ಕೇಂದ್ರ ಬಜೆಟ್ 2026: ಕಾರ್ಪೊರೇಟ್ ಕುಳಗಳಿಗಾಗಿ ಸಂಕಲ್ಪ - ಜನಸಾಮಾನ್ಯರಿಗೆ ಸಂಕಷ್ಟ
ಕೇಂದ್ರ ಬಜೆಟ್ 2026: ಕಾರ್ಪೊರೇಟ್ ಕುಳಗಳಿಗಾಗಿ ಸಂಕಲ್ಪ – ಜನಸಾಮಾನ್ಯರಿಗೆ ಸಂಕಷ್ಟ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮಂಡಿಸಿರುವ 2026-27ನೇ ಸಾಲಿನ ಕೇಂದ್ರ ಬಜೆಟ್, ‘ವಿಕಸಿತ ಭಾರತ’ ಮತ್ತು ‘ಕರ್ತವ್ಯ ಕಾಲ’ ಎಂಬ ಆಕರ್ಷಕ ಘೋಷಣೆಗಳ ನಡುವೆ ಜನಸಾಮಾನ್ಯರ ನೈಜ ಸಮಸ್ಯೆಗಳನ್ನು ಮರೆಮಾಚುವ ಪ್ರಯತ್ನವಾಗಿದೆ. ಹಣಕಾಸು ಸಚಿವರು ತಮ್ಮ ಭಾಷಣದಲ್ಲಿ ಕಳೆದ 12 ವರ್ಷಗಳ ಆಡಳಿತವು ಆರ್ಥಿಕ ಸ್ಥಿರತೆ ಮತ್ತು ಶಿಸ್ತನ್ನು ತಂದಿದೆ ಎಂದು ಪ್ರತಿಪಾದಿಸಿದ್ದಾರೆ. ಆದರೆ, ಬಜೆಟ್‌ನ ಆಳವಾದ ವಿಶ್ಲೇಷಣೆಯು ಇದು ಕೇವಲ ಅಂಕಿಅಂಶಗಳ ಜಾಲವಾಗಿದ್ದು, ಶ್ರೀಮಂತ ಬಂಡವಾಳಶಾಹಿಗಳ ಹಿತಾಸಕ್ತಿಯನ್ನು ಕಾಯುವ ಮತ್ತು ಬಡವರನ್ನು ಮತ್ತಷ್ಟು ಕಷ್ಟಕ್ಕೆ ದೂಡುವ ದಸ್ತಾವೇಜಾಗಿದೆ ಎಂದು ಸ್ಪಷ್ಟಪಡಿಸುತ್ತದೆ. ಆದಾಯದ ಮೂಲಗಳು ಮತ್ತು ತೆರಿಗೆ ಅನ್ಯಾಯ: ಸರ್ಕಾರದ ಆದಾಯದ ಮೂಲಗಳನ್ನು ಗಮನಿಸಿದರೆ, ದೇಶವು ಸಾಲದ ಸುಳಿಯಲ್ಲಿ ಸಿಲುಕುತ್ತಿರುವುದು ಸ್ಪಷ್ಟವಾಗುತ್ತದೆ. ಸರ್ಕಾರದ ಒಟ್ಟು 53.47 ಲಕ್ಷ ಕೋಟಿ ರೂಪಾಯಿಗಳ ಆದಾಯದಲ್ಲಿ ಶೇ. 24ರಷ್ಟು ಭಾಗ ಸಾಲದಿಂದಲೇ ಬರುತ್ತದೆ. ದೇಶದ ಒಟ್ಟು ಸಾಲವು 214 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪುವ ಅಂದಾಜಿದೆ, ಇದು ಪ್ರತಿ ಭಾರತೀಯನ ಮೇಲೆ ಭಾರಿ ಹೊರೆಯಾಗಿದೆ. ತೆರಿಗೆ ವ್ಯವಸ್ಥೆಯಲ್ಲಿನ ಅಸಮಾನತೆಯು ಎದ್ದು ಕಾಣುತ್ತಿದೆ. ಒಟ್ಟು ಆದಾಯದಲ್ಲಿ ವೈಯಕ್ತಿಕ ಆದಾಯ ತೆರಿಗೆಯ ಪಾಲು ಶೇ. 21 ಆಗಿದ್ದರೆ, ಬೃಹತ್ ಕಂಪನಿಗಳು ಪಾವತಿಸುವ ಕಾರ್ಪೊರೇಟ್ ತೆರಿಗೆ ಕೇವಲ ಶೇ. 18ರಷ್ಟಿದೆ. ತಿಂಗಳಿಗೆ 20 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯ ಹೊಂದಿರುವವರ ಮೇಲೆ ಕೇವಲ ಶೇ. 1 ರಷ್ಟು ಹೆಚ್ಚುವರಿ ‘ಸಂಪತ್ತು ತೆರಿಗೆ’ (Wealth Tax) ವಿಧಿಸಿದರೆ, ಸರ್ಕಾರಕ್ಕೆ ವಾರ್ಷಿಕ 15000 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಬರಬಹುದು. ಅದೇ ರೀತಿ, ಕಾರ್ಪೊರೇಟ್ ತೆರಿಗೆಯನ್ನು ಶೇ. 22 ರಿಂದ ಶೇ. 25ಕ್ಕೆ ಏರಿಸಿದರೆ 1.2 ಲಕ್ಷ ಕೋಟಿ ರೂಪಾಯಿ ಆದಾಯ ಲಭಿಸುತ್ತದೆ. ಆದರೆ ಸರ್ಕಾರವು ಶ್ರೀಮಂತರಿಗೆ ಈ ತೆರಿಗೆ ವಿಧಿಸುವ ಬದಲು, ಸಾಮಾನ್ಯ ಜನರಿಂದ ಜಿಎಸ್‌ಟಿ ಮೂಲಕ ಹಣ ವಸೂಲಿ ಮಾಡುತ್ತಿದೆ. ದೇಶದ ಕೆಳಮಟ್ಟದ ಶೇ. 50ರಷ್ಟು ಜನ ಶೇ. 64 ರಷ್ಟು ಜಿಎಸ್‌ಟಿ ಪಾವತಿಸುತ್ತಿದ್ದರೆ, ಮೇಲ್‌ಸ್ತರದ ಶೇ. 10 ರಷ್ಟು ಶ್ರೀಮಂತರು ಕೇವಲ ಶೇ. 4ರಷ್ಟು ಮಾತ್ರ ನೀಡುತ್ತಿದ್ದಾರೆ.ಅಂದರೆ, ದಿನಬಳಕೆಯ ವಸ್ತುಗಳನ್ನು ಕೊಳ್ಳುವ ಬಡವನು ಶ್ರೀಮಂತನಿಗಿಂತ ಹೆಚ್ಚಿನ ತೆರಿಗೆ ಹೊರೆಯನ್ನು ಅನುಭವಿಸುತ್ತಿದ್ದಾನೆ. ಬಡತನ ಮತ್ತು ಹಸಿವಿನ ವಾಸ್ತವ: ಕಳೆದ ಹತ್ತು ವರ್ಷಗಳಲ್ಲಿ 25 ಕೋಟಿ ಜನರನ್ನು ಬಹು ಆಯಾಮದ ಬಡತನದಿಂದ ಮುಕ್ತಗೊಳಿಸಿದ್ದೇವೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ, ಇದೇ ಸರ್ಕಾರ 80 ಕೋಟಿ ಜನರಿಗೆ ಉಚಿತ ಪಡಿತರ ನೀಡುತ್ತಿರುವುದು ದೇಶದ ಶೇ. 60 ಕ್ಕೂ ಹೆಚ್ಚು ಜನರಿಗೆ ಸ್ವಂತವಾಗಿ ಆಹಾರ ಕೊಳ್ಳುವ ಶಕ್ತಿಯಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ. ಆಹಾರ ಹಣದುಬ್ಬರವು ಶೇ.೮ರಷ್ಟಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನರ ತಟ್ಟೆಯಿಂದ ಪೌಷ್ಟಿಕ ಆಹಾರ ಮಾಯವಾಗುತ್ತಿದೆ. ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 127 ದೇಶಗಳಲ್ಲಿ 105ನೇ ಸ್ಥಾನಕ್ಕೆ ಕುಸಿದಿರುವುದು ದೇಶದ ಪೌಷ್ಟಿಕತೆಯ ದುಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಗ್ರಾಮೀಣ ಭಾಗದ ಶೇ. 66ರಷ್ಟು ಜನರಿಗೆ ಇಂದಿಗೂ ಮೂಲಭೂತ ಆರೋಗ್ಯ ಸೌಲಭ್ಯಗಳು ಲಭ್ಯವಿಲ್ಲದಿರುವುದು ಸರ್ಕಾರದ ವಿಫಲತೆಗೆ ಸಾಕ್ಷಿಯಾಗಿದೆ. ಕೃಷಿ ಕ್ಷೇತ್ರದ ಕಡೆಗಣನೆ: ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಭರವಸೆಗಳು ಕೇವಲ ಚುನಾವಣಾ ಗಿಮಿಕ್ ಆಗಿ ಉಳಿದಿವೆ. ರೈತರ ದೀರ್ಘಕಾಲದ ಬೇಡಿಕೆಯಾದ ಕನಿಷ್ಠ ಬೆಂಬಲ ಬೆಲೆಗೆ (MSP) ಕಾನೂನುಬದ್ಧ ಖಾತರಿ ನೀಡಲು ಸರ್ಕಾರ ಈ ಬಾರಿಯೂ ನಿರಾಕರಿಸಿದೆ. ಕೃಷಿ ಕ್ಷೇತ್ರಕ್ಕೆ ನೀಡಲಾದ ಅನುದಾನದಲ್ಲಿನ ಶೇ. ೨ರಷ್ಟು ಹೆಚ್ಚಳವು ಹಣದುಬ್ಬರಕ್ಕಿಂತಲೂ ಕಡಿಮೆಯಿದೆ. ಗ್ರಾಮೀಣ ಬಡವರ ಜೀವನಾಡಿಯಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು (MGNREGA) ಈಗ ‘ವಿಬಿ-ಜಿ ರಾಮ್ ಜಿ’ ಎಂದು ಮರುನಾಮಕರಣ ಮಾಡಲಾಗಿದೆ. ಆದರೆ ಇಲ್ಲಿ ಅನುದಾನದ ಹಂಚಿಕೆಯಲ್ಲಿ ಭಾರಿ ಅಸಮಾನತೆ ಕಂಡುಬರುತ್ತಿದೆ. 2020-21ರಲ್ಲಿ ಉದ್ಯೋಗ ಖಾತರಿ ಯೋಜನೆಗೆ 1.1 ಲಕ್ಷ ಕೋಟಿ ರೂಪಾಯಿ ಹಂಚಿಕೆಯಾಗಿತ್ತು. ಆದರೆ ಈಗಿನ ವಿಬಿ-ಜಿ ರಾಮ್ ಜಿ ಯೋಜನೆಗೆ ಕೇವಲ 95,692 ಕೋಟಿ ರೂಪಾಯಿ ನೀಡಲಾಗಿದ್ದು, ಇದು ಗ್ರಾಮೀಣ ನಿರುದ್ಯೋಗ ನಿವಾರಣೆಗೆ ತೀರಾ ಅಲ್ಪವಾಗಿದೆ. ಅಲ್ಲದೆ, ಕೇಂದ್ರ ಮತ್ತು ರಾಜ್ಯಗಳ ನಡುವಿನ ಅನುದಾನದ ಹಂಚಿಕೆಯನ್ನು 60:40 ಅನುಪಾತಕ್ಕೆ ಬದಲಾಯಿಸಿರುವುದು ಆರ್ಥಿಕ ಮುಗ್ಗಟ್ಟಿನಲ್ಲಿರುವ ರಾಜ್ಯಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಿಂದೆ ಕೃಷಿ ಚಟುವಟಿಕೆಗಳನ್ನು ಉದ್ಯೋಗ ಖಾತ್ರಿ ಯೋಜನೆಯ ವ್ಯಾಪ್ತಿಗೆ ತರಲಾಗಿತ್ತು. ಆದರೆ ಈಗ ಕೇಂದ್ರ ಸರ್ಕಾರ ಗುರುತಿಸಿದ ಜಿಲ್ಲೆಗಳಲ್ಲಿ, ಮಂಜೂರು ಮಾಡಿರುವ ಅವಧಿಯಲ್ಲಿ ಮಾತ್ರ ಈ ಯೋಜನೆ ಅನ್ವಯವಾಗಲಿದೆ. ಇದರಿಂದ ಉದ್ಯೋಗದ ಕಾನೂನುಬದ್ಧ ಹಕ್ಕನ್ನು ದುರ್ಬಲಗೊಳಿಸಿದಂತಾಗಿದೆ. ಇದು ಹಳ್ಳಿಗಾಡಿನ ಜನರ ಬದುಕಿನ ಮೇಲೆ ನೇರವಾದ ಏಟಾಗಿದೆ. ನಿರುದ್ಯೋಗ ಮತ್ತು ಕಾರ್ಮಿಕರ ಶೋಷಣೆ: ದೇಶದ ಯುವಜನತೆ ನಿರುದ್ಯೋಗದ ಭೀಕರತೆಯನ್ನು ಎದುರಿಸುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಯುವಕರ ನಿರುದ್ಯೋಗ ದರವು ಶೇ. 18ಕ್ಕೂ ಹೆಚ್ಚಿದೆ. ಕಳೆದ ಕೆಲವು ವರ್ಷಗಳಲ್ಲಿ ಸುಮಾರು 2.04 ಲಕ್ಷ ಖಾಸಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮುಚ್ಚಲ್ಪಟ್ಟಿದ್ದು, ಲಕ್ಷಾಂತರ ಜನರು ಬೀದಿಗೆ ಬಂದಿದ್ದಾರೆ. ಸರ್ಕಾರವು ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರುವ ಮೂಲಕ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಖಾಯಂ ಉದ್ಯೋಗಗಳ ಬದಲಿಗೆ ಗುತ್ತಿಗೆ ಮತ್ತು ತಾತ್ಕಾಲಿಕ ಉದ್ಯೋಗಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಬಜೆಟ್‌ನಲ್ಲಿ ಉದ್ಯೋಗ ಸೃಷ್ಟಿಯ ಬಗ್ಗೆ ದೊಡ್ಡ ಮಾತುಗಳಿದ್ದರೂ, ವಾಸ್ತವದಲ್ಲಿ ಕಾರ್ಪೊರೇಟ್ ಕಂಪನಿಗಳಿಗೆ ‘ವ್ಯವಹಾರದಲ್ಲಿ ನೆಮ್ಮದಿ’ (Ease of Doing Business) ಒದಗಿಸುವುದೇ ಸರ್ಕಾರದ ಆದ್ಯತೆಯಾಗಿದೆ. ಸಮಾಜ ಕಲ್ಯಾಣ ಮತ್ತು ಸಬ್ಸಿಡಿ ಕಡಿತ: ಜನಸಾಮಾನ್ಯರಿಗೆ ಸಿಗುತ್ತಿದ್ದ ಆಹಾರ, ರಸಗೊಬ್ಬರ ಮತ್ತು ಇಂಧನ ಸಬ್ಸಿಡಿಗಳನ್ನು ಸರ್ಕಾರ ಶೇ. 4.47ರಷ್ಟು ಕಡಿತಗೊಳಿಸಿದೆ. ಆದರೆ, ಮಿಲಿಟರಿ ವೆಚ್ಚವನ್ನು 7.85 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಸಲಾಗಿದೆ. ಶಿಕ್ಷಣಕ್ಕೆ ಜಿಡಿಪಿಯ ಶೇ.6:ರಷ್ಟು ಹಣ ನೀಡಬೇಕೆಂಬ ಶಿಫಾgಸ್ಸಿದ್ದರೂ, ಸರ್ಕಾರ ಕೇವಲ ಶೇ. 0.6ರಷ್ಟು ಮಾತ್ರ ಮೀಸಲಿಟ್ಟಿದೆ. ಅಲ್ಪಸಂಖ್ಯಾತರ ಶಿಕ್ಷಣ ಮತ್ತು ಕಲ್ಯಾಣ ನಿಧಿಯಲ್ಲಿ ಶೇ. 92ರಷ್ಟು ಭಾರಿ ಕಡಿತ ಮಾಡಿರುವುದು ಸರ್ಕಾರದ ತಾರತಮ್ಯ ನೀತಿಯನ್ನು ತೋರಿಸುತ್ತದೆ. ಕಳೆದ ವರ್ಷ ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಅಡಿಯಲ್ಲಿ 54,832ಕೋಟಿ ರೂಪಾಯಿ ನಿಗದಿಪಡಿಸಿದ್ದರೂ, ಕೇವಲ 32,500 ಕೋಟಿ ರೂಪಾಯಿ ಮಾತ್ರ ಬಳಕೆ ಮಾಡಲಾಗಿದೆ. ಇದು ಬಡವರಿಗೆ ಮನೆ ಒದಗಿಸುವಲ್ಲಿ ಸರ್ಕಾರದ ಇಚ್ಛಾಶಕ್ತಿಯ ಕೊರತೆಯನ್ನು ತೋರಿಸುತ್ತದೆ. ಆರ್ಥಿಕ ಅಸಮಾನತೆಯ ಪರಾಕಾಷ್ಠೆ: ಭಾರತದ ಸಂಪತ್ತು ಇಂದು ಕೇವಲ ಕೆಲವು ಬಿಲಿಯನೇರ್‌ಗಳ ಕೈಯಲ್ಲಿ ಕೇಂದ್ರೀಕೃತವಾಗಿದೆ. ದೇಶದ ಮೇಲ್‌ಸ್ತರದ ಶೇ. 10ರಷ್ಟು ಜನರು ರಾಷ್ಟ್ರೀಯ ಆದಾಯದ ಶೇ. 57ರಷ್ಟು ಪಾಲನ್ನು ಹೊಂದಿದ್ದಾರೆ. ದೇಶದ 248 ಬಿಲಿಯನೇರ್‌ಗಳ ಒಟ್ಟು ಸಂಪತ್ತು ಸುಮಾರು 98 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಇದು ಜಿಡಿಪಿಯ ಮೂರನೇ ಒಂದು ಭಾಗದಷ್ಟಿದೆ. ಆಶ್ಚರ್ಯಕರ ವಿಷಯವೆಂದರೆ, ಸರ್ಕಾರವು ಕಳೆದ ಕೆಲವು ವರ್ಷಗಳಲ್ಲಿ ಕಾರ್ಪೊರೇಟ್ ದೈತ್ಯರ ಸುಮಾರು 16.50 ಲಕ್ಷ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿದೆ. ಆದರೆ ರೈತರ ಅಥವಾ ವಿದ್ಯಾರ್ಥಿಗಳ ಸಾಲ ಮನ್ನಾ ಮಾಡಲು ಸರ್ಕಾರಕ್ಕೆ ಹಣವಿಲ್ಲ. ಉತ್ತರದಾಯಿತ್ವ ಇಲ್ಲವೇ ಇಲ್ಲ! ಕೇಂದ್ರ ಬಿಜೆಪಿ ಸರ್ಕಾರ 12 ವರ್ಷಗಳ ಹಿಂದೆ ಅಧಿಕಾರಕ್ಕೆ ಬರುವಾಗ ಅಚ್ಚೇದಿನದ ಭರವಸೆ ನೀಡಿತ್ತು. 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿತ್ತು. ಈಗ ವಿಕಸಿತ ಭಾರತದ ಬಗ್ಗೆ ಘೋಷಣೆ ಎತ್ತಿದೆ. ಈ ವರೆಗೆ ಹಿಂದಿನ ವರ್ಷದ ಯೋಜನೆಗಳ ಪ್ರಗತಿ ಏನು, ನೀಡಿದ್ದ ಭರವಸೆಗಳ ಅನುಷ್ಠಾನ ಎಲ್ಲಿಗೆ ಬಂದಿದೆ ಎಂಬಿತ್ಯಾದಿ ಅವಲೋಕನವಾಗಲಿ, ಉತ್ತರದಾಯಿತ್ವವಾಗಲಿ ಬಜೆಟ್ ಭಾಷಣದಲ್ಲಿ ಇಲ್ಲವೇ ಇಲ್ಲ. ಪ್ರತಿ ವರ್ಷ ಹೊಸ ಯೋಜನೆ, ಹೊಸ ಘೋಷಣೆಗಳನ್ನು ಎತ್ತುತ್ತಾ ಜನತೆ ಸುಳ್ಳು ಕನಸುಗಳ ಬೆನ್ನುಹತ್ತಿ ಹೋಗುವಂತೆ ಮಾಡಲಾಗುತ್ತಿದೆ. ಒಟ್ಟಾರೆಯಾಗಿ, 2026-27 ರ ಕೇಂದ್ರ ಬಜೆಟ್ ಬಂಡವಾಳಶಾಹಿಗಳ ಏಳಿಗೆಗಾಗಿ ರೂಪಿಸಿದ ಯೋಜನೆಯಾಗಿದೆ. ಇದು ಶ್ರೀಮಂತರ ಸಂಪತ್ತನ್ನು ವೃದ್ಧಿಸಲು ಸಹಾಯ ಮಾಡುತ್ತದೆ ಮತ್ತು ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ಜನಸಾಮಾನ್ಯರ ಮೇಲೆ ತೆರಿಗೆಯ ಹೊರೆ ಹೊರಿಸಿ, ಸಾರ್ವಜನಿಕ ಆಸ್ತಿಗಳನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಯನ್ನು ಇದು ವೇಗಗೊಳಿಸಿದೆ. ಇದು ಜನರ ಬಜೆಟ್ ಆಗುವ ಬದಲಿಗೆ, ಕಾರ್ಪೊರೇಟ್ ಸಂಸ್ಥೆಗಳ ಲಾಭದ ಹಾದಿಯನ್ನು ಸುಗಮಗೊಳಿಸುವ ದಸ್ತಾವೇಜಾಗಿದೆ. ಜನಸಾಮಾನ್ಯರು ಒಗ್ಗಟ್ಟಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡದಿದ್ದರೆ, ಈ ಆರ್ಥಿಕ ಅಸಮಾನತೆ ದೇಶವನ್ನು ಮತ್ತಷ್ಟು ಪ್ರಪಾತಕ್ಕೆ ದೂಡಲಿದೆ.