ಪಶ್ಚಿಮ ಬಂಗಾಲದ ಮಂದಿರ-ಮಸೀದಿ ರಾಜಕೀಯ
ಪಶ್ಚಿಮ ಬಂಗಾಲದ ಮಂದಿರ-ಮಸೀದಿ ರಾಜಕೀಯ 1947ರ ದೇಶ ವಿಭಜನೆಗೂ ಮುನ್ನ ಇಂದಿನ ಪಶ್ಚಿಮ ಬಂಗಾಲ ಮತ್ತು ಬಾಂಗ್ಲಾದೇಶ ಒಗ್ಗೂಡಿ ಒಂದೇ ರಾಜ್ಯವಾಗಿತ್ತು. ಹಿಂದೂ-ಮುಸ್ಲಿಮರು ಅಲ್ಲಿ ಸೌಹಾರ್ದತೆ ಮತ್ತು ಸಹಕಾರದಿಂದ ಬಾಳುತ್ತಿದ್ದರು. ಈ ಏಕೀಕೃತ ಬಂಗಾಳ, ನಮ್ಮ ದೇಶದಲ್ಲಿ ನವೋದಯದ ಮೊದಲ ಕಿರಣಗಳನ್ನು ಸೃಷ್ಟಿಸಿತ್ತು. ಬ್ರಿಟಿಷ್ ಸಾಮ್ರಾಜ್ಯಶಾಹಿಯ ಕಪಿಮುಷ್ಟಿಯಿಂದ ಭಾರತವನ್ನು ಸ್ವತಂತ್ರಗೊಳಿಸಲು ಎದೆ ಎತ್ತಿ ನೇಣುಗಂಬಕ್ಕೆ ಮುತ್ತಿಡುವ ಕೆಚ್ಚೆದೆಯ ಯುವಕರಿಗೆ ಜನ್ಮ ನೀಡಿತ್ತು. ಜಾತಿ, ಧರ್ಮ, ಜನಾಂಗದ ಕಟ್ಟಳೆಗಳನ್ನೆಲ್ಲಾ ಮೀರಿ ಹೋರಾಡುವುದನ್ನು ಕಲಿಸಿತ್ತು. ಧರ್ಮನಿರಪೇಕ್ಷ ಮೌಲ್ಯಗಳನ್ನು ಎತ್ತಿಹಿಡಿದು, ಐಕ್ಯತೆ, ಭ್ರಾತೃತ್ವದ ಎಡ-ಪ್ರಜಾತಾಂತ್ರಿಕ ಹೋರಾಟಗಳ ಭದ್ರಕೋಟೆಯಾಗಿತ್ತು. ಅದೇ ಬಂಗಾಳ, ವಿಭಜನೆಯ ನಂತರ ಇಂದು, ಕೋಮುವಾದಿ ದ್ವೇಷ ಕಾರುವ ಪ್ರದೇಶವಾಗಿ ಮಾರ್ಪಾಡಾಗುತ್ತಿದೆ. ಪ್ರಸ್ತುತ ಇದೀಗ ಬಾಂಗ್ಲಾದೇಶದಲ್ಲಿ ಕೋಮುವಾದಿ-ಮೂಲಭೂತವಾದಿ ಶಕ್ತಿಗಳು ಹಿಂಸಾಚಾರದಲ್ಲಿ ತೊಡಗಿವೆ. ಕೋಮು ಸೌಹಾರ್ದತೆಯ ಆಶಯಗಳ ಅಂತ್ಯಕ್ರಿಯೆ ನಡೆದಿದೆ. ಇತ್ತ ಪಶ್ಚಿಮ ಬಂಗಾಳದಲ್ಲಿಯೂ ಕೊಮುವಾದಿ-ಮೂಲಭೂತವಾದಿ ಶಕ್ತಿಗಳು ತಲೆಯೆತ್ತುತ್ತಿವೆ. ಅಧಿಕಾರದ ಆಸೆಗೆ ಬಿಜೆಪಿ-ಆರ್.ಎಸ್.ಎಸ್ ಅನೇಕ ವರ್ಷಗಳಿಂದ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ವಿಷಕಾರುತ್ತ, ಹಿಂದೂ-ಮುಸಲ್ಮಾನರ ನಡುವೆ ದ್ವೇಷದ ಕಿಡಿಹಚ್ಚುತ್ತ ಹಿಂದುತ್ವವಾದಿ ವಿಷವನ್ನು ಹರಡುತ್ತಿದೆ. ಹಿಂದೂ ಕೋಮುವಾದ-ಮೂಲಭೂತವಾದಕ್ಕೆ ಪ್ರತಿಕ್ರಿಯೆಯಾಗಿ ಮುಸ್ಲಿಂ ಮೂಲಭೂತವಾದಿಗಳು ಅಲ್ಪಸಂಖ್ಯಾತರ ಮಧ್ಯೆ ತಮ್ಮ ಬೇರುಬಿಡಲು ಪ್ರಯತ್ನಿಸುತ್ತಿದ್ದಾರೆ. ಈ ಕೋಮುವಾದಿ ವಿಷಕಾರಿ ಬೀಜಗಳು ಇಂದು ಹೆಮ್ಮರಗಳಾಗಿ ಬೆಳೆಯುತ್ತಿವೆ. ಬಹು ಕಾಲದಿಂದಲೂ ಹಿಂದೂ ವೋಟುಗಳಿಗಾಗಿ ಮಂದಿರ-ಮಸೀದಿಯ ಗಲಾಟೆ ಎಬ್ಬಿಸಲು ಬಿಜೆಪಿ ಸತತ ಪ್ರಯತ್ನದಲ್ಲಿದೆ. ಇದಕ್ಕೆ ಪ್ರತಿಯಾಗಿ ಮೂರ್ತಿ ಪೂಜೆಗೆ ಎಂದಿಲ್ಲದ ಪ್ರಾಮುಖ್ಯತೆ ನೀಡುತ್ತಾ, ತಾವೇನೂ ಕಡಿಮೆ ಇಲ್ಲವೆಂಬಂತೆ ತೃಣಮೂಲ ಕಾಂಗ್ರೆಸ್ 250 ಕೋಟಿ ವೆಚ್ಚದ ಜಗನ್ನಾಥ ಮಂದಿರವನ್ನು ದಿಘಾ ಎಂಬ ಪ್ರವಾಸಿ ತಾಣದಲ್ಲಿ ಕಟ್ಟಿಸಿದೆ. ಸಿಲಿಗುರಿಯ ಮಾಟಿಗಾರಾದಲ್ಲಿ ಟಿಎಂಸಿಯ ಒತ್ತಾಸೆಯ ಮೇರೆಗೆ ‘ಮಹಾಕಾಲ’ ಮಂದಿರದ ನಿರ್ಮಾಣ ನಡೆಯುತ್ತಿದ್ದು, ಅಲ್ಲಿ ಭಗವಾನ್ ಶಿವನ ಬೃಹತ್ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆ. ಕಳೆದ ಡಿಸೆಂಬರ್ 13 ರಂದು ಆರ್ಎಸ್ಎಸ್-ಬಿಜೆಪಿ-ಸಂಘ ಪರಿವಾರ ಸೇರಿ ಕೋಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ “ಲಕ್ಷ ಕಂಠ ಗೀತಾ ಪಠಣ” ಕಾರ್ಯಕ್ರಮವನ್ನು ಆಯೋಜಿಸಿದ್ದವು. ಕೆಳಮಟ್ಟದ ಕಾರ್ಯಕರ್ತರಿಂದ ಹಿಡಿದು ಹಿರಿಯ ಬಿಜೆಪಿ ಮತ್ತು ಆರ್ಎಸ್ಎಸ್ ನಾಯಕರೆಲ್ಲರೂ ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. ಇನ್ನು ಕಾಂಗ್ರೆಸ್, ಟಿಎಂಸಿ ಮತ್ತು ಬಿಜೆಪಿ ನಡುವೆ ಪದೇ ಪದೇ ಪಕ್ಷಾಂತರ ಮಾಡಿದ ಇತಿಹಾಸವುಳ್ಳ ಆದರೆ ಈಗ ಉಚ್ಚಾಟಿತಗೊಂಡಿರುವ ಟಿಎಂಸಿಯ ಎಂಎಲ್ಎ ಹುಮಾಯೂನ್ ಕಬೀರ್, ಮುಸ್ಲಿಂ ಮತಗಳನ್ನು ಸೆಳೆಯಲು ಮುರ್ಶಿದಾಬಾದ್ನ ರೇಜಿನಗರದಲ್ಲಿ ಬಾಬರಿ ಮಸೀದಿ ಧ್ವಂಸದ ಕಪ್ಪು ದಿನದಂದೇ ‘ಬಾಬರಿ ಮಸೀದಿ’ಗೆ ಶಂಕುಸ್ಥಾಪನೆ ಮಾಡಿದ್ದಾರೆ. ವಾಸ್ತವದಲ್ಲಿ, ಬಂಗಾಳದಲ್ಲಿ ಅಧಿಕಾರಕ್ಕಾಗಿ ಸೆಣಸಾಡುತ್ತಿರುವ ಟಿಎಂಸಿ ಹಾಗೂ ಬಿಜೆಪಿ ಮಧ್ಯೆ ಈಗ ಹೊಸ ಪೈಪೋಟಿ, ಇಬ್ಬರಲ್ಲಿ ‘ಶ್ರೇಷ್ಠ ಹಿಂದು ಯಾರು’ ಎಂದು! ಬಿಜೆಪಿ ಹಿಂದುತ್ವದ ಬಾವುಟ ಹಾರಿಸುತ್ತಿದ್ದರೆ, ಟಿಎಂಸಿ, ಹಿಂದೂ ಮತ್ತು ಮುಸ್ಲಿಂ ಇಬ್ಬರನ್ನೂ ಓಲೈಸುವ ರಾಜಕೀಯ ಮಾಡುತ್ತಿದೆ. ಟಿಎಂಸಿ ಒಂದಾದ ಮೇಲೊಂದು ದೇವಸ್ಥಾನಗಳನ್ನು ಕಟ್ಟುತ್ತಿದೆ, 44,000 ಕ್ಕೂ ಹೆಚ್ಚು ನೋಂದಾಯಿತ ದುರ್ಗಾ ಪೂಜಾ ಸಮಿತಿಗಳಿಗೆ ತಲಾ 1,10,000 ರೂಪಾಯಿಗಳನ್ನು ನೀಡಿದೆ. ಇನ್ನೊಂದೆಡೆ ಮುಸ್ಲಿಂ ಸಮುದಾಯವನ್ನು ಓಲೈಸಲು ಮಸೀದಿಗಳ ಮೌಲ್ವಿಗಳಿಗೆ ಭತ್ಯೆಯನ್ನು ನೀಡುತ್ತಿದೆ. ಇದನ್ನೆಲ್ಲಾ ಗಮನಿಸುತ್ತಿರುವ ಇಸ್ಲಾಮಿಕ್ ಮೂಲಭೂತವಾದಿಗಳು ತಾವೇ ಮುಸ್ಲಿಂ ಅಲ್ಪಸಂಖ್ಯಾತರ ರಕ್ಷಕರೆಂಬಂತೆ ನಟಿಸುತ್ತಾ ತಮ್ಮ ಜಾಗವನ್ನು ಗಟ್ಟಿ ಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಬಾಬರಿ ಮಸೀದಿ ಧ್ವಂಸದಲ್ಲಿ ಭಾಗಿಯಾಗಿದ್ದ ಬಿಜೆಪಿ, ಹುಮಾಯೂನ್ ನಡೆಸಿರುವ ‘ಬಾಬರಿ ಮಸೀದಿ’ೆ ಶಂಕುಸ್ಥಾಪನೆಯ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಫುರ್ಫುರಾ ಶರೀಫ್ನ ಇಸ್ಲಾಂನ ಪಂಡಿತ ಪೀರ್ಜಾದ್ ಅಬ್ಬಾಸ್ ಸಿದ್ದಿಕಿ ಸ್ಥಾಪಿಸಿದ ಐಎಸ್ಎಫ್ ನ ನಾಯಕ ಭಾಯಿಜಾನ್ ಅಬು ಸಿದ್ದಿಕಿಯು ಕೋಮುವಾದಿ ಹೇಳಿಕೆಗಳನ್ನು ನೀಡಿದಾಗಲೂ ಬಿಜೆಪಿ ಸುಮ್ಮನಿದೆ. ಈ ನಿಗೂಢ ಮೌನ ಅನೇಕ ಪ್ರಶ್ನೆಗಳನ್ನು ಎಬ್ಬಿಸುತ್ತಿವೆ ಅಲ್ಲವೆ? ಇದರ ಹಿಂದೆ ದೊಡ್ಡ ಗುಟ್ಟೇ ಅಡಗಿದೆ. ಹುಮಾಯೂನ್ ಮುಸ್ಲಿಂರಿಗಾಗಿ ಹೊಸ ಪಕ್ಷ ಕಟ್ಟುವುದಾಗಿ ಹೇಳಿದ್ದಲ್ಲದೆ ಮುಂಬರುವ ಚುನಾವಣೆಯಲ್ಲಿ ಮೈತ್ರಿಗಾಗಿ ಅಸಾದುದ್ದೀನ್ ಓವೈಸಿ ಅವರ ಜೊತೆ ಈಗಾಗಲೇ ಮಾತುಕತೆ ನಡೆಸಿದಂತಿದೆ. ಅಲ್ಪಸಂಖ್ಯಾತ ಮತಗಳನ್ನು ಒಗ್ಗೂಡಿಸಿ, ಆ ಮೂಲಕ ಬಿಜೆಪಿ ವಿರೋಧಿ ಮತಗಳನ್ನು ವಿಭಜಿಸುವುದೇ ಈ ಮುಸ್ಲಿಂ ನಾಯಕರ ಕೆಲಸ. ಇವರು ಹಿಂದೂ ಮೂಲಭೂತವಾದಿಗಳ ನಂಬಿಕಸ್ಥ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ನಿಜ ಹೇಳಬೇಕೆಂದರೆ, ಇವರೆಲ್ಲರೂ ಆಡಳಿತಾರೂಢ ಬಂಡವಾಳಶಾಹಿ ವರ್ಗದ ಕೈಗೊಂಬೆಗಳು. ಧಾರ್ಮಿಕ ಧ್ರುವೀಕರಣದ ಈ ಇಡೀ ನಾಟಕವು ಮತಗಳನ್ನು ಪಡೆಯಲು ಮತ್ತು ಜನರನ್ನು ಒಡೆದಿಡಲು ನಡೆಯುತ್ತಿದೆ. ಹಾಗಾಗಿ, ಚುನಾವಣಾ ಸಮಯದಲ್ಲಿ ಜನರನ್ನು ಕಾಡುತ್ತಿರುವ ನೈಜ ಸಮಸ್ಯೆಗಳು ಮುನ್ನೆಲೆಗೆ ಬರುವುದೇ ಇಲ್ಲ. ಬದಲಾಗಿ ಮಂದಿರ-ಮಸೀದಿ, ವಂದೇ ಮಾತರಂ, ತ್ರಿವಳಿ ತಲಾಖ್, ಅಕ್ರಮ ನುಸುಳುವಿಕೆಯಂತಹ ಅನಗತ್ಯ ವಿಷಯಗಳೇ ಮುನ್ನೆಲೆಗೆ ಬಂದು ಬೆಲೆ ಏರಿಕೆ, ನಿರುದ್ಯೋಗ, ರೈತರ ಸಂಕಷ್ಟ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳಂತಹ ಭೀಕರ ಸಮಸ್ಯೆಗಳು ಗೌಣವಾಗುತ್ತವೆ. ಇದೆಲ್ಲದರ ಮಧ್ಯೆ ತಮ್ಮನ್ನು ತಾವು ಎಡಪಂಥೀಯರು ಎಂದು ಕರೆದುಕೊಳ್ಳುವ ‘ನಕಲಿ-ಮಾರ್ಕ್ಸ್ವಾದಿಗಳು’ ಕೂಡ ಇದೇ ಹಾದಿಯಲ್ಲಿರುವುದು ಅತ್ಯಂತ ಬೇಸರದ ಸಂಗತಿ. ಕೆಲವೇ ಕೆಲವು ಸೀಟುಗಳಿಗಾಗಿ ಕಾಂಗ್ರೆಸ್ ಮತ್ತು ಐಎಸ್ಎಫ್ನಂತಹ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಸಿಪಿಐ(ಎಂ) ನ ರಾಜ್ಯ ಕಾರ್ಯದರ್ಶಿ ಹಾಗೂ ಇನ್ನಿತರ ನಾಯಕರು ಹಿಂದೂ ಭಕ್ತರ ಉಡುಪು ಧರಿಸಿ ಬ್ರಾಹ್ಮಣವಾದಿ ಮೌಲ್ಯಗಳನ್ನು ಬಿತ್ತುವ ಜಾತಿವಾದಿ ಸಂಘಟನೆಯನ್ನು ಪ್ರಾರಂಭಿಸಿರುವ ಪಂಚಾನನ ಬರ್ಮಾ ಅವರ ಪ್ರತಿಮೆಗೆ ಹಾರ ಹಾಕಿದ್ದಂತಹ ಘಟನೆಗಳು ಇವರ ಕೀಳುಮಟ್ಟದ ವೋಟ್ ಬ್ಯಾಂಕ್ ರಾಜಕೀಯಕ್ಕೆ ಉದಾಹರಣೆಯಾಗಿವೆ. ಆದರೆ ಭಾರತೀಯರ ಮನಸ್ಸಿನಲ್ಲಿ ಈ ಕೋಮುವಾದಿ ಮತ್ತು ಜಾತಿವಾದಿ ಆಲೋಚನೆಗಳು ಮನೆಮಾಡಲು ಕಾರಣವೇನು? ಇದಕ್ಕೆ ಇತಿಹಾಸದಲ್ಲಿ ಉತ್ತರವಿದೆ. ಬಂಗಾಳದ ನವೋದಯ ಕಾಲವು ಶತಮಾನಗಳ ಮೌಢ್ಯ, ಧಾರ್ಮಿಕ ಅಂಧಶ್ರದ್ಧೆ, ಮತಾಂಧತೆಯ ಕಟ್ಟಳೆಗಳನ್ನು ಕುಟ್ಟಿ ಪುಡಿಗಾಣಿಸಿ ಹೊಸ ಪ್ರಜಾತಾಂತ್ರಿಕ ಮೌಲ್ಯಗಳು, ನೈತಿಕತೆಕತೆಯನ್ನು ಅಳವಡಿಸಿಕೊಳ್ಳಲು ಕರೆ ನೀಡಿತ್ತು. ಊಳಿಗಮಾನ್ಯ ವ್ಯವಸ್ಥೆಯ ಜಡ್ಡನ್ನು ಕಿತ್ತೊಗೆದು ವೈಜ್ಞಾನಿಕ ಚಿಂತನೆಯೊಂದಿಗೆ ಎಲ್ಲಾ ಸಮುದಾಯಗಳ ಸೌಹಾರ್ದತೆ ಬಯಸಿತ್ತು. ಬ್ರಿಟಿಷರು ಕೇಂದ್ರಿಯ ಆಡಳಿತ ಯಂತ್ರಕ್ಕೆ ರೂಪು ನೀಡುತ್ತಿದ್ದಂತೆ ನಮ್ಮಲ್ಲಿ ಒಂದೇ ದೇಶವೆಂಬ ಪರಿಕಲ್ಪನೆ ಜಾಗೃತವಾಗತೊಡಗಿತು. ಜಾತಿ, ಧರ್ಮ, ಭಾಷೆ, ಜನಾಂಗೀಯ ಗಡಿ ಮೀರಿ ಒಂದಾಗುವ ಕೂಗು ಕೇಳಿ ಬಂತು. ಆದರೆ ನಿರ್ದಿಷ್ಟ ಸಾಮಾಜಿಕ-ಐತಿಹಾಸಿಕ ಕಾರಣಗಳಿಂದಾಗಿ ಭಾರತೀಯ ಜನಸಮುದಾಯವನ್ನು ಪ್ರಜಾತಾಂತ್ರೀಕರಣಗೊಳಿಸುವ ಆಶಯ ಈಡೇರಲಿಲ್ಲ. ಎಸ್.ಯು.ಸಿ.ಐ(ಸಿ) ಪಕ್ಷದ ಸಂಸ್ಥಾಪಕ ಕಾರ್ಯದರ್ಶಿಗಳಾದ ಮಹಾನ್ ಮಾರ್ಕ್ಸ್ವಾದಿ ಚಿಂತಕರಾದ ಕಾಮ್ರೇಡ್ ಶಿವದಾಸ್ ಘೋಷ್ ಅವರು ಹೇಳಿದಂತೆ, “ಸಾಮ್ರಾಜ್ಯಶಾಹಿಯ ವಿರುದ್ಧದ ರಾಜಕೀಯ ಚಳುವಳಿಯ ಸಂದರ್ಭದಲ್ಲಿ, ವಿಭಿನ್ನ ಭಾಷೆಗಳನ್ನು ಮಾತನಾಡುವ ಮತ್ತು ವಿಭಿನ್ನ ಧರ್ಮಗಳನ್ನು ಪ್ರತಿಪಾದಿಸುವ ಭಾರತೀಯ ಜನರು ರಾಜಕೀಯವಾಗಿ ಒಂದು ರಾಷ್ಟ್ರವಾದರು… ಆದರೆ ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಧರ್ಮ, ಜಾತಿ, ಭಾಷೆ, ಜನಾಂಗ ಇತ್ಯಾದಿಗಳಿಂದ ಬೇರ್ಪಟ್ಟು ವಿಭಿನ್ನ ಸಮುದಾಯಗಳಾಗಿ ವಿಭಜಿತರಾದರು” ಕಾಲ ಕಳೆಯುತ್ತಿದ್ದಂತೆ ಶೋಷಿತ ಜನತೆ ಒಂದಾಗಿ ಶೋಷಕರ ವಿರುದ್ಧ ಬಂಡವಾಳಶಾಹಿ ವಿರೋಧಿ, ಸಮಾಜವಾದಿ ಕ್ರಾಂತಿಗೆ ಸಜ್ಜಾಗುವರೆಂಬ ಭೀತಿಯಲ್ಲಿ ಆಳುವ ಬಂಡವಾಳಶಾಹಿ ವರ್ಗವು ಜನರಲ್ಲಿ ಈಗಾಗಲೇ ಇರುವ ಒಡಕುಗಳಿಗೆ ಮತ್ತಷ್ಟು ಪುಷ್ಟಿ ನೀಡುತ್ತಿದೆ. ಒಂದು ಧರ್ಮದ ಜನರನ್ನು ಮತ್ತೊಂದು ಧರ್ಮದ ಜನರ ವಿರುದ್ಧ ಎತ್ತಿ ಕಟ್ಟಿ ಹಿಂಸಾಚಾರಗಳಿಗೆ ಎಡೆಮಾಡಿಕೊಡುತ್ತಿರುವುದು ಶೋಷಕರ ಹುನ್ನಾರಗಳಲ್ಲಿ ಒಂದು. ಹಾಗಾದರೆ ‘ಹಿಂದೂ ರಾಷ್ಟ್ರ’ ಸೃಷ್ಟಿಸುವುದಾಗಿ ಬೆದರಿಕೆ ಹಾಕುತ್ತಿರುವ ಬಿಜೆಪಿಯವರ ಈ ವಿಚಿತ್ರ ನಡವಳಿಕೆಯನ್ನು ಏನೆಂದು ಅರ್ಥೈಸಿಕೊಳ್ಳುವುದು? ಕೇವಲ ಉನ್ಮಾದವೆಂದೇ ಅಥವಾ ಹುದುಗಿಸಲಾದ ಗುಪ್ತ ಉದ್ದೇಶವೆಂದೇ? ಬಿಜೆಪಿಯು ಕಾಂಗ್ರೆಸ್ ಹಾಗೂ ಇನ್ನಿತರೆ ಬಂಡವಾಳಶಾಹಿ ಪಕ್ಷಗಳಂತೆ ಭಾರತದ ಆಳುವ ವರ್ಗದ ಸೇವೆಯಲ್ಲಿ ತೊಡಗಿದೆ. ಧರ್ಮನಿರಪೇಕ್ಷ, ವೈಜ್ಞಾನಿಕ, ತಾರ್ಕಿಕ ಚಿಂತನಾ ಪ್ರಕ್ರಿಯೆಯನ್ನು ಬೆಳೆಸುವ ಶಿಕ್ಷಣ ವ್ಯವಸ್ಥೆಗೆ ತಿಲಾಂಜಲಿ ಇಡುತ್ತಾ, ಜನರ ಮನಸ್ಸಿನಲ್ಲಿ ಕೋಮು ದ್ವೇಷದ ಬೀಜ ಬಿತ್ತುತ್ತಾ, ಜನಗಳ ಹಕ್ಕುಗಳನ್ನು ಕಸಿಯುತ್ತಾ, ರಾಜ್ಯ ಯಂತ್ರದ ಮೂಲಕ ಪ್ರತಿರೋಧದ ಧ್ವನಿಗಳನ್ನು ಹೊಸಕಿ ಹಾಕುತ್ತಾ, ಹಣ, ಅಧಿಕಾರದ ಬಲಾಬಲಗಳೊಂದಿಗೆ ಈ ಪಕ್ಷಗಳು ಬಂಡವಾಳಶಾಹಿ ವರ್ಗದ ಹಿತಾಸಕ್ತಿಯನ್ನು ಕಾರ್ಯರೂಪಕ್ಕೆ ತರುತ್ತಿವೆ. ಉನ್ನತ ನೈತಿಕತೆ ಮತ್ತು ಸಂಸ್ಕೃತಿಯ ಆಧಾರದ ಮೇಲೆ ಜನರ ಸಂಘಟಿತ ಹೋರಾಟ ಮಾತ್ರವೇ ಈ ವಿನಾಶಕಾರಿ ರಾಜಕೀಯವನ್ನು ಸೋಲಿಸಬಹುದು. ಸರಿಯಾದ ಸೈದ್ಧಾಂತಿಕ ನಾಯಕತ್ವದ ಅಡಿಯಲ್ಲಿ ಶ್ರಮಿಕ ವರ್ಗವು ಒಂದಾಗಬೇಕು. ಇದನ್ನು ಕಾಂಗ್ರೆಸ್ ಅಥವಾ ಟಿಎಂಸಿಯಂತಹ ಪಕ್ಷಗಳು ಮಾಡುವುದು ಸಾಧ್ಯವೇ ಇಲ್ಲ. ಅಷ್ಟೇ ಅಲ್ಲ ನೈಜ ಮಾರ್ಕ್ಸ್ವಾದಿ ಹೋರಾಟಗಳಿಂದ ದೂರವಾಗಿ ಬಂಡವಾಳಶಾಹಿ ವರ್ಗದೊಂದಿಗೆ ಚುನಾವಣಾ ರಾಜಕೀಯದಲ್ಲಿ ಒಂದಾಗಿರುವ ಪೊಳ್ಳು ಮಾರ್ಕ್ಸ್ವಾದಿಗಳಿಂದಲೂ ಇದು ಸಾಧ್ಯವಿಲ್ಲ. ಆದ್ದರಿಂದ ಇತಿಹಾಸವು ಈ ಮಹತ್ತರ ಜವಾಬ್ದಾರಿಯನ್ನು ನೈಜ ಎಡ ಪಂಥೀಯ ಕ್ರಾಂತಿಕಾರಿಗಳ ಹೆಗಲಿಗೇರಿಸಿದೆ. ಕಾಮ್ರೇಡ್ ಶಿವದಾಸ್ ಘೋಷ್ ಅವರ ಮಾರ್ಗದರ್ಶನದಲ್ಲಿ ಸಾಗುತ್ತಿರುವ ನಮ್ಮ ಪಕ್ಷವು, ಈ ಮಂದಿರ-ಮಸೀದಿ ಮತ್ತು ಅಧಿಕಾರ ದಾಹದ ಕೊಳಕು ರಾಜಕೀಯದ ವಿರುದ್ಧ ಈ ಐತಿಹಾಸಿಕ ಜವಾಬ್ದಾರಿಯನ್ನು ನಿಭಾಯಿಸುತ್ತಿದೆ!