ಸಭಾಪತಿಗಳ ಸಭಾತ್ಯಾಗವೆಂಬೋ ಪ್ರಹಸನ!
ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಸಚಿವರು ಮತ್ತು ಅಧಿಕಾರಿಗಳ ಬೇಜವಾಬ್ದಾರಿ, ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡದಿರುವುದು ಹಾಗೂ ಕಲಾಪಕ್ಕೆ ಗೈರಾಗಿದ್ದನ್ನು ಖಂಡಿಸಿ, ಸ್ಪೀಕರ್ ಯು.ಟಿ. ಖಾದರ್ ಅವರು ಅಸಮಾಧಾನಗೊಂಡು ಸಭಾತ್ಯಾಗ ಮಾಡಿದ ಅಪರೂಪದ ಘಟನೆ ನಡೆದಿದೆ. 230 ಪ್ರಶ್ನೆಗಳಲ್ಲಿ ಕೇವಲ 84ಕ್ಕೆ ಉತ್ತರ ಸಿಕ್ಕಿದ್ದಕ್ಕೆ ಗರಂ ಆದ ಸ್ಪೀಕರ್, ಕಲಾಪವನ್ನು ಮುಂದೂಡಿದರು. ವಿಧಾನಸಭೆಯಲ್ಲಿ ಶಾಸಕರು ಕೇಳಿದ ಪ್ರಶ್ನೆಗಳಿಗೆ ಅಧಿಕಾರಿಗಳು ಮತ್ತು ಸಚಿವರು ಲಿಖಿತ ಉತ್ತರ ನೀಡದಿರುವುದು ಹಾಗೂ ಸಚಿವರು ಸದನಕ್ಕೆ ಹಾಜರಾಗದಿರುವುದು, ‘ಅಧಿಕಾರಿಗಳು ಮತ್ತು ಸಚಿವರ ಮೇಲೆ ಸಿಎಂ ಅವರಿಗೆ ಹಿಡಿತವಿಲ್ಲ’ ಎಂಬಂತಹ ಸನ್ನಿವೇಶವಿದ್ದು, ಸ್ಪೀಕರ್ ಅಸಮಾಧಾನಕ್ಕೆ ಕಾರಣವಾಯಿತು. ಸ್ಪೀಕರ್ ಅವರ ಈ ಕ್ರಮಕ್ಕೆ ವಿರೋಧ ಪಕ್ಷದವರೂ ಸ್ವಾಗತ ಕೋರಿದ್ದು, ಇದು ಸರ್ಕಾರಕ್ಕೆ ಕಪ್ಪು ಚುಕ್ಕೆ ಎಂದಿದ್ದಾರೆ. ಸ್ಪೀಕರ್ ಸಿಟ್ಟಿಗೆ ಮೂವರು ಅಧಿಕಾರಿಗಳ ತಲೆದಂಡವಾಗಿದೆ. ನಂತರ, ಸ್ಪೀಕರ್ ಅವರ ಮನವೊಲಿಕೆ ಮತ್ತು ಅಧಿಕಾರಿಗಳ ಅಮಾನತಿನ ಬಳಿಕ ಕಲಾಪ ಪುನರಾರಂಭವಾಯಿತು. ಅದರೊಂದಿಗೆ ಸ್ಪೀಕರ್ ಅವರ ಈ ಕ್ರಮವನ್ನು ‘ಆಹಾ-ಓಹೋ’ ಎಂದು ಒಂದಷ್ಟು ಹೊಗಳುವುದರೊಂದಿಗೆ ಈ ಪ್ರಹಸನ ಅಂತ್ಯ ಕಂಡಿತು.
ಆದರೆ ಈ ಘಟನೆಯು ಪ್ರಜಾಪ್ರಭುತ್ವದಲ್ಲಿ ಜನರ ಹಕ್ಕಿನ ದೃಷ್ಟಿಯಿಂದ ಅತ್ಯಂತ ಗಂಭೀರವಾದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಶಾಸಕರು ಕೇಳುವ ಪ್ರಶ್ನೆಗಳು ವೈಯಕ್ತಿಕವಲ್ಲ; ಅವು ಜನರ ತೆರಿಗೆ ಹಣದ ವ್ಯಯ, ಯೋಜನೆಗಳ ಅನುಷ್ಠಾನದ ಕುರಿತು ಜನರು ತಿಳಿಯುವ ಹಕ್ಕಿನ ಪ್ರತಿನಿಧಿಗಳಾಗಿವೆ. 230 ಪ್ರಶ್ನೆಗಳ ಪೈಕಿ ಕೇವಲ 84ಕ್ಕೆ ಉತ್ತರ ಸಿಕ್ಕಿದ್ದು ಎಂದರೆ, ಜನರ ಪ್ರಶ್ನೆಗಳಲ್ಲಿ ಶೇಕಡಾ 60 ಕ್ಕೂ ಹೆಚ್ಚಿನದನ್ನು ಸರ್ಕಾರ ಕಡೆಗಣಿಸಿದೆ ಎಂದರ್ಥ. ಇದು ಮಾಹಿತಿ ತಿಳಿಯುವ ಜನರ ಮೂಲಭೂತ ಹಕ್ಕಿನ ಮೇಲಿನ ಆಘಾತವಾಗಿದೆ. ಸಂಸದೀಯ ಪದ್ಧತಿಯಲ್ಲಿ, ಇಲಾಖೆಯ ವೈಫಲ್ಯಕ್ಕೆ ಅಧಿಕಾರಿಯಲ್ಲ, ಸಚಿವರೇ ನೇರವಾಗಿ ಸದನಕ್ಕೆ ಜವಾಬ್ದಾರರಾಗಿರುತ್ತಾರೆ. ಆದರೆ ಇಲ್ಲಿ ಅಧಿಕಾರಿಗಳನ್ನು ಅಮಾನತು ಮಾಡುವ ಮೂಲಕ ಸಚಿವರು ತಮ್ಮ ರಾಜಕೀಯ ಜವಾಬ್ದಾರಿಯಿಂದ ತಪ್ಪಿಸಿಕೊಂಡಂತಾಗಿದೆ. ಇದು, ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತಾಗಿದೆ. ಜನರ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ ಸಚಿವರು ಯಾವುದೇ ಶಿಸ್ತಿನ ಕ್ರಮವನ್ನು ಎದುರಿಸದೇ ಇದ್ದುದು, ಸರ್ಕಾರದ ಅಸಮರ್ಪಕತೆಯನ್ನು ಸೂಚಿಸುತ್ತದೆ. ಸ್ಪೀಕರ್ ಅವರೇ ಸಭಾತ್ಯಾಗ ಮಾಡುವಷ್ಟು ಪರಿಸ್ಥಿತಿ ಬೆಳೆದದ್ದು, ಸರ್ಕಾರಕ್ಕೆ ವಿಧಾನಸಭೆಯ ಮೇಲಿರುವ ಗೌರವ ಕುಸಿದಿದೆ ಎಂಬುದರ ಸಂಕೇತವಾಗಿದೆ. ವಿರೋಧ ಪಕ್ಷದ ನಾಯಕರು ಸರಿಯಾಗಿಯೇ ಇದನ್ನು ಖಂಡಿಸಿದ್ದಾರೆ. ಆದರೆ ಈ ಖಂಡನೆ- ಅಮಾನತುಗಳು ಇತ್ತಿಚೆಗೆ ಯಾಂತ್ರಿಕವಾಗಿದ್ದು ಕ್ಲೀಶೆಯ ಮಾತಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೂ ಇದಕ್ಕೆ ಹೊರತಲ್ಲ. ಲೋಕಸಭಾ ಕಲಾಪಕ್ಕೆ ಹಾಜರಾಗಿ ಗಂಭೀರವಾಗಿ ಚರ್ಚೆಯಲ್ಲಿ ಪಾಲ್ಗೊಳ್ಳುವ ಪರಿಪಾಠವನ್ನು ಮಾನ್ಯ ಪ್ರಧಾನಮಂತ್ರಿಗಳೇ ಇಟ್ಟುಕೊಂಡಿಲ್ಲ. ಇನ್ನು ಬೇರೆಯವರ ಮಾತೇಕೆ? ಅಷ್ಟೇ ಅಲ್ಲ, ಇಂದು ವಿಧಾನಸಭೆಯನ್ನು ಒಂದು ಹರಟೆಯ ಕಟ್ಟೆಯಾಗಿ, ಬೀದಿ ಜಗಳಗಳ ತಾಣವಾಗಿ ಮಾಡಲಾಗಿದೆ. ಸದನದಲ್ಲಿ ಮಂಡಿಸಲಾಗುವ ಬಿಲ್‌ಗಳ ಬಗ್ಗೆ ಯಾವುದೇ ಗಂಭೀರ ಚರ್ಚೆ ನಡೆಯುವುದೇ ದುಸ್ತರ ಎಂಬ ಸ್ಥಿತಿ ಇದೆ.
ಚುನಾವಣೆಗೆ ಹೂಡಿದ ಬಂಡವಾಳವನ್ನು ಸಾವಿರ ಪಟ್ಟು ಗಳಿಸಲು ಜನರ ಸುಲಿಗೆ ಮಾಡುವುದರಲ್ಲೇ ಮುಳುಗಿದ ರಾಜಕಾರಣಿಗಳ ಬಗ್ಗೆ ಜನರಿಗೆ ನಿರೀಕ್ಷೆ ಬತ್ತಿ ಹೋಗಿ ಅವರು ಪ್ರತಿಭಟಿಸಿ ಬೀದಿಗಿಳಿಯತೊಡಗಿದ್ದಾರೆ.