ಯುದ್ಧ: ಜನರ ಸಮಾಧಿ ಮೇಲೆ ‘ಬೆಳೆಯುತ್ತಿರುವ ಉದ್ಯಮ’
ಪ್ಯಾಲೇಸ್ತೇನ್‌ನ ಗಾಜಾದ ಮೇಲೆ ಇಸ್ರೇಲ್ ನಡೆಸುತ್ತಿರುವ ಯುದ್ಧ ದಾಳಿ, ಸಾವಿರಾರು ಮಕ್ಕಳನ್ನು ಒಳಗೊಂಡ 60,000 ಮುಗ್ಧ ಜನರ ಕಗ್ಗೊಲೆ ಇಡೀ ಜಗತ್ತಿನಾದ್ಯಂತ ತಲ್ಲಣ ಮೂಡಿಸಿದೆ. ಲಕ್ಷೋಪಾದಿಯಲ್ಲಿ ಜನ ರಸ್ತೆಗೆ ಇಳಿದು ಈ ಕ್ರೌರ್ಯದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಇದಲ್ಲದೆ ರಷ್ಯಾ ದೇಶ, ಉಕ್ರೇನ್ ಮೇಲೆ ನಡೆಸುತ್ತಿರುವ ದಾಳಿ ಕೂಡ ನಿರಂತರ ಸಾಗುತ್ತಲೇ ಇದೆ. ಈ ಹಿಂದೆ ಅಮೇರಿಕಾ ಕುಂಟು ನೆಪಗಳನ್ನು ನೀಡಿ, ಅಫ್ಗಾನಿಸ್ತಾನ್, ಇರಾಕ್, ಲೆಬನಾನ್, ಸಿರಿಯಾ ದೇಶಗಳ ಮೇಲೆ ನಡೆಸಿದ್ದ ಬಾಂಬ್ ದಾಳಿಯನ್ನು ಇನ್ನೂ ಜನ ಮರೆತಿಲ್ಲ. ಈ ಹಿಂದೆ ಎರಡು ವಿಶ್ವ ಯುದ್ಧಗಳೂ ಜರುಗಿ, ಕೋಟ್ಯಾಂತರ ಜನರ ಜೀವ-ಜೀವನ ಸರ್ವನಾಶವಾಯಿತು. ಆದರೆ ಈ ಯುದ್ಧಗಳಿಂದ ಜನರ ಬದುಕು ಒಂದೆಡೆ ಮೂರಾಬಟ್ಟೆಯಾದರೆ, ಶಸ್ತ್ರಾಸ್ತ್ರ ಕಂಪನಿಗಳಿಗಂತೂ ಭರ್ಜರಿ ಲಾಭವಾಗಿದೆ. ಜನರ ಸಮಾಧಿಯ ಮೇಲೆ ವ್ಯಾಪಾರ ನಡೆಸಿ, ಬಿಲಿಯಾಂತರ ಡಾಲರ್ ಲಾಭವನ್ನು ಈ ಕಂಪನಿಗಳು ಕಬಳಿಸಿವೆ. ಆರ್ಥಿಕ ಬಿಕ್ಕಟ್ಟು, ದುಬಾರಿ ಶಿಕ್ಷಣ-ಆರೋಗ್ಯ, ನಿರುದ್ಯೋಗ, ಹಣದುಬ್ಬರ, ಬೆಲೆ ಏರಿಕೆ, ಕಾರ್ಮಿಕ-ರೈತರ ತೀವ್ರತರ ಶೋಷಣೆ ಇಂತಹ ಅನೇಕ ಸಮಸ್ಯೆಗಳು ಜಗತ್ತಿನಾದ್ಯಂತ ದುಡಿಯುವ ಜನರನ್ನು ಕಿತ್ತು ತಿನ್ನುತ್ತಿವೆ. ಈ ಸಮಸ್ಯೆಗಳಿಗೆ ಯಾವುದೇ ಪರಿಹಾರ ನೀಡದ ಸಾಮ್ರಾಜ್ಯಶಾಹಿ ದೇಶಗಳು, ತಮ್ಮ ಬಂಡವಾಳಶಾಹಿ ಮಾರುಕಟ್ಟೆಯನ್ನು ಕಾಪಾಡುವುದಕ್ಕಾಗಿ ಯುದ್ಧಗಳಿಗೆ ಮೊರೆ ಹೋಗುತ್ತಿವೆ. ಬಂಡವಾಳಶಾಹಿ ಶೋಷಣೆಯಿಂದ ಜನರ ಕೊಂಡುಕೊಳ್ಳುವ ಶಕ್ತಿ ಕುಸಿಯುತ್ತಿರುವಾಗ, ದಿನಬಳಕೆ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗುತ್ತಿರುವಾಗ, ಈ ಸಾಮ್ರಾಜ್ಯಶಾಹಿ ದೇಶಗಳು ಭೌಗೋಳಿಕ-ರಾಜಕೀಯ ಸಂಘರ್ಷಗಳನ್ನು ಸೃಷ್ಟಿಸಿ ಯುದ್ಧಗಳಿಗೆ ಮೊರೆಹೋಗುತ್ತಿವೆ. ಈ ಯುದ್ಧಗಳ ಹೆಸರಿನಲ್ಲಿ, ಬಿಲಿಯಾಂತರ ಡಾಲರ್ ಮೊತ್ತದ ಶಸ್ತ್ರಾಸ್ತ್ರಗಳನ್ನು ಖಾಸಗಿ ಕಂಪನಿಗಳಿಂದ ಸರ್ಕಾರಗಳೇ ಖರೀದಿಸುತ್ತವೆ. ಈ ಮೂಲಕ ಖಾಸಗಿ ಕಂಪನಿಗಳಿಗೆ ಒಂದು ಕೃತಕ ಮಾರುಕಟ್ಟೆ ಸೃಷ್ಟಿಸಲಾಗುತ್ತದೆ. ಮತ್ತಷ್ಟು ಉದಾಹರಣೆಗಳ ಮೂಲಕ ಈ ವಿಚಾರವನ್ನು ವಿಶ್ಲೇಷಣೆ ಮಾಡೋಣ.
ಯುದ್ಧದಿಂದ ಬಹುರಾಷ್ಟ್ರೀಯ ಕಂಪನಿಗಳಿಗೆ ಭರ್ಜರಿ ಲಾಭ
ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (SIPRI) ಪ್ರಕಾರ, ವಿಶ್ವದ ಅಗ್ರ 100 ಶಸ್ತ್ರಾಸ್ತ್ರ ಕಂಪನಿಗಳ ಒಟ್ಟು ಆದಾಯವು 2023ರಲ್ಲಿ ಶೇ. 4.2ರಷ್ಟು ಏರಿಕೆಯಾಗಿ, $ 632 ಬಿಲಿಯನ್ (ಸುಮಾರು ರೂ.62,45,600ಕೋಟಿ) ಡಾಲರ್ಸ್ ನಷ್ಟು ಬೆರಗುಗೊಳಿಸುವ ಮೊತ್ತವನ್ನು ತಲುಪಿದೆ. ಇದು ಕೇವಲ ಒಂದು ನಿಷ್ಕ್ರಿಯ ಮಾರುಕಟ್ಟೆಯ ಏರಿಳಿತವಲ್ಲ; ಯುದ್ಧಕ್ಕೂ ಹಾಗೂ ಅತೀ ಹೆಚ್ಚು ಲಾಭಗಳಿಕೆಗೂ ನೇರ ಸಂಬಂಧವಿದೆ. ಬಂಡವಾಳಶಾಹಿ ನಿಯಮಗಳಿಂದಾಗಿಯೇ, ಆಹಾರ ಪದಾರ್ಥಗಳು ಸೇರಿದಂತೆ ದಿನಬಳಕೆ ವಸ್ತುಗಳ ಬೇಡಿಕೆಯು ದಿನೇ ದಿನೇ ಕುಸಿಯುತ್ತಿರುವಾಗ, ಅತಿ ಹೆಚ್ಚು ಲಾಭವನ್ನು ಗಳಿಸಲು ಹತಾಶರಾಗಿರುವ ಬಹುರಾಷ್ಟ್ರೀಯ ಕಂಪನಿಗಳಿಗೆ ಯುದ್ಧವು ಅತ್ಯಂತ ಲಾಭದಾಯಕವಾಗಿದೆ.
ಯುದ್ಧದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ತೊಡಗಿರುವ ಸಾಮ್ರಾಜ್ಯಶಾಹಿ ದೇಶಗಳ ಆಳ್ವಿಕರಿಗೆ ಅತ್ಯಂತ ಗಮನಾರ್ಹ ಲಾಭಗಳು ದೊರೆತಿವೆ. ಉಕ್ರೇನ್ ವಿರುದ್ಧ ಯುದ್ಧ ಸಾಮಗ್ರಿಗಳನ್ನು ನೀಡುತ್ತಿರುವ ರಷ್ಯಾದ ಶಸ್ತ್ರಾಸ್ತ್ರ ಕಂಪನಿಗಳ ಆದಾಯವು 2023ರಲ್ಲಿ ಬೆರಗುಗೊಳಿಸುವಷ್ಟು, ಶೇ. 40ರಷ್ಟು ಹೆಚ್ಚಾಗಿದೆ. ಗಾಜಾ ಯುದ್ಧವನ್ನು ಬಂಡವಾಳ ಮಾಡಿಕೊಂಡ ಇಸ್ರೇಲಿ ಶಸ್ತ್ರಾಸ್ತ್ರ ಉತ್ಪಾದಕರು ದಾಖಲೆಯ ಮಾರಾಟವನ್ನು ವರದಿ ಮಾಡಿದ್ದಾರೆ. ಉಕ್ರೇನ್‌ನಲ್ಲಿನ ಸಂಘರ್ಷವನ್ನು ರಫ್ತು ಅವಕಾಶಗಳಿಗಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಟರ್ಕಿಶ್ ಕಂಪನಿಗಳು ಶೇ. 24 ರಷ್ಟು ಆದಾಯ ಹೆಚ್ಚಳವನ್ನು ಅನುಭವಿಸಿವೆ.
ಈಗ ಅಮೆರಿಕನ್ ದೈತ್ಯರೇ ಮಾರುಕಟ್ಟೆಯ ಮೇಲೆ ಪ್ರಾಬಲ್ಯ ಹೊಂದಿದ್ದಾರೆ. ಲಾಕ್‌ಹೀಡ್ ಮಾರ್ಟಿನ್, ಆರ್‌ಟಿಎಕ್ಸ್ (ಹಿಂದಿನ ರೇಥಿಯಾನ್), ನಾತ್ರೋðಪ್ ಗ್ರುಮ್ಮನ್, ಬೋಯಿಂಗ್ ಮತ್ತು ಜನರಲ್ ಡೈನಾಮಿಕ್ಸ್ ಜಾಗತಿಕವಾಗಿ ಮೊದಲ ಐದು ಸ್ಥಾನಗಳನ್ನು ಆಕ್ರಮಿಸಿಕೊಂಡಿವೆ. ಇದು 2024ರಲ್ಲಿ ಪೆಂಟಗನ್‌ನ 997 ಬಿಲಿಯನ್ ಡಾಲರ್ಸ್ ಮಿಲಿಟರಿ ಬಜೆಟ್‌ನ ಅಗಾಧ ಪ್ರಮಾಣಕ್ಕೆ ಸಾಕ್ಷಿಯಾಗಿದೆ. ಇದು ಆ ವರ್ಷದ ಒಟ್ಟು ಜಾಗತಿಕ ಮಿಲಿಟರಿ ವೆಚ್ಚದ ಶೇ. 37ರಷ್ಟು ಆಗಿತ್ತು ಮತ್ತು ಹಿಂದಿನ ವರ್ಷಕ್ಕಿಂತ ಶೇ. 5.7ರಷ್ಟು ಹೆಚ್ಚಳವಾಗಿತ್ತು. ಅಮೇರಿಕಾದ ಬಂಡವಾಳಶಾಹಿ ಮಾರುಕಟ್ಟೆಯು ಶಸ್ತ್ರಾಸ್ತ್ರ ಉದ್ಯಮಗಳ ಮೇಲೆ ತೀವ್ರವಾಗಿ ಅವಲಂಬಿತವಾಗಿದೆ. ಅದನ್ನು ಉಳಿಸಿಕೊಳ್ಳಲು ಎಂತಹ ಯುದ್ಧಗಳಿಗೂ ಅಮೇರಿಕಾ ಸಜ್ಜಾಗುತ್ತದೆ. ವಾಸ್ತವವಾಗಿ, ಯುದ್ಧವನ್ನು ನಿಲ್ಲಿಸುವುದೆಂದರೆ, ಅದು ಅಮೇರಿಕಾ ಆರ್ಥಿಕತೆಯ ವಿರುದ್ಧ ಪರೋಕ್ಷ ಯುದ್ಧವೆಂದೇ ಅರ್ಥ.
ಏಷ್ಯಾದಲ್ಲೂ ಈ ಶಸ್ತ್ರಾಸ್ತ್ರ ವ್ಯಾಪಾರ ಬಲು ಜೋರು
ಪ್ರತಿ-ಕ್ರಾಂತಿಯ ನಂತರ ಪ್ರಬಲ ಸಾಮ್ರಾಜ್ಯಶಾಹಿ ಶಕ್ತಿಯಾಗಿರುವ ಚೀನಾ ಈಗ ಶಸ್ತ್ರಾಸ್ತ್ರ ಉದ್ಯಮದಿಂದ ಗಳಿಸಿದ ಒಟ್ಟು ಆದಾಯದ ದೃಷ್ಟಿಯಿಂದ ಅಮೇರಿಕಾ ನಂತರದ ಎರಡನೇ ಸ್ಥಾನದಲ್ಲಿದೆ. ಇದು ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ಸರ್ಕಾರಿ ನಿಯಂತ್ರಿತ ಮಾದರಿಯನ್ನು ನಿರ್ವಹಿಸುತ್ತದೆ. ಚೀನೀ ಶಸ್ತ್ರಾಸ್ತ್ರ ಉದ್ಯಮವು ನೊರಿಂಕೊ ಗ್ರೂಪ್, ಏವಿಯೇಷನ್ ಇಂಡಸ್ಟ್ರಿ ಕಾರ್ಪೊರೇಷನ್ ಆಫ್ ಚೀನಾ (AVIC), ಮತ್ತು ಚೀನಾ ಸ್ಟೇಟ್ ಶಿಪ್‌ಬಿಲ್ಡಿಂಗ್ ಕಾರ್ಪೊರೇಷನ್ (CSSC) ನಂತಹ ದೊಡ್ಡ ಸರ್ಕಾರಿ-ಮಾಲೀಕತ್ವದ ಉದ್ಯಮಗಳಿಂದ (SOEs) ಪ್ರಾಬಲ್ಯ ಹೊಂದಿದೆ. ಕೆಲವು ಸಣ್ಣ ಶಸ್ತ್ರಾಸ್ತ್ರ ಕಂಪನಿಗಳು ರಕ್ಷಣೆಗಾಗಿ ಘಟಕಗಳು ಮತ್ತು ವಸ್ತುಗಳ ತಯಾರಿಕೆಯಲ್ಲಿ ತೊಡಗಿವೆ.
ಮತ್ತೊಂದು ಸಾಮ್ರಾಜ್ಯಶಾಹಿ ಶಕ್ತಿಯಾದ ಭಾರತ ಕೂಡ 74 ಬಿಲಿಯನ್ ಡಾಲರ್ ಗಿಂತ ಹೆಚ್ಚಿನ ರಕ್ಷಣಾ ಬಜೆಟ್‌ನೊಂದಿಗೆ ಒಂದು ಶಕ್ತಿ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಪ್ರಮುಖ ಖಾಸಗಿ ಭಾರತೀಯ ಶಸ್ತ್ರಾಸ್ತ್ರ ಕಂಪನಿಗಳಲ್ಲಿ ಟಾಟಾ ಅಡ್ವಾನ್ಸ್÷್ಡ ಸಿಸ್ಟಮ್ಸ್ ಲಿಮಿಟೆಡ್ (TASL), ಲಾರ್ಸೆನ್ & ಟೂಬ್ರೊ (L&T), ಮಹೀಂದ್ರಾ ಡಿಫೆನ್ಸ್ ಸಿಸ್ಟಮ್ಸ್, ಭಾರತ್ ಫೋರ್ಜ್ (ಕಲ್ಯಾಣಿ ಗ್ರೂಪ್‌ನ ಭಾಗ) ಮತ್ತು ಪಾರಸ್ ಡಿಫೆನ್ಸ್ ಅಂಡ್ ಸ್ಪೇಸ್ ಟೆಕ್ನಾಲಜೀಸ್ ಸೇರಿವೆ. ಅವುಗಳಲ್ಲಿ ಕೆಲವು ಲಾಕ್‌ಹೀಡ್ ಮಾರ್ಟಿನ್, ಶೀಲ್ಡ್ ಎಐ, ಜನರಲ್ ಅಟಾಮಿಕ್ಸ್, ಬೋಯಿಂಗ್, ಸ್ಕೆೈಡಿಯೊ ಮತ್ತು ಎಎಂ ಜನರಲ್‌ನಂತಹ ಅಮೇರಿಕಾ ರಕ್ಷಣಾ ದೈತ್ಯರೊಂದಿಗೆ ಜಂಟಿ ಉದ್ಯಮಗಳನ್ನು ಸಹ ಹೊಂದಿವೆ.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನಂತಹ ಸರ್ಕಾರಿ ಮಾಲೀಕತ್ವದ ಉದ್ಯಮಗಳು, ಏರುತ್ತಿರುವ ಶಸ್ತ್ರಾಸ್ತ್ರ ರಫ್ತುಗಳು ಮತ್ತು ಶಸ್ತ್ರಾಸ್ತ್ರಗಳ ದೇಶೀಯ ಉತ್ಪಾದನೆಗೆ ಸರ್ಕಾರ ನೀಡುತ್ತಿರುವ ಒತ್ತಿನಿಂದ ಉತ್ತೇಜಿತಗೊಂಡು, ಬೃಹತ್ ಬೆಳವಣಿಗೆಗೆ ಸಿದ್ಧವಾಗಿವೆ.
ಶಿಕ್ಷಣಕ್ಕೆ ಹಣವಿಲ್ಲ, ಯುದ್ಧ ವ್ಯಾಪಾರಿಗಳಿಗೆ ಹಣದ ಹೊಳೆ!
ಜಾಗತಿಕ ಮಿಲಿಟರಿ ವೆಚ್ಚದ ಕೇವಲ ಶೇ.3 ರಷ್ಟು ಮಾತ್ರ ಪರಿಗಣಿಸಿದರೂ ಜಗತ್ತಿನಾದ್ಯಂತ ಎಲ್ಲಾ ಮಕ್ಕಳು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಪಡೆಯಬಹುದು ಎಂದು ವಿಶ್ವಸಂಸ್ಥೆ ಅಂದಾಜು ಮಾಡಿದೆ. ಒಂದು ಎಫ್- 35ಸ್ಟೆಲ್ತ್ ಫೈಟರ್ ಜೆಟ್‌ನ ವೆಚ್ಚ, ಸರಿ ಸುಮಾರು 80 ಮಿಲಿಯನ್ ಡಾಲರ್ಸ್, ಇದು 2,00,000 ಮಕ್ಕಳ ವಾರ್ಷಿಕ ಶಿಕ್ಷಣ ಬಜೆಟ್‌ಗೆ ಸಮಾನವಾಗಿದೆ. ಕೇಂದ್ರ ಸರ್ಕಾರವು ಫ್ರಾನ್ಸ್ ಮೂಲದ ರಾಫೆಲ್ ಕಂಪನಿಯೊಂದಿಗೆ 26 ವಿಮಾನಗಳನ್ನು ಖರೀದಿಸಲು ರೂ.63,000 ಕೋಟಿ ಮೌಲ್ಯದ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿತು. ಆದರೆ ಹೆಚ್ಚಿನ ಸಂಖ್ಯೆಯ ಬಡವರಿಗೆ, ಒಂದು ವರ್ಷದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ರೂ.86,000 ಕೋಟಿ ಒದಗಿಸಲು, ಕೇಂದ್ರ ಬಿಜೆಪಿ ಸರ್ಕಾರ ಮೀನಾಮೇಷ ಎಣಿಸುತ್ತದೆ.
ಯುದ್ಧಗಳಿಲ್ಲದೆ ಬಲಾಢ್ಯ ದೇಶಗಳ ಆರ್ಥಿಕತೆ ಸಾಯುತ್ತದೆ. ಏಕೆ ಇಂತಹ ಪರಿಸ್ಥಿತಿ ?
ಆದರೆ ಈ ಶಸ್ತ್ರಾಸ್ತ್ರ ತಯಾರಿಕೆಯ ಹುಚ್ಚುತನ ಏಕೆ? ಸಾಮ್ರಾಜ್ಯಶಾಹಿ ಮಹಾಶಕ್ತಿಗಳು ಯುದ್ಧಗಳನ್ನು ಸಂಘಟಿಸದೆ ಅಥವಾ ಉತ್ತೇಜಿಸದೆ ಏಕೆ ಬದುಕಲು ಸಾಧ್ಯವಿಲ್ಲ? ಯುದ್ಧದ ಉದ್ವಿಗ್ನತೆಗಳು, ನಾಗರಿಕರ ಹತ್ಯೆ, ಹಸಿವು, ಉಪವಾಸ, ಕ್ಷಾಮಗಳು, ನಿರುದ್ಯೋಗ, ಕನಿಷ್ಠ ಶಿಕ್ಷಣ ಮತ್ತು ಆರೋಗ್ಯದ ಕೊರತೆಯಿಂದ ಜನರು ನರಳುತ್ತಿರುವಾಗ, ಶಸ್ತ್ರಾಸ್ತ್ರ ಉದ್ಯಮಗಳಿಂದ ಅತಿ ಹೆಚ್ಚು ಲಾಭಗಳಿಸುವುದಕ್ಕೆ ಅವರು ಏಕೆ ಒಲವು ತೋರುತ್ತಾರೆ?
ಎಸ್‌ಯುಸಿಐ(ಸಿ)ಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಮತ್ತು ಈ ಯುಗದ ಮಹಾನ್ ಮಾರ್ಕ್ಸ್ವಾದಿ ಚಿಂತಕರಾದ ಕಾಮ್ರೇಡ್ ಶಿವದಾಸ್ ಘೋಷ್ ಅವರು ಹೇಳಿದಂತೆ, ಬಂಡವಾಳಶಾಹಿ ಬಿಕ್ಕಟ್ಟು ಹೆಚ್ಚಾದಂತೆ, ಎಲ್ಲಾ ಮುಂದುವರಿದ ಅಥವಾ ಹಿಂದುಳಿದ ಬಂಡವಾಳಶಾಹಿ ರಾಷ್ಟ್ರಗಳು, ಆರ್ಥಿಕತೆಯನ್ನು ಮಿಲಿಟರೀಕರಣಗೊಳಿಸುವ ಮೂಲಕ ಬದುಕಲು ಪ್ರಯತ್ನಿಸುತ್ತವೆ. ಕಾ.ಘೋಷ್ ಅವರ ಭಾಷೆಯಲ್ಲಿ ಹೇಳುವುದಾದರೆ “…ಸಾಮ್ರಾಜ್ಯಶಾಹಿಗಳು… ವ್ಯಾಪಕವಾಗಿ ಶಸ್ತ್ರಾಸ್ತ್ರಗಳನ್ನು ಸಜ್ಜುಗೊಳಿಸುವುದು ಮತ್ತು ಕೈಗಾರಿಕೆಗಳ ಮಿಲಿಟರೀಕರಣಕ್ಕೆ ಮೊರೆಹೋಗುವ ಮೂಲಕ ಸಂಕಷ್ಟಗಳನ್ನು ಸರಿದೂಗಿಸಲು ಪ್ರಯತ್ನಿಸುತ್ತಿದ್ದಾರೆ…” “ಬಿಕ್ಕಟ್ಟಿನಿಂದಾಗಿ ಮಾರುಕಟ್ಟೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಕಾರಣ, ಅದನ್ನು ಕೃತಕವಾಗಿ ಉತ್ತೇಜಿಸಲು ಪ್ರಯತ್ನಗಳು ನಡೆಯುತ್ತಿವೆ. ಇದರರ್ಥ, ಜನರ ಹಣದಿಂದ ಕೂಡಿದ ಸರ್ಕಾರಿ ಬಜೆಟ್‌ನಿಂದ ಹಣವನ್ನು ತೆಗೆದುಕೊಂಡು ಸರ್ಕಾರವೇ ಖರೀದಿದಾರನಾಗಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಸರ್ಕಾರ ಏನು ಖರೀದಿಸುತ್ತದೆ? ಆ ವಸ್ತುಗಳು ಯಾವ ಉಪಯೋಗಕ್ಕೆ ಬರಬಹುದು? ಆದ್ದರಿಂದ, ಅವರು ಮಿಲಿಟರಿ ಶಕ್ತಿಯನ್ನು ಹೆಚ್ಚಿಸುತ್ತಾರೆ ಮತ್ತು ಅಲ್ಲಿ-ಇಲ್ಲಿ ಯುದ್ಧವನ್ನು ಪ್ರಚೋದಿಸುತ್ತಾರೆ. ಅವರು ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುತ್ತಲೇ ಇರುತ್ತಾರೆ, ಮಿಲಿಟರಿ ಶಕ್ತಿಯನ್ನು ಹೆಚ್ಚಿಸುತ್ತಾರೆ ಮತ್ತು ರಕ್ಷಣಾ ಕೈಗಾರಿಕೆಗಳನ್ನು ನಿರ್ಮಿಸುತ್ತಾರೆ. ಇದುವೇ ಆರ್ಥಿಕತೆಯ ಮಿಲಿಟರೀಕರಣವಾಗಿದ್ದು, ಉತ್ಪಾದನಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮಿಲಿಟರಿ ಉತ್ಪಾದನೆಯೊಂದಿಗೆ ಸರಿ ಹೊಂದಿಸುವುದನ್ನು ಕೈಗಾರಿಕೆಗಳ ಮಿಲಿಟರೀಕರಣ ಎನ್ನುತ್ತೇವೆ. ಈ ಮಿಲಿಟರೀಕರಣವು ಬಂಡವಾಳಶಾಹಿ ವಿರೋಧಾಭಾಸಗಳು ಮತ್ತು ಬಿಕ್ಕಟ್ಟನ್ನು ಇನ್ನಷ್ಟು ಉಲ್ಬಣಗೊಳಿಸುತ್ತಿದೆ. ಮತ್ತು ಬಿಕ್ಕಟ್ಟು ಎಷ್ಟು ತೀವ್ರವಾಗುತ್ತದೆಯೋ, ಆರ್ಥಿಕತೆಯು ಅಷ್ಟೇ ಹೆಚ್ಚು ಮಿಲಿಟರೀಕರಣಗೊಳ್ಳುತ್ತದೆ. ಹೀಗಾಗಿ ಈ ವಿಷ ವರ್ತುಲ ಸಾಗುತ್ತಲೇ ಇದ್ದು, ಅನಿಯಂತ್ರಿತ ಶಸ್ತ್ರಾಸ್ತ್ರ ಸ್ಪರ್ಧೆಗೆ ಎಡೆ ಮಾಡಿಕೊಟ್ಟಿದೆ.”
ಆದ್ದರಿಂದ ಹೆಚ್ಚಿದ ಆರ್ಥಿಕತೆಯ ಮಿಲಿಟರೀಕರಣ ಮತ್ತು ನಂತರ ಶಸ್ತ್ರಾಸ್ತ್ರಗಳ ಸಂಗ್ರಹವನ್ನು ವಿಲೇವಾರಿ ಮಾಡುವ ಅವಶ್ಯಕತೆಯು, ಸಾಮ್ರಾಜ್ಯಶಾಹಿಗಳಿಗೆ ಯುದ್ಧವನ್ನು ಹುಟ್ಟುಹಾಕಲು ಪ್ರೆಚೋದಿಸುತ್ತದೆ. ಹೆಚ್ಚು ಯುದ್ಧಗಳಾದಷ್ಟೂ, ಶಸ್ತ್ರಾಸ್ತ್ರಗಳಿಗೆ ಬೇಡಿಕೆ ಹೆಚ್ಚುತ್ತದೆ ಮತ್ತು ಅದರೊಂದಿಗೆ ರಕ್ಷಣಾ ಕೈಗಾರಿಕೆಗಳಿಗೆ ಉತ್ತೇಜನ ದೊರೆಯುತ್ತದೆ. ಇದು ಮೂಲ ಕಾರಣವಾಗಿದೆ.