ಡಿ.16 ರಂದು ಕೊಲ್ಕತ್ತಾದಲ್ಲಿ ನಡೆದ ಬೃಹತ್ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಗಣ್ಯರು ಹಾಗೂ ಜನಸ್ತೋಮ
ಪಶ್ಚಿಮ ಬಂಗಾಳ : ಮಹಿಳೆಯ ಘನತೆ ಮತ್ತು ಗೌರವದ ರಕ್ಷಣೆಗಾಗಿ ‘ಪ್ರತಿಜ್ಞಾ ರ‍್ಯಾಲಿ’
ಮಹಿಳಾ ಸಮುದಾಯದ ಹಲವು ಗಣ್ಯರಿಂದ ಮನವಿ
ಡಿಸೆಂಬರ್ 9 (ರೋಕಿಯಾ ಸಖಾವತ್ ಹೊಸೇನ್‌ರ ಜನನ ಮತ್ತು ಮರಣ ವಾರ್ಷಿಕೋತ್ಸವ) ರಿಂದ ಡಿಸೆಂಬರ್ 16 (‘ನಿರ್ಭಯ’ ದಿನ) ರವರೆಗೆ ಪ್ರತಿಜ್ಞಾ ಸಪ್ತಾಹ
ಪಶ್ಚಿಮ ಬಂಗಾಳದ 12 ಗಣ್ಯ ಮಹಿಳೆಯರು ರಾಜ್ಯದ ಜನತೆಗೆ ಭಾವನಾತ್ಮಕ ಮನವಿಯನ್ನು ನೀಡಿದ್ದರು. ಅವರು ಮೈತ್ರೆಯೀ ಬರ್ದಾನ್ ರಾಯ್ (ಪ್ರಾಂಶುಪಾಲರು), ಶತರೂಪ ಸನ್ಯಾಲ್(ಸಿನಿಮಾ ತಯಾರಕರು), ಪ್ರೊ. ಡಾ:ನೂಪುರ್ ಬ್ಯಾನರ್ಜಿ, ಪ್ರೊ. ಸೀಮಾ ಚಕ್ರವರ್ತಿ(ಪ್ರಾಂಶುಪಾಲರು), ಪ್ರೊ. ಶಾಶ್ವತಿ ಘೋಷ್, ಅನಿತಾ ರಾಯ್(ಕ್ರೀಡಾಪಟು), ಕುಂತಲ ಘೋಷ್ ದಸ್ತಿದಾರ್(ಕ್ರೀಡಾಪಟು), ಕಲ್ಪನಾ ದತ್ತಾ(ಸಾಮಾಜಿಕ ಕಾರ್ಯಕರ್ತೆ), ದೇವಯಾನಿ ಸೇನ್‌ಗುಪ್ತ (ವಕೀಲರು), ಪ್ರೊ. ಶಾನ್‌ವಾಜ್ ನಬಿ, ಸಿಸ್ಟರ್ ಭಾರತಿ ಮುಖರ್ಜಿ, ಡಾ: ನಸರೀನ್ ಅಲಿ. ಅವರು ನೀಡಿದ ಕರೆಯ ಪೂರ್ಣ ಪಾಠ ಇಲ್ಲಿದೆ :
ಆತ್ಮೀಯರೇ,
ಎಲ್ಲೆಡೆ ವ್ಯಾಪಿಸಿರುವ ಕತ್ತಲೆ ನಮ್ಮನ್ನೂ ಆವರಿಸಿದೆ. ಮಾನವೀಯತೆ ಗಂಭೀರ ಅಪಾಯದಲ್ಲಿದೆ. ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ದೌರ್ಜನ್ಯಗಳು ಮತ್ತು ಮಾನವೀಯತೆಯ ಮೇಲಿನ ಅಗೌರವಗಳು ಸಾಮಾಜಿಕ ಜೀವನದ ಸಂರಚನೆಯನ್ನೇ ಕಿತ್ತು ಹಾಕುತ್ತಿವೆ.
ಸಾವಿರಾರು ವರ್ಷಗಳ ಶ್ರಮದಾಯಕ ಹೋರಾಟದ ಗತಿಯಲ್ಲಿ ಧಾರ್ಮಿಕ ಅಂಧಶ್ರದ್ಧೆ, ಮೂಢನಂಬಿಕೆ, ಧರ್ಮಾಂಧತೆ, ಅನ್ಯಾಯ ಮತ್ತು ದಬ್ಬಾಳಿಕೆಗಳ ವಿರುದ್ಧ ನವೋದಯವು ಜೀವನದ ಹೊಸ ಚಿಂತನೆಯನ್ನು ಜಾಗೃತಗೊಳಿಸಿತು, ಹೊಸ ಯುಗದ ಉದಯವನ್ನು ಘೋಷಿಸಿತು. ಸಮಾನತೆ-ಸೋದರತೆ-ಸ್ವಾತಂತ್ರ್ಯದ ಘೋಷಣೆಯು ಊಳಿಗಮಾನ್ಯ ಸಂಪ್ರದಾಯದ ಹಿಡಿತದಿಂದ ಮಹಿಳೆಯರ ವಿಮೋಚನೆಗೆ ದಾರಿದೀಪವಾಯಿತು. ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ, ಪ್ರಗತಿಯತ್ತ ಪ್ರತಿ ಹೆಜ್ಜೆಯಲ್ಲೂ, ಮಹಿಳೆಯರ ಪಾತ್ರವು ಹೆಚ್ಚು ಹೆಚ್ಚು ಜನಜನಿತವಾಯಿತು ಮತ್ತು ಮೆಚ್ಚುಗೆ ಪಡೆಯಿತು.
ಕ್ರಾಂತಿಕಾರಿ ಕವಿ ನಜ್ರುಲ್ ಇಸ್ಲಾಂ ಅವರ ಪದ್ಯವನ್ನು ಸ್ಮರಿಸುವುದಾದರೆ-
“ಜಗತ್ತಿನಲ್ಲಿ ಶ್ರೇಷ್ಠವಾದ ಎಲ್ಲದರ,
ಉಪಯುಕ್ತ ಮತ್ತು ಒಳ್ಳೆಯದು, ಎಲ್ಲಾ ಸೃಷ್ಟಿಗಳ,
ಅರ್ಧದಷ್ಟು ಮಹತ್ವವನ್ನು ಮಹಿಳೆಗೆ ಸಲ್ಲಿಸಬೇಕು,
ಪುರುಷನಿಗೆ ಅರ್ಧವನ್ನು ಮಾತ್ರ ಸಲ್ಲಿಕೆ ಮಾಡಬೇಕು.”
ಆದರೆ ಅಂತಹ ರಾಜಿರಹಿತವಾದ ಮಾನವತಾವಾದಿ ಚಿಂತನೆಗಳ ಆಳವಾದ ಕೃಷಿಯನ್ನು ನಮ್ಮ ದೇಶದಲ್ಲಿ ಮನ:ಪೂರ್ವಕವಾಗಿ ಮಾಡಲಾಗಿಲ್ಲ. ಮತ್ತು ಆ ಕಾಲದ ಅಗತ್ಯಕ್ಕೆ ಅನುಗುಣವಾಗಿರುವ ಉನ್ನತ ಸಿದ್ಧಾಂತವೂ ಜನರನ್ನು ಎಚ್ಚರಗೊಳಿಸಲಿಲ್ಲ ಸಹ. ಒಟ್ಟಾರೆಯಾಗಿ ಒಮ್ಮೆ ಜನರಲ್ಲಿ ಹೊಸ ಭರವಸೆಯ ಕಿರಣ ಬೆಳಗಿದ ಆಕಾಶವು ಈಗ ಬಿಕ್ಕಟ್ಟಿನ ಮೋಡಗಳಿಂದ ಮಬ್ಬಾಗಿದೆ. ಇಂದು ಪರಿಸ್ಥಿತಿ ಭಯಾನಕವಾಗಿದೆ. ಪುಟ್ಟ ಹೆಣ್ಣು ಮಗುವಿನಿಂದ ಹಿಡಿದು ವಯಸ್ಸಾದ ಮಹಿಳೆಯವರೆಗೆ ಅತ್ಯಾಚಾರಕ್ಕೊಳಗಾದ ಮಹಿಳೆಯರ ಆಕ್ರಂದನದಿಂದ ಆಕಾಶವು ಬೊಬ್ಬಿಡುತ್ತಿದೆ. ದೆಹಲಿ, ಹತ್ರಾಸ್, ಉನ್ನಾವೋ, ಬಂಟಲಾ, ಧಂತಲಾ, ಕಾಮ್ದುನಿ, ಕಥುವಾ, ಖಾಂಡ್ವಾ, ಬೆಂಗಳೂರು, ಪಾರ್ಕ್ ರಸ್ತೆ, ಆರ್ ಜಿ ಕರ್ ಆಸ್ಪತ್ರೆ, ಕಸ್ಬಾ ಕಾನೂನು ಕಾಲೇಜು – ಪಟ್ಟಿಗೆ ಅಂತ್ಯವಿಲ್ಲ, ಹೀಗೆ ಪ್ರತಿದಿನ, ಮಹಿಳೆಯರ ಮೇಲಿನ ಹಲವಾರು ಅಪರಾಧದ ಘಟನೆಗಳು ಇಡೀ ಸಮಾಜವನ್ನು ಕಲಕುತ್ತಿವೆ. ಮನೆ, ಶೈಕ್ಷಣಿಕ ಸಂಸ್ಥೆ, ಆಸ್ಪತ್ರೆ, ಕೆಲಸದ ಸ್ಥಳ, ಹೊಲ, ಮತ್ತು ರಸ್ತೆಗಳಲ್ಲಿ ಯಾವುದೇ ಸಮಯ-ಸ್ಥಳವನ್ನು ಲೆಕ್ಕಿಸದೆ ಅವ್ಯಾಹತವಾಗಿ ನಡೆಯುತ್ತಿರುವ ದೌರ್ಜನ್ಯಗಳು ಮಹಿಳೆಯರಲ್ಲಿ ಭಯದ ಮನೋಸ್ಥಿತಿ ಉಂಟುಮಾಡುತ್ತಿವೆ.
ಸುಚಿಂತಕರು ನ್ಯಾಯಕ್ಕಾಗಿ ತಮ್ಮ ಪ್ರತಿಭಟನೆಯ ಧ್ವನಿಯನ್ನು ಎತ್ತುತ್ತಿರುವಾಗ, ಸರ್ಕಾರದ ಪ್ರತಿಕ್ರಿಯೆಯು ಸಂಪೂರ್ಣವಾಗಿ ತಿರಸ್ಕಾರದಿಂದ ಕೂಡಿದೆ. ಆಡಳಿತ ವ್ಯವಸ್ಥೆಯು ಅಪರಾಧಿಗಳನ್ನು ರಕ್ಷಿಸಲು ಮಾತ್ರ ಕಾರ್ಯನಿರತವಾಗಿದೆ. ವಾಸ್ತವದಲ್ಲಿ, ಇಂತಹ ವಿಕೃತ ಪ್ರವೃತ್ತಿಗಳು ಸಮಾಜವನ್ನು, ವಿಶೇಷವಾಗಿ ಯುವಕರನ್ನು ಆವರಿಸಬೇಕೆಂದು ಆಳ್ವಿಕರು ಬಯಸುತ್ತಾರೆ. ಏಕೆಂದರೆ ಯುವಕರಲ್ಲಿ ಮಾನವೀಯತೆಯನ್ನು ಕಸಿದುಕೊಂಡು, ಅವರನ್ನು ಮೂಕರನ್ನಾಗಿ ಮಾಡಲು ಮತ್ತು ತಮ್ಮ ಆಜ್ಞೆಗಳಿಗೆ ಅಧೀನಗೊಳಿಸಲು ಹಾಗೂ ಸಮಾಜವನ್ನು ಮರಗಟ್ಟಿಸಲು ಅವರು ಬಯಸುತ್ತಾರೆ. ಆದರೆ ಅವರ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಸಹ, ಪ್ರತಿಭಟನೆ ಕಡಿಮೆಯಾಗುವುದಿಲ್ಲ, ಅದರ ಪ್ರಭಾವ ಸ್ವಲ್ಪ ಕಾಲದವರೆಗಾದರೂ ಇದ್ದೇ ಇರುತ್ತದೆ.
ಆದ್ದರಿಂದ ಕವಿಯೊಬ್ಬರು ಬರೆಯುತ್ತಾರೆ –
“ಕಾಣೆಯಾದ ಹುಡುಗಿಯೊಬ್ಬಳು ಕಾಡಿನಲ್ಲಿ ಪತ್ತೆಯಾಗಿದ್ದಾಳೆ,
ಸಂಪೂರ್ಣವಾಗಿ ಛಿದ್ರಗೊಂಡು ಜಜ್ಜಿಹೋಗಿದ್ದಾಳೆ,
ನಾನು ನ್ಯಾಯವನ್ನು ಅರಸುತ್ತಾ ಸ್ವರ್ಗದ ಬಾಗಿಲನ್ನು ದಿಟ್ಟಿಸಲೇ?
ಇಲ್ಲ, ನನಗೆ ಸಾಧ್ಯವಿಲ್ಲ.”
ದೆಹಲಿಯ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ‘ನಿರ್ಭಯಾ’ ಮೇಲಿನ ಅತ್ಯಾಚಾರ ಪ್ರಕರಣದಿಂದ ಹಿಡಿದು ಆರ್‌ಜಿ ಕರ್ ಕಾಲೇಜಿನ ಯುವ ವೈದ್ಯೆ ‘ಅಭಯಾ’ ದವರೆಗೆ, ದಶಕಗಳಿಂದ ಇಡೀ ದೇಶವು ಆಕ್ರೋಶದಿಂದ ಕುದಿಯುತ್ತಿದೆ. ಅದೀಗ ಭುಗಿಲೆದ್ದಿದೆ.
ಇಂತಹ ಮೃಗೀಯತೆಯ ವಿರುದ್ಧದ ಹೋರಾಟ, ಅದರಲ್ಲೂ ವಿಶೇಷವಾಗಿ ಮಹಿಳೆಯರ ಪ್ರತಿಭಟನೆ ಭುಗಿಲೆದ್ದಿದೆೆ. ಈ ಚಳುವಳಿಯು ಮಾನವೀಯತೆಯನ್ನು ರಕ್ಷಿಸುವ ಹೋರಾಟವಾಗಿದೆ – ಲಿಂಗಭೇದವನ್ನು ಲೆಕ್ಕಿಸದೆ ನಾವೆಲ್ಲರೂ ಈ ಹೋರಾಟದಲ್ಲಿ ಒಗ್ಗೂಡಿ ಬಲವಾಗಿ ನಿಲ್ಲುವ ಸಮಯ ಇದು. ಪ್ರತಿರೋಧದ ಜ್ವಾಲೆಯು ನಮ್ಮ ಸಮಾಜದ ಉದ್ದಗಲಕ್ಕೂ ಹರಡಬೇಕು. ಈ ಉದ್ದೇಶಕ್ಕಾಗಿ, ‘ಪ್ರತಿಜ್ಞಾ ರ್ಯಾಲಿಯು’ ಡಿಸೆಂಬರ್ 9 ರಿಂದ ಡಿಸೆಂಬರ್ 16 ರವರೆಗೆ, ಪಶ್ಚಿಮ ಬಂಗಾಳ ರಾಜ್ಯದ ಎಲ್ಲಾ ಜಿಲ್ಲೆ, ಹಳ್ಳಿಗಳು, ಪಟ್ಟಣಗಳು, ನಗರಗಳು, ಬಂದರುಗಳು ಮತ್ತು ಹೆದ್ದಾರಿಗಳಲ್ಲಿ ಸಂಚರಿಸುತ್ತದೆ. ಈ ರ್ಯಾಲಿಯು ಕೊಲ್ಕತ್ತಾದ ಐತಿಹಾಸಿಕ ಕಾಲೇಜು ಚೌಕದಲ್ಲಿರುವ ಭಾರತೀಯ ನವೋದಯದ ನೇತಾರ ಮತ್ತು ಮಹಿಳಾ ಹೋರಾಟಗಾರರಾದ ಈಶ್ವರಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯ ಬಳಿ ಕೊನೆಗೊಳ್ಳುತ್ತದೆ. ಈ ಸಪ್ತಾಹದ ‘ಪ್ರತಿಜ್ಞಾ ರ್ಯಾಲಿ’ಯು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ದಬ್ಬಾಳಿಕೆಯ ವಿರುದ್ಧ ಹೋರಾಡಲು ದೃಢಸಂಕಲ್ಪ ಮಾಡಲಿದೆ. ಬೆಟ್ಟಗಳಿಂದ ಕರಾವಳಿಯವರೆಗೆ, ಸುಂದರ್‌ಬನ್ಸ್ ಕಾಂಡ್ಲಾವನಗಳಿಂದ ಇತರೇ ಕಾಡಿನವರೆಗೆ, ರಾಜ್ಯದ ಲಕ್ಷಾಂತರ ಮಹಿಳೆಯರ ಸಾಮೂಹಿಕ ಭಾಗವಹಿಸುವಿಕೆಯೊಂದಿಗೆ, ಈ ಮೆರವಣಿಗೆಯು ಮಹಿಳೆಯರ ಮೇಲಿನ ಅಪರಾಧದ ವಿರುದ್ಧ ಪ್ರತಿರೋಧದ ಹೊಸ ಅಲೆಯನ್ನು ಸೃಷ್ಟಿಸುತ್ತದೆ. ಈ ‘ಪ್ರತಿಜ್ಞಾ ರ್ಯಾಲಿ’ಯಲ್ಲಿ ಭಾಗವಹಿಸಲು ಮತ್ತು ಎಲ್ಲಾ ರೀತಿಯ ನೆರವು ಮತ್ತು ಬೆಂಬಲವನ್ನು ನೀಡಲು ನಾವು ನಿಮ್ಮನ್ನು ಕೋರುತ್ತೇವೆ.