ಏಪ್ರಿಲ್ 24, 2025 ಎಸ್‌ಯುಸಿಐ(ಸಿ) ಪಕ್ಷದ ಸಂಸ್ಥಾಪನಾ ದಿನದ ಕರೆ!
ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ ನೆರವೇರಿಸಲು ಸಜ್ಜಾಗಿ!
ಇದೇ ಏಪ್ರಿಲ್ 24 ರಂದು ಎಸ್‌ಯುಸಿಐ(ಸಿ) ಪಕ್ಷದ 78ನೇ ಸಂಸ್ಥಾಪನಾ ದಿನವನ್ನು ದೇಶದ ದುಡಿಯುವ ಜನರೆಲ್ಲರೂ ಬಹಳ ಶ್ರದ್ಧೆಯಿಂದ ಆಚರಿಸಿದ್ದಾರೆ. ಮಾರ್ಕ್ಸ್-ಎಂಗೆಲ್ಸ್-ಲೆನಿನ್-ಸ್ಟಾಲಿನ್-ಮಾವೋ ಜೆ಼ ಡಾಂಗ್ ಅವರ ಅತ್ಯುತ್ತಮ ಅನುಯಾಯಿಯಾಗಿದ್ದು, ಈ ಯುಗದ ಓರ್ವ ಅಪ್ರತಿಮ ಮಾರ್ಕ್ಸ್ ವಾದಿ ಚಿಂತಕರಾದ ಕಾಮ್ರೇಡ್ ಶಿವದಾಸ್ ಘೋಷ್ ಅವರಿಂದ ಸ್ಥಾಪಿಸಲ್ಪಟ್ಟ ಭಾರತದ ನೆಲದ ನೈಜ ಕಮ್ಯುನಿಸ್ಟ್ ಪಕ್ಷವಾದ ಎಸ್‌ಯುಸಿಐ(ಸಿ)ಯ ಕೆಂಪು ಧ್ವಜ ದೇಶದೆಲ್ಲಡೆ ಹಾರಾಡುತ್ತಿದೆ. ಏಪ್ರಿಲ್ 24-ಈ ದಿನ ಕಾಮ್ರೇಡ್ ಶಿವದಾಸ್ ಘೋಷ್‌ರವರ ಹಲವಾರು ನೆನಪುಗಳ ಸರಮಾಲೆಯನ್ನೇ ಹೊತ್ತು ತರುತ್ತದೆ. ಅವರು, ಭಾರತದಲ್ಲಿ ಕಾರ್ಮಿಕವರ್ಗ ಕ್ರಾಂತಿಯನ್ನು ನೆರವೇರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು, ಕ್ರಾಂತಿಕಾರಿ ಧಾರ್ಷ್ಟ್ಯದಿಂದ ಎಲ್ಲಾ ಅಡೆತಡೆಗಳನ್ನು ಎದುರಿಸಿ, ತಮ್ಮ ಜೀವನದುದ್ದಕ್ಕೂ ರಾಜಿರಹಿತ, ಅಚಲ ಹೋರಾಟವನ್ನು ನಡೆಸಿದರು. ತನ್ಮೂಲಕ ಅವರು ಓರ್ವ ವಿರಾಟ್ ಸ್ವರೂಪದ ಕಮ್ಯುನಿಸ್ಟ್ ನಾಯಕರೂ, ಬೋಧಕರೂ ಆಗಿ ಹೊರಹೊಮ್ಮಿದರು. 1940 ಮತ್ತು 1960ರ ದಶಕಗಳಷ್ಟು ಹಿಂದೆಯೇ, ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ವಿದ್ಯಮಾನಗಳು, ಬೆಳವಣಿಗೆಗಳು ಮತ್ತು ಇವೆರಡೂ ಕ್ಷೇತ್ರಗಳಲ್ಲಿ ಬೃಹತ್ತಾಗಿ ಕಾಣಿಸಿಕೊಂಡ ಅಪಾಯಗಳನ್ನು ವಿಶ್ಲೇಷಿಸಿದ ಅವರ ಮಹತ್ವಪೂರ್ಣ ಬೋಧನೆಗಳು ಮತ್ತು ಎಚ್ಚರಿಕೆಗಳು, ಹೇಗೆ ನಂತರದ ದಿನಗಳಲ್ಲಿ ಸಾಬೀತಾದವು ಎಂಬುದನ್ನು ಈ ದಿನ ಮತ್ತೆ ಹೊಸದಾಗಿ ನಮ್ಮ ನೆನಪಿಗೆ ತರುತ್ತದೆ.
1948ರ ಏಪ್ರಿಲ್ 24ರ ಈ ದಿನದಂದು ಕೇವಲ ಬೆರಳೆಣಿಕೆಯಷ್ಟು ಕ್ರಾಂತಿಕಾರಿ ಸಂಗಾತಿಗಳ್ಳೊಂದಿಗೆ ತಮ್ಮ ಪಯಣನ್ನು ಪ್ರಾರಂಭಿಸಿದ ಕಾಮ್ರೇಡ್ ಶಿವದಾಸ್ ಘೋಷ್‌ರವರ ಅಮೋಘ ಸೃಷ್ಟಿಯಾದ ನಮ್ಮ ಪಕ್ಷವು ಈಗ ಒಂದು ಗಮನಾರ್ಹ ಶಕ್ತಿಯಾಗಿ ಮಾರ್ಪಟ್ಟಿರುವುದಲ್ಲಿ ಆಶ್ಚರ್ಯವೇನಿಲ್ಲ. ದುಡಿಯುವ ಜನರನ್ನು ಹೆಚ್ಚೆಚ್ಚು ಆಕರ್ಷಿಸುತ್ತಿರುವ ವರ್ಗ ಮತ್ತು ಜನ ಹೋರಾಟಗಳನ್ನು ಸಂಘಟಿಸುತ್ತಿರುವ ಮತ್ತು ತೀವ್ರಗೊಳಿಸುತ್ತಿರುವ ಪ್ರಬಲ ಶಕ್ತಿಯಾಗಿ ಅದು ದಾಪುಗಾಲನ್ನಿಡುತ್ತಿದೆ. ದೇಶದ ಕ್ರಾಂತಿಕಾರಿ ಶ್ರಮಜೀವಿಗಳ ಮುಂಚೂಣಿ ಪಡೆಯಾಗಿರುವ ಎಸ್‌ಯುಸಿಐ(ಸಿ) ಪಕ್ಷವು, ಎಲ್ಲವನ್ನೂ ನಿರ್ಧರಿಸುವುದು, ಸರಿಯಾದ ಕ್ರಾಂತಿಕಾರಿ ರಾಜಕೀಯ ಸಿದ್ಧಾಂತದೆಡೆಗಿನ ಬದ್ಧತೆಯೇ ಎಂಬ ಮಾರ್ಕ್ಸ್ ವಾದ-ಲೆನಿನ್‌ವಾದದ ಅಮೂಲ್ಯ ಚಿಂತನೆಗಳ ಸಾಕಾರ ರೂಪವೇ ಆಗಿದೆ. ಸಮಕಾಲೀನ ವಿಶ್ವದ ಪ್ರಸಕ್ತ ಪರಿಸ್ಥಿತಿಯಲ್ಲಿ ಕಾಮ್ರೇಡ್ ಶಿವದಾಸ್ ಘೋಷ್ ಚಿಂತನೆಯು ಮಾರ್ಕ್ಸ್ ವಾದ-ಲೆನಿನ್‌ವಾದದ ವಿಸ್ತೃತ, ಅಭಿವೃದ್ಧಿ ಹೊಂದಿದ, ಸಮೃದ್ಧ ತಿಳುವಳಿಕೆಯನ್ನು ಪ್ರತಿಬಿಂಬಿಸುತ್ತಾ ದೇಶದ ಗಡಿ ದಾಟಿ, ವಿದೇಶದಲ್ಲಿಯೂ ಕಮ್ಯುನಿಸ್ಟ್ ಕ್ರಾಂತಿಕಾರಿಗಳನ್ನು ಪ್ರೇರೇಪಿಸುತ್ತಿದೆ. ಇದಕ್ಕೆ ತದ್ವಿರುದ್ಧವಾಗಿ, ಈ ನೆಲದ ಎಲ್ಲಾ ಇತರ ಪಕ್ಷಗಳು, ದೊಡ್ಡವು ಅಥವಾ ಚಿಕ್ಕವು, ಅವು ಯಾವುದೇ ಬಣ್ಣ ಮತ್ತು ವರ್ಣದ್ದಾಗಿರಲಿ, ಕಮ್ಯುನಿಸ್ಟ್ನಿಂದ ಮಾರ್ಕ್ಸ್ ವಾದಿ-ಲೆನಿನ್‌ವಾದಿ, ಹೀಗೆ ಯಾವುದೇ ಹೆಸರಿನ ತಥಾಕಥಿತ ಎಡಪಂಥೀಯ ಪಕ್ಷಗಳಿರಲಿ, ತಮ್ಮ ಹುಟ್ಟಿನಿಂದಲೇ ಅವು ಪಾಲಿಸುತ್ತಿರುವ ತಪ್ಪು ರಾಜಕೀಯ ಸಿದ್ಧಾಂತದಿಂದಾಗಿ ಮತ್ತೆಮತ್ತೆ ಹೋಳಾಗುತ್ತಿವೆ, ಜನರಿಂದ ದೂರಾಗುತ್ತಿವೆ.
ಪರಿಷ್ಕರಣಾವಾದದ ದೀರ್ಘಕಾಲದ ಅನುಷ್ಠಾನದಿಂದಾಗಿ ಮತ್ತು ಸಾಮ್ರಾಜ್ಯಶಾಹಿ-ಬಂಡವಾಳಶಾಹಿ ಶಕ್ತಿಗಳ ಪ್ರಚೋದನೆಗೆ ಒಳಗಾಗಿ ಸೋವಿಯತ್ ಒಕ್ಕೂಟದಲ್ಲಿ ಮತ್ತು ನಂತರ ಚೀನಾದಲ್ಲಿ ಪ್ರತಿಕ್ರಾಂತಿ ನಡೆದು ಸಮಾಜವಾದದ ಪತನವಾದ ನಂತರ, ಪ್ರಬಲ ಸಮಾಜವಾದಿ ಶಿಬಿರದ ಕುಸಿತಗೊಂಡಿದೆ; ಇದು ಒಂದು ಕಾಲದಲ್ಲಿ ವೈಭವದ ಉತ್ತುಂಗದಲ್ಲಿದ್ದು, ದಿಟ್ಟ ಮುನ್ನಡೆಗಳನ್ನು ಇಡುತ್ತಿದ್ದ ವಿಶ್ವ ಕಮ್ಯುನಿಸ್ಟ್ ಚಳುವಳಿಗೆ ಎಂತಹ ಹೊಡೆತ ನೀಡಿದೆಯೆಂದರೆ, ಅದಿನ್ನೂ ಈ ಹಿನ್ನಡೆಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಈ ಬೆಳವಣಿಗೆಗಳು ಸಮಾಜವಾದದ ಸುಸ್ಥಿರತೆಯ ಬಗ್ಗೆ ಅನೇಕರಲ್ಲಿ ಪ್ರಶ್ನೆಯನ್ನು ಹುಟ್ಟುಹಾಕಿದೆ, ಅನೇಕ ಎಡಪಂಥೀಯ ಮತ್ತು ಕಮ್ಯುನಿಸ್ಟ್ ಪಕ್ಷಗಳು ಹತಾಶೆಗೆ ಒಳಗಾಗಿವೆ. ಆದರೆ, ಮಾರ್ಕ್ಸ್ ವಾದ-ಲೆನಿನ್‌ವಾದ-ಶಿವದಾಸ್ ಘೋಷ್ ಚಿಂತನೆಯಿಂದ ನಿರ್ದೇಶಿಸಲ್ಪಟ್ಟ ನಮ್ಮ ಪಕ್ಷವು ಈ ಹಿನ್ನಡೆಯಿಂದ ಆಘಾತಕ್ಕೊಳಗಾಗಿದ್ದರೂ ಆಶ್ಚರ್ಯಪಡಲಿಲ್ಲ. ಏಕೆಂದರೆ, ಪರಿಷ್ಕರಣಾವಾದದ ಲಕ್ಷಣಗಳನ್ನು ಕಾಮ್ರೇಡ್ ಶಿವದಾಸ್ ಘೋಷ್‌ರವರು ಬಹಳ ಹಿಂದೆಯೇ ಸರಿಯಾಗಿ ಗ್ರಹಿಸಿದ್ದರು, ಅದರ ಪರಿಹಾರೋಪಾಯಗಳ ಬಗ್ಗೆಯೂ ತಿಳಿಸಿಕೊಟ್ಟಿದ್ದರು. ನಮ್ಮ ಪಕ್ಷ ಈ ದಾರಿಯಲ್ಲೇ ಸಾಗುತ್ತಿದೆ.
ಈ ಹಿನ್ನೆಲೆಯಲ್ಲಿ, ಏಪ್ರಿಲ್ 24 ಅತ್ಯಂತ ಮಹತ್ವದ್ದಾಗಿದೆ. ಇದು ಮನುಷ್ಯನಿಂದ ಮನುಷ್ಯನ ಶೋಷಣೆಯನ್ನು ನಿರ್ಮೂಲನೆ ಮಾಡುವ ಸಂದೇಶವನ್ನು ಹೊಂದಿದೆ. ಜನರು ಹೆಚ್ಚೆಚ್ಚಾಗಿ ಕಾಮ್ರೇಡ್ ಶಿವದಾಸ್ ಘೋಷ್ ಚಿಂತನೆಯ ಸಂಪರ್ಕಕ್ಕೆ ಬರುತ್ತಿದ್ದಂತೆ ಅದರೆಡೆಗೆ ಹೆಚ್ಚೆಚ್ಚು ಆಕರ್ಷಿತರಾಗುತ್ತಿದ್ದಾರೆ; ಹಾಗೂ ಭಾರತದ ಕ್ರಾಂತಿಯ ಹಾದಿಯನ್ನು ಸುಗಮಗೊಳಿಸಲು ಕಾರ್ಮಿಕ ವರ್ಗದ ಕ್ರಾಂತಿಕಾರಿ ಪಕ್ಷವಾದ ಎಸ್‌ಯುಸ್‌ಐ(ಸಿ) ಅನ್ನು ಸ್ಥಾಪಿಸಿದ ಕಾಮ್ರೇಡ್ ಘೋಷ್‌ರವರ ಕಠಿಣ, ಆದರೆ ದೃಢನಿಶ್ಚಯದ ಸಂಘರ್ಷದಿಂದ ಪ್ರೇರಿತರಾಗುತ್ತಿದ್ದಾರೆ. ಕಾಮ್ರೇಡ್ ಘೋಷ್‌ರವರು ಭಾರತದ ನಿರ್ದಿಷ್ಟ ಪರಿಸ್ಥಿತಿಗಳಿಗನುಸಾರವಾಗಿ ಮಾರ್ಕ್ಸ್ ವಾದ-ಲೆನಿನ್‌ವಾದವನ್ನು ಅನ್ವಯಿಸುತ್ತಲೇ, ಜೀವನ ಮತ್ತು ಸಮಾಜದಲ್ಲಿ ಉದ್ಭವಿಸುತ್ತಿರುವ ಸಮಸ್ಯೆಗಳನ್ನು ವಿಶ್ಲೇಷಿಸಿದರು ಮತ್ತು ಅವುಗಳನ್ನು ಎದುರಿಸಲು ಹಾಗೂ ಪರಿಹರಿಸಲು ಮಾರ್ಗವನ್ನು ತೋರಿಸಿಕೊಟ್ಟರು; ಹೀಗೆ, ನೈಜ ಕ್ರಾಂತಿಕಾರಿಯಾಗಿ ಹೊರಹೊಮ್ಮಲು ಜೀವನದ ಎಲ್ಲಾ ಸ್ತರಗಳಲ್ಲಿ ಮಾರ್ಕ್ಸ್ ವಾದ-ಲೆನಿನ್‌ವಾದವನ್ನು ಹೇಗೆ ಅನ್ವಯಿಸಬೇಕು ಎಂಬುದನ್ನೂ ತೋರಿಸಿಕೊಟ್ಟರು. ಈ ಪ್ರಕ್ರಿಯೆಯಲ್ಲಿ ಅವರು ಈ ಉದಾತ್ತ ಸಿದ್ಧಾಂತವನ್ನು ಶ್ರೀಮಂತಗೊಳಿಸಿದರು ಮತ್ತು ಅದರ ತಿಳುವಳಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು.
ಇಂದು ಪ್ರತಿದಿನವೂ ನಾವು ನಮ್ಮ ಸಹೋದರರು ಕೆಟ್ಟ ಸಂಸ್ಕೃತಿಗೆ ಬಲಿಯಾಗುತ್ತಿರುವುದನ್ನು, ಸಹೋದರಿಯರು ದೌರ್ಜನ್ಯಗಳಿಗೆ ಒಳಗಾಗುತ್ತಿರುವುದನ್ನು, ವೃದ್ಧರು ಅವಮಾನಿತರಾಗುತ್ತಿರುವುದನ್ನು, ಅವಶ್ಯಕ ಪೌಷ್ಟಿಕಾಂಶವಿಲ್ಲದೆ ಹಸಿವಿನಿಂದ ಬಳಲುತ್ತಿರುವ ಮಕ್ಕಳನ್ನು, ಸಹ ನಾಗರಿಕರು ಹಸಿವಿನಿಂದ ಸಾಯುತ್ತಿರುವುದನ್ನು, ನಿರುದ್ಯೋಗಿ ಯುವಕರು ಅನೈತಿಕ ಜೀವನೋಪಾಯಕ್ಕೆ ಧುಮುಕುತ್ತಿರುವುದನ್ನು, ಕೆಲಸ ಕಳಕೊಂಡ ಕಾರ್ಮಿಕರು ಮತ್ತು ಸಾಲಬಾಧಿತ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು, ಲಕ್ಷಾಂತರ ವಂಚಿತ ಮತ್ತು ಕಿರುಕುಳಕ್ಕೊಳಗಾದವರ ಗೋಳಾಟ ಮತ್ತು ಸಂಕಟಗಳನ್ನು ನೋಡುತ್ತಿದ್ದೇವೆ. ಮಾರ್ಕ್ಸ್ ವಾದ-ಲೆನಿನ್‌ವಾದ-ಶಿವದಾಸ್ ಘೋಷ್ ಚಿಂತನೆಯ ನೈಜ ಅನುಯಾಯಿಗಳಾದ ನಾವು, ಈ ಛಿದ್ರಗೊಂಡಿರುವ ಶೋಷಕ ಬಂಡವಾಳಶಾಹಿ ವ್ಯವಸ್ಥೆಯ ಹಿಡಿತಗಳಿಂದ ಜನರನ್ನು ಮುಕ್ತಗೊಳಿಸಿ ಶೋಷಣಾರಹಿತ ಸಮಾಜವಾದಿ ಸಮಾಜವನ್ನು ಸ್ಥಾಪಿಸಲು ನಮ್ಮೆಲ್ಲಾ ಶಕ್ತಿಯನ್ನು ವಿನಿಯೋಗಿಸುವುದು ಅತ್ಯಗತ್ಯ. ಏಪ್ರಿಲ್ 24, ಈ ಸಂಕಲ್ಪ ತೊಡಲು ನಮ್ಮನ್ನು ಮತ್ತೆಮತ್ತೆ ಪ್ರೇರೇಪಿಸುತ್ತದೆ.
ಏಪ್ರಿಲ್ 24 ಚಿರಾಯುವಾಗಲಿ!
ಮಾರ್ಕ್ಸ್ ವಾದ-ಲೆನಿನ್‌ವಾದ-ಶಿವದಾಸ್ ಘೋಷ್ ಚಿಂತನೆ ಚಿರಾಯುವಾಗಲಿ! ಎಸ್‌ಯುಸಿಐ(ಸಿ)ಚಿರಾಯುವಾಗಲಿ!
ಎಸ್‌ಯುಸಿಐ(ಸಿ) ಚಿರಾಯುವಾಗಲಿ!