‘ಶಾಂತಿ’ ಕಾಯ್ದೆ 2025-ಯಾರ ಹಿತಕ್ಕಾಗಿ?
‘ಶಾಂತಿ’ ಕಾಯ್ದೆ 2025-ಯಾರ ಹಿತಕ್ಕಾಗಿ? ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ವಿವಿಧ ಯೋಜನೆಗಳಿಗೆ ಸುಂದರವಾದ ಪದಪುಂಜಗಳ ಮೂಲಕ ನಾಮಕರಣ ಮಾಡುವುದರಲ್ಲಿ ಸಿದ್ಧಹಸ್ತ. ‘ಪೋಷಣ್, ಜಿ ರಾಮ್ ಜಿ, ಮುದ್ರಾ, ಉದಯ’ಗಳ ನಂತರ ಮತ್ತೀಗ ‘ಶಾಂತಿ’ ಕಾಯ್ದೆ ಬಂದಿದೆ. ಹೆಸರುಗಳೇನೋ ಕಿವಿಗೆ ಇಂಪಾಗಿವೆ. ಆದರೆ, ಇವುಗಳ ಉದ್ದೇಶ? ‘ಶಾಂತಿ’ (SHANTHI) ಎಂಬುದು Sustainable Harnessing and Advancement of Nuclear Energy for Transforming India (SHANTHI) Act 2025 ಎಂಬ ಕಾಯ್ದೆ. ಭಾರತವು ಅಂತರರಾಷ್ಟ್ರೀಯ ಸಹಕಾರದೊಂದಿಗೆ 700 ಮೆ.ವಾ. ಹಾಗೂ 1000 ಮೆ.ವಾ. ಸಾಮರ್ಥ್ಯದ ಪರಮಾಣು ರಿಯಾಕ್ಟರ್ಗಳನ್ನು ಸ್ಥಾಪಿಸುವ ಉದ್ದೇಶವು ಈ ಕಾಯ್ದೆಯ ಹಿಂದಿದೆ. 2031-32ರ ಹೊತ್ತಿಗೆ, ದೇಶದ ಶಕ್ತಿಯ ಉತ್ಪಾದನಾ ಸಾಮರ್ಥ್ಯವನ್ನು 22 ಗಿ.ವಾ. ಪ್ರಮಾಣಕ್ಕೆ ಹಾಗೂ 2047ರ ಹೊತ್ತಿಗೆ 100 ಗಿ.ವಾಗೆ ಹೆಚ್ಚಿಸಲಾಗುವುದು ಎಂದು ಹೇಳಲಾಗುತ್ತಿದೆ. ಈ ಕಾಯ್ದೆಯ ನಿರೂಪಣೆಗಳನ್ನು ಬಳಸಿಕೊಂಡು ಪರಮಾಣು ಶಕ್ತಿಯ ಉತ್ಪಾದನೆಯಲ್ಲಿ ಬಂಡವಾಳ ಹೂಡಲು ಖಾಸಗಿ ಕಂಪೆನಿಗಳಿಗೆ ಮುಕ್ತ ಅವಕಾಶ ನೀಡಲಾಗುವುದು. 2025ರ ಡಿ.17 ಹಾಗೂ 18ರಂದು ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ, ಯಾವುದೇ ಚರ್ಚೆ ನಡೆಯದೆ, ವಿರೋಧ ಪಕ್ಷಗಳ ಸಭಾತ್ಯಾಗದ ನಡುವೆ ತರಾತುರಿಯಲ್ಲಿ ಈ ಮಸೂದೆಯನ್ನು ಅಂಗೀಕರಿಸಲಾಯಿತು. ರಾಷ್ಟ್ರಪತಿ ಸಹ ಈ ಕಾಯ್ದೆಗೆ ಅಂಕಿತ ಹಾಕಿದ್ದಾರೆ. ಪ್ರಸ್ತುತ ಸಾಮಾಜಿಕ-ರಾಜಕೀಯ-ಆರ್ಥಿಕ ಪರಿಸ್ಥಿತಿ ದೊಡ್ಡ ಪ್ರಮಾಣದಲ್ಲಿ ಪರಮಾಣು ಶಕ್ತಿಯನ್ನು ಉತ್ಪಾದಿಸುವ ನಿರ್ಧಾರವನ್ನು ಮಾಡುವ ಮುನ್ನ, ಅದರಿಂದ ಉಂಟಾಗುವ ಪರಿಣಾಮಗಳು ಹಾಗೂ ಇತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಲ್ಲವೇ? ವಿಜ್ಞಾನ-ತಂತ್ರಜ್ಞಾನದ ಬಳಕೆಯ ಪರಿಣಾಮಗಳನ್ನು ಸಾಮಾಜಿಕ-ಆರ್ಥಿಕ-ರಾಜಕೀಯ ಪರಿಸ್ಥಿತಿಯಿಂದ ಹೊರಗಿಟ್ಟು ನೋಡಲು ಸಾಧ್ಯವಿದೆಯೇ ಅಥವಾ ಅದು ಸರಿಯೇ? ನಾವಿಂದು ಬಂಡವಾಳಶಾಹಿ-ಸಾಮ್ರಾಜ್ಯಶಾಹಿ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಇಲ್ಲಿನ ರಾಜಕೀಯ ವ್ಯವಸ್ಥೆಯು ಸಂಪೂರ್ಣವಾಗಿ ಬಂಡವಾಳಶಾಹಿಗಳ ಲಾಭೋದ್ದೇಶವನ್ನು ಕಾಪಿಡುತ್ತದೆ ಹಾಗಾಗಿ, ಈ ವ್ಯವಸ್ಥೆಯಲ್ಲಿ ಜನರ ಬವಣೆಗಳಿಗೆ ಪರಿಹಾರ ದೊರಕದು. ಯಾವುದೇ ಪ್ರಶ್ನೆಯನ್ನು ಜನಸಾಮಾನ್ಯರ ದೃಷ್ಟಿಕೋನದಿಂದ ಯೋಚಿಸುವಾಗ, ಬಂಡವಾಳಶಾಹಿ ವರ್ಗದ ಚಿಂತನಾ ಕ್ರಮದಿಂದ ನಿರ್ದೇಶಿತವಾಗಲು ನಾವು ಅವಕಾಶ ನೀಡಬಾರದು ಅಥವಾ ಶೋಷಕ ಬಂಡವಾಳಶಾಹಿ ಆರ್ಥಿಕ-ರಾಜಕೀಯ ಹಿತಾಸಕ್ತಿ ನಮ್ಮನ್ನು ಪ್ರಭಾವಿಸುವಂತೆ ಆಗಕೂಡದು. ಈ ದೃಷ್ಟಿಕೋನವು ವಿಜ್ಞಾನ-ತಂತ್ರಜ್ಞಾನದ ಬಳಕೆ ಮತ್ತು ವೈಜ್ಞಾನಿಕ ಆವಿಷ್ಕಾರಗಳನ್ನು ಮಾನವ ಸಮಾಜದ ಹಿತಾಸಕ್ತಿಗಾಗಿ ದುಡಿಸಿಕೊಳ್ಳುವ ಸಂದರ್ಭದಲ್ಲಿಯೂ ಅನ್ವಯವಾಗುತ್ತದೆ. ನಮ್ಮ ದೇಶದಲ್ಲಿರುವ ಈ ಬಂಡವಾಳಶಾಹಿ ವ್ಯವಸ್ಥೆಯಲ್ಲಿ, ಎಲ್ಲಾ ಉತ್ಪಾದನೆಗಳಂತೆ ವಿದ್ಯುತ್ ಉತ್ಪಾದನೆಯೂ ಕೂಡ ಅತಿ ಹೆಚ್ಚು ಲಾಭಗಳಿಕೆಯ ಉದ್ದೇಶದಿಂದ ಕೂಡಿದೆ. ಆಡಳಿತಾರೂಢ ಬಂಡವಾಳಶಾಹಿ ವರ್ಗ ಮತ್ತು ಅದರ ಬಾಲಬಡುಕ ಬಿಜೆಪಿ ಸರ್ಕಾರವು ಅಪಾಯರಹಿತವಾಗಿರುವ ಪರಮಾಣು ಶಕ್ತಿಯ ಉತ್ಪಾದನಾ ಕ್ರಮವನ್ನು ಮತ್ತು ವಿಕಿರಣಯುಕ್ತ ತ್ಯಾಜ್ಯದ ಸರಿಯಾದ ನಿರ್ವಹಣೆಗೆ ಸೂಕ್ತ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತವೆ ಎಂದು ನಂಬುವುದು ನಿರರ್ಥಕ. ಯಾವುದೇ ಅಪಾಯವಿಲ್ಲದೆ, ಅಗ್ಗವಾಗಿ ಮತ್ತು ಯಥೇಚ್ಛವಾಗಿ ವಿದ್ಯುತ್ ಉತ್ಪಾದನೆ ಮಾಡುವ ಇತರ ವಿಧಾನಗಳು ಲಭ್ಯವಿರುವಾಗ, ಪರಮಾಣು ಶಕ್ತಿಯ ಮೂಲಕವೇ ವಿದ್ಯುಚ್ಛಕ್ತಿಯನ್ನು ಉತ್ಪಾದನೆ ಮಾಡಲು ಯಾಕಿಷ್ಟು ಒತ್ತು ನೀಡಲಾಗುತ್ತಿದೆ? ಹಲವು ದೇಶಗಳು ಸುರಕ್ಷಿತವಲ್ಲದ ಹಾಗೂ ಅತ್ಯಂತ ದುಬಾರಿಯಾಗಿರುವ ಬ್ರೀಡರ್ ರಿಯಾಕ್ಟರ್ಗಳನ್ನು ಕೈ ಬಿಡುತ್ತಿರುವಾಗ, ವಿದ್ಯುತ್ ಉತ್ಪಾದಿಸಲು ಇದೇ ತಂತ್ರಜ್ಞಾನಕ್ಕೆ ಒತ್ತು ನೀಡಲು ಕೇಂದ್ರದ ಅಣು ಶಕ್ತಿ ಇಲಾಖೆಯು ಈ ಹಠಮಾರಿತನದ ಧೋರಣೆಯನ್ನು ಏಕೆ ತಳೆಯುತ್ತಿದೆ? ಇದಕ್ಕೆ ಉತ್ತರ ಕಂಡುಕೊಳ್ಳಲು, ಪರಮಾಣು ರಿಯಾಕ್ಟರ್ ಹಾಗೂ ಪರಮಾಣು ಶಸ್ತ್ರಾಸ್ತ್ರಗಳ ಉತ್ಪಾದನೆ – ಇವುಗಳ ನಡುವಿನ ಸಂಬಂಧ ಹಾಗೂ ಉತ್ಪಾದನೆಯನ್ನು ನಿಯಂತ್ರಿಸುತ್ತಿರುವ ಭಾರತದ ಬಂಡವಾಳಶಾಹಿ ರಾಜ್ಯದ ಗುಣಲಕ್ಷಣಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಆಲೋಚಿಸಬೇಕಾಗುತ್ತದೆ. ‘ಶಾಂತಿ’ ಕಾಯ್ದೆ 2025ರಲ್ಲಿ ಏನಿದೆ? ‘ಶಾಂತಿ’ ಕಾಯ್ದೆ 2025, ಹಿಂದಿನ ಅಣು ಶಕ್ತಿ ಕಾಯ್ದೆ 1962 ಹಾಗೂ ಪರಮಾಣು ಹಾನಿಗೆ ನಾಗರಿಕ ಹೊಣೆಗಾರಿಕೆ ಕಾಯ್ದೆ 2010 (Civil Liability for Nuclear Damage Act 2010 – CLNDA-2010) ಕಾಯ್ದೆಗಳನ್ನು ಅನೂರ್ಜಿತಗೊಳಿಸಿದೆ. ಶಾಂತಿ ಕಾಯ್ದೆಯ ಮೂಲಕ ನಾಗರಿಕ ಪರಮಾಣು ಚಟುವಟಿಕೆಯಲ್ಲಿ ಖಾಸಗಿ ಕಾರ್ಪೋರೇಟ್ ಸಂಸ್ಥೆಗಳಿಗೆ ಅನಿರ್ಬಂಧಿತ ಅವಕಾಶ ನೀಡಲಾಗಿದೆ. ಇಲ್ಲಿಯತನಕ ಇದು ಕೇಂದ್ರ ಸರ್ಕಾರದ ಅಡಿಯಲ್ಲಿ ಮೀಸಲಾಗಿದ್ದ ಕ್ಷೇತ್ರವಾಗಿತ್ತು. ಈಗ ಪರಮಾಣು ಶಕ್ತಿ ಮೂಲಕ ವಿದ್ಯುತ್ ಉತ್ಪಾದನೆಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಒಗ್ಗೂಡಿಸುವ, ಅಗತ್ಯ ಸಾಮಗ್ರಿಗಳನ್ನು ಒದಗಿಸುವ, ಅಣು ತ್ಯಾಜ್ಯದ ವಿಲೇವಾರಿ ಮಾಡುವ ಹೊಣೆಗಾರಿಕೆ ಮಾತ್ರ ಕೇಂದ್ರ ಸರ್ಕಾರದ್ದಾಗಿರುತ್ತದೆ. ಪರಮಾಣು ರಿಯಾಕ್ಟರ್ಗಳನ್ನು ಕಟ್ಟಿ, ಕೆಲಸ ಆರಂಭಿಸಿ, ವಿದ್ಯುತ್ ಉತ್ಪಾದಿಸಿ, ಗ್ರಿಡ್ಗಳಿಗೆ ವಿದ್ಯುತ್ ಸರಬರಾಜು ಮಾಡಿ, ಲಾಭಗಳಿಸುವುದು ಕಾರ್ಪೋರೇಟ್ ಸಂಸ್ಥೆಗಳಿಗೆ ದೊರಕಿರುವ ಬಳುವಳಿ. ಅಂದರೆ ಎಲ್ಲಾ ಹೊಣೆ ಕೇಂದ್ರ ಸರ್ಕಾರದ್ದು, ಲಾಭ ಮಾತ್ರ ಖಾಸಗೀ ಬಂಡವಾಳಗಾರರದ್ದು! ‘ಶಾಂತಿ’ ಕಾಯ್ದೆ 2025ರಿಂದ ಆಗಿರುವ ಬದಲಾವಣೆಗಳು ಇಂತಿವೆ: ಈ ಹಿಂದೆ, ಪರಮಾಣು ಸಲಕರಣೆಗಳ ಸರಬರಾಜಿಗೆ ಸಂಬಂಧಿಸಿರುವ ಹೊಣೆಗಾರಿಕೆಯ ಕಲಂನ್ನು ಕೈಬಿಡಲಾಗಿದೆ. ಅಂದರೆ, ಆ ಮೂಲಕ ಅಪಘಾತದ ಸಂದರ್ಭದಲ್ಲಿ, ದೋಷಪೂರಿತ ಸಲಕರಣೆಗಳನ್ನು ಸರಬರಾಜು ಮಾಡುವ ಕಂಪನಿಗಳು, ಮುಖ್ಯವಾಗಿ ಅಮೇರಿಕದ ಕಂಪೆನಿಗಳು ತಮ್ಮ ಹೊಣೆಗಾರಿಕೆ ತಪ್ಪಿಸಿಕೊಳ್ಳಲು ಅನುವು ಮಾಡಿಕೊಡಲಾಗಿದೆ. ಭೂಪಾಲ್ ಅನಿಲ ದುರಂತದ ಸಂದರ್ಭದಲ್ಲಿ ಯೂನಿಯನ್ ಕಾರ್ಬೈಡ್ ಕಂಪನಿಯ ಮಾಲೀಕತ್ವ, ಪರಿಹಾರ ನೀಡಲು ದಶಕಗಳ ಸಮಯ ತೆಗೆದುಕೊಂಡಿರುವ ಕರಾಳ ಅನುಭವ ಎದುರಿಗಿದ್ದರೂ ಸಹ ಈ ಖಾಸಗಿ ಬಂಡವಾಳಗಾರರಿಗೆ ಈ ‘ಕಾಣಿಕೆ’ ನೀಡಲಾಗಿದೆ. ಆ ಹಿನ್ನೆಲೆಯಲ್ಲೇ CLNDA 2010 ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. CLNDA 2010ರ ಕಾಯ್ದೆಯ ಪ್ರಕಾರ ಪರಮಾಣು ಅಪಘಾತ ನಡೆದಾಗ ದೋಷಪೂರಿತ ಸಲಕರಣೆಗಳನ್ನು ಸರಬರಾಜು ಮಾಡಿದ ಕಂಪನಿಗಳು ಹೊಣೆ ಹೊರಬೇಕು ಹಾಗೂ ಬಾಧಿತರಿಗೆ ಪರಿಹಾರ ನೀಡುವ ಜವಾಬ್ದಾರಿ ಆಯಾ ಕಂಪೆನಿಗಳಿಗೆ ಸೇರಿದ್ದೇ ಆಗಿತ್ತು. ಆದರೆ, ಈಗ ಎಲ್ಲಾ ಕಂಪನಿಗಳನ್ನು ಈ ಮೂಲಭೂತ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ. ಭವಿಷ್ಯದಲ್ಲಿ, ಕೇಂದ್ರ ಸರ್ಕಾರವು ‘ಪರಮಾಣು ಹೊಣೆಗಾರಿಕೆ ನಿಧಿ’ಯನ್ನು ಸ್ಥಾಪಿಸುತ್ತದೆ. ಅನಾಹುತ ಸಂಭವಿಸಿದಾಗ ಖಾಸಗಿ ಪರಮಾಣು ಸಂಸ್ಥೆಗಳು ನೀಡಬೇಕಾದ ಪರಿಹಾರದ ಮೊತ್ತವನ್ನು ನಿಗದಿ ಮಾಡಲಾಗುತ್ತದೆ. ಒಂದು ವೇಳೆ ಪರಿಹಾರ ನೀಡಬೇಕಾದ ಮೊತ್ತವು ನಿಗದಿತ ಪರಿಹಾರ ಮೊತ್ತಕ್ಕಿಂತ ಹೆಚ್ಚಾದಲ್ಲಿ, ಆಗ ಕೇಂದ್ರ ಸರ್ಕಾರವು ಮೇಲಿನ ನಿಧಿಯಿಂದ ಆ ಅಂತರವನ್ನು ಭರಿಸುತ್ತದೆ. ಅಂದರೆ, ಖಾಸಗಿ ಕಂಪನಿಗಳು ತಮ್ಮ ಲಾಭದಾಹಕ್ಕಾಗಿ ಎಸಗುವ ಅನಾಹುತಗಳಿಗೆ ಜನರ ತೆರಿಗೆ ಹಣದಿಂದ ಪರಿಹಾರ ನೀಡಲಾಗುತ್ತದೆ. ಖಾಸಗಿ ಕಾರ್ಪೋರೇಟ್ ಸಂಸ್ಥೆಗಳನ್ನು ಕೇಂದ್ರ ಸರ್ಕಾರವು ಎಲ್ಲಾ ಬದ್ಧತೆಗಳಿಂದಲೂ ಮುಕ್ತಗೊಳಿಸಿದೆ. ಭಾರತದಲ್ಲಿ ಪರಮಾಣು ಶಕ್ತಿಗೆ ಸಂಬಂಧಪಟ್ಟಂತೆ ಇರುವ ನಿಯಂತ್ರಣ ಸಂಸ್ಥೆಗೆ ಶಾಸನಬದ್ಧವಾದ ಸ್ವಾತಂತ್ರ್ಯವನ್ನು ಮತ್ತು ಅಧಿಕಾರವನ್ನೂ ಈ ಕಾಯ್ದೆಯು ನೀಡಿಲ್ಲ. ಸುರಕ್ಷತೆಯಂತೂ ಸಂಪೂರ್ಣವಾಗಿ ಮರೀಚಿಕೆಯಾಗಿದೆ. ತುರ್ತು ಅಥವಾ ಇನ್ನಾವುದೇ ಸಂದರ್ಭದಲ್ಲೂ ಸಾರ್ವಜನಿಕರನ್ನು ಸರ್ಕಾರಗಳು ತೊಡಗಿಸಿಕೊಳ್ಳುವುದಿಲ್ಲ ಅಥವಾ ಜನರನ್ನು ಅಂತಹ ಸಂದರ್ಭಗಳಿಗಾಗಿ ತಯಾರು ಮಾಡಿರುವುದಿಲ್ಲ. ಬಲಿಯಾಗುವವರಲ್ಲಿ ದೊಡ್ಡ ಸಂಖ್ಯೆಯ ಜನರಿಗೆ ಕೋರ್ಟ್ ಗಳು ಕೂಡ ಬಲು ದೂರ. ಇಂತಹ ಸಂದರ್ಭದಲ್ಲಿ, ಹೊಣೆಗಾರಿಕೆಗೆ ಸಂಬಂಧಿಸಿದ ಕಾನೂನನ್ನು ದುರ್ಬಲಗೊಳಿಸಿರುವುದು ಘೋರತರ ಅನ್ಯಾಯವಾಗಿದೆ. ಕಾಯ್ದೆಯ ಮತ್ತೊಂದು ಅನುಚ್ಛೇದದ ಪ್ರಕಾರ 20 ವರ್ಷದ ನಂತರ ಪರಮಾಣು ಅಪಘಾತಗಳಿಂದ ಉಂಟಾಗುವ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ ಕೇಳುವಂತಿಲ್ಲ. ಅಧ್ಯಯನದ ಪ್ರಕಾರ ವಿಕಿರಣಗಳಿಂದ ಉಂಟಾಗುವ ಆನುವಂಶಿಕ ಕಾಯಿಲೆಗಳು, ಕ್ಯಾನ್ಸರ್, 20-30 ವರ್ಷಗಳ ನಂತರ ಪ್ರಕಟಗೊಳ್ಳಬಹುದು. ಆದರೆ, ಅವಕ್ಕೆ ಯಾವುದೇ ಪರಿಹಾರ ಸಿಗುವುದಿಲ್ಲ. ಅಂದರೆ, ‘ಶಾಂತಿ’ ಕಾಯ್ದೆಯು ವಿಕಿರಣ ಪ್ರಭಾವಗಳ ಕುರಿತು ನಡೆದಿರುವ ವೈಜ್ಞಾನಿಕ ಅಧ್ಯಯನಗಳ ತಿಳುವಳಿಕೆಯನ್ನು ಪರಿಗಣಿಸುವುದಿಲ್ಲ. ಪರಮಾಣು ಕ್ಷೇತ್ರದ ಉದಾರೀಕರಣವು ಶಸ್ತ್ರಾಸ್ತ್ರ ಉದ್ಯಮಕ್ಕೆ ವರದಾನ ಪರಮಾಣು ಕ್ಷೇತ್ರದ ಉದಾರೀಕರಣ ಕೇವಲ ವಿದ್ಯುತ್ ಉತ್ಪಾದನೆಗೆ ಮಾತ್ರವೇ? ಅಥವಾ ಭಾರತದ ಕಾರ್ಪೋರೇಟ್ ದೈತ್ಯರ ಶಸ್ತ್ರಾಸ್ತ್ರ ಉದ್ಯಮಕ್ಕೆ ಮತ್ತಷ್ಟು ಆಕರ್ಷಕ ಕೊಡುಗೆ ನೀಡುವುದಕ್ಕಾಗಿಯೇ? ಟಾಟಾ, ಅದಾನಿ, ಮಹೀಂದ್ರಾ, ಎಲ್ಅಂಡ್ಟಿ ಇತ್ಯಾದಿಗಳು ಈಗಾಗಲೇ ಶಸ್ತ್ರಾಸ್ತ್ರ ಉದ್ದಿಮೆಗಳನ್ನು ನಡೆಸುತ್ತಿವೆ. ಟಾಟಾ ಈಗಾಗಲೆ ಅಮೇರಿಕದ ದೈತ್ಯ ಲಾಕ್ಹೀಡ್ ಮಾರ್ಟಿನ್ ಸಹಯೋಗದೊಂದಿಗೆ ಶಸ್ತ್ರಾಸ್ತ್ರ ಉದ್ದಿಮೆಯಲ್ಲಿ ತೊಡಗಿದೆ. ಅಮೇರಿಕದ ವಿಮಾನಯಾನ ಉದ್ದಿಮೆ ಬೋಯಿಂಗ್, ಇಂಗ್ಲೆಂಡ್ನ ಬಿಎಇ ಸಿಸ್ಟಮ್ಸ್ ಹಾಗೂ ಭಾರತದ ಮಹೀಂದ್ರಾಗಳು ಶಸ್ತ್ರಾಸ್ತ್ರಗಳ ಉತ್ಪಾದನೆಯಲ್ಲಿ ಜಂಟಿಯಾಗಿ ತೊಡಗಿವೆ. 2025ರ ಮಾರ್ಚ್ ನಲ್ಲಿ, ಅಮೇರಿಕದ ಇಂಧನ ಇಲಾಖೆಯು ಎಸ್.ಎಂ.ಆರ್-300 ಎಂಬ ರಿಯಾಕ್ಟರ್ ತಂತ್ರಜ್ಞಾನವನ್ನು ಭಾರತದ ಕಂಪನಿಗಳಿಗೆ ಮಾರಾಟ ಮಾಡಲು, ‘ಹೊಲ್ಟೆಕ್ ಇಂಟರ್ನ್ಯಾಷನಲ್’ಗೆ ರಫ್ತು ಪರವಾನಗಿ ನೀಡಿತ್ತು. ಅಮೇರಿಕ ಹಾಗೂ ಭಾರತ ಸರ್ಕಾರಗಳು, ಇಂಡೊ-ಯುಎಸ್ ನಾಗರಿಕ ಪರಮಾಣು ಒಪ್ಪಂದವನ್ನು ಸಂಪೂರ್ಣವಾಗಿ ಜಾರಿಗೆ ತರಲು ಒಪ್ಪಿವೆ. ಇದರಿಂದ ಅಮೇರಿಕಕ್ಕೆ ಅಪಾರ ಲಾಭ ಮತ್ತು ಭಾರತದ ಜನರಿಗೆ ಪಂಗನಾಮವಾಗಲಿದೆ. ಮಾತು ಮತ್ತು ವಾಸ್ತವಗಳ ನಡುವಿನ ಅಂತರ ಪರಮಾಣು ಶಕ್ತಿಯನ್ನು ‘ಶುದ್ಧವಾದ ಶಕ್ತಿ’ ಎಂದು ಪ್ರಧಾನಮಂತ್ರಿ ಬಣ್ಣಿಸಿದ್ದಾರೆ. ಆದರೆ, ಇಲ್ಲಿ ಬಳಸುವ ಧಾತುಗಳು ಹೊರಸೂಸುವ ವಿಕಿರಣಗಳು ಖಾಯಂ ಸ್ವರೂಪದ, ದೊಡ್ಡಮಟ್ಟದ, ಗಂಭೀರವಾದ ಅಪಾಯಗಳಿಗೆ ದಾರಿ ಮಾಡಿಕೊಡುತ್ತವೆ. ಈ ಪರಮಾಣು ತ್ಯಾಜ್ಯಗಳು ಬಹಳ ಕಾಲ ವಿಕಿರಣವನ್ನು ಸೂಸುತ್ತಾ ಹಾಗೆಯೇ ಇರುತ್ತವೆ. ಇದರ ಪರಿಣಾಮಗಳು ಕೆಲವು ಗಂಟೆಗಳಿಂದ, ದಿನಗಳಿಂದ ಹಿಡಿದು, ಶತಮಾನ-ಸಹಸ್ರಮಾನಗಳವರೆಗೆ ಉಂಟಾಗುತ್ತಲೇ ಇರುತ್ತವೆ. ಶತಶತಮಾನಗಳವರೆಗೆ ಆನುವಂಶಿಕ ಕಾಯಿಲೆಗಳಿಂದ ಬಾಧಿತರು ನರಳಬೇಕಾಗುತ್ತದೆ. ವಿಕಿರಣ ಸೋರಿಕೆ, ಅಪಘಾತ ಹಾಗೂ ತ್ಯಾಜ್ಯಗಳ ಅಪವಿಲೇವಾರಿ-ಇಂತಹ ಸಂದರ್ಭಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಪ್ರಧಾನಿ ಮೋದಿ ಅವರು ಹೇಳಿದ ಹಾಗೆ, ಇದು ಸ್ವಚ್ಛವಾದ ಶಕ್ತಿ ಹೇಗಾಗುತ್ತದೆ? ಕೊನೆಯ ಮಾತು ‘ಶಾಂತಿ’ ಕಾಯ್ದೆಯು ಖಂಡಿತವಾಗಿಯೂ ಶಾಂತಿ ಸ್ಥಾಪನೆಗಾಗಿ ಅಲ್ಲ. ಬದಲಿಗೆ ಸಾಂದ್ರೀಕೃತ ಯುರೇನಿಯಂ(Enriched Uranium) ಧಾತುವನ್ನು ತಯಾರಿಸಿ, ಪರಮಾಣು ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುವ ಉದ್ದೇಶವನ್ನು ಈ ಕಾಯ್ದೆಯು ಹೊಂದಿದೆ. ಭಾರತವು ಸಾಮ್ರಾಜ್ಯಶಾಹಿ ಜಗತ್ತಿನಲ್ಲಿ ಪರಮಾಣು ಶಕ್ತಿಯುಳ್ಳ ದೇಶವಾಗಿ ಹೊರಹೊಮ್ಮುತ್ತಿದೆ. ಭಾರತದ ಕಾರ್ಪೋರೇಟ್ ದೊರೆಗಳಿಗೆ ವಿದೇಶಿ ದೈತ್ಯರ ಜೊತೆಗೆ ಒಪ್ಪಂದ ಮಾಡಿಕೊಂಡು, ಪರಮಾಣು ಶಸ್ತ್ರಾಸ್ತ್ರಗಳನ್ನು ಉತ್ಪಾದಿಸಿ, ಅತಿಹೆಚ್ಚು ಲಾಭ ಮಾಡುವುದಕ್ಕಾಗಿಯೇ ಈ ‘ಶಾಂತಿ’ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ವಿದ್ಯುತ್ ಉತ್ಪಾದನೆ ಎನ್ನುವುದು ಒಂದು ನೆಪ ಮಾತ್ರ. ಇದು ವಿಶ್ವದಲ್ಲಿ ಇನ್ನಷ್ಟು ಅಶಾಂತಿ ಸೃಷ್ಟಿಸುವುದಕ್ಕಾಗಿಯೇ ಎಂದು ಹೇಳಿದರೆ ತಪ್ಪಾಗಲಾರದು.