ಬೌದ್ಧಿಕ-ಸಂಘಟನಾತ್ಮಕ ಸದೃಢತೆ ಪ್ರೇರೇಪಿಸಿದ ರಾಜ್ಯಮಟ್ಟದ ಮಹಿಳಾ ಶಿಬಿರ
ಜ್ಞಾನ ಪ್ರಪಂಚಕ್ಕೆ ಮಹಿಳೆಯರು ಪ್ರವೇಶ ಮಾಡಬೇಕು – ಕಾಮ್ರೇಡ್ ಕೆ. ರಾಧಾಕೃಷ್ಣ
ರಾಜ್ಯದ 20 ಜಿಲ್ಲೆಗಳಿಂದ ಎಲ್ಲಾ ಸ್ತರದ ಮಹಿಳೆಯರು (ಶಿಕ್ಷಿತರು-ಅಶಿಕ್ಷಿತರು, ಗ್ರಾಮೀಣ-ನಗರವಾಸಿಗಳು, ಕೃಷಿ ಕೂಲಿ ಕಾರ್ಮಿಕರು, ನರೇಗಾ ಕಾರ್ಮಿಕರು, ಮನೆಗೆಲಸದ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಶಿಕ್ಷಕಿ-ದಾದಿ-ಸಫಾಯಿ ಕರ್ಮಚಾರಿಗಳು, ವಕೀಲರು, ವೈದ್ಯರು, ಗೃಹಿಣಿಯರು, ವಿದ್ಯಾರ್ಥಿನಿಯರು ಇತ್ಯಾದಿ ಇತ್ಯಾದಿ,) ಮೈಸೂರಿನಲ್ಲಿ ಜೂನ್ 21- 22, 2025 ರಂದು ನಡೆದ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್‌ಎಸ್)ಯ ಕಾರ್ಯಕರ್ತೆಯರ ಶಿಬಿರಕ್ಕೆ ಜಮಾಯಿಸಿದ್ದರು. ಶಿಬಿರವು “ಜನಿಸುವ-ಅರಳುವ-ಉಳಿಯುವ ಹಕ್ಕಿಗಾಗಿ ಮಹಿಳೆಯರ ಆಗ್ರಹ” ದೊಂದಿಗೆ ಚಾಲನೆಗೊಂಡಿತು. ಆಗ್ರಹ ಸಭೆಯನ್ನು ಉದ್ದೇಶಿಸಿ ಎಐಎಂಎಸ್‌ಎಸ್‌ನ ರಾಷ್ಟ್ರ ಉಪಾಧ್ಯಕ್ಷರಾದ ಡಾ: ಸುಧಾ ಕಾಮತ್‌ರವರು ಮಾತನಾಡಿದರು.
ಮಹಿಳಾ ಹೋರಾಟವನ್ನು ಕಾರ್ಮಿಕವರ್ಗದ ಹೋರಾಟದೊಂದಿಗೆ ಬೆಸೆಯಬೇಕು – ಕಾಮ್ರೇಡ್ ಕೆ. ರಾಧಾಕೃಷ್ಣ
ಈ ಯುಗದ ಓರ್ವ ಅಪ್ರತಿಮ ಮಾರ್ಕ್ಸ್ ವಾದಿ ಚಿಂತಕರು, ಎಐಎಂಎಸ್‌ಎಸ್‌ನ ಮಾರ್ಗದರ್ಶಕರು ಆದ ಕಾ. ಶಿವದಾಸ್ ಘೋಷ್‌ರವರ ‘ಮಾರ್ಕ್ಸ್ ವಾದ ಮತ್ತು ಮಾನವ ಸಮಾಜದ ಬೆಳವಣಿಗೆ’ ಪುಸ್ತಕದ ಕುರಿತು ಮೊದಲನೆಯ ಗೋಷ್ಠಿಯನ್ನು ಕಾ. ಕೆ. ರಾಧಾಕೃಷ್ಣ (ಪಾಲಿಟ್ ಬ್ಯುರೋ ಸದಸ್ಯರು, ಎಸ್‌ಯುಸಿಐ(ಸಿ)) ನಡೆಸಿಕೊಟ್ಟರು, ದ್ವಂದ್ವಾತ್ಮಕ ವಸ್ತುವಾದ ಮತ್ತು ಚಾರಿತ್ರಿಕ ವಸ್ತುವಾದದ ಕುರಿತು ತಮ್ಮ ಭಾಷಣದಲ್ಲಿ ಸಂಕ್ಷಿಪ್ತವಾಗಿ ವಿವರಿಸಿದರು:
ಮಾರ್ಕ್ಸ್ ವಾದ ಒಂದು ವೈಜ್ಞಾನಿಕ ವಸ್ತುವಾದಿ ತತ್ವಶಾಸ್ತ್ರ. ಅದು, ವಸ್ತು ಪ್ರಪಂಚ ನಿರಂತರವಾಗಿ ಬದಲಾಗುತ್ತದೆ ಹಾಗೂ ನಿಯಮಬದ್ಧವಾಗಿ ನಡೆಯುತ್ತದೆ, ಲೌಕಿಕವಾಗಿ ಘಟಿಸುವ ಎಲ್ಲ ಘಟನೆಗಳಲ್ಲೂ ಕಾರ್ಯ-ಕಾರಣ ಸಂಬಂಧ ಇದೆ ಎಂಬ ಸತ್ಯವನ್ನು ಗುರುತಿಸುತ್ತದೆ. ಯಾವ ವಿಚಾರ, ಪ್ರಯೋಗ, ಪರಿಶೀಲನೆ ಮತ್ತು ತರ್ಕಕ್ಕೆ ನಿಲುಕುತ್ತದೆಯೋ ಅದು ವೈಜ್ಞಾನಿಕವಾದದ್ದು. ಆದರೆ ಅಲೌಕಿಕವಾಗಿರುವ ವಿಚಾರವು ಕೇವಲ ನಂಬಿಕೆಯ ಮೇಲೆ ನಿಂತಿದ್ದು ಮೌಢ್ಯತೆಗೆ ದಾರಿಮಾಡಿಕೊಡುತ್ತದೆ. ಅದು ಭಾವನಾವಾದದ ವಿಚಾರಕ್ಕೆ ಎಡೆ ಮಾಡಿಕೊಡುತ್ತದೆ.
ಸೂರ್ಯಕೇಂದ್ರಿತ ಸಿದ್ಧಾಂತ, ಗುರುತ್ವಾಕರ್ಷಣೆ ಸಿದ್ಧಾಂತ, ಜೀವಕೋಶ ಪರಿಕಲ್ಪನೆ, ಹೀಗೆ ವಿಜ್ಞಾನದ ಹಲವಾರು ಅನ್ವೇಷಣೆಗಳು ವಸ್ತುವಾದಿ ವಿಶ್ವವನ್ನು ತೆರೆದಿಟ್ಟವು. ಚಾರ್ಲ್ಸ್ ಡಾರ್ವಿನ್‌ರ “ಜೀವಸಂಕುಲದ ಉಗಮ” ಈ ಭೂಮಿಯ ಮೇಲೆ ಜೀವ ಸಂಕುಲ ಬೆಳೆದು ಬಂದದ್ದನ್ನು ವೈಜ್ಞಾನಿಕವಾಗಿ ದಾಖಲಿಸಿದೆ. ಈ ಜೀವರಾಶಿಯ ಉತ್ಕೃಷ್ಟ ಜೀವಿ ಮನುಷ್ಯ. ಆತ, ತನ್ನ ಆಲೋಚನಾ ಪ್ರಕ್ರಿಯೆಯ ಕಾರಣದಿಂದ ಬೇರೆಲ್ಲ ಜೀವಿಗಳಿಗಿಂತ ಗುಣಾತ್ಮಕವಾಗಿ ಭಿನ್ನ. ಆಲೋಚನೆ ಮೆದುಳಿನ ಉತ್ಪತ್ತಿ. ಮನುಷ್ಯನ ಮೆದುಳು, ಪಂಚೇಂದ್ರಿಯಗಳ ಮೂಲಕ ವಸ್ತು ಪ್ರಪಂಚದೊಡನೆ ಸಂಘರ್ಷಕ್ಕೆ ಇಳಿಯುತ್ತದೆ, ತನ್ಮೂಲಕ ವಿಚಾರ ಹುಟ್ಟುತ್ತದೆ, ಆ ವಿಚಾರವು ಮತ್ತೆ ವಸ್ತು ಪ್ರಪಂಚದ ಮೇಲೆ ಪರಿಣಾಮ ಬೀರಿ ಅದನ್ನು ಬದಲಾಯಿಸುತ್ತದೆ. ಈ ವಾಸ್ತವವನ್ನು ಅರ್ಥೈಸಿಕೊಂಡ ಮಾರ್ಕ್ಸ್ ವಾದವು, ವಿಶ್ವವನ್ನು ವ್ಯಾಖ್ಯಾನಿಸುವುದು ಮಾತ್ರವಲ್ಲ, ವಿಶ್ವದ ಬದಲಾವಣೆಗೂ ದಾರಿ ತೋರುತ್ತದೆ. ಆದಿಮಾನವನ ಚಿಂತನೆ ವಸ್ತುವಾದಿಯಾಗಿದ್ದು, ವಿಜ್ಞಾನದ ಉಗಮದ ಮುನ್ನ ಆತನಿಗೆ ನೈಸರ್ಗಿಕ ಶಕ್ತಿಗಳ ಬಗ್ಗೆ ತಿಳುವಳಿಕೆ ಇಲ್ಲದ ಕಾರಣ, ಅವನ್ನು ಆರಾಧಿಸುತ್ತಿದ್ದ. ಕಾಲಕ್ರಮೇಣ, ಸ್ಥಿರಾಸ್ತಿ ಬಂದ ನಂತರ, ಅದು ಖಾಸಗಿ ಆಸ್ತಿಯಾಗಿ ಬದಲಾಗಿ ಶೋಷಣೆಗೆ ಎಡೆಮಾಡಿಕೊಟ್ಟಿತು; ಶೋಷಕರು ಮತ್ತು ಶೋಷಿತರು ಎಂದು ಸಮಾಜ ಎರಡು ವರ್ಗಗಳಾಗಿ ವಿಭಜನೆಯಾಯಿತು. ಈ ವರ್ಗ ವಿಭಜಿತ ಸಮಾಜದಲ್ಲಿ ದೇವರ ಪರಿಕಲ್ಪನೆ ಹುಟ್ಟಿ, ಅದನ್ನು ಮಾಲೀಕ ವರ್ಗವು ತನ್ನ ಹಿತಾಸಕ್ತಿಗಾಗಿ ಬಳಸಲು ಪ್ರಾರಂಭಿಸಿತು.
ಮುಂದೆ ಸಮಾಜವು ನಿಯಮಬದ್ಧವಾಗಿ, ಗುಲಾಮಗಿರಿ ವ್ಯವಸ್ಥೆಯಿಂದ ಉಳಿಗಮಾನ್ಯ ವ್ಯವಸ್ಥೆಗೆ, ನಂತರ ಇದೀಗ ಬಂಡವಾಳಶಾಹಿ ವ್ಯವಸ್ಥೆಗೆ ಬದಲಾಗಿದೆ. ವೈಜ್ಞಾನಿಕವಾಗಿ ಈ ವ್ಯವಸ್ಥೆಯೂ ಕಾರ್ಮಿಕ ವರ್ಗದ ಪರಮಾಧಿಕಾರದ ಸಮಾಜವಾದಿ ವ್ಯವಸ್ಥೆಗೆ ಬದಲಾಗಿ, ಬಳಿಕ, ಕಮ್ಯುನಿಸಂ ಬರುತ್ತದೆ.
ಮಹಿಳಾ ಹೋರಾಟ ಪುರುಷ ವಿರೊಧಿಯಲ್ಲ, ಬದಲಿಗೆ ಪುರುಷ ಮತ್ತು ಮಹಿಳೆಯರನ್ನೂ ಆವರಿಸಿರುವ ಪುರುಷ ಪ್ರಧಾನ ಮನೋಭಾವದ ವಿರುದ್ಧ, ಈ ಶೋಷಣಾಯುಕ್ತ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಸಮಾಜವಾದಿ ಕ್ರಾಂತಿಯ ಕಡೆಗೆ ಕೊಂಡೊಯ್ಯುವ ಹೋರಾಟ. ಇದನ್ನು, ಕಾರ್ಮಿಕವರ್ಗದೊಡನೆ ಒಗ್ಗೂಡಿ ಕಾರ್ಯರೂಪಕ್ಕೆ ತರಲು ಎಐಎಂಎಸ್‌ಎಸ್‌ನ ಪಾತ್ರ ಮಹತ್ವದ್ದು ಎಂದ ಕಾ.ಕೆ.ರಾಧಾಕೃಷ್ಣ, ಮಹಿಳೆಯರು ಜ್ಞಾನ ಪ್ರಪಂಚವನ್ನು ಪ್ರವೇಶಿಸಿ, ಸಂಘಟನೆಯನ್ನು ಬಲಪಡಿಸಿ, ಮಹಿಳಾ ಹೋರಾಟವನ್ನು ತೀಕ್ಷ್ಣಗೊಳಿಸಲು ಸನ್ನದ್ಧರಾಗಿ ಎಂದು ಕರೆ ನೀಡಿದರು.
ನೊಂದವರ ಕಂಠದಲ್ಲೇ ಹುದುಗಿಹೋದ ಮಾತಿಗೆ ಎಐಎಂಎಸ್‌ಎಸ್ ಧ್ವನಿಯಾಗಬೇಕು – ಕಾಮ್ರೇಡ್ ಕೆ. ಉಮಾ
“20ರ ಹರೆಯದ ಅನಾಥ ಕಿಶೋರಿಯೊಬ್ಬಳು, ತನ್ನ ಕುಟುಂಬದ ಪುಟ್ಟ ತಮ್ಮ-ತಂಗಿಯಂದಿರ ಜವಾಬ್ದಾರಿ ಹೊರಲು ಹೆಣಗಾಡಿ, ಮೋಸ ಹೋಗಿ ದೇಹ ವ್ಯಾಪಾರಕ್ಕೆ ದೂಡಲ್ಪಟ್ಟರೆ ಅದು ಆಕೆಯ ತಪ್ಪೋ ಅಥವಾ ಸಮಾಜದ ತಪ್ಪೋ?” ಎಂಬ ಪ್ರಶ್ನೆಗೆ “ಸಮಾಜ” ಎಂದು ಒಕ್ಕೊರಲಿನಿಂದ ಕೂಗಿದರು ಶಿಬಿರಾರ್ಥಿಗಳು. ಮಹಿಳೆಯರ ಸಮಸ್ಯೆಗಳ ಮೂಲ ಮತ್ತು ಪರಿಹಾರದ ಕುರಿತು ಎಸ್‌ಯುಸಿಐ(ಸಿ) ಪ್ರಧಾನ ಕಾರ್ಯದರ್ಶಿಗಳಾದ ಕಾ. ಪ್ರವಾಶ್‌ಘೋಷ್‌ರವರ ‘ಮಹಿಳಾ ವಿಮುಕ್ತಿ ಚಳುವಳಿಯ ಕುರಿತು’ ಎರಡು ಪುಸ್ತಕಗಳ ಕುರಿತಾದ 2ನೇ ಗೋಷ್ಠಿಯಲ್ಲಿ ಎಸ್‌ಯುಸಿಐ(ಸಿ)ನ ರಾಜ್ಯ ಕಾರ್ಯದರ್ಶಿಗಳಾದ ಕಾ. ಕೆ. ಉಮಾರವರು ಚರ್ಚೆಯನ್ನು ನಡೆಸಿಕೊಟ್ಟರು: ಮಾನವ ಸಮಾಜ ಆದಿಕಾಲದಲ್ಲಿ ಮಾತೃಪ್ರಧಾನವಾಗಿತ್ತು. ಹುಟ್ಟುವ ಮಗು ತಾಯಿಯಿಂದ ಗುರುತಿಸಲ್ಪಡುತ್ತಿತ್ತೇ ಹೊರತು ತಂದೆಯಿಂದ ಅಲ್ಲ. ಪಶು ಸಂಗೋಪನೆ, ಕೃಷಿ ಹಾಗೂ ಸ್ಥಿರಾಸ್ತಿ ಬಂದ ನಂತರ, ಉತ್ಪಾದನಾ ಸಾಧನಗಳ ಒಡೆತನವು ಪುರುಷರದ್ದಾದ ಮೇಲೆ ಪುರುಷ ಪ್ರಧಾನ ವ್ಯವಸ್ಥೆ ಬಂತು, ಜೊತೆಗೆ ವರ್ಗಗಳು ಹುಟ್ಟಿಕೊಂಡವು. ಇದರೊಂದಿಗೆ ಮಹಿಳೆಯು ಪುರುಷನ ಆಸ್ತಿಯಾದಳು. ಪುರಾಣ ಕಥೆಗಳ ಮೂಲಕ ಮಹಿಳೆ ಪುರುಷನಿಗೆ ಅಧೀನಳು ಎಂಬ ಮೌಲ್ಯಗಳಿಂದ ಆಕೆಯನ್ನು ನೈತಿಕವಾಗಿ ಬಂಧಿಸಲಾಯಿತು. ಆನಂತರ ಮಹಿಳೆ ಪಂಜರದ ಗಿಳಿಯಾದಳು. ಅವಳ ರಕ್ತದ ಕಣಕಣದಲ್ಲೂ ದಾಸೀ ಮನೋಭಾವನೆ ಹಾಸುಹೊಕ್ಕಿತು.
ಸಂಕಷ್ಟಗಳಿಂದ ನಲುಗುತ್ತಿರುವ ಅಸಹಾಯಕ ಮಹಿಳೆಗೆ, ಎಲ್ಲಾ ಧರ್ಮಗಳು ಸಹ, ಅದು ಅವಳ ಹಣೆಬರಹ, ಪೂರ್ವ ಜನ್ಮದ ಕರ್ಮ, ಈಗ ಕಷ್ಟ ಸಹಿಸಿದರೆ ಮುಂದಿನ ಜನ್ಮದಲ್ಲಿ ಒಳ್ಳೆಯದಾಗುತ್ತದೆ ಎಂದೆಲ್ಲಾ ಬೋಧಿಸಿ ಆಕೆ ತನ್ನ ಕಷ್ಟಗಳನ್ನು ಸಹಿಸುವಂತೆ, ಅದಕ್ಕಾಗಿ ‘ಸರ್ವಶಕ್ತ ದೇವರ’ಲ್ಲಿ ಮೊರೆ ಹೋಗುವಂತೆ ಮಾಡುತ್ತವೆ. ಜೊತೆಗೆ, ಇಂದಿನ ಲಾಭಕೋರ, ಶೋಷಕ ಬಂಡವಾಳಿಗರು, ತಮ್ಮ ಅನ್ಯಾಯದ ವಿರುದ್ಧ ಜನರು, ವಿಶೇಷವಾಗಿ ಯುವಜನತೆ ಸಿಡಿದೇಳದೆ ಇರಲಿ ಎಂಬ ಉದ್ದೇಶದಿಂದ ಅವರನ್ನು ನೈತಿಕವಾಗಿ ಭ್ರಷ್ಟ ಮಾಡಲು ಸಮೂಹ ಮಾಧ್ಯಮಗಳಲ್ಲಿ ಪ್ರಚಾರ ಮಾಡುವ ಅಶ್ಲೀಲತೆ-ಹಿಂಸೆ, ವ್ಯಾಪಕವಾದ ಮದ್ಯ-ಮಾದಕ ವಸ್ತುಗಳ ಲಭ್ಯತೆ, ಇವು ಮಹಿಳೆಯರ ಮೇಲಿನ ವಿವಿಧ ವಿಕೃತಿಯ ದೌರ್ಜನ್ಯಗಳಿಗೆ-ಅತ್ಯಾಚಾರಗಳಿಗೆ ಎಡೆ ಮಾಡಿಕೊಡುತ್ತಿವೆ.
ಸಮಾಜದಲ್ಲಿನ ಎಲ್ಲಾ ರೀತಿಯ ಪುರುಷ ಪ್ರಧಾನ ಅನಿಷ್ಟಗಳು ಮತ್ತು ಬಂಡವಾಳಶಾಹಿ ಶೋಷಣೆ-ಈ ದ್ವಿಮುಖ ದಮನದ ವಿರುದ್ಧ ಹೋರಾಡುತ್ತಾ, ಮಹಿಳೆಯರು ತಮ್ಮ ಆತ್ಮಗೌರವ, ಮಾನ-ಸಮ್ಮಾನ, ಘನತೆಯನ್ನು ರಕ್ಷಿಸಲು ಹಾಗೂ ಎತ್ತಿ ಹಿಡಿಯಲು ಕಾರ್ಯಪ್ರವೃತ್ತರಾಗಬೇಕು; ಜೊತೆಗೆ, ಮೌನವಾಗಿ ನೋವನ್ನು ಉಣ್ಣುತ್ತಿರುವ ತಮ್ಮೆಲ್ಲಾ ಸೋದರಿಯರಿಗೆ ಎಐಎಂಎಸ್‌ಎಸ್ ಧ್ವನಿ ಆಗಬೇಕು ಎಂದು ಕಾ. ಕೆ. ಉಮಾ ಕರೆ ನೀಡಿದರು.
ಶಿಬಿರಾರ್ಥಿಗಳನ್ನು ಭಾವನಾತ್ಮಕವಾಗಿ ಕಲುಕಿದ ಸಾಂಸ್ಕೃತಿಕ ಕಾರ್ಯಕ್ರಮಗಳು :
ಕೌಟುಂಬಿಕ ಹಿಂಸೆಗೆ ನಿರಂತರವಾಗಿ ಬಲಿಯಾಗುತ್ತಿರುವ ಮಹಿಳೆಯೊಬ್ಬಳು ಕೊನೆಗೆ ಅದನ್ನು ದಿಟ್ಟವಾಗಿ ಎದುರಿಸುವ ಸಾರವುಳ್ಳ ಸಿನಿಮಾ ‘ಅಮ್ಮು’ ಪ್ರದರ್ಶಿಸಲಾಯಿತು. ಎಐಎಂಎಸ್‌ಎಸ್‌ನ ರಾಷ್ಟ್ರ ಉಪಾಧ್ಯಕ್ಷರಾದ ಕಾ. ಅಪರ್ಣ ಬಿ. ಆರ್. ಸಿನಿಮಾದ ಕುರಿತು ಚರ್ಚೆ ನಡೆಸಿಕೊಟ್ಟರು.
ಮುಂಬೈನ ದಾದಿ ಅರುಣಾ ಶಾನ್‌ಭಾಗ್, ಗುಜರಾತ್‌ನ ಬಿಲ್ಕಿಸ್ ಬಾನು, ದೆಹಲಿಯ ನಿರ್ಭಯ, ಕಾಶ್ಮೀರದ ಆಸಿಫಾ, ಉತ್ತರಪ್ರದೇಶದ ಹತ್ರಾಸ್‌ನ ಬಾಲಕಿ, ಕೊಲ್ಕತ್ತಾದ ಅಭಯಾ, ಇವರು ದೇಶದ ಅಂತ:ಸಾಕ್ಷಿ ಕಲುಕಿದ ಕೆಲ ಘೋರ ಘಟನೆಗಳ ಬಲಿಪಶುಗಳು. ಈ ಘಟನೆಗಳ ಹಿನ್ನೆಲೆಯನ್ನು ಚಿತ್ರಿಸುತ್ತಾ, ನಂತರ ಇವೆಲ್ಲವನ್ನೂ ಪ್ರತಿರೋಧಿಸಿ ಪ್ರತಿಯೊಂದೂ ಹೆಣ್ಣು ಜೀವವೂ ನಿರ್ಭಿಡೆಯಿಂದ ಅರಳುವ ಸಮಾಜವನ್ನು ಕಟ್ಟುವೆಡೆಗಿನ ನೃತ್ಯ ರೂಪಕ “ಅಸ್ತಿತ್ವ”ವನ್ನು “ಅಂಕುರ ಸಾಂಸ್ಕೃತಿಕ ವೇದಿಕೆ” ಪ್ರದರ್ಶಿಸಿತು, ನೋಡುಗರ ಮನಸ್ಸನ್ನು ಆರ್ದ್ರವಾಗಿಸಿತು.
ಶಿಬಿರವನ್ನು ಎಐಎಂಎಸ್‌ಎಸ್ ರಾಜ್ಯಾಧ್ಯಕ್ಷರಾದ ಕಾ. ಎಂ.ಎನ್. ಮಂಜುಳಾ, ಉಪಾಧ್ಯಕ್ಷರಾದ ಕಾ. ಹರಿಣಿ ಆಚಾರ್ಯ, ಕಾರ್ಯದರ್ಶಿಗಳಾದ ಶೋಭಾ ಎಸ್. ನಡೆಸಿಕೊಟ್ಟರು.