“ಜನರನ್ನು ಕೊಲ್ಲಲು ನಾನು ಹಿಂದಿರುಗುವುದಿಲ್ಲ” ಗಾಜಾ಼ದಲ್ಲಿ ಹೋರಾಡಿದ ಇಸ್ರೇಲಿ ಯೋಧನ ಘೋಷಣೆ!
ಗಾಜಾ಼ದಲ್ಲಿ ಪ್ಯಾಲೆಸ್ಟೀನಿಯರ ಮೇಲೆ ಯುದ್ಧಕ್ಕೆ ಯೋಜಿತನಾದ ಯೋಧ, ಯೋಟಮ್ ವಿಲ್ಕ್ರ ಮಾತುಗಳು:
ಅಕ್ಟೋಬರ್ ೭, ೨೦೨೩, ಹಮಾಸ್‌ನ ಹತ್ಯಾಕಾಂಡದ ಪ್ರಮಾಣ ಸ್ಪಷ್ಟವಾದ ಕ್ಷಣದಿಂದಲೇ ನಾವು ಯುದ್ಧಕ್ಕೆ ಸಿದ್ಧರಾದೆವು. ನಮ್ಮ ನೋವು ಸಹಿಸಲಾರದಂಥದ್ದಾಗಿತ್ತು. ನಮಗೆ ಪ್ರೀತಿಪಾತ್ರರಾದವರನ್ನು ರಕ್ಷಿಸಲು ನಾವು ವಿಫಲವಾದೆವೆಂಬ ಭಾವನೆ ನನ್ನನ್ನು ಕಾಡುತ್ತಿತ್ತು. ಕೋಪ ಮತ್ತು ಪಶ್ಚಾತ್ತಾಪದೊಂದಿಗೆ, ತನ್ನ ಕ್ರೌರ್ಯದ ಭಯಾನಕತೆಯನ್ನು ಜಗತ್ತಿಗೆ ತೋರಿದ್ದ ಅತ್ಯಂತ ಕ್ರೂರ ಭಯೋತ್ಪಾದಕ ಸಂಘಟನೆಯ ವಿರುದ್ಧ ಯುದ್ಧಕ್ಕಿಳಿದಿದ್ದೆವು.
ಮೊದಲು ಟ್ಯಾಂಕ್ ಪ್ಲಟೂನ್ ಕಮಾಂಡರ್ ಆಗಿ, ನಂತರ ನನ್ನ ಕಂಪನಿ ಕಮಾಂಡರ್‌ನ ಉಪಕಮಾಂಡರ್ ಆಗಿ ಒಂದು ವರ್ಷಗಳ ಕಾಲ ನಾನು ಗಾಜಾ಼ದಲ್ಲಿ ಹೋರಾಡಿದ್ದೆ. ನಾನು ಅನೇಕ ದಾಳಿಗಳನ್ನು ಮುನ್ನಡೆಸಿ, ಹಮಾಸ್‌ನ ಕೋಟೆಗಳನ್ನು ವಶಪಡಿಸಿಕೊಂಡಿದ್ದೆ. ಅವರ ಸುರಂಗಗಳು, ಶಸ್ತ್ರಾಗಾರಗಳು ಮತ್ತು ಕಮಾಂಡ್ ಕೇಂದ್ರಗಳನ್ನು ಧ್ವಂಸಗೊಳಿಸುವಲ್ಲಿ ನನ್ನ ಪಾತ್ರವಿತ್ತು. ಸಾವು, ವಿನಾಶಗಳನ್ನು ಹತ್ತಿರದಿಂದ ಕಂಡೆ, ಯುದ್ಧ ಕಣ್ಣಮುಂದೆ ಧಗಧಗಿಸುತ್ತಿದ್ದರೂ ಸ್ಪಷ್ಟತೆಯ, ಹಿಂಪಡೆಯದಂತಹ ನಿರ್ಧಾರಗಳನ್ನು ಕೈಗೊಳ್ಳುವ ರಣಭಾರವನ್ನು ಹೊತ್ತಿದ್ದೆ. ಯುದ್ಧದ ಈ ಎಲ್ಲಾ ಕರಾಳತೆಯನ್ನು ಎದುರಿಸಿದ್ದೆ.
ಆದರೆ ಕಾಲ ಕಳೆದಂತೆ ನಮ್ಮದೇ ದೇಶ ದಾರಿ ತಪ್ಪಿದೆಯೆಂಬ ಕಠಿಣ ಸತ್ಯ ಗೋಚರಿಸಿತೊಡಗಿತು. ಅಕ್ಟೋಬರ್ ೭ರಂದು ನಾವು ನಮ್ಮ ಪ್ರೀತಿಪಾತ್ರರನ್ನು ಉಳಿಸಲು ಯುದ್ಧಕ್ಕೆ ಇಳಿದಿದ್ದರೂ, ಯುದ್ಧ ನಿಲ್ಲಿಸುವ ಉದ್ದೇಶವೇ ಇಲ್ಲದ ನಮ್ಮ ನಾಯಕರಿಂದಾಗಿ ಯುದ್ಧ ಕೊನೆಗಾಣುವುದಿಲ್ಲ ಎಂಬ ಸತ್ಯ ಅರಿವಾಯಿತು. ಇದು ಯುದ್ಧವನ್ನು ಕೊನೆಗಾಣಿಸಲು ಯಾವುದೇ ಇಚ್ಛಾಶಕ್ತಿ ಇಲ್ಲದ, ಜನಪ್ರಿಯತೆಯ ಹುಚ್ಚಿನಿಂದ ಬಳಲುತ್ತಿರುವ ರಾಷ್ಟ್ರವಾದಿ ಸರ್ಕಾರದ ಯುದ್ಧವಾಗಿತ್ತು. ಅವರ ನಿರ್ಧಾರಗಳಿಗೆ ಸೈನಿಕರು, ಬಂಧಿಗಳು ಮತ್ತು ಪ್ಯಾಲೆಸ್ಟೀನಿಯರು ತಮ್ಮ ರಕ್ತದಿಂದ ಬೆಲೆ ತೆರಬೇಕಾಗಿತ್ತು.
ಸೈನ್ಯದ ಮೇಲೆ ನಿಜವಾದ ನಿಯಂತ್ರಣವೂ ಇಲ್ಲದ, ಯಾವ ಕಾನೂನೂ ನಡೆಯದ ಪ್ರದೇಶವಾಯಿತು ಗಾಜಾ಼. ನಾವು ಸಮಯದ ಮಿತಿ ಇಲ್ಲದ, ಗೊತ್ತುಗುರಿ ಇಲ್ಲದ, ಅಂತ್ಯಗೊಳಿಸುವ ಯಾವ ಯೋಜನೆಯೂ ಇಲ್ಲದ ಯುದ್ಧ ಹೋರಾಡುತ್ತಿದ್ದೆವು! ಆಧುನಿಕ ರಾಷ್ಟ್ರದ ಆಲೋಚನೆಯನ್ನೇ ಹೂತುಹಾಕುವ ಪರಿಸ್ಥಿತಿ ಇದು.
ಅಕ್ಟೋಬರ್ ೯, ೨೦೨೪ ರಂದು, ನಾನು ಮತ್ತು ಐಡಿಎಫ್ ಸೈನಿಕರ ಒಂದು ಗುಂಪು ಬಹಿರಂಗ ಪತ್ರವೊಂದನ್ನು ಪ್ರಕಟಿಸಿದೆವು. ಗಾಜಾ಼ದಲ್ಲಿ ಇಸ್ರೇಲ್ ಅನುಸರಿಸುತ್ತಿರುವ ನೀತಿಗಳು ಮತ್ತು ಸರ್ಕಾರವು ಬಂಧಿಗಳೊಂದಿಗಿನ ಒಪ್ಪಂದಗಳನ್ನು ಉದ್ದೇಶಪೂರ್ವಕವಾಗಿ ನಾಶ ಮಾಡುತ್ತಿದೆ ಎಂಬ ಸಾಕ್ಷ್ಯಗಳ ಹಿನ್ನೆಲೆಯಲ್ಲಿ ನಮ್ಮ ಸೇವೆ ಮುಂದುವರಿಸಲಾಗುವುದಿಲ್ಲ ಎಂದು ಘೋಷಿಸಿದೆವು. ತಕ್ಷಣವೇ ನನ್ನ ಬ್ರಿಗೇಡ್ ಕಮಾಂಡರ್ ನನ್ನ ಒಡನಾಡಿ ಸೈನಿಕರ ವಿರೋಧವನ್ನು ಲೆಕ್ಕಿಸದೆ ನನ್ನನ್ನು ಅಮಾನತುಗೊಳಿಸಿದರು.
ಗಾಜಾ಼ ನಗರದ ಮೇಲೆ ಮತ್ತೊಂದು ದಾಳಿ ಎಸಗಲು ಇಂದು ಸರ್ಕಾರ ಸಾವಿರಾರು ರಿಸರ್ವ್ ಸೈನಿಕರನ್ನು ಆಹ್ವಾನಿಸುತ್ತಿರುವಾಗ, ನನ್ನ ಒಡನಾಡಿ ಸೈನಿಕರೊಂದಿಗೆ ಇದೋ ನನ್ನದೊಂದು ಮನವಿ – ಬೇಡ, ಪುನಃ ಹಿಂದಿರುಗಬೇಡಿ. ಸಾವಿರಾರು ಜನ ಈಗಾಗಲೇ ಸೇರ್ಪಡೆಯಾಗುವುದನ್ನು ನಿಲ್ಲಿಸಿದ್ದಾರೆ. ಕೆಲವರನ್ನು ಜೈಲಿಗೆ ತಳ್ಳಲಾಗಿದೆ. ಹಲವರು ಮೌನವಾಗಿದ್ದಾರೆ. ಈಗ ಮಾತನಾಡುವ ಸಮಯ ಬಂದಿದೆ. ಇದೇ ನಿಮ್ಮ ಬಾಧ್ಯತೆ. ಇದೇ ದಾರಿಯಲ್ಲಿ ಮುಂದುವರಿದರೆ, ನಾಶವಾಗುವುದು ಕೇವಲ ಜೀವಗಳಲ್ಲ, ಇಸ್ರೇಲ್ ಎಂಬ ಪರಿಕಲ್ಪನೆಯೇ ನಾಶವಾಗುತ್ತದೆ. ಹೀಗೆ ಮುಂದುವರೆದು ಗಾಜಾ಼ ಮೇಲೆ ನಮ್ಮ ಸಂಪೂರ್ಣ ಹತೋಟಿ ಸಾಧಿಸಿದಲ್ಲಿ, ಒಮ್ಮೆ ಈ ದೇಶವು ಪ್ರತಿನಿಧಿಸಿದ್ದ ಹಾಗೂ ಈಗ ನಶಿಸಿ ಹೋಗುವ ಹಂತದಲ್ಲಿರುವ ಪ್ರಜಾತಂತ್ರದ ಪರಿಕಲ್ಪನೆಯೇ ಕಮರಿಹೋಗುತ್ತದೆ. ಇಸ್ರೇಲ್‌ನ ಭವಿಷ್ಯವನ್ನು ಪ್ರೀತಿಸುವ ಪ್ರತಿಯೊಬ್ಬರೂ ಇದನ್ನು ಅರ್ಥಮಾಡಿಕೊಳ್ಳಬೇಕು. ತನ್ನ ಆಕ್ರಮಣಗಳಿಗೆ ಮಿತಿಯಿರಿಸದ, ಭಂಡ ಧೈರ್ಯದ, ರಾಷ್ಟ್ರವಾದಿ ಸರ್ಕಾರದ ಅಡಿಯಲ್ಲಿ ಇಸ್ರೇಲ್‌ಗೆ ಸ್ಥಿರ ಭವಿಷ್ಯವಿಲ್ಲ. ಹಿಂದೊಮ್ಮೆ ಅಸಾಧ್ಯ ಎಂಬಂಥ ಪರಿಸ್ಥಿತಿಯಲ್ಲಿಯೂ ಎದ್ದು ನಿಂತ ಈ ದೇಶದ ಜನತೆ, ಯಾರೆಲ್ಲ ಈ ದೇಶವನ್ನು ನಿಜವಾಗಿ ಪ್ರೀತಿಸುವರೋ, ಅವರು ತಮ್ಮ ದೇಶ ಸಾಗುತ್ತಿರುವ ಈ ವಿನಾಶದ ಹಾದಿಯಿಂದ ದೇಶವನ್ನು ರಕ್ಷಿಸಬೇಕು.
ಸೇನೆ ನಮ್ಮ ರಾಷ್ಟ್ರೀಯ ಅಸ್ಮಿತೆಯ ಕೇಂದ್ರವಾಗಿರುವುದರಿಂದ ಹಾಗೂ ನಮ್ಮ ಪ್ರತಿಯೊಬ್ಬರ ವ್ಯಕ್ತಿತ್ವ ರೂಪಿಸುವುದರಿಂದ ಸೈನಿಕರು ಸೇವೆಗೆ ಸಾರ್ವಜನಿಕವಾಗಿ ವಿರೋಧ ವ್ಯಕ್ತಪಡಿಸುವುದು ಇಸ್ರೇಲ್ ಸಮಾಜದಲ್ಲಿ ಅಸಾಧ್ಯವಾದ ಕೆಲಸದಂತೆ ತೋರುತ್ತದೆ. ಮಿಲಿಟರಿ ಶಕ್ತಿ ಅತ್ಯಂತ ಶಕ್ತಿಶಾಲಿ ಸಾಧನ ನಿಜ, ಆದರೆ ಅಷ್ಟೇ ಅಪಾಯಕಾರಿಯೂ ಹೌದು. ಅದು, ರಾಜಕೀಯ ಗುರಿಯನ್ನು ಸಾಧಿಸುವ ಸಾಧನವೇ ಹೊರತು ಅದೇ ರಾಜಕೀಯ ಗುರಿಯಲ್ಲ. ಒಂದು ವೇಳೆ ಶಕ್ತಿ ಪ್ರಯೋಗವೇ ಗುರಿಯಾದಲ್ಲಿ ವಿನಾಶ ನಿಶ್ಚಿತ.
ಗಾಜಾ಼ ನಗರವನ್ನು ಪುನಃ ಆಕ್ರಮಿಸುವಲ್ಲಿ ಮಿಲಿಟರಿ ತಂತ್ರವೇನೂ ಇಲ್ಲ. ಧ್ವಂಸಮಾಡುವುದನ್ನು ಮಾತ್ರವೇ ತಿಳಿದಿರುವ, ಕಟ್ಟುವ ಮನೋವೃತ್ತಿಯೂ ಇಲ್ಲದ, ಆಕ್ರಮಣದ ವ್ಯಸನ ಹತ್ತಿರುವ ಸರ್ಕಾರದ ಲಕ್ಷಣ ಇದು. ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಕಳೆದ ವಾರ “ಸಮಾಲೋಚನೆಗೆ ಹಿಂತಿರುಗುತ್ತಿದ್ದೇವೆ” ಎಂದು ಪ್ರಕಟಣೆ ನೀಡಿದ್ದು ಹೊಸದೇನಲ್ಲ. ಪ್ರತಿ ಬಾರಿಯೂ ಯುದ್ಧ ವಿರೋಧಿ ಹೋರಾಟಗಳು ಭುಗಿಲೆದ್ದಾಗ ಮಾತುಕತೆಯ ನಾಟಕ ಪ್ರಾರಂಭಿಸುತ್ತಾರೆ. ಮತ್ತೆ ತಾವೇ ಆ ಎಲ್ಲಾ ಮಾತುಕತೆಗಳನ್ನು ಮುರಿಯುತ್ತಾರೆ. ಪ್ರತಿ ಬಾರಿ ಇಸ್ರೇಲ್ ಏಕೆ ಮಾತುಕತೆಗಳನ್ನು ಮುರಿಯುತ್ತದೆ? ಇದು ನಾವಿಲ್ಲಿ ಕೇಳಲೇಬೇಕಾದ ಪ್ರಶ್ನೆ. “ಸಂಪೂರ್ಣ ಜಯ” ಎಂಬ ಪೊಳ್ಳು ಘೋಷಣೆಯನ್ನು ಸರ್ಕಾರ ಜನರ ಕಿವಿಗೆ ಬಾರಿ ಬಾರಿಯೂ ಊದುತ್ತಿದೆ. ಕಣ್ಣಿರುವ ಯಾರಿಗಾಗಲೀ ಇದು ಸುಳ್ಳು ಎಂದು ಗೋಚರಿಸದೇ ಇರುವುದಿಲ್ಲ. ಹಮಾಸ್ ಈಗಾಗಲೇ ಮಿಲಿಟರಿ ಸಂಘಟನೆಯಾಗಿ ಹಾಗೂ ಆಡಳಿತಾತ್ಮಕವಾಗಿ ಸೋತಿದೆ ಎಂಬುದು ಎಲ್ಲ ಉನ್ನತ ಭದ್ರತಾ ಅಧಿಕಾರಿಗಳಿಗೆ ತಿಳಿದಿರುವುದರಲ್ಲಿ ಯಾವುದೇ ಸಂಶಯವಿಲ್ಲ. ಬಹುತೇಕ ಇಸ್ರೇಲಿಯರು, ಅನೇಕ ಸೈನಿಕರೂ, ಈ ನಿರ್ಲಜ್ಜ ಮಾರ್ಗವನ್ನು ವಿರೋಧಿಸುತ್ತಿದ್ದಾರೆ. ಐಡಿಎಫ್‌ನ ಮುಖ್ಯಸ್ಥರು ಕೂಡ ಗಾಜಾ಼ ಮೇಲೆ ಪುನರ್ ಆಕ್ರಮಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಯುದ್ಧದ ಅಂತ್ಯ ಒಪ್ಪಂದದಲ್ಲೇ ಕೊನೆಯಾಗುವುದೆಂಬುದು ಸ್ಪಷ್ಟ. ಆದರೆ ಯುದ್ಧ ಮುಂದುವರೆದಂತೆಲ್ಲಾ, ದಿನಗಳು ಕಳೆದಂತೆಲ್ಲಾ ಮತ್ತಷ್ಟು ಜನ ಜೀವ ಕಳೆದುಕೊಳ್ಳುವರು, ಬಂಧಿಗಳು ಜೀವಂತವಾಗಿ ವಾಪಸ್ಸು ಬರುವ ಅವಕಾಶಗಳು ಮತ್ತಷ್ಟು ಕ್ಷೀಣಿಸುವುದು. ಮತ್ತು ಮಧ್ಯವರ್ತಿಗಳು ಮತ್ತು ಅಂತರರಾಷ್ಟ್ರೀಯ ಪಾಲುದಾರರೊಂದಿಗೆ ಇಸ್ರೇಲ್‌ನ ಸ್ಥಾನಮಾನ ಮತ್ತಷ್ಟು ಹದಗೆಡುವುದು.
ಜನಪ್ರಿಯತೆಯ ಗೀಳು ಹತ್ತಿರುವ, ಕಿಂಚಿತ್ತೂ ನೈತಿಕತೆಗೆ ಬೆಲೆ ಕೊಡದ ಇಂತಹ ಸರ್ಕಾರವನ್ನು ಬಗ್ಗಿಸಬೇಕೆಂದರೆ ಮಿಲಿಟರಿ ಒಳಗಿನಿಂದ ಪ್ರತಿರೋಧದ ಧ್ವನಿ ಏಳಬೇಕು. ಆಗ ಮಾತ್ರ ಪರಿಸ್ಥಿತಿಯನ್ನು ಬದಲಾಯಿಸಬಹುದು. ಇಂತಹ ಸಂದಿಗ್ಧ ಪರಿಸ್ಥಿತಿಗಳಲ್ಲೇ ಭುಗಿಲೆದ್ದ ಹೋರಾಟಗಳು ಸರ್ಕಾರದ ನೀತಿಗಳನ್ನು ಬದಲಾಯಿಸಿದ ಉದಾಹರಣೆಗಳು ಇತಿಹಾಸದಲ್ಲಿ ಅನೇಕ. ಸುಳ್ಳಿನ ಪರದೆ ಕಿತ್ತೊಗೆಯಲು ಯಾರೆಲ್ಲಾ ತ್ಯಾಗ ಬಲಿದಾನಗಳನ್ನು ನೀಡಲು ಮುಂದಾಗುವರೊ ಅವರು ಮಾತ್ರವೇ ಸತ್ಯಕ್ಕಾಗಿ ನೈಜ ಹೋರಾಟ ಮಾಡಲು ಸಾಧ್ಯ. ೧೯೮೨ರ ಲೆಬನಾನ್ ಯುದ್ಧ, ೨೦೦೦-೨೦೦೫ರ ಎರಡನೇ ಇಂತಿಫಾದಾದ ಸಂದರ್ಭದಲ್ಲಿ ಇಸ್ರೇಲ್ ಇದನ್ನು ಎದರುಕಂಡಿತ್ತು. ವಿಯೆಟ್ನಾಂ ಯುದ್ಧದ ಸಮಯದಲ್ಲಿಯೂ ಅಮೇರಿಕ ಇದಕ್ಕೆ ಸಾಕ್ಷಿಯಾಗಿತ್ತು.
ಮಂತ್ರಿಗಳು ಯಾವುದೇ ಬೆಲೆ ತೆರುವುದಿಲ್ಲ. ಸೈನಿಕರು ನಾವು ಮಾತ್ರ ಬೆಲೆ ತೆರುತ್ತೇವೆ.
ನಾನು ಒಬ್ಬ ಜಿ಼ಯೋನಿಸ್ಟ್. ತನ್ನ ಶತ್ರುಗಳನ್ನು ಪ್ರತಿರೋಧಿಸುವ ಹಕ್ಕು ಇಸ್ರೇಲ್‌ಗೆ ಇದೆ. ನಾನು ಶಾಂತಿವಾದಿ ಅಲ್ಲ, ಹಾಗೂ ಹೋರಾಡಿರುವುದರ ಬಗ್ಗೆ ಪಶ್ಚಾತ್ತಾಪವೂ ಇಲ್ಲ. ಆದ್ದರಿಂದಲೇ ನನಗಿಂದು ಅರ್ಥವಾಗಿದೆ -ಇಂದು ನಿಜವಾದ ಧೈರ್ಯ ಎಂದರೆ “ಸಾಕು” ಎಂದು ಹೇಳುವುದು.
(ಯೋಟಮ್ ವಿಲ್ಕ್, ಇಸ್ರೇಲ್ ರಕ್ಷಣಾ ಪಡೆಗಳಲ್ಲಿ ಮೀಸಲು ಕ್ಯಾಪ್ಟನ್ ಮತ್ತು ಸೋಲ್ಜರ್ಸ್ ಫಾರ್ ದಿ ಹೋಸ್ಟೇಜಸ್‌ನ ಸದಸ್ಯರಾಗಿದ್ದಾರೆ, ಇದು ಗಾಜಾ಼ದಲ್ಲಿ ಸೇವೆ ಸಲ್ಲಿಸಿದ ಮತ್ತು ಹಿಂತಿರುಗಲು ನಿರಾಕರಿಸುತ್ತಿರುವ ಐ.ಡಿ.ಎಫ್. ಯೋಧರ ಸಂಘಟನೆಯಾಗಿದೆ. ಟೆಲ್ ಅವಿವ್‌ನಲ್ಲಿ ವಾಸವಾಗಿದ್ದಾರೆ) [ ನ್ಯೂಯಾರ್ಕ್ ಟೈಮ್ಸ್ ೩೦-೦೮-೨೫]