Loading..

ಶೋಷಣಾಮುಕ್ತ ಸಮಾಜ ಸ್ಥಾಪಿಸಿದ ಮಹಾನ್ ನವೆಂಬರ್ ಕ್ರಾಂತಿ ಚಿರಾಯುವಾಗಲಿ!

(1917 ರ ನವೆಂಬರ್ 7ರಿಂದ 17ರವರೆಗೆ ರಷ್ಯಾದಲ್ಲಿ ಜರುಗಿದ ನವೆಂಬರ್ ಮಹಾಕ್ರಾಂತಿಯ ನೆನಪಿನಲ್ಲಿ 1970ರ ನವೆಂಬರ್‌ನಲ್ಲಿ ನಮ್ಮ ಇಂಗ್ಲಿಷ್ ಮುಖ ಪತ್ರಿಕೆ ಪ್ರೊಲಿಟೇರಿಯನ್ ಎರಾದಲ್ಲಿ ಪ್ರಕಟವಾದ ಲೇಖನದಿಂದ ಆಯ್ದ ಭಾಗಗಳು)

ಈ ಕ್ರಾಂತಿ ನಡೆದದ್ದು ರಷ್ಯಾದಲ್ಲಿಯೇ ಆದರೂ, ನವೆಂಬರ್ ಮಹಾಕ್ರಾಂತಿಯು ರಷ್ಯಾ ದೇಶಕ್ಕೆ ಮಾತ್ರವೇ ಸೀಮಿತವಾದ ಕ್ರಾಂತಿಯಲ್ಲ. ಅದು ಕ್ರಾಂತಿಯ ರಣಘೋಷ ಮೊಳಗಿಸಿ, ಬದಲಾವಣೆಯ ದಿಕ್ಕಿನಲ್ಲಿ ಸಾಗಲು ಇಡೀ ವಿಶ್ವವನ್ನು ಪ್ರೇರೇಪಿಸಿದ ಕ್ರಾಂತಿ. ಇದಕ್ಕೆ ಮುಂಚೆ ವಿಶ್ವದಾದ್ಯಂತ ನಡೆದ ಹಲವಾರು ಕ್ರಾಂತಿಗಳಲ್ಲಿ, ಒಂದು ಶೋಷಕ ವರ್ಗದ ಬದಲು ಇನ್ನೊಂದು ಶೋಷಕ ವರ್ಗವು ಅಧಿಕಾರ ವಹಿಸಿಕೊಂಡು ಶೋಷಣೆಯ ಪರಂಪರೆಯನ್ನು ಮುಂದುವರೆಸುತ್ತಾ ಬರಲಾಗುತ್ತಿತ್ತು. ಬಂಡವಾಳಶಾಹಿ ವರ್ಗವನ್ನು ನಿರ್ಮೂಲನೆ ಮಾಡಲೆಂದು ಕಾರ್ಮಿಕ ವರ್ಗವು ಧೀರೋದಾತ್ತವಾಗಿ ನಡೆಸಿದ ಪ್ಯಾರಿಸ್ ಕಮ್ಯೂನ್ ಕ್ರಾಂತಿ ಮಾತ್ರವೇ ಇವುಗಳ ಪೈಕಿ ವಿಭಿನ್ನವಾದದ್ದು. ಅಂತಹ ಮಹಾನ್ ಧ್ಯೇಯವನ್ನು ಹೊಂದಿದ್ದ ಪ್ಯಾರಿಸ್ ಕಮ್ಯೂನ್ ವಿಫಲವಾಯಿತಾದರೂ, ಜಗತ್ತಿನ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ನವೆಂಬರ್ ಮಹಾಕ್ರಾಂತಿಯು ಬಂಡವಾಳಶಾಹಿ ವರ್ಗದ ಸಾಮಾಜಿಕ ವ್ಯವಸ್ಥೆಯನ್ನು ಕಿತ್ತೊಗೆದು, ಅವರ ಆಡಳಿತ ಯಂತ್ರವನ್ನು ಕಿಚ್ಚಿಗೆಸೆದು, ಒಂದು ಹೊಸ ರೀತಿಯ ವ್ಯವಸ್ಥೆಯನ್ನು – ಅಂದರೆ ಕಾರ್ಮಿಕ ವರ್ಗದ ರಾಜ್ಯವನ್ನು – ಸ್ಥಾಪಿಸಿತು, ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಶೋಷಣೆಗಳು ಇಲ್ಲದ ಸಮಾಜವನ್ನು ಕಟ್ಟಲು ಭದ್ರವಾದ ಅಡಿಪಾಯವನ್ನು ಸ್ಥಾಪಿಸಿತು. ವಿಶ್ವದ ಸಾಮ್ರಾಜ್ಯಶಾಹಿ ಸರಪಳಿಯಲ್ಲಿ ಅತ್ಯಂತ ದುರ್ಬಲ ಕೊಂಡಿಯಾಗಿದ್ದ ರಷ್ಯಾದಲ್ಲಿ, ಆ ಕೊಂಡಿಯನ್ನು ಕುಟ್ಟಿ ಪುಡಿಗಟ್ಟಿ, ಕಾರ್ಮಿಕ ವರ್ಗದ ಕ್ರಾಂತಿಗಳ ನವನವೀನ ಯುಗವನ್ನು ಆರಂಭಿಸಲಾಯಿತು.
“ಈಗಾಗಲೇ ಇರುವ ಆಡಳಿತ ಯಂತ್ರವನ್ನು ಕಾರ್ಮಿಕ ವರ್ಗವು ಬಳಸಿಕೊಂಡು, ಅದನ್ನು ತನ್ನ ಧ್ಯೇಯಗಳ ಈಡೇರಿಕೆಗೆ ಬಳಸಲಾಗದು” (ಕಮ್ಯುನಿಸ್ಟ್ ನೀತಿಸಂಹಿತೆ) ಎಂಬ ಮಾರ್ಕ್ಸ್ ವಾದಿ ಬೋಧನೆಯು ಸರಿಯಾಗಿದೆ ಎಂಬುದನ್ನು ನವೆಂಬರ್ ಮಹಾಕ್ರಾಂತಿಯು ಸ್ಪಷ್ಟವಾಗಿ ದೃಢಪಡಿಸಿತು. ಹಳೆಯ ಬಂಡವಾಳಶಾಹಿ ರಾಜ್ಯಯಂತ್ರವನ್ನು ದ್ವಂಸ ಮಾಡಿ, ಕಾರ್ಮಿಕ ವರ್ಗದ ಪ್ರಭುತ್ವವನ್ನು ಕಟ್ಟುವುದು ಸಮಾಜವಾದದ ಗೆಲುವಿಗೆ ಅತ್ಯವಶ್ಯಕ. ಸಮಾಜವಾದವನ್ನು ಕಟ್ಟುವಾಗ, ಪ್ರತಿಯೊಂದು ದೇಶವೂ “ಒಂದಲ್ಲ ಒಂದು ಪ್ರಜಾತಂತ್ರದ ರೂಪದಲ್ಲಿ ತನ್ನ ನಿರ್ದಿಷ್ಟ ಗುಣವನ್ನು ಈ ವ್ಯವಸ್ಥೆಗೆ ಧಾರೆ ಎರೆದು” ಪ್ರಪಂಚವು ಬಂಡವಾಳವಾದದಿಂದ ಕಮ್ಯುನಿಸಂ ಕಡೆಗೆ ಸಾಗುವ ಅವಧಿಯಲ್ಲಿ ವೈವಿಧ್ಯಮಯವಾದ ಹಾಗೂ ಯಥೇಚ್ಛವಾದ ರಾಜಕೀಯ ಸ್ವರೂಪಗಳ ಸೃಷ್ಟಿಗೆ ಕಾರಣ ಆಗುತ್ತದೆ ಎಂಬುದೇನೋ ನಿಜ. ಆದರೆ, ರಾಜಕೀಯ ಸ್ವರೂಪಗಳಲ್ಲಿ ವೈವಿಧ್ಯತೆ ಇದ್ದರೂ, ಎಲ್ಲಾ ಕಡೆಗಳಲ್ಲೂ ಅವುಗಳ ಸಾರಾಂಶವಂತೂ ಒಂದೇ ಎಂಬುದೂ ನಿಜ. ಆ ಸಾರಾಂಶವೇ ಕಾರ್ಮಿಕವರ್ಗದ ಸರ್ವಾಧಿಕಾರ. ಕಾರ್ಮಿಕವರ್ಗದ ಸರ್ವಾಧಿಕಾರ ಇಲ್ಲದೇ ಸಮಾಜವಾದ ಕಟ್ಟುವುದು ಅಸಾಧ್ಯ!
ಬಂಡವಾಳಿಗರಿಗೆ ಒಪ್ಪಿಗೆಯಾಗುವ ಸೋಷಲ್ ಡೆಮಾಕ್ರಸಿ ಮತ್ತು ಇಂತಹ ಇತರ ‘ಮಾರ್ಕ್ಸ್ ವಾದಿ’ ಛಾಪುಗಳಿಂದ ಲೆನಿನ್‌ವಾದದ ಮೂಲಭೂತ ತತ್ವಾಂಶ ಎಲ್ಲಿ ಬೇರೆಯಾಗಿಯೇ ಇದೆ ಅಂದರೆ, ಅದು ಕಾರ್ಮಿಕವರ್ಗದ ಸರ್ವಾಧಿಕಾರದ ಅಂಶ ಎಂಬುದು ನಮಗೆಲ್ಲಾ ಗೊತ್ತು. ‘ಪ್ರಭುತ್ವ’ದ ಕುರಿತ ಮಾರ್ಕ್ಸ್ ವಾದಿ-ಲೆನಿನ್‌ವಾದಿ ಪರಿಕಲ್ಪನೆ ಹಾಗೂ ಕಾರ್ಮಿಕವರ್ಗದ ಸರ್ವಾಧಿಕಾರ ಎಷ್ಟು ಸರಿಯಾದದ್ದು ಎಂದು ನವೆಂಬರ್ ಮಹಾಕ್ರಾಂತಿಯು ಇಡೀ ಜಗತ್ತಿಗೆ ತೋರಿಸುವ ಮೂಲಕ, ಬಂಡವಾಳಿಗರ ರಾಜ್ಯಯಂತ್ರವನ್ನು ಕ್ರಾಂತಿಯ ಮೂಲಕ ಧ್ವಂಸ ಮಾಡುವುದನ್ನು ವಿರೋಧಿಸುವ ಹಾಗೂ ಪ್ರಜಾತಂತ್ರದಿಂದ – ಅಂದರೆ ಮತದಾನದ ಮೂಲಕ – ಬಂಡವಾಳವಾದದಿಂದ ಸಮಾಜವಾದಕ್ಕೆ ‘ಶಾಂತಿಯುತವಾಗಿ’ ಪರಿವರ್ತನೆ ಸಾಧಿಸಬಹುದು ಎಂದು ಪ್ರಚಾರ ಮಾಡುವ ಸೋಷಲ್ ಡೆಮಾಕ್ರಸಿಗೂ ಮಾರ್ಕ್ಸ್ವಾದಕ್ಕೂ ಎಷ್ಟು ಅಜಗಜಾಂತರ ವ್ಯತ್ಯಾಸವಿದೆ ಎಂಬುದನ್ನು ತೋರಿಸಿಕೊಟ್ಟಿತು.
ಆದರೆ, ದುಃಖದ ಸಂಗತಿಯೆಂದರೆ, ಬದಲಾದ ಜಾಗತಿಕ ರಾಜಕೀಯ ಪರಿಸ್ಥಿತಿಯಲ್ಲಿ ಮಾರ್ಕ್ಸ್ವಾದ-ಲೆನಿನ್‌ವಾದವನ್ನು ‘ಅಭಿವೃದ್ಧಿ’ ಮಾಡಬೇಕು ಎನ್ನುವ ಕುಂಟುನೆಪದಲ್ಲಿ, ಕ್ರುಶ್ಚೇವ್ ನಾಯಕತ್ವದ ಸಿಪಿಎಸ್‌ಯು ಪಕ್ಷವು, ಪಕ್ಷದ 20ನೇ ಅಧಿವೇಶನದಲ್ಲಿ, ಸೋಷಲ್ ಡೆಮಾಕ್ರಸಿ ಪ್ರತಿಪಾದಕರು ಹಾಡುವ ಹಾಡನ್ನೇ ಕಿಸಬಾಯಿ ದಾಸರಂತೆ ಹಾಡಿದ್ದು! ಇನ್ನೂ ವಿಚಿತ್ರವೆಂದರೆ, ಬಂಡವಾಳವಾದದಿಂದ ಸಮಾಜವಾದಕ್ಕೆ ‘ಶಾಂತಿಯುತ’ ಪರಿವರ್ತನೆ ಸಾಧ್ಯ ಎಂಬ ‘ಸತ್ಯ’ ಬೇರೆ ದೇಶಗಳ ತಥಾಕಥಿತ ಕಮ್ಯುನಿಸ್ಟ್ ಪಕ್ಷ (ತಮ್ಮ ದೇಶದ ಪರಿಸ್ಥಿತಿಗೆ ತಕ್ಕಂತೆ ಕ್ರಾಂತಿಯ ರೂಪುರೇಷೆ ತಯಾರಿಸಬೇಕಿದ್ದವರು) ಗಳಿಗೆ ಗೋಚರವಾದದ್ದು, ಅದು ಸಿಪಿಎಸ್‌ಯು ಬಾಯಿಂದ ಬಂದ ಮೇಲೆಯೇ! ಈ ‘ತಿಳುವಳಿಕೆ’ ತಪ್ಪಾಗಿದ್ದರೂ, ಈ ಪಕ್ಷಗಳು ಅದನ್ನು ಮೊದಲೇ ಪ್ರತಿಪಾದಿಸಿದ್ದಿದ್ದರೆ, ಅವು ಎಲ್ಲವನ್ನೂ ಕುರುಡಾಗಿ ನಂಬುವವರಲ್ಲ, ತಾವೇ ಸ್ವತಂತ್ರವಾಗಿ ಈ ನಿಲುವನ್ನು ತೆಗೆದುಕೊಂಡಿದ್ದವು ಎಂದಾದರೂ ಹೇಳಬಹುದಿತ್ತು.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಪಕ್ಷದ ನಿಲುವು ಏನಾಗಿತ್ತು ಎಂಬುದನ್ನು, ನಮ್ಮ ಆತ್ಮೀಯ ನಾಯಕರು ಹಾಗೂ ಶಿಕ್ಷಕರಾದ ಕಾಮ್ರೇಡ್ ಶಿವದಾಸ್ ಘೋಷ್ ಅವರ ಮಾತುಗಳಲ್ಲಿ ತಿಳಿಸಲು ಬಯಸುತ್ತೇವೆ: “ಸಮಾಜವಾದಿ ಕ್ರಾಂತಿಯನ್ನು ಶಾಂತಿಯುತವಾಗಿ ಪಡೆಯಬಹುದು ಎಂಬ ಪರಿಕಲ್ಪನೆಯು ಗೊಂದಲದಿಂದ ಬಂದಿದೆ. ಬಹಳ ಶಕ್ತಿಯುತವಾದ ಶಾಂತಿಸೈನ್ಯದ ವಿರುದ್ಧ ವಿಶ್ವಯುದ್ಧವನ್ನು ಹರಿಬಿಡುವ ಸ್ಥಿತಿಯಲ್ಲಿ ಇಲ್ಲದ ವಿಶ್ವ ಸಾಮ್ರಾಜ್ಯಶಾಹಿಯ ಸಾಪೇಕ್ಷ ದೌರ್ಬಲ್ಯ ಹಾಗೂ ಒಂದು ನಿರ್ದಿಷ್ಟ ದೇಶದಲ್ಲಿನ ಕಾರ್ಮಿಕವರ್ಗದ ಹಾಗೂ ಶೋಷಿತರ ಕ್ರಾಂತಿಕಾರಿ ಹೋರಾಟಗಳನ್ನು ಹತ್ತಿಕ್ಕುವಲ್ಲಿ ಅಲ್ಲಿನ ಬಂಡವಾಳಶಾಹಿ ವ್ಯವಸ್ಥೆ ಮತ್ತದರ ರಾಜ್ಯಯಂತ್ರದ ಶಕ್ತಿ, ಇವೆರಡರ ಮಧ್ಯೆ ಕ್ರುಶ್ಚೇವ್ ಮತ್ತು ಇತರ ನಾಯಕರು ಗೊಂದಲಗೊಂಡಿದ್ದಾರೆ. ಯುದ್ಧಶಕ್ತಿಯ ವಿರುದ್ಧ ಸಮಾಜವಾದಿ ಶಾಂತಿಸೈನ್ಯ ವಿಜಯ ಗಳಿಸಿದ್ದಾಗ್ಯೂ, ತಮ್ಮ ದೇಶದಲ್ಲಿನ ಕ್ರಾಂತಿಕಾರಿ ಹೋರಾಟಗಳನ್ನು ಸದೆ ಬಡಿಯಲು ಅಲ್ಲಿಯ ಬಂಡವಾಳಶಾಹಿಗಳು ಹೆದರುವಷ್ಟು ವಿಶ್ವದ ಪರಿಸ್ಥಿತಿ ಬದಲಾಗಿಲ್ಲ ಎಂಬ ಕಟುಸತ್ಯವನ್ನು ಈ ನಾಯಕರು ಅರ್ಥ ಮಾಡಿಕೊಂಡಿಲ್ಲ. ನಮ್ಮ ಈ ಹೇಳಿಕೆಯನ್ನು ತಪ್ಪೆಂದು ಸಾಬೀತುಮಾಡುವ ಒಂದೇ ಒಂದು ಘಟನೆಯೂ ಇತಿಹಾಸದಲ್ಲಿ ನಡೆದಿಲ್ಲ; ಬಂಡವಾಳಶಾಹಿ ದೇಶಗಳಲ್ಲಿ ನಡೆಯುತ್ತಿರುವ ಸಣ್ಣಪುಟ್ಟ ಆರ್ಥಿಕ ಮತ್ತು ಪ್ರಜಾತಾಂತ್ರಿಕ ಹೋರಾಟಗಳನ್ನೂ ಬಹಳ ಕ್ರೂರವಾಗಿ ಹತ್ತಿಕ್ಕಲಾಗುತ್ತಿದೆ. ಬ್ರಿಟನ್, ಫ್ರಾನ್ಸ್ ಹಾಗೂ ಅಮೆರಿಕಾದಂತಹ ಸಂಸದೀಯ ರಾಷ್ಟ್ರಗಳಲ್ಲೂ ಕಾರ್ಮಿಕರು ಈ ಹಿಂದೆ ಗಳಿಸಿದ್ದ ಸಂಸದೀಯ ಹಕ್ಕುಗಳನ್ನು ಒಂದೊಂದಾಗಿ ಕಸಿದುಕೊಳ್ಳಲಾಗುತ್ತಿದೆ. ಎಲ್ಲಾ ಬಂಡವಾಳಶಾಹಿ ದೇಶಗಳಲ್ಲೂ ಫ್ಯಾಸೀವಾದ ಸರ್ವೇಸಾಮಾನ್ಯ ಆಗಿಬಿಟ್ಟಿದೆ. ಸಮಾಜವಾದಿ ಕ್ರಾಂತಿಗಳು ಸಫಲವಾಗಿದ್ದ ದೇಶಗಳಲ್ಲೂ ಪ್ರತಿಕ್ರಾಂತಿ ನಡೆಸಲು ಸಾಮ್ರಾಜ್ಯಶಾಹಿಗಳು ಸಂಚು ನಡೆಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ಬಂಡವಾಳವಾದದಿಂದ ಸಮಾಜವಾದಕ್ಕೆ ಶಾಂತಿಯುತ ಪರಿವರ್ತನೆ ಸಾಧ್ಯವಿದೆ ಎಂಬ ಭ್ರಮೆಯಲ್ಲಿ ಬದುಕಬಹುದೇ? ನಾವು ಖಡಾಖಂಡಿತವಾಗಿ ಸಾಧ್ಯವಿಲ್ಲ ಎನ್ನುತ್ತೇವೆ.”
ಒಂದುವೇಳೆ ಶಾಂತಿಯುತ ಪರಿವರ್ತನೆ ಸಾಧ್ಯವಿದೆ ಎಂದುಕೊಂಡರೂ, ಬೂರ್ಜ್ವಾ ಪ್ರಜಾತಂತ್ರ ಹಾಗೂ ಬೂರ್ಜ್ವಾ ರಾಜಕೀಯದ ಮೇಲ್‌ರಚನೆಯಾದ ಸಂಸತ್ತನ್ನು, “ಜನರ ಹಿತಾಸಕ್ತಿ ಕಾಪಾಡುವ ಅಸ್ತ್ರ” ಆಗಿ ಬದಲಾಯಿಸಬಹುದೇ? ಈ ನಿಟ್ಟಿನಲ್ಲಿ ಈ ಯುಗದ ಅಪ್ರತಿಮ ಮಾರ್ಕ್ಸ್ ವಾದಿಯಾದ ಕಾಮ್ರೇಡ್ ಶಿವದಾಸ್ ಘೋಷರ ವಿಶ್ಲೇಷಣೆಯೆಂದರೆ, ಒಬ್ಬ ಮಾರ್ಕ್ಸ್ ವಾದಿ-ಲೆನಿನ್‌ವಾದಿಗೆ, ‘ಶಾಂತಿಯುತ ಸಮಾಜವಾದಿ ಕ್ರಾಂತಿ’ ಎಂದರೆ ಕಾರ್ಮಿಕವರ್ಗವು ಶಾಂತಿಯುತವಾಗಿ ಅಧಿಕಾರ ವಶ ಮಾಡಿಕೊಳ್ಳುವುದು, ಬಂಡವಾಳಿಗರು ವಿರೋಧ ವ್ಯಕ್ತಪಡಿಸದೇ ಇರುವುದು ಹಾಗೂ ಕಾರ್ಮಿಕವರ್ಗವು ಬಂಡವಾಳಶಾಹಿ ರಾಜ್ಯಯಂತ್ರವನ್ನು ಧ್ವಂಸಮಾಡಿ ಕಾರ್ಮಿಕವರ್ಗದ ಸಮಾಜವಾದಿ ಪ್ರಭುತ್ವವನ್ನು ಸ್ಥಾಪಿಸುವುದು. ಬದಲಿಗೆ, ಶಾಂತಿಯುತವಾಗಿ ಬಂಡವಾಳಶಾಹಿ ಪ್ರಭುತ್ವವನ್ನು ಸಮಾಜವಾದಿ ಪ್ರಭುತ್ವಕ್ಕೆ ಬದಲಾಯಿಸುವುದು ಎಂದಿಗೂ ಸಾಧ್ಯವಿಲ್ಲ. ಅಂದರೆ, ಸಂಸತ್ತಿನ ಶಾಂತಿಯುತ ವಿಧ್ವಂಸ ಹಾಗೂ ಕಾರ್ಮಿಕವರ್ಗದ ಪ್ರಜಾತಾಂತ್ರಿಕ ವ್ಯವಸ್ಥೆಯ ಸ್ಥಾಪನೆ ಆಗಬಹುದೇ ಹೊರತು, ಸಂಸತ್ತಿನ ಶಾಂತಿಯುತ ಪರಿವರ್ತನೆಯ ಮೂಲಕ ಅದನ್ನು “ಜನರ ಹಿತಾಸಕ್ತಿ ಕಾಪಾಡುವ ಅಸ್ತ್ರ” ವನ್ನಾಗಿ ಮಾಡಲು ಸಾಧ್ಯವಿಲ್ಲ. ಬಂಡವಾಳಶಾಹಿ ವ್ಯವಸ್ಥೆಯ ಮೇಲ್‌ರಚನೆ, ಸಮಾಜವಾದಿ ವ್ಯವಸ್ಥೆಯ ಮೇಲ್‌ರಚನೆಯಾಗಿರಲು ಸಾಧ್ಯವೇ ಇಲ್ಲ.
ಇದರ ಜೊತೆಗೆ, “ಎಲ್ಲಾ ಜನರ ಪ್ರಭುತ್ವ” ಎಂಬ ಪರಿಕಲ್ಪನೆಯ ಬಗ್ಗೆಯೂ ಕ್ರುಶ್ಚೇವ್ ನಾಯಕತ್ವ ಪ್ರಚಾರ ಮಾಡಿತು. ಅಂದರೆ, ಸೋವಿಯತ್ ಸಮಾಜದಲ್ಲಿ ಈಗ ವರ್ಗಗಳಿಲ್ಲ, ಇದೊಂದು ವರ್ಗರಹಿತ ಸಮಾಜ, ಹಾಗಾಗಿ ಇಲ್ಲಿ ಯಾವುದೇ ವರ್ಗ ಸಂಘರ್ಷಗಳು ಇಲ್ಲ, ಹಾಗಾಗಿ ಅದು “ಎಲ್ಲಾ ಜನರ ಪ್ರಭುತ್ವ”. ಶೋಷಕ ವರ್ಗದಿಂದ ಅಧಿಕಾರ ಕಸಿದುಕೊಂಡ ನಂತರ, ನವೆಂಬರ್ ಕ್ರಾಂತಿಗೂ ಮುಂಚೆ ಇದ್ದಷ್ಟು ತೀಕ್ಷ್ಣವಾಗಿ ವರ್ಗ ಸಂಘರ್ಷ ನಡೆಯುತ್ತಿಲ್ಲ ಎಂಬುದೇನೋ ನಿಜ. ಆದರೆ ವರ್ಗ ಸಂಘರ್ಷವೇ ಇಲ್ಲ ಎಂಬುದು ಸರಿಯಲ್ಲ.
ಎಲ್ಲಾ ಮಾರ್ಕ್ಸ್ ವಾದಿ-ಲೆನಿನ್‌ವಾದಿಗಳಿಗೂ ಗೊತ್ತಿರುವಂತೆ, “ಒಂದು ಪ್ರಭುತ್ವದ ಅಸ್ತಿತ್ವವು ರಾಜಿ ಮಾಡಿಕೊಳ್ಳಲು ಆಗದೇ ಇರುವಂತಹ ವರ್ಗ ಸಂಘರ್ಷದ ಉತ್ಪನ್ನ ಹಾಗೂ ಅಭಿವ್ಯಕ್ತಿ. ವರ್ಗ ಸಂಘರ್ಷದಲ್ಲಿ ರಾಜಿ ಮಾಡಿಕೊಳ್ಳಲಾಗದೇ ಇದ್ದಾಗ, ಆ ಸಂಘರ್ಷಕ್ಕೆ ತಕ್ಕಂತೆ ಪ್ರಭುತ್ವವು ಉಗಮವಾಗುತ್ತದೆ. ಜೊತೆಗೆ, ಪ್ರಭುತ್ವವು ಅಸ್ತಿತ್ವದಲ್ಲಿದೆ ಎಂದರೆ ರಾಜಿ ಮಾಡಿಕೊಳ್ಳಲಾಗದ ವರ್ಗ ಸಂಘರ್ಷಗಳು ಅಸ್ತಿತ್ವದಲ್ಲಿವೆ ಎಂದರ್ಥ.” (ಲೆನಿನ್, ಪ್ರಭುತ್ವ ಮತ್ತು ಕ್ರಾಂತಿ) ಇನ್ನು, ಕಾಮ್ರೇಡ್ ಶಿವದಾಸ್ ಘೋಷರು ಹೇಳುವಂತೆ: “ವ್ಯಕ್ತಿಗತ ಹಿತಾಸಕ್ತಿ ಹಾಗೂ ಸಾಮಾಜಿಕ ಹಿತಾಸಕ್ತಿಯ ನಡುವೆ ಸಂಘರ್ಷ ಇದ್ದೇ ಇರುತ್ತದೆ. ಸಮಾಜವಾದದಲ್ಲಿ, ಉತ್ಪಾದನೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳೂ ಬಗೆಹರಿದ ನಂತರವೂ, ವ್ಯಕ್ತಿಗತ ಹಿತಾಸಕ್ತಿ ಹಾಗೂ ಸಾಮಾಜಿಕ ಹಿತಾಸಕ್ತಿಯ ನಡುವಿನ ಸಂಘರ್ಷ ಇರುವವರೆಗೂ, ಪ್ರಭುತ್ವವು ಅಸ್ತಿತ್ವದಲ್ಲಿ ಇದ್ದೇ ಇರುತ್ತದೆ. ಇಲ್ಲಿ ವ್ಯಕ್ತಿಗತ ಹಿತಾಸಕ್ತಿಯು ಸಾಮಾಜಿಕ ಹಿತಾಸಕ್ತಿಗೆ ತಲೆ ಬಾಗಬೇಕಾಗುತ್ತದೆ. ಇಲ್ಲಿ ಶೋಷಕವರ್ಗ ಇಲ್ಲದ ಕಾರಣ, ಹಕ್ಕುಗಳು ಮತ್ತು ಸ್ವಾತಂತ್ರಕ್ಕಾಗಿ ಹೋರಾಡುವ ಅವಶ್ಯಕತೆ ಬರುವುದಿಲ್ಲ. ಆದರೆ, ಕೆಲವರು ಹಳೆಯ ಬೂರ್ಜ್ವಾ ವ್ಯವಸ್ಥೆಯ ‘ವ್ಯಕ್ತಿ ಸ್ವಾತಂತ್ರ್ಯದ ಗುಂಗಿನಲ್ಲಿಯೇ ಇದ್ದು, ವ್ಯಕ್ತಿಗತ ಹಿತಾಸಕ್ತಿಯನ್ನು ಸಾಮಾಜಿಕ ಹಿತಾಸಕ್ತಿಯ ಜೊತೆ ವಿಲೀನಗೊಳಿಸದೇ ಇರಬಹುದು. ಹಾಗಾಗಿ, ನಿರಂತರ ಸಮಾಜವಾದಿ ಪ್ರಗತಿ ಹಾಗೂ ಸಂಪೂರ್ಣ ಸ್ವಾತಂತ್ರ್ಯ ಸಾಧಿಸುವ ನಿಟ್ಟಿನಲ್ಲಿ, ಈ ವ್ಯಕ್ತಿಗತ ಧೋರಣೆಯ ವಿರುದ್ಧ ಸಮಾಜವಾದಿ ಪ್ರಭುತ್ವ ಕ್ರಮ ಕೈಗೊಳ್ಳುವುದು ಅವಶ್ಯವಾಗುತ್ತದೆ. ಅವರು ವ್ಯಕ್ತಿಗತ ಹಿತಾಸಕ್ತಿಯನ್ನು ಸಾಮಾಜಿಕ ಹಿತಾಸಕ್ತಿಯ ಜೊತೆ ವಿಲೀನಗೊಳಿಸಿದಾಗ ಮಾತ್ರವೇ ಸಂಪೂರ್ಣ ಸ್ವಾತಂತ್ರ್ಯ ಗಳಿಸಲು ಸಾಧ್ಯವಾಗುತ್ತದೆ. ಇಡೀ ಸಮಾಜ ಇಂತಹ ಔನ್ನತ್ಯವನ್ನು ಸಾಧಿಸಿದಾಗ, ವ್ಯಕ್ತಿಗತ ಹಿತಾಸಕ್ತಿ ಮತ್ತು ಸಾಮಾಜಿಕ ಹಿತಾಸಕ್ತಿಗಳ ನಡುವಿನ ಸಂಘರ್ಷ ಅಂತ್ಯವಾಗಿ, ರಾಜ್ಯಾಧಿಕಾರದ ಅವಶ್ಯಕತೆಯೂ ಕೊನೆಗೊಂಡು ಪ್ರಭುತ್ವ ನಶಿಸಿ ಹೋಗುತ್ತದೆ.
ನವೆಂಬರ್ ಕ್ರಾಂತಿಯ ಇನ್ನೊಂದು ಪ್ರಮುಖ ಪಾಠವೆಂದರೆ, ಕಾರ್ಮಿಕವರ್ಗದ ಸರ್ವಾಧಿಕಾರವನ್ನು ಸಾಕ್ಷಾತ್ಕಾರಗೊಳಿಸಲು, ಶೋಷಿತ ಜನತೆಯನ್ನು ಸಮಾಜವಾದಿ ಕ್ರಾಂತಿಯತ್ತ ಮುನ್ನಡೆಸಲು, ಕೇವಲ ಕಾರ್ಮಿಕವರ್ಗದ ನೈಜ ಕ್ರಾಂತಿಕಾರಿ ಪಕ್ಷಕ್ಕೆ ಮಾತ್ರವೇ ಸಾಧ್ಯ. ನಮ್ಮ ದೇಶದಲ್ಲಿಯೂ, “ಕಮ್ಯುನಿಸ್ಟ್” ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಪಕ್ಷಗಳು ನಿಜವಾದ ಕಮ್ಯುನಿಸ್ಟ್ ಪಕ್ಷಗಳಲ್ಲ. ಈ ಪಕ್ಷಗಳ ಇತಿಹಾಸ, ಅವರ ಯೋಚನಾಕ್ರಮ, ಹೋರಾಟ ಕಟ್ಟುವ ರೀತಿ, ಒಂದು ವಿದ್ಯಮಾನದ ವಿಶ್ಲೇಷಣೆಗೆ ಅವರು ಬಳಸುವ ವಿಧಾನ, ಅಂತರರಾಷ್ಟ್ರೀಯ ಪರಿಸ್ಥಿತಿಯ ಬಗ್ಗೆ ಅವರ ವಿಶ್ಲೇಷಣೆ, ನಮ್ಮ ದೇಶದಲ್ಲಿನ ಕ್ರಾಂತಿಯ ಹಂತ, ರಣನೀತಿ ಮತ್ತು ಕೌಶಲ್ಯಗಳ ಬಗ್ಗೆ ಅವರ ನಿಲುವು, ಕಾರ್ಮಿಕವರ್ಗದ ಅಂತರರಾಷ್ಟ್ರೀಯತೆ ಬಗ್ಗೆ ಅವರ ತಿಳುವಳಿಕೆ, ಅಂತರರಾಷ್ಟ್ರೀಯ ಕಮ್ಯುನಿಸ್ಟ್ ನಾಯಕತ್ವ ಹಾಗೂ ಇತರ ಕಮ್ಯುನಿಸ್ಟ್ ಪಕ್ಷಗಳ ಜೊತೆಗಿನ ಸಂಬಂಧದ ಬಗ್ಗೆ ಅವರ ಪರಿಕಲ್ಪನೆ, ರಾಷ್ಟ್ರೀಯ ಪಕ್ಷಗಳಾಗಿ ಅವುಗಳ ರೂಪುಗೊಳ್ಳುವಿಕೆ, ಮಹತ್ತರ ರಾಜತಾಂತ್ರಿಕ ಘಟನೆಗಳು ನಡೆದಾಗ ಅವರ ರಾಜಕೀಯ ನಡವಳಿಕೆ, ಪಕ್ಷದಲ್ಲಿ ಪ್ರಜಾತಾಂತ್ರಿಕ ಕೇಂದ್ರೀಯವಾದ ಎಂಬ ಲೆನಿನ್‌ವಾದಿ ಪರಿಕಲ್ಪನೆಯ ಬಗ್ಗೆ ಅವರಿಗೆ ಇರುವ ಜ್ಞಾನ, ಅವರ ಪಕ್ಷಗಳಲ್ಲಿ ಒಳಗುಂಪುಗಳ ರಚನೆ, ಇವುಗಳನ್ನೆಲ್ಲಾ ನೋಡಿದಾಗ, ಅವುಗಳ ಹೆಸರಿನಲ್ಲಿ “ಕಮ್ಯುನಿಸ್ಟ್” ಎಂಬ ಪದವಿದ್ದರೂ, ಅವು ಕಮ್ಯುನಿಸ್ಟ್ ಪಕ್ಷಗಳಲ್ಲ ಎಂಬುದಂತೂ ಸ್ಪಷ್ಟವಾಗುತ್ತದೆ. ಭಾರತದ ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿಯನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡು, ಭಾರತದಲ್ಲಿ ಕ್ರಾಂತಿ ನಡೆಸಲು ವೈಜ್ಞಾನಿಕ ಕ್ರಮಗಳನ್ನು ಕಂಡುಕೊಂಡಿರುವ ಎಸ್‌ಯುಸಿಐ(ಕಮ್ಯುನಿಸ್ಟ್) ಪಕ್ಷ ಮಾತ್ರವೇ ಈ ದೇಶದ ನೈಜ ಕಮ್ಯುನಿಸ್ಟ್ ಪಕ್ಷ. ನಮ್ಮ ಪಕ್ಷವನ್ನು ತಾವು ಕೂಲಂಕಶವಾಗಿ ಪರಿಶೀಲಿಸಿ, ನಮ್ಮ ವಿಚಾರಗಳ ವಿಮರ್ಶೆ ಮಾಡಿದ ನಂತರ, ಅದು ನಿಮಗೂ ಸ್ಪಷ್ಟವಾಗುತ್ತದೆ. ಹಾಗಾಗಿ, ಈ ಪಕ್ಷವನ್ನು ಸದೃಢಗೊಳಿಸಿ ಎಂಬುದೇ ನವೆಂಬರ್ ಮಹಾಕ್ರಾಂತಿಯ ಕರೆ.
ನವೆಂಬರ್ ಮಹಾಕ್ರಾಂತಿ ಚಿರಾಯುವಾಗಲಿ!
ಸಮಾಜವಾದಿ ಕ್ರಾಂತಿ ಚಿರಾಯುವಾಗಲಿ!
ಕಾಮ್ರೇಡ್ ಶಿವದಾಸ್ ಘೋಷ್ ಚಿರಾಯುವಾಗಲಿ!