ಇಂದೋರ್ : `ಸ್ವಚ್ಛ ನಗರ'ದ ಅಡಿಯಲ್ಲಿ ಪ್ರಾಣಾಂತಿಕ ‘ಜಲ’ಧಾರೆ!
ಮಧ್ಯಪ್ರದೇಶದ ಇಂದೋರ್‌ನ ಭಾರತದ ಅತ್ಯಂತ `ಸ್ವಚ್ಛ ನಗರ’ ಎಂಬ ಖ್ಯಾತಿ, ಇತ್ತೀಚೆಗೆ ಹದಗೆಟ್ಟ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಿಂದ ಕುಸಿದಿದೆ. ಇಂದೋರ್‌ನ ಭಗೀರಥಪುರವು ಅತ್ಯಂತ ಪುರಾತನ ಹಾಗೂ ಜನಸಂದಣಿಯ ಪ್ರದೇಶವಾಗಿದ್ದು ಅಲ್ಲಿನ ಮುನ್ಸಿಪಾಲಿಟಿಯ ಕುಡಿಯುವ ನೀರು ಹೊಲಸು ವಾಸನೆಯಿಂದ ಕೂಡಿದ್ದು ಕೆಟ್ಟಬಣ್ಣ ಹೊಂದಿದೆ ಎಂದು ದೀರ್ಘಕಾಲದಿಂದಲೂ ಜನ ದೂರುತ್ತಿದ್ದರು. ಇದೀಗ, ಅಲ್ಲಿನ ಒಳಚರಂಡಿಗಳ ನೀರು ಕುಡಿಯುವ ನೀರಿನೊಂದಿಗೆ ಬೆರೆÀತು ಕಲುಷಿತಗೊಂಡ ಪರಿಣಾಮವಾಗಿ, ಜನರು ತೀವ್ರವಾದ ವಾಂತಿ-ಭೇದಿ, ನಿರ್ಜಲೀಕರಣ, ಸುಸ್ತು, ಹೊಟ್ಟೆನೋವಿನಿಂದ ಬಳಲಿ ಬಹುದೊಡ್ಡ ಸಂಖ್ಯೆಯಲ್ಲಿ ಆಸ್ಪತ್ರೆಗೆ ದಾಖಲಾದರು. ಸಾವು ನೋವುಗಳಿಗೆ ಜೀವ ತೆತ್ತರು!
ಅಲ್ಲಿನ ಆಡಳಿತರೂಡ ಬಿಜೆಪಿ ಸರ್ಕಾರವು ಗಾಢ ನಿದ್ರೆಯಿಂದ ಎಚ್ಚರಗೊಳ್ಳುವಷ್ಟರಲ್ಲಿ, ಕನಿಷ್ಠ 8 ಜನರು ಸಾವನಪ್ಪಿದ್ದರು, ಸರಿಸುಮಾರು 300 ಜನರು ಆಸ್ಪತ್ರೆಗೆ ದಾಖಲಾಗಿದ್ದರು! ಕೇವಲ 10 ದಿನಗಳಲ್ಲಿ 2800 ಮಂದಿ ರೋಗಪೀಡಿತರಾಗಿದ್ದು, ಸಮಸ್ಯೆಯ ತೀವ್ರತೆಯನ್ನು ಬಹಿರಂಗಗೊಳಿಸಿದೆ. ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಮತ್ತು ವೃದ್ಧರು ಸಂತ್ರಸ್ತರಾದರು. ತಾಯಿಯೊಬ್ಬಳು ತನ್ನ ಐದು ತಿಂಗಳ ಮಗುವಿಗೆ ನೀರು ಮಿಶ್ರಿತ ಹಾಲನ್ನುಣಿಸಿದಾಗ ಮಗು ಅಸುನೀಗಿತು. ಆ ತಾಯಿಗೆ ಸುಮಾರು 10 ವರ್ಷಗಳ ನಂತರ ಹುಟ್ಟಿದ ಮಗು ಅದಾಗಿತ್ತು! 26 ಜನವರಿ 2026ರಂದು ದೇಶದಲ್ಲಿ ಒಂದೆಡೆ ಗಣರಾಜ್ಯೋತ್ಸವವನ್ನು ಅತ್ಯಂತ ವೈಭವ ಹಾಗೂ ವಿಜೃಂಭಣೆಯಿಂದ ಆಚರಿಸುತ್ತಿದ್ದರೆ, ಮತ್ತೊಂದೆಡೆ ಕಲುಷಿತ ನೀರಿನಿಂದ ಪ್ರಾಣ ಬಿಡುತ್ತಿದ್ದವರ ಸಂಖ್ಯೆ 25 ರ ಗಡಿ ದಾಟುತ್ತಿತ್ತು!
ಕುಡಿಯುವ ನೀರಿನ ಸರಬರಾಜಿನ ಅವ್ಯವಸ್ಥೆ ಹಾಗೂ ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯವೇ ಈ ದುರಂತಕ್ಕೆ ಪ್ರಮುಖ ಕಾರಣವೆಂದು ತನಿಖೆಯಿಂದ ತಿಳಿದು ಬಂದಿದೆ. ಕುಡಿಯುವ ನೀರಿನ ಮುಖ್ಯ ಪೈಪ್‌ಲೈನ್‌ಗಳು ಸಾರ್ವಜನಿಕ ಶೌಚಾಲಯದ ಅಡಿಯಲ್ಲಿ ಹಾಯ್ದು ಹೋಗಿದ್ದು, ಶೌಚಾಲಯಗಳಿಗೆ ಸಂಬಂಧಿಸಿದಂತೆ ಕಡ್ಡಾಯವಾಗಿ ಇರಬೇಕಿದ್ದ ಸೆಪ್ಟಿಕ್ ಟ್ಯಾಂಕ್‌ಗೆ ಹೊದಿಕೆ ಮತ್ತು ಸೂಕ್ತ ಶೇಖರಣೆಯ ವ್ಯವಸ್ಥೆ ಇಲ್ಲದ ಕಾರಣ, ಶೌಚಾಲಯದ ಹಳೆಯ ಪೈಪ್‌ಲೈನ್ ಸೋರಿಕೆಯಿಂದ ಹೊಲಸು ನೀರು ಕುಡಿಯುವ ನೀರಿನೊಂದಿಗೆ ಬೆರೆತಿದೆ. ಈ ಕಲುಷಿತಗೊಂಡ ನೀರನ್ನೇ ಸಾವಿರಾರು ಮನೆಗಳಿಗೆ ಹರಿಸಲಾಗಿದೆ.
ಕುಡಿಯುವ ನೀರಿನಲ್ಲಿ ಫೀಕಲ್ ಕೋಲಿಫಾರ್ಮ್ (fecal coliform), ಇ ಕೊಲಿ (Ecoli), ಸೂಡೊಮೊನಾಸ್ ಎರುಜಿನೊಸಾ (pseudomonad erugenisa), ಮುಂತಾದ ಜೀವಕ್ಕೆ ಕುತ್ತು ತರುವ ವಿಷಕಾರಕ ಬ್ಯಾಕ್ಟೀರಿಯಾಗಳು ಇದ್ದುದ್ದಾಗಿ ತನಿಖೆಯಿಂದ ತಿಳಿದುಬಂದಿದೆ. ಇಲ್ಲಿನ ಜನರು ದಿನಕ್ಕೆ ಕೇವಲ ಒಂದು ಗಂಟೆ ಮಾತ್ರ ತಮ್ಮ ಕೊಳಾಯಿಗಳಿಂದ ಕುಡಿಯುವ ನೀರನ್ನು ಪಡೆದುಕೊಳ್ಳುತ್ತಿದ್ದುದು. ಅದಾದ ಮೇಲೆ ನೀರಿನ ಹರಿವಿನ ಒತ್ತಡವು ಕಡಿಮೆ ಆಗುತ್ತಿದ್ದರಿಂದ ಕೊಳಾಯಿಗಳಿಂದ ನೀರು ಕ್ರಮೇಣ ನಿಂತು ಹೋಗುತ್ತಿತ್ತು. ಇದು ಸರಿಯಾದ ಸಮಯಕ್ಕೆ ಈ ಸಮಸ್ಯೆಯ ಕಡೆ ಗಮನ ಹರಿಸದೆ ಬಹುಕಾಲದಿಂದಲೂ ಅದನ್ನು ಮುಂದೂಡಿದಿರುವುದನ್ನು ತೋರಿಸುತ್ತದೆ. ಯಾವಾಗ ಕೊಳಾಯಿಗಳಿಂದ ಕಲುಷಿತ ನೀರು ಹರಿಯತೊಡಗಿತೋ ಅದಾಗಲೇ ಸಮಸ್ಯೆ ಎಲ್ಲೆ ಮೀರಿತ್ತು ಎಂದೇ ಹೇಳಬಹುದು. ನೀರಿನ ಗುಣಮಟ್ಟದ ಬಗ್ಗೆ ಅಲ್ಲಿನ ಜನರು ನಿರಂತರವಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು, ಚುನಾಯಿತ ಮಂತ್ರಿಗಳನ್ನು, ಕೌನ್ಸಿಲರ್ ಹಾಗೂ ಮೇಯರ್‌ಗಳನ್ನು ಭೇಟಿ ಮಾಡಿ ತಿಳಿಸಿದ್ದಾಗ್ಯೂ, ಯಾರೊಬ್ಬರೂ ಇಂತಹ ಗಹನವಾದ ಸಮಸ್ಯೆಯ ಬಗ್ಗೆ ಗಮನವನ್ನು ಕೊಡದೆ ಹೋದರು.
ಆದ್ದರಿಂದ ಭಗೀರಥಪುರ ದುರಂತವು ಅಚಾನಕವಲ್ಲ. ಇದೊಂದು ದೀರ್ಘಕಾಲದಿಂದಲೂ ಸರಿಯಾದ ಮೇಲ್ವಿಚಾರಣೆ ವಹಿಸದ ಲೋಪಗಳಿಂದಲೇ ಸಂಭವಿಸಿದ ದುರಂತವಾಗಿದೆ. 1993-94ರಲ್ಲಿ ವಿದೇಶಿ ಸ್ಲಂ ವಿಸ್ತರಣಾ ಪ್ರಾಜೆಕ್ಟ್ ಅಡಿಯಲ್ಲಿ ಈ ಪ್ರದೇಶÀಕ್ಕೆ ಪೈಪ್‌ಗಳನ್ನು ಅಳವಡಿಸಲಾಗಿತ್ತು. ಬಹುತೇಕ ಎಲ್ಲವೂ ಆಸ್‌ಬೆಸ್ಟಾಸ್ ಅಥವಾ ಸಿಮೆಂಟ್ ಪೈಪ್‌ಗಳಾಗಿದ್ದವು. ಅವು ಒಡೆದು ಹೋದಾಕ್ಷಣ ಹಾನಿಕಾರಕ ಅಂಶಗಳು ಬೆರೆತಿವೆ. ಪ್ರಾಜೆಕ್ಟ್ ಉದಯ್(ಫೇಸ್ 3) 2008ರಲ್ಲಿ ನಿಯಮದ ಪ್ರಕಾರ 360 ಎಂಎಲ್‌ಡಿ(ಮಿಲಿಯನ್ ಲೀಟರ್ಸ್ ಪರ್ ಡೇ) ನರ್ಮದಾ ನೀರನ್ನು ಇಂದೋರ್‌ನ ನೀರಿನ ಸರಬರಾಜು ವ್ಯವಸ್ಥೆಗೆ ಸೇರಿಸಲಾಯಿತು. ಆದರೆ ಅದಕ್ಕೆ ಪೂರಕವಾದ ಆಧುನಿಕ ಸಲಕರಣೆಯುಳ್ಳ ಸೌಲಭ್ಯಗಳನ್ನು ಒದಗಿಸದೆ ಇಡೀ ನಗರವನ್ನು ಎರಡು ವಿಭಾಗಗಳನ್ನಾಗಿ ಮಾಡಲಾಯಿತು. ಅತ್ಯಾಧುನಿಕ ಪೈಪ್‌ಲೈನ್ ಒಂದೆಡೆ ಮತ್ತು ಹಳೆಯ ಪೈಪ್‌ಲೈನ್‌ಗಳು ಮತ್ತೊಂದೆಡೆ. ಇದು, ಹೆಚ್ಚುತ್ತಿದ್ದ ಜನಸಂಖ್ಯೆಗೆ ಅನುಗುಣವಾಗಿ ಅವಶ್ಯಕವಿದ್ದ ಒತ್ತಡ ನಿರ್ವಹಣೆಯನ್ನು ಮಾಡಲು ಅಸಮರ್ಥವಾಯಿತು. ನಿರಂತರ ನೀರಿನ ಹರಿವಿಗೆ ಆಧುನಿಕ ನಗರ ಪ್ರದೇಶದಲ್ಲಿ ಅತ್ಯಾಧುನಿಕ ಎಚ್‌ಡಿಪಿಇ(ಹೈ ಡೆನ್ಸಿಟಿ ಪಾಲಿತೀನ್ ಪೈಪ್‌ಲೈನ್)ಗಳನ್ನು ಅಳವಡಿಸಿದರು. ಆದರೆ ಬಡಜನರು ವಾಸವಿದ್ದ ಹಾಗೂ ಹಳೆಯ ಪ್ರದೇಶಗಳಲ್ಲಿ ಇಂತಹ ಸೌಲಭ್ಯಗಳನ್ನು ಒದಗಿಸದೆ ಅವರನ್ನು ವಂಚಿತರನ್ನಾಗಿಸಿದರು. 2018 ರ ಸಿಎಜಿ ಆಡಿಟಿಂಗ್ ಇಂದೋರ್‌ನ ಮುನ್ಸಿಪಾಲಿಟಿ ಕಾರ್ಪೊರೇಶÀನ್ ನೀರನ್ನು ಪರೀಶೀಲನೆಮಾಡಿ ಇದರಲ್ಲಿ ಫೀಕಲ್ ಕೋಲಿಫಾರ್ಮ್ ಮತ್ತು ಬೇರೆ ವಿಷಕಾರಕ ಅಂಶಗಳಿರುವುದನ್ನು ತಿಳಿಸಿದೆ. ಇದು ಎಚ್ಚರಿಕೆಯ ಗಂಟೆಯಾಗಬೇಕಿತ್ತು. ತಕ್ಷಣ ಅವಶ್ಯಕ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು. ಆದರೆ ಬದಲಿ ಪೈಪ್‌ಲೈನ್ ಜೋಡಣೆ ಆಮೆಗತಿಯಲ್ಲಿ ಸಾಗಿತು.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇಂದೋರ್ ಮುನ್ಸಿಪಾಲಿಟಿ ಕಾರ್ಪೊರೇಶನ್, ತನ್ನ ಬಜೆಟ್‌ನ ಸುಮಾರು 25-30% ಅನ್ನು, ನೀರು ಹಾಗೂ ಒಳಚರಂಡಿ ವ್ಯವಸ್ಥೆಗೆ ಮೀಸಲಿಟ್ಟಿದೆ. ಇದರೊಂದಿಗೆ ಎಡಿಬಿ(ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್)ನ ಹಣಕಾಸಿನ ಬೆಂಬಲವೂ ಇದೆ. ಅಮೃತ್-AMRUT(Atal Mission for Rejuvenation and Urban Transformation) ಅನ್ನು 2015 ರಲ್ಲಿ ಬಿಜೆಪಿ ಸರ್ಕಾರ ಪ್ರಾರಂಭಸಿತು. ಇದರ ಮುಖ್ಯ ಉದ್ದೇಶವು ಸರಿಯಾದ ನೀರು ಸರಬರಾಜು ಹಾಗೂ ಒಳಚರಂಡಿ ವ್ಯವಸ್ಥೆ, ಸಾರಿಗೆ ವ್ಯವಸ್ಥೆ ಮತ್ತು ಹಸಿರು ಪ್ರದೇಶವನ್ನು ಖಾತ್ರಿಪಡಿಸುವುದಾಗಿದೆ. ಇದರೊಂದಿಗೆ SPML ಇನ್ಫ ಲಿಮಿಟೆಡ್ ಎಂಬ ಖಾಸಗಿ ಕಂಪನಿಯು 1073 ಕೋಟಿ ರೂ. ಮೊತ್ತದ ಪ್ರಾಜೆಕ್ಟ್ಅನ್ನು ಅಮೃತ್ ಯೋಜನೆ ಅಡಿ ನೀರಿನ ಸರಬರಾಜನ್ನು ಹೆಚ್ಚಿಸುವುದಕ್ಕಾಗೇ ನೀಡಿದೆ. ಇದಾಗಿಯೂ ಇಂತಹ ದುರಂತ!
ಇದಕ್ಕೆ ಸಂಬಂಧಿಸಿದಂತೆ ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ರಾಜ್ಯವು ಹೇಳಿದುದೇನೆಂದರೆ, ‘ಹಳೆಯ ಪೈಪ್‌ಲೈನ್‌ಗಳು ಹಲವೆಡೆ ಮುಂದುವರೆದರೂ ಶೆ.80ರಷ್ಟು ಕೆಲಸ ಪರಿಪೂರ್ಣಗೊಂಡಿದೆ. ಹೊಸ ಪೈಪ್‌ಲೈನ್‌ಗಳನ್ನು ನಿಧಾನವಾಗಿ ಅಳವಡಿಸಲಾಗುತ್ತಿದೆ’ ಎಂದು. ಆದರೆ ನಿಧಾನವಾಗಲು ಕಾರಣವೇನೆಂದು ತಿಳಿಸಲಿಲ್ಲ. ಉಚ್ಛ ನ್ಯಾಯಾಲಯವು ಪ್ರತಿಕ್ರಿಯಿಸಿ, ಒಂದು ಮುಖ್ಯವಾದ ಸಂವಿಧಾನಕ ಅಂಶವನ್ನು ಎತ್ತಿಹಿಡಿದು, ಸ್ವಚ್ಛ ಕುಡಿಯುವ ನೀರು ಆರ್ಟಿಕಲ್ 21 ಅಡಿ ‘ಜೀವದ ಹಕ್ಕುಗಳಲ್ಲಿ ಒಂದಾಗಿದೆ’ ಎಂದಿದೆ. ಹಾಗೆಯೇ ಸಂಬಂಧಪಟ್ಟ ಅಧಿಕಾರಿಗಳಿಗೆ, ಕರ್ತವ್ಯ ನಿರ್ಲಕ್ಷಿಸಿದವರಿಗೆ ಛೀಮಾರಿ ಹಾಕಿ ತಕ್ಷಣವೇ ಜನರಿಗೆ ಸ್ವಚ್ಛ ಕುಡಿಯುವ ನೀರನ್ನು, ಸಂತ್ರಸ್ತರಿಗೆ ಅವಶ್ಯಕ ಆರೋಗ್ಯ ಸೌಲಭ್ಯಗಳನ್ನು ಒದಗಿಸುವಂತೆ ಹಾಗೂ ಪಾರದರ್ಶಕ ತುರ್ತು ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ತಾಕೀತು ಮಾಡಿದೆ.
ಕಲುಷಿತ ನೀರು, ಆಡಳಿತದ ವೈಫಲ್ಯವನ್ನು ಮುನ್ನೆಲೆಗೆ ತಂದರೆ, ಆಳ್ವಿಕರ ಪ್ರತಿಕ್ರಿಯೆ ಅವರ ನೈತಿಕ ದಿವಾಳಿತನವನ್ನು ಬಯಲುಗೊಳಿಸಿದೆೆ. ಸ್ಥಳೀಯ ಎಂಎಲ್‌ಎ ಮತ್ತು ಕ್ಯಾಬಿನೆಟ್ ಸಚಿವ, ಕೈಲಾಶ್ ವಿಜಯವರ್ಗೀಯ ಅವರಿಗೆ, ಸಾರ್ವಜನಿಕವಾಗಿ ಅವರ ಸರ್ಕಾರ ನೀಡಿದ ಭರವಸೆಗಳನ್ನು ಕುರಿತು, ದೊಡ್ಡ ಸಂಖ್ಯೆಯಲ್ಲಿ ಸಂತ್ರಸ್ತ ಕುಟುಂಬಗಳಿಗೆ ಇನ್ನೂ ಪರಿಹಾರ ಸಿಗದಿರುವುದರ ಕಾರಣ ಕೇಳಿದಾಗ, ಅವರು, ತಮ್ಮ ಲೋಪವನ್ನು ಒಪ್ಪಿಕೊಳ್ಳುವ ಬದಲಿಗೆ, ಪ್ರಶ್ನೆಯನ್ನು ಕೇಳಿದವರನ್ನೇ `ಇಂತಹ ಅಸಂಬದ್ಧ ಪ್ರಶ್ನೆಗಳನ್ನು ಕೇಳಬೇಡಿ’ ಎಂದು ರೇಗಿದ್ದಾರೆ! ಜನಸಾಮಾನ್ಯರ ಸಮಸ್ಯೆಗಳೆಡೆಗೆ ಜನಪ್ರತಿನಿಧಿಗಳ ಬೇಜವಾಬ್ದಾರಿತನಕ್ಕೆ ಇಂತಹ ಪ್ರತಿಕ್ರಿಯೆಗಳೇ ಸಾಕ್ಷಿ. ಇವರಿಗೆ ಜನರ ಸಾವುಗಳು ಒಂದು ಲೆಕ್ಕವೇ ಅಲ್ಲ. ಮತ್ತೊಂದೆಡೆ, ಮಧ್ಯಪ್ರದೇಶದಲ್ಲಿ ಈಗ ಚುನಾವಣೆ ಇಲ್ಲದ ಕಾರಣ, ಕೇಂದ್ರ ಸರ್ಕಾರ ನೊಂದವರಿಗೆ ಪರಿಹಾರವಾಗಿ ಒಂದು ಪೈಸೆ ಸಹ ನೀಡಿಲ್ಲ. ಕಣ್ಣೊರೆಸುವ ತಂತ್ರವಾಗಿ ಮಾತ್ರ ರಾಜ್ಯ ಸರ್ಕಾರ ಕೆಲವರ ಅಮಾನತು ಮತ್ತು ವರ್ಗಾವಣೆಯನ್ನು ಮಾಡಿತು. ಆದರೆ ಇದರಿಂದ ಜನಸಾಮಾನ್ಯರಿಗೆ ಬಂದ ಲಾಭವೇನು?
ಭಗೀರಥಪುರ ಒಂದು ಕಾರ್ಮಿಕ ನೆಲೆಯಾಗಿದೆ. ಕಳೆದ 5 ದಶಕಗಳಿಗಿಂತಲೂ ಹೆಚ್ಚುಕಾಲ ಅದು ಬಿಜೆಪಿಯ ಸುಭದ್ರ ಕೋಟೆಯಾಗಿದ್ದರೂ, IMC (ಇಂದೋರ್ ಮುನ್ಸಿಪಾಲ್ ಕಾರ್ಪೊರೇಷನ್) 25 ವರ್ಷಗಳಿಂದಲೂ ಬಿಜೆಪಿಯ ನಿಯಂತ್ರಣದಲ್ಲಿದ್ದರೂ ಕಲುಷಿತ ನೀರಿನ ಸಮಸ್ಯೆ ಇನ್ನೂ ಪರಿಹಾರ ಕಾಣದೆ ಉಳಿದಿರುವುದು ಒಂದು ವಿಪರ್ಯಾಸ!
CGWB (ಸೆಂಟ್ರಲ್ ಗ್ರೌಂಡ್ ವಾಟರ್ ಬೋರ್ಡ್) ನೀಡುವ ವಾರ್ಷಿಕ 2024ರ ವರದಿಯು, ಭಾರತದಲ್ಲಿ 779ರಲ್ಲಿ 440 ಜಿಲ್ಲೆಗಳನ್ನು (ಶೆ.56) ವಿಶ್ಲೇಷಣೆ ಮಾಡಿದೆ. ಅತಿಯಾದ ನೈಟ್ರೇಟ್ ಅಂಶದಿಂದ ಭಾರತದಲ್ಲಿ ಅಂತರ್ಜಲ ಕಲುಷಿತಗೊಳ್ಳುವುದು ಹೆಚ್ಚುತ್ತಿದೆ ಎಂದು ವರದಿಯು ತೋರಿಸಿದೆ. ಹಾಗೆಯೇ ರಾಜಸ್ಥಾನ ಹಾಗೂ ಹರಿಯಾಣದಲ್ಲಿ ಫ್ಲೋರೈಡ್ ಅಂಶ, ಹಾಗೂ ಇತರೆ ಭಾಗಗಳಲ್ಲಿ ಆರ್ಸೆನಿಕ್, ಯುರೇನಿಯಂ, ಕಬ್ಬಿಣ, ಸೀಸಗಳಿಂದಾಗಿ ಹೆಚ್ಚು ಕಲುಷಿತಗೊಂಡಿರುವುದರ ಬಗ್ಗೆ ಎಚ್ಚರಿಸಿದೆ. ಭಾರತದಾದ್ಯಂತ ಆರ್ಸೆನಿಕ್‌ನಿಂದಾಗಿ 660ಲಕ್ಷ ಜನರು ಗಂಗಾ ನದಿ ಪ್ರದೇಶಗಳಲ್ಲಿ ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ. ಹೆಚ್ಚಿನ ನೈಟ್ರೇಟ್ ಅಂಶದಿಂದ ಮಕ್ಕಳಲ್ಲಿ `ಬ್ಲೂ ಬೇಬಿ ಸಿಂಡ್ರೋಮ್’ ಉಲ್ಬಣಗೊಳ್ಳುತ್ತಿದೆ. ನೀರಿನಲ್ಲಿಯ ಯುರೇನಿಯಂ ಮತ್ತು ಭಾರದ ಖನಿಜದ ಅಂಶ, ದೀರ್ಘಾವಧಿಯಲ್ಲಿ ವಿವಿಧ ಅಂಗಾಂಗಗಳ ಹಾಗೂ ನರವ್ಯೂಹದ ಮೇಲೆ ಪರಿಣಾಮ ಬೀರುತ್ತಿವೆ. ಉತ್ತರ ಪ್ರದೇಶದ ಬುಡಾಪುರ್‌ನಿಂದ ಹಿಡಿದು ಒಡಿಶಾದ ಭುವನೇಶ್ವರದವರೆಗೆ ಅಂತರ್ಜಲ ಸದ್ದಿಲ್ಲದೆ ವಿಷಕಾರಿಯಾಗಿ ಪರಿಣಾಮ ಬೀರುತ್ತಿದೆ ಹಾಗೂ ಇದರ ಅತಿ ಹೆಚ್ಚಿನ ಬೆಲೆ ತೆರುತ್ತಿರುವವರು ಬಡ ಕಾರ್ಮಿಕರೇ!
ಭಗೀರಥಪುರದ ದುರಂತವು, ಇಂದೋರ್‌ನ `ಸ್ವಚ್ಛ ನಗರ’ ಎಂಬ ಬಿರುದು ಜನರಿಗೆ ಸ್ವಚ್ಛ ನೀರನ್ನು ಖಾತ್ರಿಪಡಿಸುತ್ತದೆ ಎಂಬ ಗಾಳಿಗೋಪುರವನ್ನು ನುಚ್ಚುನೂರು ಮಾಡಿದೆ. ಕೇವಲ ಸ್ವಚ್ಛ ಬೀದಿಗಳು ಹಾಗೂ ಬಿರುದುಗಳು, ತುಕ್ಕು ಹಿಡಿದ ಪೈಪ್‌ಗಳು, ಬೇಜವಾಬ್ದಾರಿ ಆಡಳಿತ ಮತ್ತು ನಿರ್ದಯ ಸರ್ಕಾರಗಳಿಗೆ ಪರ್ಯಾಯವಲ್ಲ. ಇಂದೋರ್ ದುರಂತ ದೇಶಕ್ಕೆ ಹಿಡಿದ ಒಂದು ಕನ್ನಡಿ! ಇದು ನಮ್ಮೆಲ್ಲರ ಮುಂದೆ ಪ್ರಶ್ನೆಯೊಂದನ್ನು ಮುಂದಿಡುತ್ತದೆ. ಸಾಮಾನ್ಯ ಜನರಿಗೆ ಕನಿಷ್ಠ ಕುಡಿಯುವ ನೀರನ್ನು ಕೊಡದ ಅಭಿವೃದ್ಧಿಯ ಮಹತ್ವವೇನು? ಎಂದು. ಇಂತಹ ಅಭಿವೃದ್ಧಿ ಕೀವುಗಟ್ಟಿದ ಹುಣ್ಣುಗಳ ಮೇಲೆ ಪೌಡರ್ ಮತ್ತು ಸ್ನೋ ಹಾಕಿ ಮರೆಮಾಚಿದಂತಲ್ಲವೇ? ಸ್ವಚ್ಛ ಕುಡಿಯುವ ನೀರು ಐಷಾರಾಮಿ ಅಲ್ಲ. ಇದೊಂದು ಮಾರಾಟದ ವಸ್ತುವೂ ಅಲ್ಲ. ಇದು ಸಾಂವಿಧಾನಿಕ ಹಕ್ಕು. ಡಬಲ್ ಇಂಜಿನ್ ಹೆಗ್ಗಳಿಕೆಯ ಸರ್ಕಾರವು ಜನಸಾಮಾನ್ಯರಿಗೆ ಕನಿಷ್ಠ ಈ ಹಕ್ಕನ್ನೂ ಖಾತ್ರಿಪಡಿಸದೆ ಇರುವುದು `ವಿಕಸಿತ ಭಾರತ’ ಎಂಬುದು ಅದೆಷ್ಟು ಪೊಳ್ಳು ಘೋಷಣೆಯಾಗಿದೆ ಎಂಬುದನ್ನು ಎತ್ತಿ ತೋರಿಸುತ್ತದೆ.
ಇದೊಂದು ಎಚ್ಚರಿಕೆಯ ಗಂಟೆಯಾಗಲಿ! ಸಂವಿಧಾನ ಖಾತ್ರಿಪಡಿಸಿರುವ ನಮ್ಮ ಹಕ್ಕುಗಳಿಗಾಗಿ, ಜನಸಾಮಾನ್ಯರೆಲ್ಲರೂ ಶಕ್ತಿಯುತ ಹೋರಾಟಗಳನ್ನು ನಿರಂತರವಾಗಿ ಕಟ್ಟಿ ಬೆಳೆಸಿ, ಈ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕಿ ಮೂಲಭೂತ ಸೌಕರ್ಯಗಳನ್ನು ಖಾತ್ರಿ ಪಡಿಸುವಂತೆ ಆಗ್ರಹಿಸಬೇಕಿದೆ!