Loading..

38 ದಶಲಕ್ಷ ಜನರ ಮಾರಣ ಹೋಮಕ್ಕೆ ಕಾರಣವಾದ ಆರ್ಥಿಕ ದಿಗ್ಬಂಧನಗಳು

 

ಇಲ್ಲಿ ಸತ್ತವರ ಸುದ್ದಿಗಳು ರಾತ್ರಿ ಬಿತ್ತರಗೊಳ್ಳುವ ಸುದ್ದಿವಾಹಿನಿಗಳಲ್ಲಿ ಕಾಣಿಸುವುದಿಲ್ಲ. ಇವರ ಹೆಸರುಗಳನ್ನು ಸ್ಮಾರಕದ ಗೋಡೆಗಳಲ್ಲಿ ಕೆತ್ತಿರುವುದಿಲ್ಲ. ಯುದ್ಧಗಳಲ್ಲಿ ಮಡಿದ ಸೈನಿಕರ ತಲೆಗಳನ್ನು ಎಣಿಸುವಂತೆ ಇಲ್ಲಿ ಸತ್ತವರ ಹೆಸರುಗಳನ್ನು ಲೆಕ್ಕ ಹಾಕಿ ನೋಡುವುದಿಲ್ಲ. ಅವರು ನಿಧಾನವಾದ, ಮೆಲ್ಲಗೆ ಸಾಗುವ ಮತ್ತು ಸಾಮ್ರಾಜ್ಯಶಾಹಿ ಶಿಬಿರದಿಂದ ನಿರ್ದೇಶಿತಗೊಂಡ ಅಧಿಕಾರಶಾಹಿಯು ಸೃಷ್ಟಿಸಿದ ಬಲಿಪಶುಗಳು.
ಲಕ್ಷಾಂತರ ಜನರು ಸತ್ತಿದ್ದು ಬಾಂಬ್ ದಾಳಿ, ಕ್ಷಿಪಣಿ ಅಥವಾ ಗುಂಡಿನ ದಾಳಿಯಿಂದಲ್ಲ. ಬದಲಾಗಿ ವ್ಯವಸ್ಥೆ ಸೃಷ್ಟಿಸಿದ ಹಸಿವು, ತಡೆಯಬಹುದಾದ ಕಾಯಿಲೆ, ವ್ಯವಸ್ಥಿತವಾಗಿ, ಉದ್ದೇಶಪೂರ್ವಕವಾಗಿ ಹಾಳುಗೆಡವಿದ ಆರೋಗ್ಯ ವ್ಯವಸ್ಥೆಯಿಂದಾಗಿ. ಸುಮಾರು ಅರ್ಧ ಶತಮಾನಗಳ ಕಾಲ ಅಮೆರಿಕ ಮತ್ತು ಇತರೆ ಯೂರೋಪಿಯನ್ ರಾಷ್ಟ್ರಗಳು ತಮ್ಮ ಎದುರು ಮಂಡಿಯೂರಲು ನಿರಾಕರಿಸಿದ ದೇಶಗಳ ಮೇಲೆ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿವೆ.
ಈ ದೇಶಗಳು ವಿಧಿಸಿರುವ ಅತಾರ್ಕಿಕ ಆರ್ಥಿಕ ದಿಗ್ಬಂಧನವು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ಯುದ್ಧ ಮಾಡಿ ಜನರನ್ನು ಸಾಯಿಸಿದ್ದಕ್ಕಿಂತಲೂ ಹೆಚ್ಚಿನ ಜನರ ಸಾವಿಗೆ ಕಾರಣವಾಗಿದೆ. ಇದು ಬಹುತೇಕ ಜನರಿಗೆ ಗೊತ್ತೇ ಆಗದ, ನಮ್ಮ ಕಾಲದ ಅತ್ಯಂತ ಅಮಾನವೀಯ ಅಪರಾಧ.
ಅಮೆರಿಕ ಮತ್ತು ಇತರ ಯುರೋಪಿಯನ್ ರಾಷ್ಟ್ರಗಳು ದಶಕಗಳ ಕಾಲದಿಂದಲೂ ರಾಜತಾಂತ್ರಿಕ ಕ್ರಮ ಹಾಗೂ ಮಾನವ ಹಕ್ಕುಗಳ ಹೆಸರಿನಲ್ಲಿ ಅಮಾನವೀಯ ಆರ್ಥಿಕ ದಿಗ್ಬಂಧನಗಳನ್ನು ವಿಧಿಸುತ್ತಾ ಬಂದಿವೆ. ಇವುಗಳನ್ನು ಮಿಲಿಟರಿ ದಾಳಿಗೆ ಪರ್ಯಾಯವಾದ ಕ್ರಮಗಳು ಎಂದೂ ಬಿಂಬಿಸುತ್ತಾ ಬಂದಿವೆ. ಇದು ಒಂದು ಅತ್ಯಂತ ಕೆಡುಕು ಉಂಟು ಮಾಡುವ ಸಂಕಥನ. ವಾಸ್ತವವಾಗಿ ಇದೊಂದು ಸಾಮ್ರಾಜ್ಯಶಾಹಿ ವ್ಯವಸ್ಥೆ ಸೃಷ್ಟಿಸಿದ ಸುಧಾರಿತ ಅಸ್ತ್ರ, ಇವು ಸಾಮ್ರಾಜ್ಯಶಾಹಿ ರಾಷ್ಟ್ರಗಳಿಗೆ ‘ಅವಿಧೇಯರಾದ’, ಸಾಮ್ರಾಜ್ಯಶಾಹಿ ಶಕ್ತಿಯನ್ನು ಪ್ರಶ್ನಿಸುವ ‘ಪುಂಡಾಟಿಕೆ’ ಪ್ರವೃತ್ತಿಯ ದೇಶಗಳನ್ನು ಹದ್ದುಬಸ್ತಿನಲ್ಲಿಡಲು ಕೈಗೊಂಡ ಕ್ರಮ.
ಇಂತಹ ಆರ್ಥಿಕ ದಿಗ್ಬಂಧನ ವಿಧಿಸುವ ನೀಲಿನಕ್ಷೆ ತಯಾರಾಗಿದ್ದು ದಶಕಗಳ ಹಿಂದೆ. 1970ರಲ್ಲಿ ಚಿಲಿಯ ಸಮಾಜವಾದಿ ನಾಯಕ ಸಾಲ್ವಡೊರ್ ಅಲೆಂಡೆ ಅವರು ಪ್ರಜಾತಾಂತ್ರಿಕವಾಗಿ ಅಧ್ಯಕ್ಷರಾಗಿ ಆಯ್ಕೆಯಾದರು. ಇದರಿಂದ ಮುಖಭಂಗಕ್ಕೊಳಗಾದ ಅಮೆರಿಕಾದ ಅಡಳಿತಗಾರರು, ವಿಶೇಷವಾಗಿ ಅಂದಿನ ಅಧ್ಯಕ್ಷ ರಿಚರ್ಡ್ ನಿಕ್ಸನ್ ತನ್ನ ಅಧಿಕಾರಿಗಳಿಗೆ ಚಿಲಿಯ ಆರ್ಥಿಕ ಶಕ್ತಿಯನ್ನು ಕುಂದಿಸುವ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಆ ದೇಶದೊಂದಿಗೆ ವ್ಯಾಪಾರ ವಹಿವಾಟು ನಡೆಸುವುದನ್ನು ನಿಷೇಧಿಸುವ ಹಾಗೂ ಆಸ್ತಿಗಳನ್ನು ಮುಟ್ಟುಗೋಲು ಹಾಕುವ ಯತ್ನಗಳು ನಡೆದವು. ಇಂತಹ ಆರ್ಥಿಕ ನಿರ್ಬಂಧದ ಮೂಲಕ ಆ ದೇಶದ ನೀತಿಗಳನ್ನು ಬದಲಾಯಿಸುವಂತೆ ಒತ್ತಾಯಿಸುವ ರೂಢಿ ಬೆಳೆದು ಬಂತು. ಇದರ ಪರಿಣಾಮ ಅತ್ಯಂತ ಕ್ರೂರವಾಗಿತ್ತು. ಪರಿಸ್ಥಿತಿಯ ದುರ್ಬಳಕೆ ಮಾಡಿಕೊಂಡು ಅಮೆರಿಕ ಬೆಂಬಲಿತ ಮಿಲಿಟರಿ ಸರ್ವಾಧಿಕಾರಿ ಅಗಸ್ಟೊ ಪಿನೋಷೆ ಸರ್ಕಾರವನ್ನು ಬುಡಮೇಲುಗೊಳಿಸಿ ಅಲೆಂಡೆಯವರನ್ನು ಹತ್ಯೆ ಮಾಡಿ 1974ರಲ್ಲಿ ಚಿಲಿಯ ಅಧ್ಯಕ್ಷನಾದ. ಇದಕ್ಕೆ ಅಮೆರಿಕದ ಸಾಮ್ರಾಜ್ಯಶಾಹಿಗಳ ಸಂಪೂರ್ಣ ಬೆಂಬಲವಿತ್ತು. ಈ ಮಾದರಿ ಅತ್ಯಂತ ಪರಿಣಾಮಕಾರಿ ಎನಿಸಿತು. ಜನರನ್ನು ಹಸಿವಿನಿಂದ ನರಳಲು ಬಿಟ್ಟು ಸರ್ಕಾರವನ್ನು ಬುಡಮೇಲು ಮಾಡಿದ ಚಿಲಿಯ ಕ್ರಮವನ್ನು ಇತರ ದೇಶಗಳಲ್ಲಿಯೂ ಅನುಸರಿಸಲಾಯಿತು.
1970ರಲ್ಲಿಯೇ ಸುಮಾರು 15 ದೇಶಗಳಲ್ಲಿ ಸಾಮ್ರಾಜ್ಯಶಾಹಿ ಶಕ್ತಿಗಳು ಆರ್ಥಿಕ ದಿಗ್ಬಂಧನ ವಿಧಿಸಿ, ಜನರನ್ನು ಹಸಿವಿನಿಂದ ನರಳುವಂತೆ ಮಾಡಿ ಅಲ್ಲಿ ತಮ್ಮ ಕೈಗೊಂಬೆ ಸರ್ಕಾರಗಳನ್ನು ಪ್ರತಿಷ್ಠಾಪನೆ ಮಾಡಿದ್ದವು. ಕ್ರಮೇಣ ಈ ದುಷ್ಟ ಕ್ರಮ ಜಗತ್ತಿನ ಇತರೆ ರಾಷ್ಟ್ರಗಳಿಗೂ ಹರಡಿತು. 1990, 2000ನೇ ಇಸವಿ ವೇಳೆಗೆ ಈ ಸಂಖ್ಯೆ 30ಕ್ಕೆ ಏರಿತು. 2025ರ ವೇಳೆಗೆ ಹೀಗೆ ಆರ್ಥಿಕ ದಿಗ್ಬಂಧನಕ್ಕೆ ಒಳಗಾದ ದೇಶಗಳ ಸಂಖ್ಯೆ 60ಕ್ಕೆ ಏರಿದೆ. ತನ್ನ ಮಾತು ಕೇಳದ ದೇಶಗಳಿಗೆ ದಿಗ್ಬಂಧನ ಎಂಬುದನ್ನು ಒಂದು ನೀತಿಯಂತೆಯೇ ಅಳವಡಿಸಿಕೊಂಡು ಆ ಮೂಲಕ ಅಲ್ಲಿನ ಜನತೆ ತೀವ್ರ ಹಸಿವು, ಅನಾರೋಗ್ಯ, ಮೂಲಸೌಕರ್ಯಗಳ ಕೊರತೆಯಿಂದ ನರಳುವಂತೆ ಮಾಡಿದೆ.
ಕೆಲ ವಿಶಿಷ್ಟ ಪ್ರಕರಣಗಳಲ್ಲಿ ನಾಗರಿಕರ ಸಾವುಗಳನ್ನು ಸುವ್ಯವಸ್ಥಿತವಾಗಿ ದಾಖಲಿಸಲಾಗಿದೆ. ಮತ್ತೆ ಕೆಲ ಪ್ರಕರಣಗಳಲ್ಲಿ ಉದ್ದೇಶಪೂರ್ವಕವಾಗಿ ಮರೆ ಮಾಚಲಾಗಿದೆ. 1990ರ ದಶಕದಲ್ಲಿ ಅಮೆರಿಕ ಮತ್ತು ಇಂಗ್ಲೆಂಡ್‌ನ ಒತ್ತಾಸೆಯ ಮೇರೆಗೆ ವಿಶ್ವಸಂಸ್ಥೆ ವಿಧಿಸಿದ ಆರ್ಥಿಕ ದಿಗ್ಬಂಧನದಿಂದಾಗಿ ಇರಾಕ್‌ನಲ್ಲಿ ಮಾನವ ನಿರ್ಮಿತ ಬಹುದೊಡ್ಡ ಹತ್ಯಾಕಾಂಡವೇ ನಡೆದು ಹೋಯಿತು. ಇತ್ತೀಚಿನ ಪ್ರಕರಣವಾದ ಅಮೆರಿಕ ಬೆಂಬಲಿತ ವೆನೆಜುವೆಲಾ ಮೇಲಿನ ಆರ್ಥಿಕ ದಿಗ್ಬಂಧನವನ್ನು ‘ಸಾಮೂಹಿಕ ಶಿಕ್ಷೆ’ ಎಂದು ಬಣ್ಣಿಸಲಾಗಿದೆ. ಸೆಂಟರ್ ಫಾರ್ ಎಕನಾಮಿಕ್ ಅಂಡ್ ಪಾಲಿಸಿ ರಿಸರ್ಚ್ ಸಂಸ್ಥೆಯು 2017-18ರ ಅವಧಿಯೊಂದರಲ್ಲೇ ಆ ದೇಶದಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ 40 ಸಾವಿರ ಹೆಚ್ಚು ಸಾವುಗಳು ಸಂಭವಿಸಿವೆ ಎಂದು ಅಂದಾಜಿಸಿದೆ. ವೆನೆಜುವೆಲಾ ಎದುರಿಸುತ್ತಿದ್ದ ಆರ್ಥಿಕ ದಿಗ್ಬಂಧನದ ಪರಿಣಾಮವಾಗಿ ಅಗತ್ಯವಾದಷ್ಟು ಆಹಾರ ಮತ್ತು ಔಷಧಿಗಳನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗದಿರುವುದೇ ಇದಕ್ಕೆ ಕಾರಣ ಎಂದು ಅಧ್ಯಯನಗಳು ತಿಳಿಸಿವೆ.
ಅಲ್ಲಿಯವರೆಗೂ ಜಾಗತಿಕವಾಗಿ ಇಂತಹ ಸಾವುಗಳ ಅಧ್ಯಯನ ನೇಪಥ್ಯದಲ್ಲೇ ಉಳಿದು ಹೋಗಿದ್ದವು. ಇದರಿಂದಾಗಿ ಈ ಕುರಿತು ನೀತಿ ನಿರೂಪಕರು ಹೆಚ್ಚುತ್ತಿರುವ ಸಾವುಗಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿರಲಿಲ್ಲ. ಆದರೆ, ಇತ್ತೀಚೆಗೆ ‘ದಿ ಲ್ಯಾನ್ಸೆಟ್ ಗ್ಲೋಬಲ್ ಹೆಲ್ತ್’ನಲ್ಲಿ ಪ್ರಕಟವಾದ ಒಂದು ಗುರುತರವಾದ ವರದಿಯು, 1970ರಿಂದ 2021ರವರೆಗೆ ವಿವಿಧ ದೇಶಗಳಲ್ಲಿ ನಡೆದ ಸಾವುಗಳಿಗೆ ಆರ್ಥಿಕ ದಿಗ್ಬಂಧನಗಳೇ ಕಾರಣವೆಂಬುದನ್ನು ಯಾವುದೇ ಸಂದೇಹವಿಲ್ಲದಂತೆ ಸ್ಪಷ್ಟವಾಗಿ ಸಾರಿ ಹೇಳಿತು. ಸಾವಿಗೆ ಕಾರಣವನ್ನು ಹುಡುಕಲು ನೆರವಾಗುವ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳು ಸಹ ಇದೇ ಮಾಹಿತಿಯನ್ನು ನೀಡಿದವು. ಐದು ದಶಕಗಳ ಅವಧಿಯಲ್ಲಿ 38 ದಶಲಕ್ಷ ಸಾವುಗಳು ಸಂಭವಿಸಿದವು. ಇದಕ್ಕೆ ಕಾರಣ ಯಾವುದೇ ಭಯೋತ್ಪಾದಕ ಸ್ಫೋಟಗಳಲ್ಲ. ಬದಲಾಗಿ ಆ ದೇಶದ ಆರ್ಥಿಕತೆಯ ಕತ್ತು ಹಿಸುಕುವ ಮೂಲಕ ಜನರಿಗೆ ಅಪೌಷ್ಟಿಕ ಆಹಾರ ವಿತರಣೆ, ನೀರು ಮತ್ತು ನೈರ್ಮಲ್ಯ ವ್ಯವಸ್ಥೆಗಳನ್ನು ಬುಡಮೇಲು ಮಾಡುವುದು ಮತ್ತು ಆರೋಗ್ಯ ಮೂಲಸೌಕರ್ಯಗಳ ವೈಫಲ್ಯವು ಈ ಸಾವುಗಳಿಗೆ ನೇರ ಕಾರಣವಾಗಿದೆ. ಆರ್ಥಿಕ ದಿಗ್ಬಂಧನ ವಿಧಿಸುವುದು ಎಂದರೆ ವ್ಯವಸ್ಥಿತವಾಗಿ ಆ ದೇಶದಲ್ಲಿ ಅಭಾವವನ್ನು ಸೃಷ್ಟಿಸುವುದೇ ಆಗಿದೆ. 1960ರ ಏಪ್ರಿಲ್‌ನಲ್ಲಿ ಅಮೆರಿಕದ ಸ್ಟೇಟ್ ಡಿಪಾರ್ಟ್ಮೆಂಟ್‌ನ ವರ್ಗೀಕರಿಸಲಾದ ಮೆಮೊದಲ್ಲಿ ಕ್ಯೂಬಾದ ಫಿಡೆಲ್ ಕ್ಯಾಸ್ಟ್ರೋ ಅವರನ್ನು ಹಣಿಯಲು ಇಂತಹ ವಿಧಾನವನ್ನು ಬಳಸಿ ಅತ್ಯಂತ ಕ್ರೂರವಾಗಿ ಆ ದೇಶದ ಜನತೆಯನ್ನು ಹಣಿಯುವ ಮಾಹಿತಿಯನ್ನು ಹಂಚಿಕೊಳ್ಳಲಾಗಿತ್ತು.
ಹಣ ಮತ್ತು ಮೂಲಸೌಕರ್ಯಗಳ ರಫ್ತನ್ನು ತಡೆಯುವುದರಿಂದ ಜನರು ಹಸಿವಿನಿಂದ ಬಳಲುತ್ತಾರೆ. ನಂತರ ಹತಾಶರಾಗಿ ಅಲ್ಲಿನ ಸರ್ಕಾರವನ್ನು ಕಿತ್ತೊಗೆಯಬಹುದು ಎಂಬುದು ಅಮೆರಿಕದ ಊಹೆಯಾಗಿತ್ತು. ಅದಕ್ಕೆ ತಕ್ಕಂತೆ ಇರಾಕ್, ಇರಾನ್ ಮತ್ತು ಪ್ಯಾಲೆಸ್ತೀನ್ ದೇಶಗಳಲ್ಲಿ ಇಂತಹ ಪ್ರಯೋಗಗಳು ನಡೆದವು.
ಹಸಿವು ಎಂಬುದು ಆಕಸ್ಮಾತ್ ಘಟಿಸಬಹುದಾದ ವಿದ್ಯಮಾನವಲ್ಲ. ಅದು ನಿರ್ದಿಷ್ಟ ತಂತ್ರಗಾರಿಕೆಯ ಭಾಗ. ಅಮೆರಿಕದ ಡಾಲರ್ ಮತ್ತು ಯೂರೋಪಿಯನ್ ದೇಶಗಳು ಬಳಸುವ ಯೂರೊ ಜಾಗತಿಕವಾಗಿ ಪ್ರಬಲವಾಗಿದ್ದು, ಸ್ವಿಫ್ಟ್ (ಸೊಸೈಟಿ ಫಾರ್ ವರ್ಲ್ಡ್ ವೈಡ್ ಇಂಟರ್ ಬ್ಯಾಂಕ್ ಫೈನಾನ್ಸಿಯನಲ್ ಟೆಲಿಕಮ್ಯುನಿಕೇಶನ್) ಎಂಬ ಮೆಸೇಜಿಂಗ್ ನೆಟ್ವರ್ಕ್ ರೂಪಿಸಿಕೊಂಡಿವೆ. ಆ ಮೂಲಕ ಹಣಕಾಸು ವಹಿವಾಟಿನ ಸಂದೇಶವನ್ನು ಹಂಚಿಕೊಳ್ಳುತ್ತವೆ. ಇದರ ಸಂಪೂರ್ಣ ನಿಯಂತ್ರಣವನ್ನು ಅಮೆರಿಕ ಮತ್ತು ಯೂರೋಪಿಯನ್ ಸಾಮ್ರಾಜ್ಯಶಾಹಿಗಳು ಮಾಡುತ್ತಾರೆ. ಹೀಗಾಗಿ, ಅವರು ಮನಸ್ಸು ಮಾಡಿದರೆ ತಮ್ಮ ವಿರೋಧಿ ದೇಶಗಳ ಸೆಂಟ್ರಲ್ ಬ್ಯಾಂಕುಗಳ ವಹಿವಾಟನ್ನು ಹದಗೆಡಿಸಬಹುದು. ದೇಶದ ಆಸ್ತಿಗಳನ್ನು ವಶಕ್ಕೆ ಪಡೆಯಬಹುದು. ವ್ಯಾಪಾರವನ್ನು ನಿರ್ಬಂಧಿಸಬಹುದು. ಇದರಿಂದ ಹಣದುಬ್ಬರ ತೀವ್ರವಾಗಿ ಜನರ ಖರೀದಿ ಶಕ್ತಿ ಕುಸಿಯುತ್ತದೆ. ಜೊತೆಗೆ ಸಾರ್ವಜನಿಕ ಸೇವೆಗಳು ಮತ್ತು ಖಾಸಗಿ ಮಾರುಕಟ್ಟೆಗಳು ಸ್ತಬ್ಧಗೊಳ್ಳುತ್ತವೆ. ಒಬ್ಬ ತಾಯಿ ತನ್ನ ಮಗುವಿಗೆ ಆಹಾರ ಕೊಡಲಾಗದಷ್ಟು, ಕಾಯಿಲೆಗೆ ಔಷಧಿ ಪಡೆಯಲಾಗದಷ್ಟು ಕೆಟ್ಟ ಪರಿಸ್ಥಿತಿಗೆ ಹೋಗುವುದು ಸಾಮ್ರಾಜ್ಯಶಾಹಿ ರಾಷ್ಟ್ರಗಳು ಸೃಷ್ಟಿಸಿದ ಒಂದು ವಿಪರೀತದ ಹಂತ.
ಈ ಪದ್ಧತಿಯು ಆಧುನಿಕ ಸಾಮ್ರಾಜ್ಯಶಾಹಿ ವ್ಯವಸ್ಥೆ ಕೆಲಸ ಮಾಡುವ ವಿಧಾನಕ್ರಮವಾಗಿದೆ. ತನಗಾಗದ ದೇಶಗಳನ್ನು ತನ್ನ ಹದ್ದುಬಸ್ತಿನಲ್ಲಿಡಲು ಅದು ತನ್ನ ಸೈನ್ಯವನ್ನು ಆ ದೇಶದಲ್ಲಿ ನಿಯೋಜಿಸಬೇಕಿಲ್ಲ. ಬದಲಾಗಿ ಆರ್ಥಿಕ ದಿಗ್ಬಂಧನವು ವಿವಿಧ ದೇಶಗಳನ್ನು ಹೈರಾಣು ಮಾಡುವ ಮೂಲಕ ಬಿಕ್ಕಟ್ಟು ಸೃಷ್ಟಿಸುತ್ತದೆ. ಸಾಮ್ರಾಜ್ಯಶಾಹಿ ಅಧಿನಾಯಕತ್ವದಡಿಯಲ್ಲಿ ಪ್ರತಿ ವರ್ಷ ಐದು ಲಕ್ಷ ಜನರು ತಮ್ಮ ಜೀವವನ್ನು ಕಳೆದುಕೊಳ್ಳುತ್ತಾರೆ. ಇದೊಂದು ಕ್ರಿಮಿನಲ್ ವ್ಯವಹಾರವಾಗಿದ್ದು, ಜಾಗತಿಕವಾಗಿ ಪ್ರಜ್ಞಾವಂತ ಜನರು ಇಂತಹ ಅನ್ಯಾಯದ ಸಾವುಗಳ ವಿರುದ್ಧ ಧ್ವನಿ ಮೊಳಗಿಸಬೇಕು. ಆ ಮೂಲಕ ಸಾಮ್ರಾಜ್ಯಶಾಹಿಗಳು ಆರ್ಥಿಕ ದಿಗ್ಬಂಧನಗಳಿಂದ ಜನರ ಸಾವಿಗೆ ಕಾರಣವಾಗುವ ನಿರ್ಧಾರ ಹಿಂದಕ್ಕೆ ಪಡೆಯುವ ನಿಟ್ಟಿನಲ್ಲಿ ಒತ್ತಡ ತರಬೇಕಾಗಿದೆ.