
ಸಂಡೂರು ಅಕ್ರಮ ಗಣಿಗಾರಿಕೆ ಕೆಂಪು ನಾಡಿನ ಕರಾಳ ಕಥನ!
ಬಳ್ಳಾರಿ ಜಿಲ್ಲೆಯಲ್ಲಿ ಪ್ರಮುಖವಾಗಿ ಸಂಡೂರು ಮತ್ತು ಹೊಸಪೇಟೆ ತಾಲೂಕುಗಳಲ್ಲಿ ಕಬ್ಬಿಣ ಅದಿರಿನ ನಿಕ್ಷೇಪಗಳು ಇವೆ. ಸಂಡೂರು ತಾಲ್ಲೂಕಿನಲ್ಲಿ ಮಾತ್ರ ಮ್ಯಾಂಗನೀಸ್ ಅದಿರಿನ ನಿಕ್ಷೇಪಗಳಿವೆ. ಇಲ್ಲಿ ಲಭ್ಯವಿರುವ ಕಬ್ಬಿಣದ ಅದಿರು ಅತ್ಯಂತ ಉತ್ಕೃಷ್ಟ ಮಟ್ಟದ್ದಾಗಿದೆ. ದೇಶದ ಶೇಕಡ 25% ರಷ್ಟು ಅಂದರೆ ಅಂದಾಜು 1,148 ಮಿಲಿಯನ್ ಟನ್‌ಗಳಷ್ಟು ಕಬ್ಬಿಣದ ನಿಕ್ಷೇಪಗಳಿವೆ. ಅಂದಾಜು 7.83 ಮಿಲಿಯನ್ ಟನ್‌ಗಳಷ್ಟು ಮ್ಯಾಂಗನೀಸ್ ಅದಿರಿನ ನಿಕ್ಷೇಪಗಳಿವೆ. ಆದರೆ ‘ದೀಪದ ಕೆಳಗೆ ಕತ್ತಲು’ ಅನ್ನುವ ರೀತಿಯಲ್ಲಿ ತನ್ನೊಡಲ ಬಗೆದು ಪರರಿಗೆ ಉಣಬಡಿಸುತ್ತಿರುವ ಸಂಡೂರು ಹಾಗೂ ಇನ್ನಿತರ ಪ್ರದೇಶಗಳ ಜನತೆ ಹಾಗೂ ಪ್ರಕೃತಿ ತತ್ತರಿಸಿ ಹೋಗಿವೆ ಹಾಗೂ ಇವುಗಳ ಬಗ್ಗೆ ಯಾವುದೇ ಪಕ್ಷದ ಸರ್ಕಾರವಿರಲಿ ತೋರುತ್ತಿರುವ ಉದ್ದೇಶಪೂರ್ವಕವಾದ ನಿಷ್ಕಾಳಜಿಗೆ ಆ ಭಾಗದ ಇಂದಿನ ಹಾಗೂ ಮುಂದಿನ ಪೀಳಿಗೆ ಭಾರೀ ಬೆಲೆ ತೆರುತ್ತಿವೆ. ಈ ಕರಾಳ ಕಥನದ ಸಂಕ್ಷಿಪ್ತ ರೂಪ ಈ ಲೇಖನ.
ಬಳ್ಳಾರಿ ಜಿಲ್ಲೆಯಲ್ಲಿ ಕಬ್ಬಿಣ ಅದಿರಿನ ಮತ್ತು ಮ್ಯಾಂಗನೀಸ್ ಅದಿರಿನ ಗಣಿಗಾರಿಕೆ ಸ್ವಾತಂತ್ರ್ಯ ಪೂರ್ವದಿಂದಲೂ ಇದೆ. ಸ್ವಾತಂತ್ರ್ಯದ ನಂತರ 1993 ರವರೆಗೆ ಕಬ್ಬಿಣ ಅದಿರಿನ ಗಣಿಗಾರಿಕೆ ಬಹುತೇಕವಾಗಿ ಶ್ರಮಾಧಾರಿತವಾಗಿತ್ತು. ಭಾರೀ ಗಾತ್ರದ ಯಂತ್ರಗಳಿರಲಿಲ್ಲ. ಗಣಿ ಮಾಲೀಕರು ನೇರವಾಗಿ ಅದಿರನ್ನು ಬೇರೆ ದೇಶಕ್ಕೆ ರಫ್ತು ಮಾಡುವಂತಿರಲಿಲ್ಲ. ಗಣಿ ಉತ್ಪಾದನೆ ಮತ್ತು ರಫ್ತು ಮಾಡುವ ಎಲ್ಲಾ ವಹಿವಾಟು ಸಂಪೂರ್ಣವಾಗಿ ಮೈನ್ಸ್ ಮತ್ತು ಮಿನರಲ್ಸ್ ಟ್ರೇಡಿಂಗ್ ಕಾರ್ಪೋರೇಷನ್ (MMTC) ಸರ್ಕಾರಿ ಸಂಸ್ಥೆ ಮುಖಾಂತರವೇ ನಡೆಯುತ್ತಿತ್ತು. ಆದರೆ ದೇಶದಲ್ಲಿ ಖಾಸಗೀಕರಣ, ಉದಾರೀಕರಣ ಹಾಗೂ ಜಾಗತೀಕರಣ ನೀತಿಗಳು ಬಂದ ನಂತರ 1993ರಲ್ಲಿ ರಾಷ್ಟ್ರೀಯ ಮಿನರಲ್ ಕಾಯ್ದೆ 1993ನ್ನು ಜಾರಿಗೊಳಿಸಿ ಕ್ರಮೇಣವಾಗಿ, ಅದಿರಿನ ವಹಿವಾಟಿನಲ್ಲಿ MMTC ಪಾತ್ರವನ್ನು ಕನಿಷ್ಠಗೊಳಿಸಿ ಖಾಸಗಿ ಮಾಲೀಕರಿಗೆ ಸಂಪೂರ್ಣ ಹಕ್ಕನ್ನು ನೀಡಲಾಯಿತು. ನಂತರ 2000ನೇ ಇಸವಿಯಲ್ಲಿ ಕರ್ನಾಟಕ ಸರ್ಕಾರ, ಕರ್ನಾಟಕ ರಾಜ್ಯದ ಗಣಿಗಾರಿಕೆ ನೀತಿಯನ್ನು ಜಾರಿಗೊಳಿಸಿ, ಖಾಸಗಿ ಗಣಿ ಕಂಪನಿಗಳಿಗೆ ಹೊರ ದೇಶಗಳಿಗೆ ರಫ್ತು ಮಾಡಲು ಪೂರ್ಣ ಅಧಿಕಾರವನ್ನು ನೀಡಿತು.
ಬಳ್ಳಾರಿ ಜಿಲ್ಲೆಯ ‘ಊಟಿ’ ಸಂಡೂರಿನ ಲೂಟಿ!
‘ಬಿಸಿಲು ಕಾಲ ಮತ್ತು ಅರೆಬಿಸಿಲು ಕಾಲ,’ ಈ ರೀತಿ ಇಲ್ಲಿರುವುದು ಕೇವಲ ಎರಡೇ ಕಾಲ ಎಂದು ಖ್ಯಾತಿ ಪಡೆದ ಬಿಸಿಲ ನಾಡು ಬಳ್ಳಾರಿಗೆ ಅಪವಾದ ಎಂಬಂತೆ ಸಂಡೂರು ಇತ್ತು. ಹಸಿರು ಹೊದ್ದು ನಿಂತ ಗುಡ್ಡ ಬೆಟ್ಟಗಳು, ಅಪರೂಪದ ವೃಕ್ಷ ಸಂಕುಲಗಳು, ವನ್ಯ ಜೀವಿಗಳು, ಗಿರಿ ಶ್ರೇಣಿಗಳ ಮಧ್ಯದಿಂದ ಮೂಡುವ ಮೋಡಗಳು, ಮಳೆಯ ಸಿಂಚನ, ಮನಸ್ಸಿಗೆ, ಜೀವಕ್ಕೆ, ಜೀವನಕ್ಕೆ ತಂಪು ನೀಡುತ್ತಿದ್ದ ಪ್ರಕೃತಿ ಇವೆಲ್ಲವುಗಳಿಂದ ಬಳ್ಳಾರಿ ಜಿಲ್ಲೆಗೆ ಸಂಡೂರು ಮುಕುಟಪ್ರಾಯವಾಗಿತ್ತು.
90ರ ದಶಕದಿಂದ ಕ್ರಮೇಣವಾಗಿ ಪ್ರಾರಂಭವಾದ ಯಾಂತ್ರೀಕೃತ ಗಣಿಗಾರಿಕೆ 2005ರ ವೇಳೆಗೆ ಸಂಪೂರ್ಣವಾಗಿ ಯಾಂತ್ರೀಕರಣಗೊಂಡಿತು. ಶ್ರಮಾಧಾರಿತ ಗಣಿಗಾರಿಕೆಯಲ್ಲಿ ದಿನಕ್ಕೆ ಸರಾಸರಿ 100 ಟನ್‌ಗಳಷ್ಟು ಕಬ್ಬಿಣ ಅದಿರು ಹೊರತೆಗೆಯಲು ನೂರಾರು ಕಾರ್ಮಿಕರ ಅವಶ್ಯಕತೆ ಇತ್ತು. ಹಾಗಾಗಿ ಶ್ರಮಾಧಾರಿತ ಗಣಿಗಾರಿಕೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರಿಗೆ ಉದ್ಯೋಗ ಲಭಿಸುತ್ತಿತ್ತು. ಪರಿಸರ ಮಾಲಿನ್ಯವೂ ಈಗಿನಂತೆ ಬಾರಿ ದೊಡ್ಡ ಪ್ರಮಾಣದಲ್ಲಿರಲಿಲ್ಲ. 2000 ಇಸವಿಯ ನಂತರ ಗಣಿಗಾರಿಕೆಯ ಸ್ವರೂಪವು ಸಂಪೂರ್ಣ ಬದಲಾಯಿತು. ಗಣಿಕಾರ್ಮಿಕರ ಬದಲು ಯಂತ್ರಗಳು ಬಂದವು. ಸಾವಿರಾರು ಕಾರ್ಮಿಕರ ಬದಲು, ಇಂದು ಕೇವಲ 25 ಜನ ಯಂತ್ರ ಚಾಲಕರು ಮತ್ತು ಸಹಾಯಕರು ಇದ್ದರೆ ದಿನವೊಂದಕ್ಕೆ ಸರಾಸರಿ 4000 ಟನ್ ಅದಿರನ್ನು ಹೊರತೆಗೆದು ಮಾರಾಟಕ್ಕೆ ಸಿದ್ಧಗೊಳಿಸಬಹುದಾಗಿದೆ. ಇದರಿಂದ ಒಂದೆಡೆ ಗಣಿಗಳಲ್ಲಿ ಉದ್ಯೋಗ ಅವಕಾಶಗಳು ಕಡಿಮೆಯಾದವು. ಇನ್ನೊಂದೆಡೆ ಉತ್ಪಾದನೆಯ ಪ್ರಮಾಣ ಹತ್ತಾರುಪಟ್ಟು ಹೆಚ್ಚಿತು. ದೊಡ್ಡ ಪ್ರಮಾಣದಲ್ಲಿ ಭಾರೀ ಗಾತ್ರದ ಲಾರಿಗಳಲ್ಲಿ ಅದಿರಿನ ಸಾಗಾಣಿಕೆ ಹೆಚ್ಚಿ, ರಸ್ತೆಗಳು ಹಾಳಾಗಿ ಎಲ್ಲಾ ವಿಧದ ಮಾಲಿನ್ಯವೂ ಹೆಚ್ಚಿತು. ಸ್ಫೋಟಗಳ ಸದ್ದು, ಲಾರಿಗಳ ಆರ್ಭಟಕ್ಕೆ ಮನೆ ಸೇರಿದರೂ ನೆಮ್ಮದಿ ಕಾಣದಾಗಿದೆ. ಜನತೆಯ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರಿ, ಗಣಿಬಾಧಿತ ಪ್ರದೇಶಗಳ ಜನತೆ ಕ್ಯಾನ್ಸರ್, ಕ್ಷಯ ಹಾಗೂ ಗಂಭೀರವಾದ ಶ್ವಾಸಕೋಶದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಎಲ್ಲೆಡೆ ಧೂಳಿನ ಕಣಗಳು ಹರಡಿ ರೈತರ ಬೆಳೆ ಹಾಳಾಗಿ ನಿರೀಕ್ಷಿತ ಫಸಲು ಬರುತ್ತಿಲ್ಲ. ರೈತನ ಜಾನುವಾರುಗಳು, ಕುರಿಗಳು ಕಾಯಿಲೆಗಳಿಗೆ ತುತ್ತಾಗಿವೆ. ಹಳ್ಳ-ಕೊಳ್ಳಗಳ ನೀರು ಮಲಿನವಾಗಿದೆ. ಜನನಿಬಿಡ ಊರು ಮತ್ತು ನಗರಗಳ ಸುತ್ತಲೂ ಗಣಿ ಆಧಾರಿತ ಮೆದು ಕಬ್ಬಿಣ ಕಾರ್ಖಾನೆಗಳು ಹುಟ್ಟಿಕೊಂಡು ಜನತೆಗೆ ಶುದ್ಧ ಗಾಳಿ, ಶುದ್ಧ ನೀರು ಗಗನ ಕುಸುಮಗಳಾಗಿವೆ. ಗಣಿ ಗಡಿಯಲ್ಲಿರುವ ಸಂಡೂರಿನ ಕಮತೂರು ಗ್ರಾಮವಂತೂ ಕನಲಿ ಹೋಗಿದೆ. ನಿಸರ್ಗದ ತಪ್ಪಲಲ್ಲಿ ಇದ್ದ ಈ ಗ್ರಾಮ ಈಗ ಗಣಿಧೂಳನ್ನೇ ಉಸಿರಾಡಬೇಕಿದೆ. ಗಣಿಯಲ್ಲಿ ನಡೆಯುವ ಸ್ಫೋಟಗಳು ನಿದ್ದೆ ಕೆಡಿಸುತ್ತಿವೆ. ಪರಿಹಾರದ ಬದಲು ಈ ಗ್ರಾಮವನ್ನೇ ಎತ್ತಂಗಡಿ ಮಾಡುವ ಹುನ್ನಾರ ನಡೆದಿದೆ. ಅಷ್ಟೇ ಅಲ್ಲ, ಸಂಡೂರು ತಾಲ್ಲೂಕಿನ ನಂದಿಹಳ್ಳಿ, ಭುಜಂಗನಗರ, ನಾರಾಯಣಪುರ, ಸುಶೀಲಾನಗರ, ಸಿದ್ಧಾಪುರ, ಸೇನಿ ಬಸಪ್ಪ ಕ್ಯಾಂಪ್ ಇತ್ಯಾದಿ ಹಲವಾರು ಹಳ್ಳಿಗಳ ಜನಜೀವನ ಅಸ್ತವ್ಯಸ್ತವಾಗಿದೆ.
ಇಂದು ಸಂಡೂರಿನ ಗಿರಿ ಶ್ರೇಣಿಗಳತ್ತ ಒಮ್ಮೆ ದೃಷ್ಟಿ ಹಾಯಿಸಿದರೆ, ಹಸಿರು ಬಸಿದು, ತಲೆಯೊಡೆದು ರಕ್ತ ಸುರಿಯುತ್ತಿರುವ ರೀತಿಯಲ್ಲಿ ಕಾಣಿಸುತ್ತಿವೆ. ಬೋಳಾದ ಗುಡ್ಡಗಳು ಮಾನವನ ಅತಿ ಲಾಲಸೆಗೆ ಮೂಕ ಸಾಕ್ಷಿಯಾಗಿ ಮೌನವಾಗಿ ರೋದಿಸುತ್ತಿರುವಂತೆ ಭಾಸವಾಗುತ್ತಿದೆ. ಬಳ್ಳಾರಿ ಜಿಲ್ಲೆಯ ‘ಊಟಿ’ಯ ಲೂಟಿ ಇನ್ನೂ ನಿಂತಿಲ್ಲ.
ಕಾಂಚಾಣ ರಾಜಕಾರಣ
ಸರ್ಕಾರ ಗಣಿಗಾರಿಕೆಯನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸಿದ ನಂತರ ಗಣಿ ಮಾಲೀಕರಿಗೆ ಭಾರಿ ದೊಡ್ಡ ವರವಾಯಿತು. ಏಕೆಂದರೆ, ಗಣಿ ಮಾಲೀಕರು ಪ್ರತಿ ಒಂದು ಟನ್ ಗಣಿ ಉತ್ಪನ್ನಕ್ಕೆ ಕೇವಲ ರೂ. 25 ರಾಜಧನವನ್ನು ಸರ್ಕಾರದ ಬೊಕ್ಕಸಕ್ಕೆ ಸಲ್ಲಿಸುತ್ತಿದ್ದರು. ಇತ್ತೀಚೆಗೆ ಅದು ಸ್ವಲ್ಪ ಹೆಚ್ಚಾಗಿರಬಹುದು. ಆದರೆ 2000ದ ಮೊದಲ ದಶಕದಲ್ಲಿ ಚೀನಾ ದೇಶದಿಂದ ಅದಿರಿನ ಬೇಡಿಕೆ ಗಣನೀಯವಾಗಿ ಹೆಚ್ಚಿದ್ದರಿಂದ, ಒಂದು ಟನ್ ಅದಿರಿನ ಬೆಲೆ ರೂ. 250-300 ರಿಂದ ರೂ. 8,000-10,000ಕ್ಕೆ ಏರಿಕೆಯಾಯಿತು. ಗಣಿ ಮಾಲೀಕರು ಈ ಅವಕಾಶ ಉಪಯೋಗಿಸಿಕೊಂಡು, ಎಲ್ಲಾ ನಿಯಮ-ನಿಬಂಧನೆಗಳನ್ನು ಗಾಳಿಗೆ ತೂರಿ, ಗಣಿಗಳಲ್ಲಿ ದಿನವೊಂದಕ್ಕೆ ಸಾವಿರಾರು ಟನ್‌ಗಳಷ್ಟು ಅದಿರನ್ನು ಬಗೆದು ತೆಗೆದು ರಫ್ತು ಮಾಡಿ ಭರ್ಜರಿ ಲಾಭ ಪಡೆದುಕೊಂಡರು. ಈ ಲೂಟಿ ಹಣ ರಾಜ್ಯ ರಾಜಕೀಯದ ಮೇಲೂ ರುದ್ರನರ್ತನವನ್ನು ಮಾಡತೊಡಗಿತು.
2008ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬರದಿದ್ದ ಸಂದರ್ಭದಲ್ಲಿ ರಾಜ್ಯ ರಾಜಕಾರಣ ‘ಆಪರೇಷನ್ ಕಮಲ’ ಎಂಬ ಹೊಸ ದಾರಿಯನ್ನು ಕಂಡುಕೊಂಡಿದ್ದು ಈ ‘ಕೆಂಪು ನೆಲದ ಕಪ್ಪು ಹಣ’ದಿಂದಾಗಿಯೇ. ಹಲವು ಶಾಸಕರನ್ನು ಖರೀದಿಸಿ ಶ್ರೀ ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ರಚಿಸುವಲ್ಲಿ ಬಳ್ಳಾರಿಯ ಗಣಿಧಣಿಗಳು ಪ್ರಮುಖ ಪಾತ್ರ ವಹಿಸಿದರು ಎನ್ನುವ ಅಂಶ ಇಡೀ ದೇಶದಲ್ಲಿ ಮನೆ ಮಾತಾಯಿತು. ಅಕ್ರಮ ಗಣಿಗಾರಿಕೆ ಎರಡು ವರ್ಷಗಳ ಕಾಲ ಯಾವುದೇ ನಿರ್ಬಂಧವಿಲ್ಲದೇ ಮುಕ್ತವಾಗಿ ನಡೆದರೂ, ರಾಜ್ಯ ಬಿಜೆಪಿ ಸರ್ಕಾರ ಮತ್ತು ಕೇಂದ್ರ ಕಾಂಗ್ರೆಸ್ ಸರ್ಕಾರ ಅಕ್ರಮವನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾದವು. ಇದೇ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆ, ರಿಪಬ್ಲಿಕ್ ಆಫ್ ಬಳ್ಳಾರಿ ಎನ್ನುವ ಕುಖ್ಯಾತಿ ಪಡೆದುಕೊಂಡಿತು. ಯಾವುದೇ ಎಗ್ಗುಸಿಗ್ಗಿಲ್ಲದೇ ರಾಜಕಾರಣಿಗಳು ಕ್ಯೂ ನಿಂತು ತಮ್ಮ ಹಣದ ಥೈಲಿ ತುಂಬಿಸಿಕೊಳ್ಳುವ ‘ಲಾಲಸೆ ರಾಜಕಾರಣ’ಕ್ಕೆ ಇಳಿದರು. ಅಲ್ಲಿಯವರೆಗೂ ಸಾವಿರ-ಲಕ್ಷದ ಲೆಕ್ಕದಲ್ಲಿದ್ದ ಅಕ್ರಮ ವ್ಯವಹಾರಗಳೆಲ್ಲವೂ ಕೋಟಿಯ ಲೆಕ್ಕಕ್ಕೆ ಜಿಗಿದವು. ಓಟಿನ ರೇಟು ಜಾಸ್ತಿಯಾಗಿ, ಪ್ರಜಾಪ್ರಭುತ್ವ ಮೂಕವಾಗಿ ರೋದಿಸುತ್ತಾ ಹಿನ್ನೆಲೆಗೆ ಸರಿಯಿತು. ರಾಜಕಾರಣ ಸಾಂಸ್ಕೃತಿಕವಾಗಿ, ನೈತಿಕವಾಗಿ ಮತ್ತಷ್ಟು ಪ್ರಪಾತಕ್ಕೆ ಕುಸಿಯುವಂತಾಯಿತು. ಜನರ ಮೈಗೆ ಕೆಂಪುಧೂಳು ಮೆತ್ತಿಕೊಂಡಿದ್ದರೂ, ಜಿಲ್ಲೆಯ ರಾಜಕಾರಣದಲ್ಲಿ ಬಿಳಿಬಟ್ಟೆ, ಬಿಳಿಬೂಟು, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಗೂ ಕೈಯಲ್ಲಿ ಮೊಬೈಲ್‌ನೊಂದಿಗೆ ಹೊಸ ಯುವಪಡೆ ಅವತಾರವೆತ್ತಿತು. ಬೈಕುಗಳ ಜಾಗದಲ್ಲಿ ಬೊಲೆರೋಗಳು ಬಂದವು. ಪ್ರಾಮಾಣಿಕರಾದ ಹಿರಿಯರು ರಾಜಕಾರಣದಿಂದ ಹಿಂದೆ ಸರಿದರು. ಜನರೂ ಕೂಡ ಈ ವಿಸ್ಮಯಗಳನ್ನು ಮೂಗಿನ ಮೇಲೆ ಬೆರಳಿಟ್ಟು ನೋಡುತ್ತಾ, ಚಹಾದಂಗಡಿಗಳಲ್ಲಿ ಹೊಸ ರಾಜಕಾರಣವನ್ನು ವರ್ಣಿಸುತ್ತಾ ಮೈ ಮರೆತರು. ಅಷ್ಟೊತ್ತಿಗೆ ಈ ಅಕ್ರಮ ಗಣಿಗಾರಿಕೆ ಎನ್ನುವ ಕ್ಯಾನ್ಸರ್ ಇಡೀ ಜಿಲ್ಲೆಯನ್ನು ಆಕ್ರಮಿಸಿ ಮರಣ ಮೃದಂಗವನ್ನು ಬಾರಿಸಿಯಾಗಿತ್ತು.
ಕರಿಮೋಡಗಳಂಚಿಂದ ಕೋಲ್ಮಿಂಚು!
ಈ ಪರಿಸ್ಥಿತಿಯ ನಡುವೆಯೂ ಈ ಭಾಗದಲ್ಲಿ ಜನಸಂಗ್ರಾಮ ಪರಿಷತ್, ರೈತ ಸಂಘಟನೆಗಳು, ಎಸ್‌ಯುಸಿಐ(ಸಿ), ಎಐಯುಟಿಯುಸಿ ಯಂತಹ ಹಲವು ಸಂಘಟನೆಗಳು ಹಾಗೂ ಸಂಡೂರು ಭಾಗದ ಹಲವಾರು ಯುವಜನರು ಕುರುಡು ಕಾಂಚಾಣದ ಆರ್ಭಟದ ನಡುವೆ ಸೆಡ್ಡು ಹೊಡೆದು ನಿರಂತರವಾಗಿ ತಮ್ಮಿಂದಾದಷ್ಟು ಸೆಣೆಸುತ್ತಿದ್ದಾರೆ. ಅಕ್ರಮ ಗಣಿಗಾರಿಕೆಯನ್ನು ನಡೆಸಲು ಅನುಮತಿಸುವ ಸಲುವಾಗಿ, ಹಲವು ಜನಸಭೆಗಳನ್ನು ನಡೆಸಿ ಬಾಡಿಗೆ ಜನರನ್ನು ಕರೆದು ತಂದು ಜನಬೆಂಬಲದ ನಾಟಕ ಮಾಡಲು ಪ್ರಯತ್ನಿಸಿದರೂ, ಈ ಭಾಗದ ಜನತೆ ಸ್ವಯಂಪ್ರೇರಿತವಾಗಿ ಈ ಸಭೆಗಳಲ್ಲಿ ಭಾಗವಹಿಸಿ ಪ್ರತಿಭಟಿಸಿದ್ದಾರೆ. ಇದು ಜನರ ನೈಜ ಕಾಳಜಿಯನ್ನು ತೋರಿಸುತ್ತದೆ.
ಜೊತೆಗೆ ‘ಸಮಾಜ ಪರಿವರ್ತನಾ ಸಮುದಾಯ’ ದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಎಸ್.ಆರ್. ಹಿರೇಮಠರವರು ಅವರು ಕಾನೂನು ಹೋರಾಟವನ್ನೂ ಕೈಗೆತ್ತಿಕೊಂಡು, ಅಕ್ರಮ ಗಣಿಗಾರಿಕೆ ವಿರುದ್ಧ ಸರ್ವೋಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದರು. ಅಂದಿನ ಲೋಕಾಯುಕ್ತ ಜಸ್ಟೀಸ್ ಶ್ರೀ. ಸಂತೋಷ್ ಹೆಗಡೆಯವರ ನೇತೃತ್ವದಲ್ಲಿ ತನಿಖೆ ನಡೆದು ಅರಾಜಕ ಗಣಿಗಾರಿಕೆಯ ಹಲವು ಅಕ್ರಮಗಳು, ಕರಾಳ ಮುಖಗಳು ಹಾಗೂ ಪ್ರಕೃತಿ, ಪರಿಸರ, ಜನಜೀವನದ ಮೇಲಾದ ದುಷ್ಪರಿಣಾಮಗಳ ಬಗ್ಗೆ ವರದಿಯಾಯಿತು. ನಂತರ ಸರ್ವೋಚ್ಛ ನ್ಯಾಯಾಲಯವು ಇದರ ಬಗ್ಗೆ ತನಿಖೆ ನಡೆಸಿ ವರದಿ ಒಪ್ಪಿಸಲು ಸೆಂಟ್ರಲ್ ಎಂಪವರ್‌ಮೆಂಟ್ ಕಮಿಟಿ (ಸಿಇಸಿ)ಯನ್ನು ನೇಮಿಸಿತು. ಅಕ್ರಮ ಗಣಿಗಾರಿಕೆಯ ಪರಿಣಾಮದ ಅಗಾಧತೆ ಹಾಗೂ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಸುಪ್ರೀಂಕೋರ್ಟ್ ‘ಗಣಿಬಾಧಿತ ಪ್ರದೇಶಗಳ ಪರಿಸರ ಪುನಶ್ಚೇತನ ಯೋಜನೆ’ (ಸಿಇಪಿಎಂಐಝಡ್) ಅನ್ವಯ ‘ವಿಶೇಷ ಉದ್ದೇಶದ ನಿಧಿ’ (ಎಸ್‌ಪಿವಿ) ಸ್ಥಾಪಿಸಬೇಕು ಎಂದು ಸಿಇಸಿ ಶಿಫಾರಸ್ಸು ಮಾಡಿತು. ಇದನ್ನು ಸುಪ್ರೀಂಕೋರ್ಟ್ 2013ರಲ್ಲಿ ನೀಡಿದ ತೀರ್ಪಿನಲ್ಲಿ ಸಮ್ಮತಿಸಿತು. ಇದರ ಪರಿಣಾಮವಾಗಿ, ಗಣಿ ಮಾಲೀಕರ ಮೇಲೆ ಎಸ್‌ವಿಪಿ ಮೂಲಕ ತೆರಿಗೆ ವಿಧಿಸಿ ‘ಕರ್ನಾಟಕ ಗಣಿ ಪರಿಸರ ಪುನರುಜ್ಜೀವನ ನಿಗಮ’ (ಕೆಎಂಇಆರ್‌ಸಿ) ಸ್ಥಾಪಿಸಲು ನಿರ್ಧರಿಸಲಾಯಿತು. ಕೋರ್ಟ್ ಆದೇಶದ ಪ್ರಕಾರ ‘ಎಸ್‌ಪಿವಿ’ ಗೆ ಗಣಿ ಗುತ್ತಿಗೆದಾರರು ಅದಿರು ಮಾರಾಟದ ಶೇ.10 ರಷ್ಟು ಪಾವತಿಸಬೇಕು. ಮನಸಿಗೆ ಬಂದಂತೆ ಅಕ್ರಮ ನಡೆಸಿದ ಆರೋಪಕ್ಕೊಳಗಾದ ‘ಸಿ’ ಕೆಟಗರಿ ಗಣಿಗಳ ಅದಿರು ಹರಾಜಿನ ಸಂಪೂರ್ಣ ಹಣ ಇದಕ್ಕೆ ಸಂದಾಯವಾಗಬೇಕು. ‘ಅವಿಭಜಿತ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಸುವ ಮೂಲಕ ಪರಿಸರವನ್ನು ಸಿಕ್ಕಾಪಟ್ಟೆ ನಾಶ ಮಾಡಲಾಗಿದೆ. ಹೀಗಾಗಿ, ಪರಿಸರ ಪುನರುಜ್ಜೀವನದ ಕೆಲಸವೂ ಅಸಾಧಾರಣವಾಗಿರಬೇಕು’ ಎಂದು ಕೋರ್ಟು ತಾಕೀತು ಮಾಡಿದೆ. ಅಷ್ಟೇ ಅಲ್ಲ ‘ಸಿಇಪಿಎಂಐಝಡ್’ ಅನುಷ್ಠಾನದ ಮೇಲ್ವಿಚಾರಣೆ ಹಾಗೂ ಪ್ರಗತಿ ಪರಿಶೀಲನೆಗೆ ಒಡಿಶಾ ಮಾದರಿಯಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ ರೆಡ್ಡಿ ಅಧ್ಯಕ್ಷತೆಯಲ್ಲಿ ‘ಕಣ್ಗಾವಲು ಪ್ರಾಧಿಕಾರ’ (ಓವರ್‌ಸೈಟ್ ಅಥಾರಿಟಿ) ಯನ್ನು ನೇಮಿಸಿತು. ‘ಎಸ್‌ಪಿವಿ’ ಯಲ್ಲಿ ಈಗ ಅಂದಾಜು ರೂ. 30 ಸಾವಿರ ಕೋಟಿ ಸಂಗ್ರಹವಾಗಿದೆ. ಈ ನಿಧಿಯ ಮೇಲೆ ಜನಪ್ರತಿನಿಧಿಗಳ ಕಣ್ಣಿದೆ. ಹಿಂದೆ ಇದೇ ಕಾರಣಕ್ಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಡುವೆ ಜಟಾಪಟಿ ನಡೆದಿತ್ತು. ‘ಕಣ್ಗಾವಲು ಪ್ರಾಧಿಕಾರ’ (ಓವರ್‌ಸೈಟ್ ಅಥಾರಿಟಿ) ಇರುವುದರಿಂದ ಹಣವನ್ನು ಮನಸ್ಸಿಗೆ ಬಂದಂತೆ ಬಳಸಲು ಅವಕಾಶವಿಲ್ಲ ಎಂಬುದು ಕೋರ್ಟ್ ಹಾಗೂ ಜನರ ಆಶಯ.
ಹೋದೆಯಾ ಪಿಶಾಚಿ – ಬಂದೆ ಗವಾಕ್ಷೀಲಿ !!
ನಮ್ಮನ್ನು ಆಳುವ ಸರ್ಕಾರಗಳಿಗೆ ನಿಜವಾಗಿ ಜನಪರ ಕಾಳಜಿ, ಜವಾಬ್ದಾರಿ ಮತ್ತು ಇಚ್ಛಾಶಕ್ತಿ ಇದ್ದಿದ್ದರೆ ಇಷ್ಟೆಲ್ಲಾ ಸದಾಶಯ ಹೊತ್ತು ಸ್ಥಾಪನೆಯಾಗಿರುವ ‘ಕರ್ನಾಟಕ ಗಣಿ ಪರಿಸರ ಪುನರುಜ್ಜೀವನ ನಿಗಮ’ (ಕೆಎಂಇಆರ್‌ಸಿ) ದಲ್ಲಿರುವ ಹಣದಲ್ಲಿ, ಇಷ್ಟು ಹೊತ್ತಿಗೆ ಈ ಪ್ರದೇಶದಲ್ಲಿ ಆಗಿರುವ ಸಾಂಪ್ರದಾಯಿಕ ನೀರಿನ ಝರಿಗಳ ನಾಶ, ಅಂತರ್ಜಲ ಕುಸಿತ, ವನ್ಯ ಮೃಗಗಳ ನಾಶ, ವಿಪರೀತ ಧೂಳಿನಿಂದ ಬೆಳೆ ನಾಶ-ಕೃಷಿ ನಾಶ, ಧೂಳಿನಿಂದ ಉಸಿರಾಟ ತೊಂದರೆ, ಕ್ಷಯ ರೋಗ, ಕ್ಯಾನ್ಸರ್, ಚರ್ಮರೋಗದಿಂದ ಬಳಲುತ್ತಿರುವ ಜನರ, ಲಾರಿ-ಟಿಪ್ಪರ್‌ಗಳ ವಿಪರೀತ ಸಂಚಾರದಿಂದ ಅಪಘಾತಕ್ಕೀಡಾಗಿ ಅಂಗಾಂಗ ವಿಕಲತೆಯಿಂದ ಬದುಕುತ್ತಿರುವ ಜನರ, ಭಾರೀ ಯಂತ್ರಗಾರಿಕೆಯಿಂದ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದ ಕಾರ್ಮಿಕರ, ನಿರುದ್ಯೋಗಿಗಳಾದ ಕಾಡಂಚಿನಲ್ಲಿ ಕೃಷಿ ಮಾಡುತ್ತಿದ್ದ ಸಾಗುವಳಿದಾರರ, ನಾಶವಾದ ಹೈನುಗಾರಿಕೆ ಮುಂತಾಗಿ ತೀವ್ರ ಸಂಕಷ್ಟಕ್ಕೆ ಒಳಗಾದ ಎಲ್ಲಾ ವಿಭಾಗದ ಜನರ ಪುನರುಜ್ಜೀವನಕ್ಕಾಗಿ ಪರಿಣಾಮಕಾರಿ ಯೋಜನೆ ಹಾಗೂ ಅನುಷ್ಠಾನ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದವು.
ರಾಜ್ಯ ಸರ್ಕಾರ ಈ ಕುರಿತು 11ನೇ ಫೆಬ್ರವರಿ 2018ರಂದು ರೂ. 24,996ಕೋಟಿಯ ಪ್ರಸ್ತಾವನೆಯೊಂದನ್ನು ಸಲ್ಲಿಸಿತು. ಆದರೆ ಈ ರೂ. 30 ಸಾವಿರ ಕೋಟಿಯ ಮೇಲೆ ಕಣ್ಣಿಟ್ಟಿರುವ ದುರುಳ ರಾಜಕಾರಣಿಗಳು ಮತ್ತೆ ಅದೇ ರಸ್ತೆ, ಸಮುದಾಯ ಭವನ ಇತ್ಯಾದಿ ಕಮಿಷನ್ ಹೊಡೆಯುವ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆಯೇ ಹೊರತು, ಗಣಿಬಾಧಿತ ಜನರ ಮತ್ತು ಪರಿಸರದ ಪುನರುಜ್ಜೀವನ ಕಾರ್ಯಕ್ರಮಕ್ಕೆ ಅಲ್ಲ. ಹಾಗಾಗಿ ಈ ಕುರಿತು ವಿವಾದ ಮತ್ತೆ ಕೋರ್ಟ್ ಅಂಗಳಕ್ಕೆ ಹೋಗಿದೆ.
ಈ ಮಧ್ಯೆ, ಗಣಿ ಗುತ್ತಿಗೆದಾರರು ಎಸ್‌ಪಿವಿಗೆ ಪಾವತಿಸುತ್ತಿರುವ ಶೇ. 10ರ ವಂತಿಗೆಯನ್ನು ಸ್ಥಗಿತಗೊಳಿಸುವಂತೆ ‘ಭಾರತೀಯ ಗಣಿ ಉದ್ಯಮಿಗಳ ಒಕ್ಕೂಟ’ವು (ಫಿಮಿ) ಸುಪ್ರೀಂ ಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ಗಣಿ ಮತ್ತು ಖನಿಜ ಅಭಿವೃದ್ಧಿ ಕಾಯ್ದೆಯಡಿ ಖನಿಜ ನಿಧಿ (ಡಿಎಂಎಫ್) ಗೂ ರಾಜಧನದ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ವಂತಿಗೆ ಪಾವತಿಸಬೇಕಿರುವುದರಿಂದ ಎಸ್‌ಪಿವಿಗೆ ಪಾವತಿಸುತ್ತಿರುವ ಶೇ.10ರ ವಂತಿಗೆಯಿಂದ ವಿನಾಯಿತಿ ನೀಡುವಂತೆ ಕೋರಿಕೊಂಡಿತು. ಆದರೆ ‘ಪರಿಸರ ಪುನರುಜ್ಜೀವನ ಯೋಜನೆ’ ಪೂರ್ಣವಾಗಿ ಹಾಗೂ ಸ್ಪಷ್ಟವಾಗಿ ರೂಪುಗೊಳ್ಳಬೇಕಿದ್ದು, ಅದಕ್ಕೆ ಭಾರೀ ಹಣದ ಅಗತ್ಯವಿದೆ ಎಂದು ಕೋರ್ಟ್ ಭಾವಿಸಿ, ಫಿಮಿ ಮನವಿಯನ್ನು ತಿರಸ್ಕರಿಸಿತು.
ಜನ ಹೋರಾಟವೊಂದೇ ದಾರಿ
ದೇಶದ ನೈಸರ್ಗಿಕ ಸಂಪನ್ಮೂಲಗಳನ್ನು ಹಾಗೂ ಖನಿಜ ಸಂಪತ್ತನ್ನು ರಾಷ್ಟ್ರೀಯ ಸಂಪತ್ತು ಎಂದು ಹೇಳುತ್ತೇವೆ. ಆದರೆ ನಮ್ಮ ದೇಶದಲ್ಲಿ 1990ರ ದಶಕದಲ್ಲಿ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ನೀತಿಗಳು ಜಾರಿಯಾದ ನಂತರ ಇಂತಹ ಅಮೂಲ್ಯವಾದ ಖನಿಜ ಸಂಪತ್ತನ್ನು ತಮ್ಮಿಚ್ಛೆಯಂತೆ ಲೂಟಿ ಹೊಡೆದು ಖಾಸಗಿ ಕಂಪನಿಗಳು ಕೊಬ್ಬುತ್ತಿವೆ. ಈ ಕಾರಣದಿಂದಲೇ ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆ ಪರಿಣಾಮವಾಗಿ ಕೇವಲ ಬೆರಳೆಣಿಕೆಯಷ್ಟು ಗಣಿ ಮಾಲೀಕರು ಸಹಸ್ರ ಕೋಟಿಗಳ ಒಡೆಯರಾದರು. ಅಕ್ರಮ ಗಣಿಗಾರಿಕೆಯನ್ನು ತಡೆಯಲು, ದುಷ್ಪರಿಣಾಮಗಳನ್ನು ನಿಯಂತ್ರಿಸಲು ಬೇಕಾಗಿರುವ ಅನೇಕ ಕಾನೂನುಗಳೂ ಇವೆ. ಅನುಷ್ಠಾನಗೊಳಿಸಲು ಸರ್ಕಾರಿ ಇಲಾಖೆಗಳಿವೆ. ಆದರೆ ಇವು ಕೂಡ ಭ್ರಷ್ಟವಾಗಿದ್ದು, ಕಾನೂನು ಕಟ್ಟಳೆಗಳು ಕಾಗದದಲ್ಲಿ ಇರುತ್ತವೆ ಹೊರತಾಗಿ, ಕಾರ್ಯಗತವಾಗುವುದಿಲ್ಲ. ಗಣಿಗಾರಿಕೆಯಿಂದ ಅತಿ ಹೆಚ್ಚು ಸಮಸ್ಯೆಗೀಡಾಗಿರುವ ಬಳ್ಳಾರಿ ಜಿಲ್ಲೆಯಲ್ಲಿ 125 ಗ್ರಾಮಗಳು ಪುನರ್ವಸತಿ ನಿರೀಕ್ಷೆಯಲ್ಲಿವೆ, ವಿಜಯನಗರ ಜಿಲ್ಲೆಯಲ್ಲಿ 66 ಗ್ರಾಮಗಳು, ಚಿತ್ರದುರ್ಗ ಜಿಲ್ಲೆಯ 60 ಹಾಗೂ ತುಮಕೂರು ಜಿಲ್ಲೆಯ ಸುಮಾರು 50 ಗ್ರಾಮಗಳು ಸಂಪೂರ್ಣ ನಲುಗಿವೆ. ಅಲ್ಲದೇ ಇಲ್ಲಿಯ ಪ್ರತಿಯೊಂದು ಮನೆಯೂ ಅಕ್ರಮ ಗಣಿಗಾರಿಕೆಯ ಹಲವು ಕರಾಳ ಕಥೆಗಳನ್ನು ಬಿಚ್ಚಿಡುತ್ತದೆ. ಈ ಜಿಲ್ಲೆಗಳ ಇನ್ನೂ ಹಲವಾರು ಹಳ್ಳಿಗಳು ತೀವ್ರ ಸಂಕಷ್ಟಕ್ಕೊಳಗಾಗಿವೆ. ಈ ಭಾಗದ ಬೀದಿಗೆ ಬಿದ್ದ ಜನರ ಬದುಕು ಕಟ್ಟಿ ಕೊಡುವ ಕೆಲಸವಾಗಬೇಕು, ಆರೋಗ್ಯ-ಶಿಕ್ಷಣಕ್ಕೆ ಒತ್ತು ನೀಡಬೇಕು, ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಮಾತ್ರ ಕಟ್ಟಿ ಉಪಯೋಗವಿಲ್ಲ, ಅಗತ್ಯ ವೈದ್ಯರು, ಸಿಬ್ಬಂದಿ ನೇಮಕವಾಗಬೇಕು, ಬೀದಿಗೆ ಬಿದ್ದ ಕಾರ್ಮಿಕರ ಪುನರುಜ್ಜೀವನಕ್ಕೆ ಯೋಜನೆ ರೂಪಿಸಬೇಕು, ಗ್ರಾಮಸ್ಥರನ್ನು ಅರ್ಥಿಕವಾಗಿ ಸ್ವಾವಲಂಬಿಗಳಾಗಿ ರೂಪಿಸುವ ಕೆಲಸ ಆಗಬೇಕು. ಈ ಎಲ್ಲಾ ಅಗತ್ಯತೆಗಳನ್ನು ನೈಜ ಗ್ರಾಮ ಸಭೆಗಳ ಮೂಲಕ ಆಯಾ ಪ್ರದೇಶದ ಅಗತ್ಯತೆಗನುಸಾರವಾಗಿ ನಿರ್ಧಾರ ಮಾಡಬೇಕು, ಕಾಡಂಚಿನ ಸಾಗುವಳಿದಾರರಿಗೂ ಯೋಜನೆ ರೂಪಿಸಿ ಪರಿಸರ ಕಾಪಾಡುವಲ್ಲಿ ಅವರನ್ನೂ ತೊಡಗಿಸಿಕೊಳ್ಳಬೇಕು. ಆದರೆ ಈ ನಿಧಿಯ ಲೂಟಿಗಾಗಿ ತಮ್ಮದೇ ಅಜೆಂಡಾ ಇಟ್ಟುಕೊಂಡು ಜೊಲ್ಲು ಸುರಿಸುತ್ತಾ ಕಾಯುತ್ತಿರುವ ಎಲ್ಲಾ ಪಕ್ಷಗಳ ರಾಜಕಾರಣಿಗಳ ದಂಡು ನೋಡಿದರೆ ಈ ಸಮಸ್ಯೆ ಬಗೆಹರಿಸಲು ಯಾವುದೇ ಇಚ್ಛಾಶಕ್ತಿಯನ್ನು ಈ ಸರ್ಕಾರಗಳು ಹೊಂದಿಲ್ಲ ಅನ್ನುವುದು ಸರ್ವವಿದಿತ.
ಆದ್ದರಿಂದ ಜನ ಹೋರಾಟವೊಂದೇ ದಾರಿ. ಈಗಾಗಲೇ ಜನಸಂಗ್ರಾಮ ಪರಿಷತ್, ರೈತ ಸಂಘಟನೆಗಳು, ಎಸ್‌ಯುಸಿಐ(ಸಿ), ಎಐಯುಟಿಯುಸಿ ಯಂತಹ ಹಲವು ಸಂಘಟನೆಗಳು ಹಾಗೂ ಸಂಡೂರು ಭಾಗದ ಹಲವಾರು ಯುವಜನರು ಸೇರಿ ಪಕ್ಷಾತೀತವಾದ ಗಣಿಬಾಧಿತ ಜನರ ಹೋರಾಟಕ್ಕಾಗಿ ಜನಸಮಿತಿಯನ್ನು ರಚಿಸಿದ್ದಾರೆ. ಈ ಹೋರಾಟಕ್ಕೆ ಹಲವಾರು ಹಿರಿಯರು ಬೆನ್ನೆಲುಬಾಗಿ ನಿಂತಿದ್ದಾರೆ. ಜನಸಮಿತಿಗಳನ್ನು ರಚಿಸಿಕೊಂಡು ಜನಹೋರಾಟ ಕಟ್ಟುವ ಮೂಲಕ ಮಾತ್ರ ಈ ಆಳ್ವಿಕರ ಹುನ್ನಾರಗಳನ್ನು ತಡೆಯಬಹುದು.