Loading..

ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆ - ನಯವಂಚಕ ಪ್ರಸ್ತಾವನೆ

ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆ – ನಯವಂಚಕ ಪ್ರಸ್ತಾವನೆ
ರೈತರಿಗಿಲ್ಲ ಧನ, ಗ್ರಾಹಕರಿಗಿಲ್ಲ ಧಾನ್ಯ, ಕಾರ್ಪೊರೇಟ್ ಕಂಪನಿಗಳಿಗೆ ಸುಗ್ಗಿ
ಎಲ್ಲಾ ದಿಕ್ಕುಗಳಿಂದಲೂ ರೈತರು ಆಕ್ರಮಣಕ್ಕೊಳಗಾಗಿರುವಾಗ, ‘ಇದು ಅವರಿಗೆ ಸಂಜೀವಿನಿ’ ಎಂದು ಬಣ್ಣಿಸುತ್ತಾ ಕಳೆದ ಅಕ್ಟೋಬರ್ 25ರಂದು ‘ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆಯನ್ನು (ಪಿಎಂಡಿಡಿಕೆವೈ)’ ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ಕನಿಷ್ಠ ಆದಾಯಕ್ಕೂ ಸಹ ಪರದಾಡುತ್ತಿರುವ ರೈತರು ಭತ್ತ, ಗೋಧಿ ಮುಂತಾದ ಬೆಳೆಗಳನ್ನು ಬೆಳೆಯುವುದನ್ನು ಬಿಟ್ಟು ರಫ್ತು ಮಾಡಬಹುದಾಗಿರುವ ಬೆಳೆಗಳ ಕಡೆಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದಾರೆ. ‘ರಫ್ತಾಗುವ ಉತ್ಪನ್ನಗಳಲ್ಲಿ ಲಾಭವಿದೆ’ ಎನ್ನುವ ಸಾಮಾನ್ಯ ನಂಬಿಕೆಯು ಪ್ರಚಲಿತವಾಗಿದೆ. ಅದರಂತೆ ಈ ಯೋಜನೆಯು ಸೂಕ್ತ ಬೆಲೆ ಅಲಭ್ಯತೆ, ಕೃಷಿ ಒಳಸುರಿ ವೆಚ್ಚದ ಏರಿಕೆ, ಅತಿವೃಷ್ಟಿ-ಅನಾವೃಷ್ಟಿ, ಕಳಪೆ ಬೀಜ, ಗೊಬ್ಬರ, ಬೆಳೆ ಹಾನಿ ಇತ್ಯಾದಿಗಳಿಗೆ ಸಿಲುಕಿ ತೀವ್ರ ಸಂಕಷ್ಟದಲ್ಲಿರುವ ಸಣ್ಣ, ಮಧ್ಯಮ ಹಾಗೂ ಬಡ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುತ್ತದೆಯೇ ಎನ್ನುವುದೇ ಪ್ರಮುಖ ಪ್ರಶ್ನೆ. ಜೊತೆಗೆ, ಸಾಮಾನ್ಯ ಗ್ರಾಹಕರಿಗೆ ಇದರಿಂದ ಅನುಕೂಲವಾಗುತ್ತದೆಯೇ? ‘ರೈತರ ಆದಾಯ ದ್ವಿಗುಣಗೊಳ್ಳುತ್ತದೆ’ ಎಂಬ ಪ್ರಧಾನಿ ಭರವಸೆಯು ಈ ಯೋಜನೆಯಿಂದ ಈಗಲಾದರೂ ಸಾಕಾರವಾಗುತ್ತದೆಯೇ?
ಪಿಎಂಡಿಡಿಕೆವೈ ಯೋಜನೆ ಏನು
ಕೇಂದ್ರ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯು ಹೊರಡಿಸಿರುವ ಕಾರ್ಯಸೂಚಿಯ ಅನ್ವಯ, ಕಡಿಮೆ ಉತ್ಪಾದಕತೆ, ಅಸಮರ್ಪಕ ಮೂಲ ಸೌಕರ್ಯಗಳು ಮತ್ತು ಸಾಲ ನೀಡಿಕೆ ಇತ್ಯಾದಿಗಳ ವಿಷಯದಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಪಿಎಂಡಿಡಿಕೆವೈ ಯೋಜನೆಯನ್ನು ಆರಂಭಿಸಲಾಗಿದೆ; ಈಗಿರುವ ಎಲ್ಲಾ ಕೃಷಿ ಯೋಜನೆಗಳನ್ನು ಒಟ್ಟುಗೂಡಿಸಿ, ವಿಶೇಷ ಕ್ರಮಗಳನ್ನು ಅಳವಡಿಸಿಕೊಂಡು, ಯೋಜನೆಯ ಆರಂಭದಲ್ಲಿ 100 ಆಯ್ದ ಜಿಲ್ಲೆಗಳಲ್ಲಿ ಸುಸ್ಥಿರವಾದ ಮತ್ತು ಉತ್ತಮ ಉತ್ಪಾದಕತೆಯಿರುವ ಕೃಷಿ ವಾತಾವರಣವನ್ನು ಸೃಷ್ಟಿಸುವ ಗುರಿಯಿದೆ; ಪ್ರತಿ ರಾಜ್ಯದ ಒಂದಾದರೂ ಜಿಲ್ಲೆಯನ್ನು ಆಯ್ಕೆ ಮಾಡಲಾಗುತ್ತದೆ; ಗ್ರಾಮೀಣ ಕೃಷಿಗೆ ಮರುಜೀವ ನೀಡಲಾಗುತ್ತದೆ; ರೈತರ ಆದಾಯವನ್ನು ಹೆಚ್ಚಿಸುವುದು ಮತ್ತು ಆ ಮೂಲಕ ದೀರ್ಘಕಾಲೀನ ಸುಸ್ಥಿರತೆಯನ್ನು ಮತ್ತು ಆಹಾರ ಭದ್ರತೆಯನ್ನು ಖಚಿತಪಡಿಸಲಾಗುತ್ತದೆ ಎಂದು ಪಿಎಂಡಿಡಿಕೆವೈ ಯೋಜನೆಯ ಕುರಿತು ಹೇಳಿಕೊಳ್ಳಲಾಗಿದೆ. ಪಿಎಂಡಿಡಿಕೆವೈ ಯೋಜನೆಯಡಿ 1.7 ಕೋಟಿ ರೈತರಿಗೆ ಸಹಾಯ ನೀಡಲು 6 ವರ್ಷಗಳ (2025-26 ರಿಂದ 2030-31) ಕಾಲಾವಧಿಗೆ ವಾರ್ಷಿಕ ರೂ.24000 ಕೋಟಿಯ ಪ್ರಮಾಣದಲ್ಲಿ, ಒಟ್ಟು 1.44 ಲಕ್ಷ ಕೋಟಿ ಹಣವನ್ನು ಮೀಸಲಿಡಲಾಗಿದೆ. ದೇಶದ ಕೃಷಿಕರಲ್ಲಿ ಶೇ.86ರಷ್ಟಿರುವ, ಸರಾಸರಿ 2 ಹೆಕ್ಟೇರ್ ಭೂಮಿ ಒಡೆತನ ಹೊಂದಿರುವ ಸಣ್ಣ ಮತ್ತು ಅಂಚಿನ ರೈತರನ್ನು ಗುರಿಯಾಗಿಟ್ಟುಕೊಂಡು ಇದನ್ನು ರೂಪಿಸಲಾಗಿದೆ ಎಂದು ಬಣ್ಣಿಸುತ್ತಿದ್ದಾರೆ. ಕೇಂದ್ರ ಸರ್ಕಾರವು ರಾಜ್ಯಗಳ ಸಹಭಾಗಿತ್ವದಲ್ಲಿ ಈ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸುತ್ತದೆ. ಈ ಯೋಜನೆಯ ಒಳಗೆ ಬರಬಹುದಾದ ಜಿಲ್ಲೆಗಳನ್ನು ನಿವ್ವಳ ಬೆಳೆ ಬೆಳೆಯುವ ಪ್ರದೇಶದ ಪಾಲು ಮತ್ತು ವ್ಯವಸಾಯ ಮಾಡುತ್ತಿರುವ ಹಿಡುವಳಿಗಳ ಸಂಖ್ಯೆಗಳನ್ನು ಆಧರಿಸಿ ಆಯ್ಕೆ ಮಾಡಲಾಗುವುದು.
ಪಿಎಂಡಿಡಿಕೆವೈ ಹೇಗೆ ಕೆಲಸ ಮಾಡುತ್ತದೆ
ಈ ಯೋಜನೆಯ ಮುಖ್ಯ ಘೋಷಿತ ಉದ್ದೇಶವೆಂದರೆ, 1) ಕೃಷಿ ಉತ್ಪಾದಕತೆಯ ಹೆಚ್ಚಳ, 2) ಬೆಳೆ ವೈವಿಧ್ಯತೆಯ ರಕ್ಷಣೆ ಮತ್ತು ಸುಸ್ಥಿರ ಕೃಷಿ ಪದ್ಧತಿಗಳ ಅಳವಡಿಕೆ, 3) ಪಂಚಾಯಿತಿ ಮತ್ತು ತಾಲ್ಲೂಕು ಮಟ್ಟಗಳಲ್ಲಿ ಕಟಾವಿನ ನಂತರದ ದಾಸ್ತಾನಿನ ಪ್ರಮಾಣದಲ್ಲಿ ಏರಿಕೆಯ ಖಾತ್ರಿ, 4) ನೀರಾವರಿ ಸೌಲಭ್ಯಗಳ ಅಭಿವೃದ್ಧಿ ಮತ್ತು 5) ದೀರ್ಘಾವಧಿ ಮತ್ತು ಅಲ್ಪಾವಧಿ ಸಾಲ ಸೌಲಭ್ಯವನ್ನು ಒದಗಿಸುವುದಾಗಿದೆ. ವಿವಿಧ ಸಚಿವಾಲಯಗಳು ಹಾಗೂ ಇಲಾಖೆಗಳ ಅಡಿಯಲ್ಲಿ ಪ್ರಸಕ್ತ ಜಾರಿ ಮಾಡಲಾಗುತ್ತಿರುವ ಕಿಸಾನ್ ಸಮ್ಮಾನ್ ನಿಧಿ, ಫಸಲ್ ವಿಮಾ ಯೋಜನೆ, ಪುನರ್‌ರಚಿತ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ, ಕೃಷಿ ಮೂಲಸೌಕರ್ಯ ನಿಧಿ, ಇತ್ಯಾದಿ – ಈ ಯೋಜನೆಗಳನ್ನೆಲ್ಲಾ ಕಲಸು ಮೇಲೋಗರ ಮಾಡಿ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ತಯಾರಿಸಲಾಗಿದೆ. ಹಾಗೆಯೇ, ಜಿಲ್ಲೆಗಳಲ್ಲಿ ಪ್ರಸಕ್ತ ಕೃಷಿಯ ಪರಿಸ್ಥಿತಿಯನ್ನು ಅಳೆಯಲು ಸಮೀಕ್ಷೆಯೊಂದನ್ನು ನಡೆಸಲಾಗುತ್ತದೆ. ಅದರಲ್ಲಿ ಒಳಗೊಳ್ಳುವ ಅಂಶಗಳೆಂದರೆ, 1) ಆಯಾ ಜಿಲ್ಲೆಯ ಜಮೀನುಗಳಲ್ಲಿ ಮುಖ್ಯವಾದ ಬೆಳೆ, ಹಣ್ಣು ಮತ್ತು ತರಕಾರಿಗಳ ಉತ್ಪಾದಕತೆಯನ್ನು ಲೆಕ್ಕಹಾಕಿ, ಅದು ಜಿಲ್ಲೆಯ ಸರಾಸರಿಗಿಂತ ಕಡಿಮೆ ಇರುವ ಪ್ರದೇಶಗಳನ್ನು ಗುರುತಿಸುವುದು, 2) ಉತ್ಪಾದಕತೆಯು ಕಡಿಮೆ ಇರುವ ಪ್ರದೇಶಗಳಲ್ಲಿ ಪರಿಹಾರಕ್ಕಾಗಿ ಅಲ್ಪಾವಧಿ, ಮಧ್ಯಮಾವಧಿ ಮತ್ತು ಧೀರ್ಘಾವಧಿಯ ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ಕಾರಣಗಳ ವಿಶ್ಲೇಷಣಾತ್ಮಕ ಅಧ್ಯಯನವನ್ನು ನಡೆಸುವುದು, 3) ಉಗ್ರಾಣ, ಹಣ್ಣು ಮಾಡುವ ಕೊಠಡಿ, ಮಾರುಕಟ್ಟೆ ಅಂಗಳ, ಶೈತ್ಯಾಗಾರ, ರೆಫ್ರಿಜರೇಟರ್ ಸಹಿತ ವಾಹನ, ಮುಂತಾದ ಶೈತ್ಯಾಗಾರಗಳ ಸರಪಳಿಯಲ್ಲಿರುವ ಕೊರತೆಗಳನ್ನು ಗುರುತಿಸುವುದು, 4) ಮೀನುಗಾರಿಕೆ ಮತ್ತು ಹಾಲಿನ ಉತ್ಪಾದನೆಗಳಲ್ಲಿ ಕುಸಿತವಿದ್ದರೆ ಅದಕ್ಕೆ ಕಾರಣಗಳನ್ನು ಗುರುತಿಸುವುದು, 5) ಮಣ್ಣಿನ ಮೂಲವಾಗಿರುವ ಪೌಷ್ಟಿಕಾಂಶ ಕೊರತೆಯನ್ನು ಗುರುತಿಸಲು ಜಿಲ್ಲೆಯ ಮಣ್ಣಿನ ಫಲವತ್ತತೆಯ ನಕ್ಷೆಯನ್ನು ತಯಾರಿಸುವುದು – ಇಂತಹವುಗಳ ಜೊತೆಯಲ್ಲಿ ಹವಾಮಾನ ವೈಪರೀತ್ಯ ನಿರೋಧಕ ಬೀಜಗಳ ಲಭ್ಯತೆ, ಜಿಲ್ಲೆಯಲ್ಲಿ ಸಾಲ-ಠೇವಣಿಯ ಅನುಪಾತ ಎಷ್ಟು ಎನ್ನುವ ಮತ್ತು ಆದ್ಯತಾ ವಲಯದಲ್ಲಿ ಸಾಲ ನೀಡುವಿಕೆಯ ಪ್ರಮಾಣ ಮತ್ತು ಜಿಲ್ಲಾ ಸಾಲ ಯೋಜನೆಯ ಗುರಿಯಲ್ಲಿ ಸಾಧನೆಯ ಪ್ರಮಾಣ, ನೈಸರ್ಗಿಕ ವಿಕೋಪ, ಕೀಟಬಾಧೆ, ಬೆಳೆ ರೋಗ ಮತ್ತು ಪಶು ರೋಗ – ಹೀಗೆ ಆ ಪ್ರದೇಶಗಳ ಹಲವು ಮಾಹಿತಿಗಳನ್ನು ಸಂಗ್ರಹಿಸಿ ಅವುಗಳನ್ನು ಶೇಖರಿಸಿಡಬೇಕು ಎಂದು ಯೋಜನೆಯಲ್ಲಿ ತಿಳಿಸಲಾಗಿದೆ.
ಹೀಗೆ ತಳಮಟ್ಟದ ಸಮೀಕ್ಷೆ ಮತ್ತು ಎಲ್ಲ ಸಮಸ್ಯೆಗಳ ಗುಣಲಕ್ಷಣಗಳೇನು ಎಂಬ ವಿಶ್ಲೇಷಣೆಯ ಆಧಾರದ ಮೇಲೆ ಜಿಲ್ಲೆಯು ಸಮಗ್ರ ಮತ್ತು ಸುಸ್ಥಿರ ಕೃಷಿ ಹಾಗೂ ಕೃಷಿ ಸಂಬಂಧಿತ ಕ್ಷೇತ್ರಗಳ ಅಭಿವೃದ್ಧಿ ಯೋಜನೆಯೊಂದನ್ನು ತಯಾರಿಸಬೇಕು. ಅದರಲ್ಲಿ, 1) ಜಮೀನಿನ ಪರಿಪೂರ್ಣ ಬಳಕೆ, ತೋಟಗಾರಿಕೆ, ಮೀನುಗಾರಿಕೆ, ಪಶು ಸಂಗೋಪನೆ ಇತ್ಯಾದಿಗಳಿಗೆ ಕಟಾವಿನ ನಂತರದ ಕೃಷಿ ಮೂಲಸೌಕರ್ಯಗಳ ಬಳಕೆ ಹಾಗೂ ಸುಲಭ ಸಾಲ ಸೌಲಭ್ಯ ವ್ಯವಸ್ಥೆ – ಇವುಗಳನ್ನು ಕ್ರೊಢೀಕರಿಸಿಕೊಂಡು ಪಂಚವಾರ್ಷಿಕ ಫಲಿತಾಂಶ ಆಧಾರಿತ ಗುರಿಯನ್ನು ನಿಗದಿಪಡಿಸಬೇಕು, 2) ಅದಕ್ಕೆ ಅಗತ್ಯವಾದ ವಿವಿಧ ಯೋಜನೆಗಳಲ್ಲಿ ಗುರಿಗಳನ್ನು ನಿಗದಿಪಡಿಸಬೇಕು ಹಾಗೂ 3) ಈ ಕ್ರಿಯಾ ಯೋಜನೆಯಲ್ಲಿ ಮೇಲಿನ ಗುರಿಗಳನ್ನು ಮುಟ್ಟಲು ಜಿಲ್ಲಾ ಮಟ್ಟದ ಅಧಿಕಾರಿಗಳ ಅಥವಾ ಸಂಸ್ಥೆಗಳ ನಿರ್ದಿಷ್ಟ ಜವಾಬ್ದಾರಿಗಳನ್ನೂ ಸಹ ಪಿಎಂಡಿಡಿಕೆವೈ ಒಳಗೊಂಡಿದೆ.
ಆದರೆ, ಪಿಎಂಡಿಡಿಕೆವೈ ವಾಸ್ತವವೇನು
ಇದೆಲ್ಲವನ್ನು ಗಮನಿಸಿದಾಗ ‘ಪಿಎಂಡಿಡಿಕೆವೈ’ ಒಂದು ಉತ್ತಮ ಯೋಜನೆ ಎನಿಸಿದರೆ ಆಶ್ಚರ್ಯವೇನೂ ಇಲ್ಲ. ಆದರೆ, ಆಳಕ್ಕಿಳಿದಾಗ ಅದರ ನಿಜರೂಪ ಬಯಲಾಗುತ್ತದೆ. ಉದಾಹರಣೆಗೆ, ಉತ್ಪಾದಕತೆಯ ಕುಸಿತಕ್ಕೆ ಮುಖ್ಯವಾದ ಕಾರಣಗಳಲ್ಲಿ ಕಳಪೆ ಬೀಜದ ಸರಬರಾಜು ಕೂಡ ಒಂದು. ಅಷ್ಟೇ ಅಲ್ಲದೆ, ಕುಲಾಂತರಿ ಬೀಜ! ಮತ್ತು ಅದಕ್ಕೆಂದೇ ಉಪಯೋಗಿಸಬೇಕಾಗುವ ಕೀಟನಾಶಕ, ರೋಗನಾಶಕ ಮತ್ತು ರಾಸಾಯನಿಕ ಗೊಬ್ಬರಗಳು ಬಹಳ ಬೇಗನೆ ಮಣ್ಣಿನ ಫಲವತ್ತತೆಯನ್ನು ನಾಶ ಮಾಡುತ್ತವೆ. ಜೊತೆಗೆ, ವ್ಯವಸ್ಥಿತವಾಗಿ ನೀರಾವರಿ ಇಲ್ಲದಿರುವುದರಿಂದ ಮಳೆಯು ಕಡಿಮೆಯಾದಂತೆ ಇಳುವರಿ ಇಳಿಮುಖವಾಗುತ್ತದೆ. ಇಲ್ಲವೆಂದರೆ, ಮಳೆ ಅತಿಯಾಗಿ ಸುರಿದು ಬೆಳೆ ನಾಶವಾಗುತ್ತದೆ. ಈ ಏರುಪೇರನ್ನು ಎದುರಿಸಲು ಯೋಜನೆಯಲ್ಲಿ ಪರಿಹಾರವೇನಿದೆ? ಯೋಜನೆಯ ಪ್ರಕಾರ ಉತ್ಪಾದಕತೆಯನ್ನು ಹೆಚ್ಚಿಸುವುದೆಂದರೆ ಕುಲಾಂತರಿ ಬೀಜ, ಮತ್ತಷ್ಟು ಕೀಟ-ರೋಗನಾಶಕ ಮತ್ತು ರಾಸಾಯನಿಕ ಗೊಬ್ಬರದ ಬಳಕೆಯೇ ಆಗಿದೆ. ಏಕೆಂದರೆ, ಇವುಗಳ ಉತ್ಪಾದನೆಯು ಕಾರ್ಪೊರೆಟ್ ಕಂಪೆನಿಗಳ ಹಿಡಿತದಲ್ಲಿದೆ. ಅಂದರೆ, ‘ಪಿಎಂಡಿಡಿಕೆವೈ’ ಯೋಜನೆಯಡಿಯಲ್ಲಿ ಬೀಜ, ಗೊಬ್ಬರ, ಮುಂತಾದ ಕೃಷಿ ಒಳಸುರಿಗಳಿಗೆ ರೈತರು ಕಾರ್ಪೊರೆಟ್ ಕಂಪೆನಿಗಳ ಮೇಲೆ ಮತ್ತಷ್ಟು ಅವಲಂಬಿತರಾಗಬೇಕಾಗುತ್ತದೆ.
ಇನ್ನು ರೈತರ ಮೇಲೆ ಬಹುದೊಡ್ಡ ಪೆಟ್ಟು ಮಾರುಕಟ್ಟೆಯಲ್ಲಿ ಬೀಳುತ್ತದೆ. ಬೆಳೆಗಳ ಕಟಾವಿನ ಸಮಯಕ್ಕೆ ಸರಿಯಾಗಿ ಬೆಲೆಗಳು ಕುಸಿಯುತ್ತವೆ. ಸರ್ಕಾರವು ಕನಿಷ್ಠ ಬೆಂಬಲ ಬೆಲೆಯನ್ನು ಘೋಷಣೆ ಮಾಡಲು ಮತ್ತು ಖರೀದಿ ಮಾಡಲು ತಡ ಮಾಡುತ್ತದೆ. ಆಗ ರೈತರು ಹತಾಶೆಯಿಂದ ಕೈಗೆ ಸಿಕ್ಕಷ್ಟು ಬೆಲೆಗೆ ಮಾರುತ್ತಾರೆ ಮತ್ತು ಭಯಾನಕ ನಷ್ಟವನ್ನು ಅನುಭವಿಸುತ್ತಾರೆ. ಇದಕ್ಕಿರುವ ಏಕೈಕ ಪರಿಹಾರವೆಂದರೆ, ಸರ್ಕಾರ ಸಂಪೂರ್ಣವಾಗಿ ರೈತರ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಯಡಿ ಸರಿಯಾದ ಸಮಯಕ್ಕೆ ಖರೀದಿಸುವುದು ಮತ್ತು ತಕ್ಷಣವೇ ಹಣ ಬಿಡುಗಡೆ ಮಾಡುವುದಾಗಿದೆ. ಆದರೆ, ಕೇಂದ್ರವು ದೆಹಲಿಯ ರೈತ ಹೋರಾಟದ ಸಂದರ್ಭದಲ್ಲಿ ನೀಡಿದ್ದ ಎರಡು ಪ್ರಮುಖ ವಾಗ್ದಾನಗಳಾಗಿದ್ದ ಮೂರು ಕರಾಳ ಕೃಷಿ ಕಾಯ್ದೆಗಳ ವಾಪಸಾತಿ ಮತ್ತು ಸಿ2+50% ಆಧಾರದ ಮೇಲೆ ವೈಜ್ಞಾನಿಕ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸುವಿಕೆಗಳನ್ನು ಉಳಿಸಿಕೊಳ್ಳದೆ ವಚನಭ್ರಷ್ಟವಾಗಿದೆ. ‘ಪಿಎಂಡಿಡಿಕೆವೈ’ ಯೋಜನೆಯಲ್ಲಿ ಬೆಂಬಲ ಬೆಲೆಯ ವಿಷಯದ ಚಕಾರವಿಲ್ಲ.
ಮೂರು ಕರಾಳ ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಂಡೆ ಎಂದ ಮೋದಿ ಸರ್ಕಾರವು ಈಗ ‘ಹೊಸ ರಾಷ್ಟ್ರೀಯ ಕೃಷಿ ಮಾರುಕಟ್ಟೆ ನೀತಿಯ ಚೌಕಟ್ಟು’ ಕಾಯ್ದೆ ಎಂಬ ಹೆಸರಿನಲ್ಲಿ ಅವೇ ನೀತಿಗಳನ್ನು ಹಿಂಬಾಗಿಲಿನಿಂದ ಮತ್ತೆ ಜಾರಿಗೆ ತರಲು ಹವಣಿಸಿದೆ. ಈ ಕಾಯ್ದೆಯು ಹಳ್ಳಿಗಳ ಸಂತೆಗಳಿಂದ ಹಿಡಿದು ಎಪಿಎಂಸಿ ಮಂಡಿಗಳವರೆಗೆ ಎಲ್ಲವನ್ನೂ ಸಂಪೂರ್ಣವಾಗಿ ಹಾಳುಗೆಡವುತ್ತದೆ. ಆಗ ದೈತ್ಯ ಕಾರ್ಪೊರೇಟ್ ಕಂಪನಿಗಳ ಒಡೆತನದ ಖಾಸಗಿ ಮಂಡಿಗಳು ಹುಟ್ಟಿಕೊಳ್ಳುತ್ತವೆ. ಕೃಷಿ ಮಾರುಕಟ್ಟೆ ಕಾರ್ಪೊರೇಟ್ ಕಂಪನಿಗಳ ಕಪಿಮುಷ್ಟಿಗೆ ಸಿಕ್ಕಿಕೊಳ್ಳುತ್ತದೆ. ಈ ಕಾಯ್ದೆಗೆ ತೀವ್ರ ವಿರೋಧವೂ ವ್ಯಕ್ತವಾಗುತ್ತಿದೆ. ಸದ್ಯಕ್ಕೆ ಅಮೆರಿಕಾದ ಅಧ್ಯಕ್ಷ ಟ್ರಂಪ್ ಅಮೆರಿಕಾಗೆ ಆಮದಾಗುವ ಸರಕುಗಳ ಮೇಲೆ ವಿಧಿಸಿದ ಹೆಚ್ಚುವರಿ ಸುಂಕದಿಂದಾಗಿ ಅಂತರರಾಷ್ಟ್ರೀಯ ಪರಿಸ್ಥಿತಿಯು ಬದಲಾಗಿದೆ. ಇದರಿಂದಾಗಿ, ಈಗ ಕಾಯ್ದೆಯು ಶೈತ್ಯಾಗಾರದಲ್ಲಿದೆ. ಕೃಷಿ ಉತ್ಪನ್ನಗಳ ಆಮದಾಗಲಿ ಅಥವಾ ರಫ್ತಾಗಲಿ – ಇದರಿಂದ ರೈತರಿಗೆ ಯಾವ ಪ್ರಯೋಜನವೂ ಇಲ್ಲ.
ಆದ್ದರಿಂದ. ಪಿಎಂಡಿಡಿಕೆವೈ ಕಾಯ್ದೆಯನ್ನು ರೂಪಿಸಿರುವುದು ಕಾರ್ಪೊರೆೆÃಟ್ ಕಂಪನಿಗಳನ್ನು ಉದ್ಧಾರ ಮಾಡಲು. ಕೃಷಿ ಒಳಸುರಿಗಳನ್ನು ಸಂಪೂರ್ಣವಾಗಿ ಕಾರ್ಪೊರೆÉÃಟ್ ಕಂಪನಿಗಳ ಹಿಡಿತಕ್ಕೆ ತರಲು. ಅದಕ್ಕೆ ರೈತರು ದುಬಾರಿ ಬೆಲೆಯನ್ನು ತೆರಬೇಕು. ಕೃಷಿ ಉತ್ಪನ್ನಗಳ ಮಾರಾಟ ಮತ್ತು ಖರೀದಿಯು ಖಾಸಗಿ ಉದ್ಯಮಿಗಳ ಪಾಲಾದಾಗ ರೈತರಿಗೆ ಬೆಂಬಲ ಬೆಲೆಯಿರಲಿ ಅವರು ಕೃಷಿಗಾಗಿ ಸುರಿಯುವ ಖರ್ಚೂ ಸಹ ಸಿಗುವುದಿಲ್ಲ. ರೈತರಿಗೆ ಕನಿಷ್ಠ ಬೆಂಬಲ ಬೆಲೆ ಎಂಬುದು ಮರೀಚಿಕೆಯಾಗುತ್ತದೆ. ಇದರ ಬಿಸಿ ಗ್ರಾಹಕರಿಗೂ ಸಹ ತಟ್ಟುತ್ತದೆ. ಜೀವನಾವಶ್ಯಕ ವಸ್ತುಗಳು ಕಾರ್ಪೊರೇಟ್‌ಗಳ ಲಾಭದಾಹದ ಸರಕುಗಳಾಗುವುದರಿಂದ ಮತ್ತು ಸರ್ಕಾರವು ಬೆಲೆಗಳನ್ನು ನಿಯಂತ್ರಿಸದಿರುವುದರಿಂದ ಬೆಲೆಗಳು ಗಗನಕ್ಕೇರುತ್ತವೆ. ಜೊತೆಗೆ ವಾಣಿಜ್ಯ ಬೆಳೆಗಳನ್ನು ಮತ್ತು ರಫ್ತಿಗೆ ಬೇಕಾದ ಉತ್ಪನ್ನಗಳನ್ನು ಬೆಳೆಯುವುದಕ್ಕೆ ರೈತರನ್ನು ಒತ್ತಾಯಿಸುವುದರಿಂದ ಆಹಾರ ಪದಾರ್ಥಗಳ ಕೊರತೆಯೂ ಸಹ ಉಂಟಾಗುತ್ತದೆ. ಅದಕ್ಕೂ ಜನಸಾಮಾನ್ಯರು ಮತ್ತು ಸ್ವತಃ ಗ್ರಾಹಕರೂ ಆಗಿರುವ ರೈತರೂ ಬೆಲೆ ತೆರಬೇಕು. ಆದ್ದರಿಂದ, ಈ ರೈತವಿರೋಧಿ, ಜನವಿರೋಧಿ ಮತ್ತು ಕಾರ್ಪೊರೇಟ್ ಕಂಪನಿಗಳ ಪರವಾಗಿರುವ ಪಿಎಂಡಿಡಿಕೆವೈ ಕಾಯ್ದೆಯ ವಿರುದ್ಧ ಜನತೆ, ಮುಖ್ಯವಾಗಿ ರೈತ ಸಮುದಾಯವು ಸಮರಶೀಲ ಚಳುವಳಿಯನ್ನು ಕಟ್ಟುವ ಅವಶ್ಯಕತೆ ಇದೆ.