ಸಾಮ್ರಾಜ್ಯಶಾಹಿ ಚೀನಾದಲ್ಲಿ ಅಧೋಗತಿಗಿಳಿದ ಕಾರ್ಮಿಕ ವರ್ಗದ ಪರಿಸ್ಥಿತಿ
ರಸ್ತೆಗಳು ಒಂದೆಡೆ ಸೇರುವ ಸ್ಥಳದಲ್ಲಿ ರಾತ್ರಿ ವೇಳೆ ತೆರೆದಿರುವ ಉಪಾಹಾರಗೃಹಗಳ ಬಳಿ ಫ್ಲೂರೊಸೆಂಟ್ ಬೆಳಕಿನ ದೀಪದ ಬಳಿ ಅಲ್ಲಲ್ಲಿ ಜನರು ಸಣ್ಣ ಗುಂಪುಗಳಲ್ಲಿ ಕಾದು ನಿಂತಿದ್ದರು. ನಿಧಾನವಾಗಿ ಬೇಯಿಸಿದ ಬನ್ಗಳನ್ನು ತಿನ್ನುತ್ತಿದ್ದರು. ಬೆಳಗಿನ ಜಾವ 4.30 ಆಗುತ್ತಿದ್ದಂತೆಯೇ ಸೂರ್ಯನ ಮೊದಲ ಕಿರಣಗಳು ನೆಲವನ್ನು ಸೋಕಲಾರಂಭಿಸಿದವು. ಆಗಲೇ ಪ್ರತಿಯೊಬ್ಬರೂ ಏತಕ್ಕೆ ಕಾಯುತ್ತಿದ್ದರು ಎಂಬುದು ಸ್ಪಷ್ಟವಾಗತೊಡಗಿತು.
ಗುತ್ತಿಗೆ ಕೆಲಸಕ್ಕೆ ಕರೆದೊಯ್ಯುವ ಏಜೆಂಟರು ಎಲೆಕ್ಟ್ರಿಕ್ ಸ್ಕೂಟರ್ಗಳಲ್ಲಿ ಬರಲಾರಂಭಿಸಿದರು. ಧಾವಂತದಲ್ಲಿದ್ದಂತೆ ಕಂಡು ಬಂದ ಅವರು, 170 ಯುವಾನ್, 180 ಯುವಾನ್ (25 ಡಾಲರ್) ಎಂದು ಕೂಲಿಯ ದರವನ್ನು ಕೂಗಲು ಶುರು ಮಾಡಿದರು. ಅಲ್ಲಿಯೇ ಅಲೆದಾಡುತ್ತಿದ್ದ ಕಾರ್ಮಿಕರು ಏಜೆಂಟನ ಬಳಿ ಬಂದು ತಮಗೆಷ್ಟು ವೇತನ ಸಿಗಬಹುದು ಎಂದು ವಿಚಾರಿಸಲು ಶುರು ಮಾಡಿದರು. ಆತ ಕಾರ್ಮಿಕರನ್ನು ಕರೆದೊಯ್ಯಲು ಬಂದಿದ್ದು ಕಟ್ಟಡ ನಿರ್ಮಾಣ ಕೆಲಸಕ್ಕೆ, ಮಿನರಲ್ ಬಾಟಲಿಗಳ ಪ್ಯಾಕಿಂಗ್ಗೆ ಅಥವಾ ಕಟ್ಟಡಗಳ ಸ್ವಚ್ಛತೆಯ ಕೆಲಸಗಳಿಗೆ. ಪುರುಷ ಮತ್ತು ಮಹಿಳಾ ಕಾರ್ಮಿಕರು ಅಲ್ಲಿಯೇ ಸಮೀಪದಲ್ಲಿ ಅತಿ ಅಗ್ಗದ ದರದಲ್ಲಿ ಸಿಗುತ್ತಿದ್ದ ಛತ್ರಗಳಲ್ಲಿ ತಂಗಿದ್ದರು. ಇಂತಹ ನೂರಾರು ಕಾರ್ಮಿಕರು ತಮಗೂ ಒಂದು ಕೆಲಸ ಸಿಗುತ್ತದೇನೋ ಎಂದು ಬಕಪಕ್ಷಿಯಂತೆ ಕಾಯ್ದುಕೊಂಡು ಕುಳಿತಿದ್ದ ಆ ಸ್ಥಳದ ಹೆಸರು ಮಾಜುಖಿಯೊ. ಇದು ಚೀನಾದ ರಾಜಧಾನಿ ಬೀಜಿಂಗ್ನ ದಕ್ಷಿಣಭಾಗದ ಹೊರವಲಯದಲ್ಲಿದೆ.
ಇದು ಬೀಜಿಂಗ್ನ ಅತಿದೊಡ್ಡ ಕಾರ್ಮಿಕರ ಬಿಕರಿಯ ಮಾರುಕಟ್ಟೆಯಾಗಿದೆ. ಚೀನಾದ ವಿವಿಧ ಭಾಗಗಳಿಂದ ತಮಗೂ ಕೆಲಸ ಸಿಗುತ್ತದೇನೋ ಎಂಬ ಭರವಸೆಯ ನೋಟವನ್ನು ಹೊತ್ತು ಬೆಳ್ಳಂಬೆಳಿಗ್ಗೆಯೇ ಇಲ್ಲಿಗೆ ಕಾರ್ಮಿಕರು ಬಂದಿರುತ್ತಾರೆ. ಅಂದಿನ ಕೂಲಿ ಕೆಲಸ ಸಿಕ್ಕವರು ಕೂಡಲೇ ಮಿನಿ ವ್ಯಾನ್ಗಳನ್ನು ಹತ್ತಿ ಹೋಗುತ್ತಾರೆ. ಇನ್ನು ಕೆಲವರು ತಮ್ಮ ವಾಹನಗಳಲ್ಲೇ ಕೆಲಸದ ಸ್ಥಳಕ್ಕೆ ಹೋಗುತ್ತಾರೆ. ಕೆಲಸ ಸಿಗದವರು ಕೆಲಸಕ್ಕೆ ತೆಗೆದುಕೊಳ್ಳಲು ಬರುವ ಇನ್ನೊಬ್ಬ ಏಜೆಂಟನಿಗಾಗಿ ಕಾಯುತ್ತಾ ಕುಳಿತುಕೊಳ್ಳುತ್ತಾರೆ. ಕೊನೆಗೂ ಕೆಲಸ ಸಿಗದವರು ವಿಷಾದವನ್ನು ಹೊತ್ತು ಮನೆಯತ್ತ ಕಾಲು ಹಾಕುತ್ತಾರೆ. ಬೆಳಿಗ್ಗೆ 8 ಗಂಟೆ ಸುಮಾರಿಗೆ ಕೂಲಿ ಕೆಲಸಕ್ಕಾಗಿ ಕಾಯುತ್ತಿರುವವರ ಸಾಲು ತೆಳ್ಳಗಾಗುತ್ತದೆ. ಕಾರ್ಮಿಕರ ‘ಹಣೆಬರಹ’ ಆ ಹೊತ್ತಿಗೆ ನಿರ್ಧಾರವಾಗಿರುತ್ತದೆ. ಕೂಲಿಗಾಗಿ ಪರದಾಡುವ ಕಾರ್ಮಿಕರ ವಾಸ್ತವ್ಯದ ನೆಲೆಗಳಂತೂ ಅತ್ಯಂತ ದಯನೀಯ ಸ್ಥಿತಿಯಲ್ಲಿವೆ. ಟೆಲಿಫೋನ್ ಕಂಬಗಳಿಗೆ ಒರಗಿ ಕೆಲವರು ಮಲಗುತ್ತಾರೆ. ಜಾಹೀರಾತು ಫಲಕಗಳನ್ನು ಹೊದಿಸಿ ಗೂಡಿನಂತೆ ನಿರ್ಮಾಣ ಮಾಡಿದ ಗುಡಿಸಲುಗಳಿಗೆ ರಾತ್ರಿಯೊಂದಕ್ಕೆ ೩ ಡಾಲರ್ ಬೆಲೆ ನಿಗದಿಗೊಳಿಸಿದ್ದಾರೆ. ಇನ್ನೂ ಹಲವು ನತದೃಷ್ಟರು ಮೊಬೈಲ್ ಫೋನ್ ದುರಸ್ತಿ ಅಂಗಡಿಗಳ ಬಳಿ, ಮತ್ತೆ ಕೆಲವರು ಬೀದಿಗಳಲ್ಲಿಯೇ ತಮ್ಮ ರಾತ್ರಿಗಳನ್ನು ಕಳೆಯುತ್ತಾರೆ.
“ಯಾರಾದರೂ ನಟರಾಗ ಬಯಸುತ್ತೀರಾ?” ಸ್ಕೂಟರ್ನಲ್ಲಿದ್ದ ವ್ಯಕ್ತಿ 16 ರಿಂದ 50 ವಯಸ್ಸಿನ ಮಹಿಳೆಯರನ್ನು ಸಿನಿಮಾ ನಟನೆಗೆ ಕರೆದೊಯ್ಯುವ ಉದ್ದೇಶದಿಂದ ಕರೆಯುತ್ತಿದ್ದ. ಅಷ್ಟರಲ್ಲಿ ನಟನೆಗೆ ಎಷ್ಟು ಹಣ ಕೊಡುತ್ತಾನೆ ಎಂದು ಕೇಳಿದರಾಯಿತು ಎಂದುಕೊಂಡು ಗುಂಪೊಂದು ಆತನ ಸುತ್ತ ಸೇರಿತು. ಎರಡರಿಂದ ಮೂರು ಗಂಟೆಗೆ 14 ಡಾಲರ್ ಕೊಡುವ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಅಷ್ಟು ಹಣ ತಮಗೆ ಗಿಟ್ಟುವುದಿಲ್ಲ ಎಂದುಕೊಂಡು ಆ ಗುಂಪು ಅಲ್ಲಿಂದ ತೆರಳಿತು. ಮತ್ತೊಂದು ಗುಂಪಿನಲ್ಲಿ ತನಗೆ ಬೇಕಾದ ಕಲಾವಿದರು ಸಿಗಬಹುದೇ ಎಂದು ಹುಡುಕಿಕೊಂಡು ಆತನೂ ಸ್ಕೂಟರ್ ಚಾಲನೆ ಮಾಡಿಕೊಂಡು ಮುಂದೆ ಹೊರಟ.
ಅವಕಾಶ ನಿರಾಕರಿಸಿ ಮುಂದೆ ಸಾಗಿದ ಮಹಿಳೆ ವಾಂಗ್ ಲಿಯುನ್. ತನ್ನ ಗಟ್ಟಿ ಧ್ವನಿಯಿಂದ ಎಲ್ಲರ ಗಮನ ಸೆಳೆದಿದ್ದ ವಾಂಗ್ಗೆ ಈಗ 43 ವರ್ಷ. ನಟನೆಗೆ ನೇಮಸಿಕೊಳ್ಳಬಯಸುವವರ ಮಾನದಂಡಗಳಿಗೆ ತಕ್ಕಂತೆ ತಾನಿಲ್ಲ ಎಂಬ ಕೊರಗು ಆಕೆಗೆ ಇದೆ. 40 ವರ್ಷಕ್ಕೇನೆ ತಾನು ಆ ವೃತ್ತಿಯಿಂದ ನಿವೃತ್ತಳಾಗಿದ್ದೇನೆ ಎಂದು ನಿಟ್ಟುಸಿರು ಬಿಡುತ್ತಾರೆ ವಾಂಗ್. ಉದ್ಯೋಗದ ಹುಡುಕಾಟಕ್ಕೆ ಹೀಗೆ ಮಾರುಕಟ್ಟೆಗೆ ವಾಂಗ್ ಬರಲು ಶುರು ಮಾಡಿದ್ದು 2022ರಲ್ಲಿ. ಅದಕ್ಕೂ ಮೊದಲು ಅಸಾಧ್ಯ ಎಂದಾಗ ಅಲ್ಲಿಂದ ನಿರ್ಗಮಿಸಿದ್ದರು. ಪ್ರತಿ ದಿನವೂ ಉದ್ಯೋಗ ಮಾರುಕಟ್ಟೆಗೆ ಬರುತ್ತಿದ್ದ ವಾಂಗ್ಗೆ ವಾರದಲ್ಲಿ 4 ರಿಂದ 5 ದಿನಗಳಷ್ಟೇ ಕೆಲಸ ಸಿಗುತ್ತಿತ್ತು. ಬಹಳ ಅದೃಷ್ಟದ ದಿನಗಳಲ್ಲಿ ಮಾತ್ರ 25 ಡಾಲರ್ನಷ್ಟು ವೇತನ ಸಿಗುತ್ತಿತ್ತು. ಕೆಲವರ್ಷಗಳ ಮುನ್ನ ಮೊದಲು ವೇತನದೊಂದಿಗೆ ಊಟವೂ ಸಿಗುತ್ತಿತ್ತು. ಗಳಿಸಿದ ಹಣ ಬದುಕಿನ ಖರ್ಚಿಗೆ ಸಾಲುತ್ತಿರಲಿಲ್ಲವಾಗಿ ವಾಂಗ್ ಪಿಂಚಣಿ ಹಾಗೂ ಆರೋಗ್ಯ ವಿಮೆಯ ಕಂತನ್ನು ನಿಲ್ಲಿಸಿದರು. ಅಜ್ಜ, ಅಜ್ಜಿಯೊಂದಿಗೆ ಹೀಲಾಂಗ್ಜಿಯಾಂಗ್ನಲ್ಲಿದ್ದ 13 ವರ್ಷದ ಮಗನಿಗೆ ಕಳಿಸುವ ಹಣದಲ್ಲಿಯೂ ಕಡಿತ ಮಾಡಬೇಕಾಯಿತು.
“ನನ್ನ ಮಗನಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬ ಆಸೆ ಇತ್ತು. ಆದರೆ, ಇಂದು ಅಸಾಧ್ಯ. ಏಕೆಂದರೆ ಎಲ್ಲವೂ ವ್ಯಾಪಾರ-ವ್ಯವಹಾರವಾಗಿದೆ” ಎಂದು ವಾಂಗ್ ಬೇಸರದಿಂದ ಹೇಳುತ್ತಾರೆ.
ಹುವೊ ಸ್ಯಾಕ್ಷಿ ಎಂಬುವವರು ಸಹ ಕಳೆದ ನಾಲ್ಕು ವರ್ಷಗಳಿಂದ ಉದ್ಯೋಗ ಮಾರುಕಟ್ಟೆಗೆ ಬರುತ್ತಿದ್ದಾರೆ. ಮುಂಚೆ ಒಂದು ಪ್ರಕಾಶನ ಸಂಸ್ಥೆಯಲ್ಲಿದ್ದ ಅವರು ಇಲ್ಲಿ ದಿನಗೂಲಿ ಕೆಲಸಕ್ಕೆಂದು ಬರುತ್ತಿದ್ದಾರೆ. “ಇಲ್ಲಿನ ಉದ್ಯೋಗ ಖಾಯಂ ಅಲ್ಲ. ಒಂದು ತಿಂಗಳಲ್ಲಿ 15 ದಿನ ಉದ್ಯೋಗ ದೊರಕುತ್ತದೆ. ಅದರ ಮಧ್ಯೆ ಆಗಾಗ ಕುಟುಂಬದ ಜೊತೆಗೆ ಕಾಲ ಕಳೆಯಲು ಊರಿಗೂ ಹೋಗಬಹುದು” ಎಂಬುದು ಅವರ ಮಾತು. ಚೀನಾದ ಇಂದಿನ ಪರಿಸ್ಥಿತಿ ಕುರಿತ ವರದಿಯು ನ್ಯೂಯರ್ಕ್ ಟೈಮ್ಸ್ನಲ್ಲಿ ಪ್ರಕಟವಾಗಿದೆ.
ಇನ್ನಷ್ಟು ಭೀಕರ ಪರಿಸ್ಥಿತಿ ಉದ್ಭವ
ಚೀನಾದಲ್ಲಿ ಉದ್ಯೋಗದ ಮಾರುಕಟ್ಟೆಯು ಕುಸಿಯುತ್ತಿರುವ ಕೆಲ ಲಕ್ಷಣಗಳಷ್ಟೇ ಇವು. ಚೀನಾದ ರಾಷ್ಟ್ರೀಯ ಸಾಂಖ್ಯಿಕ ಬ್ಯುರೊದ ಅಂಕಿಅಂಶಗಳ ಪ್ರಕಾರ ಯುವಜನರಲ್ಲಿ ನಿರುದ್ಯೋಗದ ಪ್ರಮಾಣ ಶೇ 21.3ನ್ನು ತಲುಪಿದೆ. 11.79 ಲಕ್ಷ ಸ್ನಾತಕೋತ್ತರ ಪದವೀಧರರು ಅನಿರೀಕ್ಷಿತ ಉದ್ಯೋಗದ ಕೊರತೆಯನ್ನು ಎದುರಿಸುತ್ತಿದ್ದಾರೆ. ಹಲವು ಕಾರ್ಖಾನೆಗಳು ಭಾರಿ ಪ್ರಮಾಣದಲ್ಲಿ ಉದ್ಯೋಗ ಕಡಿತವನ್ನು ಘೋಷಿಸಿವೆ. ಭಾರಿ ಸಂಬಳ ನೀಡುವ ಟೆಸ್ಲಾ, ಐಬಿಎಂ ಮತ್ತು ಬೈಟ್ ಡಾನ್ಸ್ ಕಂಪನಿಗಳು ಸಹ ಇತ್ತೀಚಿನ ತಿಂಗಳಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿವೆ. ನಗರ ಪ್ರದೇಶದ 16 ರಿಂದ 24೪ ವಯಸ್ಸಿನ ಅಂದಾಜು 10 ಕೋಟಿ ಯುವಜನರ ಪೈಕಿ ಶೇ 17.1ರಷ್ಟು ಉದ್ಯೋಗಾಕಾಂಕ್ಷಿಗಳಿಗೆ ನೌಕರಿಗಳು ಲಭಿಸುತ್ತಿಲ್ಲ. ಗ್ರಾಮೀಣ ಪ್ರದೇಶದ ಲಕ್ಷಾಂತರ ಯುವಜನರು ನಿರುದ್ಯೋಗದಿಂದ ಬಳಲುತ್ತಿದ್ದಾರೆ ಎನ್ನುತ್ತಾರೆ ವಿಶ್ಲೇಷಕರು.
2023ರ ಜೂನ್ನಲ್ಲಿ ನಿರುದ್ಯೋಗದ ಪ್ರಮಾಣ ಸಾರ್ವಕಾಲಿಕ ಶೇ 21.3ರಷ್ಟು ತಲುಪಿದ ಬಳಿಕ ಚೀನಾ ಸರ್ಕಾರವು ನಿರುದ್ಯೋಗಿಗಳ ದತ್ತಾಂಶ ಬಿಡುಗಡೆಯನ್ನೇ ಕೈಬಿಟ್ಟಿತು. ಯಥೇಚ್ಛವಾಗಿ ಉದ್ಯೋಗಿಗಳನ್ನು ಕೈಬಿಡುವ ಕ್ರಮದಿಂದಾಗಿ ಕೋಟ್ಯಾಂತರ ಯುವಜನರು ಕಡಿಮೆ ವೇತನಕ್ಕೆ ದುಡಿಯುವ ಅನಿವಾರ್ಯತೆ ಸೃಷ್ಟಿಯಾಯಿತು. ಚೀನಾದಲ್ಲಿ ಉನ್ನತ ಶಿಕ್ಷಣ ಪಡೆಯುವ ಯುವಕರ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿವೆ. ಏತನ್ಮಧ್ಯೆ, ಭಾರತದಲ್ಲಿ ಹೆಚ್ಚಿನ ಅವಧಿಯ ದುಡಿಮೆಗೆ ಸಂಬಂಧಿಸಿದಂತೆ ಕಾರ್ಮಿಕ ವಿರೋಧಿ ಉದ್ಯಮಿಗಳಂತೆ ಚೀನಾದಲ್ಲಿ ಜಾಕ್ ಮಾ ಎಂಬ ಬೃಹತ್ ಬಂಡವಾಳಗಾರ ಪ್ರತಿದಿನ 12 ಗಂಟೆ, ವಾರದಲ್ಲಿ 6 ದಿನ ದುಡಿಯಬೇಕು ಎಂದು ಹೇಳಿಕೆ ನೀಡಿದ್ದರು.
ಸಮಾಜವಾದಿ ಆರ್ಥಿಕತೆ ಅಥವಾ ಪ್ರಭುತ್ವದ ಕಾರಣಗಳಿಂದ ಈ ಬೆಳವಣಿಗೆ ಆಗುತ್ತಿದೆಯೇ ಎಂಬ ಪ್ರಶ್ನೆ ಏಳಬಹುದು. ಖಂಡಿತ ಇಲ್ಲ. ಚೀನಾದ ಮಹಾನ್ ಕ್ರಾಂತಿಕಾರಿ ನಾಯಕ ಮಾವೋ ಜೆ ಡಾಂಗ್ರ ನೇತೃತ್ವದಲ್ಲಿ ಅಲ್ಲಿನ ಔದ್ಯೋಗಿಕ ಕ್ಷೇತ್ರ ಸಾಕಷ್ಟು ದೃಢತೆಯನ್ನು ಹೊಂದಿತ್ತು. ಖಾಯಂ ಸ್ವರೂಪದ ಉದ್ಯೋಗದ ಜೊತೆಗೆ ಮಾರ್ಕ್ಸ್ವಾದ, ಲೆನಿನ್ವಾದದ ಸಿದ್ಧಾಂತದ ಬೆಳಕಿನಲ್ಲಿ ದೇಶದ ಸಂಪತ್ತು ಸೃಷ್ಟಿಸಲು ಕಾರ್ಮಿಕರು ಹೇಗೆ ನೆರವಾಗುತ್ತಾರೆ ಎಂಬ ಬಗ್ಗೆಯೂ ಆಗ ಅಲ್ಲಿನ ಕಾರ್ಮಿಕರಿಗೆ ಮನದಟ್ಟು ಮಾಡಿಸಲಾಯಿತು.
“1949ರಲ್ಲಿ ಚೀನಾದಲ್ಲಿ ಆದ ಕ್ರಾಂತಿಯು ಕಾರ್ಮಿಕರ ಪಾಲಿಗೆ ಸ್ವರ್ಗದತ್ತ ದೃಢವಾದ ಹೆಜ್ಜೆಯಂತಿತ್ತು. ಕಾರ್ಖಾನೆಗಳು ಕಾರ್ಮಿಕರ ಮಾಲೀಕತ್ವದಲ್ಲಿದ್ದವು. ನಮ್ಮ ಜೀವನಮಟ್ಟ ಸುಧಾರಿಸಿದಂತೆಲ್ಲ ನಾವು ಪಡೆಯುವ ವೇತನದ ಪ್ರಮಾಣವನ್ನೂ ಕಡಿಮೆ ಮಾಡಿಕೊಂಡೆವು. ಚೀನಾದ ಕಮ್ಯುನಿಸ್ಟ್ ನಾಯಕತ್ವ ಎಷ್ಟು ನಿಗದಿ ಮಾಡುತ್ತದೋ ಅಷ್ಟೇ ವೇತನ ಪಡೆಯಲು ಇಚ್ಛಿಸಿದ್ದೆವು” ಎಂದು ಜವಳಿ ಕಾರ್ಮಿಕರು ಹೇಳಿದ್ದನ್ನು ಮಾರಿಯಾ ಮಾಷಿಯೊಚ್ಚಿ ಎಂಬ ಲೇಖಕಿ 1958ರಲ್ಲಿ ತಾವು ಬರೆದ ‘ಕ್ರಾಂತಿಕಾರಿ ಚೀನಾದ ದೈನಂದಿನ ಬದುಕು’ ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ.
ಸಮಾಜವಾದದಿಂದ ಬಂಡವಾಳವಾದದೆಡೆಗಿನ ಹಿನ್ನಡೆ
ಇತ್ತೀಚಿನ ವರ್ಷಗಳಲ್ಲಿ ಚೀನಾದಲ್ಲಿ ಸಮಾಜವಾದಿ ವ್ಯವಸ್ಥೆ ಸಂಪೂರ್ಣ ಬುಡಮೇಲಾಗಿದೆ. ಅದು ಸಾಮ್ರಾಜ್ಯಶಾಹಿ ಲಕ್ಷಣಗಳನ್ನು ಪಡೆದಿದೆ. ಆದರೆ, ಇಂದಿಗೂ ಸಿಪಿಐ, ಸಿಪಿಎಂ, ಸಿಪಿಎಂಎಲ್ನಂತಹ ಪಕ್ಷಗಳು ಚೀನಾದಲ್ಲಿ ಇನ್ನೂ ಸಮಾಜವಾದಿ ವ್ಯವಸ್ಥೆ ಇದೆ ಎಂದು ನಂಬಿವೆ. ಚೀನಾದಲ್ಲಿ ಪ್ರತಿಕ್ರಾಂತಿ ನಡೆದು ಅಲ್ಲಿ ಬಂಡವಾಳವಾದ ಪುನರ್ಸ್ಥಾಪಿತವಾದುದನ್ನು ಮೊದಲಿಗೆ ಗುರುತಿಸಿದ್ದು ನಮ್ಮ ಪಕ್ಷ ಎಸ್ಯುಸಿಐ(ಸಿ). ಚೀನಾದ ಆಂತರಿಕ ಹಾಗೂ ಅಂತರರಾಷ್ಟ್ರೀಯ ಲಕ್ಷಣಗಳನ್ನು ಗಮನಿಸಿದಾಗ ಅದು ಸಮಾಜವಾದಿ ತತ್ವಗಳಿಂದ ಬಹುದೂರ ಸರಿದಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಸಮಾಜವಾದಿ ವ್ಯವಸ್ಥೆಯಲ್ಲಿ ನಿರುದ್ಯೋಗದ ಪ್ರಮಾಣವು ಕ್ರಮೇಣ ಕಡಿಮೆಯಾಗುತ್ತಾ ಬಂದು ನಂತರ ಎಲ್ಲರಿಗೂ ಉದ್ಯೋಗ ಸಿಗುತ್ತದೆ (ಉದಾ: ಸೋವಿಯತ್ ರಷ್ಯಾದಲ್ಲಿ ಸ್ಟಾಲಿನ್ರ ಆಡಳಿತದಲ್ಲಿ ಹೀಗೆ ಯಥೇಚ್ಛವಾಗಿ ಉದ್ಯೋಗ ಸೃಷ್ಟಿಯಾಗಿತ್ತು.). ಇದೀಗ ಚೀನಾದ ಪರಿಸ್ಥಿತಿಯು ಸಂಪೂರ್ಣ ಬದಲಾಗಿದ್ದು, ಉದ್ಯೋಗದ ಸ್ಥಳಗಳಲ್ಲಿ ಉತ್ತಮ ವಾತಾವರಣ ಕಲ್ಪಿಸಲು ಹಾಗೂ ಸಮಾಜವಾದಿ ವ್ಯವಸ್ಥೆಯನ್ನು ಪುನರ್ಸ್ಥಾಪಿಸುವ ಬೇಡಿಕೆ ಮುಂದಿಟ್ಟುಕೊಂಡು ಪ್ರತಿಭಟನೆಗಳನ್ನು ನಡೆಸುತ್ತಿರುವವರ ಮೇಲೆ ಹಿಂಸಾತ್ಮಕ ಬಲಪ್ರಯೋಗ ಮಾಡಲಾಗುತ್ತಿದೆ ಮತ್ತು ಅಂತಹ ಹೋರಾಟಗಳನ್ನು ಹತ್ತಿಕ್ಕಲಾಗುತ್ತಿದೆ. ಮತ್ತೊಂದೆಡೆ, ಚೀನಾದಲ್ಲಿ ವಿದೇಶಿ ನೇರ ಹೂಡಿಕೆಯು ಭಾರಿ ಪ್ರಮಾಣದಲ್ಲಿ ಏರಿದೆ. 744 ಶತಕೋಟಿ ಡಾಲರ್ ಇದ್ದ ವಿದೇಶಿ ನೇರ ಹೂಡಿಕೆ 2020ರ ವೇಳೆಗೆ 20 ಸಾವಿರ ಕೋಟಿ ಡಾಲರ್ಗೆ ಏರಿಕೆ ಕಂಡಿದೆ.
ಕೊನೆಯ ಮಾತು – ಭರವಸೆ ಉಳಿದಿದೆ
ಚೀನಾದ ಅಭಿವೃದ್ಧಿಯ ಹುಸಿ ಮಹಲು ಕುಸಿದು ಹೋಗುತ್ತಿರುವುದಕ್ಕೆ ಮಾವೋ ನಂತರ ಅಧಿಕಾರವನ್ನು ಹಿಡಿದ ಡೆಂಗ್ ಕ್ಷಿಯೋಪಿಂಗ್ ತಂದ ಪರಿಷ್ಕರಣಾವಾದಿ-ಸುಧಾರಣಾವಾದಿ ಸಿದ್ಧಾಂತವೇ ಕಾರಣ ಎಂಬುದು ತಡವಾಗಿಯಾದರೂ ಅಲ್ಲಿನ ಜನತೆಯ ಅರಿವಿಗೆ ಬರುತ್ತಿರುವಂತೆ ಕಾಣುತ್ತಿದೆ. ಸಾಮ್ರಾಜ್ಯಶಾಹಿ ಹಾದಿಯತ್ತ ಚೀನಾವನ್ನು ಹೊತ್ತೊಯ್ಯುತ್ತಿರುವ ಶಕ್ತಿಗಳು ಮಾವೋ ಜೆ ಡಾಂಗ್ರನ್ನು ಜನಮಾನಸದಿಂದ ಅಳಿಸಿಹಾಕಲು ನಡೆಸುತ್ತಿರುವ ಎಲ್ಲ ಪ್ರಯತ್ನಗಳು ಯಶಸ್ಸನ್ನು ಪಡೆಯುತ್ತಿಲ್ಲ. ಇಂದಿಗೂ ಸಹ ಮಾವೋ ಜನರ ಸ್ಮೃತಿಪಟಲದಲ್ಲಿ ವಿಮೋಚಿತ ಚೀನಾದ ರಾಷ್ಟ್ರೀಯ ನಾಯಕರಾಗಿಯೇ ಉಳಿದಿದ್ದಾರೆ. ಹಲವು ಜನರಿಗೆ ಇಂದಿಗೂ ಸೈದ್ಧಾಂತಿಕ ನಾಯಕರಾಗಿ ಅವರ ಮನದಲ್ಲಿ ನೆಲೆಸಿದ್ದಾರೆ.
ಮತ್ತೊಮ್ಮೆ ಕ್ರಮೇಣವಾಗಿ ಮಾವೋ ಅವರ ವಿಚಾರಗಳು ಮುನ್ನೆಲೆಗೆ ಬರುತ್ತಿವೆ. ಭಾರಿ ಮೆರವಣಿಗೆಗಳಲ್ಲಿ ಮಾವೋ ಅವರ ಬೃಹತ್ ಭಾವಚಿತ್ರಗಳನ್ನು ಹೆಮ್ಮೆಯಿಂದ ಪ್ರದರ್ಶಿಸಿಕೊಂಡು ಜನರು ನಡೆಯುತ್ತಿದ್ದಾರೆ. ಚೀನಾ ಕ್ರಾಂತಿಯ ಶಿಲ್ಪಿ ಮಹಾನ್ ಮಾವೋ ಅವರ ನಿಜವಾದ ಅನುಯಾಯಿಗಳಾದ ನಾವುಗಳು ಚೀನಾದಲ್ಲಿ ನಿಜವಾದ ಕಮ್ಯುನಿಸ್ಟ್ ಪಕ್ಷದ ಮುಖಂಡರು, ಕಾರ್ಯಕರ್ತರು ನಡೆಸುತ್ತಿರುವ ಚಳವಳಿಗೆ ಭ್ರಾತೃತ್ವದ ಸಂಕೇತವಾಗಿ ನಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಬೇಕು.