ಒಡಿಸ್ಸಾದ ವಿದ್ಯಾರ್ಥಿನಿಯ ಆತ್ಮಾಹುತಿ! ನ್ಯಾಯಕ್ಕಾಗಿಯ ವಿಫಲ ಹೋರಾಟದ ಫಲಶ್ರುತಿ!!
ಒಡಿಶಾದ ಬಾಲಸೋರ್‌ನ ಫಕೀರ್ ಮೋಹನ್ ಕಾಲೇಜಿನ ವಿದ್ಯಾರ್ಥಿನಿ ಸೌಮ್ಯಶ್ರೀ ಬಿ.ಸಿ. ಪ್ರಾಂಶುಪಾಲರ ಕಚೇರಿಯ ಮುಂದೆಯೇ ಹಾಡು ಹಗಲೇ ಆತ್ಮದಹನ ಮಾಡಿಕೊಂಡ ಭೀಕರ ಘಟನೆ ದೇಶವನ್ನು ಬೆಚ್ಚಿಬೀಳಿಸಿದೆ. ಶೇ. 95ರಷ್ಟು ಸುಟ್ಟ ಗಾಯದಿಂದ 3 ದಿನಗಳ ನಂತರ, ಕಳೆದ ಜುಲೈ 14 ರಂದು ಭುವನೇಶ್ವರದಲ್ಲಿ ಆಕೆ ಕೊನೆಯುಸಿರೆಳೆದಳು. ಮಹಿಳಾ ಶಿಕ್ಷಣವನ್ನು ಪ್ರತಿಪಾದಿಸಿದ ಒಡಿಯಾದ ಸಮಾಜ ಸುಧಾರಕರಾದ ಫಕೀರ್ ಮೋಹನ್ ಸೇನಾಪತಿ ಅವರ ನೆನಪಿನಲ್ಲಿ ಸ್ಥಾಪಿಸಿದ ವಿದ್ಯಾಸಂಸ್ಥೆಯಲ್ಲಿ ಈ ದುರ್ಘಟನೆ ನಡೆದಿರುವುದು ನಿಜಕ್ಕೂ ಖೇದಕರ.
ಹಿನ್ನೆಲೆ
ತನ್ನೊಂದಿಗೆ ಲೈಂಗಿಕವಾಗಿ ಸಹಕರಿಸಬೇಕೆಂದು ಸೌಮ್ಯಶ್ರೀಯನ್ನು ಸ್ವತಃ ಅವಳ ವಿಭಾಗದ ಮುಖ್ಯಸ್ಥರೇ ನಿರಂತರವಾಗಿ ಒತ್ತಾಯಿಸುತ್ತಿದ್ದರು. ಇಲ್ಲಿಂದ ಪ್ರಾರಂಭವಾದ ಅವಳ ಕರಾಳ ಕಥೆ, ನಂತರ ಬೆದರಿಕೆ, ದೌರ್ಜನ್ಯ, ಕಿರುಕುಳಕ್ಕೆ ತಿರುಗಿತು. ಎಲ್ಲರೆದುರು ಅವಳನ್ನು ಅವಮಾನಗೊಳಿಸಿ, ತಕ್ಕ ಶಿಕ್ಷೆ ನೀಡಲು, ಸೌಮ್ಯಶ್ರೀಯನ್ನು ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗದಂತೆ ತಡೆಯಲಾಯಿತು. ಇದು ಅವಳಲ್ಲಿ ಆಳವಾದ ಆಘಾತವನ್ನು ಸೃಷ್ಟಿಸಿತು. ಧೈರ್ಯ ತಂದುಕೊಂಡು ಅವಳು ಪ್ರಾಂಶುಪಾಲರಿಗೆ ದೂರು ನೀಡಿದಳು. ಅದರಿಂದ ಪ್ರಯೋಜನವಾಗದೆ, ಸ್ಥಳೀಯ ಬಿಜೆಪಿ ಶಾಸಕರಿಂದ ಹಿಡಿದು, ಬಿಜೆಪಿ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಶ್ರೀ ಪ್ರತಾಪ್ ಸಾರಂಗಿಯವರೆಗೂ ಅವಳು ಎಲ್ಲರಿಗೂ ದೂರು ನೀಡಿದಳು, ಎಲ್ಲ ಅಧಿಕಾರದ ಬಾಗಿಲುಗಳನ್ನು ತಟ್ಟಿದಳು. ಎಸ್‌ಪಿಗೆ ಮತ್ತು ಉನ್ನತ ಶಿಕ್ಷಣ ಸಚಿವ, ಕೇಂದ್ರ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತು ಒಡಿಶಾದ ಮುಖ್ಯಮಂತ್ರಿಗಳಿಗೆ ತನ್ನ ದೂರನ್ನು ಟ್ವೀಟ್ ಮಾಡಿದಳು. ಎಲ್ಲವೂ ಅರಣ್ಯರೋದನವಾಯಿತು ಅಷ್ಟೇ! ಸೌಮ್ಯಶ್ರೀ ಆರ್‌ಎಸ್‌ಎಸ್-ಬಿಜೆಪಿಯ ವಿದ್ಯಾರ್ಥಿ ಸಂಘಟನೆ ಎಬಿವಿಪಿಯ ಸಕ್ರಿಯ ಸದಸ್ಯೆ ಆಗಿದ್ದರೂ, ಈ ಸಂಘಟನೆಗಳ ಯಾವ ಮುಖಂಡರೂ ಅವಳ ಸಮಸ್ಯೆಯನ್ನು ಬಗೆಹರಿಸುವ ಗೋಜಿಗೆ ಹೋಗಲಿಲ್ಲ. ಅವಳ ಎಲ್ಲಾ ಪ್ರಯತ್ನಗಳು ನಿರಾಶೆಯಲ್ಲಿ ಅಂತ್ಯಗೊಂಡವು!
ಫಕೀರ್ ಮೋಹನ್ ಕಾಲೇಜಿನ ಆಂತರಿಕ ದೂರು ಸಮಿತಿ(ಐಸಿಸಿ), ಕಣ್ಣೊರೆಸುವಂತಹ ತನಿಖೆಯನ್ನು ನಡೆಸಿ, ಆಪಾದಿತನನ್ನು ಖುಲಾಸೆ ಮಾಡಿತು; ಅವರನ್ನು ಇಲಾಖೆಯ ಮುಖ್ಯಸ್ಥರಾಗಿ ಮುಂದುವರಿಸಲು ಅನುಮತಿಸಿತು. ದಶದಿಕ್ಕುಗಳಿಂದಲೂ ಸೌಮ್ಯಶ್ರೀ ಅವಮಾನವನ್ನು ಎದುರಿಸಬೇಕಾಯಿತು. ಇಷ್ಟೊಂದು ಕಿರುಕುಳ ಮತ್ತು ಅವಮಾನಕ್ಕೊಳಗಾದ ಸೌಮ್ಯಶ್ರೀ ಕೊನೆಗೆ ಆತ್ಮಾಹುತಿ ಮಾಡಿಕೊಳ್ಳುವ ಕಠಿಣ ನಿರ್ಧಾರ ತೆಗೆದುಕೊಂಡಳು.
ನಿರಾಕರಿಸಲಾದ ನ್ಯಾಯದಿಂದಾದ ಆಹುತಿ!
ಎಂತಹ ದುರಂತ! ನ್ಯಾಯವನ್ನು ನೀಡುವಲ್ಲಿ ವ್ಯವಸ್ಥೆಯ ಸಂಪೂರ್ಣ ವೈಫಲ್ಯ ಇಲ್ಲಿ ಸುಸ್ಪಷ್ಟವಾಗಿದೆ, ಅಲ್ಲವೇ? ಈ ಯುವತಿ, ತನ್ನ ಭವಿಷ್ಯದ ವೃತ್ತಿಜೀವನವನ್ನೇ ಕಳೆದುಕೊಂಡಳು. ತನ್ನ ಸ್ನೇಹಿತರು ಮತ್ತು ಕುಟುಂಬದವರ ಮುಂದೆ ಪದೇ ಪದೇ ಅವಮಾನಕ್ಕೊಳಗಾದಳು. ಈ ಎಲ್ಲ ಸಂಕಷ್ಟಗಳನ್ನು ಅವಳು ಎದುರಿಸಿದ್ದಾದರೂ ಹೇಗೆ? ಸಮಸ್ಯೆಗಳ ಸುಳಿಯಿಂದ ಹೊರಬರುವ ದಾರಿಯನ್ನು ಕಾಣದೆ ಅದೆಷ್ಟು ರಾತ್ರಿಗಳನ್ನು ಸೌಮ್ಯಶ್ರೀ ನಿದ್ದೆಯಿಲ್ಲದೆ ಕಳೆದಳೋ ಎಂಬುದನ್ನು ಊಹಿಸಿಕೊಂಡರೆ ನಮ್ಮ ಎದೆ ತಣ್ಣಗಾಗುತ್ತದೆ.
ಹೆಣ್ಣುಮಕ್ಕಳಿಗೆ ಎಲ್ಲಿದೆ ಸುಭದ್ರತೆ?
ನಮ್ಮ ಹೆಣ್ಣುಮಕ್ಕಳು ಯಾವ ರಾಜ್ಯದಲ್ಲಿ ತಾನೇ ಸುರಕ್ಷಿತರು! ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ಗುಜರಾತ್, ಅಸ್ಸಾಂ ಮತ್ತು ಹರಿಯಾಣದಂತಹ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮಹಿಳೆಯರಿಗೆ ಯಾವುದೇ ಭದ್ರತೆಯಿಲ್ಲ. ಕಾಂಗ್ರೆಸ್ ಆಡಳಿತದ ರಾಜ್ಯಗಳಾಗಲಿ, ಟಿಎಂಸಿ ಆಡಳಿತದ ಪಶ್ಚಿಮ ಬಂಗಾಳವಾಗಲಿ, ಇದೀಗ ಒಡಿಶಾದಲ್ಲಿ, ಎಲ್ಲೆಡೆ ಮಹಿಳೆಯರ ಮೇಲಿನ ದೌರ್ಜನ್ಯ-ಕ್ರೌರ್ಯಗಳು ವಿಜೃಂಭಿಸುತ್ತಿವೆ!
ಹತ್ರಾಸ್‌ನಿಂದ ಹಿಡಿದು ಉನ್ನಾವ್‌ನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯವರೆಗೆ ಎಲ್ಲೆಡೆ ಅತ್ಯಾಚಾರಗಳು ನಿರ್ಭೀತಿಯಿಂದ ಜರುಗುತ್ತಿವೆ. ರಾಜಸ್ಥಾನದ ಸರ್ಕಾರಿ ಆಸ್ಪತ್ರೆಯ ನರ್ಸಿಂಗ್ ಅಧಿಕಾರಿಯ ಕಿರುಕುಳದಿಂದ ವಾರ್ಡ್ ಸಹಾಯಕಿ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದರು. ಮಧ್ಯಪ್ರದೇಶದಲ್ಲಿ ಅತ್ಯಾಚಾರ ಮತ್ತು ಅಪಹರಣಕ್ಕೆ ಒಳಗಾದ 16 ವರ್ಷದ ಬಾಲಕಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಳು. ಅತ್ಯಾಚಾರಕ್ಕೆ ಒಳಗಾದ 26 ವರ್ಷದ ಹೆಣ್ಣುಮಗಳು, ‘ನ್ಯಾಯ ವಿಳಂಬ’ದಿಂದ ಗುಜರಾತ್ ಹೈಕೋರ್ಟಿನಲ್ಲೇ ವಿಷ ಸೇವನೆ ಮಾಡಿದಳು! ಅಸ್ಸಾಂನಲ್ಲಿ ಶಿಕ್ಷಕನಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಮೊರೆಹೋದಳು. ಹರಿಯಾಣದಲ್ಲಿ ನೆರೆಮನೆಯವನಿಂದ ತಿಂಗಳುಗಟ್ಟಲೆ ಲೈಂಗಿಕ ದೌರ್ಜನ್ಯವನ್ನು ಸಹಿಸಿಕೊಂಡ ನಂತರ ಕೀಟನಾಶಕ ಸೇವಿಸಿದ 16 ವರ್ಷದ ಬಾಲಕಿ ಆತ್ಮಹತ್ಯೆಯ ದಾರಿ ಹಿಡಿದಳು. ಹೀಗೆ “ಡಬಲ್ ಎಂಜಿನ್” ಬಿಜೆಪಿ ಸರ್ಕಾರಗಳು ಲೈಂಗಿಕ ಹಲ್ಲೆ, ಅತ್ಯಾಚಾರ, ಸಾಮೂಹಿಕ ಅತ್ಯಾಚಾರಗಳ ದಾಖಲೆಗಳನ್ನು ಸೃಷ್ಟಿಸಿವೆ. ಈ ಹೆಣ್ಣುಮಕ್ಕಳು ಸರ್ಕಾರಗಳ ಪರಿಹಾರವನ್ನು ನಿರಾಕರಿಸಿ, ತಮ್ಮ ಜೀವನವನ್ನು ಕೊನೆಗೊಳಿಸುವ ದಾರಿಯನ್ನು ಆಯ್ಕೆ ಮಾಡಿಕೊಂಡರು. ಈಗ, ಕಳೆದ ಒಂದು ವರ್ಷದಿಂದ ಬಿಜೆಪಿ ಅಧಿಕಾರದಲ್ಲಿರುವ ಒಡಿಶಾ ಈ ಪಟ್ಟಿಗೆ ಸೇರಿದೆ. ಸೌಮ್ಯಶ್ರೀ ಘಟನೆಯ ಬೆನ್ನಲ್ಲೇ ಹತ್ತಿರದ ಪುರಿ ಜಿಲ್ಲೆಯ ಮತ್ತೊಬ್ಬ ಬಾಲಕಿ ದುಷ್ಕರ್ಮಿಗಳಿಂದ ಜೀವಂತವಾಗಿ ಸುಟ್ಟು ಕರಕಲಾಗಿದ್ದು ಪ್ರಾಣ ನೀಗಿದ್ದಾಳೆ. ಈ ಲೇಖನ ಮುದ್ರಣವಾಗುವಷ್ಟರಲ್ಲಿ ದೇಶದ ವಿವಿಧ ಭಾಗಗಳಿಂದ ಮಹಿಳೆಯರ ಮೇಲಿನ ಭೀಕರ ದೌರ್ಜನ್ಯದ ಇನ್ನೆಷ್ಟು ಸುದ್ದಿಗಳು ವರದಿಯಾಗುತ್ತವೆಯೋ?
ಆರ್‌ಎಸ್‌ಎಸ್-ಬಿಜೆಪಿ ನಾಯಕರು, ಬಿಜೆಪಿಯೇತರ ರಾಜ್ಯಗಳಲ್ಲಿ ಮಹಿಳಾ ಕಿರುಕುಳದ ಘಟನೆ ಸಂಭವಿಸಿದರೆ, ಬಲಿಪಶುಗಳ ಬಗ್ಗೆ ಧ್ವನಿ ಎತ್ತುತ್ತಾರೆ, ಸಹಾನುಭೂತಿ ತೋರುತ್ತಾರೆ. ಆದರೆ ಕೇಂದ್ರ ಮತ್ತು ವಿವಿಧ ರಾಜ್ಯಗಳಲ್ಲಿ ತಮ್ಮದೇ ಸರ್ಕಾರಗಳು ಅಧಿಕಾರದಲ್ಲಿರುವಲ್ಲಿ ಯಾವಾಗಲೂ ಅಪರಾಧಿಗಳ ಪರವಾಗಿ ನಿಲ್ಲುತ್ತಾರೆ. ಸೌಮ್ಯಶ್ರೀ ಪ್ರಕರಣದಲ್ಲಿ ಸರ್ಕಾರ, ಆಡಳಿತ ಪಕ್ಷದ ಜನ ಪ್ರತಿನಿಧಿಗಳು, ಶೈಕ್ಷಣಿಕ ಅಧಿಕಾರಶಾಹಿ ಮತ್ತು ಕಾನೂನು ಜಾರಿ ಸಂಸ್ಥೆಗಳು ನಡೆದುಕೊಂಡ ರೀತಿಯನ್ನು ಗಮನಿಸಿದರೆ ಮಹಿಳೆಯರ ಘನತೆಯ ಪ್ರಶ್ನೆ ಉದ್ಭವಿಸಿದಾಗ, ಇವರೆಲ್ಲರೂ ಎಷ್ಟು ಕೆಳಮಟ್ಟಕ್ಕೆ ಇಳಿಯಲು ಸಾಧ್ಯ ಎಂಬುದು ಸ್ಪಷ್ಟವಾಗುತ್ತದೆ. ಸೌಮ್ಯಶ್ರೀ ಘಟನೆ ಆತ್ಮಹತ್ಯೆಯಲ್ಲ, ಬದಲಿಗೆ ಕೊಳೆತ ವ್ಯವಸ್ಥೆ ಮತ್ತು ಅದರ ಬಂಟರಿಂದ ನಡೆದ ಕಗ್ಗೊಲೆ ಎಂದರೆ ಅತಿಶಯೋಕ್ತಿಯಾಗಲಾರದು. ಸೌಮ್ಯಶ್ರೀ ಸಾವು ಒಡಿಶಾದಲ್ಲಿ ಕೋಲಾಹಲವನ್ನು ಸೃಷ್ಟಿಸಿತು. ಈ ಭೀಕರ ಘಟನೆಯ ನಂತರ, ಸೌಮ್ಯಶ್ರೀಗೆ ನ್ಯಾಯ ಒದಗಿಸುವಂತೆ ಮತ್ತು ಅಂತಹ ಘೋರ ಕೃತ್ಯದ ಅಪರಾಧಿಗಳಿಗೆ ನಿದರ್ಶನೀಯ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್) ಪಕ್ಷವು ಹಲವು ಹೋರಾಟಗಳಿಗೆ ಕರೆ ನೀಡಿತು. ಜುಲೈ 14 ರಂದು, ‘ಒಡಿಶಾ ರಾಜ್ಯವ್ಯಾಪಿ ಪ್ರತಿಭಟನಾ ದಿನ’ಕ್ಕೆ ಅಭೂತಪೂರ್ವ ಜನ ಪ್ರತಿಕ್ರಿಯೆ ದೊರೆಯಿತು. ಜುಲೈ 15 ರಂದು ಶೋಕಾಚರಣೆಯ ದಿನವನ್ನಾಗಿ ಆಚರಿಸಲಾಯಿತು. ನಂತರ, ಜುಲೈ 17 ರಂದು ಒಡಿಶಾ ಬಂದ್‌ಗೆ ಕರೆ ನೀಡಲಾಯಿತು. ಎಐಡಿಎಸ್‌ಓ, ಎಐಡಿವೈಓ ಮತ್ತು ಎಐಎಂಎಸ್‌ಎಸ್ ಸಹ ಸೌಮ್ಯಶ್ರೀಗೆ ನ್ಯಾಯ ಒದಗಿಸಬೇಕೆಂದು ಹಲವು ಪ್ರತಿಭಟನೆಗಳನ್ನು ನಡೆಸಿದವು. ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಅಸಹನೀಯ ಆರ್ಥಿಕ ಸಂಕಷ್ಟ ಮತ್ತು ಉಸಿರುಗಟ್ಟಿಸುವ ಪರಿಸ್ಥಿತಿಗಳಲ್ಲಿ ನರಳುತ್ತಿದ್ದ ಒಡಿಶಾದ ಜನತೆ ಸ್ವಯಂಪ್ರೇರಿತವಾಗಿ ಬಂದ್‌ಗೆ ಬೆಂಬಲ ನೀಡಿದರು.
ಆಡಳಿತಾರೂಢ ಬಿಜೆಪಿಯು ಅರಿಶಿನ, ಮಂಗಳಸೂತ್ರ ಮತ್ತು “ಬೇಟಿ ಬಚಾವೋ ಬೇಟಿ ಪಡಾವೋ” ಎಂಬ ಘೋಷಣೆಗಳನ್ನು ಎತ್ತುತ್ತದೆ. ಆದರೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೇ ಮಹಿಳೆಯರ ವಿರುದ್ಧದ ದೌರ್ಜನ್ಯಗಳು ಎಲ್ಲಾ ದಾಖಲೆಗಳನ್ನು ಮೀರಿಸಿವೆ. ಬಿಜೆಪಿ ಅಥವಾ ಕಾಂಗ್ರೆಸ್ ಅಥವಾ ಯಾವುದೇ ಇತರ ಪ್ರಾದೇಶಿಕ ಪಕ್ಷಗಳು ಶ್ರೀಮಂತರ ಸೇವಕರಾಗಿವೆ. ಈ ಪಕ್ಷಗಳ ಸರ್ಕಾರಗಳಿಂದ ಜನರಿಗೆ ನ್ಯಾಯ ಸಿಗುವುದಿಲ್ಲ. ಈ ಶೋಷಿತ, ಭ್ರಷ್ಟ ಮತ್ತು ಪುರುಷ ಪ್ರಧಾನ ಬಂಡವಾಳಶಾಹಿ ಸಮಾಜದಲ್ಲಿ ಮಹಿಳೆಯರ ಘನತೆಯನ್ನು ಕಾಪಾಡಲು ಸಾಧ್ಯವಿಲ್ಲ. ಕೊಳೆತ ಅಮಾನವೀಯ ಆಲೋಚನೆಗಳಿಂದ ಸಮಾಜವನ್ನು ಮುಕ್ತಗೊಳಿಸುವ ಬದಲು, ಬಂಡವಾಳಶಾಹಿ ವ್ಯವಸ್ಥೆ ಮತ್ತು ಅದರ ಸೇವಕರು, ಅಶ್ಲೀಲತೆ, ನಗ್ನತೆ ಮತ್ತು ಪೊರ್ನೊಗ್ರಫಿಯ ಅಡೆತಡೆಯಿಲ್ಲದ ಪ್ರಚಾರದ ಮೂಲಕ ಯುವಕರಿಗೆ ಅಮಲೇರಿಸುತ್ತಿದ್ದಾರೆ. ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಮೌಲ್ಯಗಳು ಮತ್ತು ನೈತಿಕ ಮಟ್ಟದ ಅಧಃಪತನವು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಬಂಡವಾಳಶಾಹಿ ವ್ಯವಸ್ಥೆ ಮತ್ತು ಅದರಿಂದ ಪೋಷಿಸಲ್ಪಟ್ಟ ಸಾಂಸ್ಕೃತಿಕ ಅವನತಿಯ ವಿರುದ್ಧದ ಸರ್ವವ್ಯಾಪಿ, ಸೈದ್ಧಾಂತಿಕ-ಸಾಂಸ್ಕೃತಿಕ ಚಳುವಳಿ ಮಾತ್ರವೇ ಈಗ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳನ್ನು ತಡೆಯುವ ಏಕೈಕ ಮಾರ್ಗವಾಗಿದೆ.