ಗುಜರಾತ್ - ಬಿಹಾರ: ಕುಸಿದ ಸೇತುವೆಗಳು ಹೊಣೆ ಯಾರದ್ದು?
2025ರ ಜುಲೈ 9 ರಂದು ಮುಂಜಾನೆ 7.30 ರ ಸುಮಾರಿಗೆ ವಡೋದರಾ ಜಿಲ್ಲೆಯ ಮುಜ್ಪುರ್‌ನಿಂದ ಆನಂದ್ ಜಿಲ್ಲೆಯ ಗಂಭೀರಾವನ್ನು ಸಂಪರ್ಕಿಸುವ ಒಂದು ಕಿಲೋಮೀಟರ್ ಉದ್ದದ ಸೇತುವೆ ಕುಸಿಯಿತು. ಸೇತುವೆ ಮೇಲೆ ಚಲಿಸುತ್ತಿದ್ದ ವಾಹನಗಳು ಮಹಿಸಾಗರ್ ನದಿ ಸೇರಿದವು. ಟ್ಯಾಂಕರ್ ಒಂದು ನದಿ ಅಂಚಿನಲ್ಲಿ ತೂರಾಡುತ್ತಿದ್ದ ದೃಶ್ಯ ದುಗುಡ ಹುಟ್ಟಿಸುವಂತಿತ್ತು. ಘಟನೆ ಸಂಭವಿಸುತ್ತಿದ್ದಂತೆಯೇ, ನಲವತ್ತು ವರ್ಷಗಳಷ್ಟು ಹಳೆಯದಾದ ಈ ಸೇತುವೆಯ “ಅಪಾಯಕಾರಿ ಸ್ಥಿತಿ” ಬಗ್ಗೆ ಅಧಿಕಾರಿಗಳು ಅನೇಕ ಬಾರಿ ಎಚ್ಚರಿಕೆ ನೀಡಿದ್ದರೂ ಅವುಗಳನ್ನೆಲ್ಲಾ ನಿರ್ಲಕ್ಷಿಸಲಾಗಿದೆಯೆಂಬ ಆರೋಪಗಳು ಕೇಳಿಬಂದವು. 2022 ರಲ್ಲಿ ಒಮ್ಮೆ ಈ ಕುರಿತಾಗಿ ಸರ್ಕಾರಿ ಅಧಿಕಾರಿಗಳನ್ನು ಎಚ್ಚರಿಸಿದಾಗ ಈ ಸೇತುವೆ “ದೀರ್ಘಕಾಲ ಉಳಿಯಲಾರದು” ಎಂದು ಅವರು ಒಪ್ಪಿಕೊಂಡಿದ್ದರು ಎಂಬುದು ಕೂಡ ಈಗ ಬೆಳಕಿಗೆ ಬಂದಿದೆ.
ಆದರೂ, ಯಾವುದೇ ತುರ್ತು ದುರಸ್ತಿ ಕ್ರಮವನ್ನೂ ಕೈಗೊಂಡಿರಲಿಲ್ಲ. ಖಾಸಗಿ ಸಲಹೆಗಾರರೊಬ್ಬರು ಸೇತುವೆ ಹೆಚ್ಚು ಕಾಲ ಉಳಿಯುವುದಿಲ್ಲ ಎಂಬ ತಮ್ಮ ಸಮೀಕ್ಷೆಯ ವರದಿಯನ್ನು ಒಪ್ಪಿಸಿದ್ದರು ಎಂಬುದನ್ನು ರಸ್ತೆ ಮತ್ತು ಕಟ್ಟಡ (ಆರ್&ಬಿ) ಇಲಾಖೆಯ ಅಧಿಕಾರಿಯೊಬ್ಬರು ಒಪ್ಪಿಕೊಂಡಿದ್ದಾರೆ: “ಸೇತುವೆ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ನಾವೂ ನಂಬುತ್ತೇವೆ… ಆದರೆ ನಾವು ಸೇತುವೆಯನ್ನು ಹೇಗೆ ಮುಚ್ಚಬಹುದು? ನಾವು ನಮ್ಮ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಸೇತುವೆಯನ್ನು ಪುನಃ ನಿರ್ಮಿಸಲು ಅಥವಾ ಬಲಪಡಿಸಲು ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ನಮ್ಮ ವಿನ್ಯಾಸ ತಂಡವು ಅದನ್ನು ಪರಿಶೀಲಿಸುತ್ತದೆ.” ಆದಾಗ್ಯೂ, ಆರ್&ಬಿ ಇಲಾಖೆಯ ವಡೋದರಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್, ಈ ತಪಾಸಣೆಯ ಸಮಯದಲ್ಲಿ ಯಾವುದೇ ಪ್ರಮುಖ ರಚನಾತ್ಮಕ ದೋಷಗಳೂ ತಮ್ಮ ಇಲಾಖೆಯ ಗಮನಕ್ಕೆ ಬಂದಿರಲಿಲ್ಲ ಎಂದು ಹೇಳುತ್ತಾರೆ: “ಸೇತುವೆ ಮುಚ್ಚುವ ಯಾವುದೇ ಬೇಡಿಕೆಯೂ ಇರಲಿಲ್ಲ. ನಮ್ಮ ವರದಿಗಳು ಗಂಭೀರ ಹಾನಿಯನ್ನು ಸೂಚಿಸಲಿಲ್ಲ. ಬೇರಿಂಗ್ ಕೋಟ್‌ನಲ್ಲಿ ಸಮಸ್ಯೆ ಇತ್ತು, ಆದರೆ ಅದನ್ನು ಕಳೆದ ವರ್ಷ ದುರಸ್ತಿ ಮಾಡಲಾಗಿದೆ”, ಎಂದಿದ್ದಾರೆ. ಇಂತಹ ಹೇಳಿಕೆಗಳು ಮತ್ತು ಪ್ರತಿವಾದಗಳ ನಡುವೆ, ರಸ್ತೆಗಳು ಮತ್ತು ಕಟ್ಟಡಗಳ ಇಲಾಖೆಯನ್ನು ನಿರ್ವಹಿಸುತ್ತಿರುವ ಗುಜರಾತ್‌ನ ಬಿಜೆಪಿ ಮುಖ್ಯಮಂತ್ರಿ ತಮ್ಮ ಮಾನ ಕಾಪಾಡಿಕೊಳ್ಳಲು ನಾಲ್ಕು ಇಂಜಿನಿಯರ್‌ಗಳನ್ನು ಅಮಾನತುಗೊಳಿಸಿದರು. ತಮ್ಮ ಇಲಾಖೆಯಿಂದಲೇ ಜರುಗಿದ ಇಷ್ಟು ದೊಡ್ಡ ಮಟ್ಟದ ಅವಘಡಕ್ಕೆ ನಾಲ್ಕು ಜನರ ಮೇಲೆ ಗೂಬೆ ಕೂರಿಸಿ ಮುಖ್ಯ ಮಂತ್ರಿಗಳು ತಮ್ಮ ಕೈತೊಳೆದುಕೊಂಡರು!
ಸೇತುವೆಗಳು ಕುಸಿದಿರುವುದು ಇದೇನೂ ಮೊದಲಲ್ಲ. ಮೂರು ವರ್ಷಗಳ ಹಿಂದೆ, 2022 ರಲ್ಲಿ, ರಾಜ್ಯದ ಪ್ರವಾಸಿ ಆಕರ್ಷಣೆ “ತಾಂತ್ರಿಕ ಅದ್ಭುತ” ಎಂದೆಲ್ಲಾ ಪ್ರಚಾರ ಮಾಡಿದ್ದ ಗುಜರಾತ್‌ನ ಮೊರ್ಬಿ ಪಟ್ಟಣದ 756 ಅಡಿ ಉದ್ದ ಮತ್ತು 4.5 ಅಡಿ ಅಗಲದ ತೂಗು ಪಾದಚಾರಿ ಸೇತುವೆ ನದಿಗೆ ಬಿದ್ದು, 140 ಜೀವಗಳನ್ನು ಬಲಿ ತೆಗೆದುಕೊಂಡಿತು, ಅಸುನೀಗಿದವರಲ್ಲಿ ಮೂರನೇ ಒಂದು ಭಾಗ ಮಕ್ಕಳು. ಸೇತುವೆಯನ್ನು ಮಾರ್ಚ್ 2022 ರಿಂದ ಮುಚ್ಚಲಾಗಿತ್ತು ಮತ್ತು 2006 ರಿಂದ ಸೇತುವೆಯನ್ನು ನಿರ್ವಹಿಸಲು ಗುತ್ತಿಗೆ ಪಡೆದ ಕೈಗಾರಿಕೋದ್ಯಮಿ ಜಯ್‌ಸುಖಭಾಯಿ ಪಟೇಲ್ ಒಡೆತನದ ಒರೆವಾ ಗ್ರೂಪ್ ಅದನ್ನು ನವೀಕರಿಸುತ್ತಿತ್ತು. ಗುಜರಾತಿ ಹೊಸ ವರ್ಷಕ್ಕೆ ಹೊಂದಿಕೆಯಾಗುವಂತೆ ಅಕ್ಟೋಬರ್ 26 2022 ರಂದು ಇದನ್ನು ಸಾರ್ವಜನಿಕರಿಗೆ ತೆರೆಯಲಾಗಿತ್ತು. ಒಂದು ದಿನ ಮುಂಚಿತವಾಗಿ, ಜಯ್‌ಸುಖಭಾಯಿ ಪಟೇಲ್ ಸುದ್ದಿಗೋಷ್ಠಿಯಲ್ಲಿ ನವೀಕರಣ ಕಾರ್ಯಕ್ಕೆ 20 ಮಿಲಿಯನ್ ರೂಪಾಯಿ ವೆಚ್ಚವಾಗಿದೆ ಎಂದು ಹೇಳಿದ್ದರು. ದುರಸ್ತಿ ಕಾರ್ಯದ ಗುಣಮಟ್ಟ, ಯಂತ್ರೋಪಕರಣಗಳು ಮತ್ತು ಸಂಸ್ಥೆ ನೇಮಿಸಿಕೊಂಡ ಗುತ್ತಿಗೆದಾರರನ್ನು ಹೊಗಳಿದ್ದಲ್ಲದೇ, “ಮುಂದಿನ 8-10 ವರ್ಷಗಳವರೆಗೆ ಸೇತುವೆಗೆ ಏನೂ ಆಗುವುದಿಲ್ಲ” ಮತ್ತು “ಜವಾಬ್ದಾರಿಯುತವಾಗಿ ಬಳಸಿದರೆ, 15 ವರ್ಷಗಳವರೆಗೆ ಯಾವುದೇ ದುರಸ್ತಿ ಅಗತ್ಯವಿಲ್ಲ” ಎಂದೂ ಹೇಳಿದ್ದರು! ಅಪಘಾತದ ನಂತರ, ಪೊಲೀಸರು ಒರೆವಾ ಕಂಪನಿಗೆ ಸಂಬಂಧಿಸಿದ ಇಬ್ಬರು ವ್ಯವಸ್ಥಾಪಕರು ಮತ್ತು ಇಬ್ಬರು ಗುಮಾಸ್ತರು, ಹಾಗೆಯೇ ಇಬ್ಬರು ಗುತ್ತಿಗೆದಾರರು ಮತ್ತು ಮೂವರು ಭದ್ರತಾ ಸಿಬ್ಬಂದಿ, ಒಟ್ಟು ಒಂಬತ್ತು ಜನರನ್ನು ಬಂಧಿಸಿದ್ದರು. ಅವರ ಮೇಲೆ ಕೊಲೆ ಎಂದು ಪರಿಗಣಿಸಲಾಗದ ಅಪರಾಧವಾದ ನರಹತ್ಯೆ ಆರೋಪದ ಮೇಲೆ ತನಿಖೆ ನಡೆಸಲಾಗುತ್ತಿದೆ. ಆದರೆ ಈ ಪ್ರಕರಣದಲ್ಲಿ ಯಾವೊಬ್ಬರಿಗೂ ಇಂದಿಗೂ ಶಿಕ್ಷೆಯಾಗಿಲ್ಲ. ಬದಲಾಗಿ ಮುಖ್ಯ ಆರೋಪಿ ಜಯ್‌ಸುಖಭಾಯಿ ಪಟೇಲನಿಗೆ ಮೊರ್ಬಿ ಜಿಲ್ಲೆಯಲ್ಲಿ 2024 ರಲ್ಲಿ ನಡೆದ ಪಾಟಿದಾರ್ ಸಭೆಯಲ್ಲಿ ಸನ್ಮಾನ ದೊರಕಿತು! ಒರೆವಾ ಕಂಪನಿಯು “ಅನರ್ಹ” ಗುತ್ತಿಗೆದಾರರನ್ನು ನೇಮಿಸಿಕೊಂಡಿದೆ ಮತ್ತು “ಕಳಪೆ” ದುರಸ್ತಿ ನಡೆಸಿದೆ ಎಂದು ಆರೋಪಿಸಿ ಗುಜರಾತ್ ಸರ್ಕಾರ ತನ್ನ ಜವಾಬ್ದಾರಿಗಳಿಂದ ಕೈತೊಳೆದುಕೊಂಡಿತು. ಕಾಮಗಾರಿ ಕಳಪೆ ಎಂದು ತಿಳಿದಿದ್ದರೂ ಅತಿ ಹೆಚ್ಚು ಜನಸಂದಣಿ ಇರುವ ದಿನ ಸೇತುವೆಯನ್ನು ಸಾರ್ವಜನಿಕರಿಗೆ ಏಕೆ ತೆರೆಯಲಾಯಿತು? ಕೈಗಾರಿಕೋದ್ಯಮಿ ಜಯ್‌ಸುಖ್ ಪಟೇಲನನ್ನು ಅಪಘಾತಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದರೂ ಸುಪ್ರೀಂ ಕೋರ್ಟ್ ಮಾರ್ಚ್ 2024 ರಲ್ಲಿ ಅವರಿಗೆ ಜಾಮೀನು ನೀಡಿದ ಕೆಲವೇ ದಿನಗಳಲ್ಲಿ ಆತ ಸ್ಥಳೀಯ ನ್ಯಾಯಾಲಯದ ಬಿಡುಗಡೆ ಆದೇಶದೊಂದಿಗೆ ಜೈಲಿನಿಂದಲೂ ಹೊರಬಂದರು.
ಕಥೆ ಇನ್ನೂ ಮುಗಿದಿಲ್ಲ! ಬಿಜೆಪಿ ತನ್ನ ಕೈಗೊಂಬೆ ಜೆಡಿ(ಯು) ನೊಂದಿಗೆ ಅಧಿಕಾರ ಹಂಚಿಕೊಂಡಿರುವ, ಇನ್ನು ಕೆಲವೇ ದಿನಗಳಲ್ಲಿ ಚುನಾವಣೆ ಎದುರಿಸಲಿರುವ ಬಿಹಾರದಲ್ಲಿ ಜುಲೈ 2024 ರ ಎರಡು ವಾರಗಳಲ್ಲೇ 12 ಸೇತುವೆಗಳು ಕುಸಿದವು. “ಬಿಚ್ಲಿ ಪುಲ್” ಎಂದೂ ಕರೆಯಲ್ಪಡುವ ಸೇತುವೆಯ ಕುಸಿತದಿಂದ ಕನಿಷ್ಠ 80000 ಜನರು ತೊಂದರೆಗೊಳಗಾದರು. ಮತ್ತೊಂದು ಸೇತುವೆಯನ್ನು 2012 ರಲ್ಲಿ ಮುಖ್ಯಮಂತ್ರಿ ಗ್ರಾಮೀಣ ಸಡಕ್ ಯೋಜನೆ ಅಡಿಯಲ್ಲಿ ನಿರ್ಮಿಸಲಾಗಿತ್ತು. ಆ ಪ್ರದೇಶದಿಂದ ಖಗಾರಿಯಾಗೆ ಪ್ರಯಾಣಿಸಲು ಯಾವುದೇ ರಸ್ತೆ ಸಂಪರ್ಕ ಇಲ್ಲದ ಕಾರಣ ಈ ಸೇತುವೆ ಸಂಪರ್ಕದ ಏಕೈಕ ಮಾರ್ಗವಾಗಿತ್ತು.
ಗಂಗಾ ನದಿಯ ಮೇಲೆ ನವಯುಗ್ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್, ಎಲ್ಲಾ ಹವಾಮಾನಗಳಿಗೆ ಆಗುವಂತಹ ವೇಗದ ಸೇತುವೆಯ ಒಂದು ಭಾಗವನ್ನು ನಿರ್ಮಿಸಿದ್ದು, ಅದೂ ಕುಸಿಯಿತು. ಈ ಕಾಮಗಾರಿಯನ್ನು ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಲಿಮಿಟೆಡ್ (ಬಿಎಸ್‌ಆರ್‌ಡಿಸಿಎಲ್) ನೋಡಿಕೊಳ್ಳುತ್ತಿತ್ತು. ಸಮಸ್ತಿಪುರದ ನಂದನಿ ಲಗುನಿಯಾ ರೈಲ್ವೆ ನಿಲ್ದಾಣದ ಬಳಿ ಈ ಸೇತುವೆ ಕುಸಿದಿತ್ತು. ಸೇತುವೆ ಕುಸಿದಿರುವುದು ತಿಳಿಯಬಾರದೆಂದು ಅಧಿಕಾರಿಗಳು ಬಿದ್ದಿರುವ ಭಾಗಗಳನ್ನು ಮಣ್ಣಿನ ಅಡಿಯಲ್ಲಿ ಹೂಳಲು ಪ್ರಯತ್ನಿಸುತ್ತಿದ್ದರೆಂಬ ಆರೋಪಗಳು ಕೇಳಿಬಂದವು.
ಹೀಗೆ ಕಾಮಗಾರಿಯ ಮಧ್ಯದಲ್ಲೇ ಕುಸಿದ ಬಿಹಾರದ ಅನೇಕ ಸೇತುವೆಗಳು ದೇಶದಾದ್ಯಂತ ಸುದ್ದಿಮಾಡಿವೆ, ಜೊತೆಗೆ ಕಾಮಗಾರಿಯಲ್ಲಿನ ಗುಣಮಟ್ಟದ ಕುಸಿತದ ಬಗ್ಗೆಯೂ ಅನೇಕ ಪ್ರಶ್ನೆ, ಆತಂಕಗಳನ್ನು ಎಬ್ಬಿಸಿವೆ. ಕಳಪೆ ಗುಣಮಟ್ಟದ ಸಾಮಗ್ರಿಗಳು, ನುರಿತ ಕಾರ್ಮಿಕರ ಕೊರತೆ, ಭ್ರಷ್ಟಾಚಾರ ಮತ್ತು ಅಸಮರ್ಪಕ ಯೋಜನಾ ನಿರ್ವಹಣೆಯ ಪಿಡುಗಿಗೆ ಈ ಸೇತುವೆಗಳು ಬಲಿಯಾಗಿವೆ. ಇಂತಹ ವೈಫಲ್ಯಗಳಿಂದ ಆರ್ಥಿಕ ನಷ್ಟ, ನಿರ್ಣಾಯಕ ಸಂಪರ್ಕ ಯೋಜನೆಗಳಲ್ಲಿ ವಿಳಂಬಗಳಾಗುವುದಲ್ಲದೇ ಜೀವಹಾನಿಯ ಭೀತಿ ಕಾಡುತ್ತದೆ.
ಸೇತುವೆಗಳು ಪದೇ ಪದೇ ಕುಸಿಯುತ್ತಿವೆ, ಆದರೆ ಅಪರಾಧಿಗಳನ್ನು ಗುರುತಿಸಿ ಕಠಿಣವಾಗಿ ಶಿಕ್ಷಿಸುತ್ತಿರುವ ಉದಾಹರಣೆಯೇ ಇಲ್ಲ! ಕೆಲವೇ ಕೆಲವು ಕೆಳ ದರ್ಜೆಯ ಅಧಿಕಾರಿಗಳನ್ನು ಕೆಂಗಣ್ಣಿಗೆ ಗುರಿಯಾಗಿಸಿ ಶಿಕ್ಷಿಸಲಾಗುತ್ತಿದೆಯೇ ಹೊರತು ಜವಾಬ್ದಾರಿ ಹೊರಬೇಕಾದ ಸರ್ಕಾರಗಳು ಸಲೀಸಾಗಿ ಪಾರಾಗುತ್ತಿವೆ. ಸರ್ಕಾರವು ಸಂಸ್ಥೆಗಳನ್ನು ಯಾವ ಆಧಾರದ ಮೇಲೆ ನೇಮಿಸುತ್ತಿದೆ? ಸರ್ಕಾರಿ ಅಧಿಕಾರಿಗಳಿಂದ ಕಾಮಗಾರಿಗಳ ತಪಾಸಣೆಗಳು ತೋರಿಕೆಗಲ್ಲದೆ ನೈಜವಾಗಿ ನಡೆಯುತ್ತಿವೆಯೆ? ಇಷ್ಟೆಲ್ಲಾ ತಪಾಸಣೆಗಳು ನಡೆದ ಮೇಲೂ ಸೇತುವೆಗಳು ನೆಲಕಚ್ಚುತ್ತಿರುವಾಗ ಮತ್ತಾವ ಕಾರಣ ಹುಡುಕಬೇಕು? ದೇವರ ಕೈವಾಡವೆಂದೇ?
2016 ರಲ್ಲಿ ಕೋಲ್ಕತ್ತಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆಯೊಂದು ಕುಸಿದಾಗ, ಪ್ರಧಾನಿ ಮೋದಿ, “ಅಂತಹ ದೊಡ್ಡ ಅವಘಢ ನಡೆದಿದೆ. ಆದರೂ ಆಕೆ(ಪಶ್ಚಿಮಬಂಗಾಳದ ಟಿ.ಎಂ.ಸಿ ಮುಖ್ಯಮಂತ್ರಿ) ಇನ್ನೊಬ್ಬರ ಮೇಲೆ ಆಪಾದನೆ ಹೊರೆಸುತ್ತಿದ್ದಾರೆ” ಎಂದು ದೂರಿದ್ದರು. ಹಿಂದಿನ ಸಿಪಿಐ(ಎಂ) ಆಡಳಿತದ ಅವಧಿಯಲ್ಲಿ ಸೇತುವೆಯ ಗುತ್ತಿಗೆ ನೀಡಲಾಗಿತ್ತು. ಈ ಮೇಲ್ಸೇತುವೆ ಪೂರ್ಣಗೊಂಡಿದ್ದಲ್ಲಿ ಮುಖ್ಯಮಂತ್ರಿ ಶ್ರೇಯಸ್ಸನ್ನು ತನ್ನ ಮುಡಿಗೇರಿಸಿಕೊಳ್ಳುತ್ತಿದ್ದರು ಎಂದು ಮಾನ್ಯ ಪ್ರಧಾನಿಗಳು ವ್ಯಂಗವಾಡಿದ್ದರು.
ಗುಜರಾತ್ ಅಥವಾ ಬಿಹಾರದಲ್ಲಿ ಸೇತುವೆಗಳು ಕುಸಿಯುತ್ತಿರುವಾಗ, ಪದೇ ಪದೇ ಘೋರ ರೈಲು ಅಪಘಾತಗಳು ಜರುಗುತ್ತಿರುವಾಗ, ಅಥವಾ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ನೂಕುನುಗ್ಗಲಿನಲ್ಲಿ 100 ಕ್ಕೂ ಹೆಚ್ಚು ಜನರು ಸಾವಿಗೀಡಾದಾಗ, ಪ್ರಧಾನ ಮಂತ್ರಿಗಳ ಇದೇ ತರ್ಕ ಅನ್ವಯಿಸುವುದಿಲ್ಲವೇಕೆ? ಇವೆಲ್ಲಕ್ಕೂ ಯಾರು ಜವಾಬ್ದಾರರು?
ಲಂಚ ಮತ್ತು ಅಧಿಕಾರಕ್ಕಾಗಿ ಕೊಳೆತ ಬಂಡವಾಳಶಾಹಿ ವ್ಯವಸ್ಥೆಯನ್ನು ರಕ್ಷಿಸುವ ಮತ್ತು ಅದರ ಸೇವೆಗೆಯ್ಯುವ ಯಾರೂ ಭ್ರಷ್ಟಾಚಾರ, ದುಷ್ಕೃತ್ಯಗಳಿಂದ ಪಾರಾಗಲು ಸಾಧ್ಯವಿಲ್ಲ. ರಾಜ್ಯ ಹಾಗೂ ಕೇಂದ್ರದ ಅಧಿಕಾರ ಯಾವ ಪಕ್ಷದ ಕೈಯಲ್ಲಾದರೂ ಇರಲಿ, ವ್ಯವಸ್ಥೆಗೆ ಸಂಪೂರ್ಣವಾಗಿ ಭ್ರಷ್ಟಾಚಾರದ ಪಿಡುಗು ಹತ್ತಿದೆ. ಯಾರೂ ಭ್ರಷ್ಟಾಚಾರದಿಂದ ಮುಕ್ತರಾಗಿಲ್ಲ ಅಥವಾ ಭ್ರಷ್ಟಾಚಾರ ಮತ್ತು ದುಷ್ಕೃತ್ಯಗಳಿಗೆ ಬೆಂಬಲ ನೀಡದೆ ಇರುವವರು ಯಾರೂ ಇಲ್ಲ. ಎಲ್ಲಾ ಬೂರ್ಜ್ವಾ ಪಕ್ಷಗಳು ಮತ್ತು ಅವುಗಳ ಅಧಿಕಾರದಾಹಿ ನಾಯಕರು ಒಂದೇ! ಎಲ್ಲರೂ ತಮ್ಮ ಹೆಗಲಿನಿಂದ ಜವಾಬ್ದಾರಿಯನ್ನು ಕೆಳಕ್ಕೆಸಿಯುವವರೇ! ತಮ್ಮ ಪಾಪದ ಕೆಲಸವನ್ನು ‘ದೈವೀ ಕೃತ್ಯ’ ಎನ್ನುವ ನಿರ್ಲಜ್ಜರು ಇವರು!