Loading..

ಗಿಗ್ ಆರ್ಥಿಕತೆ ಬಂಡವಾಳಶಾಹಿ ವ್ಯವಸ್ಥೆಯ ಹೊಸ ವೇತನ ಗುಲಾಮಗಿರಿ!

ಇವತ್ತಿನ ಪ್ರಪಂಚದಲ್ಲಿ, ಶಾಶ್ವತ ಉದ್ಯೋಗ, ಕೆಲಸದ ಭದ್ರತೆ, ಸಮಯಕ್ಕೆ ಸರಿಯಾಗಿ ಸಂಬಳ, ದಿನಕ್ಕೆ 8 ಗಂಟೆಗಳ ಕೆಲಸ, ಆರೋಗ್ಯ ವಿಮೆ ಮತ್ತು ನಿವೃತ್ತಿ ಪ್ರಯೋಜನ – ಇವೆಲ್ಲವೂ ಗತಕಾಲದ ವಿಷಯಗಳಾಗಿವೆ. ಈ ಹಿಂದೆ, ಕಡೇಪಕ್ಷ ಕಾನೂನಿನ ಪ್ರಕಾರವಾದರೂ, ಮ್ಯಾನೇಜ್‌ಮೆಂಟ್ ಅವರ ವಿಚಿತ್ರ ವರ್ತನೆಗಳ ವಿರುದ್ಧ ಕಾರ್ಮಿಕರ/ನೌಕರರ ಹಿತಾಸಕ್ತಿಗಳನ್ನು ರಕ್ಷಿಸುವ ಕೆಲವು ಟ್ರೇಡ್ ಯೂನಿಯನ್ ಹಕ್ಕುಗಳಿದ್ದವು. ಆದರೆ ಬಂಡವಾಳಶಾಹಿ ಜಾಗತೀಕರಣ ಶುರುವಾದ ನಂತರ, ಕಾರ್ಮಿಕರ ಸ್ಥಿತಿಯು ವಿನಾಶದ ಅಂಚಿಗೆ ತಲುಪಿದೆ. ವರ್ಷಪೂರ್ತಿ ನಿರಂತರವಾಗಿ ಕೆಲಸಗಳು ನಡೆಯುವ ವೃತ್ತಿಕ್ಷೇತ್ರಗಳಲ್ಲೂ, ಮಾಲೀಕರು ಒಪ್ಪಂದದ ಆಧಾರದ ಮೇಲೆ, ದಿನಗೂಲಿ ಆಧಾರದಲ್ಲಿ ಅಥವಾ ಗಂಟೆಗಳ ಆಧಾರದ ಮೇಲೆ ಸ್ವಲ್ಪವೇ ಕೆಲಸಕ್ಕೆ ಪಾವತಿಸುವ ಮೂಲಕ ಕೆಲಸಗಾರರನ್ನು ನೇಮಿಸಿಕೊಳ್ಳುತ್ತಿದ್ದಾರೆ. ಯೋಗ್ಯಮಟ್ಟದ ಜೀವನಾಂಶ ಕಲ್ಪಿಸುವುದು ಹಾಗಿರಲಿ, ನಮ್ಮ ದೇಶದ ವಿಶಾಲವಾದ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಲಕ್ಷಾಂತರ ಜನರಿಗೆ ಕನಿಷ್ಠ ವೇತನ ಸಿಗುವುದೂ ಖಚಿತವಾಗಿಲ್ಲ. ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಯಕರ್ತರು, ಕಟ್ಟಡ ನಿರ್ಮಾಣ ಕಾರ್ಮಿಕರು, ನಿರ್ಗತಿಕ ವಲಸೆ ಕಾರ್ಮಿಕರು ಮತ್ತು ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ತಾತ್ಕಾಲಿಕ ಕಾರ್ಮಿಕರು-ಇವರೆಲ್ಲರೂ ಒಂದೇ ವರ್ಗಕ್ಕೆ ಸೇರಿದ್ದಾರೆ ಹಾಗೂ ಅತ್ಯಂತ ಹೀನಾಯವಾದ ವೇತನ-ಗುಲಾಮಗಿರಿಯ ಬಲಿಪಶುಗಳಾಗಿದ್ದಾರೆ. ಇತ್ತೀಚೆಗೆ ಜಾರಿಯಾದ ನಾಲ್ಕು ಕರಾಳ ಕಾರ್ಮಿಕ ಸಂಹಿತೆಗಳು ಈ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿವೆ. ಡಿಜಿಟಲ್ ಯುಗವು ಶುರುವಾದ ಮೇಲೆ ಆನ್‌ಲೈನ್ ವ್ಯಾಪಾರ ಚಟುವಟಿಕೆಗಳು ಆರಂಭಗೊಂಡು, ಝೊಮ್ಯಾಟೊ, ಸ್ವಿಗ್ಗಿ, ಊಬರ್, ಓಲಾ, ಪೋರ್ಟರ್, ಜೆಪ್ಟೋ ಇತ್ಯಾದಿ ಡಿಜಿಟಲ್ ವೇದಿಕೆಗಳಿಂದಾಗಿ ಗಿಗ್ ನೌಕರ ಎಂಬ ಹೊಸ ವರ್ಗವು ಈ ಪಟ್ಟಿಗೆ ಸೇರ್ಪಡೆಯಾಗಿದೆ. ಇಲ್ಲಿನ ಉದ್ಯೋಗದ ಸ್ವರೂಪವು “ನೇಮಕ ಮತ್ತು ವಜಾ” (ಹೈರ್ ಅಂಡ್ ಫೈರ್) ಎಂಬ ನೀತಿಯಿಂದ ನಿಯಂತ್ರಿಸಲ್ಪಡುತ್ತದೆ. ನೀತಿ ಆಯೋಗದ ವರದಿಯ ಪ್ರಕಾರ, ಡೆಲಿವರಿ ಸೇವೆಗಳು, ಆನ್‌ಲೈನ್ ಆರ್ಡರ್ ಸರಬರಾಜು ಅಥವಾ ಕ್ಯಾಬ್ ಡ್ರೈವರ್‌ಗಳು, ಬೈಕ್ ಸವಾರರು ಮತ್ತು ಸ್ವತಂತ್ರ ಉದ್ಯೋಗಿ (ಫ್ರೀಲ್ಯಾನ್ಸರ್) ಆಗಿ ಕೆಲಸ ಮಾಡುವ ಗಿಗ್ ನೌಕರರ ಸಂಖ್ಯೆ 2029-30 ರ ವೇಳೆಗೆ 23.5 ಮಿಲಿಯನ್ (2.35 ಕೋಟಿ) ತಲುಪುವ ನಿರೀಕ್ಷೆಯಿದೆ. ಆಕ್ಸ್ಫರ್ಡ್ ಇಂಟರ್ನೆಟ್ ಇನ್‌ಸ್ಟಿಟ್ಯೂಟ್‌ನ ಆನ್‌ಲೈನ್ ಲೇಬರ್ ಇಂಡೆಕ್ಸ್ ಪ್ರಕಾರ, ವಿಶ್ವದ ಒಟ್ಟು ಆನ್‌ಲೈನ್ ಹೊರಗುತ್ತಿಗೆ ಕೆಲಸದ 24% ಭಾಗವನ್ನು ಭಾರತದ ಜನರೇ ನಿರ್ವಹಿಸುತ್ತಿದ್ದಾರೆ. ಆ ಮೂಲಕ, ಈ ವಲಯದಲ್ಲಿ ವಿಶ್ವದ ಅತಿದೊಡ್ಡ ಪೂರೈಕೆದಾರ ದೇಶವಾಗಿದೆ.
ಗಿಗ್ ನೌಕರರ ಸಂಖ್ಯೆ ಹೆಚ್ಚುತ್ತಿದೆ-ಏಕೆ?
ಸಾಧ್ಯವಾದಷ್ಟು ಹೆಚ್ಚು ಲಾಭ ಗಳಿಸುವ ಉದ್ದೇಶದಿಂದ, ಬಂಡವಾಳಶಾಹಿ ಆರ್ಥಿಕತೆಯು ಕಾರ್ಮಿಕ ವರ್ಗವನ್ನು ಬಡತನಕ್ಕೆ ದೂಡುತ್ತದೆ ಮತ್ತು ಅವರ ಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಹಾಗಾಗಿ, ಮಾರುಕಟ್ಟೆಯಲ್ಲಿನ ನಿರಂತರ ಕುಸಿತದಿಂದ ಬಾಧಿತರಾದ ಆಡಳಿತಾರೂಢ ಹಣಕಾಸು ದೊರೆಗಳು, ಶಾಶ್ವತ ಕಾರ್ಯಪಡೆಯನ್ನು ಕಡಿಮೆ ಮಾಡುವ ಮೂಲಕ ಮತ್ತು ಸುಧಾರಿತ ತಂತ್ರಜ್ಞಾನವನ್ನು ಬಳಸುವ ಮೂಲಕ ಉತ್ಪಾದನಾ ವೆಚ್ಚವನ್ನು ಕಡಿತಗೊಳಿಸುತ್ತಿದ್ದಾರೆ. ಆದರೂ, ಸ್ವಲ್ಪ ದೈಹಿಕ ಶ್ರಮದ ಅವಶ್ಯಕತೆ ಇನ್ನೂ ಇದೆ ಮತ್ತು ಈ ಅವಶ್ಯಕತೆಯನ್ನು ಬಿಡಿಗಾಸಿನ ಸಂಬಳದ ಮೂಲಕ ಮತ್ತು ಯಾವುದೇ ಸೇವಾ ಷರತ್ತುಗಳಿಲ್ಲದ ಗುತ್ತಿಗೆ ಅಥವಾ ತಾತ್ಕಾಲಿಕ ಕೆಲಸಗಾರರ ಮೂಲಕ ಪೂರೈಸಲಾಗುತ್ತಿದೆ. ಅವರಿಗೆ ಸೇವೆಯ ಅವಧಿ, ಕೆಲಸದ ಸಮಯ, ಸಾಮಾಜಿಕ ಸೌಲಭ್ಯಗಳು, ಇತ್ಯಾದಿಗಳನ್ನು ನಿರ್ದಿಷ್ಟಪಡಿಸುವುದಿಲ್ಲ. ಇದಲ್ಲದೇ, ಡೆಲಿವರಿ ಸ್ಥಳಕ್ಕೆ ಅವರು ಯಾವಾಗ ಬರುತ್ತಾರೆ, ಯಾವಾಗ ಹೊರಡುತ್ತಾರೆ, ಅವರ ಡೆಲಿವರಿ ಹೇಗೆ ಆಯಿತು, ಇತ್ಯಾದಿಗಳನ್ನು ಗಮನಿಸುವ ಮೂಲಕ – ಬೇರೆ ರೀತಿಯಲ್ಲಿ ಹೇಳುವುದಾದರೆ ಅವರ ಚಲನವಲನದ ಟ್ರಾಕಿಂಗ್ ಮಾಡುವ ಮೂಲಕ, ಅವರು ಡಿಜಿಟಲ್ ಪ್ರಕ್ರಿಯೆಯ ನಿರಂತರ ಕಣ್ಗಾವಲಿನಲ್ಲಿ ಇರುತ್ತಾರೆ. ತಾವು ಅಂದುಕೊಂಡಂತೆ ಕೆಲಸ ಆಗಲೇಬೇಕೆಂದು ಖಾತ್ರಿಪಡಿಸಿಕೊಳ್ಳಲು ತಮ್ಮದೇ ಕೆಲಸಗಾರರ ಮೇಲೆ ಗೂಢಚಾರಿಕೆ ನಡೆಸುತ್ತಾರೆ! ನಿರುದ್ಯೋಗದ ಸಮಸ್ಯೆ ಹೆಚ್ಚುತ್ತಾ ಹೋದಂತೆ, ನಿರುದ್ಯೋಗಿಗಳು ತಾವು ಮತ್ತು ತಮ್ಮ ಕುಟುಂಬದವರು ಹೊಟ್ಟೆ ಹೊರೆಯಲು ಸಾಕಾಗುವಷ್ಟು ಸಂಬಳ ಸಿಗುವ ಯಾವುದೇ ರೀತಿಯ ಕೆಲಸವನ್ನು ವಿಧಿಯಿಲ್ಲದೇ ಒಪ್ಪಿಕೊಳ್ಳಲು ತಯಾರಿರುತ್ತಾರೆ ಎಂದು ಬಂಡವಾಳಶಾಹಿ ವರ್ಗಕ್ಕೆ ಗೊತ್ತು. ಹಾಗಾಗಿ, ನಿರ್ದಯ ಶೋಷಣೆ ಮಾಡಲು ಅವರಿಗೆ ಈಗಂತೂ ಸಾಕಷ್ಟು ಅವಕಾಶಗಳಿವೆ. ಆಕ್ಸ್ಫರ್ಡ್ ಇಂಟರ್ನೆಟ್ ಇನ್‌ಸ್ಟಿಟ್ಯೂಟ್‌ನ ಫೇರ್ ವರ್ಕ್ ರಿಸರ್ಚ್ ಪ್ರಾಜೆಕ್ಟ್-2022, ಇಂತಹ 11 ಭಾರತೀಯ ಡಿಜಿಟಲ್ ಪ್ಲಾಟ್‌ಫಾರ್ಮ್ ಗಳನ್ನು ಅಧ್ಯಯನ ಮಾಡಿದೆ ಮತ್ತು ಅದರಲ್ಲಿ ಒಂದೇ ಒಂದು ಪ್ಲಾಟ್‌ಫಾರ್ಮ್ ಕೂಡಾ ತಮ್ಮ ಗಿಗ್ ನೌಕರರಿಗೆ ಕನಿಷ್ಠ ವೇತನ ಅಥವಾ ಸ್ಥಳೀಯ ಜೀವನ ನಿರ್ವಹಣಾ ವೇತನವನ್ನು ಒದಗಿಸುವುದಿಲ್ಲ ಎಂದು ತೀರ್ಮಾನಿಸಿದೆ. ಇದಲ್ಲದೆ, ಇನ್ನೊಂದಿಷ್ಟು ಹೆಚ್ಚಿನ ದುಡ್ಡು ಕೊಡುತ್ತೇವೆ ಎಂಬ ಆಮಿಷ ಒಡ್ಡಿದರೆ, ಈ ಗಿಗ್ ನೌಕರರು ಹೆಚ್ಚು ಸಮಯ ಕೆಲಸ ಮಾಡುವಂತೆ ಪುಸಲಾಯಿಸಬಹುದು ಎಂಬುದೂ ಸಹ ಆಡಳಿತ ವರ್ಗಕ್ಕೆ ಗೊತ್ತು. ‘ಜಾಸ್ತಿ ಡೆಲಿವರಿ ಮಾಡಿ, ಜಾಸ್ತಿ ದುಡ್ಡು ಮಾಡಿ’ ಎಂಬ ರಂಗುರಂಗಾದ ಆಶ್ವಾಸನೆಯಿಂದಾಗಿ, ಆರೋಗ್ಯಕ್ಕೆ ಆಗುವ ತೊಂದರೆಗಳು, ಪ್ರತಿಕೂಲ ಹವಾಮಾನ ಮತ್ತು ಇತರ ತಾಪತ್ರಯಗಳನ್ನು ಕಡೆಗಣಿಸಿ ಗಿಗ್ ನೌಕರರು ಜಾಸ್ತಿ ಹೊತ್ತು ಕೆಲಸ ಮಾಡಬೇಕಾದ ಪರಿಸ್ಥಿತಿ ಬರುತ್ತದೆ.
ಅಷ್ಟೇ ಅಲ್ಲ, ತಮ್ಮ ದುರುದ್ದೇಶವನ್ನು ಮರೆಮಾಚಲು, ಮಾಲೀಕರು ಈ ಗಿಗ್ ನೌಕರರನ್ನು ಪಾಲುದಾರರು, ಸಹವರ್ತಿಗಳು, ಏಜೆಂಟ್‌ಗಳು, ಸ್ವತಂತ್ರ ಗುತ್ತಿಗೆದಾರರು, ಟೆಕ್ ಅಗ್ರಿಗೇಟರ್‌ಗಳು, ಸಹಾಯಕರು, ಡಿಜಿಟಲ್ ಮಧ್ಯವರ್ತಿಗಳು, ಮುಂತಾದ ಬಣ್ಣಬಣ್ಣದ ಪದಗಳಿಂದ ಉಲ್ಲೇಖಿಸುತ್ತಾರೆ. ಈಗಾಗಲೇ ಇರುವ ಕಾನೂನುಗಳಿಂದ ಗಿಗ್ ನೌಕರರಿಗೆ ಯಾವುದೇ ಹಕ್ಕುಗಳು ಅಥವಾ ರಕ್ಷಣೆಗಳು ಸಿಗದಂತೆ ಮಾಡುವುದೇ ಇದರ ಹಿಂದಿನ ಹುನ್ನಾರವಾಗಿದೆ. ಬಹಳಷ್ಟು ಸಂದರ್ಭಗಳಲ್ಲಿ, ಗಿಗ್ ನೌಕರರಿಗೆ ಅವರು ನಿರ್ವಹಿಸುವ ಕೆಲಸಗಳು/ಡೆಲಿವರಿಗಳು/ರೈಡ್‌ಗಳ ಸಂಖ್ಯೆಯನ್ನು ಆಧರಿಸಿ ವೇತನ ಪಾವತಿಸುವುದರಿಂದ, ಕನಿಷ್ಠ ವೇತನಕ್ಕೆ ಸಂಬಂಧಿಸಿದ ಕಾನೂನು ಅವರಿಗೆ ಅನ್ವಯಿಸುವುದಿಲ್ಲ.
ಉದ್ಯೋಗದ ಫ್ಲೆಕ್ಸಿಬಿಲಿಟಿ – ಕೇವಲ ಒಂದು ಹಗಲುಗನಸು
ಸುಳ್ಳು-ಆಶ್ವಾಸನೆ ಕೊಡುವುದರಲ್ಲಿ ಗುಳ್ಳೇನರಿಗಳು ಎತ್ತಿದ ಕೈ ಎನ್ನುವ ಹಾಗೆ, “ಗಿಗ್ ನೌಕರರು ಯಾವ ಕಂಪನಿಯಲ್ಲಿ ಬೇಕಾದರೂ, ಯಾವ ಕೆಲಸವನ್ನಾದರೂ ಮಾಡುವ ಫ್ಲೆಕ್ಸಿಬಿಲಿಟಿ ಹೊಂದಿದ್ದಾರೆ. ಅವರು ಪ್ರತಿದಿನ ನಿಗದಿತ ಸಮಯದಲ್ಲಿ ಕಚೇರಿ ಅಥವಾ ಕೆಲಸದ ಸ್ಥಳಕ್ಕೆ ಹೋಗಬೇಕಾಗಿಲ್ಲ, ಅದರ ಬದಲು, ಅವರಿಗೆ ಯಾವಾಗ ಸಾಧ್ಯವೋ ಆವಾಗ ದೂರದಿಂದಲೇ ಕೆಲಸ ಮಾಡಬಹುದು. ಇದಲ್ಲದೆ, ಅವರು ಒಂದೇ ಸಮಯದಲ್ಲಿ ಅನೇಕ ಕಂಪನಿಗಳಿಗೆ ಕೆಲಸ ಮಾಡಬಹುದು ಮತ್ತು ಹೆಚ್ಚುವರಿ ಆದಾಯ ಗಳಿಸಬಹುದು ಅಥವಾ ಇದನ್ನು ಅರೆಕಾಲಿಕ ಕೆಲಸ ಎಂದುಕೊಳ್ಳಬಹುದು.” ಎಂಬ ಅಭಿಪ್ರಾಯವನ್ನು ಆಡಳಿತಾರೂಢ ಬಂಡವಾಳಶಾಹಿ ವರ್ಗವು ತೇಲಿಬಿಟ್ಟಿದೆ.
ಮೇಲ್ನೋಟಕ್ಕೆ, ಈ ವಾದಗಳು ಬಹಳ ಸರಿಯಾಗಿವೆ ಎನಿಸುತ್ತದೆ. ಆದರೆ ವಾಸ್ತವವೆಂದರೆ, 88% ಗಿಗ್ ನೌಕರರಿಗೆ ಇದು ಹೆಚ್ಚುವರಿ ಕೆಲಸವಲ್ಲ, ಬದಲಾಗಿ ಇದು ಆದಾಯದ ಪ್ರಮುಖ ಮೂಲವಾಗಿದೆ! ಅವರಿಗೆ ಬೇರೆ ಯಾವುದೇ ಸೂಕ್ತ ಉದ್ಯೋಗ ಸಿಗುತ್ತಿಲ್ಲ ಎಂಬ ಕಾರಣಕ್ಕೆ, ಅವರು ಇಂತಹ ತಾತ್ಕಾಲಿಕ ಕೆಲಸಗಳನ್ನು ಮಾಡಲೇಬೇಕಾಗಿದೆ. ‘ಇಂಡಿಯಾ ರೇಟಿಂಗ್ಸ್’ ಎಂಬ ಕ್ರೆಡಿಟ್ ಮಾರುಕಟ್ಟೆ ರೇಟಿಂಗ್ ಏಜೆನ್ಸಿ ನಡೆಸಿದ ಅಧ್ಯಯನದ ಪ್ರಕಾರ, ನೋಟು ಅಮಾನ್ಯೀಕರಣ, ಜಿಎಸ್‌ಟಿ ಅಳವಡಿಕೆ ಮತ್ತು ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದಾಗಿ 2015-16 ಮತ್ತು 2022-23ರ ನಡುವೆ ದೇಶದಲ್ಲಿ 63 ಲಕ್ಷ ಅಸಂಘಟಿತ ವಲಯದ ಉದ್ಯಮಗಳು ಮುಚ್ಚಲ್ಪಟ್ಟಿದ್ದು, ಇದರಿಂದಾಗಿ 1.6 ಕೋಟಿ ಉದ್ಯೋಗಗಳು ನಷ್ಟವಾಗಿವೆ. ಇದು ಈಗಾಗಲೇ ಹೆಚ್ಚುತ್ತಿರುವ ನಿರುದ್ಯೋಗಿಗಳ ಸಂಖ್ಯೆಗೆ ಹೊಸ ಸೇರ್ಪಡೆಯಾಗಿದೆ! ಆದ್ದರಿಂದ, ನಮ್ಮ ದೇಶದಲ್ಲಿ ನಿರುದ್ಯೋಗಿ ಯುವಕರು ಎಲ್ಲಾದರೂ ಕೆಲಸ ಸಿಕ್ಕೀತೆಂಬ ಧಾವಂತದಲ್ಲಿ ಪರಸ್ಪರ ಪೈಪೋಟಿಗೆ ಇಳಿದಿರುವಾಗ, ಇಲ್ಲಿ ಫ್ಲೆಕ್ಸಿಬಿಲಿಟಿಯ ಪ್ರಶ್ನೆಯೇ ಬರುವುದಿಲ್ಲ. ಬದಲಾಗಿ, ಇದು ಹೊಟ್ಟೆ ಹೊರೆಯಲು ಮಾಡುತ್ತಿರುವ ಅನಿವಾರ್ಯ ಕೆಲಸ ಎಂದೇ ಪರಿಗಣಿಸಬೇಕು.
ಅತ್ಯಧಿಕ ಶೋಷಣೆ
ಒಟ್ಟಾರೆಯಾಗಿ, ಬಂಡವಾಳಶಾಹಿ ಮಾಲೀಕರು ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳಿಂದ ಕಾರ್ಮಿಕರನ್ನು ಶೋಷಣೆ ಮಾಡಲು ಗಿಗ್ ಆರ್ಥಿಕತೆಯು ಸುಲಭ ಮಾರ್ಗಗಳನ್ನು ಒದಗಿಸುತ್ತದೆ. ಆನ್‌ಲೈನ್ ಗಿಗ್ ಪ್ಲಾಟ್‌ಫಾರ್ಮ್ ಗಳು ಬಂದಮೇಲೆ ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ ಎಂದು ಸಾಕಷ್ಟು ಪ್ರಚಾರ ಮಾಡಲಾಗುತ್ತದೆ. ಆದರೆ ನಿಜ ಏನೆಂದರೆ, ಪ್ರತಿ ಡೆಲಿವರಿ ಅಥವಾ ಸವಾರಿಗಾಗಿ 15 ರಿಂದ 25% ಕಮಿಷನ್ ವಿಧಿಸುವ ಮೂಲಕ, ಈ ವ್ಯವಹಾರದಲ್ಲಿ ತೊಡಗಿರುವ ತಂತ್ರಜ್ಞಾನ ಕಂಪನಿಗಳೇ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತಿವೆ. ಕೆಲಸ ಮುಗಿಸಿಕೊಂಡು ಮನೆಗೆ ಹೊರಡುವಾಗ, ಈಗ ಜೀವನ ನಡೆಸುವುದು ತುಂಬಾ ಕಷ್ಟವಾಗುತ್ತಿದೆ ಎಂದು ಎಷ್ಟೋ ಜನ ಗಿಗ್ ನೌಕರರು ಕಂಡುಕೊಂಡಿದ್ದಾರೆ. ಅಂತಹ ಒಬ್ಬ ಗಿಗ್ ನೌಕರರು ಕಣ್ಣಾಲಿಗಳನ್ನು ತೇವ ಮಾಡಿಕೊಳ್ಳುತ್ತಾ ಹೀಗೆ ಹೇಳಿದ್ದಾರೆ: “ನಮ್ಮಲ್ಲಿ ಕೆಲವರು ದಿನಕ್ಕೆ 16 ಗಂಟೆ ಕೆಲಸ ಮಾಡುತ್ತೇವೆ, ಆದರೆ ಪ್ರತಿ ಆರ್ಡರ್‌ಗೆ ಕಮಿಷನ್ ಕಡಿತಗೊಳಿಸಿದಾಗ, ನಾವು ಗಳಿಸಿದ 50 ರೂಪಾಯಿಯಲ್ಲಿ ನಮ್ಮ ಪಾಲಿಗೆ ಬರುವುದು 20 ರೂಪಾಯಿ ಮಾತ್ರ, ಅಂದರೆ ಇಡೀ ದಿನದ ಸಂಪಾದನೆ ಸುಮಾರು 300 ರೂಪಾಯಿ ಆಗಬಹುದು. ಇಷ್ಟು ಸಂಪಾದನೆಯಲ್ಲಿ ಜೀವನ ನಡೆಸುವುದು ಕಷ್ಟ ಅನಿಸುತ್ತದೆ. ನಾವು ತಿಂಗಳಿಗೆ 9,000 ರೂಪಾಯಿ ಗಳಿಸಿದರೂ, ವಾಹನದ ಪೆಟ್ರೋಲ್ ಖರ್ಚು, ರಿಪೇರಿ, ಇತ್ಯಾದಿಗೆ 3,500 ರೂಪಾಯಿ ಖರ್ಚಾದ ನಂತರ ನಮ್ಮ ಬಳಿ ಉಳಿಯುವುದು ತಿಂಗಳಿಗೆ 6,500 ರೂಪಾಯಿ ಮಾತ್ರ. ಈ ಹಣದಿಂದ ನಮ್ಮ ಇಡೀ ಕುಟುಂಬವನ್ನು ಸಾಕುವುದು ಹಾಗಿರಲಿ, ನಮ್ಮ ದಿನನಿತ್ಯದ ಊಟ-ತಿಂಡಿಗೂ ಇದು ಸಾಕಾಗುವುದಿಲ್ಲ.” ಗಿಗ್ ಆರ್ಥಿಕತೆಯ ಅಮಾನವೀಯ ಶೋಷಣೆ ಹೇಗಿರುತ್ತದೆ ಎಂಬುದನ್ನು ಈ ಮಾತುಗಳೇ ಹೇಳುತ್ತಿವೆ.
ಗಿಗ್ ನೌಕರರಿಗೆ ಇರುವ ಅಪಾಯಗಳು
ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಒಂದು ಘಟನೆಯು, ಝೊಮ್ಯಾಟೊ ಕಂಪನಿಯ ಮ್ಯಾನೇಜ್‌ಮೆಂಟ್‌ನ ವರ್ತನೆ ಹಾಗೂ ಗಿಗ್ ನೌಕರರ ಕೆಲಸದಲ್ಲಿನ ಅಪಾಯಗಳ ಮೇಲೆ ಬೆಳಕು ಚೆಲ್ಲಿದೆ. ಒಂದು ಆರ್ಡರ್ ಡೆಲಿವರಿ ಮಾಡಲು ಹೊರಟಿದ್ದ ಒಬ್ಬ ಡೆಲಿವರಿ ನೌಕರ, ಭಾರೀ ಮಳೆ ಸುರಿಯುತ್ತಿದ್ದಾಗ ಅಚಾನಕ್ಕಾಗಿ ಚರಂಡಿಗೆ ಬಿದ್ದರು. ಪ್ರವಾಹದ ನೀರಿನಲ್ಲಿ ಅವರ ಬೈಕ್ ಮತ್ತು ಮೊಬೈಲ್ ಫೋನ್ ಕೊಚ್ಚಿಕೊಂಡು ಹೋದವು. ಅದೃಷ್ಟವಶಾತ್, ಅವರ ಜೀವ ಉಳಿಯಿತು. ಆದರೆ ಝೊಮ್ಯಾಟೊ ಕಂಪನಿಯು ಆ ನೌಕರನ ಪುನರ್ವಸತಿಯ ಯಾವುದೇ ಜವಾಬ್ದಾರಿ ತೆಗೆದುಕೊಳ್ಳಲು ನಿರಾಕರಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ವರ್ಕರ್ಸ್ ಯೂನಿಯನ್‌ನ ಸ್ಥಾಪಕ ಅಧ್ಯಕ್ಷರಾದ ಶೇಖ್ ಸಲಾವುದ್ದೀನ್ ಅವರು, “ಇದು ಒಂದು ಅಪಘಾತವಲ್ಲ – ಕೆಲಸಗಾರರ ಸುರಕ್ಷತೆಗಿಂತ ತಮ್ಮ ಲಾಭಕ್ಕೆ ಆದ್ಯತೆ ನೀಡುವ ಪ್ಲಾಟ್‌ಫಾರ್ಮ್ ಗಳಿಂದ ಆಗುವ ನೇರ ಪರಿಣಾಮ” ಎಂದು ಹೇಳಿದರು. ಮತ್ತೊಂದು ಘಟನೆಯಲ್ಲಿ, ಒಬ್ಬ ಸ್ವಿಗ್ಗಿ ಡೆಲಿವರಿ ಹುಡುಗ ಅಪಾರ್ಟ್ ಮೆಂಟ್‌ನಲ್ಲಿ ಡೆಲಿವರಿ ಮಾಡುವಾಗ ಸಾಕು ನಾಯಿಯು ಆತನ ಮೇಲೆ ದಾಳಿ ಮಾಡಿತು. ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ, ಆತನು ಮೂರನೇ ಮಹಡಿಯಿಂದ ಜಿಗಿದು ಆಸ್ಪತ್ರೆಯಲ್ಲಿ ಮರಣ ಹೊಂದಿದನು. ಈ ಸಂದರ್ಭದಲ್ಲಿ, ಆರ್ಡರ್ ಮಾಡಿದ್ದ ಗ್ರಾಹಕರು ನ್ಯಾಯಾಲಯದ ಹೊರಗೆ ಇತ್ಯರ್ಥ ಮಾಡಿಕೊಳ್ಳುವ ಸಲುವಾಗಿ 5 ಲಕ್ಷ ರೂಪಾಯಿ ಪರಿಹಾರ ಒದಗಿಸಿದರು, ಆದರೆ ಸ್ವಿಗ್ಗಿ ಕಂಪನಿಯು ನಯಾಪೈಸೆ ಪರಿಹಾರವನ್ನೂ ಪಾವತಿಸಲಿಲ್ಲ. ಇನ್ನು ನಮ್ಮ ಜನಪ್ರತಿನಿಧಿಗಳು, ಗಿಗ್ ಆರ್ಥಿಕತೆಯ ಬಂಪರ್ ಬೆಳವಣಿಗೆಯ ಬಗ್ಗೆ ಬೊಬ್ಬೆ ಹೊಡೆಯುತ್ತಾರೆಯೇ ಹೊರತು, ಈ ಬಡಪಾಯಿ ಕೆಲಸಗಾರರ ದುಃಖಗಳ ಕಡೆಗೆ ಗಮನವನ್ನೇ ಕೊಡುತ್ತಿಲ್ಲ.
ಹೋರಾಟದ ಹಾದಿಯಲ್ಲಿ ಗಿಗ್ ನೌಕರರು!
ಆದರೆ ಸಮಾಧಾನಕರ ಸಂಗತಿ ಏನೆಂದರೆ, ಗಿಗ್ ನೌಕರರು ಕೈ ಕಟ್ಟಿ ಕೂತಿಲ್ಲ. ಅವರು ನಿಧಾನವಾಗಿ ಒಟ್ಟುಗೂಡುತ್ತಿದ್ದಾರೆ ಮತ್ತು ಹಲವಾರು ರಾಜ್ಯಗಳಲ್ಲಿ ತಮ್ಮ ಆಕ್ರೋಶದ ಧ್ವನಿ ಎತ್ತುತ್ತಿದ್ದಾರೆ. ಕರ್ನಾಟಕ, ತೆಲಂಗಾಣ, ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ, ಗಿಗ್ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್ ಕೆಲಸಗಾರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸುತ್ತಾ ಧರಣಿಗಳು, ಮುಷ್ಕರಗಳು ಮತ್ತು ಪ್ರತಿಭಟನೆಗಳನ್ನು ನಡೆಸಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ, ಸುಮಾರು 150 ಬ್ಲಿಂಕಿಟ್ ಗಿಗ್ ನೌಕರರು ವಾರಣಾಸಿಯಲ್ಲಿ ನ್ಯಾಯಯುತ ವೇತನ, ಉತ್ತಮ ಕೆಲಸದ ಪರಿಸ್ಥಿತಿಗಳು ಮತ್ತು ಹತ್ತಿ ಸಮವಸ್ತ್ರಕ್ಕಾಗಿ ಮುಷ್ಕರ ನಡೆಸಿದರು. ಝೊಮ್ಯಾಟೊ ಮಾಲೀಕತ್ವದ ದಿನಸಿ ವಿತರಣಾ ಪ್ಲಾಟ್‌ಫಾರ್ಮ್ ಆಗಿರುವ ಈ ಬ್ಲಿಂಕಿಟ್‌ನ ಆಡಳಿತ ಮಂಡಳಿಯು ಈ ಮುಷ್ಕರವನ್ನು ಕಾರಣವಾಗಿ ನೀಡಿ, 150 ಕೆಲಸಗಾರರ ಐಡಿಗಳನ್ನು ಬ್ಲಾಕ್ ಮಾಡಿತು. ಮುಷ್ಕರನಿರತ ಕೆಲಸಗಾರರಿಗೆ ಪೊಲೀಸ್ ಕ್ರಮದ ಬೆದರಿಕೆಯನ್ನೂ ಹಾಕಿತು. ಆದರೆ, ನೌಕರರು ತಮ್ಮ ಬೇಡಿಕೆಗಳಲ್ಲಿ ರಾಜಿ ಮಾಡಿಕೊಳ್ಳಲಿಲ್ಲ. ಕೊನೆಯದಾಗಿ, ಸಾರ್ವಜನಿಕ ಒತ್ತಡ ಮತ್ತು ನೌಕರರ ಹೋರಾಟದ ಒಗ್ಗಟ್ಟಿಗೆ ಸೋಲೊಪ್ಪಿಕೊಂಡು, ಕಂಪನಿಯು ಅವರ ಐಡಿಗಳನ್ನು ಮತ್ತೆ ಸಕ್ರಿಯಗೊಳಿಸಬೇಕಾಯಿತು. ಅದೇ ರೀತಿ, ಮೇ 2025 ರಲ್ಲಿ, ಹೈದರಾಬಾದ್‌ನ ನೂರಾರು ಜೆಪ್ಟೋ ಡೆಲಿವರಿ ನೌಕರರು, ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ವರ್ಕರ್ಸ್ ಯೂನಿಯನ್ ನೇತೃತ್ವದಲ್ಲಿ, ಅನ್ಯಾಯಯುತ ವೇತನ ಮತ್ತು ಕಂಪನಿಯ ಶೋಷಣಾತ್ಮಕ ನಡವಳಿಕೆ ವಿರುದ್ಧ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು. ಕಾರ್ಮಿಕ ಇಲಾಖೆಗೆ ಸಲ್ಲಿಸಿದ ಮನವಿ ಪತ್ರದಲ್ಲಿ, “ಬೇಗ ಡೆಲಿವರಿ ಆದರೆ ಪ್ರತಿಫಲವಂತೆ, ಆದರೆ ಸುರಕ್ಷತೆ ಬಗ್ಗೆ ಚಿಂತೆ ಇಲ್ಲವಂತೆ” ಎಂದು ಆ ಯೂನಿಯನ್ ಆರೋಪಿಸಿತು. ಗ್ರಾಹಕರ ರೇಟಿಂಗ್‌ಗಳ ಆಧಾರದ ಮೇಲೆ ಏಕಪಕ್ಷೀಯ ದಂಡಗಳು, ಖಾತೆ ಅಮಾನತು ಮಾಡುವುದರಲ್ಲಿ ಪಾರದರ್ಶಕತೆಯ ಕೊರತೆ, ಇಎಸ್‌ಐ ಮತ್ತು ಪಿಎಫ್ ಕವರೇಜ್ ಇಲ್ಲದಿರುವುದು, ಮತ್ತು ದೀರ್ಘಾವಧಿಯ ಪಾಳಿಗಳಲ್ಲಿ ವಿಶ್ರಾಂತಿ ಕೊಠಡಿಗಳು ಇಲ್ಲದಿರುವುದು, ಇಂತಹ ಹಲವಾರು ನೋವುಗಳನ್ನು ಅವರು ತೋಡಿಕೊಂಡಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿ ಗಿಗ್ ನೌಕರರ ನಿರಂತರ ಹೋರಾಟದಿಂದಾಗಿ, ರಾಜಸ್ಥಾನ ಮತ್ತು ಕರ್ನಾಟಕದಂತಹ ರಾಜ್ಯ ಸರ್ಕಾರಗಳು ಗಿಗ್ ನೌಕರರಿಗೆ ಸಾಮಾಜಿಕ ಭದ್ರತೆ, ಔದ್ಯೋಗಿಕ ಆರೋಗ್ಯ ಮತ್ತು ಸುರಕ್ಷತೆ ಹಾಗೂ ವಿವಾದ ಪರಿಹಾರ ಕ್ರಮಗಳನ್ನು ಒದಗಿಸಲು ಕೆಲವು ಕಾನೂನುಗಳನ್ನು ಅಳವಡಿಸಿಕೊಂಡಿವೆ. ತೆಲಂಗಾಣ ರಾಜ್ಯ ಸರ್ಕಾರವು ವಿಧಾನಸಭೆಯಲ್ಲಿ ಮಂಡಿಸಲು ಒಂದು ಮಸೂದೆಯನ್ನು ಸಿದ್ಧಪಡಿಸಿದೆ. ಆದರೆ, ಈ ಎಲ್ಲಾ ಶಾಸನಗಳಲ್ಲಿರುವ ನಿಬಂಧನೆಗಳು ಕಾಗದದ ಮೇಲಷ್ಟೇ ಉಳಿದಿವೆ. ರಾಷ್ಟ್ರೀಯ ಶಾಸನಸಭೆ ಮಟ್ಟದಲ್ಲಿಯೂ, ಗಿಗ್ ನೌಕರರನ್ನು ಒಂದು ಪ್ರತ್ಯೇಕ ಪ್ರಕಾರದ ನೌಕರರೆಂದು ಭಾರತೀಯ ಸಾಮಾಜಿಕ ಭದ್ರತಾ ಸಂಹಿತೆ-2020 ಗುರುತಿಸುತ್ತದೆ, ಆದರೆ “ಪ್ಲಾಟ್‌ಫಾರ್ಮ್ ನೌಕರರು” “ಸಾಂಪ್ರದಾಯಿಕ ಉದ್ಯೋಗದಾತ-ಉದ್ಯೋಗಿ ಸಂಬಂಧದ ಹೊರಗಿನವರು” ಎಂದು ವ್ಯಾಖ್ಯಾನಿಸುತ್ತದೆ. ಕಾನೂನಾತ್ಮಕ ಆದೇಶಗಳು, ಸಾರ್ವತ್ರಿಕ ವ್ಯಾಪ್ತಿ ಮತ್ತು ಹೊಣೆಗಾರಿಕೆಯ ಕ್ರಮಗಳ ಕೊರತೆಯಿಂದಾಗಿ ಈ ಕಾನೂನು ಸಾಕಷ್ಟು ಟೀಕೆಗೆ ಒಳಗಾಗಿದೆ.
ಹಾಗಾಗಿ, ಗಿಗ್ ನೌಕರರ ಎಲ್ಲ ಸಮಸ್ಯೆಗಳು ಮತ್ತು ಸವಾಲುಗಳನ್ನು ಪರಿಹರಿಸಲು ಒಂದು ಬಲಿಷ್ಠ ಮತ್ತು ಸಮಗ್ರ ಶಾಸನವನ್ನು ತಕ್ಷಣವೇ ಜಾರಿಗೊಳಿಸಬೇಕಾಗಿರುವುದು ಅತ್ಯವಶ್ಯಕ. ಅದೇ ಸಮಯದಲ್ಲಿ, ಜನಸಾಮಾನ್ಯರಾದ ನಾವೆಲ್ಲರೂ ಗಿಗ್ ನೌಕರರ ಪರವಾಗಿ ನಿಲ್ಲುವುದು ನಮ್ಮ ಕರ್ತವ್ಯ. ಅವರ ಜೀವನದಲ್ಲಿ ನೂರೆಂಟು ಕಷ್ಟಗಳಿದ್ದರೂ, ಸುರಿಮಳೆ-ತೀವ್ರ ಚಳಿ-ಬಿರುಬಿಸಿಲು ಏನೇ ಇದ್ದರೂ, ಅವರು ನಮ್ಮ ಆರ್ಡರ್ ಡೆಲಿವರಿ ಮಾಡಲು ನಮ್ಮ ಮನೆಯ ಬಾಗಿಲು ಬಡಿಯುತ್ತಾರೆ. ಅಂತಿಮವಾಗಿ, ಗಿಗ್ ನೌಕರರು ತಮ್ಮ ನ್ಯಾಯಯುತ ಚಳುವಳಿಯಲ್ಲಿ ಯಶಸ್ಸು ಸಾಧಿಸಲು ಸರಿಯಾದ ಕ್ರಾಂತಿಕಾರಿ ನಾಯಕತ್ವದ ಅಡಿಯಲ್ಲಿ ತಮ್ಮ ಹೋರಾಟದ ಒಗ್ಗಟ್ಟನ್ನು ಇನ್ನಷ್ಟು ಗಟ್ಟಿಗೊಳಿಸಬೇಕು.