ದೇಶದಲ್ಲಿ ಉನ್ನತ ಶಿಕ್ಷಣದ ಉಸಿರುಗಟ್ಟಿಸಲಾಗುತ್ತಿದೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮೋದಿ ಸರ್ಕಾರವು ‘ವಿಕಸಿತ ಭಾರತ್ ಶಿಕ್ಷಾ ಅಧಿಷ್ಠಾನ್ ಮಸೂದೆ’ಯನ್ನು ಮಂಡಿಸಿದೆ.
ದೇಶದಲ್ಲಿ ಉನ್ನತ ಶಿಕ್ಷಣದ ಉಸಿರುಗಟ್ಟಿಸಲಾಗುತ್ತಿದೆ
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮೋದಿ ಸರ್ಕಾರವು ‘ವಿಕಸಿತ ಭಾರತ್ ಶಿಕ್ಷಾ ಅಧಿಷ್ಠಾನ್ ಮಸೂದೆ’ಯನ್ನು ಮಂಡಿಸಿದೆ. ಈ ಮಸೂದೆಯು ಸ್ವೀಕೃತವಾದರೆ, ಹೊಸದಾಗಿ ರೂಪುಗೊಳ್ಳುವ “ವಿಕಸಿತ ಭಾರತ್ ಶಿಕ್ಷಾ ಅಧಿಷ್ಠಾನ್” (VBSA) ಕಾಯ್ದೆಯು ಉನ್ನತ ಶಿಕ್ಷಣದ ಗುಣಮಟ್ಟದ ನಿಯಂತ್ರಕ ಸಂಸ್ಥೆಗಳಾದ UGC, AICTE ಮತ್ತು NCTEಗಳನ್ನು ರದ್ದು ಮಾಡಿ, ಕಾನೂನು ಮತ್ತು ವೈದ್ಯಕೀಯ ಶಿಕ್ಷಣವನ್ನು ಹೊರತುಪಡಿಸಿ, ಉನ್ನತ ಶಿಕ್ಷಣದ ಬಹುತೇಕ ಭಾಗವನ್ನು ಏಕೈಕ ಪ್ರಾಧಿಕಾರದ ನಿಯಂತ್ರಣಕ್ಕೆ ಒಳಪಡಿಸುತ್ತದೆ. ಇಲ್ಲಿಯತನಕ, ಸಾಮಾನ್ಯ ಉನ್ನತ ಶಿಕ್ಷಣಕ್ಕೆ UGCತಾಂತ್ರಿಕ ಮತ್ತು ಮ್ಯಾನೇಜ್ಮೆಂಟ್ ಶಿಕ್ಷಣಕ್ಕೆ AICTE ಮತ್ತು ಶಿಕ್ಷಕರ ಶಿಕ್ಷಣದ ಗುಣಮಟ್ಟಕ್ಕೆ NCTE ಮೇಲುಸ್ತುವಾರಿಯ ಜವಾಬ್ದಾರಿಯನ್ನು ಹೊತ್ತಿದ್ದವು. ಇವೆಲ್ಲವೂ ಈಗ ಒಂದೇ ನಿಯಂತ್ರಣ ಪ್ರಾಧಿಕಾರದ ಅಡಿಯಲ್ಲಿ ಬರಲಿವೆ. ಇದು ಉನ್ನತ ಶಿಕ್ಷಣದ ಸಂಪೂರ್ಣ ಕೇಂದ್ರೀಕರಣ ಮತ್ತು ಶೈಕ್ಷಣಿಕ ಸ್ವಾಯತ್ತತೆಯ ಹರಣವೇ ಸರಿ. ಹೀಗೆ, ರಾಷ್ಟ್ರೀಯ ಶಿಕ್ಷಣ ನೀತಿ 2020 (NEP) ಹೇರಲು ಹೊರಟಿರುವ ಕೇಂದ್ರವು ಒಕ್ಕೂಟ ಸಂರಚನೆಯ ನೀತಿಯನ್ನು ಪಕ್ಕಕ್ಕೆ ಸರಿಸಿ ಶಿಕ್ಷಣ ವ್ಯವಸ್ಥೆಯ ಮೇಲೆ ತನ್ನ ಏಕಸ್ವಾಮ್ಯ ನಿಯಂತ್ರಣವನ್ನು ತರಲು ಹವಣಿಸಿದೆ. NEPಯ ದಸ್ತಾವೇಜಿನಲ್ಲಿ ಆ ಮಾದರಿಯ ಆಯೋಗವೊಂದನ್ನು ರಚಿಸುವ ಅಂಶಗಳು ಅಡಕವಾಗಿವೆ ಎನ್ನುವುದನ್ನು ನಾವು ಮರೆಯುವಂತಿಲ್ಲ.
ಶೈಕ್ಷಣಿಕ ಸ್ವಾಯತ್ತತೆಯನ್ನು ಹತ್ತಿಕ್ಕುವ ಇದು ಎರಡನೇ ಪ್ರಯತ್ನ
ಪ್ರಸ್ತುತ ಕೇಂದ್ರ ಸರ್ಕಾರವು ಶಾಸನದ ಮೂಲಕ ಉನ್ನತ ಶಿಕ್ಷಣದ ಕೇಂದ್ರೀಕೃತ ನಿಯಂತ್ರಣವನ್ನು ಕಾನೂನುಬದ್ಧಗೊಳಿಸಲು ಪ್ರಯತ್ನಿಸುತ್ತಿರುವುದು ಇದು ಎರಡನೇ ಬಾರಿ ಆಗಿದೆ. “ವಿಶ್ವವಿದ್ಯಾಲಯ ಧನಸಹಾಯ ಆಯೋಗದ (UGC) ರದ್ದತಿ ಮಸೂದೆ 2018” ಅನ್ನು ಅದು ತರಲು ಯತ್ನಿಸಿದ್ದು ಮೊದಲ ಪ್ರಯತ್ನ. ಅದರ ಉದ್ದೇಶ UGC ಅನ್ನು ರದ್ದುಗೊಳಿಸಿ “ಭಾರತೀಯ ಉನ್ನತ ಶಿಕ್ಷಣ ಆಯೋಗ (HECII)” ಅನ್ನು ಸ್ಥಾಪಿಸುವುದಾಗಿತ್ತು. ಆ ಪ್ರಯತ್ನಕ್ಕೆ ದೇಶದಾದ್ಯಂತ ವ್ಯಾಪಕ ಟೀಕೆ-ಆಕ್ರೋಶಗಳು ವ್ಯಕ್ತವಾಗಿದ್ದವು. ಆ ಮಸೂದೆಯು ಜಾರಿಯಾಗಿದ್ದಿದ್ದರೆ ಉನ್ನತ ಶಿಕ್ಷಣದ ಸ್ವಾಯತ್ತತೆಯು ಸಂಪೂರ್ಣ ನಶಿಸಿ ಶಿಕ್ಷಣವು ಸಂಪೂರ್ಣವಾಗಿ ಕೇಂದ್ರೀಕೃತವಾಗುತ್ತಿತ್ತು ಎಂಬ ಆತಂಕವು ಅಂದು ಸ್ಪಷ್ಟವಾಗಿ ವ್ಯಕ್ತವಾಗಿತ್ತು. ಪ್ರತಿಭಟನೆಗಳ ಒತ್ತಡಕ್ಕೆ ಮಣಿದ ಸರ್ಕಾರವು ನಿರ್ವಾಹವಿಲ್ಲದೆ ಆ ಮಸೂದೆಯನ್ನು ಆಗ ಹಿಂತೆಗೆದುಕೊಳ್ಳಬೇಕಾಯಿತು. ಆದರೆ 2025ರಲ್ಲಿ, ಅದೇ ಕಾನೂನನ್ನು ಹೊಸ ರೂಪದಲ್ಲಿ, ಹೆಚ್ಚು ಕಠಿಣವಾದ ನಿಬಂಧನೆಗಳೊಂದಿಗೆ ತರಾತುರಿಯಲ್ಲಿ ಈಗ ಜಾರಿಗೆ ತರಲಾಗಿದೆ. 2018ರ ಮಸೂದೆಯು UGCಯನ್ನು ರದ್ದುಗೊಳಿಸಲು ಮುಂದಾಗಿತ್ತು, ಆದರೆ, ಪ್ರಸ್ತುತ 2025ರ ಮಸೂದೆಯಲ್ಲಿ AICTE ಮತ್ತು NCTE ಎಂಬ ಎರಡು ನಿಯಂತ್ರಕ ಸಂಸ್ಥೆಗಳನ್ನೂ ರದ್ದು ಮಾಡುವ ಉದ್ದೇಶವಿದೆ.
ಹಣಕಾಸು ಅನುದಾನದ ಸಮಸ್ಯೆ
ಕಾನೂನಿನಡಿಯಲ್ಲಿ ಅವಕಾಶವಿದ್ದರೂ, ಸರ್ಕಾರದ ನೀತಿಗಳಿಂದಾಗಿ ಮತ್ತು UGC ಬಜೆಟ್ನಲ್ಲಿನ ಕಡಿತದಿಂದಾಗಿ ವಾಸ್ತವವಾಗಿ ಅನುದಾನಗಳು ಸ್ಥಗಿತಗೊಂಡಿವೆ. ಶೈಕ್ಷಣಿಕ ಸಮುದಾಯದ ತೀವ್ರ ವಿರೋಧದ ನಡುವೆಯೂ ಕೇವಲ ಒಂದು ವರ್ಷದ ಹಿಂದೆ UGC ಬಜೆಟ್ ಅನ್ನು ಶೇ.61ರಷ್ಟು ಕಡಿತ ಮಾಡಲಾಗಿತ್ತು. 2025ರಲ್ಲಿ, ಈಗ VBSAಯಿಂದ ಸೃಷ್ಟಿಯಾಗುವ ಹೊಸ ಆಯೋಗದಿಂದ ಅನುದಾನ ನೀಡಿಕೆಯ ಸಾಂಕೇತಿಕ ಅಧಿಕಾರವನ್ನೂ ಸಹ ಸರ್ಕಾರವು ಅಧಿಕೃತವಾಗಿ ಕಸಿದುಕೊಂಡಿದೆ. ಶಿಕ್ಷಣ ಸಂಸ್ಥೆಯೊಂದು ಈ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದರೆ ರೂ.30 ಲಕ್ಷಕ್ಕೆ ಕಡಿಮೆ ಇಲ್ಲದ ದಂಡ ಮತ್ತು ನಿಯಮಗಳ ಉಲ್ಲಂಘನೆ ಮುಂದುವರಿದರೆ ರೂ.75 ಲಕ್ಷಗಳವರೆಗೆ ದಂಡ ಅಥವಾ ಆ ಶಿಕ್ಷಣ ಸಂಸ್ಥೆಯನ್ನು ಮುಚ್ಚುವಂತೆ ಶಿಫಾರಸು ಮಾಡುವ ಅಧಿಕಾರದಂತಹ ಕಠಿಣ ನಿಯಮಗಳನ್ನು ರೂಪಿಸಿ ಹೊಸ ಮಂಡಳಿಗೆ ಅಧಿಕಾರ ನೀಡಲಾಗಿದೆ. ಹೀಗೆ ನಡೆಯುವ ಸಂಸ್ಥೆಗಳ ಮುಚ್ಚುವಿಕೆ ಪ್ರಕ್ರಿಯೆಯು, ಎನ್ಇಪಿ 2020ರಲ್ಲಿ ಪ್ರಸ್ತಾಪಿಸಿರುವಂತೆ ಈಗ ದೇಶದಾದ್ಯಂತ ನಡೆಯುತ್ತಿರುವ ಸಾವಿರಾರು ಸರಕಾರಿ ಶಾಲೆಗಳ ಮುಚ್ಚುವಿಕೆಯ ಪ್ರಕ್ರಿಯೆಗೆ ಸಾಮ್ಯತೆಯನ್ನು ಹೊಂದಿದೆ. ಈ ರೀತಿಯಲ್ಲಿ, VBSA ರಚಿಸುವ ಆ ಆಯೋಗವು ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ದಂಡಪ್ರಯೋಗ ಮಾಡುವ ಸಂಸ್ಥೆಯಾಗಷ್ಟೇ ಉಳಿಯಲಿದೆ.
ವಿನಾಶಕಾರಿ ಪರಿಣಾಮಗಳು
ಈ ರೀತಿಯಲ್ಲಿ ದಂಡ ಪ್ರಯೋಗಿಸುವ ನೀತಿಯ ಪರಿಣಾಮಗಳು ಈಗಾಗಲೇ ಗೋಚರಿಸಲು ಆರಂಭಿಸಿವೆ. ಈಗ ವಿಶ್ವವಿದ್ಯಾಲಯಗಳಲ್ಲಿ ಪಠ್ಯಕ್ರಮಗಳನ್ನು ತಜ್ಞ ಶಿಕ್ಷಕರು ತಾವೇ ಸ್ವತ: ಸದಸ್ಯರಾಗಿರುವ ಅಕಾಡೆಮಿಕ್ ಕೌನ್ಸಿಲ್ಗಳಂತಹವು ಸಿದ್ಧಪಡಿಸುತ್ತವೆ. ಆದರೆ, ಸರ್ಕಾರವು ಈ ಜವಾಬ್ದಾರಿಯನ್ನು ಈಗ UGCಗೆ ವಹಿಸಿದೆ. ಇತ್ತೀಚೆಗೆ, UGCಹೊರಡಿಸಿದ ಗಣಿತ, ರಸಾಯನಶಾಸ್ತ್ರ, ವಾಣಿಜ್ಯ, ಅರ್ಥಶಾಸ್ತ್ರ, ಭೂಗೋಳ ಮತ್ತು ರಾಜ್ಯಶಾಸ್ತ್ರ ಮುಂತಾದ ವಿಷಯಗಳ ಕರಡು ಪಠ್ಯಕ್ರಮವನ್ನು ಕಂಡು ಪ್ರಾಧ್ಯಾಪಕರು ಬೆಚ್ಚಬಿದ್ದಿದ್ದಾರೆೆ. ಗಣಿತದ ಪಠ್ಯಕ್ರಮದಲ್ಲಿ “ಜೀವ ವಿಜ್ಞಾನದಲ್ಲಿ ಗಣಿತ”, “ಧ್ಯಾನಕ್ಕಾಗಿ ಗಣಿತ”, ಚಂದ್ರಮಾನ ತಿಥಿಗಳು, ನಕ್ಷತ್ರಪುಂಜಗಳು, ಶುಭ ಮತ್ತು ಅಶುಭ ಗಳಿಗೆಗಳನ್ನು ನಿರ್ಧರಿಸುವ ವಿಧಾನಗಳಂತಹ ವಿಷಯಗಳನ್ನು ತುರಕಲಾಗಿದೆ. “ಭಾರತೀಯ ಜ್ಞಾನ ಪದ್ಧತಿ”ಯ ಹೆಸರಿನಲ್ಲಿ ಆಧುನಿಕ ಆಲೋಚನಾ ಕ್ರಮ ಮತ್ತು ಗಣಿತದ ವಿಷಯಗಳನ್ನು ಬದಿಗೊತ್ತಿ ಅವೈಜ್ಞಾನಿಕ ವಿಷಯಗಳನ್ನು ಉತ್ತೇಜಿಸುವ ಪ್ರವೃತ್ತಿ ಬಲವಾಗಿ ಕಾಣಿಸುತ್ತಿದೆ. ಇದರ ಮೇಲೆ ‘ವೇದ ಗಣಿತ’ದ ಮಾತು ಪದೇಪದೇ ಕೇಳಿಬರುತ್ತಿದೆ. ಅದರ ಅಸ್ತಿತ್ವಕ್ಕೆ ಯಾವುದೇ ಸುಭದ್ರವಾದ ಐತಿಹಾಸಿಕ ಪುರಾವೆ ಲಭ್ಯವಿಲ್ಲ. ಇತ್ತೀಚೆಗೆ, 900ಕ್ಕೂ ಹೆಚ್ಚು ಗಣಿತ ಪ್ರಾಧ್ಯಾಪಕರು UGCಗೆ ಪತ್ರ ಬರೆದು, ಈ ಪಠ್ಯಕ್ರಮವು ವಿದ್ಯಾರ್ಥಿಗಳನ್ನು ಆಧುನಿಕ ಗಣಿತದಿಂದ ವಂಚಿತರನ್ನಾಗಿ ಮಾಡುವುದಲ್ಲದೇ, ನಮ್ಮ ನಾಗರಿಕತೆಯನ್ನು ಒಂದು ಶತಮಾನದಷ್ಟು ಕಾಲ ಹಿಂದಕ್ಕೆ ದಬ್ಬುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇಂತಹ ಅಪಸವ್ಯವನ್ನು ತಪ್ಪಿಸಲು ‘ನೀವು ಸ್ವತ: ಸ್ವಲ್ಪ ಗಣಿತವನ್ನು ಕಲಿಯಿರಿ’ ಎಂದು UGCಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಉಳಿದ ವಿಷಯಗಳ ಪಠ್ಯಕ್ರಮಗಳ ಪರಿಸ್ಥಿತಿಯೂ ಸಹ ಇದಕ್ಕಿಂತ ಉತ್ತಮವಾಗೇನೂ ಇಲ್ಲ.
NEP-2020 ಅನ್ವಯ ಪದವಿ ಕೋರ್ಸ್ ನ್ನು ಮೂರರಿಂದ ನಾಲ್ಕು ವರ್ಷಗಳಿಗೆ ವಿಸ್ತರಿಸಿದಾಗಿನಿಂದ ಸಮಸ್ಯೆಗಳು ಉಲ್ಬಣಗೊಂಡಿವೆ. “ಕೌಶಲ್ಯ ವರ್ಧನೆ” ಮತ್ತು “ಮೌಲ್ಯವರ್ದಿತ ವಿಷಯಗಳು” ಎಂಬ ಹೆಸರಿನಲ್ಲಿ ಮುಖ್ಯ ವಿಷಯಗಳನ್ನು ಪಠ್ಯಕ್ರಮದಿಂದ ತೆಗೆದುಹಾಕಿ, “ಹ್ಯಾಪಿನೆಸ್ ಸ್ಟಡೀಸ್”, “ಫಿಟ್ ಇಂಡಿಯಾ”, ‘ಸ್ವಚ್ಛ ಭಾರತ’, ‘ವ್ಯಕ್ತಿತ್ವ ವಿಕಸನ’, “ಗೋ ಕಲ್ಯಾಣ”, ‘ಬ್ರಾಹ್ಮಣ ಕಲ್ಯಾಣ’ದಂತಹ ಲಘು ವಿಷಯಗಳನ್ನು ಓದಲು ವಿದ್ಯಾರ್ಥಿಗಳನ್ನು ಒತ್ತಾಯಿಸಲಾಗುತ್ತಿದೆ. ಈಗಾಗಲೇ ವಿಸ್ತರಿಸಿರುವ ಪದವಿಯ ಅವಧಿ ಮತ್ತು ಇಂತಹ ಪಠ್ಯಕ್ರಮ ವಿದ್ಯಾರ್ಥಿಗಳಿಗೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿವೆ. ಉನ್ನತ ಶಿಕ್ಷಣದಲ್ಲಿ ಅವರ ಆಸಕ್ತಿ ಕುಂದುತ್ತಿದೆ. ತೀರ ಹತಾಶೆಗೊಂಡಿರುವ ಹಲವಾರು ವಿದ್ಯಾರ್ಥಿಗಳು, ಒಂದೋ ಕಾಲೇಜುಗಳಿಗೆ ತಮ್ಮನ್ನು ನೋಂದಣಿ ಮಾಡಿಕೊಳ್ಳುತ್ತಿಲ್ಲ, ಇಲ್ಲವೇ, ನೋಂದಾಯಿಸಿಕೊಂಡ ನಂತರ ಕೋರ್ಸ್ ನ್ನು ತ್ಯಜಿಸುತ್ತಿದ್ದಾರೆ ಅಥವಾ ದಾಖಲೆಗಳಲ್ಲಿ ನಾಮಕಾವಸ್ತೆ ನೋಂದಣಿಯಾಗಿ ತರಗತಿಗಳಿಗೆ ಹಾಜರಾಗುತ್ತಿಲ್ಲ. ಒಂದೊಮ್ಮೆ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದ್ದ ತರಗತಿಗಳಲ್ಲಿ, ಅಧ್ಯಾಪಕರು ಐದಾರು ವಿದ್ಯಾರ್ಥಿಗಳಿಗೆ ಪಾಠ ಮಾಡುವ ಪರಿಸ್ಥಿತಿ ಬಂದೊದಗಿದೆ. ಬಹುತೇಕ ದೇಶದಾದ್ಯಂತ ಇದೇ ಚಿತ್ರಣವಿದೆ.
ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ಸೀಟುಗಳು
ದೇಶದ ತುಂಬ ವಿದ್ಯಾರ್ಥಿಗಳ ದಾಖಲಾತಿ ಸ್ಥಿತಿಯೂ ಗಂಭೀರವಾಗಿದೆ. ಈ ವರ್ಷ ದೆಹಲಿ ವಿಶ್ವವಿದ್ಯಾಲಯದಲ್ಲಿ 5000 ಸೀಟುಗಳು ಖಾಲಿ ಉಳಿದಿವೆ. ಕೇವಲ 5 ವರ್ಷಗಳ ಹಿಂದೆ ಶೇ.98-99 ಅಂಕ ಪಡೆದವರಿಗೂ ಅಲ್ಲಿ ಸೀಟು ದೊರಕುತ್ತಿರಲಿಲ್ಲ. ಮಹಿಳಾ ದಾಖಲಾತಿಯ ಪ್ರಮಾಣವು 2021ರಲ್ಲಿ ಶೇ.61 ರಷ್ಟಿದ್ದುದು ಈಗ ಶೇ.54 ಕ್ಕೆ ಇಳಿದಿದೆ. ಇತರ ರಾಜ್ಯಗಳಲ್ಲೂ ಕೂಡ ದಾಖಲಾತಿಯಲ್ಲಿ ಇಳಿಮುಖ ಕಂಡುಬಂದಿದೆ. ಪಶ್ಚಿಮ ಬಂಗಾಳದ ಸರಕಾರಿ ಹಾಗೂ ಅನುದಾನಿತ ಪದವಿ ಕಾಲೇಜುಗಳಲ್ಲಿ 9,36,215 ಸೀಟುಗಳು ಲಭ್ಯವಿದ್ದರೂ, ಶೇ.28.81ರಷ್ಟು ಅಂದರೆ ಕೇವಲ 2,69,777ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕಳೆದ ವರ್ಷ 4,44,000 ಸೀಟುಗಳು ಭರ್ತಿಯಾಗಿದ್ದವು. ಒಡಿಶಾದಲ್ಲಿ 2024-25ನೇ ಸಾಲಿನಲ್ಲಿ 1.15ಲಕ್ಷ ಸೀಟುಗಳು ಖಾಲಿ ಉಳಿದಿದ್ದವು.
ಖಾಸಗಿ ವಲಯಕ್ಕೆ ಅಪಾರ ಲಾಭ
ಇದರ ಜೊತೆಯಲ್ಲಿ ಸಿಯುಇಟಿ (ಕೇಂದ್ರ ವಿವಿಗಳಿಗಾಗಿ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆ) ಯಂತಹ ದುಬಾರಿ ಕೋಚಿಂಗ್ ಅವಲಂಬಿತ ಪ್ರವೇಶ ಪರೀಕ್ಷೆಗಳ ಮೂಲಕ ಪದವಿ ಕೋರ್ಸ್ಗಳಿಗೆ ಸೀಟುಗಳನ್ನು ತುಂಬುವುದರಿಂದ ಅವು ಶ್ರೀಮಂತರಿಗೆ ಮಾತ್ರ ಲಭ್ಯವಾಗುವ ಪರಿಸ್ಥಿತಿಯು ನಿರ್ಮಾಣವಾಗಿದೆ. ಅದರಲ್ಲಿಯೂ ಸಹ CUET ಫಲಿತಾಂಶಗಳ ವಿಳಂಬವು ಪ್ರತಿಭಾವಂತ ವಿದ್ಯಾರ್ಥಿಗಳು ಅಶೋಕ ಅಥವಾ ಅಜೀಂ ಪ್ರೇಮ್ಜೀಯಂತಹ ದುಬಾರಿ ಖಾಸಗಿ ವಿಶ್ವವಿದ್ಯಾಲಯಗಳತ್ತ ಹೋಗುವಂತೆ ಮಾಡುತ್ತಿದೆ. ಈ ಮೂಲಕವೂ ಸಹ ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣವು ವ್ಯವಸ್ಥಿತವಾಗಿ ನಡೆಯುತ್ತಿದೆ.
ಪರ್ಯಾಯವಾಗಿ ‘ಜನರ ಶಿಕ್ಷಣ ನೀತಿ’ಯ ಕರಡು
ಈ ಜನವಿರೋಧಿ ನಡೆಯ ವಿರುದ್ಧ ಧ್ವನಿ ಎತ್ತಬೇಕಾದ ಅನಿವಾರ್ಯತೆ ಈಗ ಎದುರಾಗಿದೆ. ಪ್ರೊ. ಇರ್ಫಾನ್ ಹಬೀಬ್, ಪ್ರೊ. ರೊಮಿಲಾ ಥಾಪರ್ರಂತಹ ಹೆಸರಾಂತ ಶಿಕ್ಷಣ ತಜ್ಞರ ಬೆಂಬಲದೊಂದಿಗೆ ‘ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ’ (AISEC) ಇಂತಹ ದಾಳಿಯ ವಿರುದ್ಧ ಹೋರಾಡಲು ಸಜ್ಜಾಗಿದೆ. ಸಾವಿರಾರು ಬೋಧಕರ ಸಲಹೆಗಳನ್ನು ಪಡೆದು, ಅವನ್ನೆಲ್ಲಾ ಕ್ರೋಢೀಕರಿಸಿ NEP 2020ಕ್ಕೆ ಪರ್ಯಾಯವಾಗಿ ‘ಜನ ಶಿಕ್ಷಣ ನೀತಿ-2025’ ಕರಡನ್ನು ಸಿದ್ಧಪಡಿಸಲಾಗಿತ್ತು. ಇದನ್ನು 2026ರ ಜನವರಿ 24ರಂದು ಬೆಂಗಳೂರಿನಲ್ಲಿ ನಡೆದ ಬೃಹತ್ ‘ಜನ ಸಂಸತ್ತು’ ಬೋಧಕರ ಸಮಾವೇಶದಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು. ಕರಡು ದಾಸ್ತಾವೇಜಿಗೆ ಬಂದಿದ್ದ ಹತ್ತು ಹಲವಾರು ತಿದ್ದುಪಡಿಗಳನ್ನು ವ್ಯಾಪಕವಾಗಿ ಚರ್ಚಿಸಲಾಯಿತು. NEP 2020ನ್ನು ಸಾರಸಗಟಾಗಿ ತಿರಸ್ಕರಿಸಿ ‘ಜನ ಶಿಕ್ಷಣ ನೀತಿ’ಯನ್ನು ಜಾರಿಗೆ ತರಲು ಶೈಕ್ಷಣಿಕ ಸಮುದಾಯವು ಇನ್ನು ಮುಂದೆ ಹೋರಾಟವನ್ನು ಕೈಗೆತ್ತಿಕೊಳ್ಳಲಿದೆ.