ಯಾವುದು ನಿಜವಾದ ದೇಶಪ್ರೇಮ, ಯಾವುದು ನಿಜವಾದ ರಾಷ್ಟ್ರವಾದ
ಭಾಗ-1
ಯಾವುದೇ ದೇಶ ಅಭಿವೃದ್ಧಿಯಾಗಬೇಕೆಂದರೆ, ಪ್ರಗತಿಯ ಕಡೆಗೆ ಹೆಜ್ಜೆ ಹಾಕಬೇಕೆಂದರೆ, ಮುನ್ನಡೆಯನ್ನು ಸಾಧಿಸಬೇಕೆಂದರೆ, ಆ ದೇಶದ ಜನರಲ್ಲಿ ಉತ್ಕಟವಾದ ದೇಶಪ್ರೇಮ ಇರಲೇಬೇಕು. ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಳೆವಯಸ್ಸಿನ ಯುವಕರು ಸ್ವತಂತ್ರ ಭಾರತದ ಕನಸು ಕಾಣುತ್ತಾ, ಕನಸನ್ನು ಬೇರೆಯವರಲ್ಲಿ ಬಿತ್ತುತ್ತಾ, ನಗುನಗುತ್ತಾ ಗಲ್ಗಂಭವನ್ನೇರಿದರು. ಇವರೆಲ್ಲರೂ ಸದಾ ದೇಶದ ಅಭಿವೃದ್ಧಿಗಾಗಿ ನಡೆಯುವ ಹೋರಾಟಕ್ಕೆ ಸ್ಫೂರ್ತಿಯ ಸೆಲೆ. ಆದರೆ ಸ್ವಾತಂತ್ರ್ಯಾನಂತರ ಅಧಿಕಾರಕ್ಕೆ ಬಂದ ಬಂಡವಾಳಶಾಹಿ ವರ್ಗ ಈ ಕನಸನ್ನು ನನಸು ಮಾಡುವುದಿರಲಿ, ದೇಶದ ಜನಸಾಮಾನ್ಯರನ್ನು ಅಧೋಗತಿಗೆ ತಳ್ಳುತ್ತಿದೆ. ದುಡಿಯುವ ಜನರನ್ನು ಶೋಷಣೆ ಮಾಡಿ ಅಗಾಧ ಸಂಪತ್ತನ್ನು ಪೇರಿಸಿಕೊಂಡಿದೆ. ಇಂತಹ ಸಂದರ್ಭದಲ್ಲಿ ನ್ಯಾಯಕ್ಕಾಗಿ, ಬದುಕಿಗಾಗಿ ಬಂಡವಾಳಶಾಹಿ ಆಳ್ವಿಕೆಯ ವಿರುದ್ಧ ಹೋರಾಡಬೇಕು. ಆದ್ದರಿಂದ ದೇಶಪ್ರೇಮ ಅತ್ಯಗತ್ಯವಾಗಿದೆ. ಆದರೆ ಇಂದು ವೈರಿಗಳಾಗಿ ವಿದೇಶಿಗರಾದ ಬ್ರಿಟಿಷರಿಲ್ಲ. ಭಾರತೀಯರೇ ಅಧಿಕಾರಸ್ಥರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದೇಶಪ್ರೇಮವೆಂದರೇನು? ರಾಷ್ಟ್ರವಾದದ ಪರಿಕಲ್ಪನೆ ಏನಾಗಬೇಕು? ನಮ್ಮ ಸ್ವಾತಂತ್ರö್ಯ ಸಂಗ್ರಾಮದಲ್ಲಿ ದೇಶಪ್ರೇಮ, ರಾಷ್ಟ್ರವಾದದ ಪರಿಕಲ್ಪನೆಗಳೇನು? ಯಾರು ಮತ್ತು ಯಾವ ಸಂಘಟನೆಗಳು ದೇಶಕ್ಕಾಗಿ ಶ್ರಮಿಸಿದವು? ಇದೆಲ್ಲದರ ಬಗ್ಗೆ ಕೂಲಂಕಷವಾದ ವಿಮರ್ಶೆ ಮಾಡಿ, ಅರ್ಥ ಮಾಡಿಕೊಳ್ಳಬೇಕು. ನಮ್ಮ ಸ್ವಾತಂತ್ರö್ಯ ಹೋರಾಟದ ಬಗ್ಗೆ ಸರಿಯಾದ ತಿಳುವಳಿಕೆಯೂ ಇಂದಿನ ಜನಾಂಗಕ್ಕೆ ಬೇಕು.
ಈ ವಿಷಯ ಈಗ ಚರ್ಚೆಗೆ ಬರಲು ಕಾರಣವೆಂದರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಸ್ಟ್ 15 ರಂದು ದೇಶದ ಸ್ವಾತಂತ್ರ‍್ಯ ದಿನಾಚರಣೆಯ ಸಂದರ್ಭದಲ್ಲಿ ದೆಹಲಿಯ ಕೆಂಪು ಕೋಟೆಯ ವೇದಿಕೆಯಲ್ಲಿ ನಿಂತು ಭಾಷಣ ಮಾಡಿದರು; ಆಗ ಅವರು ಬೇರೆ ವಿಷಯಗಳ ಜೊತೆಗೆ ಇದನ್ನೂ ಹೇಳಿದರು: “ನಾನು ಬಹಳ ಹೆಮ್ಮೆಯಿಂದ… ಒಂದು ಸಂಸ್ಥೆಯ ಬಗ್ಗೆ ಹೇಳಲು ಬಯಸುತ್ತೇನೆ… ಅದು ರಾಷ್ಟ್ರೀಯ ಸ್ವಯಂಸೇವಕ ಸಂಘ… ರಾಷ್ಟ್ರ ನಿರ್ಮಾಣದ ನಿರ್ಧಾರದೊಂದಿಗೆ ಸ್ಥಾಪಿಸಲಾಯಿತು… ಸ್ವಯಂಸೇವಕರು ಒಂದು ಶತಮಾನಗಳ ಕಾಲ ಮಾತೃಭೂಮಿಯ ಕಲ್ಯಾಣಕ್ಕಾಗಿ ತಮ್ಮ ಜೀವಗಳನ್ನು ಮುಡುಪಾಗಿಟ್ಟಿದ್ದಾರೆ… ರಾಷ್ಟ್ರೀಯ ಸ್ವಯಂಸೇವಕ ಸಂಘವು ಒಂದು ಶತಮಾನ ಕಾಲದ ನಿಷ್ಠೆಯ ಇತಿಹಾಸ ಹೊಂದಿರುವ ವಿಶ್ವದ ಅತಿ ದೊಡ್ಡ ಎನ್‌ಜಿಓ… ರಾಷ್ಟ್ರಸೇವೆಯ ಒಂದು ಶತಮಾನ ಕಾಲದ ದೀರ್ಘ ಪಯಣಕ್ಕೆ ಕಾಣಿಕೆ ನೀಡುವ ಎಲ್ಲಾ ಸ್ವಯಂಸೇವಕರಿಗೂ ಕೈ ಮುಗಿಯುತ್ತೇನೆ ಮತ್ತು ರಾಷ್ಟ್ರೀಯ ಸ್ವಯಂಸೇವಕರ ಈ ಅಮೋಘವಾದ ಮತ್ತು ಬದ್ಧತೆಯ ಪಯಣಕ್ಕೆ ದೇಶವು ಹೆಮ್ಮೆ ಪಡುತ್ತದೆ, ಅದು ನಮಗೆ ಸ್ಫೂರ್ತಿ ತುಂಬುತ್ತಲೇ ಇರುತ್ತದೆ.” ನಂತರ ಅವರು ನಮಗೆ ನೆನಪಿಸಿದರು, “ಈ ವರ್ಷವು, …ಡಾಕ್ಟರ್ ಶಾಮ್ ಪ್ರಸಾದ್ ಮುಖರ್ಜಿ ಅವರ 125ನೇ ಜನ್ಮ ವಾರ್ಷಿಕ… ಅವರು ಭಾರತದ ಸಂವಿಧಾನಕ್ಕಾಗಿ ತನ್ನ ಜೀವವನ್ನೇ ಬಲಿದಾನ ಮಾಡಿದ, 370ನೇ ವಿಧಿಯ ಗೋಡೆಯನ್ನು ತೆಗೆದು ಹಾಕಿದ ಮತ್ತು ಒಂದು ದೇಶ ಒಂದು ಸಂವಿಧಾನದ ಮಂತ್ರವನ್ನು ವಾಸ್ತವ ರೂಪಕ್ಕಿಳಿಸಿದ ದೇಶದ ಮೊದಲ ಮಹಾನ್ ಚೇತನ.” ಕೆಲವೇ ದಿನಗಳ ಹಿಂದೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ (ಎನ್‌ಸಿಇಆರ್‌ಟಿ) ಭಾರತದ ವಿಭಜನೆಯ ಬಗ್ಗೆ ವಿಶೇಷ ಪಠ್ಯ ಮಾದರಿಯನ್ನು ಬಿಡುಗಡೆಗೊಳಿಸಿದೆ. ಅದರಲ್ಲಿ ದೇಶವು ವಿಭಜನೆಯಾಗುವುದಕ್ಕೆ ಮೊಹಮ್ಮದ್ ಆಲಿ ಜಿನ್ನಾ, ಕಾಂಗ್ರೆಸ್ ಮತ್ತು ಲಾರ್ಡ್ ಮೌಂಟ್ ಬ್ಯಾಟನ್ ಕಾರಣ ಎಂದು ಆರೋಪಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆಗೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣಗಳಲ್ಲಿ ಗಾಂಧಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಭಗತ್ ಸಿಂಗ್ ಫೋಟೋಗಳ ಮೇಲೆ ಸಾವರ್ಕರ್ ಫೋಟೋ ಹಾಕಿರುವ ಪೋಸ್ಟರ್ ಹರಿದಾಡುತ್ತಿದೆ.
ನಾಲ್ಕು ವಿಷಯಗಳು
ಇದಕ್ಕೆ ಸಂಬಂಧಪಟ್ಟಂತೆ ಒಟ್ಟಾರೆ ನಾಲ್ಕು ವಿಷಯಗಳಿವೆ. ಪ್ರಧಾನಮಂತ್ರಿ ಮೋದಿ ಎರಡು ವಿಷಯಗಳನ್ನು ಎತ್ತಿದ್ದಾರೆ. ಒಂದು, ರಾಷ್ಟ್ರ ನಿರ್ಮಾಣದಲ್ಲಿ ಆರ್‌ಎಸ್‌ಎಸ್ ವಹಿಸಿದ ಪಾತ್ರದ ಶ್ಲಾಘನೆ ಮತ್ತು ಇನ್ನೊಂದು, ದೇಶದ ಚೇತನವಾಗಿ ಶ್ಯಾಮ್ ಪ್ರಸಾದ್ ಮುಖರ್ಜಿಯ ಪಾತ್ರದ ಹೊಗಳಿಕೆ. ಮೂರನೆಯದು, ಎನ್‌ಸಿಇಆರ್‌ಟಿ ಎತ್ತಿರುವ ದೇಶದ ವಿಭಜನೆಯ ವಿಷಯ – ಇದು ಖಂಡಿತವಾಗಿಯೂ ಆರ್‌ಎಸ್‌ಎಸ್-ಬಿಜೆಪಿ ಸೂಚನೆಯ ಮೇರೆಗೆ. ಮತ್ತೆ ನಾಲ್ಕನೆಯದು, ಹಿಂದೂ ಮಹಾಸಭಾದ ಸ್ಥಾಪಕ ಮತ್ತು ಧರ್ಮಾಧಾರಿತ ಎರಡು ದೇಶಗಳ ತತ್ವವನ್ನು ಮೊಟ್ಟಮೊದಲ ಬಾರಿಗೆ ಪ್ರತಿಪಾದಿಸಿದ ವಿ.ಡಿ.ಸಾವರ್ಕರ್ ಚಿತ್ರವನ್ನು ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಮತ್ತು ಗಾಂಧೀಜಿ ಫೋಟೋಗಳೊಂದಿಗೆ, ಅಷ್ಟೇ ಅಲ್ಲ, ಅವರಿಗಿಂತ ಮೇಲಿನ ಶ್ರೇಣಿಯಲ್ಲಿ ಹಾಕಿರುವುದು. ಆದರೆ ಇವುಗಳಲ್ಲಿ ಯಾವುದೂ ಅಧಿಕೃತ ಇತಿಹಾಸದಿಂದ ಖಚಿತವಾಗಿಲ್ಲ.
ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಆರ್‌ಎಸ್‌ಎಸ್ ಮತ್ತು ಹಿಂದೂ ಮಹಾಸಭಾಗಳ ಅಭಿಪ್ರಾಯ
“ಅಸಂಖ್ಯಾತ ಜನ ಸ್ವಾತಂತ್ರ‍್ಯಕ್ಕಾಗಿ ತಮ್ಮ ಜೀವವನ್ನು ಬಲಿದಾನ ಮಾಡಿದ್ದಾರೆ, ಅವರು ತಮ್ಮ ಇಡೀ ಯೌವನವನ್ನು ಸ್ವಾತಂತ್ರ್ಯಕ್ಕಾಗಿ ಮುಡುಪಾಗಿಟ್ಟರು, ಜೀವನಪೂರ್ತಿ ಜೈಲಿನಲ್ಲಿ ಕಳೆದರು ಮತ್ತು ಗಲ್ಲಿಗೇರಿದರು. ಅದು ವೈಯಕ್ತಿಕ ಗಳಿಕೆಗಲ್ಲ, ಬದಲಿಗೆ ತಾಯಿ ಭಾರತಿಯ ಗೌರವಕ್ಕಾಗಿ, ಕೋಟ್ಯಂತರ ಜನರ ಸ್ವಾತಂತ್ರ‍್ಯಕ್ಕಾಗಿ, ಗುಲಾಮಗಿರಿಯ ಸಂಕೋಲೆಗಳನ್ನು ಮುರಿಯುವುದಕ್ಕಾಗಿ ಮತ್ತು ಅವರ ಹೃದಯದಲ್ಲಿ ಒಂದೇ ಒಂದು ಭಾವನೆ ಇತ್ತು – ಘನತೆ ಏಕೆ? ಸ್ವತಂತ್ರ ಭಾರತಕ್ಕಾಗಿ” ಎಂದೂ ಸಹ ಪ್ರಧಾನಿಗಳು ಹೇಳಿದರು. ಅಂದರೆ, ಅವರು ಸ್ವಾತಂತ್ರ್ಯ ಸಂಗ್ರಾಮದ ಘನತೆಯನ್ನು ಒಪ್ಪಿಕೊಳ್ಳುತ್ತಾರೆ ಮತ್ತು ಸ್ವಾತಂತ್ರ್ಯ ಸಂಗ್ರಾಮದ 75ನೇ ವಾರ್ಷಿಕದಲ್ಲಿ ಅಮೃತಕಾಲಕ್ಕೆ ಪ್ರವೇಶವೆಂದು ಘೋಷಿಸಿ, ಆಗಸ್ಟ್ 15, 1947ರಂದು ಭಾರತ ಸ್ವಾತಂತ್ರ್ಯವನ್ನು ಪಡೆಯಿತೆಂದು ಒಪ್ಪಿಕೊಳ್ಳುತ್ತಾರೆ ಎಂದರ್ಥ. ಅವರು ರಾಷ್ಟ್ರಸೇವೆಗಾಗಿ ಒಂದು ಶತಮಾನದ ದೀರ್ಘ ಪಯಣಕ್ಕೆ ಕಾಣಿಕೆ ನೀಡಿದ ಎಲ್ಲಾ ಸ್ವಯಂಸೇವಕರನ್ನು ಉಲ್ಲೇಖಿಸಿದರು. ಸ್ವತಃ ಅವರೇ ಒಬ್ಬ ಸ್ವಯಂಸೇವಕ.
ಮೊಟ್ಟಮೊದಲಿಗೆ, ಆರ್‌ಎಸ್‌ಎಸ್ ಮತ್ತು ಹಿಂದೂ ಮಹಾಸಭಾ – ಎರಡೂ ಸಂಘಟನೆಗಳು ಬ್ರಿಟಿಷ್ ಸಾಮ್ರಾಜ್ಯಶಾಹಿ ಆಳ್ವಿಕರ ವಿರುದ್ಧ ದೇಶವು ಸ್ವಾತಂತ್ರ್ಯ ಚಳುವಳಿಯ ಕುಲುಮೆಯಲ್ಲಿ ಕುದಿಯುತ್ತಿದ್ದಾಗ ಸ್ಥಾಪಿತವಾದವು. ಅಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಕ್ಕಾಗಿ ಹೋರಾಡುತ್ತಲೇ ಭಾರತವನ್ನು ಒಂದು ದೇಶವನ್ನಾಗಿ ಕಟ್ಟುವ ಪ್ರಕ್ರಿಯೆಯೂ ನಡೆಯುತ್ತಿತ್ತು. ಅಲ್ಲಿಯವರೆಗೂ ಭಾರತ ಇಂದಿನ ರೀತಿಯಲ್ಲಿ ಒಂದು ದೇಶವಾಗಿರಲಿಲ್ಲ. ವಿವಿಧ ಸಂಸ್ಥಾನಗಳಾಗಿ ರಾಜರ ಆಳ್ವಿಕೆಯಲ್ಲಿತ್ತು. ಬ್ರಿಟಿಷರು ಇಂದಿನ ಭಾರತದಡಿಯಿದ್ದ ಸಂಸ್ಥಾನಗಳನ್ನು ಒಂದು ಆಳ್ವಿಕೆಯಡಿ ತಂದರು. ಹಾಗಾಗಿ ವಿವಿಧ ಭಾಷೆಗಳನ್ನಾಡುವ, ವಿವಿಧ ರಾಷ್ಟ್ರೀಯತೆಯ ಜನರೆಲ್ಲರೂ ಒಂದಾಗಿ ಬ್ರಿಟಷ್ ಸಾಮ್ರಾಜ್ಯಶಾಹಿ ಆಳ್ವಿಕೆಯಿಂದ ಸ್ವಾತಂತ್ರ್ಯಕ್ಕಾಗಿ ಮತ್ತು ಭಾರತವನ್ನು ಒಂದು ದೇಶವಾಗಿ ಕಟ್ಟುವ ಹೋರಾಟಕ್ಕಿಳಿದರು. ಇತಿಹಾಸ ಮತ್ತು ರಾಜಕೀಯ ಅರ್ಥಶಾಸ್ತ್ರದ ವಿದ್ಯಾರ್ಥಿಗಳಾಗಿ ನಮಗೆ ತಿಳಿದಿರುವುದೇನೆಂದರೆ, ರಾಷ್ಟ್ರ ಎನ್ನುವುದು ಉದಯೋನ್ಮುಖ ಬಂಡವಾಳವಾದದ ನಿರ್ದಿಷ್ಟ ಕಾಲಘಟ್ಟಕ್ಕೆ ಸೇರಿದ ಚಾರಿತ್ರಿಕ ವಿಭಾಗ. ಅದು ಚಾರಿತ್ರಿಕವಾಗಿ ಜಮೀನ್ದಾರಿ ಪದ್ಧತಿಯನ್ನು ವಿರೋಧಿಸುತ್ತಾ ಬೂರ್ಜ್ವಾ ಕ್ರಾಂತಿಯ ಸಂದರ್ಭದಲ್ಲಿ ಹುಟ್ಟಿಕೊಂಡಿದ್ದು.
ರಾಷ್ಟ್ರ ಮೂಡಿಬರುವ ಪ್ರಕ್ರಿಯೆಯನ್ನು ವ್ಯಾಖ್ಯಾನಿಸುತ್ತಾ, ಕಾರ್ಮಿಕ ವರ್ಗದ ಮಹಾನ್ ನಾಯಕರಲ್ಲಿ ಒಬ್ಬರಾದ ಕಾಮ್ರೇಡ್ ಸ್ಟಾಲಿನ್ ಬರೆಯುತ್ತಾರೆ: “ರಾಷ್ಟ್ರವು ಮೂಲಭೂತವಾಗಿ ಒಂದು ಸಮುದಾಯ, ಒಂದು ನಿರ್ದಿಷ್ಟ ಜನ ಸಮುದಾಯ. ಈ ಸಮುದಾಯವು ಜನಾಂಗೀಯ ಅಥವಾ ಬುಡಕಟ್ಟಿನ ಸಮುದಾಯವಲ್ಲ. ಆಧುನಿಕ ಇಟಾಲಿಯನ್ ರಾಷ್ಟ್ರವು ರೋಮನ್ನರು, ಟ್ಯುಟಾನರು, ಎತ್ತುಸ್ಕನರು, ಗ್ರೀಕರು, ಅರಬರು, ಮುಂತಾದ ಜನರಿಂದ ರೂಪಿತವಾಗಿದೆ. ಗೇಲನ್ನರು, ರೋಮನ್ನರು, ಬ್ರಿಟನ್ನರು, ಟ್ಯುಟಾನರು ಹಾಗೂ ಇತರೇ ಜನರಿಂದ ಫ್ರೆಂಚ್ ರಾಷ್ಟ್ರ ರಚಿತವಾಗಿದೆ. ವಿಭಿನ್ನ ಜನಾಂಗಗಳು ಹಾಗೂ ಬುಡಕಟ್ಟಿನ ಜನರಿಂದ ರಾಷ್ಟ್ರಗಳಾಗಿ ರೂಪುಗೊಂಡ, ಬ್ರಿಟಿಷರು, ಜರ್ಮನರು ಹಾಗೂ ಇತರರಿಗೂ ಇದನ್ನೇ ಹೇಳಬೇಕು. ಆದ್ದರಿಂದ ಒಂದು ರಾಷ್ಟ್ರವು ಜನಾಂಗೀಯವೂ ಅಲ್ಲ ಅಥವಾ ಬುಡಕಟ್ಟೂ ಅಲ್ಲ, ಆದರೆ ಐತಿಹಾಸಿಕವಾಗಿ ರಚಿತವಾದ ಒಂದು ಜನಸಮುದಾಯ. …ರಾಷ್ಟ್ರವು ಸಮಾನ ಭಾಷೆ, ಪ್ರಾಂತ್ಯ, ಆರ್ಥಿಕ ಜೀವನ ಮತ್ತು ಸಮಾನ ಸಂಸ್ಕೃತಿಯಲ್ಲಿ ಕಾಣಿಸಿಕೊಳ್ಳುವ ಮನೋಧರ್ಮಗಳ ಆಧಾರದ ಮೇಲೆ ರೂಪುಗೊಂಡ ಚಾರಿತ್ರಿಕವಾಗಿ ಸ್ಥಿರ ಜನ ಸಮುದಾಯದಿಂದ ರಚಿತವಾದದ್ದು.” (ಮಾರ್ಕ್ಸ್ ವಾದ ಮತ್ತು ರಾಷ್ಟ್ರದ ಪ್ರಶ್ನೆ)
ಮೂಲಭೂತವಾಗಿ ಆರ್‌ಎಸ್‌ಎಸ್-ಹಿಂದೂ ಮಹಾಸಭಾಗಳ ಸಿದ್ಧಾಂತಿಗಳು ಯಾವತ್ತೂ ಭಾರತದ ಸ್ವಾತಂತ್ರ್ಯ ಚಳುವಳಿಯನ್ನು ಬೆಂಬಲಿಸಲಿಲ್ಲ. ಏಕೆಂದರೆ ಅವರಿಗೆ ಸ್ಸ್ವಾತಂತ್ರ್ಯನಿರ್ಮಾಣದ ಬಗ್ಗೆ ಮೇಲೆ ವಿವರಿಸಿದ ಪರಿಕಲ್ಪನೆಗೆ ಮತ್ತು ಸ್ವಾತಂತ್ರ್ಯ ಚಳುವಳಿಯನ್ನು ನಡೆಸುತ್ತಿದ್ದ ಭಗತ್ ಸಿಂಗ್, ನೇತಾಜಿ ನೇತೃತ್ವದ ಕ್ರಾಂತಿಕಾರಿ ಪಂಥ ಅಥವಾ ಗಾಂಧಿ ನೇತೃತ್ವದ ರಾಜಿಪರ ಪಂಥದ ಅಭಿಪ್ರಾಯಗಳಿಗೆ ಭಿನ್ನವಾದ ಅಭಿಪ್ರಾಯವಿತ್ತು. ಆದ್ದರಿಂದ ಆರ್‌ಎಸ್‌ಎಸ್ ಸಿದ್ಧಾಂತಿಯಾದ ಎಂ.ಎಸ್.ಗೋಲ್ವಾಲ್ಕರ್ ಮೇಲೆ ವಿವರಿಸಿದ ರಾಷ್ಟ್ರ ನಿರ್ಮಾಣದ ಚಾರಿತ್ರಿಕ ನೋಟವನ್ನು ವಿರೋಧಿಸಿದರು. ಅವರ ಪ್ರಕಾರ, “ನಮ್ಮ ದೇಶದ ಪರಿಕಲ್ಪನೆಗೆ ಅಡಿಪಾಯವಾದ ಭೌಗೋಳಿಕ ರಾಷ್ಟ್ರವಾದದ ಮತ್ತು ಸಮಾನ ಅಪಾಯದ ತತ್ವವು ನಮ್ಮ ನಿಜವಾದ ಹಿಂದೂ ರಾಷ್ಟ್ರೀಯತೆಯ ಸಕಾರಾತ್ಮಕ ಮತ್ತು ಸ್ಫೂರ್ತಿದಾಯಕ ಪರಿಕಲ್ಪನೆಯಿಂದ ನಮ್ಮನ್ನು ವಂಚಿತರನ್ನಾಗಿ ಮಾಡಿದೆ ಮತ್ತು ಹಲವಾರು ಸ್ವಾತಂತ್ರ್ಯಚಳುವಳಿಗಳನ್ನು ವಾಸ್ತವದಲ್ಲಿ ಬ್ರಿಟಿಷ್ ವಿರೋಧಿ ಚಳುವಳಿಗಳನ್ನಾಗಿ ಮಾಡಿದೆ. ಬ್ರಿಟಿಷ್ ವಿರೋಧವನ್ನು ದೇಶಪ್ರೇಮ ಮತ್ತು ರಾಷ್ಟ್ರವಾದದೊಂದಿಗೆ ಸರಿಸಮಾನವಾಗಿ ನೋಡಲಾಯಿತು. ಈ ಪ್ರತಿಗಾಮಿ ನೋಟವು ಇಡೀ ಸ್ವಾತಂತ್ರ್ಯ ಚಳುವಳಿಯ ಗತಿಯ ಮೇಲೆ ಅದರ ನಾಯಕರ ಮತ್ತು ಸಾಮಾನ್ಯ ಜನರ ಮೇಲೆ ವಿನಾಶಕಾರಿ ಪ್ರಭಾವಗಳನ್ನು ಬೀರಿತು. … ಯಾರು ಹಿಂದೂ ಜನಾಂಗ ಮತ್ತು ರಾಷ್ಟ್ರವನ್ನು ತಮ್ಮ ಹೃದಯದಾಳದಿಂದ ವೈಭವೀಕರಿಸಲು ಬಯಸುತ್ತಾರೋ, ಆ ಗುರಿಯನ್ನು ಸಾಧಿಸಲು ಕ್ರಿಯೆಗೆ ಇಳಿಯುತ್ತಾರೋ ಮತ್ತು ಪ್ರಯತ್ನಪಡುತ್ತಾರೋ ಅವರು ಮಾತ್ರ ರಾಷ್ಟ್ರವಾದಿ ದೇಶಪ್ರೇಮಿಗಳು. ಉಳಿದವರೆಲ್ಲರೂ ದೇಶದ್ರೋಹಿಗಳು ಮತ್ತು ರಾಷ್ಟ್ರ ಹಿತಾಸಕ್ತಿಯ ವೈರಿಗಳು…” (ನಮ್ಮ ಅಥವಾ ನಮ್ಮ ರಾಷ್ಟ್ರವಾದದ ವ್ಯಾಖ್ಯಾನ)
ಇನ್ನು ದೇಶಪ್ರೇಮದ ಬಗ್ಗೆ ಅವರ ಪರಿಕಲ್ಪನೆಯೇನು? ಬ್ರಿಟಿಷರ ವಿರುದ್ಧ ಹೋರಾಡಿ ಜೈಲುವಾಸ ಅನುಭವಿಸಿದ ಸ್ವಾತಂತ್ರ‍್ಯ ಹೋರಾಟಗಾರರ ಬಗ್ಗೆ ಮಾತನಾಸುತ್ತಾ, ಆರ್‌ಎಸ್‌ಎಸ್ ಸ್ಥಾಪಕ ಸದಸ್ಯರಾದ ಕೆ.ಬಿ. ಹೆಗ್ಡೆವಾರ್ ಹೇಳಿದರು: “ದೇಶಪ್ರೇಮವೆಂದರೆ ಕೇವಲ ಜೈಲಿಗೆ ಹೋಗುವುದಲ್ಲ. ಅಂತಹ ಮೇಲುಮೇಲಿನ ದೇಶಪ್ರೇಮದಲ್ಲಿ ತೇಲಿ ಹೋಗುವುದು ಸರಿಯಲ್ಲ.” (ಸಿ.ಪಿ. ಭಿಶಿಕರ್, ಸಂಘ್ ವೃಕ್ಷ ಕೆ ಬೀಜ್, ಡಾ. ಕೇಶವರಾವ್ ಹೆಗ್ಡೆವಾರ್, ಸುರುಚಿ, 1994 ಪುಟ-21) ಆದ್ದರಿಂದ ಆರ್‌ಎಸ್‌ಎಸ್ ಸ್ಥಾಪಕರ ಪ್ರಕಾರ ಬ್ರಿಟಿಷ್ ವಿರೋಧಿ ಸ್ವಾತಂತ್ರ್ಯ ಚಳುವಳಿಯು ರಾಷ್ಟ್ರವಾದ ಅಥವಾ ದೇಶಪ್ರೇಮದಿಂದ ಹುಟ್ಟಲಿಲ್ಲ; ಮಾತೃಭೂಮಿಯನ್ನು ಸ್ವತಂತ್ರಗೊಳಿಸಲು ಹೋರಾಡಿದ ನೇತಾಜಿ ಸುಭಾಷ್‌ಚಂದ್ರ ಬೋಸ್, ದೇಶಬಂಧು ಚಿತ್ತರಂಜನ್ ದಾಸ್, ಬಾಲ ಗಂಗಾಧರ್ ತಿಲಕ್, ಲಾಲಾ ಲಜಪತ್ ರಾಯ್, ಖುದಿರಾಮ್ ಬೋಸ್, ಭಗತ್ ಸಿಂಗ್, ಸೂರ್ಯ ಸೇನ್ ಮತ್ತು ಗಾಂಧೀಜಿಯೂ ಸಹ, ಹಾಗೆಯೇ ಮಾಮೂಲಿ ಜೀವನದ ಸುಖ, ಸುರಕ್ಷತೆಗಳನ್ನು ತೊರೆದು ಗುಂಡುಗಳಿಗೆ ಎದೆಕೊಟ್ಟ, ಗಲ್ಗಂಬವನ್ನೇರಿದ ಹದಿಹರೆಯದ ಯುವಕರೆಲ್ಲರೂ ದೇಶದ್ರೋಹಿಗಳು ಮತ್ತು ಮೇಲು ಮೇಲಿನ ಹುತಾತ್ಮರೇ?
ಸ್ವಾತಂತ್ರ್ಯ ಚಳುವಳಿಯಲ್ಲಿ ಆರ್‌ಎಸ್‌ಎಸ್- ಹಿಂದೂ ಮಹಾಸಭಾದ ಪಾತ್ರ
ಆರ್‌ಎಸ್‌ಎಸ್ ಮತ್ತು ಹಿಂದೂ ಮಹಾಸಭಾ ಸ್ವಾತಂತ್ರ್ಯಚಳುವಳಿಯನ್ನು ವಿರೋಧಿಸಿದ್ದಷ್ಟೇ ಅಲ್ಲದೆ ಬ್ರಿಟಿಷರಿಗೆ ತಮ್ಮ ಬೆಂಬಲ ಮತ್ತು ನಿಷ್ಠೆಯನ್ನು ಘೋಷಿಸಿದರು. ಅವರು 1942ರ ಭಾರತ ಬಿಟ್ಟು ತೊಲಗಿ ಚಳುವಳಿಯನ್ನು ವಿರೋಧಿಸಿದರು. ಆರ್‌ಎಸ್‌ಎಸ್ ‘ಅಸಹಕಾರ ಚಳುವಳಿ’ ಮತ್ತು ‘ಕ್ವಿಟ್ ಇಂಡಿಯಾ ಚಳುವಳಿ’ಯಲ್ಲೂ ಸಹ ಭಾಗವಹಿಸಲಿಲ್ಲ. ಹಾಗೆಯೇ ಹಿಂದೂ ಮಹಾಸಭಾ ಕೂಡ ಭಾಗವಹಿಸಲಿಲ್ಲ. ಗೋಲ್‌ವಾಲ್ಕರ್ ಅವರಿಗೆ ಭಾರತೀಯರು ಅಮಾನುಷ ಬ್ರಿಟಿಷ್ ಆಳ್ವಿಕರ ಕರಾಳ ಮತ್ತು ದಮನಕಾರಿ ಕಾನೂನುಗಳನ್ನು ಗೌರವಿಸುವುದು ಬೇಕಾಗಿತ್ತು. ಬ್ರಿಟಿಷ್ ಗುಪ್ತದಳದ ಒಂದು ವರದಿಯ ಪ್ರಕಾರ, “ಸಂಘವು ಬಹಳ ಎಚ್ಚರಿಕೆಯಿಂದ ಕಾನೂನಿನ ಮಿತಿಯೊಳಗಿತ್ತು ಮತ್ತು ಇನ್ನೂ ನಿರ್ದಿಷ್ಟವಾಗಿ ಹೇಳುವುದಾದರೆ ಆಗಸ್ಟ್, 1942ರಲ್ಲಿ ಆರಂಭವಾದ ಚಳುವಳಿಗಳಲ್ಲಿ ಭಾಗವಹಿಸುವುದರಿಂದ ದೂರವಿತ್ತು.” (ಆರ್ಡರ್ಸನ್, ವಾಲ್ಡರ್ ಕೆ ಮತ್ತು ದಾಂಬ್ಲೆ, ಶ್ರೀಧರ್ ಡಿ, “ಕೇಸರಿಯಲ್ಲಿ ಭ್ರಾತೃತ್ವ: ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಹಿಂದೂ ಪುನರುತ್ಥಾನ” ಪುಸ್ತಕದಲ್ಲಿ ಉಲ್ಲೇಖ, ಬೆಸ್ಟ್ ವ್ಯೂ ಪ್ರೆಸ್, 1987, ಪುಟ-44) ಬಹಳ ವಿಚಿತ್ರವಾಗಿ ಗೋಲ್‌ವಾಲ್ಕರ್ ಒಪ್ಪಿಕೊಂಡ ಕ್ವಿಟ್ ಇಂಡಿಯಾ ಚಳುವಳಿಯ ಕುರಿತಾದ ಈ ಬಗೆಯ ನಕಾರಾತ್ಮಕ ಧೋರಣೆಯು ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ರುಚಿಸಲಿಲ್ಲ.(ಎಂ.ಎಸ್.ಗೋಲ್‌ವಾಲ್ಕರ್, ‘ಶ್ರೀ ಗುರೂಜಿ ಸಮಗ್ರ ದರ್ಶನ’, ಹಿಂದಿಯಲ್ಲಿ ಗೋಲ್‌ವಾಲ್ಕರ್ ಸಮಗ್ರ ಕೃತಿಗಳು, ಸಂಪುಟ 4, ಭಾರತೀಯ ವಿಚಾರ್ ಸದನ, ನಾಗಪುರ, ಪುಟ-40)
ಬ್ರಿಟಿಷ್ ಆಳ್ವಿಕರೊಂದಿಗೆ ಕೈಜೋಡಿಸಿದರು
ಇನ್ನೊಂದು ಕಡೆ 1942ರಲ್ಲಿ ಕಾನ್ಪುರದಲ್ಲಿ ಹಿಂದೂ ಮಹಾಸಭಾದ 24ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಾ ವಿ.ಡಿ.ಸಾವರ್ಕರ್, ಬ್ರಿಟಿಷ್ ಆಳ್ವಿಕೆಯೊಂದಿಗೆ ಹಿಂದೂ ಮಹಾಸಭಾ ಹೇಗೆ ಸಹಕರಿಸಬೇಕೆನ್ನುವ ರಣತಂತ್ರದ ರೂಪುರೇಷೆಯನ್ನು ಕೆಳಗಿನ ಮಾತುಗಳಲ್ಲಿ ಹೇಳಿದರು: “ಎಲ್ಲಾ ಕಾರ್ಯವಾಸಿ ರಾಜಕೀಯದ ಮುಖ್ಯ ಸೂತ್ರವೆಂದರೆ ಸ್ಪಂದನಾತ್ಮಕ ಸಹಕಾರವೆಂದು ಹಿಂದೂ ಮಹಾಸಭಾ ಎತ್ತಿ ಹಿಡಿಯುತ್ತದೆ. ಬೇರೆಯವರ ನ್ಯಾಯಬದ್ಧ ಹಿತಾಸಕ್ತಿಗಳನ್ನು ಅತಿಕ್ರಮಿಸದೆ ಹಿಂದೂಗಳ ನ್ಯಾಯಬದ್ಧ ಹಿತಾಸಕ್ತಿಯನ್ನು ಕಾಪಾಡಲು ಮತ್ತು ಮುಂದೆ ತರಲು ಕೂಡ ಸರ್ಕಾರಿ ಅಧಿಕಾರದ ಕೇಂದ್ರಗಳನ್ನು ಉಪಯೋಗಿಸಿಕೊಳ್ಳುವ ದೃಷ್ಟಿಯಿಂದ ನಗರಸಭಾ ಸದಸ್ಯರು, ಮಂತ್ರಿಗಳು, ಶಾಸಕರು ಮತ್ತು ಯಾವುದೇ ಮುನಿಸಿಪಲ್ ಅಥವಾ ಯಾವುದೇ ಸರ್ಕಾರಿ ಸಮಿತಿಗಳಲ್ಲಿ ಕೆಲಸ ಮಾಡುತ್ತಿರುವ ಹಿಂದೂ ಸಂಘಿಗಳು ನಮ್ಮ ದೇಶಕ್ಕೆ ದೊಡ್ಡ ದೇಶಪ್ರೇಮಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಯಾವುದೇ ಷರತ್ತುಗಳಿಲ್ಲದ ಸಹಕಾರದಿಂದ ಸಕ್ರಿಯ ಮತ್ತು ಶಸ್ತ್ರಸಜ್ಜಿತ ವಿರೋಧದವರೆಗೂ, ದೇಶಪ್ರೇಮಿ ಚಟುವಟಿಕೆಗಳ ಸಂಪೂರ್ಣ ವ್ಯಾಪ್ತಿಯನ್ನು ಆವರಿಸಿಕೊಳ್ಳುವ ಸ್ಪಂದನಾತ್ಮಕ ಸಹಕಾರದ ನೀತಿಯು, ಸಮಯ ಸಂದರ್ಭಗಳ ತುರ್ತಿಗೆ, ನಮ್ಮ ಮುಂದಿರುವ ಸಂಪನ್ಮೂಲಗಳಿಗೆ ಮತ್ತು ನಮ್ಮ ರಾಷ್ಟ್ರದ ಹಿತಾಸಕ್ತಿಯ ಆದೇಶಗಳಿಗೆ ತನ್ನನ್ನು ಸರಿ ಹೊಂದಿಸಿಕೊಳ್ಳುತ್ತದೆ. (ವಿ.ಡಿ. ಸಾವರ್ಕರ್, ಸಮಗ್ರ ಸಾವರ್ಕರ್ ವಾಙ್ಮಯ ಕೃತಿಯಲ್ಲಿ ಉಲ್ಲೇಖ, ಸಂಪುಟ-೬, ಮಹಾರಾಷ್ಟ್ರ ಪ್ರಾಂತಿಕ್ ಹಿಂದೂಸಭಾ ಪೂನಾ, 1963,
ಪುಟ-474)
ಬ್ರಿಟಿಷ್ ಯಜಮಾನರೊಂದಿಗೆ ಸ್ಪಂದನಾತ್ಮಕ ಸಹಕಾರವು ಕೇವಲ ವೈಚಾರಿಕ ಬದ್ಧತೆಯಷ್ಟೇ ಆಗಿರಲಿಲ್ಲ. ಹಿಂದೂ ಮಹಾಸಭಾ ಬಂಗಾಳ, ಸಿಂದ್ ಮತ್ತು ವಾಯುವ್ಯ ಪ್ರಾಂತ್ಯಗಳಲ್ಲಿ ಸಮ್ಮಿಶ್ರ ಸರ್ಕಾರಗಳನ್ನು ಯಾರ ಜೊತೆ ನಡೆಸುತ್ತಿತ್ತೋ ಆ ಮುಸ್ಲಿಂಲೀಗ್ ಜೊತೆ ತಕ್ಷಣವೇ ಗುಂಪು ಕಟ್ಟಿಕೊಂಡು ಅದನ್ನು ವಾಸ್ತವಕ್ಕಿಳಿಸಲು ಆರಂಭಿಸಿತು. ನೇತಾಜಿ ಇಂಡಿಯನ್ ನ್ಯಾಷನಲ್ ಆರ್ಮಿ (ಐಎನ್‌ಎ) ಸೈನ್ಯವನ್ನು ಮುನ್ನಡೆಸುತ್ತಾ ಸ್ವಾತಂತ್ರ‍್ಯವನ್ನು ಪಡೆಯುವ ಪ್ರಯತ್ನದಲ್ಲಿದ್ದಾಗ, ದಾಖಲೆಗಳು ಸ್ಪಷ್ಟವಾಗಿ ತೋರಿಸುವಂತೆ, ಸಾವರ್ಕರ್ ಹಿಂದೂಗಳ ಮಿಲಿಟರೀಕರಣಕ್ಕಾಗಿ ಸುತ್ತೋಲೆಗಳನ್ನು ಹೊರಡಿಸುತ್ತಿದ್ದರು. ಇದು ಸುಭಾಷ್ ಚಂದ್ರ ಬೋಸರ ಇಂಡಿಯನ್ ನ್ಯಾಷನಲ್ ಆರ್ಮಿ ಮುನ್ನಡೆಯುವುದಕ್ಕೆ ವಿರುದ್ಧವಾಗಿ ಬ್ರಿಟಿಷರಿಗೆ ಸಹಾಯ ಮಾಡುವುದು ಸ್ಪಷ್ಟವಾಗಿತ್ತು. (ದಿ ವೀಕ್, 24.01.16)
(ಮುಂದಿನ ಸಂಚಿಕೆಯಲ್ಲಿ ಮುಂದುವರಿಯುವುದು…)