Loading..

ಇಂಡಿಯಾ AI ಇಂಪ್ಯಾಕ್ಟ್ ಸಮ್ಮಿಟ್ 2026: ವಿಶ್ವದ ಎದುರು ಭಾರತ ನಗೆಪಾಟಲು

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ‘ಇಂಡಿಯಾ AI ಮಿಷನ್’ ಅಡಿಯಲ್ಲಿ, ಕಳೆದ ಫೆ. 16ರಿಂದ 21 ರವರೆಗೆ ನವದೆಹಲಿಯ ಭಾರತ್ ಮಂಡಪಮ್‌ದಲ್ಲಿ ಇಂಡಿಯಾ ಇಂಪ್ಯಾಕ್ಟ್ ಶೃಂಗ ೨೦೨೬ನ್ನು ಆಯೋಜಿಸಿತ್ತು. ಈ ಶೃಂಗವು AII ಕ್ಷೇತ್ರದಲ್ಲಿ ಭಾರತವು ಮಾಡಿರುವ ಗಮನಾರ್ಹ ಸಾಧನೆಗಳ ಪ್ರದರ್ಶನ ಎಂದೆಲ್ಲಾ ತಮ್ಮ ‘ಮನದ ಮಾತಿ’ನಲ್ಲಿ ಪ್ರಧಾನಿ ಮೋದಿ ಆಗ ಬಣ್ಣಿಸಿದ್ದರು. ಇಂತಹ ಅಬ್ಬರದ ಆಕಾಂಕ್ಷೆಯನ್ನು ಹೊತ್ತಿದ್ದಂತೆ ಕಂಡಿದ್ದ ಆ ಶೃಂಗದಲ್ಲಿ ನಡೆದದ್ದಾರೂ ಏನು?
ಆಭಾಸಗಳ ಶೃಂಗ
ಪ್ರಧಾನಿಯ ಅಬ್ಬರದ ನಡುವೆ, ಗ್ರೇಟರ್ ನೋಯ್ಡಾದಲ್ಲಿರುವ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯದ ಸಂವಹನ ವಿಭಾಗದ ಬೋಧಕಿ ನೇಹಾ ಸಿಂಗ್, ಶೃಂಗದಲ್ಲಿ ತಮ್ಮ ವಿವಿಯ ಮಳಿಗೆಯಲ್ಲಿ ಪ್ರದರ್ಶನಕ್ಕಿಟ್ಟಿದ್ದ ನಾಲ್ಕು ಕಾಲಿನ ರೊಬೋಟ್‌ಅನ್ನು ತೋರುತ್ತಾ ಬಹಳ ಹೆಮ್ಮೆಯಿಂದ “ಇದನ್ನು ನಮ್ಮ ವಿವಿಯ ಸೆಂಟರ್ ಆಫ್ ಎಕ್ಸೆಲೆನ್ಸ್(ಸಿಓಇ) ಅಭಿವೃದ್ಧಿಪಡಿಸಿದೆ ಮತ್ತು ಅದರ ಹೆಸರು ‘ಓರಿಯನ್’” ಎಂದು ಬೀಗಿದರು. ಇದು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ನಮ್ಮ ವಿವಿಯು ದಾಖಲಿಸಿರುವ ಸ್ವಂತ ಸಾಧನೆ ಎಂದರು. ಇದಾದ ಕೆಲವೇ ಘಂಟೆಗಳಲ್ಲಿ, ಎಕ್ಸ್ (ಟ್ವಿಟರ್) ಬಳಕೆದಾರರು ಈ ರೊಬೋಟ್ ಚೀನಾದ ಯೂನಿಟ್ರಿ ರೋಬೋಟಿಕ್ಸ್ ಕಂಪನಿಯ ಉತ್ಪನ್ನವಾದ ‘ಯೂನಿಟ್ರಿ ಗೋ2′ ಎಂದು, ಇದು ಮಾರುಕಟ್ಟೆಯಲ್ಲಿ ಸುಮಾರು 2-3 ಲಕ್ಷ ರೂಪಾಯಿಗಳಿಗೆ ಸುಲಭವಾಗಿ ಲಭ್ಯವಿದೆ ಎಂದು ಪತ್ತೆ ಮಾಡಿದರು. ಅಂದು ಸಂಶಯಕ್ಕೆ ಗುರಿಯಾದದ್ದು ಬರೀ ಆ ರೊಬೋಟ್ ನಾಯಿ ಮಾತ್ರ ಅಲ್ಲ, ಗಾಲ್ಗೋಟಿಯಾಸ್ ವಿವಿಯ ಕ್ಯಾಂಪಸ್‌ನಿಂದ ಪ್ರದರ್ಶಿಸಲ್ಪಟ್ಟಿದ್ದ ಫುಟ್ಬಾಲ್ ಆಡುವ ಡ್ರೋನ್ ಕೂಡ ಒಂದು. ಅದನ್ನು ಸ್ವದೇಶಿ ಉತ್ಪನ್ನ ಎಂದು ವಿವಿಯು ಪ್ರಸ್ತುತಪಡಿಸಿತ್ತು. ಆದರೆ, ದಕ್ಷಿಣ ಕೊರಿಯಾದ ಕಂಪನಿ ಹೆಲ್ಸೆಲ್ ಗ್ರೂಪ್ ವಿನ್ಯಾಸ ಮಾಡಿ, ಭಾರತದಲ್ಲಿ ರೂ.40,000ಕ್ಕೆ ಮಾರಾಟವಾಗುವ ‘ಸ್ಟ್ರೆೈಕರ್ ವಿ3 ಎಆರ್‌ಎಫ್’ ಮಾದರಿಯನ್ನು ಅತಿ ಹತ್ತಿರದಿಂದ ಹೋಲುತ್ತದೆ ಎಂಬ ಆರೋಪವನ್ನು ಅದು ಹೊತ್ತಿತ್ತು. ಸಾಮಾಜಿಕ ಜಾಲತಾಣದಲ್ಲಿ ಇವೆಲ್ಲ ದೊಡ್ಡ ಪ್ರಮಾಣದ ಅಪಹಾಸ್ಯಕ್ಕೆ ಗುರಿಯಾದವು. ಮುಖಭಂಗದಿಂದ ಬಚಾವಾಗಲು, ಪ್ರದರ್ಶನ ಮಳಿಗೆಯನ್ನು ಖಾಲಿ ಮಾಡಲು ಶೃಂಗದ ಆಯೋಜಕರು ವಿವಿಗೆ ಸೂಚಿಸಿದ್ದು, ‘ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ’ ಆಯಿತು. ಗಾಯ ವಾಸಿಯಾದರೂ ಕಲೆ ಉಳಿಯುವಂತೆ ಆ ಘಟನೆಯಿಂದಾದ ಅವಮಾನವು ಶಾಶ್ವತವಾಗಿ ದೇಶದ ಘನತೆಗೆ ಘಾಸಿ ಮಾಡಿದ್ದಂತೂ ಸತ್ಯ!
ಗಾಲ್ಗೋಟಿಯಾಸ್‌ನ ‘ಸಾಧನೆ’ಗಳನೇಕ!
ಇದೇ ವಿವಿಯಲ್ಲಿ ಈ ಹಿಂದೆ ನಡೆದಿದ್ದ ಅನೇಕ ತಲೆತಗ್ಗಿಸುವಂತಹ ಘಟನೆಗಳು ಆಗ ಮತ್ತೊಮ್ಮೆ ಬೆಳಕಿಗೆ ಬಂದವು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌ಗಳಾಗಿ ಹರಿದಾಡಿದವು. ಕೊರೋನಾ ಸಾಂಕ್ರಾಮಿಕದ ಸಮಯದಲ್ಲಿ, ತಟ್ಟೆ ಬಡಿಯುವುದರಿಂದ ಮತ್ತು ಜಾಗಟೆ ಬಾರಿಸುವುದರಿಂದ ಹೊಮ್ಮುವ ಕಂಪನಗಳು ಕೊರೋನಾ ವೈರಾಣುವನ್ನು ಕೊಲ್ಲುತ್ತವೆ ಎಂದು ಗಾಲ್ಗೋಟಿಯಾಸ್ ವಿವಿಯ ಕೆಲ ಅಧ್ಯಾಪಕರು ಪ್ರಬಂಧವೊಂದನ್ನು ಪ್ರಕಟಿಸಿ ವ್ಯಾಪಕವಾಗಿ ಅಪಹಾಸ್ಯಕ್ಕೊಳಗಾದದ್ದು, ಬಹುಶಃ ಅದರ ಆಧಾರದ ಮೇಲೆಯೇ ಪ್ರಧಾನಿ ಮೋದಿ ಲಾಕ್‌ಡೌನ್ ಸಮಯದಲ್ಲಿ ಲೋಹದ ಪಾತ್ರೆಗಳನ್ನು ಬಡಿಯಲು ಕರೆ ನೀಡಿದ್ದರೇನೊ ಎಂಬಂತಹದ್ದು, 2024ರಲ್ಲಿ, ನವದೆಹಲಿಯಲ್ಲಿ ‘ನಗರ ನಕ್ಸಲಿ’ಗಳು ಎಂದು ಕೆಲ ಬುದ್ಧಿಜೀವಿಗಳನ್ನು ಗುರಿಯಾಗಿಸಿಕೊಂಡು ನಡೆದ ಸಂಘ ಪರಿವಾರ ಪ್ರೇರಿತ ರಾಜಕೀಯ ಪ್ರತಿಭಟನೆಯಲ್ಲಿ ಗಾಲ್ಗೋಟಿಯಾಸ್‌ದ ಅಮಾಯಕ ವಿದ್ಯಾರ್ಥಿಗಳನ್ನು ದೂಡಿ, ಪತ್ರಕರ್ತರು ಅವರು ಹಿಡಿದಿದ್ದ ಫಲಕಗಳಲ್ಲಿ ಇದ್ದ ಘೋಷಣೆಗಳೇನು ಎಂದು ಕೇಳಿದಾಗ ಹಿಂದುಮುಂದು ತಿಳಿಯದ ಅವರು ಅದನ್ನು ಉಚ್ಚರಿಸಲೂ ಸಹ ತಡಬಡಾಯಿಸಿದ್ದೂ – ಹೀಗೆ ಹಲವು ಘಟನೆಗಳ ವಿಡಿಯೋ ಕ್ಲಿಪ್‌ಗಳ ಜೊತೆಯಲ್ಲಿ ಸಹಸ್ರಾರು ಮೀಮ್‌ಗಳು ವೈರಲ್ ಆದವು.
ವಿವಾದದ ಛಾಯೆಯಡಿಯಲ್ಲಿಯೇ ಸ್ಥಾಪನೆಯಾದ ವಿವಿ
ರೊಬೋಟ್‌ಗಳು ಮತ್ತು ಡ್ರೋನ್‌ಗಳು ಹಾಗಿರಲಿ, ಈ ಸಂಸ್ಥೆಯ ಅಡಿಪಾಯವೇ ವಿವಾದದ ಸುಳಿಯಲ್ಲಿತ್ತು. ವಿವಿಯ ಸಂಸ್ಥಾಪಕ ಸುನೀಲ್ ಗಾಲ್ಗೋಟಿಯಾ ರೂ.120 ಕೋಟಿ ಸಾಲ ಪಡೆಯಲು ನಕಲಿ ದಾಖಲೆಗಳನ್ನು ಬಳಸಿದ್ದಾರೆ ಎಂಬ ಆರೋಪ ಅವುಗಳಲ್ಲಿ ಒಂದು. ಆದರೆ, ಪ್ರಧಾನಿ ಮೋದಿಯ ಆಶೀರ್ವಾದವನ್ನು ಪಡೆಯುವಲ್ಲಿ ಇವ್ಯಾವುವೂ ಅವರಿಗೆ ಅಡ್ಡಿಯಾಗಲಿಲ್ಲ. ಮೋದಿಯವರು ಈ ಹಿಂದೆ ಗಾಲ್ಗೋಟಿಯಾಸ್ ವಿವಿಯನ್ನು ಗುರುತಿಸಿ, ಡಿಕ್ಯೂ ಐಸಿಟಿ ಎಂಬ ಪ್ರಶಸ್ತಿಯನ್ನು ನೀಡಿದ್ದಲ್ಲದೆ, ಅದನ್ನು “ಅತ್ಯುತ್ತಮ” ಖಾಸಗಿ ವಿಶ್ವವಿದ್ಯಾಲಯ ಎಂದು ಬಣ್ಣಿಸಿದ್ದ ವರದಿಗಳಿವೆ. ವಿಶ್ವವಿದ್ಯಾಲಯವು ಪ್ರಧಾನಿ ಮೋದಿಯನ್ನು ಹಾಡಿ ಹೊಗಳುವ ಪ್ರದರ್ಶನಗಳನ್ನು ಆಯೋಜಿಸಿದ್ದಕ್ಕೂ ಹೆಸರಾಗಿದೆ. ತನ್ನ ಬೋಧನಾ ಮತ್ತು ಸಂಶೋಧನಾ ಕಾರ್ಯಗಳು ಪ್ರಧಾನಿ ಮೋದಿಯ ‘ಆತ್ಮನಿರ್ಭರ ಭಾರತ’ದ ಕನಸನ್ನು ಆಧರಿಸಿವೆ ಎಂದು ಗಾಲ್ಗೋಟಿಯಾಸ್ ವಿವಿ ತನ್ನ ಡೋಲನ್ನು ತಾನೇ ಬಡಿದುಕೊಳ್ಳುತ್ತದೆ.
ಹಾಸ್ಯಾಸ್ಪದ ಮಾತು
ಇಂತಹ ಸಂಸ್ಥೆಯು ಈ ಬಾರಿ ತನ್ನ ಸುಳ್ಳಿನ ಕುಣಿಕೆಯಲ್ಲಿ ತಾನೇ ಸಿಲುಕಿಕೊಂಡಾಗ, ಇಂತಹ ಸಂದರ್ಭಗಳಿಗೆಂದೇ ತಾನು ಸದಾ ಸಿದ್ಧವಾಗಿರಿಸಿಕೊಂಡಿರುವ ತನ್ನ ಹಳೆಯ ಸೂತ್ರವನ್ನೇ ಅದು ಬಳಸಿ ದಾಳ ಉರುಳಿಸಿತು. ಆಡಿದ ಮಾತನ್ನು “ಬಾಯ್ತಪ್ಪಿ ನುಡಿದದ್ದು”, “ತಪ್ಪು ತಿಳುವಳಿಕೆ” ಎಂದು ಸಮಜಾಯಿಷಿ ನೀಡಿತು. ನಂತರ “ಗೊಂದಲಕ್ಕಾಗಿ ಕ್ಷಮೆ” ಯಾಚಿಸಿತು ಮತ್ತು ಕೊನೆಯಲ್ಲಿ, ನೇಹಾ ಸಿಂಗ್ ಮೇಲೆ ಗೂಬೆ ಕೂರಿಸಿ ಕ್ರಮವನ್ನೂ ಜರುಗಿಸಿತು. ಯಾರ ಹೆಸರನ್ನೂ ಹೇಳದೆ, “ಮಳಿಗೆಯಲ್ಲಿದ್ದ ನಮ್ಮ ಪ್ರತಿನಿಧಿಗಳಲ್ಲಿ ಒಬ್ಬರು ಸರಿಯಾದ ಮಾಹಿತಿ ಹೊಂದಿರಲಿಲ್ಲ” ಎಂದು ಸಬೂಬು ನೀಡಿತು. ಆದರೆ ANIIಗೆ ನೀಡಿದ ಹೇಳಿಕೆಯಲ್ಲಿ ನೇಹಾ ಸಿಂಗ್, “ಅದು ನಿಮ್ಮ ನಿಮ್ಮ ದೃಷ್ಟಿಕೋನ! ನಿಮ್ಮ ‘6’ ನನ್ನ ಪಾಲಿಗೆ ‘9′ ಆಗಿ ಕಾಣಿಸಿಬಹುದು,” ಎಂದು ಯಾವುದೋ ವಿಚಿತ್ರವಾದ ನಗೆಪಾಟಲಿನ ಸಮರ್ಥನೆ ನೀಡಿದ್ದೂ ಸಹ ನಡೆದುಹೋಯಿತು. ಜಾಗತಿಕಮಟ್ಟದ ಈ ಪ್ರದರ್ಶನದಲ್ಲಿ ದೇಶದ ಮಾನ ಹರಾಜಾಯಿತು, ಪ್ರಧಾನಿಯ ಪ್ರತಿಷ್ಠೆಯ ಸಂಕೇತವಾಗಿದ್ದ ಈ ಕಾರ್ಯಕ್ರಮದಲ್ಲಿ ಈ ಪರಿಯ ವಂಚನೆಗೆ ಹೇಗೆ ಅವಕಾಶ ದೊರಕಿತು, ಗಾಲ್ಗೋಟಿಯಾಸ್‌ಗೆ ಯೋಗ್ಯತೆಯ ಪ್ರಮಾಣ ನೀಡಿದವರು ಯಾರು, ಆ ವಿವಿಗೆ ಮೇಳದ ಬಾಗಿಲುಗಳನ್ನು ತೆರೆದವರು ಯಾರು ಎಂಬ ಅನೇಕ ಪ್ರಶ್ನೆಗಳಿಗಿನ್ನೂ ಉತ್ತರ ಮಾತ್ರ ದೊರಕಿಲ್ಲ.
ಗಾಲ್ಗೋಟಿಯಾಸ್ -‘ಅಮೃತಕಾಲ’ದ ಉತ್ಪತ್ತಿ
ಮಾಡಿದ ವಂಚಕ ಕೃತ್ಯಕ್ಕಿಂತ ಹೆಚ್ಚಾಗಿ, ವಂಚನೆ ಮಾಡಿ ಸಿಕ್ಕಿಬಿದ್ದಿದ್ದರಿಂದ ಮೋದಿ ಬ್ರಾಂಡ್‌ಗೆ ಧಕ್ಕೆಯಾಯಿತು ಎಂದು ಈಗ ಸರ್ಕಾರ ಮತ್ತು ಅದರ ವಿವಿಧ ಅಂಗಸಂಸ್ಥೆಗಳು ಗಡಿಬಿಡಿಯಿಂದ ಗಾಲ್ಗೋಟಿಯಾಸ್ ಮೇಲೆ ದೋಷಾರೋಪ ಮಾಡಿ, ತಮ್ಮ ಕೈತೊಳೆದುಕೊಳ್ಳಲು ಯತ್ನಿಸುತ್ತಿರುವುದನ್ನು ಕಾಣದಷ್ಟು ಜನರು ಅಮಾಯಕರೇ!
ಆದರೆ ಇದು ಕೇವಲ ಗಾಲ್ಗೋಟಿಯಾಸ್‌ನ ತಪ್ಪೇ? ಕೌರವರ ಜನ್ಮವೇ ನಮ್ಮಲ್ಲಿ ಸ್ಟೆಮ್‌ಸೆಲ್ ತಂತ್ರಜ್ಞಾನ ಗತಕಾಲದಲ್ಲೇ ಇತ್ತು ಎಂಬುದಕ್ಕೆ ಸಾಕ್ಷಿ ಎಂದು ಅಥವಾ ಗಣೇಶನಿಗೆ ಆನೆಯ ತಲೆ ಜೋಡಿಸಿದ್ದು ದೈವಿಕ ಶಸ್ತ್ರಚಿಕಿತ್ಸಕರಿಂದ ನಡೆದ ಮೊದಲ ಅಂಗಾಂಗ ಕಸಿ ಎಂದು ಪ್ರಧಾನಿಯವರೇ ಹೇಳುತ್ತಾ ಪ್ರಚಾರ ಮಾಡುವಾಗ ಇಂತಹ ಖಾಸಗಿ ವಿವಿಗಳಿಂದ ನಾವಿನ್ನೇನನ್ನು ತಾನೇ ನಿರೀಕ್ಷಿಸಲು ಸಾಧ್ಯ? ಪುರಾಣ ಮತ್ತು ಪ್ರಾಯೋಗಿಕವಾಗಿ ಸಾಬೀತಾದ ಸತ್ಯದ ನಡುವಿನ ಗಡಿಯನ್ನು ಇಂದು ಅಳಿಸಿ ಹಾಕಲಾಗುತ್ತಿದೆ. ‘ಚರಂಡಿಯಿಂದ ಹೊರಬರುವ ಅನಿಲವನ್ನು ಬಳಸಿ ಟೀ ತಯಾರಿಸಬಹುದು’ ಎಂದು ಪ್ರಧಾನಿ ಹೇಳುತ್ತಿರುವಾಗ, ವಿವಿಯೊಂದು ಸತ್ಯದ ಕಟ್ಟಳೆಗೆ ಬದ್ಧವಾಗಿರಬೇಕು ಎಂಬ ಮಾತು (ಕು)ತಾರ್ಕಿಕವಲ್ಲವೇ?! ಉನ್ನತ ಶೈಕ್ಷಣಿಕ, ಸಂಶೋಧನಾ ಸಂಸ್ಥೆಗಳಲ್ಲಿ ಪ್ರಾಯೋಗಿಕ ವಿಜ್ಞಾನದ ಸ್ಥಾನವನ್ನು ರಮಣೀಯ ಕಲ್ಪನೆಯು ಆಕ್ರಮಿಸಿಕೊಂಡಾಗ, ಗಾಲ್ಗೋಟಿಯಾಸ್‌ಗಳಂತಹ ಘಟನೆಗಳು ಮತ್ತೆ ಮತ್ತೆ ಜರುಗುತ್ತವೆ.
ಹಾಗಾಗಿ, ಗಾಲ್ಗೋಟಿಯಾಸ್ ಒಂದು ಪ್ರತ್ಯೇಕ ಘಟನೆಯೇನಲ್ಲ. ಬದಲಾಗಿ, ಅದು ಇಡೀ ಶೈಕ್ಷಣಿಕ ವ್ಯವಸ್ಥೆಯ ಕೊಳೆತದ ಹೆಗ್ಗುರುತಾಗಿದೆ. ಸರ್ಕಾರವು ತಾನೇ ಇಟ್ಟುಕೊಂಡಿರುವ ಯಾವುದೋ ರ್ಯಾಂಕಿಂಗ್ ಆಧಾರದ ಮೇಲೆ ಶಿಕ್ಷಣ ಸಂಸ್ಥೆಗಳಿಗೆ ತನಗೆ ಬೇಕಾದಂತೆ ಅನುದಾನ ನೀಡುತ್ತಿರುವುದರಿಂದ, ವಿವಿಧ ಪದವಿಗಳ ಲಾಲಸೆ ತೋರಿಸುವ ಕ್ಯಾಂಪಸ್‌ಗಳು ನಾಯಿಕೊಡೆಗಳಂತೆ ತಲೆಯೆತ್ತುತ್ತಿವೆ. ದಶಕಗಳ ಕಾಲ ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಸಂಸ್ಥೆಗಳು ಸರ್ಕಾರದ ಕೃಪಾದೃಷ್ಟಿಗೆ ಹಾತೊರೆಯುತ್ತಾ, ಕನಿಷ್ಠ ಮೊತ್ತದ ಅನುದಾನಕ್ಕೆ ಪರಿತಪಿಸುತ್ತಿರುವಾಗ ಮೋದಿಯವರ ಪರಮಾಪ್ತ ಅಂಬಾನಿಯ ಒಡೆತನದ ಜಿಯೋ ಇನ್‌ಸ್ಟಿಟ್ಯೂಟ್ ಇನ್ನೂ ಸರಿಯಾಗಿ ಅಸ್ತಿತ್ವಕ್ಕೆ ಬರದಿದ್ದರೂ ಸಹ ಅದಕ್ಕಾಗಲೇ ‘ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್’ ಎಂಬ ಟ್ಯಾಗ್‌ನ್ನು ನೀಡಿದ ‘ಹೆಗ್ಗಳಿಕೆ’ ಮೋದಿ ಸರ್ಕಾರದ್ದು. ಸುನೀಲ್ ಗಾಲ್ಗೋಟಿಯಾ ಮತ್ತು ಆತನ ಪುತ್ರ ಧ್ರುವ್ ಗಾಲ್ಗೋಟಿಯಾರನ್ನು ಪ್ರಧಾನಿ ಮೋದಿಯವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಗಣ್ಯರಾಗಿ ಆಹ್ವಾನಿಸಲಾಗಿತ್ತು. ಹಲವಾರು ಬಿಜೆಪಿಯ ಕಾರ್ಯಕ್ರಮಗಳನ್ನೂ ಸಹ ಗಾಲ್ಗೋಟಿಯಾಸ್ ಆಯೋಜಿಸಿದೆ. ಪ್ರಧಾನಿ ಮೋದಿ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್‌ರ ಹೊಗಳಿಕೆಯನ್ನೇ ಗಾಲ್ಗೋಟಿಯಾಸ್ ತನ್ನ ಅಸ್ತಿತ್ವದ ಆಧಾರವನ್ನಾಗಿಸಿಕೊಂಡಿದೆ. ಉತ್ತರಪ್ರದೇಶದ ಸಚಿವ ಯೋಗೇಂದ್ರ ಉಪಾಧ್ಯಾಯ, ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ರಂತಹವರೆಲ್ಲಾ ಈ ಸಂಸ್ಥೆಯ ಅನೇಕ ಕಾರ್ಯಕ್ರಮಗಳಲ್ಲಿ ಸ್ವತ: ಭಾಗವಹಿಸಿದ್ದಾರೆ. 2021ರ ಫೆಬ್ರುವರಿ 17-18ರಂದು, ಅಂದಿನ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಉಪಸ್ಥಿತರಿದ್ದ ಸಮಾರಂಭದಲ್ಲಿ, ವಿಶ್ವವಿದ್ಯಾಲಯವು ತನ್ನ ಪಠ್ಯಕ್ರಮದಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುತ್ತದೆಂದು ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ 12-ಹಂತದ ಮಾರ್ಗಸೂಚಿಯನ್ನು ಜಾರಿಗೆ ತರಲಾಗುತ್ತದೆಂದು ಪ್ರತಿಜ್ಞೆ ಮಾಡಿತ್ತು. 2024ರ ನವೆಂಬರ್‌ನಲ್ಲಿ, ಗಲ್ಗೋಟಿಯಾಸ್ ವಿಶ್ವವಿದ್ಯಾಲಯವು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಉಪಸ್ಥಿತಿಯಲ್ಲಿ ಆರ್‌ಎಸ್‌ಎಸ್ ಅಂಗಸಂಸ್ಥೆಯಾದ ಭಾರತೀಯ ಶಿಕ್ಷಣ ಮಂಡಲ ಆಯೋಜಿಸಿದ್ದ VIVIBHA 2024ರಲ್ಲಿ ಭಾಗವಹಿಸಿತ್ತು.
ಫ್ಯಾಸೀವಾದದ ನೆಲೆಯನ್ನು ಭದ್ರಪಡಿಸುವ ಪ್ರಯತ್ನ
ಭಾರತದಲ್ಲಿ ಇಂದು ಶಿಕ್ಷಣವು ಅಪಾಯದಲ್ಲಿದೆ. ಶಿಕ್ಷಣವನ್ನು ವಿರೂಪಗೊಳಿಸಿ, ಅದರ ನೈಜ ಸಾರವನ್ನು ಹೀರಿ ತೆಗೆದು ಹಾಕಿ, ಅದನ್ನು ಮಾರಾಟದ ಸರಕನ್ನಾಗಿಸಲಾಗುತ್ತಿದೆ. ಇದೇ ಬಿಜೆಪಿ ಸರ್ಕಾರದ ಧ್ಯೇಯವಾಗಿದೆ. ತಂತ್ರಜ್ಞಾನದಲ್ಲಿ ಬಹಳ ಮುಂದುವರೆಯುತ್ತಿದ್ದೇವೆ ಎಂದು ತೋರಿಸಿಕೊಳ್ಳುವ ಅಬ್ಬರದಲ್ಲಿ ದೇಶವನ್ನು ವಿಶ್ವದ ಮುಂದೆ ನಗೆಪಾಟಲಿಗೀಡು ಮಾಡಲಾಗುತ್ತಿದೆ. ಈ ಎಲ್ಲಾ ಹಾಸ್ಯ-ಅಪಹಾಸ್ಯಗಳ ನಡುವೆ ವಿಜ್ಞಾನದ ತಾಂತ್ರಿಕ ಅಂಶಗಳನ್ನು ಆಧ್ಯಾತ್ಮಿಕತೆಯೊಂದಿಗೆ ಬೆಸೆಯುವ ಸಂಘಟಿತ ಪ್ರಯತ್ನವೂ ಸಹ ಯಾವುದೇ ಅಡೆತಡೆಯಿಲ್ಲದೆ ನಡೆದಿದೆ. ಇದು ನಾಳೆ ನಮ್ಮ ದೇಶದಲ್ಲಿ ಫ್ಯಾಸೀವಾದಕ್ಕೆ ಸಾಂಸ್ಕೃತಿಕ ನೆಲೆಯನ್ನು ಒದಗಿಸಬಲ್ಲದು. ಗಾಲ್ಗೋಟಿಯಾಸ್‌ನಂತಹ ವಿಶ್ವವಿದ್ಯಾಲಯಗಳನ್ನು ಉತ್ತೇಜಿಸುವ ಮತ್ತು ಇತರರ ಆವಿಷ್ಕಾರಗಳನ್ನು ನಮ್ಮ ಆವಿಷ್ಕಾರಗಳು ಎಂದು ಪ್ರತಿಪಾದಿಸುವವರ ಹಿಂದಿನ ದುರುದ್ದೇಶವನ್ನು ನಾವು ಇಂದು ಮರೆಯುವಂತೆಯೇ ಇಲ್ಲ