ನಿಜವಾದ ದೇಶಪ್ರೇಮ, ನಿಜವಾದ ರಾಷ್ಟ್ರವಾದ ಅಂದರೆ ಏನು?
ಭಾಗ-02
[ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆರ್ಎಸ್ಎಸ್, ಹಿಂದೂ ಮಹಾಸಭಾಗಳ ಪಾತ್ರ ಹಾಗೂ ಅವುಗಳ ಮುಖಂಡರಾಗಿದ್ದ ಡಾ:ಶಾಮಪ್ರಸಾದ್ ಮುಖರ್ಜಿ, ವಿ.ಡಿ.ಸಾವರ್ಕರ್ಗಳ ಬಗ್ಗೆ ಪ್ರಧಾನಿ ಮೋದಿ ಆಗಸ್ಟ್ 15ರಂದು ತಮ್ಮ ಭಾಷಣದಲ್ಲಿ ವಿಪರೀತ ಹಾಡಿ ಹೊಗಳಿದ್ದರು. ಐತಿಹಾಸಿಕ ಪುರಾವೆಗಳಿಲ್ಲದ ಹಲವಾರು ಮಾತುಗಳನ್ನು ಅಂದು ಪ್ರಧಾನಿ ಆಡಿದ್ದರು. ಆ ಭಾಷಣದ ವಿಶ್ಲೇಷಣೆಯ ಮುಂದುವರಿದ ಭಾಗ-2 ಇಲ್ಲಿದೆ]
ಡಾ:ಶಾಮ್ಪ್ರಸಾದ್ ಮುಖರ್ಜಿ ಅವರನ್ನು ಪ್ರಧಾನಿ ಮೋದಿ ಹಾಡಿ ಹೊಗಳಿದ್ದಾರೆ. ಆದರೆ, ಅದೇ ಶಾಮ್ ಪ್ರಸಾದ್ ಮುಖರ್ಜಿ ಪಶ್ಚಿಮ ಬಂಗಾಳದ ಸಮ್ಮಿಶ್ರ ಸರ್ಕಾರದ ಉಪಮುಖ್ಯಮಂತ್ರಿಯಾಗಿದ್ದಾಗ 1942ರ ಜುಲೈ 26ರಂದು ಬ್ರಿಟಿಷ್ ಯಜಮಾನರಿಗೆ ಒಂದು ಪತ್ರದ ಮೂಲಕ “ಈಗ ನಾನು ಕಾಂಗ್ರೆಸ್ ಹರಿಬಿಟ್ಟಿರುವ ವಿಶಾಲ ವ್ಯಾಪ್ತಿಯ ಯಾವುದೇ ಚಳುವಳಿಯ ಪ್ರತಿಫಲವಾಗಿ ಪ್ರಾಂತ್ಯದಲ್ಲಿ ಸೃಷ್ಟಿಯಾಗಬಹುದಾದ ಪರಿಸ್ಥಿತಿಯ ಬಗ್ಗೆ ನಿಮಗೆ ತಿಳಿಸಬಯಸುತ್ತೇನೆ. ಯುದ್ಧದ ಸಮಯದಲ್ಲಿ ಯಾರಾದರೂ, ಆಂತರಿಕ ಬಿಕ್ಕಟ್ಟು ಅಥವಾ ಅಭದ್ರತೆ ಉಂಟಾಗುವಂತೆ ಜನರ ಭಾವನೆಯನ್ನು ಬಡಿದೆಬ್ಬಿಸುವ ಯೋಜನೆ ಹೊಂದಿದ್ದರೆ, ಅದನ್ನು ಈಗ ಅಸ್ತಿತ್ವದಲ್ಲಿರುವ ಯಾವುದೇ ಸರ್ಕಾರವು ಪ್ರತಿರೋಧಿಸಬೇಕು” ಎಂದು ತಮ್ಮ ಸರ್ಕಾರದ ಬಗ್ಗೆ ಭರವಸೆ ನೀಡಿದ್ದರು. (ಮೂ: ಶಾಮ್ಪ್ರಸಾದ್ ಮುಖರ್ಜಿ, ದಿನಚರಿಯ ಪುಟಗಳಿಂದ, ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್, ಪುಟ-179) ಅಂತಹ ಪರಿಸ್ಥಿತಿಯನ್ನು ನಿಭಾಯಿಸಲು ವಿಷಯವಾರು ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಬಂಗಾಳದ ರಾಜ್ಯಪಾಲರಿಗೆ ಸಲಹೆಯನ್ನೂ ಅವರು ನೀಡುತ್ತಾ, “ಈಗ ಪ್ರಶ್ನೆಯೆಂದರೆ, ಈ ಚಳುವಳಿಯನ್ನು (ಕ್ವಿಟ್ ಇಂಡಿಯಾ) ಬಂಗಾಳದಲ್ಲಿ ಯಾವ ರೀತಿ ಎದುರಿಸಬೇಕು? ಕಾಂಗ್ರೆಸ್ನ ಅತ್ಯುತ್ತಮ ಪ್ರಯತ್ನಗಳಿದ್ದರೂ ಕೂಡ ಈ ಚಳುವಳಿಯು ರಾಜ್ಯದಲ್ಲಿ ಬೇರೂರದಂತೆ ನೋಡಿಕೊಳ್ಳುವ ರೀತಿಯಲ್ಲಿ ಪ್ರಾಂತ್ಯದ ಆಡಳಿತವು ಕೆಲಸ ಮಾಡಬೇಕು. ನಮಗೆ, ಅದರಲ್ಲೂ ಜವಾಬ್ದಾರಿಯುತ ಮಂತ್ರಿಗಳಿಗೆ, ಕಾಂಗ್ರೆಸ್ ಯಾವ ಸ್ವಾತಂತ್ರ್ಯಕ್ಕಾಗಿ ಚಳುವಳಿಯನ್ನು ಆರಂಭಿಸಿದೆಯೋ, ಅದು ಈಗಾಗಲೇ ಜನರ ಪ್ರತಿನಿಧಿಗಳ ಕೈಯಲ್ಲಿದೆ ಎಂದು ಜನರಿಗೆ ಹೇಳಲು ಸಾಧ್ಯ. ಅದು ತುರ್ತು ಸಂದರ್ಭದಲ್ಲಿ ಕೆಲವು ಕ್ಷೇತ್ರಗಳಲ್ಲಿ ಸೀಮಿತವಾಗಬಹುದು. ಭಾರತೀಯರು ಬ್ರಿಟಿಷರನ್ನು ನಂಬಬೇಕು; ಅದು ಬ್ರಿಟನ್ನಿನ ಸಲುವಾಗಿ ಅಲ್ಲ ಅಥವಾ ಬ್ರಿಟಿಷರು ಅನುಕೂಲ ಪಡೆದುಕೊಳ್ಳುತ್ತಾರೆ ಎನ್ನುವುದಕ್ಕಲ್ಲ, ಬದಲಿಗೆ ಸ್ವತಃ ಪ್ರಾಂತ್ಯದ ರಕ್ಷಣೆ ಮತ್ತು ಸ್ವಾತಂತ್ರö್ಯಕ್ಕಾಗಿ” ಎಂದು ಬರೆದಿದ್ದರು. (ಎ.ಜಿ. ನೂರಾನಿ ಬರೆದ ‘ಆರ್ಎಸ್ಎಸ್ ಮತ್ತು ಬಿಜೆಪಿ: ಒಂದು ಶ್ರಮ ವಿಭಜನೆ’ ಕೃತಿಯಲ್ಲಿ ಉಲ್ಲೇಖ, ಲೆಫ್ಟ್ ವರ್ಡ್ ಬುಕ್ಸ್, 56-57) ಹಿಂದೂ ಮಹಾಸಭಾ 1947ರ ಆಗಸ್ಟ್ 15ರಂದು ನಾವು ಗಳಿಸಿದ ಸ್ವಾತಂತ್ರöತ್ರ್ಯದ ಸಂಭ್ರಮಾಚರಣೆಯನ್ನು ಬಹಿಷ್ಕರಿಸಿತು.
ಎರಡು ರಾಷ್ಟ್ರ ತತ್ವ ಮತ್ತು ದೇಶದ ವಿಭಜನೆ
ಈಗ ನಾವು ಮೂರನೇ ಪ್ರಶ್ನೆಗೆ ಬರೋಣ. ಅದು ಧರ್ಮಾಧಾರಿತ ದೇಶ ವಿಭಜನೆಯನ್ನು ಕುರಿತದ್ದು. ನಾವು ಇತಿಹಾಸದ ವೈಜ್ಞಾನಿಕ ತತ್ವದ ಆಧಾರದ ಮೇಲೆ ರಾಷ್ಟ್ರದ ಉದಯದ ಸಾರಾಂಶವನ್ನು ಈಗಾಗಲೇ ಹಿಂದಿನ ಭಾಗ-1 ರಲ್ಲಿ ವಿವರಿಸಿದ್ದೇವೆ.
ಆದರೆ ಆರ್ಎಸ್ಎಸ್-ಹಿಂದೂ ಮಹಾಸಭಾಗಳು ಆ ಚಾರಿತ್ರಿಕ ಸತ್ಯವನ್ನು ಒಪ್ಪುವುದಿಲ್ಲ. ಅವರ ಚಿಂತಕ ಗೋಲ್ವಾಲ್ಕರ್, “ನಾವು ರಾಷ್ಟ್ರವಾದವನ್ನು ಒಂದು ಪ್ರಾಚೀನ ವಾಸ್ತವ ಎಂದೂ ಮತ್ತು ಹಿಂದೂಗಳು ಭಾರತದ ರಾಷ್ಟ್ರೀಯ ಸಮಾಜದವರು ಎಂಬ ರಾಷ್ಟ್ರವಾದಕ್ಕೆ ಹಿಂದಿರುಗಬೇಕು” ಎನ್ನುತ್ತಾರೆ. ಅಂದರೆ, ರಾಷ್ಟ್ರವಾದವು ಒಂದು ಪ್ರಾಚೀನ ಪರಿಕಲ್ಪನೆಯಾಗಿತ್ತು ಮತ್ತು ಭಾರತದಲ್ಲಿ (ಅಂದರೆ ಋಷಿಮುನಿಗಳ ಕಾಲದ ಭಾರತದಲ್ಲಿ) ಹಿಂದೂಗಳ ರಾಷ್ಟ್ರೀಯ ಸಮಾಜವಿತ್ತು ಎಂದರ್ಥ. ಪ್ರಪಂಚದಲ್ಲಿ ಎಲ್ಲಾದರೂ ಕೇವಲ ಧರ್ಮಾಧಾರಿತವಾದ ಒಂದಾದರೂ ದೇಶವಿದೆಯೇ? ಹಾಗಾಗಿದ್ದರೆ ಯುರೋಪಿನಲ್ಲಿ ಕ್ರೆೈಸ್ತ ಧರ್ಮಾಧಾರಿತ ಒಂದೇ ಒಂದು ದೇಶವಿರುತ್ತಿತ್ತು; ಅರಬ್ ರಾಷ್ಟ್ರದಲ್ಲ್ಲಿ ಇಸ್ಲಾಂ ಆಧಾರಿತ ಒಂದೇ ದೇಶವಿರುತ್ತಿತ್ತು ಅಥವಾ ಇಡೀ ಅಮೇರಿಕ ಖಂಡ ಒಂದೇ ದೇಶವಾಗುತ್ತಿತ್ತು. ಆದ್ದರಿಂದ, ಪ್ರಾಚೀನ ಕಾಲದಲ್ಲೂ ಭಾರತದಲ್ಲಿ ಧರ್ಮಧಾರಿತವಾದ ದೇಶದ ಪರಿಕಲ್ಪನೆ ಇತ್ತು ಎನ್ನುವುದು ಹಸಿಸುಳ್ಳನ್ನು ಪ್ರಚಾರ ಮಾಡುವ ಭಯಾನಕ ಕೆಲಸ.
ಈಗ ಹಿಂದೂ ರಾಷ್ಟ್ರೀಯತೆಯ ಪರಿಕಲ್ಪನೆಯು ಎಲ್ಲಿಂದ ಹುಟ್ಟಿತು ಎನ್ನುವ ಪ್ರಶ್ನೆಗೆ ಬರೋಣ. 1923 ರಲ್ಲಿ ‘ಹಿಂದುತ್ವದ ಮೂಲ ಪಾಠಗಳು’ ಕೃತಿಯನ್ನು ‘ಮರಾಠ’ ಎನ್ನುವ ಹುಸಿ ನಾಮಧೇಯದಲ್ಲಿ ಬರೆದ ಸಾವರ್ಕರ್, ಹಿಂದುತ್ವ ಅಥವಾ ಹಿಂದೂ ರಾಷ್ಟ್ರೀಯತೆಯ ಬಗ್ಗೆ ಒಂದು ರೂಪುರೇಷೆಯನ್ನು ಕೊಟ್ಟರು. ನಂತರ 1937ರಲ್ಲಿ ಅಹಮದಾಬಾದ್ನಲ್ಲಿ ನಡೆದ ಹಿಂದೂ ಮಹಾಸಭಾದ 19ನೇ ಅಧಿವೇಶನವನ್ನು ಉದ್ದೇಶಿಸಿ, “ಭಾರತದಲ್ಲಿ ಎರಡು ವಿರೋಧಿ ರಾಷ್ಟ್ರಗಳು ಅಕ್ಕಪಕ್ಕದಲ್ಲಿವೆ. ಭಾರತವು ಈಗಾಗಲೇ ಸಾಮರಸ್ಯದ ರಾಷ್ಟ್ರವಾಗಿ ಬೆಸೆದಿದೆ ಅಥವಾ ಹಾಗಾಗಬೇಕೆಂದು ಬಯಸುವುದರಿಂದಲೇ ಬೆಸೆಯಬಹುದು ಎಂದು ಭಾವಿಸುತ್ತಾ ಹಲವಾರು ಬಾಲಿಶ ರಾಜಕಾರಣಿಗಳು ಗಂಭೀರ ತಪ್ಪುಗಳನ್ನು ಮಾಡುತ್ತಿದ್ದಾರೆ… ಭಾರತವನ್ನು ಇಂದು ಏಕೀಕೃತವಾದ ಮತ್ತು ಏಕರೂಪದ ರಾಷ್ಟ್ರವಾಗಿ ಭಾವಿಸುವುದು ಅಸಾಧ್ಯ. ಅದಕ್ಕೆ ತದ್ವಿರುದ್ಧವಾಗಿ, ಭಾರತದಲ್ಲಿ ಪ್ರಧಾನವಾಗಿ ಎರಡು ರಾಷ್ಟ್ರಗಳಿವೆ – ಒಂದು ಹಿಂದೂ ರಾಷ್ಟ್ರ ಮತ್ತು ಇನ್ನೊಂದು ಮುಸಲ್ಮಾನ ರಾಷ್ಟ್ರ” ಎಂದು ಅಬ್ಬರಿಸಿದ್ದರು.
ಹೀಗೆ, ಸಾವರ್ಕರ್ ಕೃತಿಯಲ್ಲಿ ಮೊದಲಿಗೆ ಪ್ರಸ್ತಾಪವಾದ ಎರಡು ರಾಷ್ಟ್ರಗಳ ತತ್ವವು 1937ರಲ್ಲಿ ಹಿಂದೂ ಮಹಾಸಭಾದ ಗೊತ್ತುವಳಿಯ ಮೂಲಕ ಅಂಗೀಕೃತವಾಯಿತು. 1939 ರ ಅಕ್ಟೋಬರ್ 9 ರಂದು ಬಾಂಬೆಯಲ್ಲಿ ಸಾವರ್ಕರ್ ಜೊತೆಯ ಭೇಟಿಯ ನಂತರ ಅಂದಿನ ಭಾರತದ ವೈಸ್ರಾಯ್ ಲಿನ್ಲಿತ್ಗೊ ಅಂದಿನ ಭಾರತದ ರಾಜ್ಯ ಕಾರ್ಯದರ್ಶಿ ಜೆಟ್ಲ್ಯಾಂಡ್ಗೆ ನೀಡಿದ ವರದಿಯಲ್ಲಿ, “ಅವರು (ಸಾವರ್ಕರ್) ಹೇಳಿದರು – ಈಗ ಪರಿಸ್ಥಿತಿ ಹೇಗಿದೆಯೆಂದರೆ, ಬ್ರಿಟನ್ನಿನ ಸರ್ಕಾರ ಹಿಂದೂಗಳನ್ನು ಒಲಿಸಿಕೊಂಡು ಅವರೊಡನೆಯೇ ಕಾರ್ಯ ನಿರ್ವಹಿಸಬೇಕಾಗುತ್ತದೆ. ಈಗ ನಮ್ಮಿಬ್ಬರ ಹಿತಾಸಕ್ತಿಗಳು ಒಂದೇ ಆಗಿದ್ದು ನಾವು ಜೊತೆಗೂಡಬೇಕಾಗಿರುವುದು ಅತ್ಯವಶ್ಯಕ… ನಮ್ಮ ಹಿತಾಸಕ್ತಿಗಳು ಎಷ್ಟು ನಿಕಟವಾಗಿ ಬೆಸೆದಿವೆ ಎಂದರೆ, ಹಿಂದುತ್ವಕ್ಕೆ ಮತ್ತು ಗ್ರೇಟ್ ಬ್ರಿಟನ್ಗೆ ಪರಸ್ಪರ ಸ್ನೇಹಿತರಾಗಿರುವುದು ಅತ್ಯಗತ್ಯ ಮತ್ತು ಹಳೆಯ ವೈರತ್ವವು ಇನ್ನು ಮುಂದೆ ಅಗತ್ಯವಿಲ್ಲ” ಎಂದು ಬರೆದಿದ್ದರು. (ದಿ ವೀಕ್, 24.01.16)
ಮೂರು ವರ್ಷಗಳ ನಂತರ, ಜಿನ್ನಾ ನಾಯಕತ್ವದ ಆಲ್ ಇಂಡಿಯಾ ಮುಸ್ಲಿಂ ಲೀಗ್ ಅದೇ ಪರಿಕಲ್ಪನೆಯನ್ನು ತನ್ನ ಲಾಹೋರ್ ಅಧಿವೇಶನದಲ್ಲಿ ಅಳವಡಿಸಿಕೊಂಡಿತು. ಸಾವರ್ಕರ್, 1943ರ ಆಗಸ್ಟ್ 15ರಂದು ನಾಗಪುರದಲ್ಲಿ “ನನಗೆ ಜಿನ್ನಾ ಜೊತೆ ಎರಡು ರಾಷ್ಟ್ರ ತತ್ವದ ಬಗ್ಗೆ ಯಾವುದೇ ತಕರಾರಿಲ್ಲ. ನಾವು ಹಿಂದೂಗಳು ಸ್ವತಃ ನಾವೇ ಒಂದು ದೇಶ ಮತ್ತು ಹಿಂದೂ ಹಾಗೂ ಮುಸ್ಲಿಮರು ಎರಡು ದೇಶಗಳೆನ್ನುವುದು ಚಾರಿತ್ರಿಕ ಸಂಗತಿ” ಎಂದಿದ್ದರು. ಹೀಗೆ ಸಾವರ್ಕರ್ ಹಿಂದೂ ಕೋಮುವಾದವನ್ನು ನ್ಯಾಯಸಮ್ಮತವೆಂದು ಮತ್ತು ಹಿಂದೂ ಪ್ರತ್ಯೇಕತೆಯನ್ನು ರಾಷ್ಟ್ರವಾದಿ ಎಂದೂ ಸಮರ್ಥಿಸಿಕೊಂಡರು ಮತ್ತು ನಮ್ಮ ದೇಶದ ವಿಭಜನೆಗೆ ಬುನಾದಿಯಾದ ಎರಡು ರಾಷ್ಟ್ರಗಳ ತತ್ವವನ್ನು ಬೆಂಬಲಿಸಿದರು. ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ (ಹಿಂದೂ ಧಾರ್ಮಿಕ ರಾಷ್ಟ್ರವನ್ನಾಗಿ) ಪರಿವರ್ತಿಸುವ ಹಿಂದೂ ಮಹಾಸಭಾದ ಅಭಿಪ್ರಾಯವನ್ನು ಗೋಲ್ವಾಲ್ಕರ್ ಅನುಮೋದಿಸಿದರು. “ಸ್ವತಃ ಹಿಂದೂಗಳೇ ಒಂದು ರಾಷ್ಟ್ರ ಅಥವಾ ರಾಷ್ಟ್ರೀಯತೆ… ಹಿಂದೂಗಳು ಒಂದು ರಾಷ್ಟ್ರವೆನ್ನುವ ಪ್ರತಿಪಾದನೆಯನ್ನು ವಿವೇಕವುಳ್ಳ ಯಾವ ವ್ಯಕ್ತಿಯನ್ನು ಪ್ರಶ್ನಿಸುವುದಿಲ್ಲ… ನಮ್ಮ ರಾಷ್ಟ್ರ ಎಂದರೆ ಮತ್ತು ಇದರ ಹೊರತಾಗಿಯೂ ಬಹುಸಂಖ್ಯಾತರು ಎನ್ನುವ ಪ್ರಶ್ನೆಗೂ ಯಾವಾಗಲೂ ಹಿಂದೂ ರಾಷ್ಟ್ರವೆಂದೇ ಅರ್ಥ ಮತ್ತು ಬೇರೇನೂ ಅಲ್ಲ.” (ನಾವು ಅಥವಾ ನಮ್ಮ ರಾಷ್ಟ್ರೀಯತೆಯ ವ್ಯಾಖ್ಯಾನ)
ಈ ತಿಳುವಳಿಕೆಯು ಚಾರಿತ್ರಿಕವಾಗಿ ಸಾಬೀತಾಗಿರುವ ಸತ್ಯವೇ? ಅವಲೋಕಿಸೋಣ. ಈ ಯುಗದ ಮಹಾನ್ ಮಾರ್ಕ್ಸ್ವಾದಿ ಚಿಂತಕರಾದ ಕಾಮ್ರೇಡ್ ಶಿವದಾಸ್ ಘೋಷ್, “ಬರ್ಮಾ ಜನರಲ್ಲಿ ಮುಸ್ಲಿಮರು ಗಣನೀಯ ಸಂಖ್ಯೆಯಲ್ಲಿದ್ದರೂ ಕೂಡ, ಬರ್ಮಾ ಜನರು ಒಂದು ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯವಾಯಿತು ಎನ್ನುವುದನ್ನು ನಾವು ಮರೆಯಲು ಸಾಧ್ಯವೇ? ಬಹಳ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮರಿದ್ದರೂ ಕೂಡ ಇಂಡೋನೇಷಿಯಾದ ಜನರೂ ಕೂಡ ಒಂದು ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯವಾಗಿದೆ. ಚೀನಾ ಮತ್ತು ಸೋವಿಯತ್ ಒಕ್ಕೂಟದಲ್ಲಿ ಮುಸ್ಲಿಮರ ಸಂಖ್ಯೆ ಕಡಿಮೆ ಪ್ರಮಾಣದಲ್ಲೇನೂ ಇಲ್ಲ. ಹಾಗಿದ್ದರೂ ಕೂಡ ಚೀನಿಯರು ಮತ್ತು ಸೋವಿಯತ್ ಜನತೆ ಏಕರೂಪದ ರಾಷ್ಟ್ರವಾಗಿ ಹೊರಹೊಮ್ಮಿದ್ದಾರೆ. …ವಿಭಜನೆಗೂ ಮುನ್ನ ಭಾರತದಲ್ಲಿ ಪ್ರತ್ಯೇಕ ರಾಷ್ಟ್ರಕ್ಕಾಗಿ ಆಗ್ರಹಿಸಿದಂತೆ ಈ ಯಾವ ದೇಶದಲ್ಲೂ ಮುಸ್ಲಿಮರು ಪ್ರತ್ಯೇಕ ರಾಷ್ಟ್ರವನ್ನು ಕೇಳಿಲ್ಲ ಅಥವಾ ಕೇಳುತ್ತಿಲ್ಲ. ನಮ್ಮ ದೇಶದಲ್ಲಾದಂತೆ ಈ ಯಾವ ದೇಶಕ್ಕೂ ಮುಸಲ್ಮಾನ ಮತ್ತು ಮುಸಲ್ಮಾನೇತರ ಜನಸಂಖ್ಯೆಯ ಆಧಾರದ ಮೇಲೆ ವಿಭಜನೆಯಾಗುವ ದುರದೃಷ್ಟ ಬರಲಿಲ್ಲ” ಎಂದು ವಿವರಿಸಿದ್ದಾರೆ.(ಕೋಮು ಸಮಸ್ಯೆಯ ಕುರಿತು)
ಸಾವರ್ಕರ್ ದೇಶಪ್ರೇಮ ಎಂಥದ್ದು!
ಸಾವರ್ಕರ್, ನೇತಾಜಿ, ಭಗತ್ ಸಿಂಗ್ ಅಥವಾ ಗಾಂಧೀಜಿ ಇವರೆಲ್ಲರಿಗಿಂತ ಎತ್ತರದವರು ಎಂದು ಬಿಂಬಿಸುವ ಒಂದು ಪಟ್ಟಭದ್ರ ಗುಂಪಿನ ಪ್ರಯತ್ನವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, ಸಾವರ್ಕರ್ ಪರಿಕಲ್ಪನೆಯ ದೇಶಪ್ರೇಮ ಹಾಗೂ ರಾಷ್ಟ್ರವಾದದ ಗುಣಲಕ್ಷಣವನ್ನು ಚರ್ಚಿಸುವ ಅನಿವಾರ್ಯತೆ ಬಂದಿದೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದರಿಂದ ಅಂಡಮಾನ್ ಜೈಲಿನಲ್ಲಿ ‘ಕಾಲಾಪಾನಿ’ ಶಿಕ್ಷೆಗೊಳಗಾಗಿದ್ದ ಸಾವರ್ಕರ್ ಸ್ವಾತಂತ್ರö್ಯ ಚಳುವಳಿಯನ್ನು ಬೆಂಬಲಿಸುವುದರಿಂದ ತಮ್ಮ ಬಿಡುಗಡೆಯಾಗುವುದಿಲ್ಲ ಎನ್ನುವುದನ್ನು ಬಹಳ ಬೇಗನೆ ಕಂಡುಕೊಂಡರು. ಅದರ ಬದಲಿಗೆ, ತಾನು ಬ್ರಿಟಿಷ್ ಸಾಮ್ರಾಜ್ಯಶಾಹಿ ಆಳ್ವಿಕರಿಗೆÀ ಬದ್ಧನಾಗಿ, ಹಿಂದುತ್ವದ ವಿಚಿತ್ರ ತತ್ವವನ್ನು ಅಳವಡಿಸಿಕೊಂಡು, ಪ್ರತಿಗಾಮಿ ಸಾಮ್ರಾಜ್ಯಶಾಹಿ-ಬಂಡವಾಳಶಾಹಿಗಳ ಸೇವಕನಾಗುವುದೇ ಅವರಿಗೆ ಉತ್ತಮವೆನಿಸಿತು. ಆದ್ದರಿಂದ, ಅವರು ಕ್ಷಮಾಯಾಚನೆಯನ್ನು ಕೋರಿ, ಬಿಡುಗಡೆಗೆ ಅಂಗಲಾಚಿ ಬ್ರಿಟಿಷ್ ಸರ್ಕಾರಕ್ಕೆ ಒಂದಾದ ಮೇಲೊಂದು ದಯಾಭಿಕ್ಷೆಯ ಪತ್ರಗಳನ್ನು ಬರೆದರು. ಅವರು, ತಾನು ಬ್ರಿಟಿಷ್ ಸರ್ಕಾರಕ್ಕೆ ನಿಷ್ಠನಾಗಿರುವ ಭರವಸೆ ನೀಡಿದ್ದಲ್ಲದೆ, ಇದು ಒಂದೊಮ್ಮೆ ತಮ್ಮನ್ನು ಮಾರ್ಗದರ್ಶಕನೆಂದು ಪರಿಗಣಿಸುತ್ತಿದ್ದ ದೇಶ, ವಿದೇಶಗಳಲ್ಲಿನ ದಾರಿತಪ್ಪಿದ ಭಾರತೀಯ ಯುವಕರನ್ನೆಲ್ಲ ವಾಪಸ್ ಕರೆತರುತ್ತದೆ ಸರ್ಕಾರದ ಇಚ್ಛೆಯಂತೆ ತಾನು ಅದರ ಸೇವೆಗೆ ಸಿದ್ಧವಾಗಿದ್ದು, ತನ್ನಲ್ಲಿನ ಈ ಬದಲಾವಣೆ ಪ್ರಜ್ಞಾಪೂರ್ವಕವಾಗೇ ಇದ್ದ ಕಾರಣ ಇನ್ನು ಮುಂದೆಯೂ ಅದು ಹಾಗೆಯೇ ಇರುವ ಭರವಸೆಯನ್ನೂ ಅವರು ನೀಡಿದ್ದರು. (ಅಂಡಮಾನ್ನಲ್ಲಿ ದಂಡನೆಯ ಒಪ್ಪಂದಗಳು, ಆರ್.ಸಿ.ಮಂಜುಂದಾರ್, ಭಾರತ ಸರ್ಕಾರದ ಸಂಸ್ಕೃತಿ ಇಲಾಖೆಯಿಂದ ಪ್ರಕಟಿತ, 1974)
ಅಂಡಮಾನ್ ಜೈಲಿನಿಂದ ಬಿಡುಗಡೆಯಾದ ನಂತರ, “ಈಗ ನಮ್ಮ ನೆಲವನ್ನು ತಲುಪಿರುವ ಯುದ್ಧವು(ಎರಡನೇ ವಿಶ್ವಯುದ್ಧ) ಏಕಕಾಲದಲ್ಲಿ ಅಪಾಯ ಮತ್ತು ಅವಕಾಶಗಳನ್ನು ಒಳಗೊಂಡಿದೆ. ಹಾಗಾಗಿ ಮಿಲಿಟರೀಕರಣವನ್ನು ತೀವ್ರಗೊಳಿಸಬೇಕು ಮತ್ತು ಸೇನೆ, ನೌಕಾಪಡೆ, ವಾಯುಪಡೆಗಳಿಗೆ ಮತ್ತು ವಿಭಿನ್ನ ಯುದ್ಧ ಸಾಮಗ್ರಿಗಳ ತಯಾರಿಕಾ ಘಟಕಗಳನ್ನು ಹಿಂದೂಗಳು ಸೇರಿಕೊಳ್ಳುವಂತೆ ಹುರಿದುಂಬಿಸಲು ಹಿಂದೂ ಮಹಾಸಭಾದ ಪ್ರತಿಯೊಂದು ನಗರ ಮತ್ತು ಹಳ್ಳಿಯಲ್ಲಿರುವ ಎಲ್ಲಾ ಶಾಖೆಗಳು ಸಕ್ರಿಯವಾಗಿ ತೊಡಗಿಕೊಳ್ಳಬೇಕು…” ಆದ್ದರಿಂದ, ಎಲ್ಲಾ ಬಗೆಯ ಮಿಲಿಟರಿ ಪಡೆಗೆ ಸೇರಿಕೊಳ್ಳಲು ಹಿಂದೂಗಳನ್ನು, ಅದರಲ್ಲೂ ಮುಖ್ಯವಾಗಿ ಬಂಗಾಳ ಮತ್ತು ಅಸ್ಸಾಂ ಪ್ರಾಂತ್ಯಗಳ ಹಿಂದೂಗಳನ್ನು ಎಷ್ಟು ಸಾಧ್ಯವೊ ಅಷ್ಟು ಪರಿಣಾಮಕಾರಿಯಾಗಿ ನಾವು ಬಡಿದೆಬ್ಬಿಸಬೇಕು” ಎಂದು ಬರೆದರು. (ಮೇಲಿನದೇ ಪುಸ್ತಕ, ಪುಟ: 460–61)
ಆನಂತರ, ತಮ್ಮ ಹಿಂದೂ ರಾಷ್ಟ್ರದ ಪರಿಕಲ್ಪನೆಯ ಸಾರಾಂಶವನ್ನು ವಿವರಿಸುತ್ತಾ ಗೋಲ್ವಾಲ್ಕರ್, “ಭಾರತದಲ್ಲಿರುವ ವಿದೇಶಿ ಜನಾಂಗಗಳು ಹಿಂದೂರಾಷ್ಟ್ರದ ವೈಭವೀಕರಣವನ್ನು ಬಿಟ್ಟರೆ ಬೇರೆ ಯಾವ ವಿಚಾರವನ್ನು ಪ್ರೋತ್ಸಾಹಿಸಬಾರದು ಮತ್ತು ತಮ್ಮ ಪ್ರತ್ಯೇಕ ಅಸ್ತಿತ್ವವನ್ನು ಕಳೆದುಕೊಳ್ಳಬೇಕು ಅಥವಾ ಯಾವುದೇ ಹಕ್ಕುಗಳನ್ನು, ನಾಗರೀಕ ಹಕ್ಕುಗಳನ್ನೂ ಸಹ ಕೇಳದೆ ಹಿಂದೂರಾಷ್ಟ್ರಕ್ಕೆ ಸಂಪೂರ್ಣವಾಗಿ ಅಧೀನವಾಗಿದ್ದುಕೊಂಡು ದೇಶದಲ್ಲಿರಬಹುದು” ಎಂದು ಹೇಳಿದರು.(ನಾವು ಅಥವಾ ನಮ್ಮ ರಾಷ್ಟ್ರೀಯತೆಯ ವ್ಯಾಖ್ಯಾನ) ಇವರ ಆಲೋಚನೆಯು ನಾಜಿ಼ ಮುಖಂಡ ಹಿಟ್ಲರ್ನಿಗೆ ಬಹಳ ಹತ್ತಿರವಾಗಿಯೇ ಇದೆ, ಹಾಗಾಗಿಯೇ “ತನ್ನ ಜನಾಂಗ ಮತ್ತು ತನ್ನ ಸಂಸ್ಕೃತಿಯನ್ನು ಪರಿಶುದ್ಧವಾಗಿರಿಸಿಕೊಳ್ಳಲು ಜರ್ಮನಿಯು ಇಡೀ ದೇಶವನ್ನು ಶುದ್ಧೀಕರಣ ಮಾಡಿ ಪ್ರಪಂಚಕ್ಕೆ ಆಘಾತ ನೀಡಿದೆ… ಜನಾಂಗದ ಗರ್ವ ಉತ್ತುಂಗದಲ್ಲಿದೆ… ಇದರಿಂದ ಹಿಂದೂಸ್ಥಾನವು ಪಾಠ ಕಲಿತು ಲಾಭ ಪಡೆಯಬಹುದು ಎಂದು ಗೋಲ್ವಾಲ್ಕರ್ ಹೇಳಿದ್ದರು.. (ಅದೇ ಪುಸ್ತಕದಿಂದ) ಸಾವರ್ಕರ್ರಂತೆ ಹೆಗ್ಡೆವಾರ್ ಕೂಡ ಬ್ರಿಟಿಷರಿಗೆ ವಿಧೇಯರಾಗಿದ್ದು ಹೇಳಿದರು, “ಹಿಂದೂಸ್ಥಾನವು ಹಿಂದುಗಳ ರಾಜ್ಯ. ನಾವು ಹಿಂದೂಗಳ ರಾಜ್ಯವನ್ನು ಸಂಘಟಿಸುತ್ತೇವೆ.” ಇದನ್ನೆಲ್ಲ ನೋಡಿದಾಗ ಬರುವ ಪ್ರಶ್ನೆಯೆಂದರೆ, ಆರ್ಎಸ್ಎಸ್, ಬಿಜೆಪಿ, ಸಂಘ ಪರಿವಾರಕ್ಕೆ ತಾವು ರಾಷ್ಟ್ರವಾದ ಮತ್ತು ದೇಶಪ್ರೇಮದ ಏಕೈಕ ಉತ್ತರಾಧಿಕಾರಿಗಳು ಎಂದು ಮತ್ತು ದೇಶದ ಸ್ವಾತಂತ್ರö್ಯವನ್ನು ಹೆಮ್ಮೆಯಿಂದ ಆಚರಿಸುತ್ತೇವೆ ಎಂದು ಗರ್ವದಿಂದ ಹೇಳಿಕೊಳ್ಳಲು, ಹಾಗೆಯೇ ಬೇರೆಯವರನ್ನು ದೇಶದ ವಿಭಜನೆಗೆ ಕಾರಣರೆಂದು ಆರೋಪಿಸಲು ಯಾವ ನೈತಿಕ ಹಕ್ಕಿದೆೆ?
ಕೊನೆ ಮಾತುಗಳು
ಈ ವಿಷಯಕ್ಕೆ ಸುತ್ತುವರಿದಂತೆ ಕಾಮ್ರೇಡ್ ಶಿವದಾಸ್ ಘೋಷರ ಅದ್ಭುತ ವಿಶ್ಲೇಷಣೆಯನ್ನು ನೆನಪಿಸಿಕೊಳ್ಳುವುದು ಬಹಳ ಸೂಕ್ತ: “…ಬೇರೆಲ್ಲಾ ವಸಾಹತುಗಳ ಬೂರ್ಜ್ವಾಸಿಗಳಿಗೆ ಇದ್ದಂತೆಯೇ ಭಾರತದ ಬೂರ್ಜ್ವಾಸಿಗೂ ಸಾಮ್ರಾಜ್ಯವಾದದ ವಿರುದ್ಧ ಜನ ಹೋರಾಟದ ಬಗ್ಗೆ ಜೀವಭಯವಿತ್ತು. ಏಕೆಂದರೆ ರಾಷ್ಟ್ರೀಯ ಸ್ವಾತಂತ್ರ್ಯಕ್ಕಾಗಿ ಭಾರತೀಯರು ನಡೆಸುತ್ತಿರುವ ಕ್ರಾಂತಿಕಾರಿ ಹೋರಾಟವು ಒಂದು ವೇಳೆ ಯಶಸ್ವಿಯಾದರೆ, ಅದು ನಮ್ಮ ದೇಶದಲ್ಲಿ ಸಾಮ್ರಾಜ್ಯಶಾಹಿ ಆಳ್ವಿಕೆಯನ್ನು ಕೊನೆಗಾಣಿಸುವುದಷ್ಟೇ ಅಲ್ಲದೆ, ರಾಷ್ಟ್ರೀಯ ಬೂರ್ಜ್ವಾಸಿಯನ್ನು ಹೋರಾಟದ ನಾಯಕತ್ವದಿಂದ ತೆಗೆದು ಹಾಕುತ್ತದೆ; ಬಂಡವಾಳಶಾಹಿಯೇತರ ಅಭಿವೃದ್ಧಿಯ ವಿಧಾನದ ಮಾರ್ಗವನ್ನು ತೆರೆಯುತ್ತದೆ ಮತ್ತು ಭಾರತದಲ್ಲಿ ಬಂಡವಾಳಶಾಹಿ ಆಳ್ವಿಕೆಯನ್ನು ಸ್ಥಾಪಿಸುವ ಎಲ್ಲಾ ಸಾಧ್ಯತೆಗಳನ್ನು ನುಚ್ಚು ನೂರಾಗಿಸುತ್ತದೆ ಎಂದವರು ಅರ್ಥ ಮಾಡಿಕೊಂಡಿದ್ದರು. ಒಂದು ಕಡೆ ಸಾಮ್ರಾಜ್ಯವಾದದ ಜೊತೆ ವಿರೋಧ, ಇನ್ನೊಂದು ಕಡೆ, ಜನರ ಕ್ರಾಂತಿಕಾರಿ ಹೋರಾಟದ ಬಗ್ಗೆ ಜೀವಭಯ – ಇದು ಭಾರತೀಯ ಬೂರ್ಜ್ವಾಸಿಯ ರಾಷ್ಟ್ರವಾದಿ ವಿಭಾಗವು ಸಾಮ್ರಾಜ್ಯವಾದದ ವಿರುದ್ಧ ಸುಧಾರಣಾವಾದಿ ವಿರೋಧಾತ್ಮಕ ಪಾತ್ರ ವಹಿಸುವಂತೆ ಮಾಡಿತು. ಅದರ ಜಮೀನ್ದಾರಿ ಪದ್ಧತಿಯ ವಿರುದ್ಧದ ಪಾತ್ರವೂ ಅಷ್ಟೇ ರಾಜಿಪರವಾಗಿತ್ತು. …ಸಾಮ್ರಾಜ್ಯವಾದದ ವಿರುದ್ಧ ರಾಜಕೀಯ ಚಳುವಳಿಯ ಪ್ರಕ್ರಿಯೆಯಲ್ಲಿ ವಿಭಿನ್ನ ಭಾಷೆಗಳಲ್ಲಿ ಮಾತನಾಡುವ ಮತ್ತು ವಿಭಿನ್ನ ಧರ್ಮಗಳನ್ನು ಪಾಲಿಸುವ ಭಾರತೀಯರು ರಾಜಕೀಯವಾಗಿ ಒಂದು ದೇಶವಾದರು; ಆದರೆ ಸಮಾಜದ ಪ್ರಜಾತಾಂತ್ರಿಕರಣಕ್ಕಾಗಿ ಜಮೀನ್ದಾರಿ ಪದ್ಧತಿ, ಜಮೀನ್ದಾರಿ ಅನೈಕ್ಯತೆ ಮತ್ತು ಧಾರ್ಮಿಕ ಬಂಧನಗಳ ವಿರುದ್ಧ ನಡೆಸಬೇಕಿದ್ದ ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ರಾಂತಿಗಳ ಕಾರ್ಯವನ್ನು ಪ್ರಧಾನವಾಗಿ ಪೂರ್ಣಗೊಳಿಸುವುದರಲ್ಲಿ ನಮ್ಮ ರಾಷ್ಟ್ರೀಯ ಸ್ವಾತಂತ್ರö್ಯ ಚಳುವಳಿಯ ನಾಯಕತ್ವದ ವೈಫಲ್ಯತೆಯಿಂದಾಗಿ, ಭಾರತೀಯರು ಧರ್ಮ, ಜಾತಿ, ಭಾಷೆ, ಜನಾಂಗ ಇತ್ಯಾದಿಗಳಿಂದ ಅನೈಕ್ಯಗೊಂಡು ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ವಿಭಿನ್ನ ಕೋಮುಗಳಾಗಿ ಒಡೆದು ಹೋದರು.” (ಕೋಮು ಸಮಸ್ಯೆಯ ಕುರಿತು)
ಹಾಗಾಗಿ ಸ್ವಾತಂತ್ರö್ಯ ಸಂಗ್ರಾಮದ ನ್ಯೂನತೆಯ ಅನುಕೂಲವನ್ನು ಪಡೆದುಕೊಂಡು, ದಮನಿತ ಜನರು ಅನೈಕ್ಯರಾಗಿ, ವಾಸ್ತವ ಸತ್ಯಗಳನ್ನು ಅರಿಯದವರಾಗಿ, ಧರ್ಮಾಂಧತೆ, ಅಂಧಾಭಿಮಾನ, ನಿಗೂಢವಾದ, ಮೂಢನಂಬಿಕೆಗಳ ಬಲೆಯಲ್ಲಿ ಸಿಲುಕಿರುವಂತೆ ಮಾಡುವ ಬಂಡವಾಳಶಾಹಿ ವರ್ಗದ ಯೋಜನೆಯನ್ನು ವಾಸ್ತವಕ್ಕಿಳಿಸಲು ಮತ್ತು ಅಧಿಕಾರಕ್ಕಾಗಿ ಆರ್ಎಸ್ಎಸ್-ಬಿಜೆಪಿ-ಸಂಘ ಪರಿವಾರಗಳು ಹಿಂದುತ್ವದ, ಹಿಂದೂರಾಷ್ಟ್ರದ ಚಾಂಪಿಯನ್ಗಳಾಗಿವೆ ಮತ್ತು ಮುಸ್ಲಿಮರ, ಹಾಗೆಯೇ ಕ್ರಿಶ್ಚಿಯನ್ನರ ವಿರುದ್ಧ ವಿಷ ಕಾರುತ್ತಿವೆ. ಆದ್ದರಿಂದ ಪ್ರಧಾನ ಮಂತ್ರಿ ಮೋದಿ ಅವರ ಮಾತುಗಳು, ಶಾಮ್ ಪ್ರಸಾದ್ ಮುಖರ್ಜಿ ಅವರನ್ನು ಹಾಡಿ ಹೊಗಳಿರುವುದು, ಸ್ವಾತಂತ್ರö್ಯ ದಿನಾಚರಣೆಯ ವೈಭವಯುತ ಆಚರಣೆ, ಎನ್ಸಿಇಆರ್ಟಿಯಿಂದ ಇತಿಹಾಸದ ತಿರುಚುವಿಕೆ ಮತ್ತು ನಮ್ಮ ದೇಶದ ಸ್ವಾತಂತ್ರö್ಯ ಸಂಗ್ರಾಮದ ಮೇರು ವ್ಯಕ್ತಿತ್ವಗಳೊಂದಿಗೆ ಸಾವರ್ಕರ್ನನ್ನು ಸಮೀಕರಿಸಿರುವುದು, ಇದೆಲ್ಲವೂ ತಮ್ಮ ನಿಜವಾದ ಉದ್ದೇಶವನ್ನು, ಅಂದರೆ ಅಸತ್ಯ, ದ್ವೇಷ, ಧಾರ್ಮಿಕ ವ್ಯಾಖ್ಯಾನಗಳಿಂದಲೇ ಬೆಳೆದು ಬಂದ ಮತ್ತು ದೇಶದ ಹಿತಾಸಕ್ತಿಗಳಿಗೆ ದ್ರೋಹವೆಸಗಿದ ಸಂಘಟನೆಗಳ ಇತಿಹಾಸದ ಮುಂದುವರಿಕೆಯಾಗಿರುವುದನ್ನು ಮರೆಮಾಚಿ ಜನರನ್ನು ತಪ್ಪುದಾರಿಗೆಳೆಯುವ ತಂತ್ರಗಳಷ್ಟೇ. ಆದರೆ ಕೆಲವು ಜನರು ಕೆಲವು ಕಾಲ ಕಟ್ಟುಕತೆಗಳನ್ನು ನಂಬಬಹುದು, ಆದರೆ ತಿಳುವಳಿಕೆಯುಳ್ಳ ಮನಸ್ಸುಗಳು ಅಂತಹ ಕಸವನ್ನು ಕಸದ ಬುಟ್ಟಿಗೆ ಹಾಕುತ್ತವೆ ಎನ್ನುವುದು ನಮಗೆ ಇತಿಹಾಸ ಕಲಿಸಿರುವ ಪಾಠ.