೇಷ ತನಿಖಾ ದಳ (ಎಸ್ಐಟಿ) ವನ್ನು ಕೂಡ ನೇಮಕ ಮಾಡಿದೆ.
ಇಡೀ ದೇಶದ ಗಮನ ಸೆಳೆದಿರುವ ಈ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಮುಂದಾಗಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಯಾವುದೇ ರಾಜಕೀಯ ಅಥವಾ ಧಾರ್ಮಿಕ ಪ್ರಭಾವಗಳಿಗೆ ಒಳಗಾಗದೆ ಎಸ್‌ಐಟಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ಅಪರಾಧಿಗಳು ಎಷ್ಟೇ ಪ್ರಭಾವಿಯಾಗಿದ್ದು, ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಅವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಎಸ್‌ಯುಸಿಐ(ಸಿ) ಒತ್ತಾಯಿಸುತ್ತದೆ. ನಿಗೂಢವಾಗಿರುವ ಈ ನಾಪತ್ತೆ ಮತ್ತು ಸಾವಿನ ಪ್ರಕರಣಗಳ ಸತ್ಯಾಂಶವೇನೆಂದು ಹೊರಬರಬೇಕು ಮತ್ತು ಈ ಅಪರಾಧಗಳ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕೆಂಬುದು ಜನಸಾಮಾನ್ಯರ ಒತ್ತಾಸೆಯಾಗಿದೆ. ಆದ್ದರಿಂದ ಜನರ ನಿರೀಕ್ಷೆಗೆ ತಕ್ಕಂತೆ ಸರ್ಕಾರ ಮತ್ತು ತನಿಖಾ ದಳ ಕೆಲಸ ಮಾಡಬೇಕು ಹಾಗೂ ತನಿಖೆ ಮತ್ತೆ ಹಳ್ಳ ಹಿಡಿಯದಂತೆ ಜನತೆ ಜಾಗರೂಕರಾಗಿರಬೇಕು ಎಂದು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷವು ಕರೆ ನೀಡುತ್ತದೆ.
ಹೇಳಿಕೆ ಇವರಿಂದ
ಕೆ.ಉಮಾ
ರಾಜ್ಯ ಕಾರ್ಯದರ್ಶಿಗಳು
ಎಸ್‌ಯುಸಿಐ (ಸಿ)