
ಐಪಿಎಲ್ ಕ್ರಿಕೆಟ್: ಬೆಟ್ಟಿಂಗ್‌ನ ದಾವಾಗ್ನಿಯಲ್ಲಿ ಬೇಯುತ್ತಿದೆ!
2008ರಲ್ಲಿ ಪ್ರಾರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಜನರ ಕಣ್ಣು ಕೋರೈಸಿತು. ಈಗಂತೂ ಇದು ಜಾಗತಿಕ ವಿದ್ಯಮಾನ. ತನ್ನ ಅಭಿಮಾನಿಗಳನ್ನು ತೊಡಗಿಸಿಕೊಳ್ಳುವುದನ್ನು ಮರುವ್ಯಾಖ್ಯಾನಿಸಿ, ಹಿಂದೆ ಕಾಣದಿದ್ದಂತಹ ಒಂದು ವಿಚಿತ್ರ ವ್ಯಾಪಾರ-ವ್ಯವಹಾರದ ವ್ಯವಸ್ಥೆಯನ್ನು ಅದು ಸೃಷ್ಟಿಸಿತು. ಇಂದು ಐಪಿಎಲ್ ಕಿರಿಯ ವಯಸ್ಸಿನ ಕ್ರಿಕೆಟಿಗರನ್ನು ರಾತ್ರೋರಾತ್ರಿ ಕೋಟ್ಯಾಧಿಪತಿಗಳನ್ನಾಗಿಯೂ ಮಾಡಿದೆ.
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪಟುಗಳನ್ನು ಹರಾಜಿನ ಮೂಲಕ ಸೆಳೆದುಕೊಂಡು ರಚಿಸಲಾದ ತಂಡಗಳನ್ನು ಫ್ರಾಂಚೈಸಿಗಳು ಎಂಬ ಹೆಸರಿನಿಂದ ಕರೆಯಲಾಯಿತು. ಆ ತಂಡಗಳಿಗೆ ದೊಡ್ಡದೊಡ್ಡ ಕಾರ್ಪೊರೇಟ್ ಉದ್ಯಮಿಗಳು ಒಡೆಯರು. ಈ ಮೊದಲು ‘ಸಭ್ಯಸ್ತರ ಕ್ರೀಡೆ’ ಎಂದು ಬಣ್ಣಿಸಲ್ಪಡುತ್ತಿದ್ದ ಕ್ರಿಕೆಟ್ ಆಟವು, ಟೆಸ್ಟ್ ಪಂದ್ಯಗಳ ಆಟದ 5 ದಿನಗಳ ಕಾಲ ಕ್ರೀಡಾಪಟುಗಳ ನಿರಂತರ ಏಕಾಗ್ರತೆ, ಸಹಿಷ್ಣುತೆ, ಪರಿಶ್ರಮ, ಕಣ್ಣಿಗೆ ಆಹ್ಲಾದ ನೀಡುತ್ತಾ ಉತ್ತಮ ಆಟದ ಪ್ರದರ್ಶನದ ಮೂಲಕ ಶ್ರೇಷ್ಠತೆಯನ್ನು, ಕ್ರೀಡಾಸ್ಫೂರ್ತಿಯನ್ನು ಕಾಣಿಸುವುದಕ್ಕೆ ಹೆಸರುವಾಸಿಯಾಗಿತ್ತು. ಆದರೆ ಐಪಿಎಲ್ ದೆಸೆಯಿಂದಾಗಿ ಅದು ಇಂದು ಹಣ ಗಳಿಕೆಯ ಸರಕಾಗಿ ಮಾರ್ಪಾಡಾಗಿದೆ.
ಲಾಭದಾಹಿ ಐಪಿಎಲ್ ಬಾಸ್‌ಗಳು, ಕ್ರಿಕೆಟ್ ಅನ್ನು ಒಂದು ಆಮೋದ-ಪ್ರಮೋದದ ಮೋಜಿನ ಸಂತೆಯಾಗಿ ಪರಿವರ್ತಿಸಿದ್ದಾರೆ. ಅವರ ಮಾತಿನಲ್ಲೇ ಹೇಳುವುದಾದರೆ ಅದು ಹೆಚ್ಚು ಮನರಂಜನೆ, ಕಡಿಮೆ ಕ್ರಿಕೆಟ್ ಅಂತೆ! ಆದರೆ, ಅದು ಕ್ರಿಕೆಟ್!! ಚಿಯರ್ ಗರ್ಲ್ಸ್ ಗಳ ಕುಣಿತ, ಬಣ್ಣ ತುಂಬಿದ ಮೈದಾನ, ಮನರಂಜನೆಯ ವಾತಾವರಣವನ್ನು ಸೃಷ್ಟಿಸುವ ಥೀಮ್ ಸಂಗೀತದ ಆರ್ಭಟ, ಅತಿರೇಕದ ಉದ್ಘಾಟನಾ ಸಮಾರಂಭಗಳಲ್ಲಿ ಬಾಲಿವುಡ್ ನಟನಟಿಯರ ಸಡಗರ-ಸಂಭ್ರಮಗಳ ಮೂಲಕ ಪ್ರೇಕ್ಷಕರನ್ನು ಸೆಳೆಯಲು ಏನೇನು ಬೇಕೋ ಅದೆಲ್ಲವನ್ನೂ ಐಪಿಎಲ್ ಟೂರ್ನಿಗಳಲ್ಲಿ ಎಗ್ಗುಸಿಗ್ಗಿಲ್ಲದೇ ಮಾಡಲಾಗುತ್ತದೆ. ಹೀಗಾಗಿ, ಇಲ್ಲಿ ಕ್ರಿಕೆಟ್ ಅನ್ನುವುದು ಕೇವಲ ಬ್ಯಾಟ್ ಮತ್ತು ಚೆಂಡಿಗೆ ಸೀಮಿತವಾಗದೆ, ಇತರೆಲ್ಲಾ ರೀತಿಯ ಅಬ್ಬರಗಳ ಒಟ್ಟು ಮೊತ್ತವಾಗಿದೆ.
ಕ್ರೀಡೆ ಏಕೆ ಬೇಕು?
ವ್ಯಕ್ತಿತ್ವ ನಿರ್ಮಾಣದ ಅತ್ಯುತ್ತಮ ಸಾಧನ ಕ್ರೀಡೆ. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ತನ್ಮೂಲಕ, ಸೌಹಾರ್ದತೆ ಹಾಗೂ ಸ್ನೇಹದ ಮನೋಭಾವವನ್ನು ಬೆಳೆಸುವ ಜೀವನ ವಿಧಾನ ಅದು. ಅಬಾಲವೃದ್ದರಾದಿಯಾಗಿ ಎಲ್ಲರಿಗೂ ಉಲ್ಲಾಸಕರ ಚಟುವಟಿಕೆಯಾಗಿದ್ದು, ಕ್ರೀಡಾ ಮನೋಭಾವದ ಮೂಲಕ ನ್ಯಾಯಪ್ರಜ್ಞೆ, ಸೌಜನ್ಯ, ನೈತಿಕ ನಡವಳಿಕೆ ಹಾಗೂ ಸೋಲು-ಗೆಲುವನ್ನು ಅತಿರೇಕವಿಲ್ಲದೆ ಸಂಯಮದಿಂದ ಸಮಾನವಾಗಿ ಸ್ವೀಕರಿಸುವ ಮನಸ್ಥಿತಿಯನ್ನು ಕ್ರೀಡೆಯು ಬೆಳೆಸುತ್ತದೆ. ನ್ಯಾಯಯುತ ಆಟದ ಮೂಲಕ ಎಲ್ಲರಿಗೂ ಗೆಲುವಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವುದು, ಸೋತಾಗಲೂ ಪ್ರಾಮಾಣಿಕತೆ ಹಾಗೂ ಘನತೆಯಿಂದ ವರ್ತಿಸುವುದನ್ನು ಅದು ಕಲಿಸುತ್ತದೆ.
ಪಿಚ್ ಹಿಂದಿನ ಬಾಲಿವುಡ್ – ರಾಜಕಾರಣಗಳ ಕೂಡಾವಳಿ
ಐಪಿಎಲ್ ಟೂರ್ನಮೆಂಟ್‌ಗಳು ಕ್ರೀಡಾಸ್ಫೂರ್ತಿಗೆ ಮಾರಕವಾಗಿವೆ. ಹೆಚ್ಚು ಜನಪ್ರಿಯತೆ ಪಡೆದಿರುವ ಕ್ರೀಡೆಯನ್ನು ಒಂದು ಉತ್ಪನ್ನವಾಗಿ ಪರಿವರ್ತಿಸಿ, ಹೂಡಿಕೆದಾರರಿಗೆ ಗರಿಷ್ಠ ಲಾಭವನ್ನು ಸೃಷ್ಟಿಸಿಕೊಡಲು ಅದನ್ನು ಹಿಂಡಲಾಗುತ್ತಿದೆ. ಕ್ರಿಕೆಟ್‌ನ ಸಾರವನ್ನು ಕಲಬೆರಕೆ ಮಾಡಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬಿಡ್‌ದಾರನಿಗೆ ಮಾರಾಟ ಮಾಡಲಾಗುತ್ತಿದೆ. ಆಟಗಾರರೂ ಸಹ ಮಾರಾಟದ ಸರಕೆ. ಐಪಿಎಲ್ ಫ್ರಾಂಚೈಸಿಗಳನ್ನು ಚಿತ್ತಾಕರ್ಷಕ ಹೆಸರುಗಳಿಟ್ಟು ಕರೆಯಲಾಗುತ್ತದೆ. ಅಧಿಕೃತವಾಗಿ, ಪ್ರತಿಯೊಂದು ತಂಡವನ್ನು ವ್ಯಾಪಾರಸ್ಥರು, ಚಲನಚಿತ್ರ ತಾರೆಯರು ಮತ್ತು ಬಂಡವಾಳಶಾಹಿಗಳ ಒಕ್ಕೂಟವು ನಡೆಸುತ್ತಿದ್ದರೂ ಸಹ, ತೆರೆಯ ಹಿಂದೆ ಶೆಲ್ ಕಂಪನಿಗಳು, ಗಡಿಯಾಚೆಗಿನ ಕಳ್ಳಖಾತೆದಾರರು ಮತ್ತು ಬೇನಾಮಿ ಹೂಡಿಕೆದಾರರು ಇದ್ದಾರೆ. ಹಲವಾರು ತಂಡಗಳ ಮಾಲೀಕರು ಮತ್ತು ಪ್ರಾಯೋಜಕರು ಉತ್ತರ ಭಾರತದ ಬಿಜೆಪಿ ಪರ ಉದ್ಯಮಿಗಳಿಂದ ಹಿಡಿದು ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದ ಪ್ರಾದೇಶಿಕ ರಾಜಕೀಯ ಪಕ್ಷಗಳವರೆಗೆ ಗಾಢವಾದ ಸಂಪರ್ಕ ಹೊಂದಿದ್ದಾರೆ.
ಬಾಲಿವುಡ್ ಹಾಗೂ ಮರೆಯಲ್ಲಿ ನಿಂತು ಕಾರ್ಯನಿರ್ವಹಿಸುವ ರಾಜಕೀಯ ದಲ್ಲಾಳಿಗಳಿಂದ ಐಪಿಎಲ್‌ನ ಗ್ಲಾಮರ್ ಸೂಚ್ಯಂಕವು ಏರುತ್ತಲೇ ಇದೆ. ಫ್ರಾಂಚೈಸಿಗಳ ಸೆಲೆಬ್ರಿಟಿ ಯಜಮಾನಿಕೆಯು ಹೊಳಪನ್ನಷ್ಟೇ ಅಲ್ಲ, ಇತ್ತೀಚೆಗೆ ಪ್ರಶ್ನೆಗಳನ್ನೂ ಎಬ್ಬಿಸಿದೆ. ಐಪಿಎಲ್ ಶುರುವಾಗಲು ಬಲವಾದ ರಾಜಕೀಯ ಶಕ್ತಿಯ ಅಭಯವಿತ್ತು. ಬಿಜೆಪಿಯ ನಿಷ್ಠಾವಂತ ಲಲಿತ್ ಮೋದಿ ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಸಂಪೂರ್ಣ ಬೆಂಬಲದೊಂದಿಗೆ ಐಪಿಎಲ್‌ನ ರೋಚಕ ಕಥೆಯ ಮೊದಲ ಅಧ್ಯಾಯಗಳ ರಚಿಸಿದ ರಚನೆಕಾರ. ಭಾರತದಿಂದ ಪರಾರಿಯಾಗಿ ಇಂದು, ಅದೇ ಲಲಿತ್ ಮೋದಿ ಲಂಡನ್‌ನಲ್ಲಿ ಕಳ್ಳತನದಲ್ಲಿ ಕುಳಿತಿರುವ ವ್ಯಕ್ತಿ. ಅಕ್ರಮಗಳು ಮತ್ತು ಹಣದ ಕಳ್ಳವರ್ಗಾವಣೆಯ ಆರೋಪ ಆತನ ಮೇಲಿದೆ. ಅದೇನೇ ಇದ್ದರೂ, ಆತನ ಅಪಸೃಷ್ಟಿಯ ಪರಂಪರೆ ಮುಂದುವರೆಯುತ್ತಲೇ ಅಂತಹ ಹಲವರ ಅಕ್ರಮಗಳನ್ನು ಮುಚ್ಚಿಹಾಕುವಲ್ಲಿ ಯಶಸ್ವಿಯಾಗಿದೆ.
ಬಿಕರಿಯಾದ ಮಾಧ್ಯಮ : ಝಗಮಗ, ಗಾಸಿಪ್, ಅಬ್ಬರ!
ಐಪಿಎಲ್‌ನ ಈ ಪರಿಯ ಬೆಳವಣಿಗೆಯಲ್ಲಿ ಅಂತಿಮ ಲೆಕ್ಕಾಚಾರದಲ್ಲಿ ಮಾಧ್ಯಮಗಳು ಪ್ರಶ್ನಾರ್ಹ ಪಾತ್ರವನ್ನು ನಿರ್ವಹಿಸಿವೆ. ಅವು ಬೇಟೆಯೂ ಆಗಿವೆ ಮತ್ತು ಬೇಟೆಗಾರನೂ ಆಗಿವೆ. ಕೋಟಿಕೋಟಿ ಡಾಲರ್ ಮೌಲ್ಯ ಮೀರಿದ ಪ್ರಸಾರದ ಹಕ್ಕುಗಳಿಗಾಗಿ ಮಾಧ್ಯಮ ಜಾಲಗಳು ಪರಸ್ಪರ ಬಡಿದಾಡುತ್ತಿವೆ. 2022ರಲ್ಲಿ, ಸ್ಟಾರ್ ಸ್ಪೋರ್ಟ್ಸ್ ಮತ್ತು ವಯಾಕಾಮ್18 ಐದು ವರ್ಷಗಳ ಒಪ್ಪಂದಕ್ಕೆ ಒಟ್ಟು 6.2 ಶತಕೋಟಿ ಡಾಲರ್ ಪಾವತಿಸಿದ್ದು ಜಾಗತಿಕವಾಗಿ ಅತ್ಯಂತ ದುಬಾರಿ ಮಾಧ್ಯಮ ಹಕ್ಕುಗಳ ಹರಾಜಾಗಿದೆ. ಇದರಿಂದಾಗಿ, ಸಂಪಾದಕೀಯ ಸ್ವಾತಂತ್ರ‍್ಯವು ಕುಸಿದು, ತನಿಖಾ ವರದಿಗಳ ಬದಲಿಗೆ ಅತಿರಂಜಿತ ಮಸಾಲೆ ಸುದ್ದಿಗಳು, ಗಾಸಿಪ್ ವಿಭಾಗಗಳು, ಆಟಗಾರರ ಪ್ರಣಯಗಳು ಹಾಗೂ ಕ್ಷುಲ್ಲಕ ವಿಷಯಗಳು ಆ ಮಾಧ್ಯಮಗಳಲ್ಲಿ ಮೇಲುಗೈ ಪಡೆದಿವೆ. ಫ್ರಾಂಚೈಸಿಗಳ ಅಕ್ರಮಗಳ ವಿರುದ್ಧ ದನಿಯೆತ್ತಲು ಮಾಧ್ಯಮಗಳಿಗೆ ಬಾಯೇ ಬರುವುದಿಲ್ಲ.
ಒತ್ತಡದಲ್ಲಿ ಆಟಗಾರರು : ಗರಿಮೆಯ ಕಿರೀಟ ಇಲ್ಲವೇ ಆಯಾಸದ ಕುಸಿತ
ಕೋಟ್ಯಾಂತರ ಡಾಲರ್ ಗುತ್ತಿಗೆಯ ಥಳುಕಿನ ಹಿಂದೆ ಆಟಗಾರರ ತೀವ್ರ ಶೋಷಣೆ, ಮಾನಸಿಕ ಆರೋಗ್ಯ ಬಿಕ್ಕಟ್ಟು ಮತ್ತು ಹೆಚ್ಚುತ್ತಿರುವ ಅಸಮಾನತೆಗಳ ಕರಾಳ ವಾಸ್ತವವಿದೆ. ಉನ್ನತ ಶ್ರೇಣಿಯ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ತಾರಾಪಟುಗಳು, ಭಾರಿ ಮೊತ್ತದ ಗುತ್ತಿಗೆಗೆ ಬದ್ಧರಾಗಿರುತ್ತಾರೆ. ಆದರೆ ತಾರೆಗಳಲ್ಲದ ಹೊಸ ಆಟಗಾರರಿಗೆ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಕ್ರೀಡಾಳುಗಳಿಗೆ ಈ ಲೀಗ್ ಹೆಚ್ಚೆಂದರೆ ಒಂದು ಜೂಜಿನಂತೆ ಆಗಿದೆ. ಕೆಲವು ವಾರಗಳ ಆಟವು ಅವರ ಜೀವನವನ್ನು ಬದಲಾಯಿಸಲೂಬಹುದು ಅಥವಾ ಅವರನ್ನು ಛಿದ್ರಗೊಳಿಸಲೂಬಹುದು. ಹಲವರು ಇಡೀ ಸೀಸನ್ ಬೆಂಚ್‌ಗೆ ಸೀಮಿತವಾಗಿರುತ್ತಾರೆ ಹಾಗೂ ಯಾವುದೇ ಆಟವನ್ನೂ ಆಡಲಾಗದೆ ನರಳುತ್ತಾರೆ. ದೇಸಿ ಹಾಗೂ ವಿದೇಶಿ ಆಟಗಾರರ ಗಳಿಕೆ ಹಾಗೂ ದೊರಕುವ ಸೌಲಭ್ಯಗಳಲ್ಲಿ ತೀವ್ರತಮ ತಾರತಮ್ಯಗಳಿವೆ. ಇದು ಗ್ರಾಮೀಣ ಪ್ರದೇಶದ ಆಟಗಾರರನ್ನು ಖಿನ್ನತೆಗೆ ದೂಡುತ್ತದೆ.
1990ರ ದಶಕದ ಉತ್ತರಾರ್ಧದಲ್ಲಿ ಮತ್ತು 21ನೇ ಶತಮಾನದ ಆರಂಭದಲ್ಲಿ ವ್ಯಾಪಕ ಉದಾರೀಕರಣ ಕಾರ್ಯಸೂಚಿಯ ಹಿನ್ನೆಲೆಯಲ್ಲಿ ಮೂಡಿದ ಬಂಡವಾಳಶಾಹಿ ಜಾಗತಿಕ ಒಮ್ಮತವು ಮಾನವ ಚಟುವಟಿಕೆಯ ಪ್ರತಿಯೊಂದು ಅಂಶವನ್ನು ಅಂದರೆ ಕ್ರೀಡೆ, ಮನರಂಜನೆ, ಶಿಕ್ಷಣ, ಕಡೆಗೆ ಸಂಸ್ಕೃತಿಯನ್ನೂ ಸಹ ಮಾರುಕಟ್ಟೆ ಶೋಷಣೆಗೆ ಯೋಗ್ಯವಾದ ಸರಕಾಗಿ ಬದಲಾಯಿಸಿತು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್), ಅದರ ಪರಕಾಷ್ಠೆಯಾಗಿ ಬಂತು ಅಷ್ಟೇ.
ಜಗಮಗಿಸುವ ದೀಪಗಳು, ಕರ್ಕಶ ಸಿಡಿಮದ್ದು ಮತ್ತು ಒಣಗಿ ನಿಂತ ನಗರಗಳು – ಪರಿಸರದ ಅಣಕ
ಹವಾಮಾನ ಬದಲಾವಣೆ ಮತ್ತು ತೀವ್ರ ನೀರಿನ ಕೊರತೆಯೊಂದಿಗೆ ಸೆಣಸಾಡುತ್ತಿರುವ ಈ ದೇಶದಲ್ಲಿ, ಐಪಿಎಲ್ ಟೂರ್ನಮೆಂಟ್ ಒಟ್ಟಾರೆ ಆಯೋಜನೆಯು ಪರಿಸರದ ಮೇಲೆ ಹೇರುವ ದುಷ್ಪರಿಣಾಮದ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ. ಪ್ರತಿಯೊಂದು ಬಾರಿ ಪಂದ್ಯಕ್ಕಾಗಿ ಪಿಚ್‌ಗಳನ್ನು ಸಿದ್ಧಪಡಿಸಲು ಲಕ್ಷಾಂತರ ಲೀಟರ್ ಸಂಸ್ಕರಿಸಿದ ನೀರನ್ನು ಬಳಸಲಾಗುತ್ತದೆ. ಕ್ರೀಡಾಂಗಣಗಳು ಗಂಟೆಗಟ್ಟಲೆ ಫ್ಲಡ್‌ಲೈಟ್‌ಗಳಿಂದ ಜಗಮಗಿಸುತ್ತವೆ ಮತ್ತು ಮಾಲಿನ್ಯ, ಬರ ಮತ್ತು ವಿದ್ಯುತ್ ಕೊರತೆಯಿಂದ ಬಳಲುತ್ತಿರುವ ನಗರಗಳಲ್ಲಿ ಭವ್ಯವಾದ ಉದ್ಘಾಟನಾ ರಾತ್ರಿಗಳಲ್ಲಿ ಪಟಾಕಿ ಪ್ರದರ್ಶನಗಳು ಅಬ್ಬರದಿಂದ ನಡೆಯುತ್ತವೆ. ಒಂದು ಮಾಯಾಲೋಕವನ್ನೇ ನಿರ್ಮಾಣ ಮಾಡಲಾಗುತ್ತದೆ.
ಕ್ರಿಕೆಟ್‌ನ್ನು ಪಂಟರ್‌ಗಳ ತಾಣವನ್ನಾಗಿ ಮಾಡಿದ ಮ್ಯಾಚ್ ಫಿಕ್ಸಿಂಗ್
ಐಪಿಎಲ್‌ನ ಫ್ಲಡ್‌ಲೈಟ್‌ಗಳ ಬೆಳಕು, ಚಿಯರ್‌ಲೀಡರ್‌ಗಳು, ಸೆಲೆಬ್ರಿಟಿಗಳ ಹೊಳಪಿನ ಶತಕೋಟಿ ಡಾಲರ್ ವ್ಯವಹಾರ, ಮ್ಯಾಚ್ ಫಿಕ್ಸಿಂಗ್‌ನ ಕೊಳಕನ್ನು ಮರೆಯಾಗಿಸುತ್ತವೆ. ಅಕ್ರಮ ಬೆಟ್ಟಿಂಗ್ ದಂಧೆ, ರಾಜಕೀಯ ಸಂಬಂಧ ಮತ್ತು ತಡೆ ಇಲ್ಲದ ವಾಣಿಜ್ಯೀಕರಣ, ಇವು ಒಟ್ಟಿಗೆ ಸೇರಿ ಒಂದು ಕಾಲದ ಸಜ್ಜನರ ಆಟವು ಇಂದು ಕ್ರಿಕೆಟ್‌ನ ಮೂಲತತ್ವದಿಂದ ದೂರವಾಗಿ ಎಲ್ಲಾ ದುಷ್ಟ ಚಟುವಟಿಕೆಗಳ ಆಡುಂಬೋಲವಾಗಿ ಬದಲಾಗಿದೆ. 2013ರಲ್ಲಿ ದೆಹಲಿ ಪೊಲೀಸರು ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ಒಂದು ಫ್ರಾಂಚೈಸಿ ತಂಡದ ಮೂವರು ಆಟಗಾರರನ್ನು ಬಂಧಿಸಿದ್ದರು. ಆಟದ ಪೂರ್ವನಿರ್ಧಾರಿತ ಕ್ಷಣಗಳಲ್ಲಿ ಆಟಗಾರರಿಗೆ ರನ್ ಬಿಟ್ಟುಕೊಡಲು ಹಣ ನೀಡಲಾಗಿತ್ತು, ಬುಕ್ಕಿಗಳು ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸಿದ್ದರು ಎಂದು ನಂತರದ ತನಿಖೆಗಳು ಬಹಿರಂಗಪಡಿಸಿದ್ದವು. ಈ ಘಟನೆಯ ಪರಿಣಾಮವು ಮತ್ತೊಂದು ಫ್ರಾಂಚೈಸಿಯನ್ನು ತಲುಪಿತು. ಅದರ ಉನ್ನತ ವ್ಯಕ್ತಿಯಾಗಿದ್ದ ಗುರುನಾಥ್ ಮೇಯಪ್ಪನ್, ದಕ್ಷಿಣ ಭಾರತ ಮೂಲದ ಕೈಗಾರಿಕೋದ್ಯಮಿ, ಆಗಿನ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಜೊತೆಯಲ್ಲಿ ನಿಕಟವಾದ ಸಂಬಂಧವನ್ನು ಹೊಂದಿದ್ದರು. ಬೆಟ್ಟಿಂಗ್ ಮತ್ತು ತಂಡದ ಮಾಹಿತಿಯನ್ನು ಕಳ್ಳತನದಲ್ಲಿ ರವಾನಿಸಿದ ಆರೋಪ ಆತನ ಮೇಲೆ ಇತ್ತು. ಕಾನೂನಾತ್ಮಕ ಕ್ರಮ ಕೈಗೊಂಡರೂ ಮತ್ತು ನ್ಯಾಯಮೂರ್ತಿ ಲೋಧಾ ಸಮಿತಿಯು ಅಂತಿಮವಾಗಿ ಎರಡು ಫ್ರಾಂಚೈಸಿಗಳನ್ನು ಎರಡು ವರ್ಷಗಳ ಕಾಲ ಅಮಾನತುಗೊಳಿಸಿದ್ದರೂ ವ್ಯವಸ್ಥೆಯ ಕೊಳೆತ ಅತ್ಯಂತ ಆಳವಾಗಿ ಹೋಗಿರುವುದಂತೂ ಸತ್ಯ ಎನ್ನುತ್ತಾರೆ ಒಳಗಿನವರು.
ಬೆಟ್ಟಿಂಗ್, ಬುಕ್ಕಿಗಳು ಮತ್ತು ಭೂಗತ ಲೋಕದ ಸಂಪರ್ಕ
ಭಾರತದ ಹೆಚ್ಚಿನ ಭಾಗಗಳಲ್ಲಿ ಕ್ರಿಕೆಟ್ ಬೆಟ್ಟಿಂಗ್ ಕಾನೂನುಬಾಹಿರವಾಗಿದ್ದರೂ ಸಹ ಐಪಿಎಲ್ ಟೂರ್ನಿ ಸಮಯದಲ್ಲಿ ವಾರ್ಷಿಕ ಬೆಟ್ಟಿಂಗ್ ವಹಿವಾಟು 150 ಶತಕೋಟಿ ಡಾಲರ್ ಆಗುತ್ತದೆ ಎಂದು ಅಂದಾಜಿಸಲಾಗಿದೆ. 2022ರಲ್ಲಿ, ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳವು ದುಬೈ ಮತ್ತು ಕರಾಚಿಯಿಂದ ಕಾರ್ಯನಿರ್ವಹಿಸುತ್ತಿರುವ ತಲೆಮರೆಸಿಕೊಂಡಿರುವ ಭೂಗತದೊರೆ ದಾವೂದ್ ಇಬ್ರಾಹಿಂನ ಭೂಗತ ಜಾಲ ಡಿ-ಕಂಪನಿಯೊಂದಿಗೆ ಸಂಪರ್ಕ ಹೊಂದಿದ್ದ ಬೆಟ್ಟಿಂಗ್ ಜಾಲವನ್ನು ಪತ್ತೆ ಮಾಡಿತು. ಟೆಲಿಗ್ರಾಮ್ ಮತ್ತು ವಾಟ್ಸಾಪ್‌ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್ ಗಳು ಜೂಜುತಾಣಗಳಿಗೆ ಪ್ರಚಾರ ರಾಯಭಾರಿಗಳಂತೆ ಕೆಲಸ ಮಾಡಿರುವ ಉದಾಹರಣೆಗಳಿವೆ.
ಬೆಟ್ಟಿಂಗ್ ಭೂತದ ಜಾಲದಲ್ಲಿ ಭಾರತದ ಯುವಜನತೆ
ಐಪಿಎಲ್ ಪ್ರಸಾರಗಳು ಪ್ರತಿ ಪರದೆಯಲ್ಲೂ ತುಂಬಿ ತುಳುಕುತ್ತಿದ್ದಂತೆ, ಮೊಬೈಲ್ ಅಪ್ಲಿಕೇಶನ್‌ಗಳು, ಫ್ಯಾಂಟಸಿ ಲೀಗ್‌ಗಳು ಮತ್ತು ಬೆಟ್ಟಿಂಗ್ ಪ್ಲಾಟ್‌ಫಾರ್ಮ್ಗಳ ಮೇಲ್ಮೆ ಕೆಳಗೆ ಸಮಾನಾಂತರ ಡಿಜಿಟಲ್ ಆರ್ಥಿಕತೆಯು ಚಲನೆಯಲ್ಲಿರುತ್ತದೆ. ಬೆಟ್ಟಿಂಗ್‌ನ್ನು ಕೇವಲ ೪೯ ರೂ.ನಿಂದ ಪ್ರಾರಂಭಿಸಲು ಅವಕಾಶ ನೀಡಲಾಗುತ್ತದೆ. ಆಮಿಷಕ್ಕೆ ಒಳಗಾಗಲು ಇಷ್ಟು ಸಾಕು. ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿ ಯುವಕರು ಇದಕ್ಕೆ ನೇರ ಬಲಿಪಶುಗಳು. ಒಮ್ಮೆ ಒಳಗೆ ಸೇರಿದರೆ, ಅಭಿಮಾನದ ಭಾವನೆ ಮತ್ತು ಆರ್ಥಿಕ ಅಗತ್ಯಗಳ ನಡುವಿನ ಗೆರೆ ಮಸುಕಾಗುತ್ತದೆ. ಮೂರು ತಿಂಗಳ ಕಾಲಾವಧಿಯ ಒಂದು ಸೀಸನ್‌ನಲ್ಲಿ, ಇಡೀ ಸಾಮಾಜಿಕ ಪರಿಸರವೇ ಪಂದ್ಯದ ದಿನಗಳು ಮತ್ತು ಬೆಟ್ಟಿಂಗ್ ಅವಕಾಶಗಳ ಲಯದ ಕಡೆಗೆ ಬಾಗುತ್ತದೆ.
ನಾಗರಿಕ ಚರ್ಚೆ ಮತ್ತು ಸಾಮಾಜಿಕ ಹೊಣೆಗಾರಿಕೆಯಿಂದ ದೂರವೇ ಉಳಿದಿರುವ ಯುವ ಪ್ರೇಕ್ಷಕ ಗಣದಲ್ಲಿ, ದೀರ್ಘಾವಧಿಯ ಅರಿವಿಗಿಂತ ತ್ವರಿತಗತಿಯ ತೃಪ್ತಿಯೇ ಮೇಲುಗೈ ಸಾಧಿಸಿ ಅವರು ಉನ್ಮಾದದ ಪ್ರಪಂಚದಲ್ಲಿ ಸಿಲುಕಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಕೇವಲ ಹಣಕಾಸಿನ ನಷ್ಟವಾಗುವುದಲ್ಲದೆ, ನೆಲದ ವಾಸ್ತವಗಳಿಂದ ದೂರಾದ ಯುವಜನತೆಗೆ ಅದು ಒಂದು ಮಾದಕ ದ್ರವ್ಯವಾಗಿ ಅವರನ್ನು ಬಲಿ ತೆಗೆದುಕೊಳ್ಳುತ್ತಿದೆ. ಬೆಂಗಳೂರಿನಲ್ಲಿ ಈ ವರ್ಷದ ಐಪಿಎಲ್ ವಿಜೇತ ಆರ್‌ಸಿಬಿ ತಂಡದ ವಿಜಯೋತ್ಸವ ಮೆರವಣಿಗೆಯಲ್ಲಿ ಕಾಲ್ತುಳಿತ ಉಂಟಾಗಿ 11 ಜನ ಬಲಿಯಾಗಿದ್ದದ್ದು, ಅತಿರೇಕದ ಉನ್ಮಾದ, ಬಂಡವಾಳ, ಮಾಧ್ಯಮಗಳ ಟಿಆರ್‌ಪಿ ಬೇಟೆ ಹಾಗೂ ರಾಜಕೀಯ ವ್ಯವಸ್ಥೆಗಳು ಒಗ್ಗೂಡಿದ ಫಲವೇ ಆಗಿದೆ.
ಇತರೆಲ್ಲಾ ಕ್ರೀಡೆಗಳ ಜೊತೆಯಲ್ಲಿ ಕ್ರಿಕೆಟನ್ನು ವಿನಾಶದಿಂದ ಉಳಿಸಬೇಕು
ಸಮಗ್ರತೆ, ನ್ಯಾಯಯುತ ಆಟ ಮತ್ತು ಸಾಮೂಹಿಕ ಉದ್ದೇಶಗಳಿಂದ ಗುರುತಿಸಲ್ಪಟ್ಟ ಕ್ರಿಕೆಟ್ ಈಗ ತನ್ನ ನೈಜ ಸೌಂದರ್ಯವನ್ನು ಕಳೆದುಕೊಂಡಿದೆ. ಮನರಂಜನೆಯ ಜಾಗವನ್ನು ಲಾಭ ಆಕ್ರಮಿಸಿದೆ. ತಂಡದ ಕೆಲಸ ಮತ್ತು ಶಿಸ್ತಿನ ಸ್ಥಾನವನ್ನು ವೈಯಕ್ತಿಕ ಬ್ರ್ಯಾಂಡಿಂಗ್ ಮತ್ತು ಪ್ರಾಯೋಜನೆ ಆಕ್ರಮಿಸಿಕೊಂಡಿವೆ. ಕ್ರಿಕೆಟ್ ಕ್ರೀಡೆಯಾಗಿ ಉಳಿಯದೇ ಈಗ ವಿನಾಶದತ್ತ ಸಾಗಿದೆ. ಬಂಡವಾಳಗಾರರು, ಸರಕಾರ ಮತ್ತು ಭ್ರಷ್ಟ ಕ್ರೀಡಾ ಅಧಿಕಾರಿಗಳ ನಡುವಿನ ಅಪವಿತ್ರ ಮೈತ್ರಿಯು ಕ್ರೀಡಾ ಕ್ಷೇತ್ರವನ್ನು ಇಂದು ನಿಯಂತ್ರಿಸುತ್ತಿದೆ. ಕ್ರಿಕೆಟ್ ಸೇರಿದಂತೆ ಎಲ್ಲಾ ಕ್ರೀಡೆಗಳ ಹಿಂದಿನ ಸೊಬಗು, ಇಂದಿನ ಥಳಕು-ಬಳುಕಿನ ಗದ್ದಲದಲ್ಲಿ ಮಸುಕಾಗುತ್ತಿದ್ದಂತೆ, ನಿಜವಾದ ಕ್ರೀಡಾಪ್ರೇಮಿಗಳು ಅದರ ಘನತೆಯನ್ನು ಮರಳಿ ಪಡೆಯುವ ಸಲವಾಗಿ ಶ್ರಮ ವಹಿಸಲು ಇದು ಸಕಾಲ ಎಂದು ಅರಿತು ಮುಂಬರಬೇಕಿದೆ.