Loading..

ನಾವೇಕೆ ಮಾರ್ಕ್ಸ್ ವಾದವನ್ನು ಕಲಿಯಬೇಕು

ನಾವು ಯಾವುದೇ ತತ್ವ ಅಥವಾ ಸಿದ್ಧಾಂತಗಳಿಗೆ ಅಂಟಿಕೊಳ್ಳುವುದಿಲ್ಲ ಎಂಬ ಅಪ್ಪಟ ಬುದ್ಧಿಜೀವಿಗಳ ಒಂದು ವಾದವಿದೆ. ಆದರೆ ಅದು ವಾಸ್ತವವೇ? ಹಾಗಿರಲು ಸಾಧ್ಯವೇ? ಇಂದು ಸಮಾಜ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡುವ ಮತ್ತು ಹೋರಾಟಕ್ಕೆ ದಾರಿದೀಪವಾಗುವ ತತ್ವಶಾಸ್ತ್ರ ನಮಗೆ ಬೇಕು. ಅದು ಯಾವ ತತ್ವಶಾಸ್ತ್ರ? ಅದಕ್ಕೆ ಮಾನದಂಡಗಳೇನು? ಈ ಕುರಿತು ಮಹಾನ್ ಮಾರ್ಕ್ಸ್ ವಾದಿ ಚಿಂತಕರು ಮತ್ತು ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಸಂಸ್ಥಾಪಕರಾದ ಕಾಮ್ರೇಡ್ ಶಿವದಾಸ್ ಘೋಷ್ ಅವರು, ಏಪ್ರಿಲ್, 1973ರಲ್ಲಿ ಕೊಲ್ಕತ್ತಾದ ಮಹಾಜತಿ ಸದನದಲ್ಲಿ ನಡೆದ ರಾಜನೈತಿಕ ಶಾಲೆಯಲ್ಲಿ ಚರ್ಚಿಸಿದರು. ಈ ಚರ್ಚೆಯ ಒಂದು ಭಾಗವನ್ನು ಪ್ರೊಲೆಟೇರಿಯನ್ ಎರಾ ಇಂಗ್ಲಿಷ್ ಪತ್ರಿಕೆಯು ತನ್ನ ನವೆಂಬರ್ ವಿಶೇಷ ಸಂಚಿಕೆಯಲ್ಲಿ ಪ್ರಕಟಿಸಿತ್ತು. ಅದರ ಭಾವಾನುವಾದವನ್ನು ನಾವು ನಮ್ಮ ಪಕ್ಷ ಎಸ್‌ಯುಸಿ(ಸಿ)ಯ ಸಂಸ್ಥಾಪನಾ ದಿನದ (ಏಪ್ರಿಲ್ 24) ವಿಶೇಷ ಸಂದರ್ಭದಲ್ಲಿ ಪ್ರಕಟಿಸುತ್ತಿದ್ದೇವೆ. ಅನುವಾದದಲ್ಲಿ ಏನೇ ಕೊರತೆ ಕಂಡುಬಂದರೆ, ಅದು ಸಂಪಾದಕ ಮಂಡಳಿಗೆ ಸೇರಿದ್ದು.


ನಾವು ದುಡಿಯುವ ಜನತೆಯ ವಿಮುಕ್ತಿಯ ಹೋರಾಟದಲ್ಲಿ ತೊಡಗಿದ್ದೇವೆ. ಅಂತಿಮವಾಗಿ ಬಂಡವಾಳವಾದವನ್ನು ಕಿತ್ತೊಗೆದು ಸಮಾಜವಾದವನ್ನು ಸ್ಥಾಪಿಸಲು ಕ್ರಾಂತಿಕಾರಿ ಹೋರಾಟ ಬೆಳೆಸಲು ಕಾರ್ಮಿಕರ, ರೈತರ ಹಾಗೂ ಕೋಟ್ಯಂತರ ದುಡಿಯುವ ಜನತೆಯ ಹೋರಾಟಗಳನ್ನು ಹಂತ ಹಂತವಾಗಿ ಕಟ್ಟುತ್ತಿದ್ದೇವೆ. ಆದ್ದರಿಂದ, ನಮ್ಮ ಗುರಿಯ ಕಡೆಗೆ ನಡೆಯಲು, ಮಾಗದರ್ಶನ ನೀಡಲು ನಮಗೆಲ್ಲರಿಗೂ ವೈಚಾರಿಕ ಅಸ್ತ್ರವಾಗಿ ತತ್ವಶಾಸ್ತ್ರ ಅಗತ್ಯವಾಗಿ ಬೇಕು.
ಈಗ ಪ್ರಶ್ನೆಯೆಂದರೆ : ನಮ್ಮ ದೇಶದಲ್ಲಿ ಹಾಗೂ ವಿದೇಶದಲ್ಲಿ ಬೇಕಾದಷ್ಟು ತತ್ವಶಾಸ್ತ್ರ ಅಥವಾ ತತ್ವಶಾಸ್ತ್ರೀಯ ಪದ್ಧತಿಗಳಿರುವಾಗ, ನಾವೇಕೆ ವೈಚಾರಿಕ ಅಸ್ತ್ರವಾಗಿ ಮಾರ್ಕ್ಸ್ ವಾದವನ್ನೇ ಒಪ್ಪಿಕೊಳ್ಳಬೇಕು? ನಮ್ಮ ಗುರಿಯನ್ನು ಮುಟ್ಟುವ ವಿಷಯದಲ್ಲಿ ಅದರ ಜೊತೆ ನಮಗೇನು ಸಂಬಂಧ? ಅದು ನಮ್ಮ ಕಲ್ಪನಾ ವಿಲಾಸವೇ? ಕಾರ್ಲ್ ಮಾರ್ಕ್ಸ್ ಮಹಾ ಮೇಧಾವಿಯಾಗಿದ್ದರಿಂದ ಅವರ ಬೋಧನೆಗಳ ಕಡೆಗೆ ವಿಶೇಷ ಸೆಳೆತವೇ? ಅಥವಾ ನಾವು ಮಾರ್ಕ್ಸ್ ವಾದಿ ತತ್ವಶಾಸ್ತ್ರದ ಅನುಯಾಯಿಗಳೆಂದು ಘೋಷಿಸಿರುವುದರಿಂದ, ಅವರ ಬೋಧನೆಗಳನ್ನು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆಯೇ? ಇಲ್ಲ, ಖಂಡಿತಾ ಇಲ್ಲ.
ಸಾಂಖ್ಯ, ವೇದಾಂತ ಅಥವಾ ತಾರ್ಕಿಕ ಪಾಸಿಟಿವಿಸಂ, ಅಸ್ತಿತ್ವವಾದ ಅಥವಾ ದ್ವಂದ್ವಾತ್ಮಕ ವಸ್ತುವಾದ ಅಥವಾ ಯಾವುದೇ ತತ್ವಶಾಸ್ತ್ರವಾಗಿರಲಿ – ಅದು ಏನನ್ನು ಪ್ರತಿಪಾದಿಸುತ್ತದೆ ಎನ್ನುವ ಮಾಹಿತಿಗಾಗಿ ಅಧ್ಯಯನ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ನಮಗೆ ಸತ್ಯದ ಹುಡುಕಾಟದಲ್ಲಿ ಮಾರ್ಗದರ್ಶನ ನೀಡಲು, ನಮ್ಮ ವಿಮುಕ್ತಿ ಹೋರಾಟದ ಹಾದಿಯ ಮೇಲೆ ಬೆಳಕು ಚೆಲ್ಲಲು ತತ್ವಶಾಸ್ತ್ರ ಬೇಕು. ತತ್ವಶಾಸ್ತ್ರವು ಸತ್ಯವನ್ನು ಅನಾವರಣಗೊಳಿಸುವ ಒಂದು ಅಸ್ತ್ರ. ಕತ್ತಲೆಯನ್ನು ಹೊಡೆದೋಡಿಸಿ ದಾರಿ ಬೆಳಗುವ ದೀಪದಂತೆ. ಜೀವನ, ಸಮಾಜ ಮತ್ತು ನಿಸರ್ಗಗಳಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ನಡುವೆ ದಾರಿ ತೋರಿಸುವ ಒಂದು ಪ್ರಬಲ ಅಸ್ತ್ರ!
ನಮಗೆ ವಿಮುಕ್ತಿ ಬೇಕು. ಪ್ರಪಂಚವನ್ನು ಬದಲಾಯಿಸಬೇಕು ಮತ್ತು ಪ್ರಗತಿಯ ಗತಿಯನ್ನು ತ್ವರಿತಗೊಳಿಸಬೇಕಾದರೆ, ನಾವು ಪ್ರಜ್ಞಾಪೂರ್ವಕವಾಗಿ ಕಾರ್ಯಪ್ರವೃತ್ತರಾಗಬೇಕಾಗುತ್ತದೆ. ಈ ಪ್ರಜ್ಞಾಪೂರ್ವಕ ಕ್ರಿಯೆಯನ್ನು ನಾವು ನಿರ್ವಹಿಸಲು, ಪ್ರಕೃತಿಯ ಆಂತರಿಕ ನಿಯಮಗಳನ್ನು ಮತ್ತು ನಮಗೆ ಎದುರಾಗುತ್ತಿರುವ ಎಲ್ಲಾ ಸಮಸ್ಯೆಗಳ ನಿಜಕಾರಣವನ್ನು ತಿಳಿದುಕೊಳ್ಳುವುದು ಅಗತ್ಯ. ಈ ನಿಟ್ಟಿನಲ್ಲಿ ನಾವು ಒಂದು ಸಮರ್ಥ ತತ್ವಶಾಸ್ತ್ರವನ್ನು ಕಂಡುಕೊಳ್ಳಬೇಕು.
ನಮ್ಮ ಜೀವನದ ಸಮಸ್ಯೆಗಳ ಮಧ್ಯೆ, ನಮಗೆ ಮಾರ್ಗದರ್ಶನ ನೀಡುವ ಸಾಮರ್ಥ್ಯ ಆ ತತ್ವಶಾಸ್ತ್ರಕ್ಕೆ ಇರಬೇಕು. ನಾಗರಿಕತೆ, ಸಾಮಾಜಿಕ ಪ್ರಗತಿ ಹಾಗೂ ಕ್ರಾಂತಿ ಎದುರಿಸುತ್ತಿರುವ ಸಮಸ್ಯೆಗಳಿಗೆ ದಿಗ್ದರ್ಶನ ನೀಡುವಂತಹ ಶಕ್ತಿ ಆ ತತ್ವಶಾಸ್ತ್ರಕ್ಕೆ ಇರಬೇಕು. ವರ್ಗ ಸಂಘರ್ಷದ ಸಮಸ್ಯೆಗಳು ಮತ್ತು ಸಾಮಾಜಿಕ ಮನೋರೂಪದಲ್ಲಿರುವ ವಿಭಿನ್ನ ಸಂಕೀರ್ಣತೆಗಳನ್ನು ಸಮರ್ಪಕವಾಗಿ ಅರ್ಥೈಸಬಲ್ಲ ದಕ್ಷತೆ ಆ ತತ್ವಶಾಸ್ತ್ರಕ್ಕೆ ಇರಬೇಕಾಗುತ್ತದೆ. ನಮಗೆ, ಪ್ರಸಕ್ತ ಬಂಡವಾಳಶಾಹಿ ಪ್ರಭುತ್ವವನ್ನು ಕ್ರಾಂತಿಯಿಂದ ಕಿತ್ತೊಗೆದು, ಸಮಾಜವನ್ನು ಮೂಲಭೂತವಾಗಿ ಪರಿವರ್ತಿಸುವ ಹಾದಿಯನ್ನು ಬೆಳಗುವ ಸಾಮರ್ಥ್ಯವಿರುವಂತಹ ಪ್ರಖರವಾದ ತತ್ವಶಾಸ್ತ್ರದ ಅಗತ್ಯವಿದೆ. ನಮ್ಮ ಈ ಎಲ್ಲಾ ಅಗತ್ಯಗಳನ್ನು ಪೂರೈಸುವ ತತ್ವಶಾಸ್ತ್ರ ವೇದಾಂತವಾಗಿದ್ದರೆ, ಆಗ ನಾವು ಅದನ್ನೇ ಒಪ್ಪಿಕೊಳ್ಳುತ್ತಿದ್ದೆವು. ಅಥವಾ ಅದು ಫ್ಯೂಯರ್‌ಬಕ್‌ರವರ ತತ್ವಶಾಸ್ತ್ರ ಅಥವಾ ತಾರ್ಕಿಕ ಪಾಸಿಟಿವಿಸಂ ಅಥವಾ ಸಾರ್ತ್ರೆಯವರ ಅಸ್ತಿತ್ವವಾದ ಆಗಿದ್ದರೆ ನಾವು ಅದನ್ನೇ ಒಪ್ಪಿಕೊಳ್ಳುತ್ತಿದ್ದೆವು.
ಇಲ್ಲೊಂದು ವಿಷಯವನ್ನು ಗಮನಿಸಬೇಕು – ನಾವು ಸಮಸ್ಯೆಗಳನ್ನು ಸರಿಯಾಗಿ ಗ್ರಹಿಸದಿದ್ದರೆ, ಅವುಗಳನ್ನು ಬಗೆಹರಿಸಲು ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಸತ್ಯದ ಸಾಧನೆಯಲ್ಲಿ ನಮಗೆ ‘ಮನೋನಿಷ್ಠವಾದ’(Subjectivism) ಧೋರಣೆಯು ಸಹಾಯ ಮಾಡುವುದಿಲ್ಲ; ಅದರಿಂದ ಸಮಸ್ಯೆಗಳನ್ನು ಬಗೆಹರಿಸುವುದು ಅಸಾಧ್ಯ. ಉದಾಹರಣೆಗೆ, ಮಾನವನು ನೀರು ಅಥವಾ ವಿದ್ಯುಚ್ಛಕ್ತಿಯ ನಿಜವಾದ ಸ್ವಭಾವವನ್ನು ಅರ್ಥ ಮಾಡಿಕೊಳ್ಳುವವರೆಗೂ, ಅವುಗಳ ಬಗ್ಗೆ ಅವನಿಗೆ ಚಿತ್ರವಿಚಿತ್ರ ಕಲ್ಪನೆಗಳಿದ್ದವು. ಅವನು ನೀರು ಅಥವಾ ವಿದ್ಯುಚ್ಛಕ್ತಿಯ ನಿರ್ದಿಷ್ಟ ನಿಯಮ, ಗುಣಲಕ್ಷಣ ಮತ್ತು ಸ್ವಭಾವಗಳನ್ನು ಗ್ರಹಿಸಲು ಸಾಧ್ಯವಾದ ಮೇಲೆಯೇ, ತನ್ನ ಅಗತ್ಯಗಳಿಗೆ ತಕ್ಕಂತೆ ಅವುಗಳನ್ನು ನಿಯಂತ್ರಿಸಲು ಅವನಿಗೆ ಸಾಧ್ಯವಾಯಿತು. ಅವುಗಳನ್ನು ನಿಯಂತ್ರಿಸುವ ಮೂಲಕ ಅವುಗಳ ಮೇಲೆ ಮಾನವ ಮೇಲುಗೈ ಸಾಧಿಸಿದ. ಇದರಿಂದ ಉದ್ಭವಿಸುವ ಪ್ರಸ್ತುತವಾದ ಪ್ರಶ್ನೆ ಎಂದರೆ: ಸತ್ಯವನ್ನು ಹೇಗೆ ತಿಳಿದುಕೊಳ್ಳುವುದು? ಸತ್ಯದ ಹುಡುಕಾಟದಲ್ಲಿ ಯಾವ ನಿರ್ದಿಷ್ಟ ತತ್ವಶಾಸ್ತ್ರ ಮಾರ್ಗದರ್ಶನ ನೀಡಬಲ್ಲದು?
ಈ ಕಾರ್ಯವನ್ನು ನಿರ್ವಹಿಸಬಲ್ಲ ಸಾಮರ್ಥ್ಯವನ್ನು ಯಾವ ತತ್ವಶಾಸ್ತ್ರ ಹೊಂದಿರುತ್ತದೆಯೋ, ಆ ತತ್ವಶಾಸ್ತ್ರವು ನಿಸರ್ಗ, ಜೀವನ ಮತ್ತು ಸಮಾಜದ ಬಗ್ಗೆ ಸಮಗ್ರವಾದ ಮತ್ತು ವಸ್ತುನಿಷ್ಠ ವೈಜ್ಞಾನಿಕ ಜ್ಞಾನವನ್ನು ನಮಗೆ ಕೊಡಲೇಬೇಕಾಗುತ್ತದೆ. ನಮ್ಮ ಸುತ್ತಮುತ್ತಲ ಪ್ರಪಂಚ, ಅದರಲ್ಲಿ ನಡೆಯುವ ಪ್ರತಿಯೊಂದು ಸಂಗತಿ ಮತ್ತು ಬೆಳವಣಿಗೆ, ಪ್ರತಿಯೊಂದು ವಿದ್ಯಮಾನಕ್ಕೂ ಕಾರ್ಯಕಾರಣ ಸಂಬಂಧವಿದೆ ಮತ್ತು ಅದು ನಿಯಮಬದ್ಧವಾಗಿದೆ. ಪ್ರತಿಯೊಂದು ನಿರ್ದಿಷ್ಟ ಸಂಗತಿ ಮತ್ತು ಅದರ ಬೆಳವಣಿಗೆಯ ಹಿಂದೆ ನಿರ್ದಿಷ್ಟ ನಿಯಮ ಕೆಲಸ ಮಾಡುತ್ತಿರುತ್ತದೆ. ವಿಜ್ಞಾನ, ನಿರ್ದಿಷ್ಟವಾಗಿ ಹೇಳುವುದಾದರೆ, ಭೌತಶಾಸ್ತ್ರ, ರಸಾಯನಶಾಸ್ತ್ರ, ಭೂವಿಜ್ಞಾನ, ಜೀವವಿಜ್ಞಾನ, ಮುಂತಾದವುಗಳನ್ನು ಪರಿಗಣಿಸೋಣ. ಇವುಗಳು ಭೌತಿಕ ವಲಯದ ನಿರ್ದಿಷ್ಟ ನಿಯಮಗಳನ್ನು ನಿರ್ದಿಷ್ಟವಾಗಿ ಅಧ್ಯಯನ ಮಾಡುತ್ತವೆ. ಪ್ರಯೋಗದ ಮೂಲಕ ಇವುಗಳು ಸಂಶೋಧನೆ ಮಾಡುತ್ತವೆ. ಇವುಗಳು ನಿರ್ದಿಷ್ಟ ಸತ್ಯಗಳನ್ನು ಮಾತ್ರ ಅನಾವರಣಗೊಳಿಸುತ್ತವೆ. ಅಂದರೆ, ಇವುಗಳು ಕೃಷಿ ಮಾಡುವ ಜ್ಞಾನವು ಸಹ ನಿರ್ದಿಷ್ಟ ಜ್ಞಾನವಾಗಿರುತ್ತದೆ. ಆದ್ದರಿಂದಲೇ ಇದನ್ನು ಭಾಗಶಃ ಜ್ಞಾನ ಎನ್ನುತ್ತೇವೆ. ಅಂದರೆ ನಿಸರ್ಗ, ಜೀವನ ಮತ್ತು ಸಮಾಜದ ಬಗೆಗಿನ ಒಟ್ಟಾರೆಯಾದ, ಸಮಗ್ರವಾದ ಜ್ಞಾನದ ದೃಷ್ಟಿಯಿಂದ ನೋಡಿದರೆ, ಇವುಗಳು ಅನಾವರಣಗೊಳಿಸುವುದು ನಿರ್ದಿಷ್ಟ ಜ್ಞಾನವನ್ನು, ಭಾಗಶಃ ಜ್ಞಾನವನ್ನು ಮಾತ್ರ. ಇವು ಸಮಗ್ರ ಜ್ಞಾನದ ಭಾಗವೇ ಹೊರತು ಇವುಗಳೇ ಸಮಗ್ರ ಜ್ಞಾನವಲ್ಲ. ಉದಾಹರಣೆಗೆ, ವಿಜ್ಞಾನದ ಈ ಶಾಖೆಗಳನ್ನು ವೈದ್ಯಕೀಯ ವಿಜ್ಞಾನದಲ್ಲಿ ತಜ್ಞರು ಮಾನವ ದೇಹದ ವಿವಿಧ ಅಂಗಾಂಗಗಳ ಸೂಕ್ಷ್ಮ ಅಧ್ಯಯನ ಮಾಡುವುದಕ್ಕೆ ಹೋಲಿಸಬಹುದು. ಮಾನವ ದೇಹದ ಅಂಗಾಂಗಗಳಿಗೆ ಅವುಗಳದ್ದೇ ಆದ ನಿರ್ದಿಷ್ಟ ಕೆಲಸ ಕಾರ್ಯಗಳು ಮತ್ತು ಗುಣಲಕ್ಷಣಗಳಿದ್ದರೂ ಸಹ, ಅವುಗಳು ದೇಹದ ಒಟ್ಟಾರೆ ಜೈವಿಕತೆಯಲ್ಲಿ ಪರಸ್ಪರ ಸಂಬಂಧ ಹೊಂದಿವೆ. ಅದೇ ರೀತಿ ಜೀವನ, ಸಮಾಜ ಮತ್ತು ನಿಸರ್ಗದಲ್ಲಿ ವಿವಿಧ ಬಗೆಯ ಬೆಳವಣಿಗೆಗಳು, ಭೌತಿಕ ವಿಶ್ವದ ತಮ್ಮ ನಿರ್ದಿಷ್ಟ ನಿಯಮಗಳಿಗೆ ಬದ್ಧವಾಗಿದ್ದರೂ ಸಹ, ಅವುಗಳು ಒಂದರಿಂದ ಇನ್ನೊಂದು ಪ್ರತ್ಯೇಕವಾಗಿಲ್ಲ. ಅವುಗಳು ಮಾಲೆಯೊಂದರ ಮಣಿಗಳಂತೆ ಒಂದಕ್ಕೊಂದು ಪೋಣಿಸಿಕೊಂಡಿವೆ. ವಿವಿಧ ವಸ್ತುಗಳು, ವಸ್ತುವಿನ ವಿವಿಧ ರೂಪಗಳು ವಿಶ್ವವನ್ನು ರೂಪಿಸುತ್ತವೆ. ಅದೇ ರೀತಿ, ವಿಜ್ಞಾನದ ವಿವಿಧ ಶಾಖೆಗಳು ಅನಾವರಣಗೊಳಿಸಿದ ವಿವಿಧ ನಿರ್ದಿಷ್ಟ ಸತ್ಯಗಳನ್ನು ಸಾಮಾನ್ಯೀಕರಣವೆಂಬ ವೈಜ್ಞಾನಿಕ ಪ್ರಕ್ರಿಯೆಯ ಮೂಲಕ ನಾವು ಸಮನ್ವಯಗೊಳಿಸುತ್ತೇವೆ ಮತ್ತು ಒಗ್ಗೂಡಿಸುತ್ತೇವೆ. ಆಗ ನಮಗೆ ಜೀವನ, ಸಮಾಜ ಮತ್ತು ನಿಸರ್ಗದ ಬಗ್ಗೆ ಸಮಗ್ರ ಜ್ಞಾನ ಸಿಗುತ್ತದೆ. ಮಾನವ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ನಮಗೆ ಸಮಗ್ರ ವೈಜ್ಞಾನಿಕ ಜ್ಞಾನವನ್ನು ನೀಡಿದ ಏಕೈಕ ತತ್ವಶಾಸ್ತ್ರವೇ “ದ್ವಂದ್ವಾತ್ಮಕ ವಸ್ತುವಾದ”.
ವಿಜ್ಞಾನದ ವಿವಿಧ ಶಾಖೆಗಳು ನಿರ್ದಿಷ್ಟ ಭೌತಿಕ ವಲಯಗಳ ಅಧ್ಯಯನ ಮಾಡುವಾಗ ನಿರ್ದಿಷ್ಟ ಜ್ಞಾನ ಹೊರಹೊಮ್ಮುತ್ತದೆ. ಈ ನಿರ್ದಿಷ್ಟ ಜ್ಞಾನಗಳನ್ನು ಸಮನ್ವಯಗೊಳಿಸುವ, ಒಂದುಗೂಡಿಸುವ ಮತ್ತು ಸಾಮಾನ್ಯೀಕರಿಸುವ ಮೂಲಕ ವಿಕಸನಗೊಂಡಿರುವ ಏಕೈಕ ತಾತ್ವಿಕ ಪರಿಕಲ್ಪನೆ, “ದ್ವಂದ್ವಾತ್ಮಕ ವಸ್ತುವಾದ” ಅಥವಾ ಮಾರ್ಕ್ಸ್ ವಾದ. ಮಾರ್ಕ್ಸ್ ವಾದದ ಹೊರತು ಬೇರಾವ ತತ್ವಶಾಸ್ತ್ರವೂ ಈ ರೀತಿಯಲ್ಲಿ ವಿಕಸನಗೊಂಡಿಲ್ಲ. ಬೇರೆಲ್ಲಾ ತತ್ವಶಾಸ್ತ್ರಗಳು ವಾಸ್ತವದಿಂದ ದೂರವಿದ್ದು ‘ಮನೋನಿಷ್ಠ’ ಚಿಂತನಾ ಪ್ರಕ್ರಿಯೆಯನ್ನು ಹೊಂದಿವೆ. ಬೇರೆಲ್ಲಾ ತತ್ವಶಾಸ್ತ್ರಗಳು ಪ್ರಪಂಚವನ್ನು ವ್ಯಾಖ್ಯಾನಿಸಲು ವಿಜ್ಞಾನದ ಮೇಲೆ ಅವಲಂಬಿತವಾಗಿಲ್ಲ. ಬದಲಿಗೆ, ಇವುಗಳು ಕೇವಲ ದೈನಂದಿನ ಅನುಭವಗಳು ಅಥವಾ ವೈಯಕ್ತಿಕ ವಿವೇಚನೆ ಅಥವಾ ವೈಯಕ್ತಿಕ ಸಾಮರ್ಥ್ಯದ ನೆಲೆಗಟ್ಟಿನಿಂದ ಪಡೆದುಕೊಂಡ ಜ್ಞಾನದ ಆಧಾರದ ಮೇಲೆ ಜಗತ್ತನ್ನು ವ್ಯಾಖ್ಯಾನಿಸಿವೆ. ಇವುಗಳು ಪ್ರಪಂಚದ ಕುರಿತು ‘ಮನೋನಿಷ್ಠ’ ಚಿಂತನೆಯ ಮೇಲೆ ಆಧಾರಪಟ್ಟ ವಿಭಿನ್ನ ವ್ಯಾಖ್ಯಾನಗಳೇ ಹೊರತು ಬೇರೇನೂ ಅಲ್ಲ.
ನಾವು ‘ಮನೋನಿಷ್ಠ ಚಿಂತನೆ’ ಅಥವಾ ತಾರ್ಕಿಕ ಪಾಸಿಟಿವಿಸಂ ಆಧಾರದ ಮೇಲೆ ಸತ್ಯವನ್ನು ತಿಳಿಯಲು ಬಯಸಿದರೆ, ಆಗ ಒಂದೇ ವಿದ್ಯಮಾನದ ಬಗ್ಗೆಯೇ ತಿಳುವಳಿಕೆಯಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸ ಬಂದೇ ಬರುತ್ತದೆ. ಒಂದು ವಾಸ್ತವ ವಿದ್ಯಮಾನವು ಎಲ್ಲಾ ವ್ಯಕ್ತಿಗಳಿಗೂ ಒಂದೇ ಆಗಿರುತ್ತದೆ. ಆ ವಿದ್ಯಮಾನವು ಓರ್ವ ವ್ಯಕ್ತಿಯ ಪ್ರಜ್ಞೆಯಿಂದ ಸ್ವತಂತ್ರವಾಗಿರುತ್ತದೆ. ಆದಾಗ್ಯೂ ಬೇರೆ ಬೇರೆ ವ್ಯಕ್ತಿಗಳು ವಿಭಿನ್ನವಾಗಿ ಅರ್ಥೈಸುತ್ತಾರೆ. ಏಕೆಂದರೆ ಇಲ್ಲಿ ಸತ್ಯವು ವಸ್ತು ಪರಿಸ್ಥಿತಿಯ ಮೇಲೆ ಅವಲಂಬಿತವಾಗಿಲ್ಲ, ಓರ್ವ ವ್ಯಕ್ತಿಯ ಚಿಂತನಾ ಪ್ರಕ್ರಿಯೆಯ ಮೇಲೆ ಆಧಾರವಾಗಿದೆ. ಭಾವನಾವಾದಿ ತತ್ವಶಾಸ್ತ್ರದಲ್ಲಿ ಹಲವಾರು ‘ಚಿಂತನಾ ಧಾರೆಗಳು’ ಏಕಿವೆ ಎಂಬುದನ್ನು ಇದು ವಿವರಿಸುತ್ತದೆ…….ಆದರೆ ವಿಜ್ಞಾನದಲ್ಲಿ ಹಾಗೆಂದೂ ನಡೆಯುವುದಿಲ್ಲ. ಏಕೆಂದರೆ ವಿಜ್ಞಾನವು ಪ್ರಯೋಗದ ಮೇಲೆ ಆಧಾರವಾಗಿದೆ. ವಿಜ್ಞಾನದ ವಿಷಯಕ್ಕೆ ಬಂದರೆ, ಜಪಾನ್, ಅಮೆರಿಕಾ ಅಥವಾ ಇಂಗ್ಲೆಂಡ್‌ಗಳಲ್ಲಿ ಯಾವುದು ಸತ್ಯವೋ, ಅದು ಭಾರತದಲ್ಲೂ ಅಷ್ಟೇ ಸತ್ಯ……ಉದಾಹರಣೆಗೆ, ವಿದ್ಯುಚ್ಛಕ್ತಿಯ ನಿಯಮಗಳು ಮತ್ತು ಸ್ವಭಾವಗಳನ್ನು ವಿಭಿನ್ನವಾಗಿ ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಇವುಗಳು ಪ್ರಯೋಗದಿಂದ ಕಂಡು ಹಿಡಿದ ಸತ್ಯಗಳು. ಹಾಗಾಗಿ ಅವುಗಳು ಸಾರ್ವತ್ರಿಕ……..ಹೀಗೆ, ಪ್ರಪಂಚವನ್ನು ವ್ಯಾಖ್ಯಾನಿಸಲು ನಮ್ಮ ಮುಂದಿರುವ ಹಲವು ಚಿಂತನಾಧಾರೆಗಳಲ್ಲಿ ಮಾರ್ಕ್ಸ್ ವಾದ ಅಥವಾ ದ್ವಂದ್ವಾತ್ಮಕ ವಸ್ತುವಾದವು ಕೇವಲ ಇನ್ನೊಂದು ತತ್ವ ಸಿದ್ಧಾಂತವಲ್ಲ. – “ಮಾರ್ಕ್ಸ್ ವಾದವು ಕ್ರಿಯೆಗೆ ಒಂದು ಮಾರ್ಗದರ್ಶಿ”- “ಪ್ರಪಂಚವನ್ನು ಬದಲಾಯಿಸುವ ಅಸ್ತ್ರ”.
ಕಾರ್ಲ್ ಮಾರ್ಕ್ಸ್ ಮೊದಲಿಗೆ ಪ್ರತಿಪಾದಿಸಿದ ದ್ವಂದ್ವಾತ್ಮಕ ವಸ್ತುವಾದವು ಬೇರೆ ತತ್ವಶಾಸ್ತ್ರಗಳಿಗಿಂತ ಮೂಲಭೂತವಾಗಿ ಮತ್ತು ಸ್ಪಷ್ಟವಾಗಿ ಬಹಳ ವಿಭಿನ್ನ. ಮಾರ್ಕ್ಸ್ ವಾದವು ಒಂದು ಜಡ ಸಿದ್ಧಾಂತವಲ್ಲ. ಅದು ಸೃಜನಶೀಲ ಮತ್ತು ವಿಜ್ಞಾನದ ವಿವಿಧ ಶಾಖೆಗಳ ಹಾಗೂ ಮನುಕುಲದ ಜ್ಞಾನದ ಜೊತೆ ಜೊತೆಯಲ್ಲೇ ವಿಕಸನಗೊಳ್ಳುತ್ತಿರುವ ತತ್ವಶಾಸ್ತ್ರ…… ಪ್ರತಿಯೊಂದೊಂದೂ ಆವಿಷ್ಕಾರಗಳ ಜೊತೆಜೊತೆಗೆ ದ್ವಂದ್ವಾತ್ಮಕ ವಸ್ತುವಾದವು ಗಾಢವಾಗಿ ಬೇರೂರುತ್ತದೆ; ಮತ್ತು ಪ್ರಪಂಚದ ಕುರಿತಾದ ಅದರ ಸಂಕೀರ್ಣ ತಿಳುವಳಿಕೆಯು ನಿರಂತರವಾಗಿ ವಿಕಸನಗೊಳ್ಳುತ್ತದೆ. ಹಾಗಾಗಿಯೇ, ದ್ವಂದ್ವಾತ್ಮಕ ವಸ್ತುವಾದವನ್ನು ‘ವಿಜ್ಞಾನಗಳ ವಿಜ್ಞಾನ’ ಎಂದು ಕರೆಯುತ್ತೇವೆ!
ಆದ್ದರಿಂದ, ಹಳತಾದ, ಸಾಯುವ ಸ್ಥಿತಿಯಲ್ಲಿರುವ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಪರಿವರ್ತನೆಯನ್ನು ತರಲು ಮಾರ್ಕ್ಸ್ ವಾದ ನಮಗೆ ಅತ್ಯವಶ್ಯಕ. ಕೊಳೆಯುತ್ತಿರುವ ಬೂರ್ಜ್ವಾ ಸಂಸೃತಿಯ ದುರ್ಗುಣಗಳಿಂದ ಮುಕ್ತರಾಗಿ ಉನ್ನತ ಹಾಗೂ ಉದಾತ್ತ ನೀತಿ, ನೈತಿಕತೆ ಮತ್ತು ಸಂಸ್ಕೃತಿಗಳನ್ನು ಹೊಂದಿದ ಹೊಸ ಮನುಷ್ಯರನ್ನು ಸೃಷ್ಟಿಸುವ ಉದಾತ್ತ ವೈಚಾರಿಕತೆಯೇ ಮಾರ್ಕ್ಸ್ ವಾದ! ಮಾರ್ಕ್ಸ್ ವಾದವು ಸತ್ಯವನ್ನು ಅರಿಯಲು ಮತ್ತು ವಿಮುಕ್ತಿ ಹಾದಿಯ ಮೇಲೆ ಬೆಳಕು ಚೆಲ್ಲಲು ನಮ್ಮ ಕೈಯಲ್ಲಿರುವ ಪ್ರಬಲ ಅಸ್ತ್ರವಾಗಿದೆ. ಇದು ಇಡೀ ಮನುಕುಲಕ್ಕೆ ದಾರಿದೀಪ! ಇದು ಮನುಕುಲದ ಮುನ್ನಡೆ ಮತ್ತು ಮೇಲ್ಮುಖ ಪಯಣದಲ್ಲಿ ಮಾರ್ಗದರ್ಶನ ನೀಡುವ ತತ್ವಶಾಸ್ತ್ರ. ನಾಗರಿಕತೆಯ ಪ್ರಗತಿಯನ್ನು ಬಯಸುವವರಿಗೆ, ಮನುಕುಲದ ಅಭ್ಯುದಯವನ್ನು ಬಯಸುವವರಿಗೆ, ವಿಜ್ಞಾನ ಮತ್ತು ಜ್ಞಾನದ ಅನಿರ್ಬಂಧಿತ ಬೆಳವಣಿಗೆಯನ್ನು ಬಯಸುವವರಿಗೆ; ಅವರ ಕೈಯಲ್ಲಿರುವ ಪ್ರಜ್ವಲಿಸುತ್ತಿರುವ ಅಸ್ತ್ರವೇ ಮಾರ್ಕ್ಸ್ ವಾದ! ಸಮಾಜದ ಬೆಳವಣಿಗೆಯ ಇಂದಿನ ಹಂತದಲ್ಲಿ, ಎಲ್ಲಾ ರೀತಿಯ ಸಂಕೋಲೆಗಳಿಂದ ವಿಮುಕ್ತಿಗೊಳಿಸಲು ಮನುಕುಲವನ್ನು ಮುನ್ನಡೆಸುವ ಕಾರ್ಯವನ್ನು ಚರಿತ್ರೆ ಕಾರ್ಮಿಕವರ್ಗಕ್ಕೆ ನೀಡಿದೆ. ಆ ಕಾರ್ಮಿಕವರ್ಗವು ಮಾರ್ಕ್ಸ್ ವಾದವನ್ನು ಇನ್ನೂ ಹೆಚ್ಚು ಹೆಚ್ಚು ಅರಿಯಬೇಕು. ಕಾರ್ಮಿಕರು ಪ್ರತಿಯೊಂದು ಕ್ಷೇತ್ರದಲ್ಲೂ ಜ್ಞಾನವನ್ನು ಗಳಿಸಿಕೊಳ್ಳಬೇಕು. ಅವರ ಕೈಯಲ್ಲಿ ಮಾರ್ಕ್ಸ್ ವಾದವು ಅಭೇದ್ಯ ಅಸ್ತ್ರ. ಆಳುವ ವರ್ಗದ ಮಾರಣಾಂತಿಕ ನ್ಯೂಕ್ಲಿಯರ್ ಶಸ್ತ್ರಾಸ್ತ್ರಗಳಿಗಿಂತಲೂ ಹೆಚ್ಚು ಶಕ್ತಿಶಾಲಿಯಾದ ಅಸ್ತ್ರ. ಈ ಕಾರಣದಿಂದಲೇ ನಮ್ಮ ಮುನ್ನಡೆಗೆ ಮಾರ್ಗದರ್ಶಕವಾಗಿ ನಮಗಿರುವ ಏಕೈಕ ಅಸ್ತ್ರವೇ ಮಾರ್ಕ್ಸ್ ವಾದ!