Loading..

ಇಂಡಿಗೋ ಬಿಕ್ಕಟ್ಟು: ಖಾಸಗೀಕರಣದ ಸೃಷ್ಟಿ ದೇಶದ ವಿಮಾನ ಸಂಚಾರ ವ್ಯವಸ್ಥೆಯಲ್ಲಿ ಹಿಂದೆಂದೂ ಕಂಡರಿಯದ ಅತಿದೊಡ್ಡ ಬಿಕ್ಕಟ್ಟು 2025ರ ಡಿಸೆಂಬರ್ ತಿಂಗಳಲ್ಲಿ ಕಾಣಿಸಿಕೊಂಡಿತು. ಡಿಸೆಂಬರ್ 5ರಂದು ಬಹುದೊಡ್ಡ ಏರ್‌ಲೈನ್ಸ್ ಕಂಪನಿಯಾದ ಇಂಡಿಗೋ ಸಂಸ್ಥೆ ಒಂದೇ ದಿನದಲ್ಲಿ 1000ಕ್ಕೂ ಹೆಚ್ಚು ವಿಮಾನ ಹಾರಾಟವನ್ನು ಏಕಾಏಕಿ ರದ್ದು ಪಡಿಸಿದ ಪರಿಣಾಮ ಲಕ್ಷಾಂತರ ಜನರು ಹಲವು ಸಮಸ್ಯೆಗಳಿಗೆ, ಆತಂಕಕ್ಕೆ ಒಳಗಾದರು.

ಇಂಡಿಗೋ ಬಿಕ್ಕಟ್ಟು: ಖಾಸಗೀಕರಣದ ಸೃಷ್ಟಿ
ದೇಶದ ವಿಮಾನ ಸಂಚಾರ ವ್ಯವಸ್ಥೆಯಲ್ಲಿ ಹಿಂದೆಂದೂ ಕಂಡರಿಯದ ಅತಿದೊಡ್ಡ ಬಿಕ್ಕಟ್ಟು 2025ರ ಡಿಸೆಂಬರ್ ತಿಂಗಳಲ್ಲಿ ಕಾಣಿಸಿಕೊಂಡಿತು. ಡಿಸೆಂಬರ್ 5ರಂದು ಬಹುದೊಡ್ಡ ಏರ್‌ಲೈನ್ಸ್ ಕಂಪನಿಯಾದ ಇಂಡಿಗೋ ಸಂಸ್ಥೆ ಒಂದೇ ದಿನದಲ್ಲಿ 1000ಕ್ಕೂ ಹೆಚ್ಚು ವಿಮಾನ ಹಾರಾಟವನ್ನು ಏಕಾಏಕಿ ರದ್ದು ಪಡಿಸಿದ ಪರಿಣಾಮ ಲಕ್ಷಾಂತರ ಜನರು ಹಲವು ಸಮಸ್ಯೆಗಳಿಗೆ, ಆತಂಕಕ್ಕೆ ಒಳಗಾದರು.
ತುರ್ತು ಕೆಲಸಕಾರ್ಯಗಳಿಗೆ ವಿಮಾನಯಾನವನ್ನು ನೆಚ್ಚಿಕೊಂಡವರು, ಟಿಕೆಟ್‌ಗಳನ್ನು ಖರೀದಿಸಿದ್ದರೂ ತಮ್ಮ ಪ್ರಯಾಣವನ್ನು ಕೈಬಿಡಬೇಕಾಯಿತು. ಇಂಡಿಗೋ ಹೊರತುಪಡಿಸಿ ಪರ್ಯಾಯ ವಿಮಾನದ ಟಿಕೆಟ್ ದರ ರೂ.5000 ದಿಂದ 1 ಲಕ್ಷಕ್ಕೆ ಏರಿತು. ಮುಂಬೈಯಿಂದ ದೆಹಲಿಯ ನಡುವೆಯ ಕಡಿಮೆ ಅವಧಿಯ ವಿಮಾನಯಾನಕ್ಕೂ ರೂ.1 ಲಕ್ಷ ಪಾವತಿಸಬೇಕಾದ ಅನಿವಾರ್ಯತೆ ನಿರ್ಮಾಣವಾಯಿತು. ಆದ್ದರಿಂದ, ಜನರು ಬಹುದೊಡ್ಡ ಸಂಖ್ಯೆಯಲ್ಲಿ ವಿಮಾನ ನಿಲ್ದಾಣಗಳಲ್ಲೇ ದಿಕ್ಕುತೋಚದೆ ನಿಂತರು. ಹೋಟೆಲ್ ರೂಂ ದರ ಸಿಕ್ಕಾಪಟ್ಟೆ ಏರಿಕೆಯಾಗಿ ಜನ ಊಟ, ನಿದ್ದೆ, ವಿಶ್ರಾಂತಿಯಿಲ್ಲದೆ ಹೈರಾಣಾದರು.
ಬಿಕ್ಕಟ್ಟಿಗೆ ಕಾರಣ
ಇಂದು ಭಾರತೀಯ ವಿಮಾನಯಾನ ಕ್ಷೇತ್ರವು, ಎರಡು ಪ್ರಮುಖ ಕಾರ್ಪೋರೇಟ್ ದೈತ್ಯಗಳಾದ ಇಂಡಿಗೋ (ಶೇ.60) ಹಾಗೂ ಟಾಟಾ ಸಮೂಹ ಸಂಸ್ಥೆ(ಶೇ.32)ಗಳ ನಿಯಂತ್ರಣದಲ್ಲಿದೆ. ಹೀಗೆ ಶೇ.92 ರಷ್ಟು ಏಕಸ್ವಾಮ್ಯ ಕಂಪನಿಗಳ ಕೈವಶವಾಗಿರುವುದೇ ಈ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿದೆ.
ಪೈಲೆಟ್‌ಗಳು ಹಾಗೂ ವಿಮಾನಯಾನದ ಸಿಬ್ಬಂದಿ, ಗರಿಷ್ಠ ಎಷ್ಟು ಅವಧಿ ಕೆಲಸ ನಿರ್ವಹಿಸಬೇಕು ಎನ್ನುವ ವಿಷಯಕ್ಕೆ ಸಂಬಂಧಿಸಿದ ನಿಯಮಗಳನ್ನು FDTL (ಫೈಟ್ ಡ್ಯೂಟಿ ಟೈಮ್ ಲಿಮಿಟೇಷನ್) ತಿಳಿಸುತ್ತದೆ. ಆದರೆ, ಭಾರತದ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಅನುಸರಿಸುವ ಎಫ್‌ಡಿಟಿಎಲ್ ಮಾರ್ಗದರ್ಶಿ ಸೂತ್ರವು ಅಂತರರಾಷ್ಟ್ರೀಯ ಮಾನದಂಡಗಳ ಅನುಸಾರವಾಗಿ ಇಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪೈಲಟ್‌ಗಳಿಗೆ ವಾರಕ್ಕೆ 48 ಗಂಟೆಗಳ ಕಾಲ ವಿಶ್ರಾಂತಿ ಇದ್ದರೆ, ಭಾರತದಲ್ಲಿ ಅದು ಕೇವಲ 36 ಗಂಟೆಗಳಿಗೆ ಸೀಮಿತವಾಗಿದೆ.
ಯಾರಿಗೆೆ ಆಗಲಿ, ವಿಶ್ರಾಂತಿ ರಹಿತ ಧೀರ್ಘಾವಧಿ ಕೆಲಸವು ಅತೀವ ದಣಿವನ್ನು ಉಂಟುಮಾಡುತ್ತದೆ. ಇದಕ್ಕೆ ವಿಮಾನಯಾನದ ಸಿಬ್ಬಂದಿಗಳು ಹೊರತಾದವರಲ್ಲ. ಇವರಿಗೆ ಸೂಕ್ತ ವಿಶ್ರಾಂತಿಯನ್ನು ಖಾತ್ರಿ ಪಡಿಸದೆ ಹೋದಲ್ಲಿ ಕೇವಲ ಅವರ ಜೀವಕ್ಕೆ ಮಾತ್ರವಲ್ಲ, ಪ್ರಯಾಣಿಕರ ಜೀವಕ್ಕೂ ಸಹ ಕುತ್ತು ಬರಬಹುದಾದ ಸಂಭವವೇ ಹೆಚ್ಚು.
ಆದ್ದರಿಂದಲೇ, ಹಲವು ದಶಕಗಳಿಂದ ಪೈಲೆಟ್ ಹಾಗೂ ವಿಮಾನಯಾನದ ಸಿಬ್ಬಂದಿ, ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು ಹಾಗೂ ಪ್ರಪಂಚದಾದ್ಯಂತ ಬಹುತೇಕ ರಾಷ್ಟ್ರಗಳು ಒಪ್ಪಿಕೊಂಡಿರುವ ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO)ಯ ನಿಯಮಗಳಿಗೆ ಹೊಂದಿಕ್ಕೊಳ್ಳುವಂತಹ (ಫೈಟ್ ಡ್ಯೂಟಿ ಟೈಮ್ ಲಿಮಿಟೇಷನ್)FDTL ನಿಯಮಗಳನ್ನು ಜಾರಿಗೊಳಿಸಬೇಕೆಂಬ ಬೇಡಿಕೆ ಇಟ್ಟಿದ್ದರು.
ಇದರ ಪರಿಣಾಮವಾಗಿ, 2024ರ ಮೇ ತಿಂಗಳಲ್ಲಿ ಹೊಸ FDTLನಿಯಮಗಳನ್ನು ಡಿಜಿಸಿಎ ಪ್ರಕಟಿಸಿತು. ಇವುಗಳನ್ನು ಎರಡು ಹಂತದಲ್ಲಿ, ಅಂದರೆ 2025ರ ಜುಲೈ 1ರಂದು ನಿಯಮಗಳನ್ನು ಮೊದಲ ಹಂತದಲ್ಲಿ ಜಾರಿಗೊಳಿಸಿ ಹಾಗೂ ನವೆಂಬರ್ 1ರ ಹೊತ್ತಿಗೆ ಎರಡನೇ ಹಂತದಲ್ಲಿ ಅಷ್ಟೂ ಪ್ರಕ್ರಿಯೆ ಮುಗಿದಿರಬೇಕು ಎಂದು ತಿಳಿಸಿತು. ಈ ನಿಯಮಗಳನ್ನು ಜಾರಿಗೆ ತರಲು ಸಾಕಷ್ಟು ಕಾಲಾವಕಾಶ ನೀಡಿದಾಗ್ಯೂ ಇಂಡಿಗೋ ಸಂಸ್ಥೆ ನಿಯಮಗಳನ್ನು ಗಾಳಿಗೆ ತೂರಿ, ನಿಯಮ ಪಾಲನೆಗೆ ಬೇಕಿದ್ದ ಅವಶ್ಯಕ ಸಹ ಪೈಲೆಟ್‌ಗಳು, ಕ್ಯಾಪ್ಟನ್‌ಗಳು ಹಾಗೂ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲಿಲ್ಲ. ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸಲೇಬೇಕು ಎಂದು ತಾಕೀತು ಮಾಡಿದಾಗ ಇಂಡಿಗೋ ತನ್ನ ವಿಮಾನಗಳ ಹಾರಾಟವನ್ನೇ ಏಕಾಏಕಿ ನಿಲ್ಲಿಸಿತು. ಆದ್ದರಿಂದಲೇ, ಡಿಸೆಂಬರ್ 4, 5, 6 ರಂದು ದೇಶದಲ್ಲಿ ಅತಿ ದೊಡ್ಡ ಬಿಕ್ಕಟ್ಟು ವಿಮಾನಯಾನದಲ್ಲಿ ಉಂಟಾಯಿತು.
ಖಾಸಗೀಕರಣದ ನೀತಿಯ ಫಲ
ಗರಿಷ್ಠ ವಿಮಾನಗಳು, ಕನಿಷ್ಠ ಸಿಬ್ಬಂದಿ ವರ್ಗ ಈ ಮೂಲಕ ಅತ್ಯಧಿಕ ಲಾಭಗಳಿಸುವುದೇ ಎಲ್ಲಾ ಖಾಸಗಿ ಕಂಪನಿಗಳ ಗುರಿ. ಲಾಭದ ಹಿಂದೆ ಬಿದ್ದ ಕಂಪನಿಗಳು ಅತಿ ಕಡಿಮೆ ಪೈಲೆಟ್‌ಗಳಿಂದ ಹೆಚ್ಚು ದುಡಿಸಿಕೊಂಡು ಲಾಭಗಳಿಸುವ ನಯವಂಚಕ ಯೋಜನೆಯನ್ನು ರೂಪಿಸುತ್ತವೆ. ಇದು ಕೇವಲ ವಿಮಾನಯಾನಕ್ಕೆ ಸಂಬಂಧಿಸಿದಲ್ಲ. ಬಸ್, ಟ್ರೆೈನ್ ಒಳಗೊಂಡಂತೆ ಎಲ್ಲಾ ಸಾರಿಗೆಗೂ ಅನ್ವಯಿಸುತ್ತದೆ. ಇಂಡಿಗೋ, ಏರ್ ಇಂಡಿಯಾ ಮತ್ತೆ ಯಾವುದೇ ಕಂಪನಿಗಳು ಇದೇ ನಿಯಮವನ್ನು ಪಾಲಿಸುತ್ತವೆ. ಏಕೆಂದರೆ, ಎಲ್ಲವೂ ಖಾಸಗಿ ಏರ್ಲೈನ್ ಳಾಗಿವೆ. ಇವರಿಗೆ ಬೇಕಿರುವುದು ಅತ್ಯಧಿಕ ಲಾಭ, ಅತೀ ಕಡಿಮೆ ನೌಕರರು. ಇದೇ ಸಮಸ್ಯೆಯ ಮೂಲ.
ಇದರ ವ್ಯತಿರಿಕ್ತ ಪರಿಣಾಮವಾಗಿಯೇ, ನಾವು ಈಗಾಗಲೇ ದೇಶದಲ್ಲಿ ಹಲವಾರು ವಿಮಾನ ಅಪಘಾತಗಳಿಗೆ ಸಾಕ್ಷಿಯಾಗಿದ್ದೇವೆ. 2018ರಿಂದ ಮೂರು ಅತಿದೊಡ್ಡ ಅಪಘಾತಗಳು ದೇಶದಲ್ಲಿ ಘಟಿಸಿವೆ. ಒಂದು ಮಂಗಳೂರಿನಲ್ಲಿ, ಮತ್ತೊಂದು ಕೊಯ್‌ಕೋಡ್‌ನಲ್ಲಿ ಮತ್ತು ಮೂರನೆಯದು ಅಹ್ಮದಾಬಾದಿನಲ್ಲಿ. ಈ ವಿಮಾನಗಳು ಎಂತಹ ದುರಂತಕ್ಕೀಡಾದವು ಎಂದರೆ ವಿಮಾನದಲ್ಲಿದ್ದ ಬಹುತೇಕ ಎಲ್ಲರೂ ತಮ್ಮ ಪ್ರಾಣವನ್ನು ತೆರಬೇಕಾಯಿತು. ಈ ರೀತಿ ಜಾಗತೀಕರಣ, ಖಾಸಗೀಕರಣ ಫಲವಾಗಿ ಅಸ್ತಿತ್ವಕ್ಕೆ ಬಂದ ಖಾಸಗಿ ಕಂಪನಿಗಳು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಲೇ ತಮ್ಮ ಲಾಭದ ಹಸಿವನ್ನು ತೀರಿಸಿಕೊಳ್ಳುತ್ತವೆ.
ಇಂದಿನ ಅವಶ್ಯಕತೆ
ಯಾವುದೇ ಕಂಪನಿಯು ಸರ್ಕಾರದ ನಿಯಮಗಳ ಅನುಸಾರ ನಡೆಯದೆ ಹೋದಲ್ಲಿ ಕಂಪನಿಗಳ ಮೇಲೆ ದೊಡ್ಡ ಮೊತ್ತದ ದಂಡ ವಿಧಿಸಬಹುದು, ಅಮಾನತು ಮಾಡಬಹುದು, ಆಪರೇಷನ್‌ಗಳನ್ನು ಸಂಪೂರ್ಣ ನಿಲ್ಲಿಸಬಹುದು, ಪರವಾನಗಿಯನ್ನು ವಾಪಸ್ ಪಡೆಯಬಹುದು. ಈ ರೀತಿ ಹಲವಾರು ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬಹುದು. ವಿಪರ್ಯಾಸ ಎಂದರೆ ಇಂದು ಸರ್ಕಾರವು ಇಂಡಿಗೋದಂತಹ ಏಕಸ್ವಾಮ್ಯ ಮತ್ತು ಬಹು ರಾಷ್ಟ್ರೀಯ ಕಂಪನಿಗಳ ಬಾಲಂಗೋಚಿಯಾಗಿ ಕಂಡೂ ಕಾಣದಂತೆ ಕೈಕಟ್ಟಿ ಕುಳಿತಿದೆ.
ಇಷ್ಟು ಮಾತ್ರವಲ್ಲದೆ, ಬಂಡವಾಳಶಾಹಿ ವ್ಯವಸ್ಥೆಯ ಮಾಲೀಕ ವರ್ಗಕ್ಕೆ ಸಂಪೂರ್ಣ ಅಧಿಕಾರವನ್ನು ಕೊಡುವುದ್ದಕ್ಕಾಗಿಯೇ, ಇತ್ತೀಚೆಗೆ ಕೇಂದ್ರ ಬಿಜೆಪಿ ಸರ್ಕಾರವು 4 ಲೇಬರ್ ಕೋಡ್‌ಗಳನ್ನು ಜಾರಿಗೊಳಿಸಿದೆ. ಈ ಮೂಲಕ ಕಾರ್ಮಿಕ ವರ್ಗವು ಗಳಿಸಿದ್ದ ಬಹುತೇಕ ಎಲ್ಲಾ ನ್ಯಾಯಸಮ್ಮತ ರಕ್ಷಣೆಯನ್ನು ಕಸಿದುಕೊಂಡಿದೆ. ಇಂದು ಕಾರ್ಮಿಕ ಪರ ಇರುವ ಕಾನೂನುಗಳನ್ನು ಉಲ್ಲಂಘಿಸುವ ಪ್ರಕರಣಗಳನ್ನು ನಾಗರಿಕ ಅಪರಾಧ (civil offence) ಎಂದು ಪರಿಗಣಿಸಿ ಅತ್ಯಂತ ಕಡಿಮೆ ಪ್ರಮಾಣದ ದಂಡ ವಿಧಿಸಲಾಗುತ್ತದೆಯೇ ಹೊರತು ತಪ್ಪಿತಸ್ಥರಿಗೆ ಯಾವುದೇ ಕಟುವಾದ ಶಿಕ್ಷೆ ಆಗುವ ಪ್ರಶ್ನೆಯೇ ಇಲ್ಲ. ಮತ್ತೊಂದೆಡೆ, ತಮಗಾಗುವ ಅನ್ಯಾಯದ ವಿರುದ್ಧ ಕಾರ್ಮಿಕರೇನಾದರೂ ಪ್ರತಿಭಟಿಸಿದರೆ ಅವರಿಗೆ ದಂಡ ವಿಧಿಸಿ, ಇದನ್ನು ‘ಅನೈತಿಕ’ ಎಂದು ಕರೆಯಲಾಗುತ್ತಿದೆ!
ಆದ್ದರಿಂದಲೇ, ಇಂಡಿಗೋ ವಿರುದ್ಧ ಕ್ರಮ ತೆಗೆದುಕೊಳ್ಳುವುದನ್ನು ಬಿಟ್ಟು ಸರ್ಕಾರ ಇದಕ್ಕೆ ಮತ್ತಷ್ಟು ರಿಯಾಯಿತಿಯನ್ನು ಕೊಡುತ್ತದೆ. ಹೊಸ ನಿಯಮಗಳು ಡಿಸೆಂಬರ್ 1 ರಿಂದ ಜಾರಿಯಾಗಬೇಕಿತ್ತು, ಈಗ ಅದನ್ನು ಫೆಬ್ರವರಿಗೆ ಮುಂದೂಡಲಾಗಿದೆ. ಫೆಬ್ರವರಿ 10 ನಂತರವೂ ಈ ನಿಯಮಗಳನ್ನು ಇಂಡಿಗೋ ಪಾಲಿಸುತ್ತದೆ ಎಂದೇನಲ್ಲ. ಏಕೆಂದರೆ ವಿಮಾನಯಾನಗಳ ಸಂಖ್ಯೆ ಅನುಗುಣವಾಗಿ ಸಾಕಷ್ಟು ಪೈಲೆಟ್ ಹಾಗೂ ಸಿಬ್ಬಂದಿ ವರ್ಗದ ನೇಮಕಾತಿ ಇನ್ನೂ ಪ್ರಾರಂಭವಾಗಿಲ್ಲ. ಹೀಗೆ ಬಿಕ್ಕಟ್ಟನ್ನು ತನ್ನ ಕೈಯಾರ ಸೃಷ್ಟಿಸಿ ಸರ್ಕಾರಗಳನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಿ ಮತ್ತಷ್ಟು ರಿಯಾಯಿತಿ ಪಡೆಯುವುದೇ ಇಂಡಿಗೋ ಅಂತಹ ಏಕಸ್ವಾಮ್ಯ ಕಂಪನಿಗಳ ಕುತ್ಸಿತ ಯೋಜನೆಯಾಗಿದೆ.
ಈ ಬಿಕ್ಕಟ್ಟನ್ನು ಮಾಲೀಕ ವರ್ಗವೇ ಸೃಷ್ಟಿಸಿದ್ದು. ಸರ್ಕಾರದ ಮೇಲೆ ಒತ್ತಡ ಹೇರಿ ನಿಯಮಗಳನ್ನು ಸಡಿಲಗೊಳಿಸುವಂತಾಗಲಿ ಎನ್ನುವುದೇ ಆ ಹುನ್ನಾರ. ಆದ್ದರಿಂದ, ಪೈಲೆಟ್ ಹಾಗೂ ಸಿಬ್ಬಂದಿಯಿಂದ ಮಾತ್ರವಲ್ಲದೆ ಈ ಸಮಸ್ಯೆಯ ವಿರುದ್ಧ ಜನಸಾಮಾನ್ಯರಿಂದ ಬೃಹತ್ ಆಂದೋಲನ ಬೇಕಾಗಿದೆ. ಈ ಮೂಲಕ ಸರ್ಕಾರಗಳ ಮೇಲೆ ಒತ್ತಡ ಹೇರಿ ಇಂಡಿಗೋದಂತಹ ಖಾಸಗಿ ಸಂಸ್ಥೆಗಳಿಗೆ ಕಟ್ಟುನಿಟ್ಟಾಗಿ ನಿಯಮಗಳನ್ನು ಅನುಸರಿಸುವಂತೆ ಮಾಡಬೇಕಿದೆ. ಇಲ್ಲವಾದಲ್ಲಿ, ಜನಸಾಮಾನ್ಯರ ಜೀವಕ್ಕೆ ಯಾವುದೇ ಭದ್ರತೆ ಇಲ್ಲದಂತಾಗುತ್ತದೆ.