Loading..

ಸಾರ್ವಜನಿಕ ಶಿಕ್ಷಣ ಉಳಿಸಿ! ರಾಜ್ಯದ ಜನತೆಯ ಒಕ್ಕೊರಲ ಆಗ್ರಹ!!

ಬಡ ರೈತ – ಕಾರ್ಮಿಕರ, ದುಡಿಯುವ ವರ್ಗದ ಮಕ್ಕಳಿಗೆ ಆಶಾಕಿರಣವೇ ಸರ್ಕಾರಿ ಶಾಲೆಗಳು! ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಕೋಟ್ಯಂತರ ಜನತೆಗೆ ಶಿಕ್ಷಣವೇ ಆಶಾಕಿರಣ. ತಮ್ಮ ಮಕ್ಕಳ ಉಜ್ವಲ ಭವಿಷ್ಯವನ್ನು ಬೆಳಗುವ ಹಣತೆಯೇ ನಮ್ಮ ಸರ್ಕಾರಿ ಶಾಲೆಗಳು ಎಂದವರು ನಂಬಿದ್ದಾರೆ. ಅಂತಹ ಶಾಲೆಗಳನ್ನು ಬೆಳೆಸುವುದು, ರಕ್ಷಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು. ಆದರೆ ಕರ್ನಾಟಕ ರಾಜ್ಯ ಸರ್ಕಾರವು “ಹಬ್ ಅಂಡ್ ಸ್ಪೋಕ್” ಹೆಸರಿನಲ್ಲಿ 6,000 ಕ್ಕೂ ಹೆಚ್ಚು ಶಾಲೆಗಳನ್ನು ‘ವಿಲೀನ’ ಗೊಳಿಸಲು ನಿರ್ಧರಿಸಿದೆ. 5 ಅಥವಾ 6 ಶಾಲೆಗಳನ್ನು 1 ಶಾಲೆಗೆ ವಿಲೀನಗೊಳಿಸುವುದು ಎಂದರೆ 5 ಶಾಲೆಗಳನ್ನು ಮುಚ್ಚುವುದು! ಈ ಸರಳ ಸತ್ಯ ಅರ್ಥವಾಗದೇ ಇರಲು ನಮ್ಮ ಜನರು ಮೂರ್ಖರಲ್ಲ! ಬಡ ಮಕ್ಕಳ ಭವಿಷ್ಯವನ್ನು ಸರ್ಕಾರವೇ ಕಸಿಯುತ್ತಿರುವುದು ಅಪ್ರಜಾತಾಂತ್ರಿಕ ಮತ್ತು ಅತ್ಯಂತ ಖೇದಕರ ಸಂಗತಿ. ಸರ್ಕಾರವು ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಹಲವು ಕಾರಣಗಳನ್ನು ನೀಡುತ್ತಿದೆ. ಈ ಸುಳ್ಳು ಕಾರಣಗಳನ್ನು ಬಯಲು ಮಾಡಿ ಜನ ಹೋರಾಟವನ್ನು ಬೆಳೆಸುವುದು ನಮ್ಮ ಮುಂದಿರುವ ಸವಾಲು.
ಕಡಿಮೆ ದಾಖಲಾತಿಯ ಕುಂಟು ನೆಪ
ರಾಜ್ಯ ಸರ್ಕಾರವು 10 ಕ್ಕಿಂತ ಕಡಿಮೆ ದಾಖಲಾತಿ ಇರುವ ಸರ್ಕಾರಿ ಶಾಲೆಗಳನ್ನು “ವಿಲೀನಗೊಳಿಸಲಿದೆ” ಅಂದರೆ ಮುಚ್ಚಲಿದೆ ಎಂದು ರಾಜ್ಯದ ಪ್ರಮುಖ ಪತ್ರಿಕೆಗಳು ವರದಿ ಮಾಡಿವೆ. ಖಾಸಗಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚುತ್ತಿರುವಾಗ, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏಕೆ ಇಳಿಮುಖವಾಗುತ್ತಿದೆ? ಇದಕ್ಕೆ ಕಾರಣಗಳು ಏನು? ಇದಕ್ಕೆ ಯಾರು ಹೊಣೆ? ಎಂಬ ಪ್ರಶ್ನೆಗಳಿಗೆ ಉತ್ತರವನ್ನು ನಾವು ಕಂಡುಕೊಳ್ಳಬೇಕಿದೆ.
ಯುನಿಫೈಡ್ ಡಿಸ್ಟ್ರಿಕ್ಟ್ ಇನ್ಫರ್ಮೇಷನ್ ಸಿಸ್ಟಮ್ ಫಾರ್ ಎಜುಕೇಶನ್ ಪ್ಲಸ್ (ಯುಡಿಐಎಸ್‌ಇ+) ವರದಿಯ ಪ್ರಕಾರ :
* 3,500 ಕ್ಕೂ ಹೆಚ್ಚು ಶಾಲೆಗಳಲ್ಲಿ ಬಳಕೆಗೆ ಯೋಗ್ಯ ಶೌಚಾಲಯದ ವ್ಯವಸ್ಥೆಯೇ ಇಲ್ಲ.
* 2,600 ಕ್ಕೂ ಹೆಚ್ಚು ಶಾಲೆಗಳಲ್ಲಿ ಗಂಡು ಮಕ್ಕಳಿಗೆ, 1,000 ಕ್ಕೂ ಹೆಚ್ಚು ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯವಿಲ್ಲ.
* 1,052 ಶಾಲೆಗಳಲ್ಲಿ ವಿದ್ಯುತ್ ಸೌಲಭ್ಯ ಹಾಗೂ 213 ಶಾಲೆಗಳಲ್ಲಿ ಕುಡಿಯುವ ನೀರಿನ ಪೂರೈಕೆ ಇಲ್ಲವಾಗಿದೆ.
ಹಲವು ಶಾಲೆಗಳ ಕಟ್ಟಡಗಳು ವರ್ಷಗಳಿಂದ ದುರಸ್ತಿ ಕಾಣದೇ ಛಾವಣಿಗಳು ಸೋರುತ್ತಿವೆ. ಸುಮಾರು 21, 255 ಕೊಠಡಿಗಳಿಗೆ ದೊಡ್ಡ ಪ್ರಮಾಣದ ದುರಸ್ತಿಯಾಗಬೇಕಿದೆ ಎಂದು ಇಲಾಖೆಯೇ ಹೇಳಿದೆ! ಇಂತಹ ಶೋಚನೀಯ ಪರಿಸ್ಥಿತಿಯಲ್ಲಿರುವ ಸರ್ಕಾರಿ ಶಾಲೆಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಹೇಗೆ ತಾನೇ ನಿರ್ಭಯವಾಗಿ ಕಳುಹಿಸಲು ಸಾಧ್ಯ? ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಈ ಗಂಭೀರ ಸಮಸ್ಯೆಗಳನ್ನು ಪರಿಹರಿಸದೆ ಶಾಲೆಗಳನ್ನೇ ಮುಚ್ಚಲು ಹೊರಟಿರುವುದು ‘ನೆಗಡಿ ಬಂದರೆ ಮೂಗನ್ನೇ ಕತ್ತರಿಸಿದಂತೆ’! ವಿಪರ್ಯಾಸವೆಂದರೆ ದಾಖಲಾತಿ ಸಂಖ್ಯೆ ಹೆಚ್ಚಿರುವ ಶಾಲೆಗಳ ಪರಿಸ್ಥಿತಿಯು ಇದಕ್ಕಿಂತ ಯಾವುದೇ ರೀತಿಯಲ್ಲೂ ಭಿನ್ನವಾಗಿಲ್ಲ.
* ಬಿಜಾಪುರದ ಒಂದು ಸರ್ಕಾರಿ ಶಾಲೆಯಲ್ಲಿ 160 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ ಆದರೆ ಇಲ್ಲಿ ಇರುವ ಶಿಕ್ಷಕರು ಕೇವಲ ಇಬ್ಬರು.
* ದಾವಣಗೆರೆ ಜಿಲ್ಲೆಯ ಕಾರಿಗನೂರು ಗ್ರಾಮದ ಸರ್ಕಾರಿ ಶಾಲೆ. ಇದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀಯುತ ಜೆ.ಎಚ್. ಪಟೇಲ್ ಅವರು ವ್ಯಾಸಂಗ ಮಾಡಿದ ಶಾಲೆ. ಇಲ್ಲಿ 600 ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಇದರ ಕಟ್ಟಡ ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿದೆ. ಚಾವಣಿ ಎಂದು ಕುಸಿದು ಬೀಳುತ್ತದೆ ಎಂಬ ಆತಂಕದ ಕ್ಷಣಗಣನೆ ಪೋಷಕರದ್ದಾಗಿದೆ.
* 7,821 ಏಕೋಪಾಧ್ಯಾಯ ಶಾಲೆಗಳನ್ನು ಹೊಂದಿರುವ ಹೆಗ್ಗಳಿಕೆ ನಮ್ಮ ರಾಜ್ಯದ್ದು.
* ಅತೀ ಮುಖ್ಯವಾಗಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 59 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ.
ಹಲವು ದಶಕಗಳಿಂದ ನಮ್ಮ ಸರ್ಕಾರಿ ಶಾಲೆಗಳ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ. ಈ ಶಾಲೆಗಳನ್ನು ಉಳಿಸುವ, ಬೆಳೆಸುವ ಯಾವುದೇ ಇಚ್ಛಾ ಶಕ್ತಿ ಯನ್ನು ನಾವು ಆಳ್ವಿಕರಲ್ಲಿ ಕಾಣುತ್ತಿಲ್ಲ. ಬದಲಾಗಿ ಕ್ರಮೇಣವಾಗಿ ಸರ್ಕಾರಿ ಶಾಲೆಗಳನ್ನೇ ಇಲ್ಲವಾಗಿಸಿ, ಶಿಕ್ಷಣವನ್ನು ಸಂಪೂರ್ಣ ಖಾಸಗೀಕರಣಗೊಳಿಸುವ ಹುನ್ನಾರವೇ ಎದ್ದು ಕಾಣುತ್ತಿದೆ.
* ಕಡಿಮೆ ದಾಖಲಾತಿಯ ಕಾರಣದಿಂದ ಕಳೆದ 2 ವರ್ಷದಲ್ಲಿ 144 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಆದರೆ, ಎಂತಹ ವಿಪರ್ಯಾಸವೆಂದರೆ ಮುಚ್ಚಲ್ಪಟ್ಟ ಪ್ರತಿಯೊಂದು ಸರ್ಕಾರಿ ಶಾಲೆಯ ನಾಲ್ಕು ಕಿಲೋಮೀಟರ್ ವಿಸ್ತೀರ್ಣದಲ್ಲಿ 44 ಖಾಸಗಿ ಶಾಲೆಗಳು ಆರಂಭವಾಗಿವೆ! (10-2-2025, ಡೆಕ್ಕನ್ ಹೆರಾಲ್ಡ್ , ಹುಬ್ಬಳ್ಳಿ ಆವೃತ್ತಿ)
ಕಳೆದ 6 ವರ್ಷಗಳಲ್ಲಿ 3,600 ಖಾಸಗಿ ಶಾಲೆಗಳು ಹಾಗೂ ಪ್ರಸಕ್ತ ವರ್ಷದಲ್ಲಿ 470 ಖಾಸಗಿ ಶಾಲೆಗಳಿಗೆ ಪರವಾನಗಿ ನೀಡಿರುವುದೇ ಇದಕ್ಕೆ ಸಾಕ್ಷಿ! ಖಾಸಗಿ ಶಾಲೆಗಳಿಗೆ “ಗಿರಾಕಿಗಳನ್ನು” ಬಲವಂತವಾಗಿ ದಬ್ಬುವ ಉದ್ದೇಶದಿಂದಲೇ ಸರ್ಕಾರಿ ಶಾಲೆಗಳನ್ನು ಕತ್ತುಹಿಚುಕಿ ಸಾಯಿಸುವ “ವಿನೂತನ ಶಿಕ್ಷಣ ನೀತಿ”ಯನ್ನು ರಾಜ್ಯ ಸರ್ಕಾರ ಪಾಲಿಸುತ್ತಾ ಬಂದಿದೆ!
ಸೋರುತಿಹುದು ಶಾಲೆಯ ಮಾಳಿಗೆ
ರಾಜ್ಯದ 21, 225 ಸಾವಿರ ಶಾಲೆಗಳ ಕೊಠಡಿಗಳು ದುರಸ್ತಿಗೆ ಬಂದಿವೆ! ಮಳೆ ಬಂದರೆ ಸೋರುವ ಕೊಠಡಿಗಳಲ್ಲೇ ತರಗತಿಗಳು ನಡೆಯುತ್ತಿವೆ. ಸುರಕ್ಷಿತ ಸ್ಥಳಗಳಲ್ಲಿ ಮಕ್ಕಳನ್ನು ಕೂರಿಸಿ ತರಗತಿ ನಡೆಸಲು ಶಿಕ್ಷಕರ ಪರದಾಟವಂತೂ ಹೇಳತೀರದು. ದೇಗುಲ, ಆಸ್ಪತ್ರೆ ಕಟ್ಟಡ, ಎಲ್ಲೆಂದರಲ್ಲಿ ತರಗತಿಗಳನ್ನು ನಡೆಸುವುದು ಸರ್ವೇಸಾಮಾನ್ಯವೆಂದರೆ ಉತ್ಪ್ರೇಕ್ಷೆಯಾಗಲಾರದು. ರಾಜ್ಯದ ಎಜುಕೇಷನಲ್ ಹಬ್ ಎಂದು ಕರೆಸಿಕೊಳ್ಳುವ ಜಿಲ್ಲೆಗಳದ್ದೂ ಇದೇ ದುಸ್ಥಿತಿ. ಮಳೆಯಿಂದಾಗಿ ಸೋರುತ್ತಿರುವ ಶಾಲೆಗಳನ್ನು ದುರಸ್ತಿಗೊಳಿಸಿ ಎಂದು ಶಾಲಾ ಶಿಕ್ಷಕರೂ ಸರ್ಕಾರಕ್ಕೆ ಪತ್ರಗಳ ಮೇಲೆ ಪತ್ರಗಳನ್ನು ಬರೆದು ಮನವಿ ಮಾಡುತ್ತಿದ್ದಾರೆ. ಇಂತಹ ಮನವಿ ಬರೆದ ಶಿಕ್ಷಕರನ್ನು ಅಮಾನತ್ತುಗೊಳಿಸಿದೆ ನಮ್ಮ ’ಪ್ರಜಾತಾಂತ್ರಿಕ’ ರಾಜ್ಯ ಸರ್ಕಾರ! ಇದು ಅತ್ಯಂತ ಖಂಡನೀಯ ಕ್ರಮ.
ವಿದ್ಯಾರ್ಥಿಗಳ ಹಾಗೂ ಜನಸಾಮಾನ್ಯರ ಹೋರಾಟವೇ ಮುಂದಿನ ಏಕೈಕ ದಾರಿ
ಈಗಾಗಲೇ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯು ‘ಸಾರ್ವಜನಿಕ ಶಿಕ್ಷಣ ಉಳಿಸಿ’ ‘ಸರ್ಕಾರಿ ಶಾಲೆಗಳನ್ನು ರಕ್ಷಿಸಿ, ಬಲಪಡಿಸಿ’ ಘೋಷವಾಕ್ಯದೊಂದಿಗೆ 50 ಲಕ್ಷ ಸಹಿ ಸಂಗ್ರಹ ಅಭಿಯಾನಕ್ಕೆ ಕರೆ ನೀಡಿದೆ. ರಾಜ್ಯವ್ಯಾಪಿ ನೂರಾರು ಸಾರ್ವಜನಿಕ ಕಾರ್ಯಕ್ರಮಗಳು, ಪೋಷಕರ ಸಭೆಗಳನ್ನು ನಡೆಸುವ ಮೂಲಕ ಪ್ರಬಲ ಚಳುವಳಿಯನ್ನು ಬೆಳೆಸುತ್ತಿದೆ. ಸಾವಿರಾರು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳನ್ನು ಉಳಿಸಲು ಪೆನ್ನು, ಹಾಳೆ ಹಿಡಿದು ಯೋಧರಂತೆ ಎದ್ದು ನಿಂತು ಬೀದಿ ಬೀದಿ ತಿರುಗಿ ‘ಸರ್ಕಾರಿ ಶಾಲೆಗಳು ನಮ್ಮ ಸ್ವತ್ತು’ ಎಂಬ ತಮ್ಮ ಎಲ್ಲಾ ಉದಾತ್ತ ಭಾವನೆಗಳೊಂದಿಗೆ ಸಹಿ ಸಂಗ್ರಹಿಸಲು ಜನರ ಬಳಿ ಬರುತ್ತಿದ್ದಾರೆ. ಅಂದು ಶಿಕ್ಷಣಕ್ಕಾಗಿ ಹೋರಾಡಿದ ಎಲ್ಲಾ ಮಹಾನ್ ವ್ಯಕ್ತಿತ್ವಗಳ ತ್ಯಾಗ ಬಲಿದಾನಗಳಿಂದ ಶಿಕ್ಷಣ ಪಡೆಯುತ್ತಿದ್ದೇವೆ. ಅದೇ ಶಿಕ್ಷಣ ಪಡೆಯಲು ಇಂದು ವಿಪತ್ತು ಎದುರಾದಾಗ ನಮ್ಮ ಎಲ್ಲಾ ಶಕ್ತಿಯಿಂದ, ಸಾರ್ವಜನಿಕ ಶಿಕ್ಷಣ ಉಳಿಸುವ ಐತಿಹಾಸಿಕ ಜವಾಬ್ದಾರಿ ನಮ್ಮ ಹೆಗಲೇರಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಉಳಿಸಲು ರಾಜ್ಯದ ಎಲ್ಲಾ ಜನತೆ, ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು ಒಕ್ಕೊರಲಿನಿಂದ ಮುಂದಾಗಬೇಕೆಂಬುದು ಈ ಘಳಿಗೆಯ ಕರೆಯಾಗಿದೆ.