ಭರವಸೆ ಮಂಕಾಗಿದೆ - ನಿಟ್ಟುಸಿರೇ ಬದುಕಾಗಿದೆ: ಇನ್ನು ಹೊಸ ವರುಷದ ಸಂಭ್ರಮವೆಂತು?
ಕಳೆದೊಂದು ಮಾಸದಲ್ಲಿ ಏನೆಲ್ಲಾ ನಡೆದು ಹೋಗಿದೆ. ನಮ್ಮ ರಾಜ್ಯದಲ್ಲಿ ಒಂದು ಜವಾಬ್ದಾರಿಯುತ ಸರ್ಕಾರವು ಇದೆಯೇ ಎನ್ನುವ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳುತ್ತಲೇ ಇರುವಂತೆ ಆಗಿದೆ. ಏಕೆಂದರೆ, ಅಂತಹ ವಿದ್ಯಮಾನಗಳನ್ನು ರಾಜ್ಯದ ಎಲ್ಲ ಪ್ರಜ್ಞಾವಂತ ಜನತೆ ಗಮನಿಸುತ್ತಲೇ ಇದ್ದಾರೆ. ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನವು ನಡೆದ 10 ದಿನಗಳೂ ಸಹ ಹತ್ತು ಹಲವಾರು ಪ್ರತಿಭಟನೆಗಳು ನಡೆಯುತ್ತಲೇ ಇದ್ದವು. ಸರ್ಕಾರವು ತಾನೇ ಘಂಟಾಘೋಷವಾಗಿ ಘೋಷಿಸಿ ನೀಡಿದ್ದ ಭರವಸೆಗಳನ್ನು ತಾನೇ ಗಾಳಿಗೆ ತೂರಿ, ಅವನ್ನು ಈಡೇರಿಸದಿದ್ದಕ್ಕೆ ಕಿಂಚಿತ್ತು ನಾಚಿಕೆಯನ್ನೂ ಪಡದೆ, ಮತ್ತೆ ಮಾಧ್ಯಮಗಳ ಮುಂದೆ ಬಂದು ಹೊಸ ಆಶ್ವಾಸನೆಗಳನ್ನು ಭಂಡತನದಿಂದ ನೀಡುತ್ತಿದ್ದದ್ದು ಜನರಲ್ಲಿ ಆಕ್ರೋಶ ಹುಟ್ಟಿಸದಿದ್ದರೆ ಹೇಗೆ? ಅದು ಮನುಷ್ಯ ಸಹಜ ಗುಣವಾಗುತ್ತದೆಯೇ?
ಹುಸಿಯಾದ ಮಾತು
10 ತಿಂಗಳ ಹಿಂದೆ ರಾಜ್ಯದ 40,000 ಆಶಾ ಕಾರ್ಯಕರ್ತೆಯರಿಗೆ ದುಡಿಮೆಗೆ ತಕ್ಕಂತೆ ಅವರಿಗೆ ಸಲ್ಲಬೇಕಾಗಿರುವ ಹೆಚ್ಚುವರಿ ಹಣದ ಪಾವತಿಯ ಬಗ್ಗೆ ಸರ್ಕಾರವು ಕೈ ಕೊಟ್ಟಿದೆ. ‘ಸರ್ಕಾರಿ ಶಾಲೆಗಳನ್ನು ಕಾಪಾಡುತ್ತೇವೆ, ಯಾವುದನ್ನೂ ಮುಚ್ಚುವುದಿಲ್ಲ’ ಎಂದ ತನ್ನ ಮಾತನ್ನು ಉಳಿಸಿಕೊಂಡಿಲ್ಲ ಮಾತ್ರವಲ್ಲ, ‘ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳು ಎಂಬ ಹೆಸರಿನಲ್ಲಿ ಅತ್ಯುತ್ತಮವಾದ ಆಧುನಿಕ ಶಾಲೆಗಳನ್ನು ಸ್ಥಾಪಿಸುತ್ತೇವೆ’ ಎಂದು ಜನರನ್ನು ಮರಳು ಮಾಡುವ ಮಾತನಾಡುತ್ತಲೇ, ಅದೇ ನೆಪದಡಿಯಲ್ಲಿ ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚಿ ಬಡವರು ಮತ್ತು ತುಳಿತಕ್ಕೊಳಗಾದವರನ್ನು ಶಿಕ್ಷಣದಿಂದ ವಂಚಿಸಿ ಅವರನ್ನು ಇನ್ನಷ್ಟು ದಮನಿಸುವ ನೀಲಿನಕ್ಷೆಯನ್ನು ಸರ್ಕಾರವು ಕೈಯಲ್ಲಿ ಹಿಡಿದು ಕೂತಿದೆ. ಕಬ್ಬು ಬೆಳೆಗಾರರು ಸದ್ಯದ ಬೆಲೆಗಿಂತ ಕೇವಲ ರೂ.1000 ಅಧಿಕ ಬೆಲೆಯನ್ನು ನಿಗದಿ ಮಾಡಲು ಕೋರಿದರೆ ಸರ್ಕಾರವು ಮುಖ ತಿರುಗಿಸಿಕೊಂಡಿತ್ತು. ಕನಿಷ್ಠ ಬೆಂಬಲ ಬೆಲೆಗಾಗಿ ಕಾಯ್ದೆಯನ್ನು ರೈತರು ಆಗ್ರಹಿಸಿದರೆ ಅದನ್ನು ತನ್ನ ಕಿವಿಯ ಮೇಲೆ ಹಾಕಿಕೊಳ್ಳಲೇ ಇಲ್ಲ. ಇವುಗಳ ಜೊತೆಯಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರೂ(ಅಧಿಕೃತವಾಗಿ 2.84ಲಕ್ಷ) ಅವನ್ನು ತುಂಬಿಕೊಳ್ಳಲಾಗುವುದು ಎಂದು ಪದೇಪದೇ ತಾನೇ ಆಶ್ವಾಸನೆ ನೀಡಿದ್ದರೂ ಸಹ ಯಾವುದೇ ನಿಖರವಾದ ನೇಮಕಾತಿ ಕಾರ್ಯಕ್ರಮವಾಗಲಿ ಹಾಗೂ ನೇಮಕಾತಿ ವೇಳಾಪಟ್ಟಿಯನ್ನಾಗಲಿ ಘೋಷಿಸದಿದ್ದರೆ ಹೇಗೆ! ಧಾರವಾಡ, ವಿಜಯಪುರ, ಕಲಬುರಗಿ, ಬೆಳಗಾವಿಗಳಲ್ಲಿ ಉದ್ಯೋಗಾಕಾಂಕ್ಷಿ ಯುವಜನತೆ ಸಂಘಟಿತ ಪ್ರತಿಭಟನೆಗಳನ್ನು ಕೈಗೊಂಡು, ಪದೇಪದೇ ಬಂಧನಕ್ಕೊಳಗಾದ ನಂತರ ಇತ್ತೀಚೆಗೆ ಬೆಳಗಾವಿ ಅಧಿವೇಶನದಲ್ಲಿ 56 ಸಾವಿರ ಹುದ್ದೆಗಳನ್ನು ಹಂತಹಂತವಾಗಿ ತುಂಬಿಕೊಳ್ಳಲಾಗುವುದು ಎಂದು ಸರ್ಕಾರವು ಇನ್ನೊಂದು ಆಶ್ವಾಸನೆಯನ್ನು ನೀಡಿದೆ. ಸರ್ಕಾರದಿಂದ ಮತ್ತೆಮತ್ತೆ ಏಮಾರಿರುವ ರಾಜ್ಯದ ಯುವಜನತೆ ಈ ಬಾರಿ ಹೋರಾಟವನ್ನು ಕೈಬಿಟ್ಟಿಲ್ಲ ಮತ್ತು ಕೇವಲ ಆಶ್ವಾಸನೆ ಅಥವಾ ಭರವಸೆಯಷ್ಟೇ ಅಲ್ಲ, ಸರ್ಕಾರದಿಂದ ಅಧಿಸೂಚನೆಯನ್ನು ಮತ್ತು ನೇಮಕಾತಿಗಾಗಿ ಕಾಲಮಿತಿಯುಳ್ಳ ನಿರ್ದಿಷ್ಟ ವೇಳಾಪಟ್ಟಿಯನ್ನೂ ಸಹ ಸರಿಯಾಗಿಯೇ ಆಗ್ರಹಿಸುತ್ತಿದ್ದಾರೆ. ಇಲ್ಲಿಯವರೆಗೂ ಯಾವುದೇ ಜನಪರ ಕಾರ್ಯಕ್ರಮ ಅಥವಾ ಯೋಜನೆಯ ಮಾತು ಬಂದರೆ ಹಣವೆಲ್ಲಾ ಗ್ಯಾರಂಟಿ ಯೋಜನೆಗಳಿಗೆ ವ್ಯಯವಾಗುತ್ತಿದೆ ಎನ್ನುತ್ತಿದ್ದ ಸರ್ಕಾರವು ಈಗ ಒಳಮೀಸಲಾತಿಯ ವಿವಾದವು ಹೈಕೋರ್ಟ್ ಮೆಟ್ಟಿಲೇರಿದೆ, ಆದ್ದರಿಂದ ಶೇ.56ರಷ್ಟಕ್ಕೆ ಏರಿಕೆ ಮಾಡಿರುವ ಮೀಸಲಾತಿಯ ಪ್ರಶ್ನೆಯು ನ್ಯಾಯಾಲಯದಲ್ಲಿ ಇತ್ಯರ್ಥವಾಗುವವರೆಗೆ ನೇಮಕಾತಿ ಸಾಧ್ಯವಿಲ್ಲ ಎನ್ನುತ್ತಿದೆ. ಅಂತೂ ಕುಂಟು ನೆಪಗಳು ಬೇಕಾದಷ್ಟು ಸಿಗುತ್ತವೆ.
ಸ್ತ್ರೀ ಸುರಕ್ಷತೆ-ದ್ವೇಷ-ಮರ್ಯಾದೆಗೇಡು ಹತ್ಯೆ
ಇನ್ನು ರಾಜ್ಯದಲ್ಲಿ ಸ್ತ್ರೀ ಸುರಕ್ಷತೆಯ ಪರಿಸ್ಥಿತಿಯು ಆತಂಕಕಾರಿ ಮಟ್ಟವನ್ನು ತಲುಪಿದೆ. ಅತ್ಯಾಚಾರ, ಕಗ್ಗೊಲೆಗಳ ಸಂಖ್ಯೆಗಳು ಅಪಾರವಾಗಿ ಏರುತ್ತಲೇ ಇವೆ. ಈಗಂತೂ ಮರ್ಯಾದೆಯ ಹೆಸರಿನ ‘ಮರ್ಯಾದೆಗೇಡು ಹತ್ಯೆ’ಗಳನ್ನು ನಡೆಸುತ್ತಿರುವ ಸಮಾಜದ ಬಲಿಷ್ಠರ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಸರ್ಕಾರವು ತನ್ನ ಬದ್ಧತೆಯನ್ನು ತೋರಿಲ್ಲ. ಅಂತಹ ಕ್ರೌರ್ಯದ ಕೃತ್ಯಗಳಿಗೆ ಬಲಿಯಾದವರ ಪಟ್ಟಿಗೆ ಇತ್ತೀಚಿನ ಸೇರ್ಪಡೆ ಮುಗ್ಧೆ ಮಾನ್ಯ.
ರಾಜ್ಯ ಸರ್ಕಾರವು ಜನಮತವನ್ನು ಆಲಿಸುವ ಮನಸ್ಸನ್ನು ಹೊಂದಿಲ್ಲ. ದ್ವೇಷ ಭಾಷಣ ಮತ್ತು ದ್ವೇಷಾಪರಾಧ ತಡೆ ಮಸೂದೆಯು ಈಗ ಹೊಸದೊಂದು ಚರ್ಚೆಯನ್ನು ಹುಟ್ಟುಹಾಕಿದೆ. ಮಸೂದೆಯಲ್ಲಿ ಕೋಮುವಾದಿ-ಜಾತಿವಾದಿ ಮನಸ್ಥಿತಿಯುಳ್ಳವರನ್ನು ಮಟ್ಟ ಹಾಕಲು ಯಾವುದೇ ನಿರ್ದಿಷ್ಟವಾದ ಮತ್ತು ಸ್ಪಷ್ಟವಾದ ವ್ಯಾಖ್ಯಾನಗಳಾಗಲಿ ಅಥವಾ ಕ್ರಮಗಳಾಗಲಿ ಇಲ್ಲ. ಕೇವಲ ಕೆಲವು ಅಸ್ಪಷ್ಟ ಅಂಶಗಳನ್ನು ತುಂಬಿ ‘ಅಗತ್ಯಕ್ಕೆ ತಕ್ಕಂತೆ’ ಅದನ್ನು ವ್ಯಾಖ್ಯಾನ ಮಾಡಿಕೊಳ್ಳಬಹುದಾದ ಸಾಧ್ಯತೆ ಉಳಿಸಿಟ್ಟಿದ್ದಾರೆ ಎನ್ನುವ ಆಕ್ಷೇಪಣೆಯಲ್ಲಿ ಸತ್ಯವಿಲ್ಲದಿಲ್ಲ. ಇದೇ ಮಾತು ಈಗ ತಾನೆ ದಿಢೀರನೇ ತಯಾರಾಗಿರುವ ‘ಮರ್ಯಾದೆಗೇಡು ಹತ್ಯೆ’ ಮಸೂದೆಗೂ ಅನ್ವಯವಾಗುತ್ತದೆ. ಅಂದರೆ, ರಾಜ್ಯ ಸರ್ಕಾರವು ಕೇವಲ ಮಾತಿನ ಅಬ್ಬರದ ಅಲೆಯಲ್ಲಿ (Headline Management) ತೇಲಿಕೊಂಡು ಅದರಲ್ಲೇ ಜನರನ್ನು ಏಮಾರಿಸುತ್ತಾ ತನಗೆ ‘ವಿವಿಧ ರೀತಿಯ ಅನುಕೂಲ’ಗಳನ್ನು ಹೊತ್ತು ತರುವ ಪ್ರಾಜೆಕ್ಟ್ ಗಳ ಬಗ್ಗೆ ಮಾತ್ರ ಅತೀವ ಉತ್ಸುಕತೆ ಹೊಂದಿರುವಂತಿದೆ. 5 ಗ್ಯಾರಂಟಿಗಳಿಂದಾಗಿ ಯಾವುದೇ ಜನೋಪಯೋಗಿ ಯೋಜನೆಗೂ ಹಣವಿಲ್ಲ ಎನ್ನುವ ನೆಪವನ್ನು ಮುಂದು ಮಾಡಿಕೊಂಡಿರುವ ಸರ್ಕಾರದ ಬಳಿ ಬೆಂಗಳೂರನ್ನು ಬಗೆದು ಸುರಂಗ ತೋಡಲು, ಆರ್ಥಿಕವಾಗಿ ಹಾಗೂ ಪರಿಸರದ ದೃಷ್ಟಿಯಿಂದ ವಿನಾಶಕಾರಿಯಾಗಿರುವ ‘ಸುರಂಗ ರಸ್ತೆ’ ಯೋಜನೆಗಾಗಿ ರೂ.20,000 ಕೋಟಿಗೂ ಹೆಚ್ಚು ಹಣ ಲಭ್ಯವಿದೆ. ಜನಸಾಮಾನ್ಯರಲ್ಲದೆ, ನಗರ ಸಾರಿಗೆ, ಭೂವಿಜ್ಞಾನ, ಪರಿಸರ, ಹಣಕಾಸು – ಈ ಎಲ್ಲ ವಿಭಾಗಗಳ ತಜ್ಞರ ಅಭಿಪ್ರಾಯಗಳು ಈ ಯೋಜನೆಗೆ ವಿರುದ್ಧವಿದ್ದರೂ ಸಹ ಅವೆಲ್ಲವನ್ನೂ ಕಡೆಗಣಿಸಿ ಸುರಂಗ ರಸ್ತೆ ನಿರ್ಮಾಣಕ್ಕೆ ಸರ್ಕಾರವು ತುದಿಗಾಲಲ್ಲಿ ನಿಂತಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಿ, ಆ ಮೂಲಕ ಖಾಸಗಿ ವಾಹನ ಬಳಕೆಯನ್ನು ಕಡಿಮೆ ಮಾಡಿ ರಸ್ತೆಗಳಲ್ಲಿ ವಾಹನದಟ್ಟಣೆಯನ್ನು ಇಳಿಸಬಹುದಾಗಿರುವ ಹಲವಾರು ಉತ್ತಮ ಮತ್ತು ಅಗ್ಗವಾದ ಪರಿಹಾರಗಳು ಸರ್ಕಾರಕ್ಕೆ ಬೇಕಿಲ್ಲ. ರಾಜ್ಯ ಸರ್ಕಾರಕ್ಕೆ ಅತ್ಯಂತ ದುಬಾರಿಯಾಗಿರುವ, ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಯೋಜನೆಗಳೇ ಬೇಕಾಗಿವೆ. ಇನ್ನು ಎತ್ತಿನಹೊಳೆ ಯೋಜನೆಯಾಗಲಿ ಅಥವಾ ಮಹದಾಯಿಯಾಗಲಿ ಚುನಾವಣಾ ಸಮಯದಲ್ಲಿ ರಾಜಕೀಯ ಮಾಡಲು ಪ್ರಚಾರದ ಪರಿಕರಗಳು ಮಾತ್ರ ಆಗಿವೆ.
ಶಿಕ್ಷಣವು ವ್ಯಾಪಾರದ ಸರಕು – ಸಾರ್ವಜನಿಕ ಶಿಕ್ಷಣಕ್ಕೆ ತಿಲಾಂಜಲಿ
ಶಿಕ್ಷಣ ಕ್ಷೇತ್ರದ ದುರವಸ್ಥೆಯಲ್ಲಿ ಸರ್ಕಾರದ ನಿಷ್ಕಾಳಜಿ ಕಣ್ಣಿಗೆ ರಾಚುತ್ತಿದೆ. ಅಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇವೆ, ಲಕ್ಷಾಂತರ ಮಕ್ಕಳಿಗೆ ಇನ್ನೂ ಸಹ ಗುಣಮಟ್ಟದ ಶಿಕ್ಷಣ ಲಭ್ಯವಿಲ್ಲ. ಇವೆರಡೇ ಸಮಸ್ಯೆಗಳಿದ್ದಿದ್ದರೆ ಇವು ಎಲ್ಲ ಕಾಲಕ್ಕೂ ಇದ್ದದ್ದೇ ಎನ್ನಬಹುದ್ದಿತ್ತೇನೋ! ಆದರೆ, ಈಗ ಸಾವಿರಾರು ಸಂಖ್ಯೆಯಲ್ಲಿ ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಈ ಶಾಲೆ ಮುಚ್ಚುವ ಪ್ರಕ್ರಿಯೆಯ ಹೆಸರೇ ‘ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಆರಂಭ ಮತ್ತು ಅವುಗಳೊಂದಿಗೆ ಇತರ ಶಾಲೆಗಳ ವಿಲೀನ’ ಎನ್ನುವುದು. ಈ ವಿಲೀನ ಅಥವಾ ಮುಚ್ಚುವಿಕೆ ಪ್ರಕ್ರಿಯೆಗೆ ಚಾಲನೆ ನೀಡಿರುವ ರಾಜ್ಯ ಸರ್ಕಾರವು ಕಳೆದ ಡಿ.30ರಂದು ನೀಡಿರುವ ನಿರ್ದೇಶನದಲ್ಲಿ 800 ಮ್ಯಾಗ್ನೆಟ್ ಶಾಲೆಗಳನ್ನು ಸ್ಥಾಪಿಸಲು (ಸಾವಿರಾರು ಶಾಲೆಗಳನ್ನು ಮುಚ್ಚಲು) ತಾನು ಏಷ್ಯನ್ ಡೆವೆಲಪ್ಮೆಂಟ್ ಬ್ಯಾಂಕ್(ಎಡಿಬಿ)ನಿಂದ ರೂ.2500 ಕೋಟಿ ಸಾಲವನ್ನು ಪಡೆದಿರುವುದನ್ನು ಘಂಟಾಘೋ಼ಷವಾಗಿ ಹೇಳಿಕೊಂಡಿದೆ. ಈಗಿರುವ ಶಾಲೆಗಳನ್ನು ಮುಚ್ಚಿ ದುಡಿಯುವ ಜನತೆಯ ಮಕ್ಕಳಿಗೆ ಅದರಲ್ಲೂ ನಿರ್ದಿಷ್ಟವಾಗಿ ಹೆಣ್ಣುಮಕ್ಕಳಿಗೆ, ಸಮಾಜದಲ್ಲಿ ಕಡೆಗಣಿಸಲ್ಪಟ್ಟಿರುವ ಸಮುದಾಯಗಳ ಮಕ್ಕಳಿಗೆ ಶಾಶ್ವತವಾಗಿ ಶಿಕ್ಷಣದ ಸಾಧ್ಯತೆಯನ್ನು ಕಸಿದುಕೊಳ್ಳಲಿದೆ. ಹೀಗೆ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆಯು ರಾಜ್ಯದಲ್ಲಿ ಶಿಕ್ಷಣದ ಗುಣಮಟ್ಟವನ್ನು ಎತ್ತರಿಸುವ ಅಥವಾ ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸುವ ಯೋಜನೆಯಲ್ಲದೆ, ಅಲ್ಪಸ್ವಲ್ಪ ಅಳಿದುಳಿದಿರುವ ಶಿಕ್ಷಣವನ್ನೂ ನಾಶ ಮಾಡಿ, ಎಲ್ಲವನ್ನೂ ಖಾಸಗಿ ವಲಯಕ್ಕೆ ಧಾರೆ ಎರೆದುಕೊಟ್ಟು ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಮಾರಿ ಹಾಕುವ ಹುನ್ನಾರವಾಗಿದೆ.
ಅಧಿಕಾರದ ಗದ್ದುಗೆಗೆ ಕಿತ್ತಾಟ
ಎಲ್ಲೆಡೆ ಬಿಕ್ಕಟ್ಟು ತುಂಬಿ ರಾರಾಜಿಸುತ್ತಿರುವ ಈ ಸಂದರ್ಭದಲ್ಲಿ, ಮುಖ್ಯಮಂತ್ರಿ ಸ್ಥಾನಕ್ಕಾಗಿ ಜಟಾಪಟಿ ನಡೆಯುತ್ತಲೇ ಇದೆ. 2025ರ ನವೆಂಬರ್ನಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವು ತನ್ನಾಯುಷ್ಯದ ಅರ್ಧದಾರಿಯನ್ನು ಕ್ರಮಿಸುತ್ತಿದ್ದ ಕಾಲದಲ್ಲಿ ಅಧಿಕಾರ ಬದಲಾವಣೆಯ ಕಲರವ ಜೋರಾಯಿತು. ಅದನ್ನು ‘ನವೆಂಬರ್ ಕ್ರಾಂತಿ’ ಎಂದು ಕರೆದು ಮಾಧ್ಯಮಗಳು ಹುಯಿಲೆಬ್ಬಿಸಿದವು, ತಮ್ಮ ಟಿಆರ್ಪಿ ಹೆಚ್ಚಿಸಿಕೊಂಡವು ಅಷ್ಟೇ! ಜನಸಮಸ್ಯೆಗಳು ಸಹಿಸಲಸಾಧ್ಯವಾದಾಗ ಜನರಲ್ಲಿ ಅಶಾಂತಿ ಮೂಡುತ್ತಿರುವ ಸಂದರ್ಭಕ್ಕೆ ಸರಿಯಾಗಿ ಈ ಕುರ್ಚಿ ಕಾದಾಟದ ಕಥನ ಮುಗಿಯದ ಧಾರಾವಾಹಿಯಂತೆ ಹೊಸ ಕಂತಿನೊಂದಿಗೆ ಮತ್ತೆಮತ್ತೆ ಆರಂಭವಾಗುತ್ತಿದೆ.
ರಾಜ್ಯದ ಜನತೆ ಹೈರಾಣಾಗುತ್ತಿದ್ದಾರೆ. ಸಮಾಜದಲ್ಲಿ ಅಸಹನೆ, ಆಕ್ರೋಶ ಮಡುಗಟ್ಟುತ್ತಿದೆ. ಇದರ ಸೂಚನೆಯೂ ಸಹ ಸರ್ಕಾರದ ಬಳಿಯೇ ಇರಬೇಕು. ಆದ್ದರಿಂದಲೇ, 2023ರ ಮೇನಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯತನಕ ರಾಜ್ಯ ಸರ್ಕಾರವು ಒಂದೇಒಂದು ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸಿಲ್ಲ. ಈ ಕುರಿತಂತೆ ರಾಜ್ಯ ಚುನಾವಣಾ ಆಯೋಗವೇ ರಾಜ್ಯ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದರೂ ಸಹ ಬೆಂಗಳೂರು ಸೇರಿದಂತೆ ಇತರೆಲ್ಲೆಡೆಗಳಲ್ಲಿ ಚುನಾವಣೆ ನಡೆಸುವ ಉತ್ಸಾಹ ಸರ್ಕಾರದ ಬಳಿ ಇಲ್ಲದಿರಲು ಇದೇ ಬಲವಾದ ಕಾರಣವಾಗಿದೆ. ಸರ್ಕಾರದ ಸುಳ್ಳುಗಳು, ರಾಜಕೀಯ ಮೇಲಾಟಗಳಿಂದ ಬೇಸತ್ತಿರುವ ಜನರು ಕಾಂಗ್ರೆಸ್ ಪಕ್ಷವನ್ನು ಸೋಲಿಸುತ್ತಾರೆ ಎಂಬ ಭಯ ರಾಜ್ಯ ಸರ್ಕಾರವನ್ನು ಕಾಡುತ್ತಿದೆ. ಈ ಎಲ್ಲಾ ವಿಷಯಗಳ ಕುರಿತು ವಿರೋಧ ಪಕ್ಷವಾದ ಬಿಜೆಪಿಯು ಬಾಯುಪಚಾರದ ಮಾತುಗಳನ್ನು ಆಡುತ್ತಾ ಸಿಎಂ ಕುರ್ಚಿಯ ವಿಷಯವನ್ನೇ ದೊಡ್ಡದಾಗಿ ಮಾಡಿಕೊಂಡು ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ. ಏಕೆಂದರೆ, ಜನರ ಬದುಕಿನ ಎಲ್ಲ ವಿಷಯಗಳಲ್ಲೂ ಬಿಜೆಪಿಯ ಆಳ್ವಿಕೆಯ ಕಾಲವು ಭಿನ್ನವಾಗೇನೂ ಇರಲಿಲ್ಲ ಎನ್ನವುದನ್ನು ಜನರು ಮರೆತಿಲ್ಲ. ಅದಕ್ಕಾಗಿಯೇ ಅಲ್ಲವೆ, ಭಾರಿ ಬಹುಮತ ಕೊಟ್ಟು ಕಾಂಗ್ರೆಸ್ನ್ನು ಅಧಿಕಾರಕ್ಕೆ ತಂದದ್ದು. ಕಾಂಗ್ರೆಸ್ನ ನೈಜ ಬಣ್ಣ ಈಗ ಮತ್ತೆ ಬಯಲಾಗಿದೆ.
ಸಹಿಸಿದ್ದು ಸಾಕು – ಹೋರಾಟ ಬೇಕು
ಈಗ ಹೊಸ ವರ್ಷದ ಎಣಿಕೆ ಆರಂಭವಾಗಿದೆ. ಜನರು ತಮ್ಮ ಬದುಕಿನ ಸಂಕಷ್ಟಗಳಿಂದ ಹುಟ್ಟುವ ಆಕ್ರೋಶಕ್ಕೆ ಸಂಘಟಿತ ರೂಪವನ್ನು ಕೊಡಬೇಕು. ಶಿಥಿಲಾವಸ್ಥೆಯನ್ನು ತಲುಪಿ ಕೊಳೆಯುತ್ತಿದ್ದರೂ ಸಹ ಉಸಿರೆಳೆದೆಳೆದುಕೊಂಡು ಬದುಕಿರುವ ಇವತ್ತಿನ ಈ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಜನಸಾಮಾನ್ಯರು ತಮ್ಮ ಆಕ್ರೋಶವನ್ನು ಕೇಂದ್ರೀಕರಿಸಿಬೇಕು. ಆಳುವ ಪಕ್ಷ ಅಥವಾ ವಿರೋಧ ಪಕ್ಷಗಳೆರಡೂ ಇದೇ ಮರಣಾಸನ್ನವಾಗಿರುವ ಬಂಡವಾಳಶಾಹಿ ವ್ಯವಸ್ಥೆಯ ಹಿತಕ್ಕಾಗಿಯೇ ಮುಡಿಪಾಗಿವೆಯೇ ಹೊರತು ತಮ್ಮನ್ನು ಗೆಲ್ಲಿಸಿರುವ ಜನರಿಗಾಗಿ ಅಲ್ಲ ಎನ್ನುವ ಇತಿಹಾಸದ ಪಾಠವನ್ನು ಜನತೆ ಮತ್ತೆಮತ್ತೆ ಜ್ಞಾಪಿಸಿಕೊಳ್ಳುತ್ತಲೇ ಇರಬೇಕು. ಆಗ ಮಾತ್ರ ಜನತೆಯ ಸಂಘಟಿತ ಹೋರಾಟವು ಹೊಸ ದಿಕ್ಕನ್ನು ಕಂಡುಕೊಳ್ಳುತ್ತದೆ. ಜನತೆಯಲ್ಲಿ ಮೂಡಿರುವ ಹತಾಶೆ, ನಿರಾಸೆಗಳ ಜಾಗದಲ್ಲಿ ಹೋರಾಟ ಸ್ಫೂರ್ತಿಯು ಒಡಮೂಡುತ್ತದೆ. “ಪ್ರತಿ ಕೆಲವು ವರ್ಷಗಳಿಗೊಮ್ಮೆ ಪಾರ್ಲಿಮೆಂಟ್(ವಿಧಾನಸಭೆ-ಸಂ.) ಮೂಲಕ ಜನರನ್ನು ತುಳಿಯಲು ಮತ್ತು ಶೋಷಿಸಲು ಆಡಳಿತ ವರ್ಗದ ಯಾರನ್ನು ಆರಿಸಬೇಕು ಎಂದು ನಿರ್ಧರಿಸುವುದೇ ಬಂಡವಾಳಶಾಹಿ ಸಂಸದೀಯವಾದದ ನಿಜವಾದ ಸಾರಾಂಶ. ಇದು ಕೇವಲ ಸಂವಿಧಾನಾತ್ಮಕ ರಾಜಪ್ರಭುತ್ವದ ಸಂಸದೀಯ ವ್ಯವಸ್ಥೆಯಲ್ಲಿ ಮಾತ್ರವಲ್ಲ, ಬಹುತೇಕ ಪ್ರಜಾತಾಂತ್ರಿಕ ಗಣರಾಜ್ಯಗಳಿಗೂ ಅನ್ವಯಿಸುತ್ತದೆ”-(ರಾಜ್ಯ ಮತ್ತು ಕ್ರಾಂತಿ – ಲೆನಿನ್) ಎಂಬ ಕಾರ್ಮಿಕವರ್ಗದ ಮಹಾನ್ ನಾಯಕ ಲೆನಿನ್ರ ಮಾತುಗಳನ್ನು ಮತ್ತೆಮತ್ತೆ ನೆನಪಿಸಿಕೊಂಡು ಹತಾಶೆಯನ್ನು ಬದಿಗೊತ್ತಿ ಮುಂದಿನ ಹೋರಾಟಕ್ಕೆ ಜನತೆ ತಮ್ಮನ್ನು ತಾವು ಸಜ್ಜುಗೊಳಿಸಿಕೊಳ್ಳಬೇಕು. ಅದೇ ಅಲ್ಲವೇ, ಇಂದಿನ ತುರ್ತು ಅಗತ್ಯ!!!