Loading..

ಅಮೆರಿಕ-ಇಸ್ರೇಲ್‌ನಿಂದ ಇರಾನ್ ಮೇಲೆ ಯುದ್ಧ: ಅಮಾಯಕರ ಕಗ್ಗೊಲೆ

ಇತ್ತೀಚೆಗೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ಬೃಹತ್ ಮಿಲಿಟರಿ ದಾಳಿಯು ವಿಶ್ವಶಾಂತಿಗೆ ಗಂಭೀರ ಬೆದರಿಕೆಯನ್ನು ಒಡ್ಡಿದೆ. ಬಹಳ ಸಮಯದಿಂದ ಹೊಗೆಯಾಡುತ್ತಿದ್ದ ಉದ್ವಿಗ್ನತೆ ಇದೀಗ ಬಹಿರಂಗ ಯುದ್ಧವಾಗಿ ಮಾರ್ಪಟ್ಟಿದೆ. ಈ ಸಂಘರ್ಷವು ಕೇವಲ ಸೀಮಿತ ಹಿತಾಸಕ್ತಿಗಳಿಗಾಗಿ ನಡೆಯುತ್ತಿರುವ ಎರಡು ಗುಂಪುಗಳ ನಡುವಿನ ಘರ್ಷಣೆಯಲ್ಲ; ಬದಲಾಗಿ, ಇದು ದೂರಗಾಮಿ ಪರಿಣಾಮಗಳನ್ನು ಬೀರಬಲ್ಲ, ಯಾವುದೇ ಪ್ರಚೋದನೆಯಿಲ್ಲದೆ ನಡೆಸಲಾದ ಆಕ್ರಮಣಕಾರಿ ದಾಳಿಯಾಗಿದೆ. ಯುದ್ಧ ಪ್ರಾರಂಭವಾಗುವ ಮುನ್ನ ರಾಜತಾಂತ್ರಿಕ ಪ್ರಯತ್ನಗಳು ಜಾರಿಯಲ್ಲಿದ್ದವು. ಅಮೆರಿಕ ಮತ್ತು ಇರಾನ್, ಜಿನೀವಾದಲ್ಲಿ, ಓಮನ್ ದೇಶದ ಮಧ್ಯಸ್ಥಿಕೆಯೊಂದಿಗೆ ಪರಮಾಣು ಕುರಿತಾಗಿ ಪರೋಕ್ಷ ಮಾತುಕತೆಗಳಲ್ಲಿ ತೊಡಗಿದ್ದು, ಇದು ಉದ್ವಿಗ್ನತೆಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಆಶಾದಾಯಕವಾಗಿತ್ತು. ಓಮನ್‌ನ ವಿದೇಶಾಂಗ ಸಚಿವರ ಪ್ರಕಾರ, ಈ ನಿಟ್ಟಿನಲ್ಲಿ ಒಂದಷ್ಟು ಪ್ರಗತಿಯೂ ಆಗಿತ್ತು ಮತ್ತು ಶೀಘ್ರದಲ್ಲೇ ಉಭಯ ದೇಶಗಳು ಚರ್ಚೆಯನ್ನು ಮುಂದುವರಿಸುವ ನಿರೀಕ್ಷೆ ಕೂಡ ಇತ್ತು. ಇರಾನ್ ಸರ್ಕಾರಿ ಮಾಧ್ಯಮಗಳ ಪ್ರಕಾರ, ಈ ಚರ್ಚೆಗಳಲ್ಲಿ ಇರಾನ್, ಶಾಂತಿಯುತ ಉದ್ದೇಶಗಳಿಗಾಗಿ ಪರಮಾಣು ಶಕ್ತಿಯನ್ನು ಅಭಿವೃದ್ಧಿಪಡಿಸುವ ತನ್ನ ಹಕ್ಕನ್ನು ಪ್ರತಿಪಾದಿಸಿತ್ತು. ಅಲ್ಲದೆ ಯುರೇನಿಯಂನ್ನು ಸಾಂದ್ರೀಕೃತಗೊಳಿಸುವುದನ್ನು (Enrichment) ಸಂಪೂರ್ಣವಾಗಿ ನಿಲ್ಲಿಸುವ ಹಾಗೂ ಸುಮಾರು 400 ಕೆಜಿಯಷ್ಟು ಸಾಂದ್ರೀಕೃತ ಯುರೇನಿಯಂನ್ನು ವಿದೇಶಗಳಿಗೆ ಸ್ಥಳಾಂತರಿಸುವ ಬೇಡಿಕೆಗಳನ್ನು ಸಾರಾಸಗಟಾಗಿ ತಿರಸ್ಕರಿಸಿತ್ತು. ಪ್ರಸ್ತಾವನೆಗಳು ಬಹಿರಂಗಗೊಳಿಸದಿದ್ದರೂ, ಇರಾನ್‌ನ ಅಧಿಕಾರಿಗಳು ಹಲವಾರು ವಿನಾಯಿತಿಗಳನ್ನು ನೀಡಿದ್ದರು ಎಂದು ಹೇಳಲಾಗಿದೆ.
ಯುದ್ಧಕ್ಕೆ ಅಮೆರಿಕಾ ಹಾಗೂ ಇಸ್ರೇಲ್ ಪ್ರಚೋದನೆ
ಆದರೆ, ಈ ಎಲ್ಲ ರಾಜತಾಂತ್ರಿಕ ಪ್ರಯತ್ನಗಳ ನಡುವೆಯೂ ಪರಿಸ್ಥಿತಿ ದಿಢೀರ್ ತಿರುವು ಪಡೆಯಿತು. ಫೆಬ್ರುವರಿ 28, 2026 ರಂದು, ಅಮೆರಿಕ ಮತ್ತು ಇಸ್ರೇಲ್, ಇರಾನ್ ಮೇಲೆ ಸರಣಿ ವೈಮಾನಿಕ ದಾಳಿಗಳನ್ನು ನಡೆಸಿದವು. ಈ ದಾಳಿಗಳು ಇರಾನ್‌ನ ಪ್ರಮುಖ ಸೇನಾ ನೆಲೆಗಳು, ಪರಮಾಣು ಸ್ಥಾವರಗಳು ಮತ್ತು ಪ್ರಭಾವಿ ನಾಯಕರನ್ನು ಗುರಿಯಾಗಿಸಿಕೊಂಡಿದ್ದವು. ಇರಾನ್‌ನಲ್ಲಿ ಸರ್ಕಾರವನ್ನು ಬದಲಿಸಿ, ತಮ್ಮ ಪರಮಾಣು ಕಾರ್ಯಕ್ರಮವನ್ನು ಜಾರಿಗೊಳಿಸುವುದು, ಈ ದಾಳಿಯ ಹಿಂದಿರುವ ಉದ್ದೇಶ ಎಂದು ಅಮೆರಿಕಾ ಹಾಗೂ ಇಸ್ರೇಲ್ ಹೇಳಿಕೊಂಡಿವೆ. ಅಲಿ ಖಮೇನಿ ಸೇರಿದಂತೆ ಉನ್ನತ ನಾಯಕರನ್ನೇ ಗುರಿಯಾಗಿಸಲಾಗಿತ್ತು. ಈ ದಾಳಿಗಳಿಂದ ಭಾರಿ ಹಾನಿಯಾಗಿದ್ದು, ಅಪಾರ ಸಂಖ್ಯೆಯ ಸೈನಿಕರು ಹಾಗೂ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ, ಇರಾನ್ ಕೂಡ ಇಸ್ರೇಲ್ ಮತ್ತು ಮಧ್ಯಪ್ರಾಚ್ಯದ ಇತರೆಡೆ ಇರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಪ್ರತಿದಾಳಿಗಳನ್ನು ನಡೆಸಿದೆ. ಇದರ ಪರಿಣಾಮವಾಗಿ, ಈ ಸಂಘರ್ಷವು ತ್ವರಿತವಾಗಿ ಇಡೀ ಪ್ರಾದೇಶಿಕ ಯುದ್ಧವಾಗಿ ಉಲ್ಬಣಗೊಂಡು, ಮಧ್ಯಪ್ರಾಚ್ಯದಾದ್ಯಂತ ಅಸ್ಥಿರತೆಯನ್ನು ಹೆಚ್ಚಿಸಿದೆ. ಅಂತರರಾಷ್ಟ್ರೀಯ ಕಾನೂನಿನ ದೃಷ್ಟಿಕೋನದಿಂದ ನೋಡಿದರೆ, ಈ ಯುದ್ಧವು ಗಂಭೀರ ಕಳವಳಗಳನ್ನು ಹುಟ್ಟುಹಾಕುತ್ತದೆ. ವಿಶ್ವಸಂಸ್ಥೆಯ ಸನ್ನದಿನ (UN Charter) ಪ್ರಕಾರ, ಆತ್ಮರಕ್ಷಣೆಯ ಉದ್ದೇಶವಿಲ್ಲದೆ ಅಥವಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅನುಮೋದನೆಯಿಲ್ಲದೆ ಒಂದು ದೇಶ, ಮತ್ತೊಂದು ದೇಶದ ವಿರುದ್ಧ ಬಲಪ್ರಯೋಗ ಮಾಡುವುದನ್ನು ಸಾಮಾನ್ಯವಾಗಿ ನಿಷೇಧಿಸಲಾಗಿದೆ. ಹಾಗಾಗಿ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಈ ದಾಳಿಯನ್ನು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಮತ್ತು ಅಪಾಯಕಾರಿ ಬೆಳವಣಿಗೆ ಎಂದು ಬಣ್ಣಿಸಿದ್ದಾರೆ. ಅದೇ ಸಮಯದಲ್ಲಿ, ಇರಾನ್‌ಗೆ ತನ್ನ ಸಾರ್ವಭೌಮತೆಯನ್ನು ಹಾಗೂ ಭದ್ರತೆಯನ್ನು ಕಾಪಾಡಾಲು ಹಕ್ಕೇ ಇಲ್ಲವೆಂಬಂತೆ, ಇರಾನ್‌ನ ಪ್ರತಿದಾಳಿಯ ಕ್ರಮಗಳನ್ನೂ ಅವರು ಟೀಕಿಸಿದ್ದಾರೆ. ಅಮೆರಿಕಾದ ಕೈಗೊಂಬೆಯಾಗಿರುವ ವಿಶ್ವ ಸಂಸ್ಥೆಯಿಂದ ಬೇರೇನು ನಿರೀಕ್ಷಿಸಲು ಸಾಧ್ಯ!!
ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಜೂನ್ 2025 ರಲ್ಲಿಯೇ ಅಮೆರಿಕಾ, ಇರಾನ್‌ನ ಪರಮಾಣು ಮತ್ತು ಸೇನಾ ನೆಲೆಗಳ ಮೇಲೆ ದಾಳಿ ನಡೆಸಿತ್ತು. ತದನಂತರ ಮಾತುಕತೆಗಳು ನಡೆಯುತ್ತಿದ್ದು, ಇರಾನ್ ದೊಡ್ಡ ವಿನಾಯಿತಿಗಳನ್ನು ನೀಡುವ ವರದಿಗಳಿದ್ದರೂ, ಮತ್ತೊಮ್ಮೆ ಈಗ ಎರಡನೆಯ ಬಾರಿ ದಾಳಿ ಮಾಡಲಾಗಿದೆ. ದ್ವಿಪಕ್ಷೀಯ ಮಾತುಕತೆ ಎನ್ನುವುದು ಕೇವಲ ಮುಖವಾಡ ಮಾತ್ರ. ಅಮೆರಿಕಾದ ಇಚ್ಛಾನುಸಾರ ಇರಾನ್ ದೇಶವನ್ನು ಮಣಿಸುವುದೇ ನಿಜವಾದ ಉದ್ದೇಶವಾಗಿದೆ.
ಇರಾನ್ ಅನ್ನು ಏಕೆ ಗುರಿಯಾಗಿಸಲಾಗುತ್ತಿದೆ ?
ವಂಚನೆಯಿಂದ ಇರಾಕ್ ಮೇಲೆ ಯುದ್ಧ ದಾಳಿಯನ್ನು ನಡೆಸಿದ ತರುವಾಯ ಅಮೆರಿಕಾ, ಇರಾನ್‌ಗೆ “ದುಷ್ಟ ರಾಷ್ಟ್ರ” (Rogue state) ಎಂಬ ಹಣೆಪಟ್ಟಿ ಕಟ್ಟಿತು. ಈ ಪಟ್ಟಿಯಲ್ಲಿ ಕ್ಯೂಬಾ, ಉತ್ತರ ಕೋರಿಯಾ ದೇಶಗಳು ಕೂಡ ಸೇರಿವೆ. ವಿಶ್ವಸಂಸ್ಥೆಯ ಬೆಂಬಲದೊಂದಿಗೆ ಇರಾನ್ ಮೇಲೆ ಅಮೆರಿಕಾ ಆರ್ಥಿಕ ದಿಗ್ಬಂಧನಗಳನ್ನು ಹೇರುತ್ತಾ ಬಂದಿದೆ, ಇರಾನ್ ಸುತ್ತಾ ತನ್ನ ಮಿಲಿಟರಿ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿದೆ, ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸಲು ಇರಾನ್ ಯತ್ನಿಸುತ್ತಿದೆ ಎಂದು ಆರೋಪಿಸುತ್ತಾ ಬಂದಿದೆ. ಇದರಿಂದಾಗಿ ಪಶ್ಚಿಮ ಏಷಿಯಾ ಭಾಗದಲ್ಲಿ ಶಾಂತಿಗೆ ದೊಡ್ಡ ಅಪಾಯ ಕಾದಿದೆ ಎಂದು ಅಮೆರಿಕಾ ಹೇಳುತ್ತಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಧ್ಯಮದವರಿಗೆ ಉತ್ತರಿಸುತ್ತಾ, “ಮಧ್ಯಪ್ರಾಚ್ಯ ದೇಶಗಳಲ್ಲಿ ಅಲ್ಲದೆ, ಜಗತ್ತಿನಾದ್ಯಂತ ಶಾಂತಿ ನೆಲೆಸುವವರೆಗೂ, ನಿರಂತರವಾಗಿ ಬಾಂಬ್ ದಾಳಿ ನಡೆಯುತ್ತದೆ. ನನಗೆ ಬೇಕಾಗಿರುವುದು ಜನತೆಯ ಸ್ವಾತಂತ್ರ್ಯ “ಎಂದು ಹೇಳುತ್ತಾರೆ. ‘ದೆವ್ವದ ಬಾಯಿಯಲ್ಲಿ ರಾಮ ಮಂತ್ರ’ ಎಂಬ ನುಡಿಗಟ್ಟು ನೆನಪಾಗುತ್ತದೆ. ಸುಳ್ಳು ಆರೋಪಗಳ ಮೇಲೆ ಅನೇಕ ದೇಶಗಳ ಮೇಲೆ ದಾಳಿ ಎಸಗಿ ಅಲ್ಲಿನ ಜನಜೀವನವನ್ನು ಸರ್ವನಾಶ ಮಾಡುವ, ಅಲ್ಲಿರುವ ಸರ್ಕಾರಗಳನ್ನೇ ಬುಡಮೇಲು ಮಾಡುವ, ಬೇರೆ ದೇಶಗಳ ಅಧ್ಯಕ್ಷರನ್ನು ಅಪಹರಿಸಿಕೊಂಡು ಹೋಗುವ, ತನ್ನ ಏಜೆಂಟ್‌ರನ್ನು ಬಿಟ್ಟು ಆಂತರಿಕ ಯುದ್ಧಗಳನ್ನು ಸೃಷ್ಟಿಸುವ ಅಮೆರಿಕಾದ ಅಧ್ಯಕ್ಷರು ಶಾಂತಿಯ ಬಗ್ಗೆ ಮಾತನಾಡುವುದು ದೊಡ್ಡ ಅಪಹಾಸ್ಯವೇ ಸರಿ!!
ಪ್ರತಿ ದೇಶಕ್ಕೂ ಇದೆ ಆತ್ಮರಕ್ಷಣೆಯ ಹಕ್ಕು
ತನ್ನ ಮಾರುಕಟ್ಟೆ ವಿಸ್ತರಣೆಯ ಸಾಮ್ರಾಜ್ಯಶಾಹಿ ಹಿತಾಸಕ್ತಿಗಾಗಿ ಅಮೆರಿಕಾ, 2003ರಲ್ಲಿ ಇರಾಕ್‌ನಿಂದ ಹಿಡಿದು 2011ರಲ್ಲಿ ಲಿಬಿಯಾದವರೆಗೂ ಈ ದೇಶಗಳನ್ನು ಎಲ್ಲಾ ರೀತಿಯಿಂದಲೂ ಧ್ವಂಸಗೊಳಿಸಿದೆ. ರಾಜಕೀಯವಾಗಿ ತನ್ನ ಕೈಗೊಂಬೆ ಸರ್ಕಾರಗಳನ್ನು ಆಯಾ ದೇಶಗಳಲ್ಲಿ ರಚಿಸಿದೆ. ಇದರ ಮುಂದುವರಿಕೆಯಾಗಿ ಈಗ ಇರಾನ್‌ನಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ಇರಾನ್‌ನ ಸರ್ವೋಚ್ಛ ನಾಯಕ ಖಮೇನಿಯನ್ನು ಕೊಲೆಗೈದು ಹದ್ದು ಮೀರಿ ವರ್ತಿಸಿದೆ. ಇಂತಹ ಸಂದರ್ಭದಲ್ಲಿ ಇರಾನ್‌ಗೆ ತನ್ನ ರಕ್ಷಣೆ ಮಾಡಿಕೊಳ್ಳದೆ ಬೇರೇನು ದಾರಿ ಉಳಿದಿದೆ? ಅಮೆರಿಕಾದ ದಾಳಿಗೆ ಪ್ರತಿಯಾಗಿ ಇರಾನ್ ದಾಳಿ ನಡೆಸಿದ್ದು ಖಂಡಿತವಾಗಿ ನ್ಯಾಯಸಮ್ಮತವಾಗಿದೆ. ಇದರಿಂದ ಜಗತ್ತಿನ ಶಾಂತಿಗೆ ಅಪಾಂiÀi ಎಂದು ಹೇಳುವುದು ಸರಿಯಲ್ಲ. ಅಮೆರಿಕಾ, ಎಲ್ಲಾ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕಾನೂನುಗಳನ್ನು ಕಾಲ ಕೆಳಗೆ ಹೊಸಕಿ ಹಾಕುತ್ತಿರುವಾಗ, ತನ್ನ ದೇಶದ ಸಾರ್ವಭೌಮತೆ ಹಾಗೂ ಸ್ವಾತಂತ್ರ್ಯ ವನ್ನು ಕಾಪಾಡಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲು ಇರಾನ್‌ಗೆ ಸಂಪೂರ್ಣ ಅಧಿಕಾರವಿದೆ.
ಆರ್ಥಿಕತೆಯ ಮಿಲಿಟರೀಕರಣ
ಅಮೆರಿಕಾ, ಇರಾನ್ ಹಾಗೂ ಪಶ್ಚಿಮ ಏಷಿಯಾ ದೇಶಗಳ ಮೇಲೆ ದಾಳಿ ಎಸಗಲು, ಅಲ್ಲಿರುವ ತೈಲ ಸಂಪತ್ತನ್ನು ವಶಪಡಿಸಿಕೊಳ್ಳುವುದಷ್ಟೇ ಅಲ್ಲದೆ, ಇನ್ನು ಬೇರೆ ಕಾರಣಗಳೂ ಇವೆ. ಬಗೆಹರಿಸಲಾಗದ ತೀವ್ರತರ ಮಾರುಕಟ್ಟೆಯ ಬಿಕ್ಕಟ್ಟಿನಿಂದ ಹೊರಬರಲು ಎಲ್ಲಾ ಸಾಮ್ರಾಜ್ಯಶಾಹಿ ದೇಶಗಳು, ಶಸ್ತ್ರಾಸ್ತ್ರ ಖರೀದಿ ಹಾಗೂ ಆರ್ಥಿಕತೆಯ ಮಿಲಿಟರೀಕರಣಕ್ಕೆ ಮೊರೆ ಹೋಗುತ್ತಿವೆ. ಸರ್ಕಾರಗಳೇ ಮಿಲಿಟರಿ ಉಪಕರಣಗಳನ್ನು ಖರೀದಿ ಮಾಡುವ ಮೂಲಕ, ಕೃತಕವಾಗಿ ಉತ್ಪಾದನೆಯನ್ನು ಕೊಂಚ ಚುರುಕುಗೊಳಿಸುತ್ತವೆ. ಆರ್ಥಿಕತೆ ಮಿಲಿಟರೀಕರಣಗೊಂಡಷ್ಟು, ಅಮೆರಿಕಾ ನೇತೃತ್ವದ ಸಾಮ್ರಾಜ್ಯಶಾಹಿ ದೇಶಗಳು ಯುದ್ಧದ ವಾತಾವರಣ ಸೃಷ್ಟಿಸುತ್ತವೆ. ಇದಲ್ಲದೆ ಇರಾನ್ ಮೇಲೆ ಅಮೆರಿಕಾ ದಾಳಿಗೆ ಮತ್ತೊಂದು ಕಾರಣವೆಂದರೆ, ಇರಾನ್ ತನ್ನ ತೈಲ, ಗ್ಯಾಸ್ ರಫ್ತು ಮಾಡಲು ಹಾಗೂ ವಿದೇಶಿ ವಿನಿಮಯಕ್ಕೆ, ಅಮೆರಿಕಾ ಡಾಲರ್ ಬದಲಿಗೆ ಯುರೋ ಹಾಗೂ ಇತರ ಕರೆನ್ಸಿಯನ್ನು ಬಳಸಲು ಮುಂದಾಗಿದ್ದು. ತೈಲದ ವ್ಯಾಪಾರವು ಅಮೆರಿಕಾ ಡಾಲರ್‌ನಲ್ಲಿ ನಡೆದರೆ, ಅಮೆರಿಕಾಗೆ ಅತಿಹೆಚ್ಚು ಲಾಭವಾಗುತ್ತದೆ. ದೇಶದ ಹೊರಗೆ ಅಮೆರಿಕಾದ ಡಾಲರ್ ಚಲಾವಣೆ ಹೆಚ್ಚುತ್ತದೆ. ಬೇರೆ ದೇಶಗಳು ಡಾಲರ್ ವಿನಿಮಯಕ್ಕಾಗಿ ಹಲವಾರು ಸೇವೆ ಹಾಗೂ ಸರಕುಗಳನ್ನು ನೀಡಬೇಕಾಗುತ್ತದೆ. ಅಮೆರಿಕಾ ತನ್ನದೇ ಹಣವನ್ನು ಹೆಚ್ಚೆಚ್ಚು ಮುದ್ರಿಸುತ್ತಾ, ಬೇರೆ ದೇಶಗಳಿಂದ ಪಡೆದ ಸಾಲವನ್ನು ತೀರಿಸಬಹುದು. ಈ ಹಿಂದೆ ಇರಾಕ್, ಅಮೆರಿಕಾ ಡಾಲರ್‌ಗೆ ಸಡ್ಡು ಹೊಡೆದಿದ್ದರ ಪರಿಣಾಮವಾಗಿ, ಅಮೆರಿಕಾದ ಮಿಲಿಟರಿ ಕಾರ್ಯಾಚರಣೆಯನ್ನು ಎದುರಿಸಬೇಕಾಯಿತು. 2006ರಲ್ಲಿ ಇರಾನ್ ದೇಶವು ಡಾಲರ್ ಮೇಲಿನ ಅವಲಂಬನೆಯಿಂದ ಹೊರ ಬಂದಿದ್ದರ ಪರಿಣಾಮವಾಗಿ, ಅದರ ಮೇಲೆ ಆರ್ಥಿಕ ದಿಗ್ಬಂಧನಗಳನ್ನು ಹೇರಲಾಯಿತು. ಎಲ್ಲಾ ತೈಲ ಶ್ರೀಮಂತ ದೇಶಗಳು ಇದೇ ರೀತಿ ಅಮೆರಿಕಾ ಡಾಲರ್‌ನ್ನು ತ್ಯಜಿಸಲು ಮುಂದಾದರೆ, ಅಮೆರಿಕಾ ಘೋರ ಪರಿಸ್ಥಿತಿಗೆ ತಳ್ಳಲ್ಪಡುತ್ತದೆ. ಅಮೆರಿಕಾದ ಸಾಮ್ರಾಜ್ಯಶಾಹಿಗಳಿಗೆ ಇದೇ ಭಯ ಕಾಡುತ್ತಿದೆ.
ಮಹಾನ್ ಮಾರ್ಕ್ಸ್ವಾದಿ ಚಿಂತಕರು ಹಾಗೂ ಎಸ್‌ಯುಸಿಐ (ಸಿ) ಪಕ್ಷದ ಸಂಸ್ಥಾಪಕ ಕಾರ್ಯದರ್ಶಿಗಳಾದ ಕಾಮ್ರೇಡ್ ಶಿವದಾಸ್ ಘೋಷ್ ಅವರು 6 ದಶಕಗಳ ಹಿಂದೆ ತಿಳಿಸಿರುವ ವಿಚಾರಗಳನ್ನು ಇಲ್ಲಿ ನೆನಪಿಸಿಕೊಳ್ಳುವುದು ಅಗತ್ಯವಾಗಿದೆ. “ಬಂಡವಾಳಶಾಹಿ-ಸಾಮ್ರಾಜ್ಯಶಾಹಿಗಳು ಮಾರುಕಟ್ಟೆ ಬಿಕ್ಕಟ್ಟನ್ನು ತಡೆಯಲು, ಬಂಡವಾಳಶಾಹಿ ಮಾರುಕಟ್ಟೆಯಲ್ಲಿ ತಾತ್ಕಾಲಿಕವಾಗಿಯಾದರೂ ಚೇತರಿಕೆ ಕಾಣುವಂತೆ ಮಾಡಲು, ಕೃತಕವಾಗಿ ಮಿಲಿಟರಿ ಉಪಕರಣಗಳ ಬಳಕೆಯನ್ನು ಉತ್ತೇಜಿಸುತ್ತಾರೆ. ಈ ಮಿಲಿಟರೀಕರಣವು ಪರಿಸ್ಥಿತಿಯನ್ನು ತಿಳಿಗೊಳಿಸುವುದು ದೂರದ ಮಾತು, ಬದಲಿಗೆ ವೈರುಧ್ಯ ಹಾಗೂ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸುತ್ತದೆ. ಬಿಕ್ಕಟ್ಟು ತೀವ್ರವಾದಷ್ಟು ಆರ್ಥಿಕತೆ ಮತ್ತಷ್ಟು ಮಿಲಿಟರೀಕರಣಗೊಳ್ಳುತ್ತದೆ.” ಮಿಲಿಟರೀಕರಣದಿಂದ ಶಸ್ತ್ರಾಸ್ತ್ರಗಳ ಸಂಗ್ರಹ ಹೆಚ್ಚುತ್ತದೆ, ಸ್ಪರ್ಧೆ ಏರ್ಪಡುತ್ತದೆ ಹಾಗೂ ಕೊನೆಗೆ ಯುದ್ಧವು ಸ್ಫೋಟಗೊಳ್ಳುತ್ತದೆ. ಹಾಗಾಗಿ, ಸಾಮ್ರಾಜ್ಯಶಾಹಿ ದೇಶಗಳು ಒಂದಲ್ಲಾ ಒಂದು ಕಡೆ ಸ್ಥಳೀಯ, ಪ್ರಾದೇಶಿಕ, ಭಾಗಶಃ ಹಾಗೂ ದೊಡ್ಡ ಮಟ್ಟದ ಯುದ್ಧಗಳನ್ನು ಸೃಷ್ಟಿಸುತ್ತವೆ. ಪ್ಯಾಲೆಸ್ಟೆೈನ್, ಉಕ್ರೇನ್, ಯಮೆನ್ ಸೇರಿದಂತೆ ಈಗಿನ ಇರಾನ್ ದೇಶ ಎದುರಿಸುತ್ತಿರುವ ಯುದ್ಧ ದಾಳಿಗಳು ಇದಕ್ಕೆ ಉದಾಹರಣೆಯಾಗಿವೆ.
ಜಿ಼ಯೋನಿಸ್ಟ್ ಇಸ್ರೇಲ್ ಜೊತೆ ದನಿಗೂಡಿಸಿದ ಭಾರತದ ಪ್ರಧಾನಮಂತ್ರಿಗಳು
ನಮ್ಮ ಪ್ರಧಾನಮಂತ್ರಿಗಳು ಇರಾನ್ ಮೇಲಿನ ದಾಳಿ ಪ್ರಾರಂಭವಾಗುವ ಕೆಲವೇ ದಿನಗಳ ಮುನ್ನ ಇಸ್ರೇಲ್‌ಗೆ ತೆರಳಿ, ಭಾರತದ ಕಾರ್ಪೋರೇಟ್ ಮಾಲೀಕರ ಹಿತಾಸಕ್ತಿಯಲ್ಲಿ ಶಸ್ತ್ರಾಸ್ತ್ರ ಒಪ್ಪಂದವೊಂದನ್ನು ಮಾಡಿಕೊಂಡು ಬಂದರು. ಇಸ್ರೇಲ್ ದೇಶವು ಪ್ಯಾಲೇಸ್ಟೆೈನ್‌ನ ಗಾಜಾ಼ದಲ್ಲಿ 1 ಲಕ್ಷ ಜನರನ್ನು ಕಗ್ಗೊಲೆ ಮಾಡಿದೆ. ಸಂತ್ರಸ್ತ ಕೇಂದ್ರದಲ್ಲಿ ಒಂದು ಹಿಡಿ ಅನ್ನಕ್ಕಾಗಿ ವಾಸವಾಗಿದ್ದ, ಹಸಿದ ಮಕ್ಕಳು ಹಾಗೂ ಮಹಿಳೆಯರ ಮೇಲೆ ಬಹಿರಂಗವಾಗಿ ಗುಂಡಿನ ದಾಳಿ ಮಾಡಲು ಹಿಂದೆ ಮುಂದೆ ನೋಡದ ದೇಶ ಇಸ್ರೇಲ್. ಇಂತಹ ಪೈಶಾಚಿಕ ಕೃತ್ಯ ಎಸಗಿದ ಇಸ್ರೇಲ್‌ಅನ್ನು ‘ತಂದೆಯನಾಡು’(Fatherland) ಎಂದು ಮೋದಿ ಹೊಗಳುತ್ತಾರೆ. ಭಾರತದ ಪ್ರಧಾನಿಯಿಂದಾಗಲೀ, ಸರ್ಕಾರದಿಂದಾಗಲೀ ಇರಾನ್ ಮೇಲಿನ ಯುದ್ಧದ ಕುರಿತು ಹೊರಬಂದಿರುವುದು ಕೇವಲ ಬಾಯುಪಚಾರದ ಹೇಳಿಕೆ ಮಾತ್ರವೇ. ಅದೂ, ಇರಾನ್, ಹಾರ್ಮುಜ಼್ ಸಂಧಿಯ ಮೇಲೆ ದಿಗ್ಬಂಧನ ಹಾಕಿದ್ದರಿಂದ ದೇಶಕ್ಕೆ ತೈಲದ ಅಭಾವ ಕಾಡಿದಾಗ! ಅಮೆರಿಕಾದ ಸಾಮ್ರಾಜ್ಯಶಾಹಿ ಲಾಬಿಗಳ ಪರ ಭಾರತದ ಸಾಮ್ರಾಜ್ಯಶಾಹಿಗಳು ನಿಂತಿರುವುದನ್ನು ಇದು ತೋರಿಸಿಕೊಡುತ್ತದೆ.
ಪರಿಹಾರ: ಜಗತ್ತಿನಾದ್ಯಂತದ ಸುಸಂಘಟಿತ-ಐಕ್ಯ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟ
ಸೋವಿಯತ್ ರಷ್ಯಾ, ಸಮಾಜವಾದಿ ಚೀನಾಗಳನ್ನು ಒಳಗೊಂಡ ಅಂದಿನ ಶಕ್ತಿಶಾಲಿ ಸಮಾಜವಾದಿ ಬಣವು ಜಗತ್ತಿನಾದ್ಯಂತ ಯುದ್ಧ ವಿರೋಧಿ ಶಾಂತಿ ಸ್ಥಾಪನೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿತ್ತು. ರಷ್ಯಾದಲ್ಲಿ ಮಹಾನ್ ಸ್ಟಾಲಿನ್, ಚೀನಾದಲ್ಲಿ ಮಹಾನ್ ಮಾವೋ ನಾಯಕತ್ವ ಇದ್ದ ಸಂದರ್ಭದಲ್ಲಿ, ಯಾವುದೇ ದೇಶದ ಮೇಲೆ ದಾಳಿ ಮಾಡಲು ಸಾಮ್ರಾಜ್ಯಶಾಹಿ ದೇಶಗಳಿಗೆ ಕಷ್ಟಸಾಧ್ಯವಿತ್ತು. ಸಮಾಜವಾದಿ ಬಣದ ಒಂದೇ ಹೇಳಿಕೆಗೆ ಅಮೆರಿಕಾ ಸೇರಿದಂತೆ ಇತರೆ ಸಾಮ್ರಾಜ್ಯಶಾಹಿ ದೇಶಗಳು ಬಾಲ ಮುದುರಿಕೊಂಡು ಇರಬೇಕಾಗಿತ್ತು. ಸ್ಟಾಲಿನ್, ಮಾವೋ ಮರಣಾನಂತರ, ಪರಿಷ್ಕರಣವಾದಿ ನಾಯಕತ್ವವಿದ್ದಾಗಲೂ, ಸಾಮ್ರಾಜ್ಯಶಾಹಿಗಳು ಇತರೆ ದೇಶಗಳ ಮೇಲೆ ದಾಳಿ ಮಾಡಲು ನೂರು ಬಾರಿ ಯೋಚಿಸಬೇಕಿತ್ತು. ಇಂದು ಸಮಾಜವಾದಿ ಬಣದ ಅನುಪಸ್ಥಿತಿಯಲ್ಲಿ ಅಮೆರಿಕಾ ಜಗತ್ತಿನ ಚಕ್ರಾಧಿಪತಿಯಂತೆ ದಬ್ಬಾಳಿಕೆ, ಬೆದರಿಕೆಯನ್ನೊಡ್ಡುತ್ತಾ ಆಳ್ವಿಕೆ ನಡೆಸುತ್ತಿದೆ.
ಆದರೂ, ಅಮೆರಿಕಾ ಸೇರಿದಂತೆ ವಿಶ್ವದ ಹಲವಾರು ದೇಶಗಳಲ್ಲಿ ಸಾಮ್ರಾಜ್ಯಶಾಹಿ-ವಿರೋಧಿ ಹೋರಾಟಗಳು ಭುಗಿಲೇಳುತ್ತಿವೆ. ಬೇಕಾಗಿರುವುದು ಸರಿಯಾದ ನೇತೃತ್ವ ಮತ್ತು ನೈಜ ಕ್ರಾಂತಿಕಾರಿ ವೈಚಾರಿಕತೆ ಮಾತ್ರ. ಇಂತಹ ವೈಚಾರಿಕ ತಳಹದಿಯ ಮೇಲೆ ವಿಶಾಲವಾದ ಸಾಮ್ರಾಜ್ಯಶಾಹಿ ವಿರೋಧಿ ವೇದಿಕೆಯನ್ನು ಬಲಪಡಿಸಬೇಕು. ಈ ವೇದಿಕೆಯಲ್ಲಿ ನೈಜ ಕಮ್ಯುನಿಸ್ಟ್ರು ಮುಖ್ಯ ಕೇಂದ್ರವಾಗಿದ್ದುಕೊಂಡು, ಎಲ್ಲಾ ದುಡಿಯುವ ವರ್ಗವನ್ನು, ಪ್ರಜಾತಾಂತ್ರಿಕ ಮನಸ್ಸುಳ್ಳ ದೇಶಭಕ್ತ ಜನರನ್ನು ಸಂಘಟಿಸಿ, ಬಲಿಷ್ಠ ಚಳುವಳಿಗೆ ರೂಪ ನೀಡಬೇಕು. ದೇಶ ದೇಶಗಳ ನಡುವೆ ಸಮನ್ವಯ ಸಾಧಿಸಿಕೊಂಡು, ಅಮೆರಿಕಾ ಸಾಮ್ರಾಜ್ಯಶಾಹಿಗಳ ವಿರುದ್ಧ ಸಮರಶೀಲ ಜಾಗತಿಕ ಹೋರಾಟವನ್ನು ಸಂಘಟಿಸಬೇಕು. ಜನತೆಯ ನಿರ್ಣಾಯಕ ರಾಜಕೀಯ ಶಕ್ತಿಗೆ ಜನ್ಮ ನೀಡುವ ನಿಟ್ಟಿನಲ್ಲಿ ಈ ಹೋರಾಟವನ್ನು ಮಾರ್ಪಡಿಸಬೇಕು. ಸರಿಯಾದ ಕ್ರಾಂತಿಕಾರಿ ವೈಚಾರಿಕತೆಯ ಆಧಾರದ ಮೇಲೆ ಈ ಹೋರಾಟ ಬೆಳೆದದ್ದೇ ಆದರೆ, ಅದು ಜನರ ಕೈಯಲ್ಲಿನ ಒಂದು ಅಜೇಯ ಅಸ್ತ್ರವಾಗುತ್ತದೆ. ಈ ಮೂಲಕ ಸಾಮ್ರಾಜ್ಯಶಾಹಿಗಳ ವಿರುದ್ಧ ಸೆಟೆದು ನಿಂತು, ಅವರ ಎಲ್ಲಾ ಯೋಜನೆಗಳನ್ನು ಮಣ್ಣುಮುಕ್ಕಿಸಬೇಕು. ಅಷ್ಟೇ ಅಲ್ಲದೆ, ಆಯಾ ದೇಶಗಳಲ್ಲಿಯೂ, ಸರಿಯಾದ ಕ್ರಾಂತಿಕಾರಿ ನಾಯಕತ್ವದ ಅಡಿಯಲ್ಲಿ, ಬಂಡವಾಳಶಾಹಿ ನೀತಿಗಳ ವಿರುದ್ಧ ಜನತಾಂತ್ರಿಕ ಹೋರಾಟವನ್ನು ಬೆಳೆÀಸಬೇಕು. ಬುಡಮಟ್ಟದಿಂದ ಜನತೆಯ ಹೋರಾಟ ಸಮಿತಿಗಳು, ಕಾರ್ಯಕರ್ತರ ಪಡೆಯನ್ನು ರಚಿಸಬೇಕು. ಜಗತ್ತಿನಾದ್ಯಂತ ನಡೆಯುವ ಇಂತಹ ಸುಸಂಘಟಿತ, ಬಲಿಷ್ಠ ಹೋರಾಟಗಳಿಂದ ಮಾತ್ರವೇ ಜಗತ್ತನ್ನು ಯುದ್ಧದ ಶಾಪದಿಂದ, ಅಣ್ವಸ್ತ್ರಗಳಿಂದ ಮುಕ್ತಗೊಳಿಸುವುದು ಸಾಧ್ಯ.