ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ಮಸೂದೆ 2025 ದ್ವೇಷ ತಡೆಗಟ್ಟಲು ಇನ್ನೊಂದು ಕಾನೂನು ಅನಿವಾರ್ಯವೇ?
ರಾಜ್ಯ ವಿಧಾನ ಮಂಡಲದ 2025ರ ಚಳಿಗಾಲದ ಅಧಿವೇಶನದಲ್ಲಿ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಮಸೂದೆ 2025’ ಮಂಡನೆಯಾಗಿ ಅಂಗೀಕಾರವೂ ಆಗಿದೆ. ರಾಜ್ಯಪಾಲರ ಅಂಕಿತ ಮಾತ್ರವೇ ಬಾಕಿ ಇದೆ. ಈ ಮಸೂದೆಯನ್ನು ಸದನದಲ್ಲಿ ವಿರೋಧಿಸಿದ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್, ಇದಕ್ಕೆ ಸಹಿ ಹಾಕದಂತೆ ರಾಜ್ಯಪಾಲರನ್ನು ಒತ್ತಾಯಿಸಿವೆ. ರಾಜ್ಯದ ಪ್ರಜ್ಞಾವಂತ ಜನತೆ ಈ ವಿಷಯದ ಕುರಿತು ವಸ್ತುನಿಷ್ಠವಾಗಿ ಅರ್ಥಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ.
ಪ್ರತಿಗಾಮಿ ಬಂಡವಾಳಶಾಹಿ ವ್ಯವಸ್ಥೆಯು ದಿನದಿಂದ ದಿನಕ್ಕೆ ಅಧೋಗತಿಗೆ ಇಳಿಯುತ್ತಿರುವ ಕಾರಣದಿಂದ ರಾಜಕೀಯ, ಸಂಸ್ಕೃತಿ, ಮೌಲ್ಯಗಳು, ನೈತಿಕತೆ, ಸಭ್ಯತೆ ಇವೆಲ್ಲವೂ ಪಾತಾಳಕ್ಕೆ ಇಳಿಯುತ್ತಿವೆ. ಸಮಾಜವನ್ನು ಮುನ್ನಡೆಸಬೇಕಾದ ರಾಜಕೀಯ ನಾಯಕರು ಪರಸ್ಪರ ಲಂಗುಲಗಾಮಿಲ್ಲದೆ ನಾಲಿಗೆ ಹರಿಬಿಡುತ್ತಾರೆ. ಧಾರ್ಮಿಕ ವ್ಯಕ್ತಿಗಳೂ ಇದರಲ್ಲಿ ಹಿಂದೆ ಬಿದ್ದಿಲ್ಲ. ಟೀಕೆಯ ಹೆಸರಿನಲ್ಲಿ ನಾಲಿಗೆ ಕತ್ತರಿಸಿ, ತಲೆಕಡಿ, ಕೈಕಾಲು ತೆಗಿ ಎಂಬ ಪದಪ್ರಯೋಗ ಮಾಮೂಲಿ ಆಗಿದೆ. ಬೇರೆ ಧರ್ಮಗಳ, ಸಮುದಾಯಗಳ ಬಗ್ಗೆಯೂ ಅವಹೇಳನ, ಅಸಹನೆ ಬರುವಂತಹ ಸುಳ್ಳು ಸುದ್ದಿಗಳ ಪ್ರಸಾರ, ಭಾಷಣಗಳನ್ನು ‘ಧಾರ್ಮಿಕ’ ಎಂದೆನಿಸಿಕೊಂಡಿರುವ ವ್ಯಕ್ತಿಗಳೂ ಮಾಡುತ್ತಾರೆ. ಇವುಗಳ ಪರಿಣಾಮವಾಗಿ ಸಮಾಜದಲ್ಲಿ ದ್ವೇಷ ಆಧಾರಿತ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಕೂಡ ಸತ್ಯ. ಬಿಜೆಪಿ ಮತ್ತು ಸಂಘಪರಿವಾರ ಇಂತಹ ವಾತಾವರಣದ ಅತಿಹೆಚ್ಚು ಲಾಭವನ್ನು ಪಡೆದಿವೆ ಮತ್ತು ಇದರಿಂದ ಬೆಳೆದಿವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಇದು ಕೇವಲ ಕರ್ನಾಟಕದ ಕಥೆಯಲ್ಲ, ಇಡೀ ದೇಶದ ವಾತಾವರಣ ಹೀಗಾಗಿದೆ. ಇಡೀ ಜಗತ್ತನ್ನೇ ಒಂದುಗೂಡಿಸಬಲ್ಲ ಸಾಮಾಜಿಕ ಮಾಧ್ಯಮಗಳು ದ್ವೇಷ-ಅಸಹನೆಗಳನ್ನು ಬಿತ್ತುವ ಕಾರ್ಖಾನೆಗಳಾಗಿವೆ. ಸಹಜವಾಗಿ, ನಾಡಿನ ಪ್ರಗತಿಪರ ಚಿಂತಕರಿಗೆ, ಶಾಂತಿ ಸೌಹಾರ್ದತೆ ಬಯಸುವ ಪ್ರಜ್ಞಾವಂತ ಜನಸಾಮಾನ್ಯರಿಗೆ ಈ ಬೆಳವಣಿಗೆ ಆತಂಕದ ಸಂಗತಿಯಾಗಿದೆ.
ಇಂತಹ ಸಂದರ್ಭದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಹೊರಟಿರುವ ಈ ಮಸೂದೆಯು ಈ ಸಮಸ್ಯೆಗೆ ರಾಮಬಾಣ ಎಂಬಂತೆ ಕೆಲವರಿಗೆ ಭಾಸವಾಗಬಹುದು. ಕಾಂಗ್ರೆಸ್ ಸರ್ಕಾರವು ಸಿದ್ಧಪಡಿಸಿರುವ ಕಾರಣದಿಂದ ಅದು ಬಿಜೆಪಿ-ಆರ್‌ಎಸ್‌ಎಸ್‌ಗಳನ್ನು ಕಟ್ಟಿಹಾಕಲು ರೂಪಿಸಿರುವ ಕಾಯ್ದೆ ಎಂದು ತೀರ್ಮಾನಿಸಿರುವ ಬಿಜೆಪಿ ಇದು ಅಭಿವ್ಯಕ್ತಿ ಸ್ವಾತಂತ್ರ‍್ಯದ ಹರಣ ಎಂದು ಬೊಬ್ಬೆ ಹಾಕುತ್ತಿದೆ. ಒಂದು ಕಾಲದಲ್ಲಿ ಆರ್‌ಎಸ್‌ಎಸ್ ನಿಷೇಧಿಸಬೇಕೆಂದು ವಾದಿಸಿದ್ದ ಜೆಡಿಎಸ್ ನಾಯಕ ಕುಮಾರಸ್ವಾಮಿ ಈಗ ಬಿಜೆಪಿಯ ಬಾಲಂಗೋಚಿಯಾಗಿ ಆರ್‌ಎಸ್‌ಎಸ್ ಬೆಂಬಲಕ್ಕೆ ನಿಂತಿದ್ದಾರೆ.
ಈ ಮಸೂದೆ ಏನು ಹೇಳುತ್ತದೆ
ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳ ವಿರುದ್ಧ ಮತ, ಜನಾಂಗ, ಜಾತಿ ಅಥವಾ ಸಮುದಾಯ, ಹುಟ್ಟು, ಲಿಂಗ, ಪ್ರದೇಶ, ಭಾಷೆ, ಬುಡಕಟ್ಟು ಇತ್ಯಾದಿಗಳ ಆಧಾರದಲ್ಲಿ ಪ್ರಚಾರ ಮಾಡುವ ಮೂಲಕ ಅಸಹನೆ, ದ್ವೇಷ, ಅನೈಕ್ಯತೆ ಬರುವಂತೆ ಮಾಡುವುದನ್ನು ಈ ಮಸೂದೆ ದ್ವೇಷ ಅಪರಾಧ ಎಂದು ವ್ಯಾಖ್ಯಾನಿಸಿದೆ. ಇಂತಹ ಭಾವನೆ ಮೂಡಿಸುವ ಭಾಷಣ, ಕರಪತ್ರ, ಪುಸ್ತಕ, ಬರಹ, ಚಿತ್ರ, ವಿಡಿಯೋ, ಸಂಕೇತ ಇತ್ಯಾದಿಗಳನ್ನು ನೇರವಾಗಿ ಅಥವಾ ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರಸಾರ ಮಾಡುವುದು ದ್ವೇಷ ಭಾಷಣದ ಪರಿಧಿಯಲ್ಲಿ ಬರಲಿದೆ.
ಕಲೆ, ಸಾಹಿತ್ಯ, ಪರಂಪರೆ, ವಿಜ್ಞಾನ, ಕಲಿಕೆ ಅಥವಾ ಧಾರ್ಮಿಕ ಉದ್ದೇಶಗಳಿಗೆ ಪುಸ್ತಕ, ಕರಪತ್ರ ಇತ್ಯಾದಿಗಳ ರೂಪದಲ್ಲಿ ಪ್ರಕಟಣೆ ಅಥವಾ ಸಂಗ್ರಹ ಮಾಡಿದ್ದರೆ ಅವುಗಳಿಗೆ ವಿನಾಯಿತಿ ನೀಡಲಾಗಿದೆ.
ಒಬ್ಬ ವ್ಯಕ್ತಿಯೂ ದ್ವೇಷ ಅಪರಾಧ ಮಾಡಬಹುದು ಎಂಬ ಮುನ್ಸೂಚನೆ ಇದ್ದರೆ, ಡಿವೈಎಸ್ಪಿ ಅಥವಾ ಮೇಲಿನ ಪೊಲೀಸ್ ಅಧಿಕಾರಿಗಳು ತಮ್ಮ ವಿವೇಚನೆಯನ್ನು ಬಳಸಿ ಬಂಧನದಂತಹ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಬಹುದು. ಜನಪರ ಹೋರಾಟಗಾರರನ್ನು ಕಟ್ಟಿಹಾಕಲು ಈ ಪರಿಚ್ಛೇದವನ್ನು ಆಳುವ ಸರ್ಕಾರಗಳು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು!
ದ್ವೇಷಾಪರಾಧಗಳು ಜಾಮೀನುರಹಿತ ಸಂಜ್ಞೇಯ (Cognizable) ಅಪರಾಧಗಳಾಗಿವೆ. ಇಂತಹ ಅಪರಾಧ ಸಾಬೀತಾದರೆ ಮೊದಲ ಬಾರಿಗೆ ಕನಿಷ್ಠ 1 ವರ್ಷದಿಂದ ಗರಿಷ್ಠ 7 ವರ್ಷಗಳವರೆಗೆ ಜೈಲುಶಿಕ್ಷೆ ಮತ್ತು ರೂ. 50 ಸಾವಿರ ದಂಡ. ಅಪರಾಧ ಪುನರಾವರ್ತನೆಯಾದರೆ 2 ರಿಂದ 10 ವರ್ಷಗಳವರೆಗೆ ಜೈಲು ಮತ್ತು ರೂ. 1 ಲಕ್ಷ ದಂಡ ಎಂದು ಹೇಳಲಾಗಿದೆ.
ಈಗಾಗಲೇ ದ್ವೇಷ ನಿಯಂತ್ರಣಕ್ಕೆ ಕಾನೂನುಗಳಿಲ್ಲವೇ?
ಖಂಡಿತ ಇವೆ. ಭಾರತೀಯ ನ್ಯಾಯ ಸಂಹಿತೆ 2023ರ ಕಾಲಂ 196, 197, 298 ನಿರ್ದಿಷ್ಟವಾಗಿ ಇಂತಹ ಅಪರಾಧಗಳನ್ನು ನಿಯಂತ್ರಿಸುವ ಕಾನೂನುಗಳು. ಈ ಸೆಕ್ಷನ್‌ಗಳಲ್ಲಿ ಅಪರಾಧ ಸಾಬೀತಾದರೆ ಗರಿಷ್ಠ 8-10 ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದು. ಹಿಂದೆ ಇದ್ದ ಐಪಿಸಿ ಕಾಯ್ದೆಯ ಪರಿಷ್ಕೃತ ರೂಪ ಇದು.
ಇದಲ್ಲದೆ, ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಕೂಡ ಅಂತರ್ಜಾಲದ ಮೂಲಕ ಹರಡುವ ಆಕ್ಷೇಪಾರ್ಹ ಪೋಸ್ಟ್ ಗಳನ್ನು ಅಪರಾಧವೆಂದು ಪರಿಗಣಿಸುತ್ತದೆ. ಈ ಎಲ್ಲ ಕಾಯ್ದೆಗಳು ಇದ್ದಾಗ್ಯೂ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ದ್ವೇಷ ಭಾಷಣ, ದ್ವೇಷ ಅಪರಾಧಗಳು ನಡೆಯುತ್ತಲೇ ಇವೆ. ಪ್ರಕರಣಗಳು ದಾಖಲಾದರೂ ಆರೋಪಿಗಳು ಬಹಳ ಸುಲಭವಾಗಿ ಜಾಮೀನು ಪಡೆಯುತ್ತಾರೆ ಮತ್ತು ತಮ್ಮ ಚಾಳಿಯನ್ನು ಮತ್ತೆ ಮುಂದುವರಿಸುತ್ತಿದ್ದಾರೆ. ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ಕೋಮುವಾದದ ಪ್ರಯೋಗಶಾಲೆಯಾದ ಕರ್ನಾಟಕದ ಕರಾವಳಿಯಲ್ಲಿ ಬದಲಾವಣೆ ಆಗುತ್ತಿಲ್ಲ.
ಸಂಘಪರಿವಾರದ ಕೋಮುವಾದಿ ರಾಜಕೀಯವನ್ನು ನಿಯಂತ್ರಿಸಲು ಈ ಕಾಯ್ದೆ ಸಹಕಾರಿಯಾಗಬಲ್ಲದು ಎಂದು ಕೆಲವು ಪ್ರಗತಿಪರರು ನಂಬಿದ್ದಾರೆ. ತಾನು ಅಧಿಕಾರಕ್ಕೆ ಬಂದು 2 ವರ್ಷಗಳ ನಂತರವೂ ಕೋಮುವಾದಿ ಶಕ್ತಿಗಳನ್ನು ಮಟ್ಟ ಹಾಕಲು ವಿಫಲವಾದ ಕಾಂಗ್ರೆಸ್ ಸರ್ಕಾರ ತನ್ನ ಬೆಂಬಲಿಗರನ್ನು ಸಮಾಧಾನಪಡಿಸಲು ಈ ಕಾಯ್ದೆ ತಂದಿದೆಯೇ ಎಂಬ ಪ್ರಶ್ನೆ ಮೂಡುತ್ತದೆ.
ಕಠಿಣ, ಕರಾಳ ಕಾಯ್ದೆಗಳು ಫಲ ನೀಡಿವೆಯೇ?
ನಮ್ಮ ದೇಶದ ಸುರಕ್ಷತೆಯ ಹೆಸರಿನಲ್ಲಿ ಯುಎಪಿಎ, ಎನ್‌ಎಸ್‌ಎ ಮುಂತಾದ ಕಠಿಣ ಕಾಯ್ದೆಗಳಿವೆ, ದೇಶದ್ರೋಹದ ಸೆಕ್ಷನ್‌ಗಳಿವೆ. ಈ ಕಾಯ್ದೆಗಳಲ್ಲಿ ಜಾಮೀನು ದೊರಕುವುದು ಸುಲಭವಿಲ್ಲ. ಸಾಬೀತಾದರೆ ಜೀವಾವಧಿ ಶಿಕ್ಷೆಯೂ ಆಗಬಹುದು. ಹೋರಾಟಗಾರರನ್ನು, ಸರ್ಕಾರದ ನಡೆಗಳನ್ನು ಪ್ರತಿರೋಧಿಸುವ ರಾಜಕೀಯ ವಿರೋಧಿಗಳನ್ನು ಇಂತಹ ಕಾಯ್ದೆಗಳಡಿಯಲ್ಲಿ ಸಿಕ್ಕಿಸಿ ಅಪ್ಪಚ್ಚಿ ಮಾಡಲಾಗುತ್ತದೆ. ಎಷ್ಟೋ ಮಂದಿ 5-10 ವರ್ಷ ವಿಚಾರಣೆಯೂ ಇಲ್ಲದೆ, ಜಾಮೀನೂ ಇಲ್ಲದೆ ಜೈಲುಗಳಲ್ಲಿ ಕೊಳೆಯುತ್ತಾರೆ. ಪ್ರೊ. ಆನಂದ್ ತೇಲ್ತುಂಬ್ಡೆ, ಡಾ: ಬಿನಾಯಕ್ ಸೇನ್‌ರಂತಹ ಸಾರ್ವಜನಿಕ ಜೀವನದ ಹೆಸರಾಂತ ವ್ಯಕ್ತಿಗಳೇ ಇದರಿಂದ ನಲುಗಿದ್ದಾರೆ. ಇನ್ನು ಯುಎಪಿಎ ಕಾಯ್ದೆ ಎಷ್ಟೇ ಕಠಿಣವಾಗಿರಲಿ, ಇದರಡಿಯಲ್ಲಿ ಅಪರಾಧ ಸಾಬೀತಾಗಿರುವ ಪ್ರಕರಣಗಳು ಶೇ. 3ಕ್ಕಿಂತ ಕಡಿಮೆ. ಅಂದರೆ ಬಹುತೇಕ ಪ್ರಕರಣಗಳು ಸಾಕ್ಷ್ಯಾಧಾರಗಳೇ ಇಲ್ಲದ ರಾಜಕೀಯ ಪ್ರೇರಿತ ಸುಳ್ಳು ಮೊಕದ್ದಮೆಗಳು ಎಂದೇ ಅರ್ಥ.
ಶಿಕ್ಷೆಯ ಉದ್ದೇಶ ಸಂತ್ರಸ್ತರಿಗೆ ಪರಿಹಾರ ಒದಗಿಸುವುದು, ಅಪರಾಧ ತಡೆಗಟ್ಟುವುದು ಮತ್ತು ಮನಃಪರಿವರ್ತನೆ ಮಾಡುವುದೇ ಹೊರತು ಸೇಡು ತೀರಿಸಿಕೊಳ್ಳುವುದಲ್ಲ ಎಂಬುದು ನ್ಯಾಯಶಾಸ್ತ್ರದ ಮೂಲ ಪರಿಕಲ್ಪನೆ. ಹಾಗಾಗಿ, ಅಪರಾಧಗಳು ಘಟಿಸಿದಾಗ ಶಿಕ್ಷೆಯ ಖಚಿತತೆ ಹೆಚ್ಚು ಮುಖ್ಯವಾಗುತ್ತದೆ, ಅಂದರೆ ತಪ್ಪು ಮಾಡಿದಾತ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬಷ್ಟು ದಕ್ಷತೆ ವ್ಯವಸ್ಥೆಯಲ್ಲಿ ಇರಬೇಕು. ಶಿಕ್ಷೆಯ ಪ್ರಮಾಣ ಎಷ್ಟೇ ಕಠಿಣವಾಗಿದ್ದರೂ, ತಪ್ಪಿಸಿಕೊಳ್ಳಲು ನೂರು ದಾರಿಗಳಿದ್ದರೆ ಅಂತಹ ನ್ಯಾಯದಾನ ವ್ಯವಸ್ಥೆ ಉದ್ದೇಶಿತ ಗುರಿಯನ್ನು ತಲುಪಲಾರದು. ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸಾಮೂಹಿಕ ಅತ್ಯಾಚಾರದ ಅಪರಾಧಿಗಳು ಕೂಡ ಸನ್ನಡತೆಗಾಗಿ ಬಿಡುಗಡೆಯ ಭಾಗ್ಯ ಪಡೆಯುವ ದೇಶ ನಮ್ಮದು!!!
ಹಾಗಾಗಿ ಕಾಯ್ದೆ ಕಠಿಣ ಆದ ಮಾತ್ರಕ್ಕೆ ಅದಕ್ಕೆ ಸಂಬಂಧಿಸಿದ ಅಪರಾಧಗಳು ಕಡಿಮೆಯಾದ ನಿದರ್ಶನಗಳು ಕಡಿಮೆ ಮತ್ತು ಸಾಮಾನ್ಯವಾಗಿ ಈ ವ್ಯವಸ್ಥೆಯ ವಿರೋಧಿಗಳ ವಿಷಯದಲ್ಲಿ ಸರ್ಕಾರ ಕಾನೂನುಗಳನ್ನು ಬಿಗಿಯಾಗಿ ಬಳಸುವ ಹಾಗೂ ವ್ಯವಸ್ಥೆಗೆ ಶರಣಾಗುವವರನ್ನು ರಕ್ಷಿಸುವ ಬೇಕಾದಷ್ಟು ಉದಾಹರಣೆಗಳು ನಮ್ಮ ಮುಂದಿವೆ.
ಹಾಗಾದರೆ ಬೇಕಾಗಿರುವುದೇನು
ದ್ವೇಷ ಅಪರಾಧಗಳನ್ನು ತಡೆಗಟ್ಟಬೇಕು, ಅಂತಹ ಅಪರಾಧಿಗಳಿಗೆ ಖಚಿತವಾಗಿ ತಕ್ಕ ಶಿಕ್ಷೆ ಆಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಹಾಗೆಯೇ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಮಿತಿಯಿಲ್ಲದ ಹಕ್ಕು ಎಂದೂ ವಾದಿಸಲಾಗುವುದಿಲ್ಲ. ಎಲ್ಲ ಹಕ್ಕು ಮತ್ತು ಸ್ವಾತಂತ್ರ‍್ಯಗಳು ಕೂಡ ಸಮಾಜದ ಪ್ರಗತಿಗೆ ಮತ್ತು ಸಾಮಾಜಿಕ ಸ್ವಾಸ್ಥ್ಯದ ಉದ್ದೇಶದಿಂದಲೇ ಮೂಡಿ ಬಂದಿವೆ. ಅವುಗಳಿಗೆ ವ್ಯತಿರಿಕ್ತವಾಗಿ ಹೋದರೆ ಅದನ್ನು ನಿರ್ಬಂಧಿಸುವ ಜವಾಬ್ದಾರಿ ಕೂಡ ಸರ್ಕಾರದ್ದೇ.
ಇದಕ್ಕಾಗಿ ಮೊದಲಿಗೆ ಸಮಾಜದಲ್ಲಿ ಜನತಾಂತ್ರಿಕ ಮೌಲ್ಯಗಳ ಬಗ್ಗೆ ಜನರಲ್ಲಿ ಅರಿವು-ಒಲವು ಮೂಡಿಸಬೇಕು. ದ್ವೇಷ ಬಿತ್ತುವ, ಸೌಹಾರ್ದತೆ ಕದಡುವ ಖೂಳರನ್ನು ಜನರೇ ದೂರ ಇಡುವಂತಹ ವಾತಾವರಣ ನಿರ್ಮಿಸಬೇಕು. ಅಷ್ಟಾಗಿಯೂ, ಅಪರಾಧ ಮಾಡುವವರಿಗೆ, ಎಷ್ಟೇ ಪ್ರಭಾವಿಗಳಾದರೂ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಈ ಕ್ರಮಗಳನ್ನು ಕೈಗೊಳ್ಳದೆ, ಹೊಸಹೊಸ, ಕಠಿಣ ಕಾನೂನುಗಳನ್ನು ರೂಪಿಸುತ್ತಾ ಹೋದರೆ ಅವುಗಳು ದುರ್ಬಳಕೆಯಾಗುವ ಅಪಾಯವೇ ಹೆಚ್ಚು. ಒಂದು ಜನವಿರೋಧಿ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕಾನೂನು ಎಂಬುದು ಕೂಡ ಆಳುವ ವರ್ಗದ ಕೈಯಲ್ಲಿ ಅಸ್ತ್ರವಾಗಿದೆ. ಅದನ್ನು ಸರ್ಕಾರಗಳು ವ್ಯವಸ್ಥೆಯನ್ನು ಕಾಪಾಡುವ ಪ್ರಶ್ನೆ ಬಂದಾಗ ಪರಿಣಾಮಕಾರಿಯಾಗಿ ಪ್ರಯೋಗಿಸುತ್ತವೆ ಎಂಬುದನ್ನು ದುಡಿಯುವ ಜನತೆ ಮರೆಯಬಾರದು. ಈ ಹಿನ್ನೆಲೆಯಲ್ಲಿ ಅವಲೋಕಿಸಿದಾಗ ಈ ದ್ವೇಷ ಅಪರಾಧ ನಿಯಂತ್ರಣ ಮಸೂದೆ ಅನಗತ್ಯ ಎಂದೇ ಹೇಳಬಹುದು..