Loading..

ಭೂಸ್ವಾಧೀನ ವಿರೋಧಿ ಹೋರಾಟಗಾರರ ಬಂಧನಕ್ಕೆ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷ ಖಂಡನೆ

ಪತ್ರಿಕಾ ಹೇಳಿಕೆ

ಬೆಂಗಳೂರಿನ ದೇವನಹಳ್ಳಿಯಲ್ಲಿ ಭೂಸ್ವಾಧೀನ ವಿರೋಧಿಸಿ ಕಳೆದ 1,180 ದಿನಗಳಿಂದ ಶಾಂತಿಯುತವಾಗಿ ಹೋರಾಡುತ್ತಿದ್ದ ರೈತರನ್ನು ಮತ್ತು ಜನಪರ ಹೋರಾಟಗಾರರನ್ನು ಬಂಧಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.

ನಂದಿಗ್ರಾಮದ ರೈತ ಹೋರಾಟದ ಪರಿಣಾಮವಾಗಿ, ಕೃಷಿಭೂಮಿಯ ಸ್ವಾಧೀನಕ್ಕೆ ಶೇ.80ರಷ್ಟು ರೈತರ ಸಮ್ಮತಿ ಬೇಕು ಎಂಬ ಕಾನೂನನ್ನು 2013ರಲ್ಲಿ ಅಂದಿನ ಕೇಂದ್ರ ಕಾಂಗ್ರೆಸ್ ಸರ್ಕಾರವೇ ಜಾರಿ ಮಾಡಿತ್ತು.
ಈಗ ಬೆಂಗಳೂರಿನ ಹೊರವಲಯದ ದೇವನಹಳ್ಳಿಯಲ್ಲಿ ಹೈನುಗಾರಿಕೆ, ಹಾಲು ಉತ್ಪಾದನೆ, ತರಕಾರಿ ಬೆಳೆಯುವ ರೈತರನ್ನು ತಮ್ಮ 1,770 ಎಕರೆ ಭೂಮಿಯಿಂದ ಒಕ್ಕಲೆಬ್ಬಿಸಿ, ಕೈಗಾರಿಕೆಗಳಿಗೆ ನೀಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿರುವುದು ಅಪ್ಪಟ ಇಬ್ಬಗೆ ನೀತಿಯಾಗಿದೆ.

ದಿನ ಬೆಳಗಾದರೆ ಸಂವಿಧಾನ ರಕ್ಷಣೆಯ ಬಗ್ಗೆ ಮಾತನಾಡುವ ಕಾಂಗ್ರೆಸ್ ಸರ್ಕಾರ, ಸಂವಿಧಾನ ನೀಡಿರುವ ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ಪೊಲೀಸ್ ಬಲದ ಮೂಲಕ ತುಳಿಯಲು ಮುಂದಾಗಿರುವುದನ್ನು ಖಂಡಿಸಲು ಪದಗಳೇ ಸಾಲದಾಗಿದೆ.

ಇಂತಹ ಕಡು ರೈತ ವಿರೋಧಿ ನಿರ್ಧಾರವನ್ನು ಕೈಬಿಟ್ಟು, ಬಂಧನಕ್ಕೆ ಒಳಗಾದವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು, ರೈತರ ಸಮ್ಮತಿ ಇಲ್ಲದ ಭೂಸ್ವಾಧೀನ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎಂದು ಎಸ್‌ಯುಸಿಐ (ಸಿ) ಒತ್ತಾಯಿಸುತ್ತದೆ. ರೈತರ ನ್ಯಾಯಯುತ ಹೋರಾಟಕ್ಕೆ ಕೊನೆಯ ವರೆಗೂ ತನ್ನ ಬೆಂಬಲವನ್ನು ಸೂಚಿಸುತ್ತದೆ.

ಹೇಳಿಕೆ ಇವರಿಂದ

ಕೆ. ಉಮಾ
ರಾಜ್ಯ ಕಾರ್ಯದರ್ಶಿಗಳು, ಎಸ್‌ಯುಸಿಐ(ಸಿ)
26.06.2025