ತಮಗೆ ನ್ಯಾಯಬದ್ಧವಾಗಿ ಸಿಗಬೇಕಾಗಿರುವ ಗೌರವಧನ, ಮತ್ತಿತರ ಸೌಲಭ್ಯಗಳಿಗಾಗಿ ಆಗ್ರಹಿಸಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಶಾ ಕಾರ್ಯಕರ್ತೆಯರು ಹಗಲು-ರಾತ್ರಿ ಧರಣಿ ನಡೆಸಿದ್ದಾರೆ. ಈ ಹಿಂದೆ ತಮ್ಮ ಬೇಡಿಕೆಗಳನ್ನು ನೆರವೇರಿಸುತ್ತೇನೆ ಎಂದು ಮಾನ್ಯ ಮುಖ್ಯಮಂತ್ರಿಗಳು ಕೊಟ್ಟ ಮಾತನ್ನು ಉಳಿಸಿಕೊಳ್ಳಿ ಎಂದು ಒತ್ತಾಯಿಸುತ್ತಿದ್ದಾರೆ. ಹಗಲು- ರಾತ್ರಿ, ಬಿಸಿಲು-ಮಳೆ- ಚಳಿಯಲ್ಲೂ ಸತತವಾಗಿ ಕಾರ್ಯ ನಿರ್ವಹಿಸುತ್ತಾ, ರಾಜ್ಯದಲ್ಲಿ ಮಾತೃ ಮರಣ, ಶಿಶು ಮರಣ ಸಂಖ್ಯೆಯ ಕಡಿತ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಈ ಹೆಣ್ಣುಮಕ್ಕಳು ಈಗ ಮಳೆಯಲ್ಲೂ ಬೀದಿಗೆ ಬರುವಂತೆ ಸರ್ಕಾರ ಮಾಡಿದೆ. ಇವರ ಬೇಡಿಕೆಗಳನ್ನು ಪೂರೈಸಬೇಕೆಂದು ಎಂದು ಕಾರ್ಮಿಕ ದೃಷ್ಟಿಕೋನ ಸರ್ಕಾರವನ್ನು ಆಗ್ರಹಿಸುತ್ತದೆ.