ರಾಯಚೂರು, ಎಐಕೆಕೆಎಂಎಸ್: ದಕ್ಷಿಣ ಭಾರತ ಅಧ್ಯಯನ ಶಿಬಿರ ಚರ್ಚೆ: ಕೃಷಿ ಕ್ಷೇತ್ರದಲ್ಲಿ ಬಂಡವಾಳಶಾಹಿ ಆರ್ಥಿಕತೆಯ ಉಗಮ
“ಇಂದು ಒಂದಾದ ಮೇಲೊಂದು ರೈತ-ಕೃಷಿ ವಿರೋಧಿ ನೀತಿಗಳನ್ನು ಕೇಂದ್ರ ಬಿಜೆಪಿ ಸರ್ಕಾರ ಜಾರಿಗೆ ತರುತ್ತಿದೆ. ಅಥವಾ, ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ವ್ಯಕ್ತವಾದಂತೆ, ಕೇವಲ ಅಲಂಕಾರಿಕ ಯೋಜನೆಗಳನ್ನು ರಾಜ್ಯ ಸರ್ಕಾರ ಘೋಷಿಸುತ್ತದೆಯೇ ಹೊರತು, ರೈತರ ನಿಜವಾದ ಹಕ್ಕೊತ್ತಾಯಗಳಾದ ಬೆಂಬಲ ಬೆಲೆ, ರಾಜ್ಯ ಸರ್ಕಾರದ ಖರೀದಿ, ನರೇಗಾ ಮುಂದುವರಿಕೆ, ಹಾಲು ಉತ್ಪಾದಕರಿಗೆ ನ್ಯಾಯಯುತ ಬೆಲೆಗಳು ಬಜೆಟ್‌ನಲ್ಲಿ ಕಾಣಿಸುವುದಿಲ್ಲ. ಎಲ್ಲಾ ರಾಜ್ಯ ಸರ್ಕಾರಗಳೂ ಕೇಂದ್ರದ ದಾರಿಯನ್ನೇ ತುಳಿಯುತ್ತಿವೆ. ಈ ನೀತಿಗಳನ್ನು ಯಾರ ಹಿತದೃಷ್ಟಿಯನ್ನು ಮನಸ್ಸಿನಲ್ಲಿಟ್ಟುಕೊಂಡು ತರಲಾಗುತ್ತಿದೆ ಎನ್ನುವುದು ಮುಖ್ಯ. ಇಲ್ಲವಾದರೆ ರೈತ ಚಳುವಳಿಗಳು ಕೇವಲ ಕೆಲವು ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗುತ್ತವೆೆ. ಆದರೆ ಸಮಸ್ಯೆಯನ್ನು ಮೂಲಭೂತವಾಗಿ ಬಗೆಹರಿಸಲು ಸಾಧ್ಯವಾಗುವುದಿಲ್ಲ.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಆರಂಭದಲ್ಲೇ, ಅಖಿಲ ಭಾರತ ರೈತ-ಕೃಷಿ ಕಾರ್ಮಿಕ ಸಂಘಟನೆಯ (ಎಐಕೆಕೆಎಂಎಸ್) ಸಂಸ್ಥಾಪಕರು ಮತ್ತು ಮಹಾನ್ ಚಿಂತಕರಾದ ಕಾಮ್ರೇಡ್ ಶಿವದಾಸ್ ಘೋಷ್, ಅಂದಿನ ಪರಿಸ್ಥಿತಿಯನ್ನು ವಿಶ್ಲೇಷಿಸುತ್ತಾ, ಶೋಷಕ ಬಂಡವಾಳಶಾಹಿ ವರ್ಗ ಅಧಿಕಾರಕ್ಕೆ ಬಂದಿದೆ; ಸಾಮಾನ್ಯ ಜನತೆಗೆ ನಿಜವಾದ ಸ್ವಾತಂತ್ರ್ಯ ದೊರಕಿಲ್ಲ. ಬಂಡವಾಳಿಗರಿಂದ ದುಡಿಯುವ ಜನರ ಶೋಷಣೆ ನಡೆಯುತ್ತದೆ, ಸರ್ಕಾರಗಳು ಅವರ ಹಿತವನ್ನು ಕಾಪಾಡುತ್ತವೆ. ಆದ್ದರಿಂದ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸುವ ಹೋರಾಟ ನಡೆಯಬೇಕು ಎಂದು ಕರೆಯಿತ್ತರು. ಅವರು ವಿಶೇಷವಾಗಿ ಅಂದಿನ ದಿನಗಳಲ್ಲೇ ಕೃಷಿಯೊಳಗೂ ಬಂಡವಾಳಶಾಹಿ ಆರ್ಥಿಕತೆ ಬಂದಿದೆ; ಕೇವಲ ಊಳಿಗಮಾನ್ಯ ವ್ಯವಸ್ಥೆಯ ಪಳೆಯುಳಿಕೆಗಳಿವೆ ಎಂದು ತಮ್ಮ ಅಮೋಘ ವಿಶ್ಲೇಷಣೆಯೊಂದಿಗೆ ತೋರಿಸಿಕೊಟ್ಟರು.
ಆದರೆ ಅಂದಿನ ಎಡಪಕ್ಷಗಳ ರೈತ ಸಂಘಟನೆಗಳು ನಮ್ಮ ದೇಶದಲ್ಲಿ ಜಮೀನ್ದಾರಿ ಪದ್ಧತಿಯಿದೆ ಮತ್ತು ಭಾರತ ಅರೆ ವಸಾಹತು ದೇಶವಾಗಿದೆ ಎಂದು ಹೇಳುತ್ತಾ ಗಾಳಿಯಲ್ಲಿ ಗುದ್ದಾಟ ನಡೆಸಿದರು. ಹಾಗಾಗಿ ಅವರ ಹೋರಾಟ ಅನ್ಯಾಯಗಳ ಗಂಗೋತ್ರಿಯಾದ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಹೋಗಲಿಲ್ಲ; ಬದಲಿಗೆ ಅವರು ಬಂಡವಾಳಿಗರ ಸ್ನೇಹಿತರಾದರು. ಆದ್ದರಿಂದ ಎಐಕೆಕೆಎಂಎಸ್, ಕಾಮ್ರೇಡ್ ಶಿವದಾಸ್ ಘೋಷರ ಚಿಂತನೆಗಳ ಆಧಾರದ ಮೇಲೆ ಕ್ರಾಂತಿಕಾರಿ ರೈತ ಚಳುವಳಿಯನ್ನು ಕಟ್ಟುತ್ತಿದೆ. ಈ ನಿಟ್ಟಿನಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರನ್ನು ವೈಚಾರಿಕವಾಗಿ ಸಿದ್ಧಗೊಳಿಸುವ ಉದ್ದೇಶದಿಂದ, ರೈತ-ಕೃಷಿ ಕಾರ್ಮಿಕರ ಸಮಸ್ಯೆಗಳ ಕುರಿತು ಆಳವಾಗಿ ಅರಿತುಕೊಳ್ಳುವ ಗುರಿಯೊಂದಿಗೆ ‘ದಕ್ಷಿಣ ಭಾರತ ಮಟ್ಟದ ರೈತ-ಕೃಷಿ ಕಾರ್ಮಿಕರ ಅಧ್ಯಯನ ಶಿಬಿರ’ವನ್ನು ಸಂಘಟಿಸಲಾಗಿತ್ತು.
ಕರ್ನಾಟಕದ ರಾಯಚೂರಿನಲ್ಲಿ ಫೆಬ್ರವರಿ 21 ಮತ್ತು 22 ರಂದು ಎರಡು ದಿನಗಳ ಕಾಲ ನಡೆದ ಶಿಬಿರದಲ್ಲಿ ಕರ್ನಾಟಕ, ತಮಿಳು ನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ ರಾಜ್ಯಗಳಿಂದ ರೈತ-ಕೃಷಿ ಕಾರ್ಮಿಕರ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಶಿಬಿರವನ್ನು ಎಐಕೆಕೆಎಂಎಸ್ ಅಖಿಲ ಭಾರತ ಅಧ್ಯಕ್ಷರಾದ ಕಾಮ್ರೇಡ್ ಸತ್ಯವಾನ್ ಮತ್ತು ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಗಳಾದ ಕಾಮ್ರೇಡ್ ಶಂಕರ್ ಘೋಷ್ ನಡೆಸಿಕೊಟ್ಟರು.
ಕಾ. ಸತ್ಯವಾನ್ ಅಧ್ಯಯನ ಶಿಬಿರದ ಉದ್ದೇಶದ ಕುರಿತು ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದರು: “ಭಾರತದಲ್ಲಿ ನಾವು ಕೇವಲ ರೈತರು, ಕೃಷಿ ಕಾರ್ಮಿಕರು, ಗ್ರಾಮೀಣ ಬಡಜನತೆ ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಪ್ರಬಲ ಹೋರಾಟ ಕಟ್ಟುವುದಷ್ಟೇ ಅಲ್ಲ, ಅಂತಿಮವಾಗಿ ನಮ್ಮನ್ನು, ಸಮಾಜವನ್ನು ಮತ್ತು ಕೃಷಿಯನ್ನೂ ವಿಮುಕ್ತಿಗೊಳಿಸಬೇಕು. ಈ ಅಧ್ಯಯನ ಶಿಬಿರದ ಉದ್ದೇಶ ಕೇವಲ ತಿಳುವಳಿಕೆ ಮೂಡಿಸುವುದಷ್ಟೇ ಅಲ್ಲ; ರೈತ-ಕಾರ್ಮಿಕರನ್ನು ಹೇಗೆ ವೈಚಾರಿಕವಾಗಿ ಸಿದ್ಧಗೊಳಿಸಬೇಕೆಂದರೆ, ಅವರು ಸ್ಥಳೀಯ ಪಟ್ಟಭದ್ರ ಹಿತಾಸಕ್ತಿಗಳ, ರಾಜ್ಯದ ಆಳ್ವಿಕರ, ಏಕಸ್ವಾಮ್ಯಾಧಿಪತಿಗಳ, ಕಾರ್ಪೊರೇಟ್ ಮನೆತನಗಳ, ಅಂದರೆ ಬಂಡವಾಳಶಾಹಿಗಳ ವಿರುದ್ಧ ಪ್ರಬಲ ಹೋರಾಟವನ್ನು ಕಟ್ಟುವಂತಾಗಬೇಕು. ಇಂದಿನ ರೈತ ಚಳುವಳಿಯು ಹಿಂದಿನಂತಲ್ಲ. ಈಗ ಸಾಕಷ್ಟು ಬದಲಾವಣೆಗಳಾಗಿವೆ. ಭೂಮಿಯ ಸಂಬಂಧಗಳು ಬದಲಾಗುತ್ತಿವೆ. ಭೂಮಿ ಮಾರಾಟದ ಸರಕು, ಕೃಷಿ ಉತ್ಪನ್ನಗಳು ಮಾರುಕಟ್ಟೆಯ ಸರಕುಗಳಾಗಿವೆ. ಸರ್ಕಾರ ಸಹಕಾರ ವ್ಯವಸ್ಥೆಯನ್ನು ನಾಶ ಮಾಡುತ್ತಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತ ಉತ್ಪಾದಕರ ಸಂಘಟನೆಯು (ಎಸ್ ಪಿ ಓ)ಜಾರಿಯಾಗುತ್ತಿದೆ. ಇದು ಅಂತಿಮವಾಗಿ ಕೆಲವೇ ಜನರ ಹಿಡಿತಕ್ಕೆ ಹೋಗುತ್ತದೆ. ಕೃಷಿ ಒಳಸುರಿಗಳ ಬೆಲೆ ತೀವ್ರವಾಗಿ ಹೆಚ್ಚಾಗುತ್ತಿದೆ. ಕೇಂದ್ರ ಸರ್ಕಾರ ಬೆಂಬಲ ಬೆಲೆ ಕಾನೂನುಬದ್ಧಗೊಳಿಸದೆ ವಚನಭ್ರಷ್ಟವಾಗಿದೆ. ಬೀಜ ಮಸೂದೆ ರೈತರಿಂದ ಬೀಜ ಕಸಿದುಕೊಂಡಿದೆ. ರಸಗೊಬ್ಬರ, ಬೀಜ, ಮುಂತಾದವುಗಳಿಗೆ ಸಬ್ಸಿಡಿ ಕಡಿತ ಮಾಡಲಾಗಿದೆ. ಜಾಗತೀಕರಣದ ನಂತರ ಬಂದ ಪೇಟೆಂಟ್ ರೈತರ ಪಾರಂಪರಿಕ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಗ್ರಾಮೀಣ ಬಡಜನತೆ ಉದ್ಯೋಗದ ಅವಕಾಶದಿಂದ ವಂಚಿತರಾಗಿದ್ದಾರೆ.”
ಅವರು ಕೊನೆಯಲ್ಲಿ, “ಶೋಷಿತ ವರ್ಗದ ಜನತೆ ಸಮಸ್ಯೆಗಳು ಎಲ್ಲಿಂದ ಬರುತ್ತಿವೆ ಎನ್ನುವುದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು. ರೈತರು, ಕೃಷಿ ಕಾರ್ಮಿಕರು ಮತ್ತು ಗ್ರಾಮೀಣ ಬಡಜನತೆಯೆಡೆಗೆ ಈ ವಿಚಾರಗಳನ್ನು ಕೊಂಡೊಯ್ದು, ಅವರನ್ನು ಕ್ರಾಂತಿಕಾರಿ ರೈತ ಸಂಘಟನೆಯಾದ ಎಐಕೆಕೆಎಂಎಸ್ ಅಡಿಯಲ್ಲಿ ಸಂಘಟಿಸಿ, ಪ್ರಸಕ್ತ ಶೋಷಕ ವ್ಯವಸ್ಥೆಯಾದ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಹೋರಾಟ ಕಟ್ಟುವತ್ತ ಮುನ್ನಡೆಸಬೇಕು” ಎಂದು ಕರೆಯಿತ್ತರು.
ಕಾ. ಶಂಕರ್ ಘೋಷ್, ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಕೃಷಿಯಲ್ಲಿ ಬಂಡವಾಳವಾದ ಹೇಗೆ ಬೆಳೆಯಿತು ಎನ್ನುವುದರ ಬಗ್ಗೆ ದೀರ್ಘವಾಗಿ ಚರ್ಚೆ ನಡೆಸುತ್ತಾ ಹೇಳಿದರು: “ಭಾರತದಲ್ಲಿ ಬ್ರಿಟಿಷರು ಕಾಲಿಡುವ ಮುನ್ನವೇ ವ್ಯಾಪಾರಿ ಬಂಡವಾಳ ಸಾಕಷ್ಟು ಬೆಳೆದಿತ್ತು. ಭಾರತದ ಉತ್ಪನ್ನಗಳು ದೂರದ ದೇಶಗಳಲ್ಲಿ ಮಾರಾಟವಾಗುತ್ತಿದ್ದವು. ಬ್ರಿಟಿಷರು ಭಾರತಕ್ಕೆ ಕೊಳ್ಳಲು ಬಂದರೇ ಹೊರತು ಮಾರಾಟಕ್ಕಲ್ಲ. ಇಲ್ಲಿನ ಹತ್ತಿ, ಮಸ್ಲಿನ್ ಬಟ್ಟೆ, ಸಾಂಬಾರ ಪದಾರ್ಥಗಳು, ಮುಂತಾದವುಗಳನ್ನು ಕೊಳ್ಳಲು ಫ್ರೆಂಚರು, ಪೋರ್ಚುಗೀಸರು ಮತ್ತು ಬ್ರಿಟಿಷರು ಬರುತ್ತಿದ್ದರು. ಆಗ ಈಸ್ಟ್÷ಇಂಡಿಯಾ ಕಂಪೆನಿ ವ್ಯಾಪಾರಿ ಬಂಡವಾಳದ ಕಂಪೆನಿಯಾಗಿತ್ತು. ಅದು ನಂತರದಲ್ಲಿ ಇಲ್ಲಿನ ಸ್ಥಳೀಯ ರಾಜರುಗಳನ್ನು – ಟಿಪ್ಪು ಸುಲ್ತಾನ್, ಸಿರಾಜ್-ಉದ್-ದೌಲಾರನ್ನು ಸೋಲಿಸಿ ಮೊದಲು ಬಂಗಾಲ, ನಂತರದಲ್ಲಿ ಮದ್ರಾಸ್ ಹಾಗೂ ನಂತರದಲ್ಲಿ ದಕ್ಷಿಣ ಭಾಗದಲ್ಲಿ ಅಧಿಕಾರವನ್ನು ಸ್ಥಾಪಿಸಿತು.
ಅದಕ್ಕೂ ಮೊದಲು ಭಾರತದಲ್ಲಿ ಭೂಮಿ ಯಾರ ಸ್ವಂತ ಆಸ್ತಿಯೂ ಆಗಿರಲಿಲ್ಲ. ಅದರ ಮೇಲೆ ರಾಜನಿಗೂ ವೈಯಕ್ತಿಕ ಹಕ್ಕಿರಲಿಲ್ಲ. ಬ್ರಿಟಿಷರು ಖಾಯಂ ಕಂದಾಯದ ಹೆಸರಿನಲ್ಲಿ ಜನರಿಗೆ ನಿಗದಿತ ಕಂದಾಯ ಪದ್ಧತಿಯನ್ನು ಜಾರಿಗೆ ತಂದರು. ಕಂದಾಯ ವಸೂಲಿಯ ಜವಾಬ್ದಾರಿಯನ್ನು ಜಮೀನ್ದಾರರಿಗೆ ನೀಡಿದರು. ಇದು ಜಮೀನ್ದಾರರಿಗೆ ರೈತರನ್ನು ಮತ್ತು ಕೃಷಿ ಕಾರ್ಮಿಕರನ್ನು ಶೋಷಣೆ ಮಾಡಲು ಅವಕಾಶ ನೀಡಿತು. ಜೊತೆಗೆ ಅವರಿಗೆ ಬ್ರಿಟಿಷರ ಬೆಂಬಲವಿತ್ತು. ಬ್ರಿಟಿಷ್ ಸರ್ಕಾರ ಕಂದಾಯವನ್ನು ಹಣದ ರೂಪದಲ್ಲಿ ಸಂಗ್ರಹಿಸಲು ಆರಂಭಿಸಿತು. ಇದರಿಂದ ಕೃಷಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಮಾರಾಟದ ವಸ್ತುವಾದವು. ಅವನ್ನು ಮಾರಾಟ ಮಾಡದೆ ರೈತರಿಗೆ ಹಣವನ್ನು ಪಡೆಯಲು ಬೇರೆ ದಾರಿಯಿರಲಿಲ್ಲ. ಈ ಉತ್ಪನ್ನಗಳನ್ನು ಭಾರತದ ಮತ್ತು ಬ್ರಿಟನ್ನಿನ ವ್ಯಾಪಾರಿ ಬಂಡವಾಳಿಗರು ಅಲ್ಪ ಬೆಲೆಗೆ ಖರೀದಿಸಿ, ದುಬಾರಿ ಬೆಲೆಗೆ ಮಾರಾಟ ಮಾಡಿದರು. ಇದು ಭಾರತದ ಭೂ ಸಂಬಂಧದಲ್ಲಿ ಮೂಲಭೂತ ಬದಲಾವಣೆ ತಂದಿತು.
ಇದರಿಂದ ಕೃಷಿ ಉತ್ಪಾದನೆಯ ಉದ್ದೇಶವು ಸ್ವಂತ ಅನುಭೋಗದ ಬದಲು ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಮಾಡುವಂತೆ ಬದಲಾಯಿತು. ಇಲ್ಲಿಂದ ಬಂಡವಾಳಶಾಹಿ ವ್ಯವಸ್ಥೆಯ ಪ್ರಕ್ರಿಯೆಯು ಆರಂಭವಾಯಿತು. ಆದ್ದರಿಂದ ಭಾರತಕ್ಕೆ ಸ್ವಾತಂತ್ರ್ಯ ಬರುವ ಮುನ್ನವೇ ಕೃಷಿಯಲ್ಲಿ ಬಂಡವಾಳವಾದದ ಬೆಳವಣಿಗೆಯಾಗಿತ್ತು. ಬಂಡವಾಳಿಗರು ಅಧಿಕಾರಕ್ಕೆ ಬಂದ ಮೇಲೆ ಕೃಷಿಯಲ್ಲಿ ಭೂ ಸಂಬಂಧಗಳು ಸಂಪೂರ್ಣವಾಗಿ ಬಂಡವಾಳಶಾಹಿ ಸಂಬಂಧವಾಗಿ ಬೆಳೆದವು.”
ಅವರು, ಸ್ವಾತಂತ್ರ್ಯ ಹಾಗೂ ಜಾಗತೀಕರಣದ ನಂತರದ ಸಂದರ್ಭವನ್ನು ವಿವರಿಸುತ್ತಾ ಹೇಳಿದರು: “ಸ್ವಾತಂತ್ರ್ಯ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಭೂಮಿಯನ್ನು ಭೂಹೀನ ರೈತರಿಗೆ ವಿತರಣೆ ಮಾಡಲಿಲ್ಲ. ‘ಭೂಹೀನ ರೈತರಿಗೆ ಭೂಮಿ’ ಕೊಡಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರರಾದ ನೇತಾಜಿ, ಭಗತ್ ಸಿಂಗ್, ಶೇಖ್ ಅಬ್ದುಲ್ಲಾ ಮತ್ತು ಕ್ರಾಂತಿಕಾರಿ ಪಂಥದ ಇನ್ನಿತರ ನಾಯಕರು ಆಗ್ರಹಿಸಿದರು. ಆದರೆ ಗಾಂಧಿವಾದಿಗಳು, ಸಾವರ್ಕರ್, ಗೋಲ್ವಾರ್ಕರ್, ಆರ್‌ಎಸ್‌ಎಸ್, ಮುಸ್ಲಿಂ ಮೂಲಭೂತವಾದಿಗಳು ವಿರೋಧಿಸಿದರು. ನೆಹರೂ ಸಹ ಭೂ ಸುಧಾರಣೆ ಮಾಡಲಿಲ್ಲ. ಅಂದಿನಿಂದಲೂ ಬೇನಾಮಿ ಭೂಮಿಯನ್ನು ಭೂಹೀನ ರೈತರಿಗೆ ನೀಡಬೇಕೆಂದು ಎಐಕೆಕೆಎಂಎಸ್ ಒತ್ತಾಯಿಸುತ್ತಲೇ ಬಂದಿದೆ. ನಂತರ ನಡೆದ ಭೂ ಸುಧಾರಣೆಗಳು ಕೇವಲ ಬಾಯುಪಚಾರಕ್ಕೆ ಸೀಮಿತವಾದವು.
ನಂತರದಲ್ಲಿ ಕೃಷಿ ನೀತಿಗಳನ್ನು ಮಾರ್ಪಾಡಿಸಿ ಬಂಡವಾಳಿಗರಿಗೆ ಪೂರಕವಾಗುವಂತೆ ಕೃಷಿ ಅಭಿವೃದ್ಧಿಯನ್ನು ಮಾಡಲಾಯಿತು. ಬೀಜ, ರಸಗೊಬ್ಬರ, ಕೀಟನಾಶಕ, ಮುಂತಾದ ಕೃಷಿ ಒಳಸುರಿಗಳ ಕಾಯ್ದೆಗಳನ್ನು ಬದಲಾಯಿಸಿ, ಖಾಸಗಿ ಕಂಪೆನಿಗಳ ಮಡಿಲಿಗೆ ಹಾಕಲಾಯಿತು. ಜಾಗತೀಕರಣ, ಉದಾರೀಕರಣ, ಖಾಸಗೀಕರಣ ನೀತಿಗಳನ್ನು ಜಾರಿಗೊಳಿಸಿದ ಮೇಲಂತೂ ಈ ಪ್ರಕ್ರಿಯೆಯು ವೇಗವನ್ನು ಪಡೆಯಿತು. ಈಗ ಕೃಷಿಯನ್ನು ಸಂಪೂರ್ಣವಾಗಿ ದೈತ್ಯ ಕಾರ್ಪೊರೇಟ್ ಕಂಪೆನಿಗಳ ಕಪಿಮುಷ್ಟಿಗೆ ಕೊಡುವುದು ನಡೆಯುತ್ತಿದೆ. ರೈತರು ಬೀಜ, ರಸಗೊಬ್ಬರ, ಕೀಟನಾಶಕ, ಮುಂತಾದವುಗಳಿಗೆ ಕಾರ್ಪೊರೇಟ್ ಕಂಪೆನಿಗಳ ಕೃಪಾಕಟಾಕ್ಷದಲ್ಲಿರಬೇಕು, ದುಬಾರಿ ಹಣ ತೆರಬೇಕು. ಆದರೆ ಆದಾಯ ಮಾತ್ರ ಇಳಿಮುಖವಾಗುತ್ತಿದೆ. ಇದರಿಂದಾಗಿ ರೈತರ ಆತ್ಮಹತ್ಯೆ ಹೆಚ್ಚಾಗುತ್ತಿದೆ.
ಆದರೆ ರೈತರು ಬಲಹೀನರಲ್ಲ. ವಾಸ್ತವದಲ್ಲಿ ಸರ್ಕಾರ ಬಲಹೀನ. ದೆಹಲಿಯಲ್ಲಿ ನಡೆದ ರೈತ ಚಳುವಳಿಯು ಅದನ್ನು ಸಾಬೀತುಪಡಿಸಿದೆ. ಈ ಅಧ್ಯಯನ ಶಿಬಿರವು ಹೋರಾಟದ ಮುಂದಿನ ಹಾದಿಯನ್ನು ಸ್ಪಷ್ಟವಾಗಿ ತೋರಿಸಿದೆ. ರೈತರು ಮತ್ತು ಕೃಷಿ ಕಾರ್ಮಿಕರು ಸಂಘಟಿತರಾಗಬೇಕು. ಸರ್ಕಾರ ತಾನು ಜಾರಿಗೆ ತಂದ ಮೂರು ಕರಾಳ ಕೃಷಿ ನೀತಿಗಳನ್ನು ವಾಪಸ್ ತೆಗೆದುಕೊಳ್ಳುವಂತೆ ಮಾಡಿ ರೈತರು ಇತಿಹಾಸ ಸೃಷ್ಟಿಸಿದರು. ಈಗ ಜಾರಿಯಾಗುತ್ತಿರುವ ಕೃಷಿ ನೀತಿಗಳ ವಿರುದ್ಧ ಅದೇ ರೀತಿ ಇತಿಹಾಸವನ್ನು ಸೃಷ್ಟಿ ಮಾಡುತ್ತಾರೆ. ನಾವು ಹೋರಾಡುತ್ತೇವೆ, ನಾವು ಗೆಲ್ಲುತ್ತೇವೆ” ಎಂದು ಹೇಳಿದರು.
ಎಐಕೆಕೆಎಂಎಸ್ ರಾಷ್ಟ್ರೀಯ ಉಪಾಧ್ಯಕ್ಷರಾದ ಕಾ. ಸುನೀತ್ ಕುಮಾರ್, ‘ಮೈಸೂರು ಸಂಸ್ಥಾನದಲ್ಲಿ ಭೂ ಸಂಬಂಧಗಳು’, ಅಖಿಲ ಭಾರತ ಸೆಕ್ರೆಟೇರಿಯಟ್ ಸದಸ್ಯರಾದ ಕಾ. ಆಜಿ಼ಜ಼್, ‘ಕೇರಳದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಭೂ ಸಂಬಂಧಗಳು’ ಮತ್ತು ಮತ್ತೊಬ್ಬ ಅಖಿಲ ಭಾರತ ಸೆಕ್ರೆಟೇರಿಯಟ್ ಸದಸ್ಯರಾದ ಕಾ. ಗಿರೀಶ್ ‘ಹೈದರಾಬಾದಿನ ನಿಜಾಮನ ಕಾಲದ ಭೂಸಂಬಂಧಗಳು’ ಕುರಿತು ವಿಷಯ ಮಂಡನೆ ಮಾಡಿದರು. ಎಐಕೆಕೆಎಂಎಸ್ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಕಾ. ಶಶಿಧರ್, ಕಾರ್ಯದರ್ಶಿಗಳಾದ ಕಾ. ಭಗವಾನ್ ರೆಡ್ಡಿ ಮತ್ತು ಅಖಿಲ ಭಾರತ ಸೆಕ್ರೆಟೇರಿಯಟ್ ಸದಸ್ಯರಾದ ಕಾ.ನಾಗಮ್ಮಾಳ್ ಉಪಸ್ಥಿತರಿದ್ದರು.