Loading..

ಅಮೆರಿಕಾ: ಅಧ್ಯಕ್ಷ ಟ್ರಂಪ್ ನೇತೃತ್ವದಲ್ಲಿ ಶಿಕ್ಷಣ, ಸಂಶೋಧನೆ, ಆರೋಗ್ಯ ಸೇವೆ ಮತ್ತು ಕಲೆ ನಿರ್ನಾಮ!

ಎರಡನೇ ಬಾರಿ ಅಮೆರಿಕಾದಲ್ಲಿ ಅಧಿಕಾರಕ್ಕೆ ಬಂದ ಟ್ರಂಪ್ ಸರ್ಕಾರ, ಮಧ್ಯರಾತ್ರಿಯ ಕಾರಿರುಳಲ್ಲಿ, ಯಾವುದೇ ಸಾರ್ವಜನಿಕ ಚರ್ಚೆಯಿಲ್ಲದೆ, ‘ಬಜೆಟ್ ಕಡಿತ’ ಮತ್ತು ‘ಕೆಸರು ನಿರ್ಮೂಲನೆ’ಯ ಪರದೆಯಡಿಯಲ್ಲಿ ಇನ್ನುಮುಂದೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳು, ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನ ಮತ್ತು ಅಮೆರಿಕಾದ ಹಲವಾರು ಪುರಾತತ್ವ ಶಾಸ್ತ್ರ-ಸಾಂಸ್ಕೃತಿಕ ಪರಂಪರೆಗಳ ಸಂಸ್ಥೆಗಳನ್ನು ಮುಚ್ಚುವುದಾಗಿ ಘೋಷಿಸಿದೆ! ಈ ರೀತಿಯಾಗಿ ಟ್ರಂಪ್ ಆಡಳಿತ, ಇದುವರೆಗೂ ಸರ್ಕಾರದ ಕೆಳಗೆ ಕಾರ್ಯ ನಿರ್ವಹಿಸುತ್ತಿದ್ದ ಶೈಕ್ಷಣಿಕ-ಸಾಮಾಜಿಕ-ಸಾಂಸ್ಕೃತಿಕ-ವೈದ್ಯಕೀಯ ಸಂಸ್ಥೆಗಳಿಗೆ ಅನುದಾನ ನೀಡದೆ, ಅನಧಿಕೃತಗೊಳಿಸುತ್ತಾ ವ್ಯವಸ್ಥಿತವಾಗಿ ಅವನ್ನು ಬುಡಮೇಲು ಮಾಡಲು ಹೊರಟಿದೆ. ಅವನ್ನೆಲ್ಲಾ, ದುಂದುವೆಚ್ಚದ್ದು, ಗಣ್ಯರಿಗೆ ಮಾತ್ರ ಸೇರಿದ್ದು ಅಥವಾ ರಾಜಕೀಯ ಪೂರ್ವಗ್ರಹವುಳ್ಳಂತಹವು ಎಂದು ಕರೆಯುತ್ತಾ ಜನರಲ್ಲಿ ಸಂಶಯದ ಬೀಜ ಬಿತ್ತುತ್ತಿದೆ. ರಾಷ್ಟ್ರೀಯ ಆರೋಗ್ಯ ಸಂಸ್ಥೆಯನ್ನು ವೈದ್ಯಕೀಯ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಕೊಬ್ಬಿದ ಅಧಿಕಾರಶಾಹಿ ಎಂದು ಕರೆದರೆ, ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನವನ್ನು, ಸಾಮಾಜಿಕ ನ್ಯಾಯ ವಿಜ್ಞಾನದ ಎಡಪಂಥೀಯ ವಿಕಸನ ಪೆಟ್ಟಿಗೆ ಎಂದು ಹೀಗಳೆದಿದೆ. ಇತರ ಸಂಸ್ಥೆಗಳನ್ನು ಸಹ ಉದಾರವಾದದ ಪ್ರತಿಧ್ವನಿಗಳು ಎಂದು ಅಪಹಾಸ್ಯ ಮಾಡುತ್ತ ಜನತೆಯ ಆಕ್ರೋಶವನ್ನು ತಣಿಸುವವರೆಗೂ ಬಂಡವಾಳಶಾಹಿ ಮಾಧ್ಯಮಗಳ ಮೂಲಕ ಅವುಗಳ ಲೇವಡಿ ಮಾಡಿ, ಜನರಿಗೆ ತಪ್ಪು ಮಾಹಿತಿ ನೀಡುತ್ತಾ ಜನಾಭಿಪ್ರಾಯವನ್ನು ಅವುಗಳ ವಿರುದ್ಧ ತಿರುಚಿದೆ.
ಸಾರ್ವಜನಿಕ ಶಿಕ್ಷಣಕ್ಕೆ ಕೊಡಲಿಯೇಟು
ಅಮೆರಿಕಾದಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳನ್ನು ರಾಜ್ಯಗಳೇ ನಡೆಸುತ್ತಿದ್ದು, ಕೇಂದ್ರ ಸರ್ಕಾರ ನೀಡುವುದು 13%. ಹಣ ಮಾತ್ರ. ಕೇಂದ್ರ ಶಿಕ್ಷಣ ಇಲಾಖೆ, ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ಸಾಲ ನೀಡಲು, ಬಡ ಮಕ್ಕಳಿಗೆ ನೆರವು ನೀಡಲು ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಇದೀಗ ಟ್ರಂಪ್ ಸರ್ಕಾರ, ಈ ಇಲಾಖೆಯನ್ನು ಮುಚ್ಚುತ್ತಿದೆ. ಟ್ರಂಪ್ ಸ್ವತ: ಶಿಕ್ಷಣ ಇಲಾಖೆ ದುಂದುವೆಚ್ಚದ್ದು, ಅದು ಉದಾರವಾದಿ ಚಿಂತನೆಯಿಂದ ಕುಲಗೆಟ್ಟಿದೆ, ಆದ್ದರಿಂದ ಅದನ್ನು ಮುಚ್ಚುವುದೇ ಲೇಸು ಎಂದು ಸಮರ್ಥಿಸಿಕೊಂಡಿದ್ದಾರೆ. ಅದರಿಂದ ವಿದ್ಯಾರ್ಥಿಗಳಿಗೆ ಒಳ್ಳೆಯದಾಗುತ್ತದೆ ಎಂದು ಸರ್ಕಾರ ಘೋಷಿಸಿದೆ. ಆದರೆ ವಿಮರ್ಶಕರು ಬಡ ಮಕ್ಕಳ ಶಿಕ್ಷಣ ಕುಂಠಿತವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅಮೆರಿಕಾದ ಕಾಂಗ್ರೆಸ್ ಅನುದಾನ ಕಡಿತ ಮಾಡಿ ಮಸೂದೆ ಅಂಗೀಕಾರ ಮಾಡಿದ ನಂತರ ಕೇವಲ ಒಂದು ವಾರದಲ್ಲಿ ಇಲಾಖೆಯ 4000 ಶಿಕ್ಷಕರಲ್ಲಿ ಅರ್ಧದಷ್ಟು ಶಿಕ್ಷಕರು ಕೆಲಸ ಕಳೆದುಕೊಂಡಿದ್ದಾರೆ. ಇದರಿಂದ ಬಡ ಮಕ್ಕಳಿಗೆ ಶಿಕ್ಷಣವಿಲ್ಲ!
ಅಮೆರಿಕಾದ ಫೆಡರಲ್ ಸರ್ಕಾರ ಈ ಹಿಂದೆ ಶಿಕ್ಷಣಕ್ಕೆ ಟೈಟಲ್-1 ಮತ್ತು ಪೆಲ್ ಅನುದಾನಗಳನ್ನು ನೀಡುವ ಮೂಲಕ ಅತೀ ಬಡತನ ಮತ್ತು ಶೈಕ್ಷಣಿಕ ಹಿಂದುಳಿಯುವಿಕೆಗಳ ನಡುವಿನ ಬಂಧವನ್ನು ಮುರಿಯುವ ಉದ್ದೇಶ ಹೊಂದಿತ್ತು. ಟೈಟಲ್ 1 ಅನುದಾನ, ದೇಶದ 2/3ರಷ್ಟು ಸಾರ್ವಜನಿಕ ಶಾಲೆಗಳ-ಕಿಂಡರ್‌ಗಾರ್ಡನ್‌ನಿಂದ 12ನೇ ತರಗತಿಯ-ಬಡ ಮಕ್ಕಳಿಗೆ, 30 ಲಕ್ಷ ವಿಕಲಚೇತನ ಮಕ್ಕಳಿಗೆ, 7,45,000 ವಸತಿಹೀನ ಮಕ್ಕಳಿಗೆ ವರದಾನವಾಗಿತ್ತು. ಕಳೆದ ವರ್ಷ ಈ ರೀತಿ 17 ಶತಕೋಟಿ ಡಾಲರ್ ಹಣ ನೀಡಿದ್ದು, ಇದನ್ನು ಕಡಿತಗೊಳಿಸಿದರೆ, ರಾಜ್ಯಗಳು ಇದನ್ನು ಭರಿಸುವುದು ಅಸಾಧ್ಯ! ಹಾಗೆಯೇ, ಪೆಲ್ ಅನುದಾನ ಸಹ. ಇದರ ಕಡಿತ ಸುಮಾರು 63 ಲಕ್ಷ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮಾರಕವಾಗುತ್ತದೆ. ಒಟ್ಟಾರೆಯಾಗಿ, ಇವೆರಡೂ ಅನುದಾನಗಳನ್ನು ಕಡಿತಗೊಳಿಸಿ, ಕೇಂದ್ರ ಫೆಡರಲ್ ಸರ್ಕಾರ, ಶಿಕ್ಷಣ ನೀಡುವ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಅದನ್ನು ರಾಜ್ಯಗಳ ಮೇಲೆ ಹೇರುವುದರಿಂದ ಅವಕಾಶ ವಂಚಿತ ಲಕ್ಷಾಂತರ ವಿದ್ಯಾರ್ಥಿಗಳನ್ನು ಉನ್ನತ ಮಟ್ಟದ ಶಿಕ್ಷಣ ಪಡೆಯುವುದರಿಂದ ತಡೆದಂತೆ ಆಗುತ್ತದೆ. ಇದನ್ನು ದೇಶದ ಕಾರ್ಮಿಕ ಮತ್ತು ನಾಗರಿಕ ಹಕ್ಕುಗಳ ಕಾರ್ಯಕರ್ತರು ವಿರೋಧಿಸಿದ್ದಾರೆ. ಇದು ಸಾಮಾನ್ಯ ಮಕ್ಕಳ ಶಿಕ್ಷಣಕ್ಕೆ ಕೊಡಲಿಯೇಟು ಹಾಕಿ, ಅದನ್ನು ಕೇವಲ ಉಳ್ಳವರ ಸ್ವತ್ತನ್ನಾಗಿಸುತ್ತದೆ ಎಂದು ಅವರು ಟೀಕಿಸಿದ್ದಾರೆ. ಇದು, ಅಮೆರಿಕಾದ ಶಿಕ್ಷಣರಂಗದಲ್ಲಿ ವಿದ್ಯಾರ್ಥಿಗಳ ಸಮಾನ ಪ್ರವೇಶದ ಬಗ್ಗೆ ಟ್ರಂಪ್ ಮಾಡಿದ್ದ ವಾಗ್ದಾನದ ಅಣಕವಾಗಿದೆಯಷ್ಟೇ. ಇದಕ್ಕೆ ಇರುವ ಇನ್ನೊಂದು ಆಯಾಮವೆಂದರೆ, ಅಮೆರಿಕಾದ ಬಡ ಜನರಲ್ಲಿ ಹೆಚ್ಚಿನವರು ಆಫ್ರಿಕನ್-ಅಮೆರಿಕನ್ ಮತ್ತು ಉಳಿದ ಹಿಂದುಳಿದ ಜನಾಂಗಗಳಾಗಿರುವುದರಿಂದ, ಕೇಂದ್ರ ಶಿಕ್ಷಣ ಇಲಾಖೆಯನ್ನು ಕೈಬಿಡುವುದು ಮತ್ತು ‘ರಾಜ್ಯಗಳಿಗೆ ಅನುದಾನ, ಬ್ಲಾಕ್ ಮಾಡುವುದು ಅಲ್ಲಿಯ ಹಿಂಸಾತ್ಮಕ ಜನಾಂಗೀಯವಾದಿ ಒಡಕನ್ನುಂಟು ಮಾಡುವವರ ಬೆನ್ನು ತಟ್ಟಿದಂತಾಗುತ್ತದೆ. ಜೊತೆಗೆ ಇದು ಶಿಕ್ಷಣದ ಖಾಸಗೀಕರಣಕ್ಕೆ ವೇಗ ನೀಡುತ್ತದೆ. ಸರ್ಕಾರದ ಈ ಕ್ರಮ, ಮುಂದಿನ ಜನಾಂಗಕ್ಕೆ ಶಿಕ್ಷಣದ ಬಾಗಿಲನ್ನು ಮುಚ್ಚುತ್ತದೆ ಹಾಗೂ ಅವರಲ್ಲಿ ವಿವೇಚನಾಶೀಲತೆ ಬೆಳೆಯುವ ಪ್ರಕ್ರಿಯೆಗೆ ತಡೆ ಹಾಕುತ್ತದೆ. ಇದು ಬರ್ಬರ ಬಂಡವಾಳಶಾಹಿ ಶೋಷಣೆಯ ವಿರುದ್ಧದ ಪ್ರಜ್ಞಾವಂತ ಜನರ ಆಂದೋಲನದ ಪ್ರವಾಹವನ್ನು ತಡೆಗಟ್ಟುವ ಹುನ್ನಾರವಾಗಿದೆ.
ಆರೋಗ್ಯಸೇವೆ ಮತ್ತು ಸಂಬಂಧಿತ ಸಂಶೋಧನೆಯಲ್ಲಿ ಕಡಿತ
ಟ್ರಂಪ್‌ನ ಇನ್ನೊಂದು ಮಾರಕ ಹೊಡೆತ ಆರೋಗ್ಯ ಸೇವೆಯ ಮೇಲೆ ಬಿದ್ದಿದೆ. ಇದು ದೇಶವನ್ನು ತೀವ್ರ ಆರೋಗ್ಯ ಸೇವೆಯ ಬಿಕ್ಕಟ್ಟಿಗೆ ತಳ್ಳಿದೆ. ಸಂಶೋಧನೆಗಳಿಗೆ ಕೇಂದ್ರ ಫೆಡರಲ್ ಸರ್ಕಾರದ ನೆರವಿಲ್ಲದೆ, ದೀರ್ಘಕಾಲದ ರೋಗಗಳು, ಬದಲಾದ ಹವಾಮಾನದಿಂದ ಉಂಟಾಗುವ ರೋಗಗಳು, ಮಹಾಮಾರಿಗಳು, ಇವುಗಳನ್ನು ನಿಭಾಯಿಸುವಲ್ಲಿ ಸ್ಥಳೀಯ ಆರೋಗ್ಯ ಇಲಾಖೆಗಳು ಸೋಲುತ್ತಿವೆ. ಇದರಿಂದ ರೋಗಗಳು ಉಲ್ಬಣಿಸುವ ಸಾಧ್ಯತೆ ಹೆಚ್ಚುತ್ತದೆ. ಅಲ್ಲದೆ ಚಿಕಿತ್ಸೆಗಾಗಿ ದೀರ್ಘಕಾಲ ಕಾಯಬೇಕಾಗುತ್ತದೆ. ಜೊತೆಗೆ ಕ್ಯಾನ್ಸರ್, ಹೃದ್ರೋಗ, ಸಾಂಕ್ರಾಮಿಕ ರೋಗಗಳ ಬಗ್ಗೆ ನಡೆಯುತ್ತಿರುವ ಸಂಶೋಧನೆಗೆ ಹೊಡೆತ ಬೀಳುತ್ತದೆ. ಹೊಸ ಚಿಕಿತ್ಸೆಗಳನ್ನು, ವ್ಯಾಕ್ಸಿನ್‌ಗಳನ್ನು ಕಂಡುಹಿಡಿಯಲು ಸಂಶೋಧನೆಗೆ ಧನ ಸಹಾಯ ನೀಡದಿದ್ದರೆ, ವೈದ್ಯಕೀಯ ರಂಗ ಮುನ್ನಡೆ ಸಾಧಿಸಲು ಸುದೀರ್ಘ ಕಾಯಬೇಕಾಗುತ್ತದೆ. ರೋಗಿಗಳು ಸಂಕಷ್ಟಕ್ಕೊಳಗಾಗುತ್ತಾರೆ. ಕಾಯಿಲೆಗಳನ್ನು ತಡೆಗಟ್ಟದಿದ್ದರೆ, ಅವು ಹರಡುತ್ತಾ ಹೆಚ್ಚಿನ ಜನರನ್ನು ಬಾಧಿಸುತ್ತವೆ; ರಾಜ್ಯ ಮತ್ತು ಸ್ಥಳೀಯ ಆರೋಗ್ಯ ಇಲಾಖೆಗಳ ಸಾಮರ್ಥ್ಯ ಕುಂಠಿತವಾಗಿ ಅವು ಸಾರ್ವಜನಿಕ ವೈದ್ಯಕೀಯ ತುರ್ತುಗಳಿಗೆ ಸ್ಪಂದಿಸಲಾಗುವುದಿಲ್ಲ. ಎಚ್‌ಐವಿ ತಡೆಗಟ್ಟುವ ಕಾರ್ಯಕ್ರಮದ ಅನುದಾನ ಕಡಿತದಿಂದ ಈ ರೋಗ ತೀವ್ರವಾಗಿ ಹರಡಬಹುದು. ಅನುದಾನದ ಮೇಲೆ ಅವಲಂಬಿತ ಗ್ರಾಮೀಣ ಆರೋಗ್ಯ ಕ್ಲಿನಿಕ್‌ಗಳು ಈಗಾಗಲೇ ಮುಚ್ಚಿಹೋಗಿವೆ. ಜೊತೆಗೆ ಆರೋಗ್ಯ ಮತ್ತು ಮಾನವ ಸೇವಾ ಕ್ಷೇತ್ರದಲ್ಲಿನ ಉದ್ಯೋಗ ಕಡಿತವೂ ತೀವ್ರವಾಗಿದ್ದು, ಈಗಾಗಲೇ ಕೆಲಸ ಕಳೆದುಕೊಂಡಿರುವ ಸಾವಿರಾರು ಜನರ ಜೊತೆಗೆ, ಈಗ 10,000 ದಷ್ಟು ಪೂರ್ಣಕಾಲಿಕ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಾರೆ. ಈ ಹಿಂದೆ ಆರೋಗ್ಯ ಸೇವೆಯಲ್ಲಿ ಉದ್ಯೋಗದಲ್ಲಿದ್ದ ಒಬ್ಬರು, ಟ್ರಂಪ್‌ನ ಈ ಕ್ರಮವನ್ನು ‘ರಕ್ತಪಾತ’ ಎಂದೂ, ಇನ್ನೊಬ್ಬರು ‘ಇದು ಬಹಳ ಅಮಾನವೀಯವಾದದ್ದು’ ಎಂದು ಖಂಡಿಸಿದ್ದಾರೆ.
ಸಂಶೋಧನೆಗಳಿಗೆ ಕತ್ತರಿ!
ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನದ ಅನುದಾನ ಕಡಿತ, ಸಂಶೋಧನೆಗಳಿಗೆ ಕತ್ತರಿ ಹಾಕಿದೆ. ಇದು ಸರ್ಕಾರಿ ಸ್ವಾಮ್ಯದ ಸಾವಿರಾರು ಸಂಶೋಧನಾ ಸಂಸ್ಥೆಗಳಿಗೆ ಬೀಗ ಹಾಕಿಸುತ್ತದೆ ಮತ್ತು ಖಾಸಗಿ ಬಂಡವಾಳಿಗರಾದ ಎಲೊನ್ ಮಸ್ಕ್ ರಂತಹ ಕೈಗಾರಿಕಾ ದೈತ್ಯರಿಗೆ ಮಣೆ ಹಾಕುತ್ತದೆ; ಇದರಿಂದ, ಸಂಶೋಧನಾ ವಲಯ ಅವರ ಕೈವಶವಾಗಿ ಅತ್ಯಧಿಕ ಲಾಭ ತರುವ ಯೋಜನೆಗಳಲ್ಲಿ ಮಾತ್ರವೇ ಹಣ ಹೂಡಿಕೆಯಾಗುತ್ತದೆ.
ಸಸರ್ಕಾರದ 340 ಬಿ ಕಾರ್ಯಕ್ರಮದ ಅನ್ವಯ, ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳು, ಅತ್ಯಧಿಕ ರಿಯಾಯಿತಿಯಲ್ಲಿ ಔಷಧಗಳನ್ನು ಖರೀದಿಸಿ, ರೋಗಿಗಳಿಗೆ ತಮ್ಮಿಷ್ಟ ಬಂದ ಬೆಲೆಗೆ ಮಾರಾಟ ಮಾಡಿ ಇದರಿಂದ ಸಂಗ್ರಹವಾದ ಹಣವನ್ನು ಉಳಿತಾಯ ಮಾಡಿ ಬಡ ರೋಗಿಗಳಿಗೆ ಕಡಿಮೆ ಬೆಲೆಯಲ್ಲಿ ಔಷಧ ವಿತರಣೆ ಮಾಡುವುದಾಗಿತ್ತು. ಆದರೆ, ತೆರಿಗೆ ವಿನಾಯಿತಿ ಪಡೆದಂತಹ ದೊಡ್ಡ ಆಸ್ಪತ್ರೆಗಳು, ಕ್ಲಿನಿಕ್‌ಗಳು, ಮತ್ತೆ ದೊಡ್ಡ ಔಷಧಿ ಕಂಪನಿಗಳು, ಇದರ ದುರ್ಲಾಭ ಪಡೆದು ಅತ್ಯಧಿಕ ಲಾಭ ಮಾಡಿಕೊಳ್ಳುತ್ತಿವೆ! ಹಾಗಾಗಿ, ಈ ಕಾರ್ಯಕ್ರಮದ ಉದ್ದೇಶ ನೆರವೇರದೆ, ರೋಗಿಗಳು ಮತ್ತು ತೆರಿಗೆದಾರರು ಹೆಚ್ಚಿನ ಹಣ ಪಾವತಿಸುವಂತಾಗಿದೆ.
ಸರ್ಕಾರದ ಈ ಎಲ್ಲಾ ಕ್ರಮಗಳಿಂದಾಗುವ ಆರ್ಥಿಕ ನಷ್ಟ ದಿಗ್ಭ್ರಮೆಗೊಳಿಸುವಂಥಾದ್ದು. ಸಾರ್ವಜನಿಕ ಆರೋಗ್ಯ ಸೇವೆಯ ಕುಸಿತ, ಶೈಕ್ಷಣಿಕ ಮಟ್ಟದ ಕುಸಿತ, ಈಗಾಗಲೇ ಬಿಕ್ಕಟ್ಟಿನಲ್ಲಿರುವ ಬಂಡವಾಳಶಾಹಿ ಆರ್ಥಿಕತೆಯ ಮತ್ತಷ್ಟು ಪತನ, ಇವುಗಳಿಂದ ಮುಂದಿನ ದಶಕದಲ್ಲಿ 450 ದಶಕೋಟಿ ಡಾಲರ್(ರೂ. 40000 ಶತಕೋಟಿಯಷ್ಟು) ನಷ್ಟವಾಗುವ ಅಂದಾಜಿದೆ.
ಹವಾಮಾನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಕತ್ತರಿ
ವಿಶ್ವದಾದ್ಯಂತ ಹವಾಮಾನಕ್ಕೆ ಸಂಬಂಧಿಸಿದಂತೆ, ಭೂಮಿಯ ತಾಪಮಾನ ಹೆಚ್ಚಳದಿಂದ ಆರೋಗ್ಯ ಕ್ಷೇತ್ರದ ಬಿಕ್ಕಟ್ಟು ತೀವ್ರಗೊಳ್ಳುತ್ತಲೇ ಇರುವಾಗ, ಇದನ್ನು ತಡೆಗಟ್ಟಲು ಈ ಹಿಂದೆ ಕೆಲವು ಕಾರ್ಯಕ್ರಮಗಳು ಜಾರಿಯಲ್ಲಿದ್ದವು; ವಾತಾವರಣದ ತಾಪಮಾನ ತೀವ್ರಗತಿಯಲ್ಲಿ ಏರಿದಾಗ ಉಂಟಾಗುವ ಅನಾರೋಗ್ಯ, ಚಳಿಗಾಲದಲ್ಲಿ ಹೆಚ್ಚುವ ಅಸ್ತಮಾ ರೋಗ, ಹೆಚ್ಚುತ್ತಿರುವ ಸಾಂಕ್ರಾಮಿಕ ರೋಗಗಳು, ಪ್ರವಾಹಗಳು, ಅರಣ್ಯಗಳಲ್ಲಿನ ಬೆಂಕಿ, ಮತ್ತೆಮತ್ತೆ ಕಾಡುವ ಚಂಡಮಾರುತಗಳು, ಬರ, ಇವುಗಳಿಂದಾಗುವ ಮಾನಸಿಕ ಅನಾರೋಗ್ಯ, ಇವೆಲ್ಲವನ್ನೂ ವಿಜ್ಞಾನಿಗಳು ಬದಲಾಗುತ್ತಿರುವ ಜಾಗತಿಕ ಹವಾಮಾನದಿಂದಲೇ ಎಂದು ಕಂಡು ಹಿಡಿದು ಈ ಕುರಿತು ಕಾರ್ಯೋನ್ಮುಖರಾಗಿದ್ದರು. ಇದು ಸಾರ್ವಜನಿಕ ಆರೋಗ್ಯ ಸೇವೆಯನ್ನು ಸಮರ್ಪಕವಾಗಿ ರೂಪಿಸುವಲ್ಲಿ ಬಹಳವೇ ನೆರವಾಗಿತ್ತು. ಪಳೆಯುಳಿಕೆ ಇಂಧನದ ಬಳಕೆಯಿಂದಾಗುವ ಭೂ ತಾಪಮಾನ ಹೆಚ್ಚಳದ ವೈಜ್ಞಾನಿಕ ಸಂಶೋಧನೆಯನ್ನು ಅಲ್ಲಗಳೆದಿರುವ ಟ್ರಂಪ್, ಈ ಇಂಧನಕ್ಕೆ ಬದಲಿ ಇಂಧನ ಬಳಸುವ ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿದು, ಪಳೆಯುಳಿಕೆ ಇಂಧನದ ಬಳಕೆ ಮತ್ತು ಗಣಿಗಾರಿಕೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ! ಇದು, ಭೂ ತಾಪಮಾನ ಹೆಚ್ಚಳದಿಂದಾಗುವ ರೋಗಗಳ ತೀವ್ರ ಹೆಚ್ಚಳಕ್ಕೆ ಕಾರಣವಾಗಲಿದೆ ಎಂಬುದು ವೈದ್ಯರನ್ನು, ಸಂಶೋಧಕರನ್ನು ಅತೀವ ಚಿಂತೆಗೀಡು ಮಾಡಿದೆ.
ಬಲಪಂಥೀಯ-ಫ್ಯಾಸೀವಾದಿ ನಿಲುವು
ಅನೇಕ ಕಲಾ ವಸ್ತು ಸಂಗ್ರಹಾಲಯಗಳಲ್ಲಿನ ಕಲಾವಿದರು, ಶಿಕ್ಷಕರು, ಇತಿಹಾಸಕಾರರು ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಸಾರ್ವಜನಿಕ ಶಾಲೆಗಳಲ್ಲಿನ ಕಲಾ ಸಂಬಂಧಿ ಕಾರ್ಯಕ್ರಮಗಳನ್ನು ನಿಲ್ಲಿಸಲಾಗಿದೆ. ರಾಷ್ಟ್ರೀಯ ವಸ್ತು ಸಂಗ್ರಹಾಲಯಗಳ ಬಾಗಿಲು ಮುಚ್ಚಿದ್ದು, ಲಕ್ಷಗಟ್ಟಲೆ ನಾಗರಿಕರು ತಮ್ಮ ಪರಂಪರೆಯನ್ನು ತಿಳಿದುಕೊಳ್ಳುವುದರಿಂದ ವಂಚಿತರಾಗುತ್ತಿದ್ದಾರೆ. 21 ವಸ್ತು ಸಂಗ್ರಹಾಲಯಗಳು ಮತ್ತು ಒಂದು ರಾಷ್ಟ್ರೀಯ ಮೃಗಾಲಯವನ್ನು ಒಳಗೊಂಡಿದ್ದ ಸ್ಮಿತ್‌ಸೋನಿಯನ್ ಸಂಸ್ಥೆಯಲ್ಲಿನ ಶಿಲಾಕೃತಿಗಳನ್ನು, ಸ್ಮಾರಕಗಳನ್ನು ತೆಗೆಯಲು ಆದೇಶಿಸಿರುವ ಟ್ರಂಪ್, ಅವನ್ನು, ತಮ್ಮ ಇತಿಹಾಸವನ್ನು ವಿಕೃತಗೊಳಿಸುವ, ಹಾಗಾಗಿ ಅನುಚಿತ ವೈಚಾರಿಕತೆಯನ್ನು ಪ್ರತಿಪಾದಿಸುವ ನಿರೂಪಣೆಗಳು ಎಂದು ಜರೆದಿದ್ದಾರೆ! ಅಲ್ಲಿ ಪ್ರಸ್ತುತಪಡಿಸಿರುವ ಅಮೆರಿಕಾದ ಜನಾಂಗದ ಇತಿಹಾಸವನ್ನು ಟ್ರಂಪ್ ಅಲ್ಲಗಳೆದಿರುವುದನ್ನು ಇತಿಹಾಸ ತಜ್ಞರು ಆಕ್ಷೇಪಿಸಿದ್ದಾರೆ. ಆದರೂ ಟ್ರಂಪ್ ಸರ್ಕಾರ ಈ ಕಲಾಕೃತಿಗಳನ್ನು ತೆಗೆದುಹಾಕಲು ಕ್ರಮ ಕೈಗೊಳ್ಳುತ್ತಿದೆ ಅಲ್ಲದೆ ಸರ್ಕಾರಿ ಜಾಲತಾಣಗಳಿಂದ ಆಫ್ರಿಕನ್-ಅಮೆರಿಕನ್, ಮತ್ತಿತರ ಅಲ್ಪಸಂಖ್ಯಾತರ ಕುರಿತಾದ ಇತಿಹಾಸವನ್ನು ತೆಗೆದು ಹಾಕಿದೆ. ಇಂತಹ ಕ್ರಮಗಳ ಕುರಿತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಕೈಲ್ ಮೇಸ್, ‘ಫ್ಯಾಸೀವಾದಿ ನಡೆ’ ಎಂದು ಕರೆದಿದ್ದಾರೆ.
ತನ್ನ ತೀವ್ರ ಬಲಪಂಥೀಯ ವಿಚಾರಗಳಿಗೆ ವಿರುದ್ಧವಾಗಿರುವ ಎಲ್ಲಾ ಸಂಸ್ಥೆಗಳನ್ನು ಮುಚ್ಚಲು ಟ್ರಂಪ್ ಆದೇಶ ಹೊರಬಿದ್ದಿದೆ. ಕಲೆ-ವಿಜ್ಞಾನ-ಇತಿಹಾಸದ ವಸ್ತು ಸಂಗ್ರಹಾಲಯಗಳು, ಮೃಗಾಲಯಗಳು, ಸಸ್ಯಶಾಸ್ತ್ರೀಯ ಉದ್ಯಾನವನಗಳು, ಐತಿಹಾಸಿಕ ಸ್ಥಳಗಳು, ಇವೆಲ್ಲವನ್ನೂ ಒಳಗೊಂಡಿರುವಂತಹ, ಅನೇಕಾನೇಕ ಸಾಂಸ್ಕೃತಿಕ-ಶೈಕ್ಷಣಿಕ ಸಂಸ್ಥೆಗಳಿಗೆ ಅನುದಾನ ಕಡಿತಗೊಂಡಿದೆ. ಸಾರ್ವಜನಿಕ, ಶೈಕ್ಷಣಿಕ, ಶಾಲೆಗಳ, ಸಂಶೋಧನಾತ್ಮಕ, ಹೀಗೆ ಎಲ್ಲಾ ತರಹದ ಲೈಬ್ರರಿಗಳಿಗೆ ಅನುದಾನ ಸ್ಥಗಿತಗೊಂಡಿದೆ. ಈ ಮೂಲಕ ಜನರ ಜ್ಞಾನವೃದ್ಧಿಗಿರುವ ಅವಕಾಶಕ್ಕೆ ಕತ್ತರಿ ಹಾಕಲಾಗಿದೆ!
ಟ್ರಂಪ್‌ನ ಯೋಜನೆಯಿಂದ ಬಯಲಿಗೆ ಬಂದಿರುವುದೆಂದರೆ, ಇದು ಕೇವಲ ಮೌಲ್ಯಯುತವಾದುದ್ದನ್ನೆಲ್ಲವನ್ನೂ ನಾಶ ಮಾಡುವ ಹುಚ್ಚಲ್ಲ; ಬದಲಿಗೆ, ಎಲ್ಲದರ ಮೂಲವನ್ನು ಅಳಿಸಿ ಹಾಕಿ ಆಳ್ವಿಕೆ ನಡೆಸುವುದು ಎಂದು. ಇದು, ತಿಳಿವಳಿಕೆಯುಳ್ಳ, ಸಹಾನುಭೂತಿಯುಳ್ಳ, ನಾಗರಿಕ ಸಮಾಜದ ಚಿಂತನೆಯನ್ನೇ ನಾಶಗೈಯುವುದು. ಸಮಾಜ ಕಲ್ಯಾಣ ಯೋಜನೆಗಳಿಗೆ ಮೀಸಲಾಗಿಟ್ಟಿರುವ ಹಣವನ್ನು ಆರ್ಥಿಕತೆಯ ಮಿಲಿಟರೀಕರಣಕ್ಕೆ ಹೆಚ್ಚುವರಿಯಾಗಿ ಕೊಡುವುದೇ ಅವರ ಗುರಿಯಾಗಿದೆ. ಇಂದು ವಿಶ್ವ ಬಂಡವಾಳವಾದ ಮರಣಾಸನ್ನ ಅವಸ್ಥೆಯಲ್ಲಿದ್ದು, ಸಾಮಾಜಿಕ ಬೆಳವಣಿಗೆಯ ಅಜೇಯ ನಿಯಮದ ಪ್ರಕಾರ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ ಅನಿವಾರ್ಯ; ಅದರ ಭೀತಿಯಿಂದ ತತ್ತರಿಸುತ್ತಿರುವ ಬಂಡವಾಳಶಾಹಿಗಳು ಜನರಲ್ಲಿ ಯಾವುದೇ ಆರೋಗ್ಯಕರ ಚಿಂತನೆ, ವಿವೇಚನಾಶೀಲ ಮತ್ತು ಒಗ್ಗೂಡಿಸುವ ಚಿಂತನಾ ಪ್ರಕ್ರಿಯೆ, ಐಕ್ಯತೆ ಮತ್ತು ಸೋದರತಾ ಭಾವ, ಗತ ವೈಭವದ ಪರಂಪರೆ, ಸೂಕ್ಷ್ಮ ಪರಿಜ್ಞಾನ, ಸೃಜನಶೀಲ ಸಾಮರ್ಥ್ಯ, ಚೆಲುವನ್ನು ಪ್ರಶಂಸಿಸುವ, ಮತ್ತದನ್ನು ಬೆಳೆಸುವ ಸಾಮರ್ಥ್ಯ, ಎಲ್ಲದಕ್ಕಿಂತ ಮಿಗಿಲಾಗಿ ಮಾನವನನ್ನಾಗಿಸುವ ಪ್ರಕ್ರಿಯೆ, ಇವುಗಳನ್ನು ಪೋಷಿಸುವ ಎಲ್ಲವನ್ನೂ ನಾಶ ಮಾಡಲು ಹೊರಟಿದ್ದಾರೆ. ಅಮೆರಿಕಾ ಅಥವಾ ಭಾರತ, ಎಲ್ಲೆಡೆಯ ಆಳುವ ಬಂಡವಾಳವಾದ-ಸಾಮ್ರಾಜ್ಯವಾದ ಮತ್ತದರ ಸೇವಕರಿಗೆ ತಮ್ಮ ಕೊನೆ ಗಳಿಗೆಯಲ್ಲಿ ಈ ವ್ಯವಸ್ಥೆಯ ಜೀವವನ್ನು ಹಿಡಿದಿಡಲು ಇರುವ ಮಾರ್ಗ ಇದೊಂದೇ. ಹಾಗಾಗಿಯೇ, ಟ್ರಂಪ್ ಅಥವಾ ಇತರ ದೇಶದಲ್ಲಿನ ಇಂತಹಾ ಆಳ್ವಿಕರು ಮಾನವತೆಯನ್ನು ಬೆಳಗುವ, ತಮ್ಮ ಕ್ರೂರ, ನಿರಂಕುಶ ಪ್ರಭುತ್ವಕ್ಕೆ ಸವಾಲೊಡ್ಡುವ ಎಲ್ಲವನ್ನೂ ನಾಶಗೊಳಿಸಲು ಕಾತುರರಾಗಿರುವುದು.