ವೆನೆಜುವೆಲಾದ ಮೇಲೆ ಅಮೆರಿಕಾದ ‘ಟ್ರಂಪ್’ ಕಾರ್ಡ್ ಅಮೆರಿಕಾದ ಹಿತಾಸಕ್ತಿ ಮಾತ್ರವೇ ಸತ್ಯ, ಬೇರೆಲ್ಲ ಮಿಥ್ಯ ಕಳೆದ ಕೆಲವು ವಾರಗಳಲ್ಲಿ ಜಗತ್ತಿನಲ್ಲಿ ಹಲವಾರು ಕ್ಷಿಪ್ರಗತಿಯ ಬೆಳವಣಿಗೆಗಳು ಘಟಿಸಿವೆ.
ವೆನೆಜುವೆಲಾದ ಮೇಲೆ ಅಮೆರಿಕಾದ ‘ಟ್ರಂಪ್’ ಕಾರ್ಡ್
ಅಮೆರಿಕಾದ ಹಿತಾಸಕ್ತಿ ಮಾತ್ರವೇ ಸತ್ಯ, ಬೇರೆಲ್ಲ ಮಿಥ್ಯ
ಕಳೆದ ಕೆಲವು ವಾರಗಳಲ್ಲಿ ಜಗತ್ತಿನಲ್ಲಿ ಹಲವಾರು ಕ್ಷಿಪ್ರಗತಿಯ ಬೆಳವಣಿಗೆಗಳು ಘಟಿಸಿವೆ. ರಾತ್ರೋರಾತ್ರಿ ಸ್ವತಂತ್ರ ದೇಶ ವೆನೆಜುವೆಲಾದ ಚುನಾಯಿತ ಅಧ್ಯಕ್ಷ ನಿಕೊಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಅಮೆರಿಕಾದ ಸೈನ್ಯ ಅಪಹರಿಸಿ ಹೊತ್ತೊಯ್ದಿದೆ. ವೆನೆಜುವೆಲಾದ ತೈಲೋದ್ಯಮದ ಮೇಲೆ ತನ್ನ ಹಿಡಿತ ಸಾಧಿಸಲು ಅವಕಾಶ ಕೊಡದಿದ್ದರೆ ಮಿಲಿಟರಿ ದಾಳಿ ನಡೆಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಆತನ ವಿದೇಶಾಂಗ ಕಾರ್ಯದರ್ಶಿ ರುಬಿಯೊ ಬೆದರಿಕೆ ಒಡ್ಡಿದ್ದಾರೆ. ವೆನೆಜುವೆಲಾಗೆ ಬೆಂಬಲ ನೀಡಿದ ಕೊಲಂಬಿಯಾ ದೇಶಕ್ಕೂ ಇದೇ ಗತಿ ಬರಬಹುದು. ಇನ್ನೊಂದೆಡೆ ರಷ್ಯಾದ ಇಂಧನ ಖರೀದಿಸುವ ದೇಶಗಳ ಮೇಲೆ ಹೆಚ್ಚಿನ ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದಾರೆ.
ಡೆನ್ಮಾರ್ಕ್ ದೇಶದ ಸ್ವಾಯತ್ತ ದ್ವೀಪವಾದ ಗ್ರೀನ್‌ಲ್ಯಾಂಡ್ ತನಗೆ ಬೇಕೇಬೇಕು ಎಂದು ಟ್ರಂಪ್ ರಚ್ಚೆ ಹಿಡಿದಿದ್ದಾರೆ. ಇದಕ್ಕೆ ಒಪ್ಪದಿದ್ದರೆ ಅಂತಹ ಐರೋಪ್ಯ ದೇಶಗಳ ಮೇಲೆ ಸುಂಕ ಹೇರುವುದಾಗಿ ಬೆದರಿಕೆ ಹಾಕಿದ್ದಾರೆ. ತನ್ನ ನೆರೆಯ ದೇಶ ಕೆನಡಾ ಅಮೆರಿಕಾದ 51ನೇ ರಾಜ್ಯವೆಂದು ಹೇಳಿಕೊಳ್ಳುತ್ತಾರೆ. ಕ್ಯೂಬಾ, ಇರಾನ್ ಮೇಲೆ ತನ್ನೊಂದಿಗೆ ಮಾತುಕತೆಗೆ ಬರುವಂತೆ ಒತ್ತಡ ಹೇರುತ್ತಿದ್ದಾರೆ. ಅಮೆರಿಕಾದ ಹಿತಾಸಕ್ತಿ ಮಾತ್ರವೇ ತನಗೆ ಸತ್ಯ, ಬೇರೆಲ್ಲ ಮಿಥ್ಯ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಇಲ್ಲಿ ಅಮೆರಿಕಾದ ಹಿತಾಸಕ್ತಿ ಎಂದರೆ ಅಮೆರಿಕಾದ ಕಾರ್ಪೊರೇಟ್ ಹಿತಾಸಕ್ತಿಯೇ ಹೊರತು, ಜನಸಾಮಾನ್ಯರದ್ದಲ್ಲ ಎಂಬುದು ಸ್ಪಷ್ಟ.
ಇಷ್ಟೆಲ್ಲ ಗದ್ದಲದ ನಡುವೆ, ತನಗೆ ನೊಬೆಲ್ ಶಾಂತಿ ಪುರಸ್ಕಾರ ಬರಬೇಕಿತ್ತು ಎಂದು ಯಾವ ನಾಚಿಕೆಯೂ ಇಲ್ಲದೆ ಮತ್ತೆ ಮತ್ತೆ ಟ್ರಂಪ್ ಹೇಳುತ್ತಲೇ ಇದ್ದಾರೆ! ಮಡುರೊ ಅವರನ್ನು ಅಪಹರಿಸಿ ಪದಚ್ಯುತಗೊಳಿಸಿದ ನಂತರ, ಈ ಬಾರಿ ನೊಬೆಲ್ ಶಾಂತಿ ಪುರಸ್ಕಾರ ಪಡೆದ ವೆನೆಜುವೆಲಾದ ಮಾರಿಯಾ ಕೊರಿನಾ ಮಚಾದೊ ಅವರು ತಮ್ಮ ಪ್ರಶಸ್ತಿ ಫಲಕವನ್ನು ಶ್ವೇತ ಭವನಕ್ಕೆ ತೆರಳಿ ಟ್ರಂಪ್ ಅವರಿಗೆ ಒಪ್ಪಿಸಿ ಬಂದಿದ್ದಾರೆ.
ವೆನೆಜುವೆಲಾದ ಮೇಲೆ ನೇರ ಮಿಲಿಟರಿ ಕಾರ್ಯಾಚರಣೆ ನಡೆಸುವ ಮುನ್ನ ಕಳೆದ 5-6 ತಿಂಗಳುಗಳ ಸಿದ್ಧತೆಯನ್ನು ಅಮೆರಿಕಾ ನಡೆಸಿತ್ತು. ಹಾಗಾದರೆ, ವೆನೆಜುವೆಲಾದ ಅಧ್ಯಕ್ಷರ ನಿವಾಸದ ಮೇಲೆ ದಾಳಿ ನಡೆಸಿ, ಸುಮಾರು 100 ಮಂದಿ ರಕ್ಷಣಾ ಸಿಬ್ಬಂದಿಯನ್ನು ಕೊಲೆಗೈದ ಪ್ರಕರಣದ ಹಿನ್ನೆಲೆಯೇನು ಎಂದು ಅವಲೋಕಿಸೋಣ.
ಸುಮಾರು 3 ಕೋಟಿ ಜನಸಂಖ್ಯೆಯುಳ್ಳ ದಕ್ಷಿಣ ಅಮೆರಿಕಾದ ಪುಟ್ಟ ದೇಶ ಈ ವೆನೆಜುವೆಲಾ, ಸ್ಪೇನ್ ದೇಶದ ವಸಾಹತಾಗಿತ್ತು. ಇದು ಫ್ರೆಂಚ್ ಮಹಾಕ್ರಾಂತಿಯಿಂದ ಪ್ರಭಾವಿತಗೊಂಡು 1811ರಲ್ಲಿ ತನ್ನ ಸ್ವಾತಂತ್ರ‍್ಯವನ್ನು ಘೋಷಿಸಿಕೊಂಡಿತು. ವಸಾಹತುಶಾಹಿ ವಿರೋಧಿ ನಾಯಕ ಸೈಮನ್ ಬೊಲಿವಾರ್ ನೇತೃತ್ವದಲ್ಲಿ ನಡೆದ ಸುದೀರ್ಘ ಯುದ್ಧದ ನಂತರ 1821ರಲ್ಲಿ ವೆನೆಜುವೆಲಾ ಸಾರ್ವಭೌಮತ್ವ ಪಡೆದುಕೊಂಡಿತು. ಆದರೆ ಈಗ ಮತ್ತೆ ಅಮೆರಿಕಾದ ಅಡಿಯಾಳಾಗಬೇಕಾದ ದುರಂತ ಬಂದೊದಗಿದೆ.
ಗಾಜಾ ನಂತರ ಅಮೆರಿಕಾದ ಚಿತ್ತ ವೆನೆಜುವೆಲಾದತ್ತ!
ವೆನೆಜುವೆಲಾದ ಕೆಲವು ದೋಣಿಗಳು ಮಾದಕ ವಸ್ತುಗಳನ್ನು ಸಾಗಿಸುತ್ತಿವೆ ಎಂದು ಹೇಳುತ್ತಾ ಅವುಗಳ ಮೇಲೆ ದಾಳಿ ನಡೆಸಿ ಯುಎಸ್‌ಎಸ್ ಜೆರಾಲ್ಡ್ ಆರ್ ಫೋರ್ಡ್ ಎಂಬ ಹೆಸರಿನ ವಿಶ್ವದ ಅತಿದೊಡ್ಡ ವಿಮಾನ ವಾಹಕ ಯುದ್ಧ ನೌಕೆಯು ಕೊಲಂಬಿಯಾ ದಾಟಿ ವೆನೆಜುವಲಾದತ್ತ ಸಾಗಿತು. ಎಂಟು ಅಮೇರಿಕಾ ಯುದ್ಧ ಹಡಗುಗಳು ದಕ್ಷಿಣ ಅಮೆರಿಕಾದ ಜಲಪ್ರದೇಶದಲ್ಲಿ 10 ಸಣ್ಣ ದೋಣಿಗಳನ್ನು ಸ್ಫೋಟಿಸಿ 40 ಜನ ಸಿಬ್ಬಂದಿಯನ್ನು ಸೆಪ್ಟೆಂಬರ್‌ನಿಂದ ಈಚೆಗೆ ಕೊಂದಿವೆ. ಈ ದೋಣಿಗಳು ಅಮೆರಿಕಾದ ಕಡಲು ಸೇರಬೇಕೆಂದರೆ ಹತ್ತಾರು ಬಾರಿ ತೈಲವನ್ನು ತುಂಬಿಸಿಕೊಳ್ಳಬೇಕಾದ ಪರಿಸ್ಥಿತಿಯಿದ್ದಾಗ್ಯೂ ಅವುಗಳು ಮಾದಕ ವಸ್ತುಗಳ ಸಾಗಾಣಿಕೆಯಲ್ಲಿವೆ ಎಂಬ ನೆಪವೊಡ್ಡಿ ಅವುಗಳ ಮೇಲೆ ಆಕ್ರಮಣ ಮಾಡಲಾಗಿದೆ. ಇದೀಗ 35 ಯುದ್ಧ ವಿಮಾನಗಳೊಂದಿಗೆ ಯುಎಸ್‌ಎಸ್ ಜೆರಾಲ್ಡ್ ಫೋರ್ಡ್ನ ಆಗಮನದೊಂದಿಗೆ, ಅಮೆರಿಕ ಆಳ್ವಿಕೆ ಅಡಿಯಲ್ಲಿರುವ ಪೊರ್ಟೊರಿಕೋದಲ್ಲಿರುವ ವಾಯುನೆಲೆಗಳನ್ನು ಮತ್ತು ಕೆರಿಬಿಯನ್‌ನಲ್ಲಿರುವ 15000 ಅಮೆರಿಕದ ಮಿಲಿಟರಿ ಪಡೆಗಳನ್ನು, 8 ಯುದ್ಧ ಹಡಗುಗಳನ್ನು, ಪಿ-8 ಸರ್ವೇಕ್ಷಣ ವಿಮಾನಗಳನ್ನು, ಎಫ್35 ಜೆಟ್‌ಗಳನ್ನು, ಬಿ52 ಬಾಂಬರ್‌ಗಳನ್ನು ಮತ್ತು ಅಣು ಜಲಾಂತರ್ಗಾಮಿಗಳನ್ನು ಸೇರಿಸಿ ಭದ್ರಪಡಿಸಲಾಗಿದೆ. ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರದ ಪ್ರಯೋಗ ಬೇಕಾಗಿದೆಯೇ? ಖಂಡಿತ ಇಲ್ಲ. ಅಮೆರಿಕಾದ ಈ ಮಿಲಿಟರಿ ನಡೆೆಗಳು ಖಂಡಿತವಾಗಿಯೂ ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆಯಲ್ಲ. ಇದು ವಿಶ್ವದ ಅತಿದೊಡ್ಡ ತೈಲ ನಿಕ್ಷೇಪಗಳನ್ನು ಹೊಂದಿರುವ ವೆನೆಜುವೆಲಾದ ಸಾರ್ವಭೌಮ ಸಂಪತ್ತನ್ನು ಕಬಳಿಸಲು ಮಾಡಲೆತ್ನಿಸುತ್ತಿರುವ ಭಾರಿ ಮಿಲಿಟರಿ ಅಘೋಷಿತ ಸಂಚಿನ ಸಂಕೇತ. ವೆನೆಜುವೆಲಾ ಜೊತೆ ಆತ್ಮೀಯ ಸಂಬಂಧ ಹೊಂದಿರುವ ಕೊಲಂಬಿಯಾದ ಮೇಲೆ ಸಹ ಕಣ್ಣಿಡಲಾಗಿದೆ. ಇರಾಕ್, ಗಾಜಾ, ಸಿರಿಯಾ ನಂತರ ಈಗ ಸಾಮ್ರಾಜ್ಯಶಾಹಿ ಕೆಂಗಣ್ಣು ಪಶ್ಚಿಮದತ್ತ ತಿರುಗಿದೆ. ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ಬಹಿರಂಗವಾಗಿಯೇ ವೆನೆಜುವೆಲಾದ ಅಧ್ಯಕ್ಷ ಮಡುರೊ ಮತ್ತು ಕೊಲಂಬಿಯಾದ ಅಧ್ಯಕ್ಷ ಪೆಟ್ರೊ ಇವರನ್ನು ಮಿಲಿಟರಿ ಕಾರ್ಯಾಚರಣೆಯ ಮೂಲಕ ಕಿತ್ತೊಗೆಯಬೇಕೆಂದು ಕರೆ ನೀಡಿದ್ದಾರೆ. ಪೆಟ್ರೊ ವಿಶ್ವಸಂಸ್ಥೆಯ ಅಧಿವೇಶನದಲ್ಲಿ, ಆ ದೋಣಿಗಳಲ್ಲಿದ್ದವರು ಮಾದಕ ವಸ್ತುಗಳ ಮಾರಾಟಗಾರರಲ್ಲ, ಅವರೆಲ್ಲ ಲ್ಯಾಟಿನ್ ಅಮೆರಿಕಾದ ಬಡ ಯುವಜನತೆ ಎಂದು ಹೇಳುತ್ತಾ, ಅಮೆರಿಕಾದ ಅಧ್ಯಕ್ಷರ ವಿರುದ್ಧ ಕಾನೂನಾತ್ಮಕ ತನಿಖೆಗಳು ನಡೆಯಬೇಕೆಂದು ಕರೆ ನೀಡಿದರು. ಆದ್ದರಿಂದಲೇ ಇದೀಗ ಕೊಲಂಬಿಯಾದ ಮೇಲೂ ಕಣ್ಗಾವಲಿದೆ.
ವೆನೆಜುವೆಲಾ ಹಾಗೂ ಬೊಲೆವೆರಿಯಾ ಕ್ರಾಂತಿಯನ್ನು ಬುಡಮೇಲು ಮಾಡಲು ಅಮೆರಿಕಾದ ಪಿತೂರಿ
ಕಳೆದ 20 ವರ್ಷಗಳಿಂದಲೂ ವೆನೆಜುವಲಾವನ್ನು ಬಗ್ಗಿಸಲು ಅಮೆರಿಕ ಪಿತೂರಿ ಹೆಣೆದಿದೆ. ಮೊದಲಿಗೆ ಆರ್ಥಿಕವಾಗಿ ಉಸಿರುಗಟ್ಟಿಸುವ ಯತ್ನ ನಡೆಸಿತು – ಇತರರೊಡನೆ ವಾಣಿಜ್ಯ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರುವುದು, ವಿದೇಶಿ ವಿನಿಮಯಕ್ಕೆ ಅವಕಾಶ ನೀಡದಿರುವುದು, ಆಹಾರ ಮತ್ತು ಔಷಧಿಗಳ ಆಮದಿನ ಮೇಲೆ ನಿರ್ಬಂಧ ಹೇರುವುದು ಇತ್ಯಾದಿ. ಎರಡನೆಯದಾಗಿ, ಮಿಲಿಟರಿ ದಂಗೆಯ ಮೂಲಕ ತನ್ನದೇ ‘ಸರ್ಕಾರ’ವನ್ನು ಸ್ಥಾಪಿಸಲು ಏಜೆಂಟ್‌ಗಳನ್ನು ನೇಮಿಸಿ ಆಂತರಿಕ ವ್ಯವಹಾರಗಳಲ್ಲಿ ಹಿಡಿತ ಸಾಧಿಸಲು ಯತ್ನಿಸಿತು. ಮಧ್ಯಂತರ ಅಧ್ಯಕ್ಷರನ್ನು ಸ್ವಯಂ ಘೋಷಿಸಿ ವೆನೆಜುವೆಲಾದ ಅಂತರರಾಷ್ಟ್ರೀಯ ಹಣಕಾಸನ್ನು ವಶಪಡಿಸಿಕೊಳ್ಳಲು ಯತ್ನಿಸಿತು. ಇವೆಲ್ಲವೂ ಮಡುರೊ ಅವರನ್ನು ಪದಚ್ಯುತಿ ಮಾಡಲು ಸಾಧ್ಯವಾಗದಿದ್ದಾಗ ವಿರೋಧಿ ಗುಂಪುಗಳಿಗೆ ಯಥೇಚ್ಛವಾಗಿ ಹಣಕಾಸು ನೆರವು ನೀಡುತ್ತಾ ಅಧಿಕಾರದ ಬದಲಾವಣೆಗೆ ಯತ್ನಿಸಿತು. ಮೂರನೆಯದಾಗಿ, ಮಿಲಿಟರಿ ಕಾರ್ಯಾಚರಣೆಗೆ ಮೊರೆ ಹೋಯಿತು. ಟ್ರಂಪ್‌ನ ಮೊದಲನೇ ಅವಧಿ 2018 ರ ಸಂದರ್ಭದಲ್ಲಿ ಇದಕ್ಕೆ ಪ್ರಯತ್ನ ನಡೆಯಿತು.
ಆದರೆ ವೆನೆಜುವೆಲಾ ಬಗ್ಗಲಿಲ್ಲ. ಮಡುರೊ ಸ್ಪಷ್ಟವಾಗಿ ಹೇಳಿದರು – ನಮಗೆ ಹೇಗಾದರೂ ಶಾಂತಿ ಬೇಕಿಲ್ಲ. ಗಾಜಾ ರೀತಿಯ ಸರ್ವನಾಶದ ಮೇಲಿನ ಶಾಂತಿಯಲ್ಲ. ಸ್ವಾತಂತ್ರ್ಯ ಕಳೆದುಕೊಂಡು ಗುಲಾಮರಾಗಲು ಇಚ್ಛಿಸುವುದಿಲ್ಲ. ಮುಂಚಿನಂತೆ ವಸಾಹತುವಾಗಿ ನಮ್ಮ ತೈಲ, ಮತ್ತೆಲ್ಲಾ ಸಂಪತ್ತನ್ನು ದೋಚಿಕೊಳ್ಳಲು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ! ಗುಲಾಮರೂ ಆಗುವುದಿಲ್ಲ. ವಸಾಹತುವೂ ಅಗುವುದಿಲ್ಲ. ಸ್ವತಂತ್ರ, ಸಾರ್ವಭೌಮ ಮತ್ತು ಬಂಧಮುಕ್ತರಾಗಿರುತ್ತೇವೆ – ಇಂದು, ನಾಳೆ ಮತ್ತು ಎಂದೆಂದಿಗೂ.
ಸಾಮ್ರಾಜ್ಯಶಾಹಿ ವಿರೋಧಿ ಹೋರಾಟದ ದನಿ ಗಟ್ಟಿಯಾಯಿತು
1998ರಿಂದ 2013 ರವರೆಗೆ ವೆನೆಜುವೆಲಾದ ಅಧ್ಯಕ್ಷರಾಗಿದ್ದ ಹ್ಯೂಗೊ ಚಾವೇಜ್ 1980 ರಲ್ಲಿ ಅಮೇರಿಕಾದ ಕೈಕೊಂಬೆಯಾಗಿದ್ದ ಕಾರ್ಲೊಸ್ ಅಂದ್ರೇಜ್ ಪರೇಜ್‌ರವರ ವಿರುದ್ಧ ಬೊಲಿವೇರಿಯನ್ ಚಳುವಳಿಯನ್ನು ಕಟ್ಟಿದರು. ಅವರ ಹೋರಾಟವನ್ನು ‘ಚಾವಿಷ್ಮೋ’ ಎಂದು ಕರೆಯಲಾಗಿತ್ತು, ಇದನ್ನು ಸೈಮನ್ ಬೊಲಿವಾರ್ ಎಂಬುವರು ಲ್ಯಾಟಿನ್ ಅಮೆರಿಕಾದಲ್ಲಿ ಪ್ರಾರಂಭಿಸಿದ ಸ್ವಾತಂತ್ರ‍್ಯ ಚಳುವಳಿಯ ಆಧಾರದ ಮೇಲೆ ಕಟ್ಟಲಾಗಿತ್ತು. ಇವರು 4 ಬಾರಿ ವೆನೆಜುವೆಲಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು ಹಾಗೂ ಅವರನ್ನು ದೇಶದ ರಾಷ್ಟ್ರವಾದಿ ನಾಯಕರೆಂದು ನಿರ್ವಿವಾದವಾಗಿ ಸ್ವೀಕರಿಸಲಾಗಿತ್ತು. ಇವರ ಅನುಯಾಯಿಯಾದ ನಿಕೊಲಸ್ ಮಡುರೊ ಅವರು 2017 ರಲ್ಲಿ ಎರಡು ಪ್ರಮುಖ ಚುನಾವಣೆಗಳಲ್ಲಿ ಜನ ಬೆಂಬಲವನ್ನು ಪಡೆದಿದ್ದರು. ಹ್ಯೂಗೋ ಚಾವೇಜ್ ಅಕಾಲಿಕವಾಗಿ ಕ್ಯಾನ್ಸರ್ ಕಾಯಿಲೆಯಿಂದ ಮರಣವನ್ನಪ್ಪಿದಾಗ ಅವರು ವೆನೆಜುವೆಲಾದ ಅಧಿಕಾರದ ಚುಕ್ಕಾಣಿ ಹಿಡಿದರು. ಅಮೆರಿಕನ್ ಸಾಮ್ರಾಜ್ಯಶಾಹಿಗಳು ಹಲವಾರು ಬಾರಿ ಮಡುರೊ ಅವರನ್ನು ಕೆಳಗಿಳಿಸಲು ಯತ್ನಿಸಿದರು. ಅಮೆರಿಕಾದ ದಲ್ಲಾಳಿಯಾದ ಲಿಯೋ ಪೋಲ್ಡೋ ಲೊಪೆಸ್ 2020ರಲ್ಲಿ ದೇಶ ತೊರೆದು ಹೋಗಿ, ಇದೀಗ ಸ್ಪೇನ್‌ನಲ್ಲಿ ಗಡಿಪಾರಾಗಿ ವಾಸಿಸುತ್ತಿದ್ದು, ವೆನೆಜುವೆಲಾ ಮೇಲೆ ಅಮೆರಿಕಾದ ಹಡಗುಗಳು ಆಕ್ರಮಣ ನಡೆಸಲು ನೆಲೆಸಿರುವುದನ್ನು ಬೆಂಬಲಿಸಿದ್ದರು.
ಅಮೆರಿಕನ್ ಸಾಮ್ರಾಜ್ಯಶಾಹಿಗಳ ಸುಳ್ಳು ಪ್ರಚಾರ
2024ರಲ್ಲಿ 130 ಜನ ಸರ್ಕಾರ-ವಿರೋಧಿ ಪ್ರತಿಭಟನಾಕಾರರನ್ನು ವೆನೆಜುವೆಲಾ ಸರ್ಕಾರ ಕೊಂದಿದೆ ಎಂಬ ಸುಳ್ಳನ್ನು ಅಮೆರಿಕಾದ ಕಾರ್ಪೊರೇಟ್ ಮೀಡಿಯಾ ಹರಿಬಿಟ್ಟಿತ್ತು. ಸತ್ಯಾಂಶವೆಂದರೆ, ಮಡುರೊ ಸರ್ಕಾರದ ಪರವಾಗಿದ್ದ ಈ ಜನರನ್ನು ಕೊಂದಿದ್ದು ಫ್ಯಾಸೀವಾದಿ ಪಡೆಗಳು. ಅಂತೆಯೇ ವೆನೆಜುವೆಲಾ ಯಾವುದೇ ಕೊಕೈನ್ ಬೆಳೆ ಬೆಳೆಯದಿದ್ದರೂ ಟ್ರಂಪ್ ಈ ದೇಶವು ಮಾದಕ ದ್ರವ್ಯಗಳನ್ನು ಉತ್ಪಾದಿಸುತ್ತಿದೆ ಎಂದು ದೋಷಾರೋಪ ಮಾಡುತ್ತಿದ್ದಾರೆ. ಆದರೆ ವೆನೆಜುವೆಲಾ ದೋಣಿಗಳು ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದವೆಂಬುದಕ್ಕೆ ಯಾವುದೇ ಸಾಕ್ಷ್ಯ ಪುರಾವೆಗಳನ್ನು ನೀಡಲಾಗಿಲ್ಲ. ಮೆಕ್ಸಿಕೊ ಭೂಗಡಿಯ ಕಡೆಯಿಂದ ಅಮೆರಿಕನ್ನರೇ ಮಾದಕ ದ್ರವ್ಯಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದಾರೆ ಎಂದು ತಜ್ಞರು ಹೇಳುತ್ತಾರೆ. ಅಮೆರಿಕಾದ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಜಾನ್ ರಾಬರ್ಟ್ ಬುಲ್ಟನ್, ಅಮೆರಿಕಾ ತನ್ನ ವ್ಯಾಪಾರಿ ಹಿತಾಸಕ್ತಿಗಾಗಿ ವೆನೆಜುವೆಲಾದ ಅಧ್ಯಕ್ಷ ಮಡುರೊ ಅವರನ್ನು ಪದಚ್ಯುತಿಗೊಳಿಸುವ ಕೆಲಸವು ಪ್ರಮುಖವಾದದು ಎಂದು ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ಇದೀಗ ಅಮೆರಿಕಾದ ನಿಜವಾದ ಉದ್ದೇಶ ಬಟಾಬಯಲಾಗಿದೆ.
ಅಮೆರಿಕಾ ಸಾಮ್ರಾಜ್ಯಶಾಹಿ ಒಡೆತನದ ತೈಲ ಸಂಸ್ಕರಣಾ ಕಂಪನಿಗಳಿಗೆ ವೆನೆಜುವೆಲಾದ ಕಚ್ಚಾತೈಲ ಬೇಕಾಗಿದೆ, ಅದಕ್ಕಾಗಿಯೇ ಈ ಎಲ್ಲ ಕಾರ್ಯಾಚರಣೆ, ಸುಳ್ಳು ಪ್ರಚಾರ ಎಂಬುದು ಜಗಜ್ಜಾಹೀರಾದ ವಿಷಯ. ತೀವ್ರವಾದ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಅಮೆರಿಕನ್ ಪ್ರಜಾಪ್ರಭುತ್ವ, ಅಂತರರಾಷ್ಟ್ರೀಯ ಕಾನೂನು ಇತ್ಯಾದಿ ಮುಖವಾಡಗಳನ್ನು ಕಳಚಿ ನೇರವಾಗಿ ಜಗತ್ತಿನ ಸುಲಿಗೆಗೆ ಇಳಿದಿದೆ. ಅಮೆರಿಕಾದ ಬಹುಕಾಲದ ಮಿತ್ರ, ಬ್ರಿಟನ್ನಿನ ಸಂಸದ ಇಡಿ ಡೇವಿ ಅವರು ಟ್ರಂಪನ್ನು ಗ್ಲೋಬಲ್ ಗ್ಯಾಂಗ್‌ಸ್ಟರ್ ಎಂದು ಕರೆದಿರುವುದು ಸರಿಯಾಗಿಯೇ ಇದೆ.
ಅಮೆರಿಕ ನೇತೃತ್ವದ ಸಾಮ್ರಾಜ್ಯಶಾಹಿ ದಾಳಿಗಳಿಗೆ ತಡೆಗೋಡೆಯಾಗಿದ್ದ ಸಮಾಜವಾದಿ ಬಣದ ಅನುಪಸ್ಥಿತಿಯಲ್ಲಿ ಸಾಮ್ರಾಜ್ಯಶಾಹಿಗಳ ಅಬ್ಬರ, ಆಕ್ರಮಣಗಳು ಹೆಚ್ಚಾಗಿವೆ. ಇದಕ್ಕಿರುವ ಏಕೈಕ ಪರಿಹಾರವೆಂದರೆ ಎಲ್ಲಾ ಶಾಂತಿಪ್ರಿಯ ಜನತೆ ವಿಶ್ವದಾದ್ಯಂತ ಒಗ್ಗೂಡುವುದು. ಅಮೆರಿಕದೊಳಗೆ ಸಹ ವೆನೆಜುವೆಲಾದ ಮೇಲಿನ ಅಮೆರಿಕಾದ ಆಕ್ರಮಣದ ವಿರುದ್ಧ ಜನರು ದನಿ ಎತ್ತಬೇಕಾಗಿದೆ. ಇಲ್ಲವಾದಲ್ಲಿ ಸಾಮ್ರಾಜ್ಯಶಾಹಿಗಳ ಅಟ್ಟಹಾಸದಡಿ ಇಡೀ ಜಗತ್ತೇ ನಲುಗಲಿದೆ. ಎರಡು ವಿಶ್ವಯುದ್ಧಗಳ ಚರಿತ್ರೆಯನ್ನು ನಾವು ಮರೆಯಬಾರದು.