ಚಿನ್ನದ ಬೆಲೆ ಏರುತ್ತಿರುವುದೇಕೆ? - ಒಂದು ವಿಶ್ಲೇಷಣೆ
ಜಾಗತಿಕ ಮತ್ತು ದೇಶೀಯ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಯು ಹಿಂದೆಂದೂ ಕಾಣದ ಮಟ್ಟದ ಏರಿಕೆಯನ್ನು ಕಾಣುತ್ತಿದೆ. 2025ರ ಸಾಲಿನಲ್ಲಿಯೇ ಚಿನ್ನವು 53 ಬಾರಿ ತನ್ನದೇ ಆದ ಹಳೆಯ ದಾಖಲೆಗಳನ್ನು ಮುರಿದು ಹೊಸ ಎತ್ತರಕ್ಕೇರಿದೆ. ಪ್ರಸ್ತುತ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಪ್ರತಿ ಔನ್ಸ್ ಗೆ (1 ಔನ್ಸ್=28.35ಗ್ರಾಂ) 5,000 ಡಾಲರ್‌ಗಳ ಗಡಿ ದಾಟಿದೆ. 10 ಗ್ರಾಂಗೆ ರೂ. 1,60,000 ದಾಟಿದೆ. ಕೇವಲ ಚಿನ್ನ ಮಾತ್ರವಲ್ಲದೆ, ಬೆಳ್ಳಿ ಮತ್ತು ಪ್ಲಾಟಿನಂ ನಂತಹ ಅಮೂಲ್ಯ ಲೋಹಗಳ ಬೆಲೆಯಲ್ಲೂ ಇದೇ ರೀತಿಯ ಏರಿಕೆಯ ಪ್ರವೃತ್ತಿ ಕಂಡುಬರುತ್ತಿದೆ. ಈ ಹಠಾತ್ ಮತ್ತು ತೀವ್ರ ಬೆಲೆ ಏರಿಕೆಯು ಹೂಡಿಕೆದಾರರಲ್ಲಿ ಮತ್ತು ಸಾಮಾನ್ಯ ಜನರಲ್ಲಿ “ಈಗ ಚಿನ್ನದ ಬೆಲೆ ಇಷ್ಟು ವೇಗವಾಗಿ ಏರುತ್ತಿರುವುದೇಕೆ?” ಎಂಬ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಚಿನ್ನದ ಸಂಚಯ ಮತ್ತು ಅದರ ಆರ್ಥಿಕ ಮಹತ್ವ
ಚಿನ್ನದ ಸಂಚಯ ಎಂದರೆ ವಿಶ್ವದಾದ್ಯಂತ ರಾಷ್ಟ್ರೀಯ ಕೇಂದ್ರೀಯ ಬ್ಯಾಂಕುಗಳು ಮತ್ತು ಸರ್ಕಾರಗಳು ಸಂಗ್ರಹಿಸಿಡುವ ಚಿನ್ನದ ಪ್ರಮಾಣ. ಈ ಮೀಸಲು ನಿಧಿಯು ಒಂದು ದೇಶದ ಆರ್ಥಿಕ ಸುರಕ್ಷತಾ ಪರದೆಯಾಗಿ ಕಾರ್ಯ ನಿರ್ವಹಿಸುತ್ತದೆ. ಇದು ರಾಷ್ಟ್ರೀಯ ಕರೆನ್ಸಿಯ ಮೌಲ್ಯಕ್ಕೆ ಬೆಂಬಲ ನೀಡುವುದಲ್ಲದೆ, ಆರ್ಥಿಕ ಅಸ್ಥಿರತೆಯ ಸಂದರ್ಭಗಳಲ್ಲಿ ರಕ್ಷಣಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ. ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಉಂಟಾದಾಗ ಅಥವಾ ಹಣದುಬ್ಬರವು ಹೆಚ್ಚಾದಾಗ, ಚಿನ್ನವು ಅತ್ಯಂತ ವಿಶ್ವಾಸಾರ್ಹ ಆಸ್ತಿಯಾಗಿ ಹೊರಹೊಮ್ಮುತ್ತದೆ. ಇತಿಹಾಸದುದ್ದಕ್ಕೂ ಚಿನ್ನವನ್ನು ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಮೌಲ್ಯದ ಸುರಕ್ಷಿತ ಸಂಗ್ರಹವಾಗಿ ನೋಡಲಾಗಿದೆ.
ಮೌಲ್ಯದ ನಿಯಮ: ಒಂದು ಮಾರ್ಕ್ಸ್ ವಾದಿ ದೃಷ್ಟಿಕೋನ
ಬಂಡವಾಳಶಾಹಿ ಆರ್ಥಿಕತೆಯ ಮೂಲಭೂತ ತತ್ವಗಳನ್ನು ಅರ್ಥಮಾಡಿಕೊಳ್ಳದೆ ಈ ಬೆಲೆ ಏರಿಕೆಯನ್ನು ವಿಶ್ಲೇಷಿಸುವುದು ಅಸಾಧ್ಯ. ಮಹಾನ್ ಚಿಂತಕ ಕಾರ್ಲ್ ಮಾರ್ಕ್ಸ್ ವಿವರಿಸಿದ ‘ಮೌಲ್ಯದ ನಿಯಮ’ (Law of Value) ಇಲ್ಲಿ ಪ್ರಮುಖವಾಗುತ್ತದೆ. ಮಾರ್ಕ್ಸ್ ಪ್ರಕಾರ, ಯಾವುದೇ ಒಂದು ಸರಕಿನ ಮೌಲ್ಯವು ಅದರ ಬೆಲೆ ಅಥವಾ ಉಪಯುಕ್ತತೆಯಿಂದ ನಿರ್ಧರಿಸಲ್ಪಡುವುದಿಲ್ಲ; ಬದಲಿಗೆ ಅದರ ಉತ್ಪಾದನೆಗೆ ಅಗತ್ಯವಾದ ‘ಸರಾಸರಿ ಅವಶ್ಯಕ ಸಾಮಾಜಿಕ ಶ್ರಮದ ಸಮಯ’ದಿಂದ ನಿರ್ಧರಿಸಲ್ಪಡುತ್ತದೆ.
ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಹಣವು ಒಂದು ವಿಶೇಷ ಸರಕಾಗಿದ್ದು, ಇದು ಇತರ ಎಲ್ಲಾ ಸರಕುಗಳ ಮೌಲ್ಯವನ್ನು ಅಳೆಯುವ ಸಾರ್ವತ್ರಿಕ ಸಮಬೆಲೆಯ ಸಾಧನವಾಗಿ ಕಾರ್ಯ ನಿರ್ವಹಿಸುತ್ತದೆ. ಮಾರ್ಕ್ಸ್ ತಮ್ಮ ‘ದಾಸ್ ಕ್ಯಾಪಿಟಲ್’ ಕೃತಿಯಲ್ಲಿ ಸ್ಪಷ್ಟಪಡಿಸಿದಂತೆ, ಹಣವು ಸ್ವತಃ ಒಂದು ಸರಕಾಗಿದ್ದು (ಐತಿಹಾಸಿಕವಾಗಿ ಚಿನ್ನ ಅಥವಾ ಬೆಳ್ಳಿ), ಇದು ಇತರ ಸರಕುಗಳ ವಿನಿಮಯ ಮೌಲ್ಯವನ್ನು ಪ್ರತಿನಿಧಿಸುತ್ತದೆ. ಫ್ರೆಡ್ರಿಕ್ ಎಂಗೆಲ್ಸ್ ವಿವರಿಸುವಂತೆ, ವರ್ಗ ಸಮಾಜದಲ್ಲಿ ಶ್ರಮದ ವಿಭಜನೆ ಹೆಚ್ಚಾದಂತೆ ಮತ್ತು ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳದೆ ಕೇವಲ ವಿನಿಮಯದಲ್ಲಿ ತೊಡಗಿಸಿಕೊಳ್ಳುವ ‘ವರ್ತಕ ವರ್ಗ’ದ ಉದಯದೊಂದಿಗೆ ಹಣ ಮತ್ತು ನಾಣ್ಯಗಳ ಬಳಕೆ ಅನಿವಾರ್ಯವಾಯಿತು. ಬಂಡವಾಳಶಾಹಿ ವ್ಯವಸ್ಥೆಯು ಹೆಚ್ಚು ಸಂಕೀರ್ಣಗೊಂಡಂತೆ, ಹಣವು ತನ್ನದೇ ಆದ ತರ್ಕವನ್ನು ಬೆಳೆಸಿಕೊಳ್ಳುತ್ತದೆ ಮತ್ತು ಜೀವನದ ಪ್ರತಿಯೊಂದು ಕ್ಷೇತ್ರವನ್ನೂ ತನ್ನ ಕಠೋರ ನಿಯಮಗಳಿಂದ ನಿಯಂತ್ರಿಸುತ್ತದೆ.
ಚಿನ್ನದ ಬೆಲೆ ಏರಿಕೆಗೆ ಪ್ರೇರಕವಾಗಿರುವ ಜಾಗತಿಕ ಅಂಶಗಳು
* ಆರ್ಥಿಕ ಅಸ್ಥಿರತೆ ಮತ್ತು ಹಣದುಬ್ಬರ:
ಪ್ರಸ್ತುತ ಜಗತ್ತು ‘ಫಿಯಟ್ ಕರೆನ್ಸಿ’ (Fiat currency) ವ್ಯವಸ್ಥೆಯ ಮೇಲೆ ಅವಲಂಬಿತವಾಗಿದೆ. ಇದು ಯಾವುದೇ ಭೌತಿಕ ಸರಕಿನ (ಚಿನ್ನದಂತಹ) ಬೆಂಬಲವಿಲ್ಲದ ಹಣವಾಗಿದೆ. ಅಂದರೆ, ಇದು ಕೇವಲ ಜನರು ಸರ್ಕಾರದ ಸ್ಥಿರತೆಯ ಮೇಲಿಟ್ಟ ನಂಬಿಕೆಯ ಮೇಲಾಧಾರಿತವಾಗಿದ್ದು, ಕಾನೂನುಬದ್ಧವಾಗಿದೆ. ಆರ್ಥಿಕ ಅನಿಶ್ಚಿತತೆಯ ಸಮಯದಲ್ಲಿ ಹೂಡಿಕೆದಾರರು ಕರೆನ್ಸಿ ಅಪಮೌಲ್ಯದ ವಿರುದ್ಧ ರಕ್ಷಣೆಯಾಗಿ ಚಿನ್ನವನ್ನು ಆಶ್ರಯಿಸುತ್ತಾರೆ.
* ಭೌಗೋಳಿಕ ರಾಜಕೀಯ ಉದ್ವಿಗ್ನತೆ:
21ನೇ ಶತಮಾನವು ಭೀಕರ ಯುದ್ಧಗಳು ಮತ್ತು ಸಂಘರ್ಷಗಳಿಗೆ ಸಾಕ್ಷಿಯಾಗಿದೆ. ಪೂರ್ವ ಯುರೋಪ್ (ಉಕ್ರೇನ್), ಮಧ್ಯಪ್ರಾಚ್ಯದಲ್ಲಿನ ಸಂಘರ್ಷಗಳು ಮತ್ತು ಅಮೆರಿಕ-ಚೀನಾ ನಡುವಿನ ವ್ಯಾಪಾರ ಯುದ್ಧಗಳು ಮಾರುಕಟ್ಟೆಯಲ್ಲಿ ಭಯವನ್ನು ಸೃಷ್ಟಿಸಿವೆ. ಇಂತಹ ಸಮಯದಲ್ಲಿ ಹೂಡಿಕೆದಾರರು ರಾಜಕೀಯ ಅಪಾಯಗಳಿಂದ ಮುಕ್ತವಾಗಿರುವ ಚಿನ್ನದಂತಹ ಸುರಕ್ಷಿತ ಆಸ್ತಿಗಳಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಾರೆ. ಪ್ರಬಲ ಸಾಮ್ರಾಜ್ಯಶಾಹಿ ರಾಷ್ಟ್ರಗಳು ‘ದ್ರವಚಿನ್ನ’ (ತೈಲ) ಮಾತ್ರವಲ್ಲದೆ, ಚಿನ್ನದ ಮೇಲೆ ನಿಯಂತ್ರಣ ಸಾಧಿಸಲು ಇತರ ದೇಶಗಳ ಮೇಲೆ ಆಕ್ರಮಣ ಮಾಡುವ ಅಥವಾ ಕೈಗೊಂಬೆ ಸರ್ಕಾರಗಳನ್ನು ಸ್ಥಾಪಿಸುವ ಪ್ರಯತ್ನ ಮಾಡುತ್ತಿರುವುದು ಜಾಗತಿಕ ರಾಜಕೀಯದಲ್ಲಿ ಪ್ರತಿಫಲಿಸುತ್ತಿದೆ.
* ಅಮೆರಿಕದ ಡಾಲರ್ ಮೇಲಿನ ಅನಿಶ್ಚಿತತೆ: ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ಅಧಿಕಾರಕ್ಕೆ ಬಂದ ಕಾಲದಿಂದಲೂ ಜಾರಿಯಲ್ಲಿರುವ ಅನಿರೀಕ್ಷಿತ ಆರ್ಥಿಕ ನೀತಿಗಳು ಡಾಲರ್‌ನ ವಿಶ್ವಾಸಾರ್ಹತೆಯನ್ನು ಕುಗ್ಗಿಸಿವೆ. ಇದು ವಿದೇಶೀ ವಿನಿಮಯಕ್ಕಾಗಿ ಡಾಲರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಅದರ ಬದಲು ಚಿನ್ನವನ್ನು ಸಂಗ್ರಹಿಸಲು ಅನೇಕ ದೇಶಗಳನ್ನು ಪ್ರೇರೇಪಿಸುವಂತೆ ಮಾಡಿದೆ.
ಕೇಂದ್ರೀಯ ಬ್ಯಾಂಕುಗಳ ಖರೀದಿ ಅಬ್ಬರ
ವಿಶ್ವದಾದ್ಯಂತ ಕೇಂದ್ರೀಯ ಬ್ಯಾಂಕುಗಳು ಅಭೂತಪೂರ್ವ ಮಟ್ಟದಲ್ಲಿ ಚಿನ್ನವನ್ನು ಖರೀದಿಸುತ್ತಿವೆ. 2022 ಮತ್ತು 2024ರ ನಡುವೆ ಈ ಬ್ಯಾಂಕುಗಳು ವಾರ್ಷಿಕವಾಗಿ 1,000 ಟನ್‌ಗಳಿಗಿಂತ ಹೆಚ್ಚು ಚಿನ್ನವನ್ನು ಸಂಗ್ರಹಿಸಿವೆ. ಇದು ಕಳೆದ ದಶಕದ ಸರಾಸರಿಗಿಂತ ಎರಡು ಪಟ್ಟು ಹೆಚ್ಚು. ವಿಶ್ವ ಚಿನ್ನದ ಮಂಡಳಿಯ (World Gold Council) 2025ರ ಸಮೀಕ್ಷೆಯ ಪ್ರಕಾರ, 95% ಕೇಂದ್ರೀಯ ಬ್ಯಾಂಕುಗಳು ಮುಂದಿನ ದಿನಗಳಲ್ಲಿ ಚಿನ್ನದ ಮೀಸಲನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಯಲ್ಲಿವೆ. ಚೀನಾ, ರಷ್ಯಾ, ಟರ್ಕಿ, ಭಾರತ ಮತ್ತು ಪೋಲೆಂಡ್ ಈ ಸಂಗ್ರಹದಲ್ಲಿ ಮುಂಚೂಣಿಯಲ್ಲಿವೆ.
ಈ ರೀತಿ ಸರ್ಕಾರಗಳ ಕೇಂದ್ರೀಯ ಬ್ಯಾಂಕುಗಳೇ ಚಿನ್ನವನ್ನು ಖರೀದಿಸಿರುವುದು ಅದರ ಬಗ್ಗೆ ಹೂಡಿಕೆದಾರರಲ್ಲಿ ಹೆಚ್ಚಿನ ವಿಶ್ವಾಸ ಮೂಡಿಸಿದೆ. ಒಂದೆಡೆ ಷೇರು ಮಾರುಕಟ್ಟೆಯ ತಲ್ಲಣ, ಇನ್ನೊಂದೆಡೆ ಚಿನ್ನದ ಮೇಲೆ ಹೆಚ್ಚಿದ ವಿಶ್ವಾಸ, ಚಿನ್ನಕ್ಕೆ ಬೇಡಿಕೆಯನ್ನು ವೃದ್ಧಿಸಿವೆೆ. 2022ರಿಂದ ಈ ಬೇಡಿಕೆ ನಿರಂತರವಾಗಿ ಏರುಗತಿಯಲ್ಲಿದೆ. ಇದರೊಂದಿಗೆ ಎಐ ತಂತ್ರಜ್ಞಾನದ ಅಭಿವೃದ್ಧಿಗೆ ಬೇಕಾದ ವಿವಿಧ ಬಗೆಯ ಚಿಪ್‌ಗಳ ಉತ್ಪಾದನೆ ಹೆಚ್ಚಳಗೊಂಡಿದೆ. ಇವುಗಳ ತಯಾರಿಗೆ ಚಿನ್ನದ ಅಗತ್ಯವಿದ್ದು, ಇಲ್ಲಿಯೂ ಚಿನ್ನದ ಬಳಕೆ ಹೆಚ್ಚಾಗಿದೆ. ಹೀಗೆ 2019ರಲ್ಲಿ ಜಾಗತಿಕವಾಗಿ ಸುಮಾರು 4,350 ಟನ್ ಚಿನ್ನ ಖರೀದಿಯಾಗಿದ್ದರೆ, 2025ರಲ್ಲಿ ಅದು ಮೊದಲ ಬಾರಿಗೆ 5,000 ಟನ್ ದಾಟಿದೆ. 2019ರಲ್ಲಿ 10ಗ್ರಾಂ ಚಿನ್ನಕ್ಕೆ ಸುಮಾರು ರೂ. 35,000 ಬೆಲೆ ಇದ್ದರೆ, 2025ರ ಕೊನೆಗೆ ಇದು ರೂ.1,35,000 ಮುಟ್ಟಿತು.
ಭಾರತ ಮತ್ತು ರಿಸರ್ವ್ ಬ್ಯಾಂಕ್‌ನ (RBI) ಹೊಸ ಕಾರ್ಯತಂತ್ರ
ಭಾರತದ ಆರ್ಥಿಕತೆಯಲ್ಲಿ ಚಿನ್ನದ ಪಾತ್ರ ಬಹಳ ದೊಡ್ಡದು. ಇತ್ತೀಚಿನ ವರ್ಷಗಳಲ್ಲಿ ಭಾರತದ ರಿಸರ್ವ್ ಬ್ಯಾಂಕ್ ತನ್ನ ಚಿನ್ನದ ಸಂಗ್ರಹಣೆಯ ಕಾರ್ಯತಂತ್ರವನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದೆ. 2025ರ ಮಾರ್ಚ್ ನಲ್ಲಿ 77 ಬಿಲಿಯನ್ ಡಾಲರ್ ಇದ್ದ ಭಾರತದ ಚಿನ್ನದ ಸಂಚಿತ ಮೌಲ್ಯವು 2026ರ ಜನವರಿ ವೇಳೆಗೆ 123 ಬಿಲಿಯನ್ ಡಾಲರ್‌ಗೆ ಏರಿದೆ. ಇದು ಕೇವಲ ಒಂದು ವರ್ಷದ ಒಳಗಿನ ಅವಧಿಯಲ್ಲಿ ಸುಮಾರು 60% ರಷ್ಟು ಭಾರಿ ಹೆಚ್ಚಳವಾಗಿದೆ. ಪ್ರಸ್ತುತ ಭಾರತದ ವಿದೇಶಿ ವಿನಿಮಯ ಮೀಸಲಿನಲ್ಲಿ ಚಿನ್ನದ ಪಾಲು 15% ಕ್ಕೆ ಏರಿದೆ.
ಇನ್ನೊಂದು ಗಮನಾರ್ಹ ಬೆಳವಣಿಗೆಯೆಂದರೆ ವಿದೇಶಗಳಲ್ಲಿ (ವಿಶೇಷವಾಗಿ ಬ್ಯಾಂಕ್ ಆಫ್ ಇಂಗ್ಲೆಂಡ್‌ನಲ್ಲಿ) ಸಂಗ್ರಹಿಸಿಟ್ಟಿದ್ದ ಚಿನ್ನವನ್ನು ಭಾರತಕ್ಕೆ ಮರಳಿ ತರುತ್ತಿರುವುದು (repatriation). 2025ರ ಅಂತ್ಯದ ವೇಳೆಗೆ ಭಾರತದ 65% ಕ್ಕಿಂತ ಹೆಚ್ಚು ಚಿನ್ನದ ಸಂಚಯವನ್ನು ದೇಶದೊಳಗಿನ ತಾಣಗಳಲ್ಲೇ ಸುರಕ್ಷಿತವಾಗಿ ಇರಿಸಲಾಗಿದೆ. 2022ರಲ್ಲಿ ಉಕ್ರೇನ್ ಯುದ್ಧದ ಕಾರಣ ನೀಡಿ ಜಿ 7 ರಾಷ್ಟ್ರಗಳು ರಷ್ಯಾದ ವಿದೇಶಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡ ನಂತರ, “ಚಿನ್ನವು ನಿಮ್ಮ ಕೈಯಲ್ಲಿ ಇಲ್ಲದಿದ್ದರೆ ಅದು ನಿಮ್ಮದಲ್ಲ” ಎಂಬ ಕಟು ಸತ್ಯ ದೇಶಗಳಿಗೆ ಮನವರಿಕೆಯಾಗಿದೆ. ಇದು ‘ಡಿ-ಡಾಲರೈಸೇಶನ್’ (De-dollarisation) ಪ್ರಕ್ರಿಯೆಯ ಭಾಗವಾಗಿದ್ದು, ಅಮೆರಿಕದ ಡಾಲರ್ ಮತ್ತು ಅದರ ನಿರ್ಬಂಧಗಳಿಂದ ಮುಕ್ತಿ ಪಡೆಯುವ ತಂತ್ರವಾಗಿದೆ.
ಮಿತಿಗಳು ಮತ್ತು ಅಪಾಯಗಳು
ಚಿನ್ನದ ಸಂಗ್ರಹಣೆಯು ತನ್ನದೇ ಆದ ಮಿತಿಗಳನ್ನು ಹೊಂದಿದೆ. ಮೊದಲನೆಯದಾಗಿ, ಚಿನ್ನವು ಷೇರುಗಳು ಅಥವಾ ಬಾಂಡ್‌ಗಳಂತೆ ಯಾವುದೇ ಬಡ್ಡಿ ಆದಾಯವನ್ನು ನೀಡುವುದಿಲ್ಲ. ಎರಡನೆಯದಾಗಿ, ಭೌತಿಕ ಚಿನ್ನವನ್ನು ಸುರಕ್ಷಿತವಾಗಿಡಲು ಭಾರಿ ವಿಮೆ ಮತ್ತು ಸಂಗ್ರಹಣಾ ವೆಚ್ಚಗಳು ತಗಲುತ್ತವೆ. ಭಾರತವು ತನ್ನ ವಾರ್ಷಿಕ ಬೇಡಿಕೆಯ 90% ರಿಂದ 95% ರಷ್ಟು ಚಿನ್ನವನ್ನು ಆಮದಿನ ಮೂಲಕವೇ ಪೂರೈಸಿಕೊಳ್ಳುವುದರಿಂದ, ಅಂತರರಾಷ್ಟ್ರೀಯ ಬೆಲೆ ಏರಿಕೆಯು ನಮ್ಮ ಆಮದು ವೆಚ್ಚವನ್ನು ಹೆಚ್ಚಿಸಿ ಆರ್ಥಿಕತೆಯ ಮೇಲೆ ಒತ್ತಡ ಹೇರುತ್ತದೆ.
ತೀರ್ಮಾನ: ಬಂಡವಾಳಶಾಹಿ ವ್ಯವಸ್ಥೆಯ ಬಿಕ್ಕಟ್ಟು
ಅಂತಿಮವಾಗಿ, ಚಿನ್ನದ ಬೆಲೆ ಏರಿಕೆ, ಕರೆನ್ಸಿ ಏರಿಳಿತಗಳು, ಜಾಗತಿಕ ಯುದ್ಧದ ಭೀತಿ ಮತ್ತು ಸಾಮಾನ್ಯ ಜನರ ಆದಾಯದ ಕುಸಿತ -ಇವೆಲ್ಲವೂ ತೀವ್ರ ಬಿಕ್ಕಟ್ಟಿನಲ್ಲಿರುವ ಮತ್ತು ವಿನಾಶದ ಅಂಚಿನಲ್ಲಿರುವ ಬಂಡವಾಳಶಾಹಿ ವ್ಯವಸ್ಥೆಯ ಲಕ್ಷಣಗಳಾಗಿವೆ. ಬಂಡವಾಳಶಾಹಿ ವ್ಯವಸ್ಥೆಯು ಇಂದು ಅತ್ಯಂತ ಕೊಳೆತ ಮತ್ತು ಅಧೋಗತಿಯ ಹಂತವನ್ನು ತಲುಪಿದೆ. ಒಂದು ಕಡೆ ಬೆರಳೆಣಿಕೆಯಷ್ಟು ಶತಕೋಟ್ಯಧಿಪತಿಗಳ ಬಳಿ ಸಂಪತ್ತು ಕೇಂದ್ರೀಕೃತವಾಗುತ್ತಿದ್ದರೆ, ಇನ್ನೊಂದೆಡೆ ಸಾಮಾನ್ಯ ಜನರು ಬಡತನದಲ್ಲಿ ನರಳುತ್ತಿದ್ದಾರೆ.
ಈ ಆರ್ಥಿಕ ವಿದ್ಯಮಾನಗಳು ಬಂಡವಾಳಶಾಹಿ ವ್ಯವಸ್ಥೆಯು ಸೃಷ್ಟಿಸಿರುವ ಅನಿಶ್ಚಿತತೆಯ ಫಲಿತಾಂಶವಾಗಿವೆ. ಮಾನವ ಜೀವನದ ಅಗತ್ಯತೆಗಳಿಗಿಂತ ಲಾಭಕ್ಕೆ ಆದ್ಯತೆ ನೀಡುವ ಈ ವ್ಯವಸ್ಥೆಯು ಇಂದು ತನ್ನನ್ನು ತಾನು ರಕ್ಷಿಸಿಕೊಳ್ಳಲು ಚಿನ್ನದ ಹಿಂದೆ ಓಡುತ್ತಿದೆ. ಶ್ರೇಷ್ಠ ಚಿಂತಕರಾದ ಮಾರ್ಕ್ಸ್ ಮತ್ತು ಲೆನಿನ್ ವಿವರಿಸಿದಂತೆ, ಈ ಶೋಷಕ ವ್ಯವಸ್ಥೆಯನ್ನು ಕ್ರಾಂತಿಕಾರಿ ಬದಲಾವಣೆಯ ಮೂಲಕ ಕಿತ್ತೊಗೆಯದ ಹೊರತು ಜನಸಾಮಾನ್ಯರಿಗೆ ಈ ಆರ್ಥಿಕ ಸಂಕೋಲೆಗಳಿಂದ ಮುಕ್ತಿ ಸಿಗುವುದಿಲ್ಲ.