Loading..

ಮಹಿಳಾ ಮತಾಧಿಕಾರ ಪುರುಷರಿಗೇ ಏಕೆ ಅವಶ್ಯಕ

ಮಹಿಳಾ ಮತಾಧಿಕಾರ ಪುರುಷರಿಗೇ ಏಕೆ ಅವಶ್ಯಕ (ಅನೇಕ ತರಹದ ದೈಹಿಕ ನ್ಯೂನತೆಗಳನ್ನು ಮೀರಿ ಸಮಾಜವಾದಕ್ಕಾಗಿ ಹೋರಾಡಿದ ಮಹಾನ್ ಚೇತನ ಹೆಲೆನ್ ಕೆಲರ್ ಅವರ ಈ ಲೇಖನ ಅಕ್ಟೋಬರ್ 17, 1913ರಂದು, ಅಮೆರಿಕಾದ ಪತ್ರಿಕೆ ನ್ಯೂಯಾರ್ಕ್ ಕಾಲ್‌ನಲ್ಲಿ ಪ್ರಕಟವಾಗಿತ್ತು; ಅಂತರರಾಷ್ಟ್ರೀಯ ಮಹಿಳಾ ದಿನ, ಮಾರ್ಚ್ 8, ತಮ್ಮ ಹಕ್ಕುಗಳಿಗಾಗಿ ಮಹಿಳೆಯರು ಹೋರಾಡಿದ, ಮಡಿದ ದಿನ. ಈ ಸಂದರ್ಭದಲ್ಲಿ ಅವರ ಲೇಖನದ ಭಾವಾನುವಾದವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.) ಮಹಿಳೆಯರು ಸ್ವತ: ಗಂಡಾಂತರವಾಗಿ ಪರಿಣಮಿಸುವ ಕಾಲ ದೂರವಿಲ್ಲ ಎಂದು ಅನೇಕರು ಘೋಷಿಸುತ್ತಾರೆ. ನಿಸ್ಸಂದೇಹವಾಗಿ ಇದು ಸತ್ಯವೇ. ವಾಸ್ತವದಲ್ಲಿ, ಈ ಗಂಡಾಂತರ ಈಗಾಗಲೇ ಬಹಳಷ್ಟು ಮನೆಗಳನ್ನು ಪ್ರವೇಶಿಸಿದೆ ಎಂದು ನಾನು ಶಂಕಿಸುತ್ತೇನೆ. ಖಂಡಿತವಾಗಿಯೂ ಹೆಚ್ಚಿನ ಸಂಖ್ಯೆಯ ಪುರುಷರು ಉಪಹಾರದ ಮೇಜಿನ ಬಳಿ ಇದಕ್ಕೆ ಮುಖಾಮುಖಿಯಾಗಿದ್ದಾರೆ. ಅವರು ಎಷ್ಟೇ ಕಿವುಡರಂತೆ ನಟಿಸಿದರೂ, ಈ ಗಂಡಾಂತರದ ಧ್ವನಿಯನ್ನು ಕೇಳಿಸಿಕೊಳ್ಳದೆ ಇರಲು ಅವರಿಗೆ ಸಾಧ್ಯವಿಲ್ಲ. ಮಹಿಳೆಯರು ತಮ್ಮ “ದೈವಿಕ ಹಕ್ಕುಗಳು,” “ಬದಲಾಯಿಸಲಾಗದ ಹಕ್ಕುಗಳು,” “ಅವಿಭಾಜ್ಯ ಹಕ್ಕುಗಳಿಗಾಗಿ” ಪಟ್ಟು ಹಿಡಿಯುತ್ತಿದ್ದಾರೆ. ಈ ಪದಗುಚ್ಛಗಳು ಯಾರೊಬ್ಬರು ಬಯಸುವಷ್ಟು ಸಂವೇದನಾಶೀಲವಾಗಿಲ್ಲ. ಆಳವಾಗಿ ಯೋಚಿಸಿದರೆ, ದೈವಿಕ, ಬದಲಾಯಿಸಲಾಗದ ಅಥವಾ ಅವಿಭಾಜ್ಯ ಹಕ್ಕುಗಳು ಎಂಬಂತಹವುಗಳೇ ಇಲ್ಲ. ಹಕ್ಕುಗಳು ಎಂಬುದು ನಾವು ಅವುಗಳಿಗಾಗಿ ಹೋರಾಡುವಷ್ಟು ಪ್ರಬಲರಾದಾಗ ನಮಗೆ ಸಿಗುವಂತಹವುಗಳು. ಪುರುಷರು ಇಂದು, ದೈವಿಕ, ಬದಲಾಯಿಸಲಾಗದ ಮತ್ತು ಅವಿಭಾಜ್ಯ ಎಂದು ಕರೆಯುವ ಹಕ್ಕುಗಳನ್ನು ಪಡೆಯಲು ನೂರಾರು ವರ್ಷಗಳ ಕಠಿಣ ಹೋರಾಟ ಮಾಡಿದ್ದಾರೆ. ಇಂದು ಮಹಿಳೆಯರು ಆಗ್ರಹಿಸುತ್ತಿರುವ ಅಂತಹ ಹಕ್ಕುಗಳನ್ನು ನಾಳೆ ಪ್ರಶ್ನಿಸುವಂತಹ ಮೂರ್ಖರು ಯಾರೂ ಇರುವುದಿಲ್ಲ. ಬುದ್ಧಿವಂತಿಕೆ ಇರುವ ಯಾರಿಗಾದರೂ ನಮ್ಮ ಕೆಲವು ಹಳೆಯ ಆಲೋಚನೆಗಳು ಇಂದು ಅಪ್ರಸ್ತುತ ಮತ್ತು ಹೊಸ ಯುಗದ ಪ್ರಶ್ನಿಸುವ ಮನೋಭಾವದ ಮುಂದೆ ಸಂಪ್ರದಾಯಗಳು ಕಂಬಿ ಕೀಳುತ್ತಿವೆ ಎಂಬುದು ತಿಳಿದಿದೆ. ಹೊಸ ಪರಿಸ್ಥಿತಿಗಳು ಮತ್ತು ಹೊಸ ಆಲೋಚನೆಗಳ ಬೆಳಕಿನಲ್ಲಿ ಮಾನವ ವ್ಯವಹಾರಗಳನ್ನು ಅವಲೋಕಿಸುವ ಸಮಯ ಇದು; ಈ ನಿಟ್ಟಿನಲ್ಲಿ ಪುರುಷನೇ ಮನುಕುಲದ ಭವಿಷ್ಯವನ್ನು ನಿರ್ಧರಿಸುವವನು ಎಂಬ ಸಂಪ್ರದಾಯ ಕೊಚ್ಚಿಹೋಗಲಿದೆ. ಈ ವಿಶ್ವದಲ್ಲಿ ಸಾಕಷ್ಟು ತಪ್ಪಿದೆ ಎಂಬುದನ್ನು ಸಾಮಾನ್ಯನೂ ಬಲ್ಲ. ಇದು ಹಳೆಯ ಶೈಲಿಯದಾಗಿದ್ದು, ಹಳೆಯ ಜಾಡಿನಲ್ಲೇ ಸಾಗುತ್ತಿದೆ. ಇಲ್ಲಿ ವಿವೇಕಯುತ ಮಾರ್ಗದರ್ಶನವೂ ಇಲ್ಲ, ಹತೋಟಿಯೂ ಇಲ್ಲ. ನಮ್ಮ ಅವಕಾಶಗಳು ಮತ್ತು ಅನುಕೂಲಗಳಿಂದ ನಮಗೆ ಗರಿಷ್ಠ ಪ್ರಯೋಜನ ಸಿಗುತ್ತಿಲ್ಲ…….ಬಹುಶ: ಇಂದಿನ ಅಸ್ತವ್ಯಸ್ತ ಸ್ಥಿತಿಗೆ ಒಂದು ಮುಖ್ಯ ಕಾರಣವೆಂದರೆ, ಜಗತ್ತು ತನ್ನ ಅರ್ಧ ಭಾಗದೊಂದಿಗೆ ಮಾತ್ರ ಮುನ್ನಡೆಯಲು ಪ್ರಯತ್ನಿಸುತ್ತಿರುವುದು. ಮನುಕುಲಕ್ಕೆ ಜಗತ್ತನ್ನು ಉತ್ತಮ ನೆಲೆಯನ್ನಾಗಿ ಮಾಡುವಲ್ಲಿ ಬಳಸಬೇಕಾದ ಮಹಿಳಾ ಶಕ್ತಿಯು ಎಲ್ಲೆಡೆ ವ್ಯರ್ಥವಾಗುತ್ತಿರುವುದನ್ನು ನಾವು ಕಾಣುತ್ತೇವೆ. ವಿವೇಕದಿಂದ, ಒಳ್ಳೆಯ ರೀತಿಯಿಂದ ಬದುಕಲು ಮಹಿಳೆಯರ ಮತಗಳು ಹೇಗೆ ನೆರವಾಗುತ್ತವೆ ಎಂದು ನೋಡೋಣ. ಮಹಿಳೆಯರು ಮತ ಚಲಾಯಿಸಿದಾಗ, ಪುರುಷರು ಅವರ ಆಕಾಂಕ್ಷೆಗಳನ್ನು ಊಹಿಸಲು ಮತ್ತು ಈ ಬಗ್ಗೆ ತಪ್ಪು ಊಹೆ ಮಾಡಲು ಆಸ್ಪದವಿರುವುದಿಲ್ಲ. ಮಹಿಳೆಯರು ತಮ್ಮ ಹಿತಾಸಕ್ತಿಗಳಿಗೆ ವಿರುದ್ಧವಾಗಿರುವ ಪುರುಷ ನಿರ್ಮಿತ ಕಾನೂನುಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ. ಮಹಿಳೆಯೆಡೆಗೆ ಮಾನವೀಯವಾಗಿ ವರ್ತಿಸಲು ಮತ್ತು ಅವಳ ಹಕ್ಕುಗಳನ್ನು ರಕ್ಷಿಸಲು ಪುರುಷನ ಎದೆಗಾರಿಕೆಯ ಸ್ವಭಾವವು ಪ್ರೇರೇಪಿಸುತ್ತದೆ ಎಂದು ಕೆಲವರು ಅಂದುಕೊಳ್ಳುತ್ತಾರೆ. ಕೆಲವು ಪುರುಷರು ಕೆಲವು ಮಹಿಳೆಯರನ್ನು ರಕ್ಷಿಸುತ್ತಾರೆ ಸಹ. ಆದರೆ, ಎಲ್ಲಾ ಮಹಿಳೆಯರು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿರಬೇಕು ಮತ್ತು ಈ ಊಳಿಗಮಾನ್ಯ ಜವಾಬ್ದಾರಿಯಿಂದ ಪುರುಷನನ್ನು ಮುಕ್ತಗೊಳಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ. ರಾಜಕೀಯ ಅಧಿಕಾರವು ರಾಜ್ಯದ ವ್ಯವಹಾರಗಳನ್ನು ರೂಪಿಸುತ್ತದೆ ಮತ್ತು ಮನುಷ್ಯರ ನಡುವಿನ ದೈನಂದಿನ ಸಂಬಂಧಗಳನ್ನು ನಿರ್ಧರಿಸುತ್ತದೆ. ಮತದಾನದ ಹಕ್ಕಿರುವ ಪ್ರಜೆಯೇ ತನ್ನ ಸ್ವಂತ ವಿಧಿಗೆ ಜವಾಬ್ದಾರ. ಈ ಅಧಿಕಾರವಿಲ್ಲದ ಮತ್ತು “ನೈಸರ್ಗಿಕ ರಕ್ಷಕರು” ಇಲ್ಲದ ಮಹಿಳೆಯರು ಪುರುಷ ನಿರ್ಮಿತ ಕಾನೂನುಗಳ ಕೃಪೆಯಲ್ಲಿದ್ದಾರೆ. ಮತ್ತು ಈ ಕಾನೂನುಗಳು ಹೆಚ್ಚಿನಂಶ ಅವರಿಗೆ ಅನ್ಯಾಯ ಮಾಡುತ್ತವೆ ಎಂದು ಅನುಭವವು ಸಿದ್ಧ ಪಡಿಸುತ್ತದೆ. ತಂದೆ ಮತ್ತು ಪತಿಯ ಸುಪರ್ದಿಯಲ್ಲಿರುವ ಮಹಿಳೆಯರನ್ನು ರಕ್ಷಿಸಲು ಮಾಡಿದ ಶಾಸನಗಳು, ರಾಜ್ಯದ ಪೊಲೀಸರೇ ಏಕೈಕ ರಕ್ಷಕರಾಗಿರುವ ದುಡಿಯುವ ಮಹಿಳೆಯರನ್ನು ರಕ್ಷಿಸುವುದಿಲ್ಲ. ಕೆಲವು ರಾಜ್ಯಗಳಲ್ಲಿ ಮಹಿಳೆಯರ ವೇತನವು ಅವರ ತಂದೆ ಅಥವಾ ಪತಿಗೆ ಸೇರಿರುತ್ತದೆ. ಅವರು ಆಸ್ತಿಯನ್ನು ಹೊಂದುವಂತಿಲ್ಲ. ಈ ತಥಾಕಥಿತ ಪುರುಷ ಪ್ರಜಾಪ್ರಭುತ್ವದ ಕೆಲವೆಡೆ ತಂದೆಯೇ ಮಗುವಿನ ಏಕೈಕ ವಾರಸುದಾರ. ಆತ ಇನ್ನೂ ಹುಟ್ಟದ ಮಗುವನ್ನು ಕೂಡ ಬೇರೆಯವರಿಗೆ ಕೊಟ್ಟು ಬಿಡಬಹುದು ಎಂದು ನಾನು ಕೇಳಿದ್ದೇನೆ. ವಿವಾಹದ ವಯಸ್ಸಿಗೆ (age of consent) ಸಂಬಂಧಿಸಿದ ಶಾಸನಗಳು, ಈ ಬಗ್ಗೆ ಮಹಿಳೆಗೆ ಧ್ವನಿಯೇ ಇಲ್ಲ ಎಂಬುದಕ್ಕೆ ಮತ್ತೊಂದು ಪುರಾವೆಯಾಗಿದೆ. ದುಡಿಯುವ ಮಹಿಳೆಯರಿಗೆ ಸಂಬಂಧಿಸಿದ ನಿಯಮಗಳು, ಪುರುಷರು ತಮ್ಮ ‘ಸುಪರ್ದಿಯಲ್ಲಿರುವ ಮಹಿಳೆಯರನ್ನು’ ಮಾತ್ರವೇ ರಕ್ಷಿಸುವಲ್ಲಿ ಜತನದಿಂದ ಇದ್ದಾರೆ ಎಂಬುದಕ್ಕೆ ನಿದರ್ಶನ. ಆರ್ಥಿಕ ತುರ್ತುಗಳು ಮಹಿಳೆಯರನ್ನು ತಮ್ಮ ಮತದಾನದ ಹಕ್ಕಿಗಾಗಿ ಒತ್ತಾಯಿಸಲು ಪ್ರೇರೇಪಿಸಿವೆ. ಹೆಚ್ಚಿನ ಸಂಖ್ಯೆಯ ಮಹಿಳೆಯರಿಗೆ ಶಿಕ್ಷಣದ ಪ್ರಮುಖ ಸಾರ್ವಜನಿಕ ಜವಾಬ್ದಾರಿಯನ್ನು ಒಪ್ಪಿಸಲಾಗಿದೆ. ಆದರೂ ಶಿಕ್ಷಕಿಯರಿಗೆ ಗೌರವಯುತವಾಗಿ ಬದುಕುವಂತಹ ವೇತನವಿಲ್ಲ. ಈ ಅತಿಯಾಗಿ ಕೆಲಸ ಮಾಡುವ, ಕಡಿಮೆ ವೇತನ ಪಡೆಯುವ, ಮತದಾನದ ಹಕ್ಕಿಲ್ಲದ ಮಹಿಳೆಯರಿಗೆ ಯಾವ ಪರಿಹಾರವಿದೆ? ರಾಜಕೀಯವಾಗಿ ಅವರಿಗೆ ಯಾವುದೇ ಬೆಲೆ ಇಲ್ಲ. ಇತ್ತೀಚೆಗೆ ಮಹಿಳಾ ಸಂಘಟನೆಯೊಂದು ನ್ಯೂಯಾರ್ಕ್ ಶಾಸಕಾಂಗದಿಂದ ಕಲ್ಯಾಣ ಕ್ರಮವೊಂದನ್ನು ಪಡೆಯಲು ಬಯಸಿತು. 5,000 ಮಹಿಳೆಯರು ಸಹಿ ಮಾಡಿದ ಅರ್ಜಿಯನ್ನು ಮಸೂದೆಯ ವರದಿ ನೀಡಬೇಕಾದ ಸಮಿತಿಯ ಅಧ್ಯಕ್ಷರ ಮುಂದೆ ಇಡಲಾಯಿತು. ಅದು ಒಳ್ಳೆಯ ಮಸೂದೆ ಮತ್ತು ಅಂಗೀಕಾರವಾಗಬೇಕು ಎಂದು ಅವರು ಹೇಳಿದರು. ಮಹಿಳೆಯರು ಸ್ವಲ್ಪ ಸಮಯ ಕಾಯ್ದ ನಂತರ, ಮಸೂದೆ ಏನಾಯಿತು ಎಂದು ತಿಳಿಯಬಯಸಿದರು….. ಈ ಬಗ್ಗೆ ಮರೆತೇ ಹೋದ ಅವರು ನಂತರ ಹೇಳಿದ್ದು: “5,000 ಮಹಿಳೆಯರು ಸಹಿ ಮಾಡಿದ ಅರ್ಜಿಯು ಅದು ಬರೆದ ಕಾಗದದಷ್ಟೂ ಬೆಲೆ ಬಾಳುವುದಿಲ್ಲ. ಐದು ಪುರುಷರಿಂದ ಸಹಿ ಮಾಡಿಸಿ ತನ್ನಿ, ನಾವು ಅದರ ಬಗ್ಗೆ ಏನಾದರೂ ಮಾಡುತ್ತೇವೆ.” ನಾವು ಮತವನ್ನು ಒತ್ತಾಯಿಸಲು ಇದೂ ಒಂದು ಕಾರಣ: 5,000 ಮಹಿಳೆಯರ ಧ್ವನಿ ಐದು ಪುರುಷರಿಗಿಂತ ಹೆಚ್ಚು ಮೌಲಿಕವಾಗಿರಬೇಕೆಂದು ನಾವು ಬಯಸುತ್ತೇವೆ. ಮತದಾನದ ಅಗತ್ಯವಿರುವ ಬಹುಪಾಲು ಮಹಿಳೆಯರು ವೇತನ ಪಡೆಯುವ ಕೆಲಸಗಾರರು. ಕೈ ಉಪಕರಣಗಳ ಬದಲಿಗೆ ಯಂತ್ರಗಳು ಬಂದಾಗಿನಿಂದ ಕೈಗಾರಿಕಾ ಜಗತ್ತಿನಲ್ಲಿ ಅಪಾರ ಬದಲಾವಣೆ ಉಂಟಾಗಿದೆ. ಪುರುಷರು ಮತ್ತು ಮಹಿಳೆಯರು ಉತ್ಪಾದನೆ ಮತ್ತು ವಿತರಣೆಯ ಈ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳುವ ಅನಿವಾರ್ಯತೆ ಉಂಟಾಗಿದೆ. ಹಿಂದೆಂದೂ ಇಲ್ಲದ ರೀತಿಯಲ್ಲಿ, ಯಂತ್ರಗಳನ್ನು ಬಳಸಿ ಪುರುಷ ಮತ್ತು ಮಹಿಳೆಯರ ಶ್ರಮವನ್ನು ಶೋಷಿಸಲಾಗುತ್ತಿದೆ. ಈ ಬದಲಾವಣೆಯಿಂದ ಉಂಟಾದ ಭೀಕರ ಜೀವನ ಹೋರಾಟದ ಗತಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಪುರುಷರಿಗಿಂತ ಹೆಚ್ಚು ಶೋಷಣೆಗೆ ಗುರಿಯಾಗುತ್ತಾರೆ. ವಾಸ್ತವವಾಗಿ, ಈ ಆರ್ಥಿಕ ಒತ್ತಡವು ಅನೇಕ ಮಹಿಳೆಯರನ್ನು ವೇಶ್ಯಾವಾಟಿಕೆಗೆ ದೂಡುತ್ತದೆ. ಆದರೂ ಮಹಿಳೆಯರು ತಾವು ಬದುಕುವ ಮತ್ತು ಶ್ರಮಿಸುವ ಪರಿಸ್ಥಿತಿಗಳ ಬಗ್ಗೆ ಏನು ಹೇಳಲೂ ಸಾಧ್ಯವಾಗುತ್ತಿಲ್ಲ. ಈ ಅಸಹಾಯಕ, ದಮನಿತ ಮಹಿಳೆಯರು ತಮ್ಮನ್ನು ಶೋಚನೀಯವಾದ ಅಧೋಗತಿಗೆ ದೂಡುವ ಸಂಕಷ್ಟಗಳನ್ನು ಸಹಿಸಿಕೊಳ್ಳಬೇಕು. ತಮ್ಮನ್ನು ದೈಹಿಕವಾಗಿ, ಬೌದ್ಧಿಕವಾಗಿ ಕುಂಠಿತಗೊಳಿಸುವ ಮತ್ತು ಅಕಾಲಿಕ ಮರಣವನ್ನು ಅಥವಾ ಅಕಾಲಿಕ ಮುಪ್ಪನ್ನು ತರುವ ಕ್ರೂರ ಪ್ರಕ್ರಿಯೆಗಳ ವಿರುದ್ಧ ತಮ್ಮನ್ನು ರಕ್ಷಿಸಿಕೊಳ್ಳಲು ಅವರು ಧ್ವನಿ ಎತ್ತುವಂತಿಲ್ಲ. ದುಡಿಯುವ ಮಹಿಳೆಯರ ಅಸಹಾಯಕತೆಯಿಂದ ದುಡಿಯುವ ಪುರುಷರೂ ನರಳುತ್ತಾರೆ. ಸೂಕ್ತ ಕಾನೂನುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಆಗದ ಮಹಿಳೆಯರೊಂದಿಗೆ ಒಂದೇ ಕಚೇರಿ ಮತ್ತು ಕಾರ್ಖಾನೆಗಳಲ್ಲಿ ಅವರು ಸ್ಪರ್ಧಿಸಬೇಕಾಗುತ್ತದೆ. ಮನೆಯೆಂಬ ಹೆಸರಿನ ಅಶುದ್ಧ ಕೊಠಡಿಗಳಲ್ಲಿ ಕೆಲಸ ಮಾಡುವ, ರಾತ್ರಿಯಲ್ಲಿ ಮಸುಕಾದ ದೀಪದ ಬೆಳಕಿನಲ್ಲಿ ಒಂದು ಕಾಲಿನಿಂದ ತೊಟ್ಟಿಲನ್ನು ತೂಗುತ್ತಾ ಕೆಲಸ ಮಾಡುವ ಮಹಿಳೆಯರೊಂದಿಗೆ ಅವರು ಸ್ಪರ್ಧಿಸಬೇಕಾಗುತ್ತದೆ. ಈ ಮೂರ್ಖತನದ, ಏಕಪಕ್ಷೀಯ ವ್ಯವಸ್ಥೆಯನ್ನು ಕೊನೆಗೊಳಿಸುವುದು ಮತ್ತು ಎಲ್ಲರಿಗೂ ಮತಾಧಿಕಾರ ನೀಡುವುದು ಎಲ್ಲಾ ಕಾರ್ಮಿಕರ ಹಿತದೃಷ್ಟಿಯಿಂದ ಒಳ್ಳೆಯದು. ……..ಮತದಾನದ ಹಕ್ಕಿರುವ ಪುರುಷರಿಗಿಂತ ಮಹಿಳೆಯರು ಸಾಮಾಜಿಕ ಶಾಸನಗಳು ಮತ್ತು ಶಾಲೆಗಳು, ಹಾಲು ಪೂರೈಕೆ ಮತ್ತು ಆಹಾರದ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಕಾನೂನುಗಳಿಗಾಗಿ ಕೆಲಸ ಮಾಡುವಲ್ಲಿ ಈಗಲೂ ಹೆಚ್ಚು ಸಕ್ರಿಯರಾಗಿದ್ದಾರೆ. ಮೂಲಭೂತವಾಗಿ, ಮಹಿಳೆ ಪುರುಷನಿಗಿಂತ ಹೆಚ್ಚು ಸಾಮಾಜಿಕ ಜೀವಿ. ಅವಳು ಇಡೀ ಕುಟುಂಬದ ಬಗ್ಗೆ ಕಾಳಜಿ ವಹಿಸುತ್ತಾಳೆ, ಆದರೆ ಪುರುಷನು ಹೆಚ್ಚು ವ್ಯಕ್ತಿವಾದಿ……ಮಹಿಳೆಯ ಸಾಮಾಜಿಕ ಅನುಭವದಿಂದ ಮಾತ್ರವೇ ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದು ಕೆಲಸದಲ್ಲಿ ಮಹಿಳೆಯರ ಸುರಕ್ಷತೆಯ ವಿಷಯ, ಸಣ್ಣ ಮಕ್ಕಳ ಹಕ್ಕುಗಳು ಇತ್ಯಾದಿ. ಆದರೂ ಅವಳ ವಿಶಿಷ್ಟ ಜ್ಞಾನ ಮತ್ತು ಸಾಮರ್ಥ್ಯಗಳನ್ನೇ ಅವಳಿಗೆ ಮತ ನೀಡಬಾರದು ಎಂಬ ವಾದಗಳಿಗೆ ಆಧಾರವಾಗಿ ಬಳಸಲಾಗುತ್ತದೆ. ಮಹಿಳೆಯ ರಚನೆ ಮಾತೃತ್ವಕ್ಕಾಗಿ ಎಂಬುದು ನಿರ್ವಿವಾದವಾದ ಸತ್ಯ. ಹಾಗೆಯೇ ಪುರುಷನ ರಚನೆ ಪಿತೃತ್ವಕ್ಕಾಗಿ. ಆದರೆ ಅದು ಅವನನ್ನು ಪೌರತ್ವಕ್ಕೆ ಅನರ್ಹಗೊಳಿಸುತ್ತದೆ ಎಂದು ಯಾರೂ ಭಾವಿಸುವುದಿಲ್ಲ. ಪುರುಷ ಮತ್ತು ಮಹಿಳೆಯ ನಡುವೆ ಮೂಲಭೂತ ವ್ಯತ್ಯಾಸವಿದೆ ಎಂದರೆ, ಅದನ್ನು ನಿರಾಕರಿಸಲು ನಾನು ಹೋಗುವುದಿಲ್ಲ. ಆದರೆ ಅವಳ ಪರವಾದ ಧ್ವನಿಯನ್ನು ಕೇಳಲು ಇದು ಇನ್ನೂ ಹೆಚ್ಚಿನ ಸಕಾರಣವಾಗಿದೆ. ಪುರುಷನ ಎದೆಗಾರಿಕೆಯ ಸ್ವಭಾವವು ಮನುಕುಲದ ದುರ್ಬಲ ಅರ್ಧಭಾಗವನ್ನು ವಿಮೋಚನೆಗೊಳಿಸಲು ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ. ವಾಸ್ತವವಾಗಿ, ಅವನು ತನಗಾಗಿ ಮತಾಧಿಕಾರವನ್ನು ಪಡೆಯುವಾಗ ತನ್ನ ಪ್ರಿಯ ಸಂಗಾತಿಯೊಂದಿಗೆ ಅದನ್ನು ಹಂಚಿಕೊಳ್ಳಲು ಏಕೆ ಯೋಚಿಸಲಿಲ್ಲ ಎಂಬುದೇ ವಿಸ್ಮಯಕಾರಿ. ಗಾಢವಾಗಿ ಗಮನಿಸಿದರೆ, ಮತಾಧಿಕಾರದ ಪ್ರಶ್ನೆಯಲ್ಲಿ ಅವಳೆಡೆಗಿನ ಅವನ ವರ್ತನೆಯಲ್ಲಿ ದಮನದ ಶಂಕೆ ನನಗಿದೆ. ಮತ್ತು ಈ ದಬ್ಬಾಳಿಕೆ ಎದೆಗಾರಿಕೆೆಯ ಮುಖವಾಡವನ್ನು ಧರಿಸಿರಬಹುದೇ? ದಯವಿಟ್ಟು ನನ್ನನ್ನು ತಪ್ಪಾಗಿ ಅರ್ಥೈಸಬೇಡಿ. ನಾನು ಎದೆಗಾರಿಕೆಯನ್ನು ಕೀಳಾಗಿ ಕಾಣುತ್ತಿಲ್ಲ. ಅದು ತುಂಬಾ ಒಳ್ಳೆಯ ವಿಷಯ ಎಷ್ಟಿದೆಯೋ ಅಷ್ಟು. ಸಮಸ್ಯೆಯೆಂದರೆ, ಅದು ಸಾಕಷ್ಟಿಲ್ಲ. ಮಹಿಳೆ ಪಡೆದಿರುವ ಬಹುತೇಕ ಎಲ್ಲಾ ಶೈಕ್ಷಣಿಕ ಮತ್ತು ರಾಜಕೀಯ ಅವಕಾಶಗಳನ್ನು, ಅವಳು ಪ್ರತಿ ಹಂತದಲ್ಲೂ ಹೋರಾಟ ಮಾಡುವ ಮೂಲಕವೇ ಪಡೆದಿದ್ದಾಳೆ. ಆದ್ದರಿಂದ ಪುರುಷರ ಎದೆಗಾರಿಕೆಯಿಂದ ನಮಗೆ ಪ್ರಯೋಜನ ಇಲ್ಲದಿರುವುದರಿಂದ, ನಾವು ಸ್ವಲ್ಪ ತ್ವರೆ ಮಾಡಿ, ನಮಗಾಗಿ ಹಾಗೂ ನಮ್ಮ ಮತಾಧಿಕಾರದ ಅಗತ್ಯವಿರುವ ಪುರುಷರಿಗಾಗಿ ನಾವು ಏನು ಮಾಡಬಹುದು ಎಂದು ನೋಡಬೇಕು. ಎಲ್ಲಕ್ಕಿಂತ ಮೊದಲು, ನಾವು ಸಂಘಟಿತರಾಗಬೇಕು. ನಾವು ಯಾವ ಕಾನೂನುಗಳಡಿಯಲ್ಲಿ ಬದುಕಬೇಕಾಗಿದೆಯೋ, ಅವನ್ನು ನಿರ್ದೇಶಿಸುವಲ್ಲಿ ಮತ್ತು ರೂಪಿಸುವಲ್ಲಿ ನಮ್ಮ ನೈಸರ್ಗಿಕ ರಕ್ಷಕರು ಇನ್ನೆಷ್ಟು ಮಾತ್ರಕ್ಕೂ ನಮ್ಮ ಧ್ವನಿಯನ್ನು ನಿರಾಕರಿಸದಂತೆ ನಾವು ನಮ್ಮನ್ನು ಪ್ರಬಲ ರಾಜಕೀಯ ಶಕ್ತಿಯಾಗಿ ರೂಪಿಸಿಕೊಳ್ಳಬೇಕು. ಪುರುಷರು ಮತ್ತು ಮಹಿಳೆಯರು ತಮ್ಮ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಒಟ್ಟಾಗಿ ಕೆಲಸ ಮಾಡುವವರೆಗೆ ನಾವು ಬಂಡವಾಳವಾದದ ಅಂತ್ಯ ಮತ್ತು ಪ್ರಜಾಪ್ರಭುತ್ವದ ವಿಜಯವನ್ನು ಕಾಣಲಾಗುವುದಿಲ್ಲ. ಎಲ್ಲರಿಗೂ ಸ್ವಾತಂತ್ರ‍್ಯ ಸಿಗಬೇಕೆಂಬ ನಮ್ಮ ಹೋರಾಟದಲ್ಲಿ ಮತದಾನದ ಹಕ್ಕು ಅನೇಕ ಆಯುಧಗಳಲ್ಲಿ ಒಂದು ಮಾತ್ರ ಎಂದು ನಾನು ಅರಿತುಕೊಂಡಿದ್ದೇನೆ. ಆದರೆ ಪ್ರತಿಯೊಂದು ಸಾಧನವೂ ಅಮೂಲ್ಯವಾಗಿದೆ ಮತ್ತು ಮತದಾನದ ಹಕ್ಕನ್ನು ಹೊಂದಿರುವ ಪುರುಷರು ಮತ್ತು ಮಹಿಳೆಯರು ಒಟ್ಟಾಗಿ ಭೂಮಿಯ ಮೇಲೆ ಸ್ವಾತಂತ್ರ‍್ಯ, ಸಮಾನತೆ ಮತ್ತು ಭ್ರಾತೃತ್ವದ ಶತಮಾನಗಳ ಕಾಲದ ಕನಸನ್ನು ಸಾಕಾರಗೊಳಿಸುತ್ತಾರೆ.