ಫ್ಯಾಸೀವಾದ: ಅಂದು-ಇಂದು (1962, ಜೂನ್ನಲ್ಲಿ ಪ್ರಕಟವಾದ, ಶಿವದಾಸ್ ಘೋಷ್ರವರ ‘ಘಳಿಗೆಯ ಕರೆ’ ಕೃತಿಯಿಂದ, ಇಂದಿಗೂ ಪ್ರಸ್ತುತವಾದ ‘ಫ್ಯಾಸೀವಾದ’ದ ಕುರಿತಾದ ಕೆಲ ಅಂಶಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.)
ಫ್ಯಾಸೀವಾದದ ವಿಶಿಷ್ಟ ಗುಣಲಕ್ಷಣಗಳು
ಫ್ಯಾಸೀವಾದವು ಚಾರಿತ್ರಿಕವಾಗಿ ಹದಗೊಂಡ ಪ್ರತಿಕ್ರಾಂತಿಯ ಒಂದು ಸ್ವರೂಪವಾಗಿದೆ; ಈ ಮೂಲಕ ಬಂಡವಾಳವಾದವು ಒಂದು ಮುಂಜಾಗ್ರತಾ ಕ್ರಮವಾಗಿ ಕ್ರಾಂತಿಯನ್ನು ತಡೆಯಲು ಪ್ರಯತ್ನಿಸುತ್ತದೆ. ಪ್ರಸಕ್ತ ಬಿಕ್ಕಟ್ಟು ಪೀಡಿತ, ಗೊಂದಲದ ಗೂಡಾಗಿರುವ ಹಾಗೂ ಕುಖ್ಯಾತವಾಗಿರುವ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಜನರಲ್ಲಿ ಹೆಚ್ಚುತ್ತಿರುವ ಅಸಮಾಧಾನದ ಸಮ್ಮುಖದಲ್ಲಿ, ಈ ವ್ಯವಸ್ಥೆಯನ್ನು ಕಾಪಾಡಲು ಅದನ್ನು ವಿನ್ಯಾಸಗೊಳಿಸಲಾಗಿದೆ. ಒಂದು ನಿರ್ದಿಷ್ಟ ಸನ್ನಿವೇಶಗಳ ಸಂದಿಗ್ಧ ಕಾಲದಲ್ಲಿ, ಬಂಡವಾಳಶಾಹಿ ಆರ್ಥಿಕ ಸಂಘಟನೆಯ, ರಾಜಕೀಯ ಸಂಸ್ಥೆಯ ಮತ್ತು ಆಡಳಿತ ವ್ಯವಸ್ಥೆಯ ಸಾಮಾನ್ಯ ಸ್ವರೂಪವು, ಉಲ್ಬಣಿಸುತ್ತಿರುವ ಬಂಡವಾಳಶಾಹಿ ಬಿಕ್ಕಟ್ಟನ್ನು ನಿಭಾಯಿಸಲು ವಿಫಲವಾದಾಗ, ಅಲ್ಪಸ್ವಲ್ಪವಾದರೂ ಮಾರುಕಟ್ಟೆಯ ಸ್ಥಿರತೆಯನ್ನು ನಿರ್ವಹಿಸುವುದು ಮತ್ತು ಅತ್ಯಧಿಕ ಲಾಭಗಳಿಸುವುದು ಬಹುತೇಕವಾಗಿ ಅಸಾಧ್ಯವಾದಾಗ, ಬಿಕ್ಕಟ್ಟಿನ ಕಾರಣದಿಂದ ಜನಸಾಮಾನ್ಯರಿಗೆ ಜೀವನದಲ್ಲಿ ಅಭದ್ರತೆಯ ಭಾರಿ ಹೊಡೆತ ಬಿದ್ದು, ಪ್ರಸ್ತುತ ಪರಿಸ್ಥಿತಿಯನ್ನು ಬದಲಾಯಿಸುವ ಅವಶ್ಯಕತೆಯಿದೆಯೆಂದು ಬಂಡವಾಳಿಗರಿಗೆ ಅನಿಸಿದಾಗ, ಅಂತಹ ಪರಿಸ್ಥಿತಿಯಲ್ಲಿ, ಬಂಡವಾಳಶಾಹಿ ಆರ್ಥಿಕತೆಯ ಅತ್ಯಧಿಕ ಲಾಭದ ಮೂಲ ನಿಯಮವನ್ನು ಅತ್ಯಂತ ಪರಿಣಾಮಕಾರಿಯಾಗಿ ಚಾಲ್ತಿಯಲ್ಲಿರಿಸಲು, ಸಂಸದೀಯ ಪ್ರಜಾಸತ್ತೆಯು ವರ್ಗ ಸರ್ವಾಧಿಕಾರದ ಮೇಲೆ ಹೊದಿಸಿರುವ ಎಲ್ಲಾ ಮುಸುಕುಗಳನ್ನು ಬೂರ್ಜ್ವಾಜಿ಼ಯು ಕಿತ್ತೆಸೆಯುತ್ತದೆ. ಈ ಚಾರಿತ್ರಿಕ ಸಂದರ್ಭಗಳು ಫ್ಯಾಸೀವಾದಕ್ಕೆ ಕೆಲವೊಂದು ಸಾರ್ವತ್ರಿಕ ಗುಣಲಕ್ಷಣಗಳನ್ನು ಕೊಡಮಾಡುತ್ತವೆ; ಅವುಗಳೇ ಫ್ಯಾಸೀವಾದದ ವಿಶಿಷ್ಟ ಗುಣಲಕ್ಷಣಗಳು. ಅವು ಪ್ರಮುಖವಾಗಿ, ಆರ್ಥಿಕ ಕೇಂದ್ರೀಕರಣ, ಪ್ರಭುತ್ವದ ಕೈಯಲ್ಲಿ ರಾಜಕೀಯ ಅಧಿಕಾರದ ಗರಿಷ್ಠ ಕ್ರೋಢೀಕರಣ, ಆಡಳಿತದಲ್ಲಿ ಕಠೋರ ದೃಢತೆ, ಇವೇ ಆಗಿವೆ. ಅವುಗಳ ಮೂಲಕ ಪ್ರಭುತ್ವದ ಹಿತಾಸಕ್ತಿಯೊಂದಿಗೆ ಏಕಸ್ವಾಮ್ಯ ಬಂಡವಾಳಿಗರ ಹಿತಾಸಕ್ತಿಯನ್ನು ಹೆಚ್ಚೆಚ್ಚು ಬೆಸೆಯಲು ಮತ್ತು ಅದರೊಂದಿಗೆ ಸಾಂಸ್ಕೃತಿಕ ಅಂಧಶಿಸ್ತು(cultural regimentation) ಅನ್ನು ಬೆಳೆಸಲು ಸಾಧ್ಯವಾಗುತ್ತದೆ. ಕೇಂದ್ರೀಕರಣ, ಕ್ರೋಢೀಕರಣ, ಆಡಳಿತದಲ್ಲಿನ ಕಠೋರತೆ, ಅಂಧಶಿಸ್ತು ಹೇರಿಕೆ ಮತ್ತು ಎರಡೂ ಹಿತಾಸಕ್ತಿಗಳ ವಿಲೀನ – ಇವೆಲ್ಲವುಗಳ ಮಟ್ಟವು ಎಲ್ಲಾ ದೇಶಗಳಲ್ಲೂ ಒಂದೇ ರೀತಿಯಲ್ಲಿರುವುದಿಲ್ಲ. ಅವುಗಳು ನಿರ್ದಿಷ್ಟ ದೇಶದ ಆಂತರಿಕ ಪರಿಸ್ಥಿತಿಗಳು ಹೇಗಿದೆಯೋ ಅವುಗಳ ಮೇಲೆ ನಿಂತಿರುವುದರಿಂದ, ಸಹಜವಾಗಿಯೇ ದೇಶದಿಂದ ದೇಶಕ್ಕೆ ವ್ಯತ್ಯಾಸಗಳು ಇರುತ್ತವೆ.
ಸ್ವರೂಪದ ವಿಷಯದಲ್ಲೂ ಸಹ, ಫ್ಯಾಸೀವಾದದಲ್ಲಿ ಸಿದ್ಧ ಮಾದರಿಗಳಿಲ್ಲ. ಬೇರೆ ಬೇರೆ ದೇಶಗಳಲ್ಲಿ ಅದು ಅಲ್ಲಿಯ ಸ್ಥಳೀಯ ಪರಿಸ್ಥಿತಿಗಳಿಗೆ ಸರಿ ಹೊಂದುವಂತೆ ಬೇರೆ ಬೇರೆ ಸ್ವರೂಪಗಳನ್ನು ಪಡೆದುಕೊಂಡಿದೆ. ಕೆಲವೆಡೆ ಅದು ವ್ಯಕ್ತಿಯ ಸರ್ವಾಧಿಕಾರದ ಸ್ವರೂಪವನ್ನು ಅಳವಡಿಸಿಕೊಂಡಿದೆ; ಇನ್ನೂ ಕೆಲವೆಡೆ ಮಿಲಿಟರಿ ಕೂಟದ ನಿರಂಕುಶ ಆಳ್ವಿಕೆಯ ಸ್ವರೂಪವನ್ನು ಪಡೆದಿದೆೆ; ಇನ್ನೂ ಕೆಲವು ದೇಶಗಳಲ್ಲಿ ಸಂಸತ್ತನ್ನು ಜೀವಂತವಾಗಿರಿಸಿಕೊಂಡರೂ, ಆರ್ಥಿಕ ಹಾಗೂ ರಾಜಕೀಯ ಕೇಂದ್ರೀಕರಣದ ಮೂಲಕ ಅದರ ಅಧಿಕಾರವನ್ನು ಮೊಟಕುಗೊಳಿಸಿ ಪ್ರಜಾಪ್ರಭುತ್ವದ ಮುಖವಾಡವನ್ನು ಧರಿಸಿದೆ. ದ್ವಿಪಕ್ಷೀಯ ಸಂಸದೀಯ ವ್ಯವಸ್ಥೆಯ ಸರ್ಕಾರದ ಮೂಲಕ ‘ಪ್ರಜಾತಂತ್ರ’ದ ಸ್ವರೂಪದಲ್ಲಿ ಫ್ಯಾಸೀವಾದ ಕಾಣಿಸಿಕೊಂಡಿರುವುದು ಖಂಡಿತವಾಗಿಯೂ ಯುದ್ಧ ನಂತರದ ವಿದ್ಯಮಾನ; ಅದಕ್ಕೆ ಚರಿತ್ರೆಯಲ್ಲಿ ಯಾವ ಪೂರ್ವ ನಿದರ್ಶನವೇನೂ ಇಲ್ಲ. ಏಕೆಂದರೆ, ಮೇಲ್ನೋಟದಲ್ಲಿ ಅದು ಪ್ರಜಾತಂತ್ರದಂತೆ ಕಾಣಿಸುವುದರಿಂದ, ಅದೇ ಸಮಯದಲ್ಲಿ ಅದು ಅತ್ಯಧಿಕವಾಗಿ ವಂಚನೆಯನ್ನು ಮಾಡುವಂಥಾದ್ದು. ಹಾಗಾಗಿ, ವಾಸ್ತವದಲ್ಲಿ, ಫ್ಯಾಸೀವಾದವನ್ನು ಅದರ ಸತ್ವದಿಂದಲ್ಲದೆ ಅಥವಾ ಅದರ ವಿಶಿಷ್ಟ ಗುಣಲಕ್ಷಣದಿಂದಲ್ಲದೆ, ಅದರ ಸ್ವರೂಪದಿಂದ ಮಾತ್ರ ಗುರುತಿಸಲು ಪ್ರಯತ್ನಿಸುವ ಬುದ್ಧಿಜೀವಿಗಳು ಎನಿಸಿಕೊಂಡ ಹಲವರನ್ನು ವಂಚಿಸಲು ಅದಕ್ಕೆ ಸಾಧ್ಯವಾಗಿದೆ.
ಫ್ಯಾಸೀವಾದದ ಹಳೆಯ ಪರಿಕಲ್ಪನೆ
ಫ್ಯಾಸೀವಾದದ ವಿಶಿಷ್ಟ ಗುಣಲಕ್ಷಣಗಳು, ಅಂದರೆ, ಆರ್ಥಿಕ ಕೇಂದ್ರೀಕರಣ, ಪ್ರಭುತ್ವದ ಹಿಡಿತದಲ್ಲಿ ರಾಜಕೀಯ ಅಧಿಕಾರದ ಅತ್ಯಧಿಕ ಕ್ರೋಢೀಕರಣ, ಆಡಳಿತದ ಕಠೋರತೆ, ಸಾಂಸ್ಕೃತಿಕ ಅಂಧಶಿಸ್ತು ಮತ್ತು ಏಕಸ್ವಾಮ್ಯ ಬಂಡವಾಳಿಗರ ಹಿತಾಸಕ್ತಿಯೊಂದಿಗೆ ಪ್ರಭುತ್ವದ ಹಿತಾಸಕ್ತಿಯ ವಿಲೀನ – ಇವುಗಳು ಏಷಿಯಾ ಮತ್ತು ಆಫ್ರಿಕಾದ ಹಿಂದುಳಿದ ರಾಷ್ಟ್ರಗಳೂ ಸೇರಿದಂತೆ, ಪ್ರಪಂಚದ ಎಲ್ಲಾ ಬಂಡವಾಳಶಾಹಿ ರಾಷ್ಟ್ರಗಳಲ್ಲೂ ವಿವಿಧ ಮಟ್ಟಗಳಲ್ಲಿ ಗೋಚರವಾಗುತ್ತಿರುವುದರಲ್ಲಿ ಅನುಮಾನವೇ ಇಲ್ಲ. ಹಾಗಾಗಿ, ಈ ಕಾಲಘಟ್ಟದ ಚಾರಿತ್ರಿಕ ಅನುಭವದಿಂದ ಫ್ಯಾಸೀವಾದದ ಬಗ್ಗೆಯಿರುವ ರೂಢಿಗತ ಪರಿಕಲ್ಪನೆಯನ್ನು ಪರಿಷ್ಕರಿಸಬೇಕಾಗುತ್ತದೆ. ಯುದ್ಧಪೂರ್ವ ದಿನಗಳಲ್ಲಿ, ಇಟಲಿ ಮತ್ತು ಜರ್ಮನಿ ದೇಶಗಳೆರಡೂ ವಸ್ತುಶಃ ವಸಾಹತುಗಳಿಲ್ಲದ ಅಭಿವೃದ್ಧಿ ಹೊಂದಿದ ಬಂಡವಾಳಶಾಹಿ ದೇಶಗಳಾಗಿದ್ದವು; ಅಲ್ಲಿ ಫ್ಯಾಸೀವಾದ ಸ್ಥಾಪನೆಯಾದ ಮೇಲೆ, ಪ್ರಬಲ ಬಂಡವಾಳಶಾಹಿ ರಾಷ್ಟ್ರಗಳಲ್ಲಿ ಮಾತ್ರ ಫ್ಯಾಸೀವಾದವು ಬೆಳೆದು ವೃದ್ಧಿಹೊಂದಲು ಸಾಧ್ಯ ಎನ್ನುವ ವಿಚಾರವು ನೆಲೆಗೊಂಡಿತು. ತೀವ್ರ ಮಾರುಕಟ್ಟೆ ಅಭಾವಕ್ಕೆ ಒಳಗಾಗಿದ್ದು, ಬಲಿಷ್ಠ ಮಿಲಿಟರಿ ಬಲ ಹೊಂದಿದ್ದು, ಬಹಳವೇ ಅಭಿವೃದ್ಧಿಗೊಂಡಿರುವ ಬಂಡವಾಳಶಾಹಿ ಆರ್ಥಿಕತೆ ಫ್ಯಾಸೀವಾದವನ್ನು ಸ್ಥಾಪಿಸಲು ಪ್ರಮುಖ ಅವಶ್ಯಕತೆಯೆಂದು ಪರಿಗಣಿಸಲಾಗಿತ್ತು. ಏಷಿಯಾ ಮತ್ತು ಆಫ್ರಿಕಾಗಳಲ್ಲಿ ಆರ್ಥಿಕವಾಗಿ ಹಾಗೂ ಮಿಲಿಟರಿಯಲ್ಲಿ ದುರ್ಬಲವಾದ ಕೆಲವು ದೇಶಗಳಲ್ಲಿ ಹೆಚ್ಚುತ್ತಿರುವ ಫ್ಯಾಸೀವಾದೀಕರಣದ ಪ್ರವೃತ್ತಿ ಮತ್ತು ಅಂತಹ ಬೇರೆ ಕೆಲವು ದೇಶಗಳಲ್ಲಿ ಮಿಲಿಟರಿ ಹಾಗೂ ಫ್ಯಾಸೀವಾದಿ ಸರ್ವಾಧಿಕಾರದ ಸ್ಥಾಪನೆ, ಇವು, ಈ ಹಳೆಯ ವ್ಯಾಖ್ಯಾನವು ಇಂದಿಗೆ ಸರಿಹೊಂದುವುದಿಲ್ಲ ಎಂಬುದನ್ನು ಸಾಬೀತುಪಡಿಸಿವೆ.
ಫ್ಯಾಸೀವಾದ, ಜನತೆ ಮತ್ತು ಜನ ಚಳುವಳಿ
ಫ್ಯಾಸೀವಾದವು ಬಂಡವಾಳಶಾಹಿ ವರ್ಗದ ನಗ್ನ ಸರ್ವಾಧಿಕಾರ; ಈ ವ್ಯಾಖ್ಯಾನದಿಂದ, ಫ್ಯಾಸೀವಾದಕ್ಕೆ ಅಧಿಕಾರದಲ್ಲಿ ಉಳಿಯಲು ಇರುವ ಒಂದೇ ಒಂದು ಮಾರ್ಗವೆಂದರೆ, ಜನಸಮೂಹದ ನಿರ್ದಯ ದಮನ ಎಂದು ಕೆಲವರು ತೀರ್ಮಾನಿಸುತ್ತಾರೆ.
ಮೊದಲನೇ ವಿಶ್ವಯುದ್ಧದ ಸಮಯದಲ್ಲಿ ಮತ್ತು ಆನಂತರದ ಕಾಲಘಟ್ಟದಲ್ಲಿ, ಫ್ಯಾಸೀವಾದವು ವಿಶ್ವದಲ್ಲೇ ಮೊಟ್ಟಮೊದಲ ಬಾರಿಗೆ ಇಟಲಿ ಹಾಗೂ ಜರ್ಮನಿಯಲ್ಲಿ ತಲೆಯೆತ್ತಲು ಪ್ರಯತ್ನಿಸುತ್ತಿದ್ದ ಪ್ರಾರಂಭಿಕ ಹಂತದಲ್ಲಿ ಅಂತಹ ವಿಚಾರ ವಾಸ್ತವದಲ್ಲಿ ಪ್ರಚಲಿತವಾಗಿತ್ತು. ಆಗ ಫ್ಯಾಸೀವಾದಿಗಳನ್ನು ಹಿಂಸಾನಂದದಿಂದ ಜನರನ್ನು ತುಳಿಯುವ ರಕ್ತಪಿಶಾಚಿಗಳು ಎನ್ನುವಂತೆ ಚಿತ್ರಿಸಲಾಗಿತ್ತು. ಆದರೆ ವಾಸ್ತವ ಸಂಗತಿಗಳು ಇದಕ್ಕೆ ವಿರುದ್ಧವೆಂದು ಸಾಬೀತಾದಾಗ, ಪ್ರಜ್ಞಾವಂತಿಕೆಯಿಲ್ಲದ ಜನರು ಇದು ಫ್ಯಾಸೀವಾದಿಗಳ ಬಗ್ಗೆ ಕಮ್ಯುನಿಸ್ಟರ ದೂಷಣೆಯೆಂದು ತಿಳಿದು, ಅದಕ್ಕೆ ಕೋಪದಿಂದಲೇ ಪ್ರತಿಕ್ರಿಯಿಸಿದರು. ಅವರ ಕೋಪವನ್ನು ಕಮ್ಯುನಿಸ್ಟರ ವಿರುದ್ಧ ಬಳಸಿಕೊಂಡ ಫ್ಯಾಸೀವಾದಿಗಳು, ಕಮ್ಯುನಿಸ್ಟರನ್ನು ದೈಹಿಕವಾಗಿ ಮುಗಿಸಲು ತಮ್ಮ ಅಚ್ಚುಕಟ್ಟಾದ ಯೋಜನೆಯೊಂದಿಗೆ ಮುನ್ನಡೆದರು.
ಫ್ಯಾಸೀವಾದವು ಯಾವಾಗಲೂ ಮತ್ತು ಎಲ್ಲಾ ಕಡೆಯೂ ದಮನ ಹಾಗೂ ಮನವೊಲಿಸುವ ಅಥವಾ ವಂಚನೆಯ ದ್ವಿಮುಖ ನೀತಿಯನ್ನು ಅಳವಡಿಸಿಕೊಳ್ಳುತ್ತದೆ. ಜನತೆಯ ನಿರ್ದಯ ದಮನಕ್ಕಿಂತಲೂ, ‘ರಾಷ್ಟ್ರೀಯ ಮರುನಿರ್ಮಾಣ’ಕ್ಕಾಗಿ ಫ್ಯಾಸೀವಾದಿ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ನಿರ್ವಹಿಸಲು ಸಿದ್ಧರಿರುವವರನ್ನು ಸ್ವಯಂಸೇವಕರಾಗಿ ತನ್ನೆಡೆಗೆ ಗೆದ್ದುಕೊಳ್ಳುವುದೇ ಅದರ ಗುರಿ. ತನ್ನ ಬೆಂಬಲಕ್ಕೆ ತನ್ನೊಡನೆ ಸಹಕರಿಸುವ ಜನಶಕ್ತಿಯಲ್ಲದಿದ್ದರೆ ಫ್ಯಾಸೀವಾದ ಉಳಿಯಲಾರದು. ಹಾಗಾಗಿ, ಫ್ಯಾಸೀವಾದವು ಸೋಷಲ್ ಡೆಮಾಕ್ರೆಟಿಕ್ ಯೋಜನೆಗಳನ್ನು ಅಳವಡಿಸಿಕೊಳ್ಳುತ್ತದೆ, ಜನರಿಗೆ ಸಣ್ಣಪುಟ್ಟ ಆರ್ಥಿಕ ರಿಯಾಯಿತಿಗಳನ್ನು ಕೊಡುತ್ತದೆ, ಬಂಡವಾಳಶಾಹಿ ಆರ್ಥಿಕತೆಯಲ್ಲಿರುವ ಅರಾಜಕತೆಯನ್ನು ಮತ್ತು ಅಲ್ಲಿಂದ ಹರಿದು ಬರುವ ಜೀವನದ ಅಭದ್ರತೆಯನ್ನು-ನಿರುದ್ಯೋಗ ಮುಂತಾದ ಸಮಸ್ಯೆಗಳನ್ನು-ನಿಯಂತ್ರಿಸಲು ಪ್ರಯತ್ನಿಸುತ್ತದೆ. ಬಂಡವಾಳಶಾಹಿ ವರ್ಗದ ಒಟ್ಟಾರೆ ಹಿತಾಸಕ್ತಿಯನ್ನು ಕಾಪಾಡುವ ಪ್ರಯತ್ನದಲ್ಲಿ, ಒಬ್ಬೊಬ್ಬ ಬಂಡವಾಳಶಾಹಿಯ ಮೇಲೆ ಮತ್ತು ಅವರ ಅರಾಜಕ ಉತ್ಪಾದನೆಯ ಸ್ವಾತಂತ್ರ್ಯ ದ ಮೇಲೆ ಅದು ನಿರ್ಬಂಧವನ್ನೂ ಹೇರುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಫ್ಯಾಸೀವಾದಿ ಪ್ರಭುತ್ವವು ನಾಮಕಾವಾಸ್ತೆ ಬೂರ್ಜ್ವಾ ಕಲ್ಯಾಣ ರಾಜ್ಯದ ಸ್ಥಾನವನ್ನೂ ಪಡೆದುಕೊಳ್ಳುತ್ತದೆ. ಇಂತಹ ನಾಮಕಾವಸ್ತೆ ಕಲ್ಯಾಣ ಕಾರ್ಯಗಳ ಜೊತೆಗೆ, ಕ್ರಾಂತಿಕಾರಿ ವಿಚಾರಗಳನ್ನು ನಿರ್ಮೂಲನೆ ಮಾಡಲೆಂದು ಅದು ಅವಿರತವಾಗಿ ವೈಚಾರಿಕ ಸಮರಗಳನ್ನು ನಡೆಸುತ್ತದೆ. ಮತ್ತೆ, ಇಂತಹ ಕ್ರಮಗಳನ್ನು ಬಂಡವಾಳಶಾಹಿ ವಿರೋಧಿ ಹಾಗೂ ಜನಪರವೆಂದು ಭಾವಿಸಿಕೊಂಡು, ಫ್ಯಾಸೀವಾದಿಗಳಿಗೆ ತಮ್ಮ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗಲು, ಪ್ರಜ್ಞಾವಂತಿಕೆಯಿಲ್ಲದ ಜನರು ತಮ್ಮ ಉತ್ಸಾಹಭರಿತ ಬೆಂಬಲ ನೀಡುತ್ತಾರೆ; ಆಗ ಫ್ಯಾಸೀವಾದಿಗಳು ಕಮ್ಯುನಿಸಂ ಅನ್ನು ವೈಚಾರಿಕವಾಗಿ ಮತ್ತು ಕಮ್ಯುನಿಸ್ಟರನ್ನು ದೈಹಿಕವಾಗಿ ನಿರ್ಮೂಲನೆ ಮಾಡಲು ತಮ್ಮೆಲ್ಲಾ ಶಕ್ತಿಯನ್ನು ಒಗ್ಗೂಡಿಸುತ್ತಾರೆ. ಕಮ್ಯುನಿಸಂ ವಿರುದ್ಧದ ತನ್ನ ಯುದ್ಧದಲ್ಲಿ ಫ್ಯಾಸೀವಾದವು ಸೋಷಲ್ ಡೆಮಾಕ್ರೆಸಿ, ರಾಷ್ಟ್ರೀಯ ಅಂಧಾಭಿಮಾನ ಮತ್ತು ನಿಗೂಢತಾವಾದಗಳ ವಿಚಿತ್ರ ಸಮ್ಮಿಶ್ರಣವಾದ ತನ್ನದೇ ಆದ ಫ್ಯಾಸೀವಾದಿ ಸಂಸ್ಕೃತಿಯನ್ನು ಪ್ರತಿಪಾದಿಸುತ್ತದೆ.
ಫ್ಯಾಸೀವಾದ ಮತ್ತು ಸಂಸ್ಕೃತಿ
ಫ್ಯಾಸೀವಾದವು ಆಧ್ಯಾತ್ಮಿಕತೆ ಹಾಗೂ ವಿಜ್ಞಾನದ ಒಂದು ವಿಚಿತ್ರ ಸಮ್ಮಿಶ್ರಣ. ಫ್ಯಾಸೀವಾದಿ ಪ್ರಭುತ್ವ, ತನ್ನ ಆರ್ಥಿಕ ಹಾಗೂ ಮಿಲಿಟರಿ ಶಕ್ತಿಯನ್ನು ಬೆಳೆಸುವ ಪ್ರಯತ್ನದಲ್ಲಿ ವಿಜ್ಞಾನದ ತಾಂತ್ರಿಕ ಅಂಶಗಳನ್ನು ಅಳವಡಿಸಿಕೊಳ್ಳುವುದು ಮತ್ತು ಶೋಷಕ ಬಂಡವಾಳಶಾಹಿ ವ್ಯವಸ್ಥೆ ಹಾಗೂ ಇಂದಿನ ಸಮಾಜದೊಂದಿಗೆ ಅಂಟಿಕೊಂಡಿರುವ ಕೆಡುಕುಗಳಾದ ಎಲ್ಲಾ ಅನಿಷ್ಟಗಳಿಗೂ, ಸರ್ವರೋಗ ಸಂಹಾರಕ ಎನ್ನುವಂತೆ ವಿಜ್ಞಾನ ವಿರೋಧಿ ಮತಾಂಧತೆ ಹಾಗೂ ಭಾವನಾವಾದಿ ಆಚರಣೆಗಳನ್ನು ಹರಡುವುದು – ಇವೆರಡೂ ಜೊತೆಜೊತೆಯಾಗಿ ರಾಷ್ಟ್ರೀಯ ಸಂಸ್ಕೃತಿ ಹಾಗೂ ಪರಂಪರೆಯ ಹೆಸರಿನಲ್ಲಿ ಇರುತ್ತವೆ. ಹೀಗೆ, ಫ್ಯಾಸೀವಾದಿ ಸಂಸ್ಕೃತಿಯು ವೈಜ್ಞಾನಿಕ ಸತ್ಯ ಮತ್ತು ಭ್ರಾಮಕ ಅಂಶಗಳ ವಿಚಿತ್ರ ಸಮ್ಮಿಶ್ರಣ. ಪ್ರಾಕೃತಿಕ ಪ್ರಕ್ರಿಯೆಗಳ ಕುರಿತಾದ ಫ್ಯಾಸೀವಾದದ ಅಭಿಪ್ರಾಯಗಳಲ್ಲಿ ವೈಜ್ಞಾನಿಕ ಅಂಶ ಬಲವಾಗಿದ್ದರೆ, ಸಾಮಾಜಿಕ ಪ್ರಕ್ರಿಯೆಗಳ ಬಗ್ಗೆ ಅದರ ಅಭಿಪ್ರಾಯಗಳಲ್ಲಿ ಭ್ರಾಮಕ ಅಂಶ ಬಲವಾಗಿರುತ್ತದೆ. ಜನತೆಯ ಮಾನಸಿಕತೆಯನ್ನು ಕಾರ್ಯಕಾರಣ ಸಂಬಂಧದ ವೈಜ್ಞಾನಿಕ ಪಥದಿಂದ ಕುರುಡು ನಂಬಿಕೆ, ಪೂರ್ವಕಲ್ಪನೆ ಹಾಗೂ ನಿಗೂಢತಾವಾದದ ಕುರುಡುಗಲ್ಲಿಯೆಡೆಗೆ ತಿರುಗಿಸುತ್ತಾ, ಅಂತಿಮವಾಗಿ ಸಾಮಾಜಿಕ ಕ್ರಿಯೆಯ ಬಗ್ಗೆ ತಿರಸ್ಕಾರ ಬೆಳೆಸುವುದೇ ಅದರ ಗುರಿ. ತನ್ನ ಅವೈಜ್ಞಾನಿಕ, ಭ್ರಾಮಕ ಸಾಮಾಜಿಕ ದೃಷ್ಟಿಕೋನಕ್ಕೆ ಅನುಗುಣವಾಗಿ ಫ್ಯಾಸೀವಾದವು, ಸಮಾಜದ ಬೆಳವಣಿಗೆಯ ಮೂಲ ಚಾಲಕ ಶಕ್ತಿಯಾಗಿರುವ ವರ್ಗ ಸಂಘರ್ಷದ ಸಾಮಾಜಿಕ-ವೈಜ್ಞಾನಿಕ ನಿಯಮವನ್ನು ತಿರಸ್ಕರಿಸುತ್ತದೆ. ಮತ್ತದರ ಬದಲಿಗೆ, ವರ್ಗ ಸೌಹಾರ್ದತೆ ಹಾಗೂ ವರ್ಗ ಸಹಯೋಗದ ತತ್ವವನ್ನು ಪ್ರತಿಪಾದಿಸುತ್ತದೆ. ನಿಜಾರ್ಥದಲ್ಲಿ, ಫ್ಯಾಸೀವಾದಿ ಸಂಸ್ಕೃತಿಯಲ್ಲಿ ವರ್ಗರಹಿತ ಮತ್ತು ವರ್ಗಮೀರಿದ ವಿಚಾರಗಳು ಪ್ರಬಲವಾಗಿರುತ್ತವೆ.
ವರ್ಗ ಸಂಘರ್ಷದ ವೈಚಾರಿಕತೆ ಮತ್ತು ಕಾರ್ಮಿಕವರ್ಗದ ಅಂತರರಾಷ್ಟ್ರೀಯವಾದದ ವಿರುದ್ಧ ಜನ ಸಾಮಾನ್ಯರ ಮನಸ್ಸಿನಲ್ಲಿ ವಿಷ ತುಂಬಲು ಸದಾ ಬೂರ್ಜ್ವಾಜಿ಼ಗಳ ಕೈಯಲ್ಲಿರುವ ಪ್ರಬಲ ಅಸ್ತ್ರವೆಂದರೆ ರಾಷ್ಟ್ರೀಯ ಅಂಧಾಭಿಮಾನ. ಫ್ಯಾಸೀವಾದಿಗಳು ತಮ್ಮ ಗುರಿಯನ್ನು ಮುಟ್ಟಲು ಇದನ್ನು ತುಂಬಾ ಚೆನ್ನಾಗಿ ಬಳಸಿಕೊಳ್ಳುತ್ತಾರೆ.
ಬೂರ್ಜ್ವಾಜಿ಼ಗಳು ಬೋಧಿಸುವ ಪ್ರತಿಗಾಮಿ ರಾಷ್ಟ್ರವಾದ ಮತ್ತು ಜನತೆಯ ದೇಶಪ್ರೇಮಗಳೆರಡೂ ಒಂದೇ ಅಲ್ಲ ಎನ್ನುವುದನ್ನು ನೆನಪಿನಲ್ಲಿಡಬೇಕು. ಅವುಗಳು ಸತ್ವ ಮತ್ತು ಗುಣಗಳಲ್ಲಿ ವಿಭಿನ್ನ. ಜನತೆಯ ದೇಶಪ್ರೇಮಕ್ಕೆ ಕಾರ್ಮಿಕವರ್ಗದ ಅಂತರರಾಷ್ಟ್ರೀಯವಾದದ ವೈಚಾರಿಕತೆಯೊಂದಿಗೆ ಯಾವ ಘರ್ಷಣೆಯೂ ಇಲ್ಲ; ಬದಲಿಗೆ, ಇಂದು ಕಾರ್ಮಿಕವರ್ಗದ ಅಂತರರಾಷ್ಟ್ರೀಯವಾದವನ್ನು ಎತ್ತಿ ಹಿಡಿಯದವರು ನಿಜವಾದ ದೇಶಪ್ರೇಮಿಯಾಗಲು ಸಾಧ್ಯವಿಲ್ಲ.
ಆದರೆ, ಪ್ರತಿಗಾಮಿ ಬೂರ್ಜ್ವಾ ರಾಷ್ಟ್ರವಾದವು ಕಾರ್ಮಿಕವರ್ಗದ ಅಂತರರಾಷ್ಟ್ರೀಯವಾದದ ವೈಚಾರಿಕತೆಯೊಂದಿಗೆ ಹೊಂದಿಕೆಯಾಗುವುದಿಲ್ಲ. ಜೊತೆಗೆ, ಪ್ರತಿಗಾಮಿ ಬೂರ್ಜ್ವಾ ರಾಷ್ಟ್ರವಾದವು ಬೂರ್ಜ್ವಾ ವಿಶ್ವ ದೃಷ್ಟಿಕೋನದ ಅಭಿವ್ಯಕ್ತಿಯಾಗಿದ್ದು, ಬೂರ್ಜ್ವಾಜಿ಼ಯ ಹಿತಾಸಕ್ತಿಯಲ್ಲಿ ಜನತೆಯ ದೇಶಪ್ರೇಮದ ಭಾವನೆಗಳನ್ನು ದುರ್ಬಳಕೆ ಮಾಡಿಕೊಳ್ಳಲು ಶೋಷಕರ ಕೈಯಲ್ಲಿರುವ ಅಸ್ತ್ರ; ಆದರೆ, ಕಾರ್ಮಿಕವರ್ಗದ ಅಂತರರಾಷ್ಟ್ರೀಯವಾದದ ವೈಚಾರಿಕತೆಯಿಂದ ಮಾರ್ಗದರ್ಶನ ಪಡೆದ ದೇಶಪ್ರೇಮವು ಬಂಡವಾಳವಾದ-ಸಾಮ್ರಾಜ್ಯವಾದದ ಶೋಷಕ ವ್ಯವಸ್ಥೆಯಿಂದ ವಿಮುಕ್ತರಾಗಲು ಶೋಷಿತ ಜನತೆಯ ಕೈಯಲ್ಲಿರುವ ಪ್ರಬಲ ಅಸ್ತ್ರ. ಪ್ರತಿಗಾಮಿ ಬೂರ್ಜ್ವಾ ರಾಷ್ಟ್ರವಾದವು ಸಾಮಾಜಿಕ ಪ್ರಗತಿಗೆ ಅಡ್ಡಗೋಡೆಯಾದ ಅಳಿಯುತ್ತಿರುವ ಬಂಡವಾಳಶಾಹಿ ವ್ಯವಸ್ಥೆಯನ್ನು ಮುಂದುವರೆಸುವ ಸ್ವಾರ್ಥಪರ ಬೂರ್ಜ್ವಾ ಹಿತಾಸಕ್ತಿಯಿಂದ ಹುಟ್ಟಿದರೆ, ಕಾರ್ಮಿಕವರ್ಗದ ಅಂತರರಾಷ್ಟ್ರೀಯವಾದದ ವೈಚಾರಿಕತೆಯಿಂದ ಬಲ ಪಡೆದುಕೊಂಡ ದೇಶಪ್ರೇಮವು ಜನರೆಡೆಗಿನ ನಿಜವಾದ ಪ್ರೀತಿಯ ಚಿಲುಮೆಯಿಂದ ಚಿಮ್ಮಿ ಬರುತ್ತದೆ ಮತ್ತು ಸಾಮಾಜಿಕ ಪ್ರಗತಿಯ ಎಲ್ಲಾ ಅಡ್ಡಗೋಡೆಗಳನ್ನು ಧ್ವಂಸ ಮಾಡುವ ಗುರಿ ಹೊಂದಿರುತ್ತದೆ. ಹಾಗಾಗಿ, ಫ್ಯಾಸೀವಾದಕ್ಕೆ ಜನರ ನೈಜ ದೇಶಪ್ರೇಮಿ ಭಾವನೆಗಳನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ.
ಫ್ಯಾಸೀವಾದಿಗಳು ಜನರ ಮುಂದಿಡಲು ಪ್ರತಿಪಾದಿಸುತ್ತಿರುವ ವರ್ಗ ಸೌಹಾರ್ದತೆ, ಎಲ್ಲಾ ವರ್ಗಗಳ ಒಗ್ಗಟ್ಟು ಅಥವಾ ವರ್ಗಗಳನ್ನು ಮೀರಿದ ರಾಷ್ಟ್ರೀಯ ಹಿತಾಸಕ್ತಿಯ ವಿಚಾರಗಳಿಗೊಂದು ಮೂರ್ತ ಅಭಿವ್ಯಕ್ತಿ ಬೇಕು. ಅದಕ್ಕಾಗಿಯೇ ಫ್ಯಾಸೀವಾದವು ಕೆಲವೊಮ್ಮೆ ಅತಿಮಾನವನ ಅಂದರೆ ರಾಷ್ಟ್ರದ ಹಂಬಲ ಹಾಗೂ ಹಿತಾಸಕ್ತಿಗಳ ಸಾಕಾರ ರೂಪವಾದ ಅತಿಮಾನವನ ಪರಿಕಲ್ಪನೆಯನ್ನು ಪ್ರಚುರಪಡಿಸುತ್ತದೆ. ಹಾಗಾಗಿ, ಬಂಡವಾಳವಾದವು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹೆಚ್ಚೆಚ್ಚು ನಿರಂಕುಶವಾದ ಮತ್ತು ಆಧ್ಯಾತ್ಮಿಕತೆಯ ಹಿಂದೆ ಬಿದ್ದಿರುವುದರಲ್ಲಿ ಆಶ್ಚರ್ಯವಿಲ್ಲ……….
……ಹೀಗೆ, ಎಲ್ಲಾ ಬಂಡವಾಳಶಾಹಿ ರಾಷ್ಟ್ರಗಳಲ್ಲಿ, ಅದು ಮುಂದುವರೆದ ರಾಷ್ಟ್ರವಾಗಿರಲಿ ಅಥವಾ ಹಿಂದುಳಿದ ರಾಷ್ಟ್ರವಾಗಿರಲಿ, ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ, ಫ್ಯಾಸೀವಾದ ದಾಪುಗಾಲು ಇಡುತ್ತಿದೆ. ಹಳೆಯ ಪರಂಪರಾನುಗತವಾಗಿ ಬಂದ ಸಂಸದೀಯ ಪ್ರಜಾತಾಂತ್ರಿಕ ರಾಷ್ಟ್ರಗಳು ಸಹ ಇದರಿಂದ ಹೊರತಾಗಿಲ್ಲ. ಸಂಸತ್ತು ಚಾರಿತ್ರಿಕವಾಗಿ ಬದ್ಧವಾದ ಬೂರ್ಜ್ವಾ ರಾಜಕೀಯ ಸಂಸ್ಥೆಯಾಗಿದ್ದು, ಅದೊಂದು ಬಂಡವಾಳಶಾಹಿ ಸಮಾಜದ ಅಡಿಪಾಯವುಳ್ಳ ರಾಜಕೀಯ ಮೇಲ್ ರಚನೆ. ಒಂದು ಕಾಲದಲ್ಲಿ ಬೂರ್ಜ್ವಾ ಅರ್ಥದಲ್ಲಿ ವ್ಯಕ್ತಿ ಸ್ವಾತಂತ್ರ್ಯ ಮತ್ತು ಮುಕ್ತ ಪೈಪೋಟಿಯ ವೇದಿಕೆಯಾಗಿದ್ದ ಸಂಸತ್ತನ್ನು ಅಸ್ತಿತ್ವಕ್ಕೆ ತಂದ ಬೂರ್ಜ್ವಾಜಿ಼ಗಳಿಗೇ ಅದರ ಉಪಯುಕ್ತತೆ ಬಹಳ ವೇಗದಲ್ಲಿ ಕಡಿಮೆಯಾಗುತ್ತಿದೆ. ಹಾಗಾಗಿ, ಬಂಡವಾಳಶಾಹಿ ರಾಷ್ಟ್ರಗಳಲ್ಲಿ ಫ್ಯಾಸೀವಾದವು ಪ್ರಭುತ್ವದ ರಚನೆ ಮತ್ತು ಆಡಳಿತ ವ್ಯವಸ್ಥೆಯಲ್ಲಿ ವಿಭಿನ್ನ ಸ್ವರೂಪಗಳಲ್ಲಿ ಹೆಚ್ಚು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಿದೆ.