ಸರ್ಕಾರಗಳ ಕೈಯಲ್ಲಿ ಪಗಡೆಕಾಯಿಗಳಾದ ನಿರುದ್ಯೋಗಿ ಯುವಜನತೆ !
ದೇಶದಲ್ಲಿ ದುಡಿಯಲು ಸಮರ್ಥವಾಗಿರುವ 15 ರಿಂದ 35 ವಯೋಮಾನದವರು ಸುಮಾರು 50 ಕೋಟಿ ಇದ್ದಾರೆ. ಪ್ರತಿವರ್ಷವೂ 1.2 ಕೋಟಿ ಮಂದಿ ಈ ‘ಸೈನ್ಯಕ್ಕೆ’ ಹೊಸದಾಗಿ ಸೇರ್ಪಡೆಯಾಗುತ್ತಾರೆ. ದೇಶದ ಜನಸಂಖ್ಯೆಯಲ್ಲಿ ಶೇ.35 ಕ್ಕೂ ಅಧಿಕವಾಗಿರುವ ಈ ಜನಸಂಖ್ಯಾ ವಿಭಾಗವನ್ನು ಎಲ್ಲಾ ಸರ್ಕಾರಗಳು ನಿರ್ಲಕ್ಷಿಸುತ್ತಾ ಬಂದಿವೆ ಮತ್ತು ಅದು ಎಲ್ಲ ಬಂಡವಾಳಶಾಹಿ ಪಕ್ಷಗಳಿಗೆ ಕೇವಲ ಒಂದು ಮತಬ್ಯಾಂಕ್ ಅಷ್ಟೇ. ನಿರುದ್ಯೋಗ ಭೂತಾಕಾರವಾಗಿ ಏರಿದೆ. ಯುವಜನರು ಉದ್ಯೋಗಕ್ಕಾಗಿ ಪರಿತಪಿಸುತ್ತಿದ್ದಾರೆ. ಆದರೆ, ಉದ್ಯೋಗ ಸೃಷ್ಟಿಯ ಘೋಷಣೆ ಖಾಲಿ ಶಬ್ದ ಮಾತ್ರ. ವಾಸ್ತವದಲ್ಲಿ ನಿರುದ್ಯೋಗಿಗಳ ಬೊಗಸೆ ಖಾಲಿ, ನಿರುದ್ಯೋಗಿ ಯುವಜನರ ಮನಸ್ಸು ಖಾಲಿ, ಅವರ ಭವಿಷ್ಯವನ್ನು ಕತ್ತಲಾವರಿಸಿದೆ.
ಕಳೆದ ಎರಡು ದಶಕಗಳಲ್ಲಿ ನಮ್ಮ ದೇಶದಲ್ಲಿ ರೈತರ ಆತ್ಮಹತ್ಯೆ ಸರ್ವೇಸಾಮಾನ್ಯವೆಂಬಂತೆ ಆಗಿದೆ. ಈಗ ಅದಕ್ಕೊಂದು ‘ಪೈಪೋಟಿ’ ಕಾಣಿಸಿಕೊಂಡಿದೆ. ಉದ್ಯೋಗಕ್ಕಾಗಿ ಅಲೆದಲೆದು ಹೈರಾಣಾಗಿ, ಖಿನ್ನತೆಗೆ ಜಾರಿ, ಆತ್ಮಹತ್ಯೆಗೆ ಶರಣಾಗುವ ಯುವಜನರ ಸಂಖ್ಯೆ ಇತ್ತೀಚೆಗೆ ಅಗಾಧವಾಗಿ ಏರಿದೆ. 2022 ರಲ್ಲಿ 15,783 ಯುವಜನರು ಅಂದರೆ, ದಿನಕ್ಕೆ 43 ಜನರು ನಿರುದ್ಯೋಗ, ಉದ್ಯೋಗ ಸಂಬಂಧಿತವಾಗಿ ಉಂಟಾದ ಸಮಸ್ಯೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್‌ಸಿಆರ್‌ಬಿ) ವರದಿ ಮಾಡಿತ್ತು. ಇದು ಆ ವರ್ಷ ಆತ್ಮಹತ್ಯೆಗೆ ಶರಣಾದ ರೈತರ ಸಂಖ್ಯೆಗಿಂತ ಅಧಿಕವಾಗಿತ್ತು ಎಂಬುದು ಅತ್ಯಂತ ನೋವಿನ ಸಂಗತಿ. ಅಲ್ಲಿಂದೀಚೆಗೆ ‘ನಿರುದ್ಯೋಗಿ’ ಅಥವಾ ‘ನಿರುದ್ಯೋಗ’ ಎಂಬ ಗುಂಪಿನಡಿಯಲ್ಲಿ ಮಾಹಿತಿ ಸಂಗ್ರಹಿಸುವುದನ್ನು ಎನ್‌ಸಿಆರ್‌ಬಿ ನಿಲ್ಲಿಸಿದ್ದೇ ವಿಚಿತ್ರ! ಇಲ್ಲಿಯವರೆಗೂ ನಿರುದ್ಯೋಗ ಸಂಬಂಧಿ ಅಧಿಕೃತ ಮಾಹಿತಿಯೇ ದೇಶದಲ್ಲಿ ಲಭ್ಯವಿಲ್ಲ ಎನ್ನುವುದು ಆಶ್ಚರ್ಯವೇನಲ್ಲ. 2024ರಲ್ಲಿ ಸಂಶೋಧನೆಯೊಂದು ನಿರುದ್ಯೋಗಿ ಯುವಜನರಲ್ಲಿ ಮಾನಸಿಕ ಅಸ್ವಾಸ್ಥ್ಯಗಳ ಪ್ರಮಾಣವು ಅಂದರೆ, ಖಿನ್ನತೆ(ಶೇ.54.4), ಆತಂಕ(ಶೇ.61.8) ಮತ್ತು ಒತ್ತಡ(ಶೇ.47.9)ಗಳು ಏರುತ್ತಲೇ ಇವೆ ಎಂದು ತೋರಿಸಿತು. ಇವು ಯುವಜನತೆ ಎದುರಿಸುತ್ತಿರುವ ಗಂಭೀರ ಸವಾಲುಗಳಾಗಿವೆ. ಕಾರಣ ನಿರುದ್ಯೋಗ!
2022ರಲ್ಲಿ, ‘ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 50 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ’ ಎಂಬ ಚರ್ಚೆಯು ಲೋಕಸಭೆಯಲ್ಲಿ ನಡೆದಿತ್ತು. ಅಂದರೆ, ಈಗ ಮೂರು ವರ್ಷಗಳ ತರುವಾಯ ಅದರ ಪರಿಸ್ಥಿತಿ ಏನು? 2014ರಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗಗಳ ಆಶ್ವಾಸನೆ ನೀಡಿದ್ದ ಪ್ರಧಾನಿ ಮೋದಿಯವರಿಂದ ಉತ್ತರ ನಿರೀಕ್ಷಿಸಬಹುದೇ! 2025-26ರ ಸಾಲಿನಲ್ಲಿ ರಾಜ್ಯ ಸರ್ಕಾರದ 43 ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ ಇವೆ. ಇವು ಮಂಜೂರಾಗಿರುವ ಹುದ್ದೆಗಳು. ಈ ಖಾಲಿ ಹುದ್ದೆಗಳನ್ನು ಸರ್ಕಾರಗಳು ಭರ್ತಿ ಮಾಡದೇ ಇರುವುದರಿಂದ ಉದ್ಯೋಗಾಕಾಂಕ್ಷಿಗಳು ಉದ್ಯೋಗಕ್ಕಾಗಿ ಅಲೆದಲೆದು ಹೈರಾಣಾಗಿ, ಖಿನ್ನತೆಗೆ ಜಾರಿ, ಆತ್ಮಹತ್ಯೆಗೆ ಶರಣಾಗುವ ಸಂಖ್ಯೆ ಇತ್ತೀಚೆಗೆ ಅಗಾಧವಾಗಿ ಏರಿಕೆಯಾಗಿದೆ. ಈ ಪ್ರಮಾಣದ ಜನರಿಗಾಗಿ, ಯಾವುದು ದೇಶದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಒಂದು ಮಹಾನ್ ಶಕ್ತಿ, ಒಂದು ಬಹುದೊಡ್ಡ ‘ಜನಸಂಖ್ಯಾ ಬಲ’ ( Demographic Dividend ) ವಾಗಬಹುದಿತ್ತೋ ಅದನ್ನು ಎಲ್ಲ ಸರ್ಕಾರಗಳು ಒಂದು ಬಹುದೊಡ್ಡ ‘ಜನಸಂಖ್ಯಾ ವಿಪತ್ತು’ (Demographic Disaster) ಎಂದು ಪರಿಗಣಿಸಿ, ಕಾಲಕಾಲಕ್ಕೆ ಸರಿಯಾದ ಸೂಕ್ತ ನೇಮಕಾತಿ ಕ್ರಮಗಳನ್ನು ಕೈಗೊಳ್ಳದೆ, ಅದನ್ನು ಕೇವಲ ರಾಜಕೀಯವಾಗಿ ದುರುಪಯೋಗ ಮಾಡಿಕೊಂಡಿವೆ.
ನಿರುದ್ಯೋಗ ಸಮಸ್ಯೆಯ ಗಂಭೀರತೆ:
ಸರ್ಕಾರದ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇಟ್ಟುಕೊಂಡು ಮತ್ತು ಪ್ರತಿವರ್ಷವೂ ನಿವೃತ್ತಿಯಿಂದ ಖಾಲಿಯಾಗುವ ಸುಮಾರು 15,000 ಹುದ್ದೆಗಳನ್ನು ರಾಜ್ಯ ಸರ್ಕಾರವು ಸದ್ದಿಲ್ಲದೆ, ಒಂದೋ ಅವನ್ನು ರದ್ದು ಮಾಡುತ್ತದೆ ಅಥವಾ ಒಂದನ್ನು ಇನ್ನೊಂದರ ಜೊತೆಯಲ್ಲಿ ವಿಲೀನಗೊಳಿಸಿ ಅವನ್ನು ಮಂಗಮಾಯ ಮಾಡುತ್ತದೆ. ನಿಜವಾಗಿಯೂ ಖಾಲಿ ಇರುವ ಹುದ್ದೆಗಳ ಮಾಹಿತಿ ಎಂದಿಗೂ ದೊರಕುವುದೇ ಇಲ್ಲ. ಇದೇ ನೀತಿಯನ್ನು ಅನುಸರಿಸಿ, 2020ರಲ್ಲಿ 22 ಲಕ್ಷ ನೌಕರರನ್ನು ಹೊಂದಿದ್ದ ರೈಲ್ವೆ ಇಲಾಖೆಯು ಈಗ ಕೇವಲ 12.23 ಲಕ್ಷ ಸಿಬ್ಬಂದಿಯನ್ನು ಹೊಂದಿದೆ. BSNL ಸಂಪೂರ್ಣವಾಗಿ ಮುಚ್ಚುವ ಹಂತ ತಲುಪಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳ ವಿಲೀನದಿಂದ ಅಪಾರ ಸಂಖ್ಯೆಯ ಉದ್ಯೋಗ ಕಡಿತ ಆಗಿದೆ. ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಲಕ್ಷಕ್ಕೂ ಹೆಚ್ಚು ಹುದ್ದೆಗಳ ಭರ್ತಿಯಾಗಿಲ್ಲ. ಕಲ್ಲಿದ್ದಲು ವಲಯ, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL), ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (GAIL) ಹಾಗೂ ತೈಲ ಕಂಪನಿಗಳಲ್ಲಿ ಭರ್ತಿಯಾಗದೆ ಉಳಿದಿದ್ದ ಲಕ್ಷಗಟ್ಟಲೆ ಉದ್ಯೋಗಗಳನ್ನು ಕ್ರಮೇಣ ರದ್ದುಗೊಳಿಸಲಾಗುತ್ತಿದೆ. ಜನಸಂಖ್ಯೆಯ ಪ್ರಮಾಣ ಬೆಳೆದಂತೆ ಆಗಬೇಕಾಗಿರುವ ಹೊಸ ಹುದ್ದೆಗಳ ಸೃಷ್ಟಿಯ ಮಾತು ಒತ್ತಟ್ಟಿಗಿರಲಿ, ಈಗಂತೂ ಖಾಯಂ ಆಧಾರದ ಕೆಲಸಗಳನ್ನೂ ಸಹ ಗುತ್ತಿಗೆ, ಹೊರ ಗುತ್ತಿಗೆ, ದಿನಗೂಲಿ, ‘ಅತಿಥಿ’ ಎನ್ನುವ ಹೆಸರಿನಡಿಯಲ್ಲಿ ಶಿಕ್ಷಕರು, ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ಅತ್ಯಂತ ಕಡಿಮೆ ವೇತನದಲ್ಲಿ ದುಡಿಸಿಕೊಳ್ಳಲಾಗುತ್ತಿದೆ. ಅರ‍್ಯಾರಿಗೂ ಕನಿಷ್ಠ ಉದ್ಯೋಗ ಭದ್ರತೆ ಕೂಡಾ ಇಲ್ಲ. ಇದು ಯಾವುದೋ ಖಾಸಗಿ ಕಂಪನಿಯ ಕಥೆಯಲ್ಲ ಎಂಬುದು ಗಮನಾರ್ಹ.
ಇನ್ನು ಖಾಸಗಿ ಕ್ಷೇತ್ರದಲ್ಲೂ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಬದಲಿಗೆ, ತಯಾರಿಕಾ ವಲಯ, ಐಟಿ-ಬಿಟಿ ಏದುಸಿರು ಬಿಡುತ್ತಿವೆ. ಸೇವಾವಲಯ ಕುಂಟುತ್ತಿದೆ, ಎಲ್ಲೆಡೆ ಉದ್ಯೋಗ ಕಡಿತದ ಸುದ್ದಿಗಳು ಕಿವಿಗಡಚಿಕ್ಕುತ್ತಿವೆ. 2024ರ ಆಗಸ್ಟ್ ವರೆಗೆ ಟೆಕ್ ಕಂಪನಿಗಳು 1,24,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿವೆ ಎಂಬ ವರದಿ ಇದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸ್(ಟಿಸಿಎಸ್) 12000 ಉದ್ಯೋಗ ಕಡಿತ ಮಾಡಿದ ಬೆನ್ನಲ್ಲೇ ಮತ್ತೆ ಸೆಪ್ಟೆಂಬರ್ ತಿಂಗಳಲ್ಲಿ 80000 ಉದ್ಯೋಗಿಗಳಿಗೆ ರಾಜೀನಾಮೆ ನೀಡಲು ಹೇಳಲಾಗಿದೆಯೆಂದು ವರದಿಯಾಗಿದೆ. ಗೂಗಲ್, ಇಂಟೆಲ್, ಒರಾಕಲ್‌ನಂತಹ ಸಾಫ್ಟ್ ವೇರ್ ಕಂಪನಿಗಳು ಉದ್ಯೋಗ ಕಡಿತ ಮಾಡಿವೆ. ದೇಶದ ಎರಡನೇ ಅತಿದೊಡ್ಡ ಉದ್ಯೋಗ ನೀಡಿಕೆಯ ಕ್ಷೇತ್ರವಾಗಿರುವ ಎಂಎಸ್‌ಎಂಇ ಕ್ಷೇತ್ರವು ತೀವ್ರವಾದ ಬಿಕ್ಕಟ್ಟಿಗೆ ಸಿಲುಕಿದೆ. ಇದರೊಂದಿಗೆ, ಉದ್ಯೋಗ ಕಡಿತದ ಮೇಲೆ ತಾಂತ್ರಿಕ ಬೆಳವಣಿಗೆಗಳಾದ ಆಟೋಮೇಷನ್, ಎಐ, 3 ಡಿ ಪ್ರಿಂಟಿಂಗ್‌ನಂತಹ ಹೊಸತನಗಳ ಪರಿಣಾಮವೂ ಕಡಿಮೆ ಏನಲ್ಲ. ಹೀಗೆ, ಸರ್ಕಾರವು ಉದ್ಯೋಗಗಳನ್ನು ಭರ್ತಿ ಮಾಡುತ್ತಿಲ್ಲ, ಖಾಸಗಿ ಕ್ಷೇತ್ರದಲ್ಲೂ ಭರವಸೆ ಉಳಿದಿಲ್ಲವೆಂದಾದರೆ, ಉದ್ಯೋಗಾಕಾಂಕ್ಷಿಗಳು ಏನು ಮಾಡಬೇಕು? ವರ್ಷಕ್ಕೆ ಕೋಟಿ ಕೋಟಿ ಉದ್ಯೋಗಗಳ ಬಿಜೆಪಿ ಭರವಸೆ ಚುನಾವಣಾ ಜುಮ್ಲಾ ಆಯಿತು. ಬದಲಿಗೆ ಉದ್ಯೋಗ ಭಗ್ನ ಯಜ್ಞ ತಡೆಯಿಲ್ಲದೆ ನಡೆದಿದೆ. ಅತಿ ಹೆಚ್ಚು ಉದ್ಯೋಗ ನೀಡುವ ಕೃಷಿಕ್ಷೇತ್ರವು ಸಹ ತೀವ್ರವಾಗಿ ಬಿಕ್ಕಿಟ್ಟಿನಲ್ಲಿ ಸಿಲುಕಿದ್ದು ಪ್ರತಿದಿನವೂ ಸಾವಿರಾರು ಸಂಖ್ಯೆಯಲ್ಲಿ ರೈತರು ಕೃಷಿಯನ್ನು ತ್ಯಜಿಸುತ್ತಿದ್ದಾರೆ.
ಉದ್ಯೋಗಾಕಾಂಕ್ಷಿಗಳ ಬವಣೆ:
ಉದ್ಯೋಗಕ್ಕಾಗಿ ಪರೀಕ್ಷೆಯ ತಯಾರಿಗೆ, ಪರೀಕ್ಷಾ ಶುಲ್ಕಕ್ಕಾಗಿ, ಹೊಟ್ಟೆಗಾಗಿ, ರೂಮ್ ಬಾಡಿಗೆಗೆ ಎಂದು ಮಾಸಿಕ ಕನಿಷ್ಠ 6-8 ಸಾವಿರ ರೂ.ಗಳ ಖರ್ಚನ್ನು ನಿಭಾಯಿಸುತ್ತಾ ಲಕ್ಷಾಂತರ ಗ್ರಾಮೀಣ ಯುವಕ-ಯುವತಿಯರು ಪಟ್ಟಣಗಳಿಗೆ ಬಂದು ಹರಸಾಹಸ ಪಡುತ್ತಿದ್ದಾರೆ. ಬಡತನದಿಂದ ಹೈರಾಣಾಗಿರುವ ಕಾರ್ಮಿಕ-ರೈತರ ಮಕ್ಕಳು, ಕೆಳ ಮಧ್ಯಮ ವರ್ಗ ಮತ್ತು ಮಧ್ಯಮ ವರ್ಗಕ್ಕೆ ಸೇರಿರುವವರು ಅದಕ್ಕಾಗಿಯೇ ಸಾಲ ಮಾಡುತ್ತಿದ್ದಾರೆ, ಹೊಲ-ಮನೆ ಮಾರುತ್ತಿದ್ದಾರೆ. ಇದ್ದಬದ್ದ ಸ್ವಲ್ಪ ಆಸ್ತಿಗಳನ್ನು ಅಡವಿಟ್ಟಿದ್ದಾರೆ. ಹಗಲಿರುಳು ಕೂಲಿ ನಾಲಿ ಮಾಡಿ ಮಕ್ಕಳನ್ನು ಓದಿಸಿ, ಅವರು ತಮ್ಮಂತಾಗದೆ, ಉತ್ತಮ ಬದಕನ್ನು ಪಡೆಯಲಿ ಎಂದು ಪರಿತಪಿಸುತ್ತಿರುವ ಜನರ ಸಂಕಷ್ಟಗಳಿಗೆ ಸರ್ಕಾರಗಳು ಕುರುಡಾಗಿವೆ. ಈ ಹಿಂದೆ ಕೋವಿಡ್ ನೆಪವನ್ನು ಮುಂದು ಮಾಡಿ, ಬಿಜೆಪಿ ಸರ್ಕಾರವು ರಾಜ್ಯದಲ್ಲಿ ನೇಮಕಾತಿ ನಡೆಸಲಿಲ್ಲ. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ 1 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಉದ್ಯೋಗದ ಗ್ಯಾರಂಟಿ ನೀಡಿತ್ತು. ಐದು ಗ್ಯಾರಂಟಿ ನೀಡಿದ ಉಮೇದಿನಲ್ಲಿ ತಾನು ನೀಡಿದ ಭರವಸೆಯನ್ನೆ ಅದು ಮರೆತಿದೆ. ಒಳಮೀಸಲಾತಿ, ಇನ್ನಿತರ ನೆಪಗಳನ್ನು ಮುಂದುಮಾಡಿ ಯಾವುದೇ ನೇಮಕಾತಿಗಳನ್ನು ಮಾಡದೆ ವಿಳಂಬ ನೀತಿಯ ಮೊರೆಹೋಗಿದೆ. ಉದ್ಯೋಗ ಪರೀಕ್ಷೆಗಳಿಗಾಗಿ ಚಾತಕ ಪಕ್ಷಿಗಳಂತೆ ಕಾದು ಕುಳಿತಿರುವ ಉದ್ಯೋಗಾಕಾಂಕ್ಷಿಗಳ ಅರ್ಹತಾ ವಯಸ್ಸು ಮೀರುತ್ತಿದೆ. ಮತ್ತೆ ಮತ್ತೆ ಅವರು ತೀವ್ರ ನಿರಾಸೆಗೆ ಒಳಗಾಗಿದ್ದಾರೆ.
ನೇಮಕಾತಿಯಲ್ಲಿ ಅಕ್ರಮ, ಭ್ರಷ್ಟಾಚಾರ:
ಉದ್ಯೋಗ ನೇಮಕಾತಿ ಪ್ರಕ್ರಿಯೆಗಳಲ್ಲಿ ವ್ಯಾಪಕ ಅಕ್ರಮಗಳು, ಭ್ರಷ್ಟಾಚಾರ ತುಂಬಿವೆ. ಬ್ಯಾಂಕಿಂಗ್, ಸಾರ್ವಜನಿಕ ಕ್ಷೇತ್ರದ ಉದ್ಯಮಗಳು (PSUs) ಮತ್ತು ವಿವಿಧ ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಮತ್ತು ರೈಲ್ವೆ ನೇಮಕಾತಿ ಮಂಡಳಿಯ (RRB) ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ಸ್ವಜನ ಪಕ್ಷಪಾತ, ಅಕ್ರಮಗಳ ಪ್ರಕರಣಗಳು ಕೇಳಿಬಂದಿವೆ. ಕಳೆದ ಜುಲೈ 2025 ರ ಅಂತ್ಯದಲ್ಲಿ, SSC ನಡೆಸಿದ ನೇಮಕಾತಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯ ಸ್ಕ್ರೀನ್‌ಶಾಟ್‌ಗಳು ವೈರಲ್ ಆಗಿದ್ದವು. ಅದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾರಣವಾಯಿತು. 2012 ರಲ್ಲಿ ಕೆಪಿಎಸ್‌ಸಿ ಕರ್ಮಕಾಂಡ ಜಗಜ್ಜಾಹೀರಾಗಿತ್ತು. ಕೆಪಿಎಸ್‌ಸಿ ಹಾಗೂ ಕೆಇಎಗಳು ನಡೆಸಿರುವ ಇತ್ತೀಚಿನ ಪರೀಕ್ಷೆಗಳ ನೇಮಕಾತಿ ಪ್ರಕ್ರಿಯೆಗಳಲ್ಲೂ ಸಹ ಅಕ್ರಮಗಳು ಹಾಗೂ ಭ್ರಷ್ಟಾಚಾರ ಕೇಳಿ ಬಂದಿದೆ. 2021ರಲ್ಲಿ 545 ಪಿಎಸ್‌ಐ ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ಬ್ಲೂಟೂತ್ ಸಾಧನಗಳ ಬಳಕೆ ಮಾಡಿ ನಡೆದ ಅಕ್ರಮದಲ್ಲಿ 50 ಕ್ಕೂ ಹೆಚ್ಚು ಅಭ್ಯರ್ಥಿಗಳು 30 ಲಕ್ಷದಿಂದ 1ಕೋಟಿ ಲಂಚ ನೀಡಿದ್ದರು ಎಂಬ ಆರೋಪ ದಟ್ಟವಾಗಿದೆ. ಒಬ್ಬ ಐಪಿಎಸ್ ಅಧಿಕಾರಿಯೂ ಸೇರಿದಂತೆ 113ಕ್ಕೂ ಹೆಚ್ಚು ಜನರ ಬಂಧನವಾಗಿತ್ತು. 2023ರಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ನಡೆದ ಹಗರಣದಲ್ಲಿ ಅಕ್ರಮ ಆದೇಶಗಳನ್ನು ನೀಡಲಾಗಿತ್ತು. 2022ರಲ್ಲಿ ಕೆಪಿಟಿಸಿಎಲ್ ಜೂನಿಯರ್ ಇಂಜಿನಿಯರ್ ಹುದ್ದೆಗಳ ಪರೀಕ್ಷೆಯಲ್ಲಿ ಅಕ್ರಮ, 2023ರಲ್ಲಿ ಕೆಇಎ ನೇಮಕಾತಿ ಹಗರಣ ಈಗ ಬೆಳಕಿಗೆ ಬಂದಿವೆ. ಹೀಗಾಗಿ ಉದ್ಯೋಗಾಕಾಂಕ್ಷಿಗಳು ಕೆಪಿಎಸ್‌ಸಿ ಮೇಲಿನ ಭರವಸೆಯನ್ನೇ ಕಳೆದುಕೊಂಡಿದ್ದಾರೆ. ಕೆಪಿಎಸ್‌ಸಿ ಸುಧಾರಣೆಗಾಗಿ ಹೊರಬಂದ ಹೋಟಾ ಸಮಿತಿ ವರದಿಯನ್ನು ಸರ್ಕಾರವು ಇನ್ನೂ ಜಾರಿ ಮಾಡಿಲ್ಲ.
ಸರ್ಕಾರಗಳ ಧೋರಣೆ ಬದಲಾಗಲು ಆಗ್ರಹಿಸಬೇಕು:
ಒಂದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರಿಗೆ ಶಿಕ್ಷಣ, ಆರೋಗ್ಯ, ಉದ್ಯೋಗ ಒದಗಿಸುವ ಮೂಲಭೂತ ಕರ್ತವ್ಯವನ್ನು ಸರ್ಕಾರವು ಹೊಂದಿದೆ. 1990ರ ನಂತರ ದೇಶದಲ್ಲಿ ಜಾರಿಯಾದ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣ ನೀತಿಗಳ ನಂತರದ ಈ ದಿನಗಳಲ್ಲಿ ಉದ್ಯೋಗ ನೀಡಿಕೆಯು ತನ್ನ ಕೆಲಸವಲ್ಲ ಎಂಬ ಧೋರಣೆಯನ್ನು ಸರ್ಕಾರವು ತಳೆದಿವೆ. ಉದ್ಯೋಗ ಕಡಿತದ ನೀತಿಯನ್ನು ಅನುಸರಿಸುವ ವಿಷಯದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಯಾವ ಪಕ್ಷಗಳ ಆಡಳಿತದ ಕಾಲದಲ್ಲೂ ನೇಮಕಾತಿಯು ಪ್ರಾಮುಖ್ಯತೆಯನ್ನು ಪಡೆದಿಲ್ಲ. ಅವು ಪ್ರಚಾರದ ಹಾಗೂ ಚುನಾವಣೆಯ ವಿಷಯಗಳು ಮಾತ್ರ ಆಗಿವೆ. ನಿರುದ್ಯೋಗಿ ಯುವಜನರ ಮೂಗಿಗೆ ತುಪ್ಪ ಹಚ್ಚಿ, ಅವರನ್ನು ಓಟು ಬ್ಯಾಂಕ್‌ಗಳಾಗಿ ಅಥವಾ ತಮ್ಮ ಪಕ್ಷಗಳ ಕಾಲಾಳುಗಳಾಗಿ ಬಳಸುವುದಷ್ಟೇ ಎಲ್ಲ ಪಕ್ಷಗಳ ಉದ್ದೇಶವಾಗಿದೆ. ಆಗೀಗ ನಡೆಯುತ್ತಿರುವ ಅಲ್ಪಸ್ವಲ್ಪ ನೇಮಕಾತಿಗಳು ‘ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ಯಂತೆ ಎಂಬಂತಾಗಿದೆ.
ಉದ್ಯೋಗಾಕಾಂಕ್ಷಿಗಳ ಮುಂದೆ ಇರುವ ಸವಾಲು:
ಯುವಜನರು ನಿರಂತರವಾಗಿ, ವ್ಯವಸ್ಥಿತವಾಗಿ, ಶಿಸ್ತುಬದ್ಧವಾಗಿ, ಸಂಘಟಿತವಾಗಿ, ಸಾಮೂಹಿಕವಾಗಿ ಪ್ರಜ್ಞಾವಂತ ಹೋರಾಟ ಕಟ್ಟುವುದೊಂದೇ ಪರಿಹಾರ. ಕೆಪಿಎಸ್‌ಸಿಗೆ ಕಾಯಕಲ್ಪ ಮಾಡಲು ಪಿ.ಸಿ ಹೋಟಾರವರ ಸಮಿತಿಯ ಶಿಫಾರಸ್ಸನ್ನು ಅನುಷ್ಠಾನಗೊಳಿಸಲು ಒತ್ತಡ ತರುವುದು, ರಾಜ್ಯ ಸರ್ಕಾರದ ನೇಮಕಾತಿ ಅಧಿಸೂಚನೆ ಹೊರಡಿಸಿದ ಸಂದರ್ಭದಲ್ಲಿಯೇ ಲಿಖಿತ, ಮೌಖಿಕ ಪರೀಕ್ಷೆ, ಫಲಿತಾಂಶ ಪ್ರಕಟಣೆ ಮತ್ತು ನೇಮಕಾತಿ ಪತ್ರ ನೀಡುವುದು ಒಳಗೊಂಡಂತೆ ನಿಖರವಾದ ವಾರ್ಷಿಕ ವೇಳಾಪಟ್ಟಿ ಬಿಡುಗಡೆ ಮಾಡಿ ನೇಮಕಾತಿಯಲ್ಲಿ ಪಾರದರ್ಶಕತೆಯನ್ನು ಕಾಪಾಡಬೇಕು ಎಂಬ ಕೂಗು ಜೋರಾಗಬೇಕಾಗಿದೆ.