2025 ಜೂನ್ 1 ರಿಂದ 13: ಜಿನೀವಾ, ಸ್ವಿಜರ್‌ಲ್ಯಾಂಡ್:
ಐಎಲ್‌ಓ ಸಮ್ಮೇಳನದಲ್ಲಿ ಎಐಯುಟಿಯುಸಿ
ಪ್ಲಾಟ್‌ಫಾರ್ಮ್ ಆರ್ಥಿಕತೆಯಲ್ಲಿ ನ್ಯಾಯಬದ್ಧ ಕೆಲಸದ ಕುರಿತಾದ ಒಡಂಬಡಿಕೆ ಅಂಗೀಕಾರ!
ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಓ), ಸರ್ಕಾರಗಳು, ಮಾಲೀಕರು ಮತ್ತು ಕಾರ್ಮಿಕ ಸಂಘಟನೆಗಳನ್ನು ಹೊಂದಿರುವ, ಅತ್ಯುನ್ನತ ತ್ರಿಪಕ್ಷೀಯ ಸಲಹೆಗಾರ ಸಂಸ್ಥೆಯಾಗಿದ್ದು, ಅದರ ಅಂತರರಾಷ್ಟ್ರೀಯ ಕಾರ್ಮಿಕ ಸಮ್ಮೇಳನದ 113ನೇ ಅಧಿವೇಶನದಲ್ಲಿ ನಮ್ಮ ಕಾರ್ಮಿಕ ಸಂಘಟನೆ, ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್(ಎಐಯುಟಿಯುಸಿ)ನ ಅಖಿಲ ಭಾರತ ಉಪಾಧ್ಯಕ್ಷರೂ, ಕರ್ನಾಟಕ ರಾಜ್ಯಾಧ್ಯಕ್ಷರೂ ಆಗಿರುವ ಕಾ. ಕೆ. ಸೋಮಶೇಖರ್ ಭಾಗವಹಿಸಿದ್ದರು. 2025ರ ಜೂನ್ 1 ರಿಂದ 13ರ ತನಕ ಸ್ವಿಜರ್‌ಲ್ಯಾಂಡ್‌ನ ಜಿನೀವಾದಲ್ಲಿ ನಡೆದ ಈ 113 ನೇ ಅಧಿವೇಶನದಲ್ಲಿ ಇತರ ಕೇಂದ್ರ ಕಾರ್ಮಿಕ ಸಂಘಟನೆಗಳಾದ ಬಿಎಂಎಸ್, ಎಐಟಿಯುಸಿ, ಎಚ್‌ಎಂಎಸ್, ಸಿಐಟಿಯು, ಸೇವಾ, ಟಿಯುಸಿಸಿ(ಎಸ್‌ಪಿ ತಿವಾರಿ ಬಣ), ಎನ್‌ಎಫ್‌ಟಿಯು(ಡಿಎಚ್‌ಎನ್) ಗಳ ಪ್ರತಿನಿಧಿಗಳೂ ಪಾಲ್ಗೊಂಡಿದ್ದರು. 189 ದೇಶಗಳಿಂದ 5000 ಪ್ರತಿನಿಧಿಗಳು ಭಾಗವಹಿಸಿದ್ದರು. ಕಾರ್ಮಿಕವರ್ಗಕ್ಕೆ ಸಂಬಂಧಿಸಿದ ಹಲವಾರು ವಿಷಯಗಳ ಬಗ್ಗೆ ಚರ್ಚೆಗಳು ನಡೆದವು.
02.06.2025 ರಂದು ಆಡಳಿತ ಮಂಡಳಿಯ ಅಧ್ಯಕ್ಷರೂ ಆದ ಐಎಲ್‌ಓದ ಮಹಾ ನಿರ್ದೇಶಕರು ತಮ್ಮ ವರದಿಯನ್ನು ಮಂಡಿಸಿ ಈ 113 ನೇ ಅಧಿವೇಶನದ ಪ್ಲೀನರಿ (ಸರ್ವ ಸದಸ್ಯರ ಸಭೆ)ಯನ್ನು ಉದ್ಘಾಟಿಸಿದರು.
ವಿವಿಧ ವಿಷಯಗಳ ಬಗ್ಗೆ ವಿಭಿನ್ನ ಸಮಿತಿಗಳ ರಚನೆಯಾಗಿದ್ದು, ಅಲ್ಲಿ ಸಂಬಂಧಿಸಿದ ಕರಡು ಗೊತ್ತುವಳಿಗಳನ್ನು ಮಂಡಿಸಿ, ಕೂಲಂಕಷವಾಗಿ ಚರ್ಚಿಸಿ, ಒಮ್ಮತಕ್ಕೆ ಬಂದ ನಂತರ, ಅವನ್ನು ಪ್ಲೀನರಿಯಲ್ಲಿ ಅಂಗೀಕರಿಸಲಾಯಿತು.
‘ಪ್ಲಾಟ್‌ಫಾರ್ಮ್ ಆರ್ಥಿಕತೆಯಲ್ಲಿ ನ್ಯಾಯಬದ್ಧ ಕೆಲಸಕ್ಕಾಗಿಯ ಮಾನದಂಡದ ನಿರೂಪಣೆ’ಯ ಸಮಿತಿಯಲ್ಲಿ ಕಾ. ಕೆ. ಸೋಮಶೇಖರ್ ವಿಷಯ ಮಂಡಣೆ ಮಾಡಿದರು:
“ನಾವು ಭಾರತದಲ್ಲಿ ಫುಡ್ ಡೆಲಿವರಿ ಕಾರ್ಮಿಕರನ್ನು ಸಂಘಟಿಸುತ್ತಿದ್ದೇವೆ. ಅವರು ಪ್ರತಿದಿನ 12 ರಿಂದ 14 ಗಂಟೆಗಳ ಕಾಲ ದುಡಿಯುತ್ತಿದ್ದಾರೆ. ಅವರು ಅನೇಕಾನೇಕ ಸಮಸ್ಯೆಗಳನ್ನು, ಕಷ್ಟಗಳನ್ನು, ದೌರ್ಜನ್ಯವನ್ನು ಎದುರಿಸುತ್ತಿದ್ದು, ವಿಪರೀತ ಒತ್ತಡಕ್ಕೆ ಬಲಿಯಾಗಿದ್ದಾರೆ. ಅವರ ಕೆಲಸದ ಪರಿಸ್ಥಿತಿ ಬಹಳವೇ ಶೋಚನೀಯವಾಗಿದ್ದು, ಪ್ಲಾಟ್‌ಫಾರ್ಮ್ ಅಗ್ರಿಗೇಟರ್‌ಗಳಿಂದ ತೀವ್ರ ಶೋಷಣೆಗೆ ಒಳಗಾಗಿದ್ದಾರೆ. ವಿಶ್ವದಾದ್ಯಂತ ಈ ಕಾರ್ಮಿಕರು ಯಾವುದೇ ಸೇವಾ ಭದ್ರತೆಯಾಗಲೀ, ಉದ್ಯೋಗದ ಭದ್ರತೆಯಾಗಲೀ, ವಿಮಾ ಸೌಲಭ್ಯಗಳಾಗಲೀ ಇಲ್ಲದೆ, ಸರಿಯಾದ ವೇತನದಿಂದಲೂ ವಂಚಿತರಾಗಿ ದುಡಿಯುತ್ತಿದ್ದಾರೆ. ಕಾರ್ಮಿಕರಿಗೆ ಅನ್ವಯವಾಗುವ ಕಾಯ್ದೆಗಳಿಂದ ಅವರನ್ನು ವಂಚಿಸಲು, ಉದ್ಯೋಗದಾತ-ಉದ್ಯೋಗಿಗಳ ಸಂಬಂಧವನ್ನು ನಿರಾಕರಿಸಲು, ಈ ಪ್ಲಾಟ್‌ಫಾರ್ಮ್ ಅಗ್ರಿಗೇಟರ್‌ಗಳು ಅವರನ್ನು ತಮ್ಮ ಪಾಲುದಾರರು ಎಂದು ಕರೆದರೂ, ಅವರಿಗೆ ಲಾಭದಲ್ಲಿ ಯಾವ ಪಾಲೂ ಇಲ್ಲ.
ಈ ಪ್ಲಾಟ್‌ಫಾರ್ಮ್ ಆರ್ಥಿಕತೆ ವಿಶ್ವದಾದ್ಯಂತ ಶರವೇಗದಲ್ಲಿ ಬೆಳೆಯುತ್ತಿದ್ದು ಇಲ್ಲಿ ಲಕ್ಷೋಪಲಕ್ಷ ಕಾರ್ಮಿಕರು ದುಡಿಯುತ್ತಿದ್ದಾರೆ. ಅವರು ಒಂದು ಘನತೆಯುತ ಬದುಕನ್ನು ಜೀವಿಸಲು ಅವರ ಸೇವಾ ನಿಯಮಗಳನ್ನು ಸೂಕ್ತವಾಗಿ, ಪರಿಣಾಮಕಾರಿಯಾಗಿ ನಿಯಂತ್ರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ಲಾಟ್‌ಫಾರ್ಮ್ ಆರ್ಥಿಕತೆಗೆ ಸಂಬಂಧಿಸಿದಂತೆ ಐಎಲ್‌ಓ ಮಂಡಿಸಿರುವ ಕರಡು ಗೊತ್ತುವಳಿಯನ್ನು ನಾನು ಬೆಂಬಲಿಸುತ್ತೇನೆ. ಘನತೆಯುತ ಬದುಕನ್ನು ಜೀವಿಸಲು ಪ್ಲಾಟ್‌ಫಾರ್ಮ್ ಕಾರ್ಮಿಕರಿಗೆ, ಸೇವಾ ಭದ್ರತೆ, ಉದ್ಯೋಗದ ಭದ್ರತೆ, ಸೂಕ್ತ ವೇತನ ಮತ್ತು ವಿಮೆ, ಇವನ್ನು ಖಾತ್ರಿ ಪಡಿಸಬೇಕಾಗುತ್ತದೆ ಹಾಗೂ ಐಎಲ್‌ಓ ಸದಸ್ಯ ರಾಷ್ಟ್ರಗಳು ಇದಕ್ಕಾಗಿ ಸೂಕ್ತ ಕಾಯ್ದೆಗಳನ್ನು ಜಾರಿಗೊಳಿಸಬೇಕಾಗುತ್ತದೆ. ಭಾರತದಲ್ಲಿ ಎಐಯುಟಿಯುಸಿ ನೇತೃತ್ವದಲ್ಲಿ ನಾವು ಈ ಕಾರ್ಮಿಕರನ್ನು ಸಂಘಟಿಸುತ್ತಿದ್ದೇವೆ, ಅವರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತು ಸಾಮಾಜಿಕ ಭದ್ರತಾ ಕ್ರಮಗಳಿಗಾಗಿ ಹೋರಾಟಗಳನ್ನು ಕಟ್ಟುತ್ತಿದ್ದೇವೆ. ಕರ್ನಾಟಕ ರಾಜ್ಯ ಸರ್ಕಾರ ನಮ್ಮ ಆಗ್ರಹಗಳನ್ನು ಮನ್ನಿಸಿ, “ಕರ್ನಾಟಕ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ) ಅಧ್ಯಾದೇಶ 2025” ವನ್ನು ಜಾರಿಗೊಳಿಸಿದೆ. ಇದು ಈ ಹೋರಾಟಕ್ಕೆ ಸಿಕ್ಕ ಮೊದಲ ಯಶಸ್ಸು. ಪ್ಲಾಟ್‌ಫಾರ್ಮ್ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹಾಗೂ ಅವರು ನ್ಯಾಯವನ್ನು ಮತ್ತು ಘನತೆಯುತ ಬಾಳನ್ನು ಪಡೆಯುವ ಏಕೈಕ ಮಾರ್ಗವೆಂದರೆ ಸಮರಶೀಲ ಹೋರಾಟಗಳನ್ನು ಕಟ್ಟುವುದೊಂದೇ. ಹಾಗೆಯೇ, ಮಾಲೀಕರು ಮತ್ತು ಸರ್ಕಾರಗಳು ಇವೆಲ್ಲದರ ಬದಲಿಗೆ ಮುಂದಿಟ್ಟಿರುವ ಪ್ರಸ್ತಾವಗಳನ್ನು ನಾನು ವಿರೋಧಿಸುತ್ತೇನೆ.”
ಕಾರ್ಮಿಕರ ಗುಂಪುಗಳು ನಡೆಸಿದ್ದ ಸಾಮಾನ್ಯ ಚರ್ಚೆಗಳಲ್ಲಿ ಭಾಗವಹಿಸಿದ ಕಾ. ಕೆ. ಸೋಮಶೇಖರ್, ಸದಸ್ಯ ರಾಷ್ಟ್ರಗಳು ಐಎಲ್‌ಓ ಒಡಂಬಡಿಕೆಗಳನ್ನು ಮತ್ತು ಶಿಫಾರಸ್ಸುಗಳನ್ನು ಉಲ್ಲಂಘಿಸುತ್ತಿರುವುದರ ಬಗ್ಗೆ ತಮ್ಮ ಕಾಳಜಿ ವ್ಯಕ್ತ ಪಡಿಸುತ್ತಾ, ಭಾರತವೂ ಸೇರಿದಂತೆ ಅನೇಕ ದೇಶಗಳು ಮೂಲಭೂತ ತತ್ವಗಳು ಮತ್ತು ಹಕ್ಕುಗಳ ಕುರಿತಾದ ಒಡಂಬಡಿಕೆಗಳನ್ನು ಅನುಮೋದಿಸದೆ ಇರುವುದನ್ನು, ಅನುಮೋದಿಸಿದರೂ ಅವನ್ನು ಜಾರಿಗೊಳಿಸದೆ ಇರುವುದನ್ನು ಸಭೆಯ ಗಮನಕ್ಕೆ ತಂದರು. ವಿಶ್ವದ ಕಾರ್ಮಿಕವರ್ಗ ತಮ್ಮ ಸರ್ಕಾರಗಳಿಂದ ದಾಳಿಗೆ ಒಳಗಾಗುತ್ತಿದೆ ಎಂದ ಅವರು, “ಐಎಲ್‌ಓ ಕೆಲಸದ ಅವಧಿಯನ್ನು ದಿನಕ್ಕೆ 8 ಗಂಟೆಗಳು ಎಂದು ನಿಗದಿ ಪಡಿಸಿದ್ದರೂ, ಸರ್ಕಾರಗಳು ಅವನ್ನು 10-12 ಗಂಟೆಗಳಿಗೆ ಏರಿಸುತ್ತಿವೆ; ಕಾರ್ಮಿಕರ ಹಕ್ಕುಗಳಾದ, ಸಂಘಟನೆ ರಚಿಸುವ ಹಕ್ಕು, ಮುಷ್ಕರದ ಹಕ್ಕು, ಇವನ್ನು ನಿರಾಕರಿಸಲಾಗಿದೆ; ಕಾರ್ಮಿಕರ ಮೂಲಭೂತ ಹಕ್ಕುಗಳಾದ ಕನಿಷ್ಠ ವೇತನ, ಸಾಮಾಜಿಕ-ಉದ್ಯೋಗ ಭದ್ರತೆ, ಇವುಗಳನ್ನು ಸರ್ಕಾರಗಳು ಖಾತ್ರಿ ಪಡಿಸುತ್ತಿಲ್ಲ, ಬದಲಿಗೆ ಬಂಡವಾಳಶಾಹಿಗಳ ಹಿತಾಸಕ್ತಿಯಲ್ಲಿ ಕಾರ್ಮಿಕವರ್ಗ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿವೆ. ಹಾಗಾಗಿ, ಶೋಷಣೆ ಮತ್ತು ದಮನ ದಿನನಿತ್ಯದ ಮಾತಾಗಿವೆ.” ಎಂದು ವಿವರಿಸಿದರು.
ಈ 113ನೇ ಅಧಿವೇಶನದಲ್ಲಿ ಪ್ಲಾಟ್‌ಫಾರ್ಮ್ ಆರ್ಥಿಕತೆಯಲ್ಲಿ ನ್ಯಾಯಬದ್ಧ ಕೆಲಸದ ಕುರಿತಾದ ಕರಡು ಗೊತ್ತುವಳಿ ಬಹಳವೇ ಚರ್ಚಿತಗೊಂಡಿತು, ಕಾರ್ಮಿಕ ಸಂಘಟನೆಗಳು ಈ ಕುರಿತಾದ ಒಡಂಬಡಿಕೆಗಾಗಿ ತೀವ್ರವಾಗಿ ಒತ್ತಾಯಿಸಿದವು. ಆದರೆ, ಮಾಲೀಕರ ಗುಂಪುಗಳು ಈ ಒಡಂಬಡಿಕೆಯನ್ನು ವಿರೋಧಿಸುತ್ತಾ, ಅದರ ತಿದ್ದುಪಡಿಗಾಗಿ ಒತ್ತಾಯಿಸಿದವು; ಅಮೆರಿಕಾ, ಜಪಾನ್, ಚೀನಾ, ಭಾರತವನ್ನು ಒಳಗೊಂಡಂತೆ ಅನೇಕ ದೇಶಗಳ ಸರ್ಕಾರಗಳು ಇದನ್ನು ಬೆಂಬಲಿಸಿದವು. ಬಹಳ ಚರ್ಚೆಗಳ ಬಳಿಕವೂ ಒಮ್ಮತ ಮೂಡದೆ ಹೋದ್ದರಿಂದ, ಇದನ್ನು ಮತಕ್ಕೆ ಹಾಕಿದಾಗ, 1480 ಮತಗಳು ಪರವಾಗಿಯೂ, 1064 ಮತಗಳು ವಿರೋಧವಾಗಿಯೂ ಚಲಾವಣೆಯಾದವು; 32 ದೇಶಗಳು ಹಾಜರಿರಲಿಲ್ಲ. ಒಡಂಬಡಿಕೆಯ ಪರವಾಗಿ ಕಾರ್ಮಿಕ ಸಂಘಟನೆಗಳು ಉಗ್ರವಾಗಿ ಹೋರಾಡಿ ಗೆದ್ದವು ಮತ್ತು ಅಂತಿಮ ಅಧಿವೇಶನದಲ್ಲಿ, ಪ್ಲಾಟ್‌ಫಾರ್ಮ್ ಆರ್ಥಿಕತೆಯಲ್ಲಿ ನ್ಯಾಯಬದ್ಧ ಕೆಲಸದ ಕುರಿತಾದ ಕರಡು ಗೊತ್ತುವಳಿ ಅಂಗೀಕಾರಗೊಂಡಿತು.
ಹಾಗೆಯೇ, ‘ಕೆಲಸದ ಸ್ಥಳಗಳಲ್ಲಿನ ಜೈವಿಕ ಅಪಾಯ’ ದ ಕುರಿತಾದ ಒಡಂಬಡಿಕೆಯನ್ನು ಅಳವಡಿಸಿಕೊಳ್ಳಲಾಯಿತು.
ಜಿನೀವಾದಲ್ಲಿ ಡಬ್ಲ್ಯೂಎಫ್‌ಟಿಯು ಕಾರ್ಯಕ್ರಮ
2025ರ ಜೂನ್ 9ರಂದು, ಕಾರ್ಮಿಕ ಸಂಘಟನೆಗಳ ವಿಶ್ವ ಒಕ್ಕೂಟ (ಡಬ್ಲ್ಯೂಎಫ್‌ಟಿಯು), ಐಕ್ಯಮತದಿಂದೊಡಗೂಡಿದ ಅಂತರರಾಷ್ಟ್ರೀಯತೆಯ 80 ವರ್ಷಗಳ ಹೋರಾಟದ ಕಾರ್ಯಕ್ರಮವನ್ನು ಜಿನೀವಾದಲ್ಲಿ ಸಂಘಟಿಸಿತ್ತು. ‘ಅಂತರರಾಷ್ಟ್ರೀಯ ವರ್ಗ ಕೇಂದ್ರಿತ ಕಾರ್ಮಿಕ ವರ್ಗ ಹೋರಾಟದ ಇತಿಹಾಸ ಮತ್ತು ಭವಿಷ್ಯ’ ಎಂಬ ಹೆಸರಿನ ಕಾರ್ಯಕ್ರಮ, ಡಬ್ಲ್ಯೂಎಫ್‌ಟಿಯು ಅಧ್ಯಕ್ಷರಾದ ಕೊ. ಮೈಖೇಲ್‌ರವರ ಅಧ್ಯಕ್ಷತೆಯಲ್ಲಿ ಜರುಗಿತು. ಡಬ್ಲ್ಯೂಎಫ್‌ಟಿಯು ಪ್ರಧಾನ ಕಾರ್ಯದರ್ಶಿಗಳಾದ ಶ್ರೀ. ಪಂಬಿಸ್ ಕೈರಿಟ್ಸಿಸ್ ಈ ಕುರಿತಾದ ಕರಡು ಗೊತ್ತುವಳಿಯನ್ನು ಮಂಡಿಸಿದರು. ಈ ಬಗ್ಗೆ ಕಾ. ಕೆ. ಸೋಮಶೇಖರ್‌ರವರ ಮಂಡನೆ:
“ಭಾರತದ ಲಕ್ಷಾಂತರ ಕಾರ್ಮಿಕರನ್ನು ಪ್ರತಿನಿಧಿಸುವ ಎಐಯುಟಿಯುಸಿ ಪರವಾಗಿ ನನ್ನ ಕ್ರಾಂತಿಕಾರಿ ಶುಭಾಶಯಗಳು. ಪ್ರಧಾನ ಕಾರ್ಯದರ್ಶಿಗಳು ಮಂಡಿಸಿರುವ ಕರಡು ಗೊತ್ತುವಳಿಯನ್ನು ನಾನು ಸಂಪೂರ್ಣವಾಗಿ ಅನುಮೋದಿಸುತ್ತೇನೆ.
2ನೇ ವಿಶ್ವಯುದ್ಧ ಮುಗಿಯುತ್ತಿದ್ದಂತೆಯೇ, 1945ರಲ್ಲಿ ಡಬ್ಲ್ಯೂಎಫ್‌ಟಿಯು ಅಸ್ತಿತ್ವಕ್ಕೆ ಬಂದಿತು. ವಿಶ್ವದಾದ್ಯಂತದ ಎಲ್ಲಾ ಪ್ರಮುಖ ಕಾರ್ಮಿಕ ಸಂಘಟನೆಗಳು ಅದರ ಸದಸ್ಯರಾಗಿದ್ದವು. ಕಾರ್ಮಿಕವರ್ಗದ ಹಿತಾಸಕ್ತಿಯನ್ನು ಕಾಪಾಡಲು ಮತ್ತು ಮಾನವನಿಂದ ಮಾನವನ ಎಲ್ಲಾ ತರದ ಶೋಷಣೆಯಿಂದ ವಿಮುಕ್ತಿ ಪಡೆಯಲು ಕಾರ್ಮಿಕವರ್ಗ ಕ್ರಾಂತಿಯನ್ನು ನೆರವೇರಿಸುವ ಉದ್ದೇಶದಿಂದ ಹೋರಾಟಗಳನ್ನು ಕಟ್ಟುವ ನಿಟ್ಟಿನಲ್ಲಿ ಈ ಒಕ್ಕೂಟ ಮಹತ್ವದ ಪಾತ್ರ ವಹಿಸಿದೆ. ಆದರೆ, ದುರದೃಷ್ಟವಶಾತ್, ಸೋವಿಯತ್ ಒಕ್ಕೂಟವನ್ನು ಒಳಗೊಂಡಂತೆ ವಿಶ್ವದ ಬಹುತೇಕ ಸಮಾಜವಾದಿ ದೇಶಗಳಲ್ಲಿ ಸಮಾಜವಾದಕ್ಕೆ ಆದ ಹಿನ್ನಡೆ-ತಾತ್ಕಲಿಕವಾದರೂ-ಡಬ್ಲ್ಯೂಎಫ್‌ಟಿಯು ಆಘಾತವನ್ನು ನೀಡಿತು. ಸೋವಿಯತ್ ಒಕ್ಕೂಟದ ಪತನದ ನಂತರ ನಡೆದ ಸಭೆಯಲ್ಲಿ, ಡಬ್ಲ್ಯೂಎಫ್‌ಟಿಯುವಿನ ಎಡಪಂಥೀಯ ನಿಲುವನ್ನು ಕೈಬಿಡಬೇಕು ಎಂಬ ಆಗ್ರಹ ಕೇಳಿಬಂದರೂ, ಎಐಯುಟಿಯುಸಿ, ಎಐಟಿಯುಸಿ ಮತ್ತು ಗ್ರೀಸ್ ದೇಶದ ಒಂದು ಕಾರ್ಮಿಕ ಸಂಘಟನೆ, ಈ ಕೆಲವು ಕಾರ್ಮಿಕ ಸಂಘಟನೆಗಳು ಮಾತ್ರವೇ ಒಕ್ಕೂಟದ ಎಡಪಂಥೀಯ ನಿಲುವನ್ನು ಮುಂದುವರೆಸಿಕೊಂಡು ಹೋಗುವಂತೆ ಆಗ್ರಹಿಸಿದವು. ಭೌಗೋಳಿಕರಣದ ನಾಮಕಾವಾಸ್ತೆ ಮೋಡಿಯು ವಿಶ್ವದಾದ್ಯಂತ ಕಾರ್ಮಿಕವರ್ಗ ಹೋರಾಟಗಳ ಸ್ಫೋಟಕ್ಕೆ ಎಡೆ ಮಾಡಿಕೊಡುತ್ತಿರುವ ಈ ಕಾಲಘಟ್ಟದಲ್ಲಿ, ಕಾರ್ಮಿಕವರ್ಗದ ಹೋರಾಟಗಳನ್ನು ಅವುಗಳ ತಾರ್ಕಿಕ ಅಂತ್ಯವಾದ ವಿಶ್ವ ಕಾರ್ಮಿಕವರ್ಗ ಕ್ರಾಂತಿಯೆಡೆಗೆ ಮುನ್ನಡೆಸುವ ಜವಾಬ್ದಾರಿ ಡಬ್ಲ್ಯೂಎಫ್‌ಟಿಯು ಮೇಲಿದೆ. ಬಂಡವಾಳಶಾಹಿ-ಸಾಮ್ರಾಜ್ಯಶಾಹಿ ದೇಶಗಳ ದಾಳಿಗಳನ್ನು ಸೋಲಿಸಲು, ಈ ಶೋಷಕ ವ್ಯವಸ್ಥೆಯನ್ನು ಕಿತ್ತೊಗೆದು ಕಾರ್ಮಿಕವರ್ಗದ ಪ್ರಭುತ್ವವನ್ನು ಸ್ಥಾಪಿಸಲು ವರ್ಗ ಸಂಘರ್ಷವನ್ನು ತೀವ್ರಗೊಳಿಸುವ ಸಲುವಾಗಿ, ಸಮರಶೀಲ ಕಾರ್ಮಿಕವರ್ಗ ಹೋರಾಟವನ್ನು ಸದೃಢಗೊಳಿಸಲು ಡಬ್ಲ್ಯೂಎಫ್‌ಟಿಯು ಸಂಯೋಜಿತ ಎಲ್ಲಾ ಕಾರ್ಮಿಕ ಸಂಘಟನೆಗಳಿಗೆ ಎಐಯುಟಿಯುಸಿ ಒತ್ತಾಯಿಸುತ್ತದೆ.”
06.06.2025: ಐತಿಹಾಸಿಕ ಘಟನೆಯೊಂದಕ್ಕೆ ಕಾ. ಕೆ.ಸೋಮಶೇಖರ್ ಸಾಕ್ಷಿಯಾದರು. ಪ್ಯಾಲೆಸ್ಟೀನ್ ಅನ್ನು, ಐಎಲ್‌ಓದ ‘ವೀಕ್ಷಕ ಸದಸ್ಯ ರಾಷ್ಟ್ರ’ ಎಂದು ಸೇರಿಸಿಕೊಳ್ಳಲಾಯಿತು. ಪ್ಯಾಲೆಸ್ಟೀನ್ ಪರವಾಗಿ 386 ಮತಗಳು, ವಿರುದ್ಧವಾಗಿ 15 ಮತಗಳು ಚಲಾವಣೆಯಾದವು, 42 ರಾಷ್ಟ್ರಗಳು ಹಾಜರಿರಲಿಲ್ಲ.
ಒಟ್ಟಿನಲ್ಲಿ, ಕಾ. ಸೋಮಶೇಖರ್‌ರವರು, ನಮ್ಮ ಕಾರ್ಮಿಕ ಸಂಘಟನೆ ಎಐಯುಟಿಯುಸಿಯನ್ನು ಪ್ರತಿನಿಧಿಸಿ, ಭಾರತದ ಕಾರ್ಮಿಕರ, ವಿಶೇಷವಾಗಿ ಗಿಗ್ ಕಾರ್ಮಿಕರ ಪರಿಸ್ಥಿತಿಯನ್ನು ಸಭೆಯಲ್ಲಿ ಮಂಡಿಸಿದ್ದು, ದೇಶದ ಕಾರ್ಮಿಕರ ಮೇಲೆ ಒಂದಾದ ನಂತರ ಒಂದರಂತೆ ಬಂದೆರಗುತ್ತಿರುವ ಕರಾಳ ಕಾಯ್ದೆಗಳನ್ನು ಅಲ್ಲಿ ಮುಂದಿಟ್ಟಿದ್ದು, ಇತರ ಅನೇಕ ವಿಷಯಗಳ ಬಗ್ಗೆ ಚರ್ಚಿಸಿದ್ದು, ಐಎಲ್‌ಓದಲ್ಲಿ ಎಐಯುಟಿಯುಸಿಯ ರಾಜಿರಹಿತ ನಿಲುವನ್ನು ಸ್ಪಷ್ಟ ಪಡಿಸುವಲ್ಲಿ ಒಂದು ಮೈಲಿಗಲ್ಲು ಎಂದೇ ಹೇಳಬೇಕು. ವಿಶ್ವ ಕಾರ್ಮಿಕ ಆಂದೋಳನಕ್ಕೆ ಇದೊಂದು ದಿಕ್ಸೂಚಿ!