ಇಂದಿನ ವೃತ್ತಿ ಶಿಕ್ಷಣವು ಅಗ್ಗದ ಕಾರ್ಮಿಕರನ್ನು ಸೃಷ್ಟಿಸುತ್ತಿದೆ ಅಷ್ಟೇ!
ಕರ್ನಾಟಕದಲ್ಲಿ ತೆರೆಯಲಾಗುತ್ತಿರುವ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳಲ್ಲಿ 6ನೇ ತರಗತಿಯಿಂದಲೇ ವೃತ್ತಿಶಿಕ್ಷಣವನ್ನು (Vocational Education) ಪರಿಚಯಿಸುತ್ತಿರುವುದು ಅತ್ಯಂತ ಅಪಾಯಕಾರಿ ಸಂಗತಿಯಾಗಿದೆ. ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣ ಹಾಗೂ ಕಾರ್ಪೊರೇಟೀಕರಣದ ನೀಲಿನಕ್ಷೆಯಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ) – 2020ನ್ನು ರಾಜ್ಯ ಸರ್ಕಾರವು ಹಿಂಪಡೆದಿದ್ದರೂ, ಅದರ ಶಿಫಾರಸ್ಸಿನಂತೆಯೇ ಈ ಬೆಳವಣಿಗೆಯಾಗಿದೆ.
ಅಸಲಿಗೆ ವೃತ್ತಿಶಿಕ್ಷಣದ ವ್ಯಾಖ್ಯಾನ ಏನು?
‘ಬುನಾದಿ ಹಂತದ ರಾಷ್ಟ್ರೀಯ ಪಠ್ಯಕ್ರಮ’ದ ಚೌಕಟ್ಟಿನ(NCFFS) ಪ್ರಕಾರ: “ಬುನಾದಿ ಮತ್ತು ಪೂರ್ವಸಿದ್ಧತಾ ಹಂತಗಳಲ್ಲಿ, ಆಟ ಮತ್ತು ಇತರ ಚಟುವಟಿಕೆಗಳ ಮೂಲಕ ವಿವಿಧ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇವು ಮುಂದೆ ಉದ್ಯೋಗಗಳಲ್ಲಿ ಉಪಯುಕ್ತವಾಗುತ್ತವೆ. ಇವು ‘ಪೂರ್ವ-ವೃತ್ತಿಪರ ಸಾಮರ್ಥ್ಯಗಳು’. ಮಧ್ಯಮ ಹಂತದಲ್ಲಿ (Middle Stage), ವಿದ್ಯಾರ್ಥಿಗಳಿಗೆ ವ್ಯಾಪಕ ಶ್ರೇಣಿಯ ಕೆಲಸಗಳ ಬಗ್ಗೆ ಪರಿಚಯ ಮಾಡಿಕೊಡಲಾಗುತ್ತದೆ. ಆಗ ಅವರು ಮಾಧ್ಯಮಿಕ ಹಂತದಲ್ಲಿ ತಮ್ಮ ಆಯ್ಕೆಯ ವೃತ್ತಿಯಲ್ಲಿ ಕೌಶಲ್ಯಗಳನ್ನು ಪಡೆಯಲು ಮತ್ತು ಲಾಭದಾಯಕ ಉದ್ಯೋಗದತ್ತ ಸಾಗಲು ಸಹಾಯವಾಗುತ್ತದೆ.” [ಪುಟ 425]. ಅಲ್ಲದೆ, “ವಿದ್ಯಾರ್ಥಿಗಳು ಕೋಳಿ ಸಾಕಣೆ, ಡೈರಿ ಫಾರಂ, ಕೀಟ ನಿಯಂತ್ರಣ, ನರ್ಸರಿ, ಮೆಕ್ಯಾನಿಕ್ ವರ್ಕ್ಶಾಪ್ಗಳು, ಮರಗೆಲಸ, ಹೊಲಿಗೆ ಘಟಕಗಳು, ಹೋಟೆಲ್ ಮತ್ತು ರೆಸ್ಟೋರೆಂಟ್, ಆಸ್ಪತ್ರೆ, ಜಿಮ್, ವೃದ್ಧಾಶ್ರಮ, ಬ್ಯೂಟಿ ಸಲೂನ್ ಮುಂತಾದೆಡೆಗಳಲ್ಲಿ ‘ತತ್ಸಂಬಂಧಿತ ಇಂಟರ್ನ್ಶಿಪ್’ಗಳನ್ನು ಕೈಗೊಳ್ಳಬೇಕಾಗುತ್ತದೆ.” [ಪುಟ 432].
ಅಂದರೆ, ವಿವಿಧ ವಿಷಯಗಳ ಕುರಿತ ಜ್ಞಾನಭಂಡಾರಕ್ಕೆ ವಿದ್ಯಾರ್ಥಿಗಳ ಮನಸ್ಸನ್ನು ತೆರೆಯುವ ಬದಲು, ಅವರನ್ನು ‘ದುಡಿಮೆಗೆ ಸಿದ್ಧಪಡಿಸುವ’ (fit for job) ಕಡೆಗೆ ಒತ್ತು ನೀಡಲಾಗುತ್ತದೆ. ಆದರೆ, ಈ ‘ಉದ್ಯೋಗ ಆಧಾರಿತ ಶಿಕ್ಷಣ’ವು ಇಷ್ಟು ಆರಂಭಿಕ ಹಂತದಲ್ಲೇ ಏಕೆ? ಇಲ್ಲಿಯವರೆಗೆ, ವಿದ್ಯಾರ್ಥಿಗಳು ಕೇವಲ ಪದವಿಗಳನ್ನು ಪಡೆಯುತ್ತಿದ್ದರು, ಆದರೆ ಉದ್ಯೋಗಕ್ಕೆ ಬೇಕಾದ ಕೌಶಲ್ಯಗಳನ್ನು ಪಡೆಯುತ್ತಿರಲಿಲ್ಲ, ಆದ್ದರಿಂದಲೇ ಅವರು ನಿರುದ್ಯೋಗಿಗಳಾಗಿ ಉಳಿದಿದ್ದಾರೆ ಎಂಬುದು ಸರ್ಕಾರದ ಅಂಬೋಣ. ಆದರೆ, ಸತ್ಯ ಬೇರೆಯೇ ಇದೆ.
ಉದ್ಯೋಗದ ಮಾರುಕಟ್ಟೆಯ ಭೀಕರ ವಾಸ್ತವ
ಯುವಜನರು ನಿರುದ್ಯೋಗಿಗಳಾಗಿ ಉಳಿಯಲು ಕೇವಲ ಉದ್ಯೋಗ ಆಧಾರಿತ ಕೌಶಲ್ಯಗಳ ಕೊರತೆಯೇ ಕಾರಣವಾಗಿದ್ದಲ್ಲಿ, ITI,CTI, ಡಿಗ್ರಿ ಮತ್ತು ಡಿಪ್ಲೊಮಾ ಎಂಜಿನಿಯರಿಂಗ್ ಕಾಲೇಜುಗಳು ಹಾಗೂ ಇತರ ವೃತ್ತಿಪರ ಕೋರ್ಸ್ಗಳಿಂದ ಉತ್ತೀರ್ಣರಾದ ಕೋಟ್ಯಾಂತರ ಮಂದಿ ಏಕೆ ನಿರುದ್ಯೋಗಿಗಳಾಗಿ ಉಳಿಯುತ್ತಿದ್ದಾರೆ? ತಮ್ಮ ಸಾಂಪ್ರದಾಯಿಕ ಪದವಿಗಳ ಜೊತೆಜೊತೆಯಲ್ಲೇ ಹತ್ತು ಹಲವು ರೀತಿಯ ಕೋರ್ಸ್ಗಳನ್ನು ಮಾಡಿ ಸರ್ಟಿಫಿಕೇಟ್ಗಳನ್ನು ಪಡೆಯುವ ಯುವಜನರೂ ಸಹ ಭಾರತದಲ್ಲಿ ಉದ್ಯೋಗಗಳಿಗೆ ಪರದಾಡುತ್ತಿದ್ದಾರೆ ಏಕೆ? ಹುದ್ದೆಗಳಿಗಿಂತ ಹತ್ತಾರು, ಕೆಲವು ಬಾರಿ ನೂರಾರು ಪಟ್ಟು ಹೆಚ್ಚಿನ ಅರ್ಜಿದಾರರು ಇರಲು ಕಾರಣವೇನು? ಅವರಲ್ಲೆಲ್ಲಾ ಉದ್ಯಮಶೀಲತೆ, ಕಸಬುದಾರಿಕೆ – ಕೌಶಲ್ಯ, ದುಡಿಮೆಗಾರಿಕೆಯ ಕೊರತೆಗಳೇ ಕಾರಣವೇ? ಅಥವಾ ಇವು ನೆಪಗಳೇ? ಎಂಜಿನಿಯರಿಂಗ್ ಪದವೀಧರರಲ್ಲಿ ನಿರುದ್ಯೋಗ ದರವು ಶೇ. 48 ರಿಂದ ಶೇ. 83ಕ್ಕೆ ಏರಿದೆ. ‘ಅನ್ಸ್ಟಾಪ್’ (Unstop – ಒಂದು ಪ್ರಸಿದ್ಧ ಸಂಸ್ಥೆ) ನಡೆಸಿದ ಸಮೀಕ್ಷೆಯ ಪ್ರಕಾರ, ಶೇ. 50 ರಷ್ಟು MBA ಪದವೀಧರರು ಸಹ ನಿರುದ್ಯೋಗಿಗಳಾಗಿದ್ದಾರೆ. ಇಂತಹ ಉದಾಹರಣೆಗಳು ಸಾಕಷ್ಟಿವೆ. ವಿಚಿತ್ರವೆಂದರೆ, ಹಲವಾರು ದಶಕಗಳ ಹಿಂದಿನಿಂದ ಇದೇ ವ್ಯವಸ್ಥೆಯಿಂದ ಹಿಂದಿನ (ಕೆಲವು ಬಾರಿ ಹಳೆಯದು ಎನ್ನಲಾದ?) ಪಠ್ಯಕ್ರಮಗಳನ್ನು ಅಭ್ಯಸಿಸಿಕೊಂಡು ಬಂದಿದ್ದ ಕೋಟ್ಯಾಂತರ ಮಂದಿ ದೇಶದಲ್ಲೇ ಆಗಲಿ ಅಥವಾ ವಿದೇಶಗಳಲ್ಲೇ ಆಗಲಿ ಉತ್ತಮ ಸ್ಥಾನಗಳನ್ನು ಅಲಂಕರಿಸಿಲ್ಲವೇ, ದೇಶದ ಆರ್ಥಿಕತೆಯನ್ನು ಬೆಳೆಸಲಿಲ್ಲವೇ? ವಿಚಿತ್ರ ವಾದ ಸರಣಿ!
ಈ ರೀತಿಯಲ್ಲಿ ‘ವೃತ್ತಿಪರ ಶಿಕ್ಷಣ’ ಪಡೆದ ಮಕ್ಕಳು ‘ಸ್ವಾವಲಂಬಿ’ಗಳಾಗುತ್ತಾರಂತೆ ಮತ್ತು ಉದ್ಯೋಗ ಲಭಿಸದಿದ್ದರೆ ಅವರು ‘ಸ್ವಯಂ ಉದ್ಯೋಗ’ದ ಮೂಲಕ ಬದುಕನ್ನು ರೂಪಿಸಿಕೊಳ್ಳುತ್ತಾರಂತೆ. ಅಂದರೆ, ಆಗ ಸರ್ಕಾರವು ಉದ್ಯೋಗ ಒದಗಿಸುವ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸುಲಭವಾಗುತ್ತದೆ. ಭಾರತದಲ್ಲಿ ಉದ್ಯೋಗದ ಸನ್ನಿವೇಶವು ತೀವ್ರ ಬಿಕ್ಕಟ್ಟಿನಲ್ಲಿದೆ, ನಿಜ. ಅದು ಕೇವಲ ಕೌಶಲ್ಯಗಳ ಕೊರತೆಯಿಂದಲ್ಲ. ಅಸ್ತಿತ್ವದಲ್ಲಿರುವ ಬಂಡವಾಳಶಾಹಿ ವ್ಯವಸ್ಥೆಯ ತೀವ್ರ ಶೋಷಣೆಯಿಂದಾಗಿ, ಜನಸಾಮಾನ್ಯರ ಖರೀದಿಸುವ ಶಕ್ತಿಯು ಕುಸಿಯುತ್ತಿದೆ, ಇದರಿಂದಾಗಿ ಸರಕುಗಳ ಬೇಡಿಕೆ ಕುಸಿದಿದೆ ಮತ್ತು ಮಾರುಕಟ್ಟೆ ಸಂಕುಚಿತಗೊಂಡಿದೆ. ತತ್ಪರಿಣಾಮವಾಗಿ ಉತ್ಪಾದನೆ ಕಡಿಮೆಯಾಗುತ್ತಿದೆ, ಕೈಗಾರಿಕೆಗಳು ಒಂದರ ನಂತರ ಒಂದರಂತೆ ಮುಚ್ಚುತ್ತಿವೆ, ಕೋಟ್ಯಾಂತರ ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಜೊತೆಯಲ್ಲಿ, ಉತ್ಪಾದನಾ ವೆಚ್ಚವನ್ನು ಇನ್ನಷ್ಟು ಕುಗ್ಗಿಸಲು, ಶ್ರಮಶಕ್ತಿಯನ್ನು ಕಡಿಮೆ ಬಳಸುವ ಆಧುನಿಕ ತಾಂತ್ರಿಕತೆಯ ಬಳಕೆಯ ಮೂಲಕ ಬಂಡವಾಳ-ಪ್ರಧಾನ ಕೈಗಾರಿಕೆಗಳು ಮಾತ್ರ ಹೆಚ್ಚುಹೆಚ್ಚಾಗಿ ಇಂದು ಕಾರ್ಯನಿರ್ವಹಿಸುತ್ತಿವೆ. ಹಾಗಾಗಿಯೇ, ಯಾಂತ್ರೀಕರಣ (Automation) ಮತ್ತು ಕೃತಕ ಬುದ್ಧಿಮತ್ತೆಯ (AI) ಪ್ರಭಾವದಿಂದಾಗಿ ನಿರುದ್ಯೋಗದ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಇದರ ಜೊತೆಯಲ್ಲಿಯೇ, ಕೇಂದ್ರದಿಂದ ರಾಜ್ಯದವರೆಗೆ ಪ್ರತಿಯೊಂದು ಸರ್ಕಾರವೂ ನೇಮಕಾತಿಯ ಮೇಲೆ ಅಘೋಷಿತ ನಿಷೇಧ ಹೇರಿದೆ ಮತ್ತು ಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುವ ಪದ್ಧತಿ ಇದೆ. ಇನ್ನು ಸರ್ಕಾರಿ ವಲಯಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇರುವುದು ಕೌಶಲ್ಯವಿರದವರ ಕಾರಣಕ್ಕಾಗಿಯೇ?
ಹಿಂದೊಮ್ಮೆ ಅಮೇರಿಕದ ಶೈಕ್ಷಣಿಕ ಪಠ್ಯಕ್ರಮವನ್ನು ಗಮನಿಸಿ, ಪ್ರಖ್ಯಾತ ವಿಜ್ಞಾನಿ ಐನ್ಸ್ಟೆೈನ್, “ಒಬ್ಬ ವ್ಯಕ್ತಿಗೆ ಕೇವಲ ಒಂದು ವಿಶೇಷ ಕೌಶಲ್ಯವನ್ನು (speciality) ಕಲಿಸಿದರೆ ಸಾಲದು. ಅದರ ಮೂಲಕ ಅವನು ಒಂದು ರೀತಿಯ ಉಪಯುಕ್ತ ಯಂತ್ರವಾಗಬಹುದೇ ಹೊರತು, ಸಮತೋಲಿತ ವ್ಯಕ್ತಿತ್ವದ ಮನುಷ್ಯನಾಗಲಾರ. ವಿದ್ಯಾರ್ಥಿಯು ಮೌಲ್ಯಗಳ ಬಗ್ಗೆ ತಿಳುವಳಿಕೆ ಮತ್ತು ಸಜೀವ ಭಾವನೆಯನ್ನು ಪಡೆದುಕೊಳ್ಳುವುದು ಅತ್ಯಗತ್ಯ. ಅವನು ಸೌಂದರ್ಯ ಮತ್ತು ಒಳ್ಳೆಯ ಮೌಲ್ಯಗಳ ಕುರಿತು ಪ್ರಜ್ಞೆಯನ್ನು ಹೊಂದಿರಬೇಕು. ಇಲ್ಲದಿದ್ದರೆ, ಅವನು ತನ್ನ ವಿಶಿಷ್ಟ ಜ್ಞಾನದೊಂದಿಗೆ ಒಬ್ಬ ಸಮತೋಲಿತ ವ್ಯಕ್ತಿಗಿಂತ ಹೆಚ್ಚಾಗಿ ತರಬೇತಿ ಪಡೆದ ನಾಯಿಯಂತೆ ಆಗುತ್ತಾನೆ.” (Ideas and Opinions 154). ರವೀಂದ್ರನಾಥ ಟ್ಯಾಗೋರ್ ಅವರು ಶಿಕ್ಷಣದ ಉದ್ದೇಶವು ‘ಪರಿಪೂರ್ಣ ಮಾನವ’ನನ್ನು (whole man) ಸೃಷ್ಟಿಸುವುದಾಗಿದೆ ಎಂದು ನಂಬಿದ್ದರು.
ವೃತ್ತಿಶಿಕ್ಷಣವು ಕೆಲಸದ ತಾಂತ್ರಿಕ ಅಂಶಗಳನ್ನು ಮಾತ್ರ ಕಲಿಸುತ್ತದೆ. ಅದರಿಂದ, ವಿದ್ಯಾರ್ಥಿಯು ತಾರ್ಕಿಕ ಚಿಂತನಾ ಶಕ್ತಿಯನ್ನು ಗಳಿಸುವ ಬದಲು, ವೈಜ್ಞಾನಿಕ ಮನೋಭಾವವಿರದ ಕೇವಲ ಯಾಂತ್ರಿಕ ಮನಸ್ಥಿತಿಯನ್ನು ಗಳಿಸಲು ಸಾಧ್ಯ. ಶಾಲಾ ಬದುಕಿನ ಆರಂಭದಿಂದಲೇ ವಿದ್ಯಾರ್ಥಿಗಳು ಜೀವನ ಮತ್ತು ಪ್ರಕೃತಿಯ ಪ್ರತಿಯೊಂದು ಆಯಾಮವನ್ನು ಒಳಗೊಂಡ ಸಮಗ್ರ ಮೂಲಭೂತ ಶಿಕ್ಷಣದಿಂದ ದೂರವಾಗುವುದರಿಂದ, ಒಬ್ಬ ವ್ಯಕ್ತಿಯು ನಿರ್ದಿಷ್ಟ ಕೆಲಸಕ್ಕೆ ಸೀಮಿತವಾದ ಪರಿಣತಿ ಪಡೆದ ರೋಬೋಟ್ ಆಗುತ್ತಾನೆ. ಇಂತಹ ರೋಬೋಟ್ನಂತಹ ಮನಸ್ಥಿತಿಯು ಯಾವುದೇ ಅನ್ಯಾಯ ಅಥವಾ ಅಸತ್ಯದ ವಿರುದ್ಧ ಎಂದಿಗೂ ದನಿ ಎತ್ತುವುದಿಲ್ಲ, ಬದಲಾಗಿ ಕೇವಲ ಜೀವನೋಪಾಯಕ್ಕಾಗಿ ಮೇಲಿನವರ ಆದೇಶಗಳನ್ನು ಕುರುಡಾಗಿ ಪಾಲಿಸುವ ಗುಲಾಮಿ ಮನಸ್ಥಿತಿಯನ್ನು ಹೊಂದುತ್ತದೆ.
ಶಿಕ್ಷಣದ ವೃತ್ತಿಪರೀಕರಣವನ್ನು ವಿರೋಧಿಸಬೇಕು
ಕಾರ್ಪೊರೇಟ್ ಏಕಸ್ವಾಮ್ಯ ಉದ್ಯಮಗಳ ಒತ್ತಡದಿಂದಾಗಿ ಗುಡಿ ಕೈಗಾರಿಕೆ, ಅತಿಸಣ್ಣ ಮತ್ತು ಸಣ್ಣ ಕೈಗಾರಿಕೆಗಳು ಇಂದು ಸಾಲುಸಾಲಾಗಿ ಮುಚ್ಚುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ವೃತ್ತಿಶಿಕ್ಷಣ ಪಡೆದು ಹೊರಬರುವ ಬಡಗಿಗಳು, ಎಲೆಕ್ಟ್ರೀಷಿಯನ್ಗಳು, ಲೋಹದ ಕೆಲಸಗಾರರು ಮುಂತಾದವರ ಭವಿಷ್ಯವೇನು? ಈ ‘ವೃತ್ತಿಪರ ಶಿಕ್ಷಣ’ ಪಡೆದವರು ಅಂತಿಮವಾಗಿ ತಾವು ಪಡೆದ ಕೌಶಲ್ಯವನ್ನು ಅಗ್ಗದ ದರಕ್ಕೆ ಮಾರಿ ಕಡಿಮೆ ಕೂಲಿಗೆ ಕಾರ್ಮಿಕರಾಗಿ ತಮ್ಮನ್ನೇ ಮಾರಾಟ ಮಾಡಿಕೊಳ್ಳಬೇಕಾಗುತ್ತದೆ.
ವೃತ್ತಿಶಿಕ್ಷಣದ ಅಗತ್ಯವನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗುವುದಿಲ್ಲ. ಸ್ವಾತಂತ್ರ್ಯಾನಂತರ ದೇಶದಲ್ಲಿ ನಡೆದ ಕೈಗಾರಿಕೀಕರಣಕ್ಕೆ ಪೂರಕವಾಗಿ ಪಾಲಿಟೆಕ್ನಿಕ್ ಡಿಪ್ಲೊಮಾ ಕೋರ್ಸ್ಗಳು, ITI,CTI ಮತ್ತು ಇತರ ವೃತ್ತಿಪರ ಕೋರ್ಸ್ಗಳನ್ನು ಒಂದು ನಿರ್ದಿಷ್ಟ ಮಟ್ಟದ ಶಾಲಾ ಶಿಕ್ಷಣದ ನಂತರ (ಉದಾಹರಣೆಗೆ ಪ್ರೌಢಶಾಲೆಯ ನಂತರ) ಪಡೆಯಲು ಅವಕಾಶವಿತ್ತು. ಆದರೆ, ಇಂದು ಕೈಗಾರಿಕಾ ಸನ್ನಿವೇಶವು ಅತ್ಯಂತ ಕಠಿಣವಾಗಿದೆ. ಈ ಸಮಯದಲ್ಲಿ ವೃತ್ತಿಶಿಕ್ಷಣದ ಮೇಲೆ ಅತಿಯಾದ ಒತ್ತು ನೀಡುತ್ತಿರುವುದೇಕೆಂದರೆ, ವೃತ್ತಿಶಿಕ್ಷಣವು ತನ್ನಿಂದ ತಾನೇ ಉದ್ಯೋಗವನ್ನು ಸೃಷ್ಟಿಸುವುದಿಲ್ಲ ಎಂಬ ಕಟುಸತ್ಯವನ್ನು ಮರೆಮಾಚುವುದಕ್ಕಾಗಿದೆ. ವೃತ್ತಿಶಿಕ್ಷಣವು ಶಾಲಾ ಶಿಕ್ಷಣದ ನಂತರ, ನುರಿತ ಕೆಲಸಗಾರರನ್ನು ಕೆಲಸಕ್ಕೆ ನಿಯೋಜಿಸಲು ಸೂಕ್ತ ಅವಕಾಶಗಳು ಇರುವಂತೆ ಬೆಳೆಯಬೇಕು. ಇಲ್ಲದಿದ್ದರೆ, ಅದು ವೃತ್ತಿಶಿಕ್ಷಣದ ಹೆಸರಿನಲ್ಲಿ ಸಮುದಾಯದ ವಂಚನೆಯಾಗುತ್ತದೆ. ಶಾಲಾ ಶಿಕ್ಷಣವನ್ನು ನಾಶಪಡಿಸುವ ಈ ಕರಾಳ ವೃತ್ತಿಶಿಕ್ಷಣ ಯೋಜನೆಯನ್ನು ಪ್ರತಿಯೊಬ್ಬ ಪ್ರಜ್ಞಾವಂತ ವ್ಯಕ್ತಿಯೂ ವಿರೋಧಿಸಬೇಕು ಮತ್ತು ಇದರ ವಿರುದ್ಧ ಧ್ವನಿ ಎತ್ತಬೇಕು.