Loading..

ಇತಿಹಾಸ ಪಠ್ಯಪುಸ್ತಕದಿಂದ ಮೊಘಲ್ ಕಾಲಕ್ಕೆ ಖೊಕ್! ಹಿಂದುತ್ವ ಬ್ರಿಗೇಡ್‌ನ ಹೇಯ ಪಿತೂರಿ!!

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್‌ಸಿಇಆರ್‌ಟಿ) ಶಿಫಾರಸ್ಸುಗಳನ್ನು ಅನುಸರಿಸಿ ಉತ್ತರ ಪ್ರದೇಶದ ಇತಿಹಾಸ ಶಾಲಾ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಹೊರಡಿಸಲಾದ ನಿರ್ದೇಶನಗಳು ಐತಿಹಾಸಿಕ ತಿಳುವಳಿಕೆಯ ಸ್ವರೂಪ, ಮತ್ತದನ್ನು ತಮಗೆ ಬೇಕಾದ ರೀತಿಯಲ್ಲಿ ಪ್ರಸ್ತುತ ಪಡಿಸುವುದರ ಹಿಂದಿನ ಉದ್ದೇಶಗಳ ಬಗ್ಗೆ ತೀವ್ರ ಚರ್ಚೆಯನ್ನು ಹುಟ್ಟು ಹಾಕಿವೆ.
ಹನ್ನೆರಡನೇ ತರಗತಿಯ ಇತಿಹಾಸ ಪಠ್ಯಪುಸ್ತಕ, “ಭಾರತೀಯ ಇತಿಹಾಸದ ವಿಷಯಗಳು: ಭಾಗ-2”, ಇದರಿಂದ ಮೊಘಲ್ ಆಸ್ಥಾನದ ಕುರಿತಾದ ಅಧ್ಯಾಯವನ್ನು ತೆಗೆದುಹಾಕಿರುವುದು ಒಂದು ಸಾಮಾನ್ಯ ಪ್ರತ್ಯೇಕ ಘಟನೆಯಲ್ಲ, ಬದಲಾಗಿ ಒಂದು ಗುಪ್ತ ಕಾರ್ಯಸೂಚಿಯೊಂದಿಗೆ ಇತಿಹಾಸವನ್ನು ಪರಿಷ್ಕರಿಸುವ ಅಥವಾ ಪುನರ್‌ರಚಿಸುವ ಪ್ರವೃತ್ತಿಯ ಕಡೆಗೆ ಹಾಕಿರುವ ಹೆಜ್ಜೆ. ಇದಕ್ಕೂ ಮೊದಲು, ಡಾರ್ವಿನ್‌ನ ವಿಕಾಸ ಸಿದ್ಧಾಂತ ಮತ್ತು ರಸಾಯನಶಾಸ್ತ್ರದ ಮೂಲಭೂತ ಸಿದ್ಧಾಂತವಾದ ಮೆಂಡಲಿಯೆಫ್ ಕೋಷ್ಟಕದಂತಹ ನಿರ್ಣಾಯಕ ವೈಜ್ಞಾನಿಕ ಆವಿಷ್ಕಾರಗಳನ್ನು ಕೈಬಿಟ್ಟಿರುವುದನ್ನು ನಾವು ನೋಡಿದ್ದೇವೆ. ಏಕೆಂದರೆ, ಅಪೇಕ್ಷಿತ ಧರ್ಮನಿರಪೇಕ್ಷ, ವೈಜ್ಞಾನಿಕ, ಪ್ರಜಾಪ್ರಭುತ್ವ ಶಿಕ್ಷಣಕ್ಕೆ ಮರಣಶಾಸನವಾದ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಜಾರಿಗೆ ತರಬೇಕಾದರೆ, ಸತ್ಯಕ್ಕೆ ಕೊಡಲಿ ಪೆಟ್ಟು ಹಾಕಿ, ವೈಜ್ಞಾನಿಕ ಮನೋಭಾವವನ್ನು ನಾಶಪಡಿಸುವುದು ಅಗತ್ಯವಾಗಿದೆ. ಭಾರತೀಯ ಪರಂಪರೆಯ ಸಮಗ್ರ ತಿಳುವಳಿಕೆಯನ್ನು ನೀಡುವ ನೆಪದಲ್ಲಿ, ಇತಿಹಾಸವನ್ನು ವಿಕೃತಗೊಳಿಸುವುದು, ಪುರಾಣವನ್ನು ಇತಿಹಾಸವೆಂದು ಎತ್ತಿತೋರಿಸುವುದು ಮತ್ತು ಆ ಮೂಲಕ ವಿದ್ಯಾರ್ಥಿಗಳ ಮನಸ್ಸಿನಲ್ಲಿ ದೋಷಪೂರಿತ ವಿಷಯಗಳನ್ನು ತೂರಿಸುವುದು ಈ ಕಾರ್ಯಸೂಚಿಯ ಭಾಗವಾಗಿದೆ ಮತ್ತು ಅವರನ್ನು ನೈಜ ಜ್ಞಾನದಿಂದ ವಂಚಿಸಲಾಗುತ್ತಿದೆ.
ಇತಿಹಾಸವು ಪ್ರಭುತ್ವದ ಇಷ್ಟಾನಿಷ್ಟದ ವಿಷಯವಲ್ಲ
ಇಲ್ಲಿ ಬರುವ ಮೂಲಭೂತ ಪ್ರಶ್ನೆಯೆಂದರೆ: ಇತಿಹಾಸವನ್ನು ಮನಸಿಗೆ ತೋಚಿದಂತೆ ಬದಲಾಯಿಸಬಹುದೇ? ಇತಿಹಾಸವು ಕೇವಲ ಯಾವುದೇ ವ್ಯಕ್ತಿಯ ಅಥವಾ ರಾಜಕೀಯ ಆದ್ಯತೆಯ ವಿಷಯವೇ? ಇತಿಹಾಸವು ಭೂತಕಾಲದ ಅಧ್ಯಯನವಾಗಿ, ಪುರಾವೆಗಳು, ವಿಶ್ಲೇಷಣೆ ಮತ್ತು ಸರಿಯಾದ ವ್ಯಾಖ್ಯಾನವನ್ನು ಆಧರಿಸಿದೆ. ಹೊಸ ಆವಿಷ್ಕಾರಗಳು ಮತ್ತು ದೃಷ್ಟಿಗಳೊಂದಿಗೆ ವ್ಯಾಖ್ಯಾನಗಳು ರೂಪುಗೊಳ್ಳುತ್ತವೆ ನಿಜ; ಆದರೆ ನಿರ್ದಿಷ್ಟ ಸಿದ್ಧಾಂತಕ್ಕೆ ಸರಿ ಹೊಂದುವಂತೆ ಸ್ಥಾಪಿತ ಐತಿಹಾಸಿಕ ಸಂಗತಿಗಳನ್ನು ಉದ್ದೇಶಪೂರ್ವಕವಾಗಿ ಬಿಟ್ಟುಬಿಡುವುದು ಅಥವಾ ಬದಲಾಯಿಸುವುದೆಂದರೆ, ಅದು ಇತಿಹಾಸವನ್ನೇ ನಿರಾಕರಿಸುವಂತಹ ಅಪಾಯಕಾರಿ ನಡೆ. ನಿಜವಾದ ಅರ್ಥದಲ್ಲಿ ಇತಿಹಾಸವೆಂದರೆ, ಅದು ಸಾಮಾಜಿಕ ಬೆಳವಣಿಗೆಯ ಅನಾವರಣದ ಮೂಲಕ ಸ್ಥಾಪಿಸಲಾಗುವ ನಿರಾಕರಿಸಲಾಗದ ಸತ್ಯ. ಮುನ್ನೂರು ವರ್ಷಗಳ ಮೊಘಲ್ ಇತಿಹಾಸವನ್ನು (೧೫೨೬-೧೮೫೭) ಪಠ್ಯಪುಸ್ತಕಗಳಿಂದ ಅಳಿಸಿಹಾಕುವ ಪ್ರಯತ್ನವು ಭೂತಕಾಲದ ಒಂದು ಪ್ರಮುಖ ಹಂತವನ್ನು ಕೈಬಿಡುವ ಕ್ರಮವಾಗಿದೆ. ಒಂದು ನಿರ್ದಿಷ್ಟ ಯುಗವು ನಕಾರಾತ್ಮಕ ಅಂಶಗಳನ್ನು ಹೊಂದಿದೆ ಎಂದುಕೊಂಡರೂ, ಅದರ ಇತಿಹಾಸವನ್ನು ಸುಲಭವಾಗಿ ಅಳಿಸಿ ಹಾಕಲು ಸಾಧ್ಯವಿಲ್ಲ.
ಮೊಘಲ್ ಇತಿಹಾಸದ ಉದ್ದೇಶಪೂರ್ವಕ ಹೊರಗಿಡುವಿಕೆ
ಮೊಘಲ್ ಅವಧಿ ಮತ್ತು ಅದರ ಹಿಂದಿನ ಸುಲ್ತಾನರ ಅವಧಿಯನ್ನೇ ಏಕೆ ಗುರಿಯಾಗಿಸಲಾಗಿದೆ? ಆಡಳಿತಗಾರರು ಮುಸ್ಲಿಮರಾಗಿದ್ದರಿಂದಲೇ? ಹಾಗಿದ್ದಲ್ಲಿ, ಅಫ್ಘನ್ ಆಡಳಿತಗಾರ ಶೇರ್ ಷಾನ ಐದು ವರ್ಷಗಳ ಆಳ್ವಿಕೆಯನ್ನು ಹೇಗೆ ಸೇರಿಸಿಕೊಳ್ಳಬಹುದು? ಆತ ನಿರ್ಮಿಸಿದ ಐತಿಹಾಸಿಕ ಗ್ರಾಂಡ್ ಟ್ರಂಕ್ ರಸ್ತೆ ಮತ್ತು ಪರಿಚಯಿಸಿದ ನವೀನ ಅಂಚೆ ವ್ಯವಸ್ಥೆಯ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳುವುದಾದರೂ ಹೇಗೆ? ತಮಗೆ ಬೇಡವೆನಿಸಿದ್ದನ್ನು ಕೈಬಿಟ್ಟು, ಬೇಕಾದ್ದನ್ನು ಮಾತ್ರ ಸೇರಿಸಿ, ಅರೆಬರೆ ಇತಿಹಾಸದ ಜ್ಞಾನವನ್ನು ಹೀಗೆ ಸೃಷ್ಟಿಸಬಹುದೇ? ಇತಿಹಾಸದಲ್ಲಿ ಸಂಭವಿಸಿರುವ ಸಂಘರ್ಷದ ಒಂದು ಆಯಾಮವನ್ನು ಮಾತ್ರ ಕೇಂದ್ರೀಕರಿಸುವುದರಿಂದ ಅದು ಏಕಪಕ್ಷೀಯವಾಗುತ್ತದೆಯೇ ವಿನಃ ಸಮಗ್ರ ಹಾಗೂ ಸಂಕೀರ್ಣ ದೃಷ್ಟಿಕೋನವಾಗಿ ಹೊರಹೊಮ್ಮುವುದಿಲ್ಲ.
ಈ ಪ್ರಯತ್ನಗಳ ಹೊರತಾಗಿಯೂ, ಇತಿಹಾಸವನ್ನು ನಿಜವಾಗಿಯೂ ಅಳಿಸಬಹುದೇ? ಉತ್ತರ ಪ್ರದೇಶ, ಮಧ್ಯಪ್ರದೇಶ, ದೆಹಲಿ, ಪಂಜಾಬ್, ಹರಿಯಾಣ, ಇಡೀ ಉತ್ತರ ಹಾಗೂ ಪಶ್ಚಿಮ ಭಾರತದ ಭೂಭಾಗಗಳಲ್ಲಿ ಹಬ್ಬಿಕೊಂಡಿರುವ ವಾಸ್ತುಶಿಲ್ಪದ ಅದ್ಭುತಗಳು ಮೊಘಲ್ ಯುಗದ ಸ್ಪಷ್ಟ ಪುರಾವೆಗಳಾಗಿ ನಿಂತಿವೆ ಮತ್ತು ಮುಂದೆಯೂ ಇರುತ್ತವೆ ಕೂಡ. ಅವುಗಳನ್ನು ಹೇಗೆ ನಿರ್ಲಕ್ಷಿಸಬಹುದು? ಕೆಂಪುಕೋಟೆಯ ಹೆಸರನ್ನು ಬದಲಿಸಬಹುದೇ? ಪ್ರತಿವರ್ಷ ಸ್ವಾತಂತ್ರ್ಯ ದಿನದಂದು ರಾಷ್ಟ್ರಧ್ವಜವನ್ನು ಎಲ್ಲಿ ಹಾರಿಸಲಾಗುತ್ತದೆ? ತಾಜ್‌ಮಹಲ್, ಇಬಾದತ್ ಖಾನಾ ಮತ್ತು ಜಾಮಾ ಮಸೀದಿಗಳ ಕಥೆಯೇನು? ಈ ರಚನೆಗಳು ಭಾರತದ ಬಹುತ್ವ ಸಂಸ್ಕೃತಿ ಮತ್ತು ಇತಿಹಾಸದೊಂದಿಗೆ ಆಳವಾಗಿ ಬೆಸೆದುಕೊಂಡಿವೆ ಎಂಬುದನ್ನು ನಾವು ಮರೆಯಬಾರದು. ಮೊಘಲರ ಆಳ್ವಿಕೆಯ ಅವಧಿಯಲ್ಲಿ ಯಾವುದೇ ಹಿಂದೂ, ಮುಸ್ಲಿಂ ಪ್ರಶ್ನೆ ಇರಲಿಲ್ಲ.
ಎರಡನೆಯದಾಗಿ, ಮುಸ್ಲಿಂ ಚಕ್ರವರ್ತಿಗಳು, ಹಿಂದೂಗಳು ಅಥವಾ ಬೌದ್ಧರ ಮೇಲೆ ತಮ್ಮ ಧರ್ಮವನ್ನು ಹೇರಿದ್ದಕ್ಕೆ ಯಾವುದೇ ಪುರಾವೆಗಳಿಲ್ಲ. ಹೌದು, ಮೊಘಲ್ ಚಕ್ರವರ್ತಿಗಳು ತಮ್ಮ ಆಳ್ವಿಕೆಯನ್ನು ಹೆಚ್ಚಿಸಿಕೊಳ್ಳುವ ಅಂದಿನ ಎಲ್ಲಾ ರಾಜರ ಆಕಾಂಕ್ಷೆಗೆ ಅನುಗುಣವಾಗಿ ಅನೇಕ ಹಿಂದೂ ರಾಜರ ವಿರುದ್ಧ ಯುದ್ಧ ಮಾಡಿದ್ದರು. ಆದರೆ ಆ ಯುದ್ಧಗಳು ಪರಸ್ಪರರ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುವುದಕ್ಕಾಗಿ ಮಾತ್ರ. ಅವರು, ಆಫ್ಘನ್ ಆಡಳಿತಗಾರ ಶೇರ್ ಶಾನಂತಹ ಅನೇಕ ಮುಸ್ಲಿಂ ರಾಜರ ವಿರುದ್ಧವೂ ಯುದ್ಧ ಮಾಡಿದರು. 1526 ರ ಮೊದಲ ಪಾಣಿಪತ್ ಕದನ, ಮೊಘಲ್ ಚಕ್ರವರ್ತಿ ಬಾಬರ್‌ನ ಪಡೆಗಳು ಮತ್ತು ಇಬ್ರಾಹಿಂ ಲೋದಿ ನೇತೃತ್ವದ ಸೈನ್ಯದ ನಡುವೆ ನಡೆಯಿತು. ಅದೇ ರೀತಿ, ಪ್ರದೇಶಗಳ ಮೇಲಿನ ಪ್ರಾಬಲ್ಯಕ್ಕಾಗಿ ಹಿಂದೂ ರಾಜರ ನಡುವೆಯೂ ಯುದ್ಧಗಳು ನಡೆದಿವೆ. ಉದಾಹರಣೆಗೆ ರಾಷ್ಟ್ರಕೂಟರ ವಿರುದ್ಧ ಚೋಳರು, ಕಛ್‌ವಾಹ ನಡೆಸಿದ ಧುಂಧರ್ ಮೇಲಿನ ಆಕ್ರಮಣ (1071) ಇತ್ಯಾದಿ. ನಂದ ರಾಜವಂಶವು ಹಿಂದಿನ ಶಿಶುನಾಗ ರಾಜವಂಶವನ್ನು ಉರುಳಿಸಿತು. ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದ ಚಂದ್ರಗುಪ್ತ ಮೌರ್ಯ, ನಂದ ರಾಜವಂಶವನ್ನು ಉರುಳಿಸಿದ. ಹಾಗಾಗಿ ಯುದ್ಧಗಳು ಧರ್ಮಗಳ ಆಧಾರದಲ್ಲಿ ನಡೆದಿಲ್ಲ. ಬದಲಿಗೆ ರಾಜಕೀಯ ಮತ್ತು ಆರ್ಥಿಕ ಅಂಶಗಳು ಮಹತ್ವದ ಪಾತ್ರ ವಹಿಸಿವೆ.
ವಿಭಿನ್ನ ಧರ್ಮದ ರಾಜರು ಮತ್ತವರ ಸೇನಾಧಿಪತಿಗಳು
1576 ರ ಹಳದಿಘಾಟ್ ಯುದ್ಧದ ಸಮಯದಲ್ಲಿ, ಅಕ್ಬರನ ಮೊಘಲ್ ಪಡೆಗಳ ನೇತೃತ್ವವನ್ನು ಹಿಂದೂ ರಜಪೂತ ಜನರಲ್ ರಾಜಾ ಮಾನ್‌ಸಿಂಗ್ ವಹಿಸಿದ್ದ. ಪ್ರತಿಯಾಗಿ ರಾಣಾ ಪ್ರತಾಪ್‌ನ ಸೈನ್ಯವನ್ನು ಅಫ್ಘಾನ್ ಮುಸ್ಲಿಂ ಹಕೀಮ್ ಖಾನ್ ಸುರ್ ಮುನ್ನಡೆಸಿದ್ದ. ಅದರಂತೆ, ಶಿವಾಜಿ ಮತ್ತು ಔರಂಗಜೇಬ್ ಸಂಘರ್ಷದಲ್ಲಿದ್ದಾಗ, ರಜಪೂತ ಜೈಸಿಂಗ್ ಔರಂಗಜೇಬನ ಮುಖ್ಯ ಜನರಲ್ ಆಗಿದ್ದರೆ, ಶಿವಾಜಿಯ ಸೇನಾಪತಿ ಮುಸ್ಲಿಂ ಮೌಲ್ವಿ ಹೈದರ್ ಖಾನ್! ದಕ್ಷಿಣ ಭಾರತದಲ್ಲಿ, ಮರಾಠರು ಟಿಪ್ಪು ಸುಲ್ತಾನನ ಸಾಮ್ರಾಜ್ಯದ ಮೇಲೆ ದಾಳಿ ಮಾಡಿ ಹಿಂದೂ ದೇವಾಲಯಗಳನ್ನು ನಾಶಪಡಿಸಿದರೆ, ಟಿಪ್ಪು ಸುಲ್ತಾನ್ ಸ್ವತಃ ಅದನ್ನು ದುರಸ್ತಿ ಮಾಡಲು ಸಹಾಯ ಮಾಡಿದ. ಈ ಸತ್ಯ ಆಧಾರಿತ, ವಸ್ತುನಿಷ್ಠ ಇತಿಹಾಸವನ್ನು ಮರೆಮಾಚಿ ವಿದ್ಯಾರ್ಥಿಗಳಲ್ಲಿ ಉದ್ದೇಶಪೂರ್ವಕವಾಗಿ ಮುಸ್ಲಿಂ ವಿರೋಧಿ ಭಾವನೆಯನ್ನು ಮೂಡಿಸಲಾಗುತ್ತಿದೆ.
ಬ್ರಿಟಿಷ್ ಆಡಳಿತಗಾರರ ಧರ್ಮಾಧಾರಿತ ವಿಭಜನೆ
ಸಾಮ್ರಾಜ್ಯಶಾಹಿ ಬ್ರಿಟಿಷ್ ಇತಿಹಾಸಕಾರರು ಕೋಮು ವಿಭಜನೆಯ ಮೇಲೆ ಕಣ್ಣಿಟ್ಟು ಭಾರತೀಯ ಇತಿಹಾಸವನ್ನು ವ್ಯಾಖ್ಯಾನಿಸಿದರು. 1818 ರಲ್ಲಿ, ಭಾರತೀಯ ಇತಿಹಾಸವನ್ನು ‘ಹಿಂದೂ ನಾಗರಿಕತೆ’, ‘ಮುಸ್ಲಿಂ ನಾಗರಿಕತೆ’ ಮತ್ತು ‘ಬ್ರಿಟಿಷ್ ಅವಧಿ’ ಎಂದು ವಿಭಜಿಸಿ ಇತಿಹಾಸಕ್ಕೆ ಧರ್ಮದ ಲೇಪನ ನೀಡುವುದನ್ನು ಪ್ರಾರಂಭಿಸಿದವನು ಜೇಮ್ಸ್ ಮಿಲ್. ಗಮನಾರ್ಹವಾಗಿ, ವಸಾಹತುಶಾಹಿ ಯುಗದಲ್ಲಿ ಭಾರತಕ್ಕೆ ಕಾಲಿಟ್ಟ ಬ್ರಿಟಿಷ್ ಆಡಳಿತಗಾರರು ಹೈಲಿಬರಿ ಕಾಲೇಜಿನಲ್ಲಿ ಮಿಲ್‌ನ ಐತಿಹಾಸಿಕ ವ್ಯಾಖ್ಯಾನಗಳನ್ನು ಓದಿಕೊಂಡೇ ಬಂದವರು.
19ನೇ ಶತಮಾನದಲ್ಲಿ ಭಾರತದ ಇತಿಹಾಸವನ್ನು ಬರೆಯುವ ಯೋಜನೆಯಲ್ಲಿ ಮುಂಚೂಣಿಯಲ್ಲಿದ್ದ ಬ್ರಿಟಿಷ್ ಇತಿಹಾಸಕಾರರು, ಮುಸ್ಲಿಮರ ವಿರುದ್ಧ ಹಿಂದೂ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡಿದರು. ತಮ್ಮ ಆಳ್ವಿಕೆಯ ತಳಪಾಯವನ್ನು ಗಟ್ಟಿಗೊಳಿಸುವ ಸಾಮ್ರಾಜ್ಯಶಾಹಿ ದೃಷ್ಟಿಕೋನ ಈ ಕಾರ್ಯತಂತ್ರದ ಹಿಂದಿತ್ತು. ಈ ದೃಷ್ಟಿಕೋನಕ್ಕೆ ಸೈದ್ಧಾಂತಿಕ ಆಧಾರವನ್ನು ಒದಗಿಸಲು, ಹಲವಾರು ಇಂಗ್ಲಿಷ್ ಇತಿಹಾಸಕಾರರು, ಪುರಾತತ್ವಜ್ಞರು ಹಾಗೂ ಸಂಶೋಧಕರು ತಮ್ಮ ಬರಹಗಳಲ್ಲಿ ಮುಸ್ಲಿಂ ದೊರೆಗಳ ನಿರಂತರ ಕಿರುಕುಳ ಮತ್ತು ದೇವಾಲಯ ನಾಶದ ಘಟನೆಗಳನ್ನು ಉಲ್ಲೇಖಿಸುವ ಮೂಲಕ ಹಿಂದೂಗಳನ್ನು ಪ್ರಚೋದಿಸುವ ಕಾರ್ಯ ಮಾಡಿದರು. ತನ್ಮೂಲಕ ಅವರು ದೇಶವಾಸಿಗಳ ಕಣ್ಣಲ್ಲಿ ತಮ್ಮ ಆಳ್ವಿಕೆಯನ್ನು ನ್ಯಾಯಬದ್ಧಗೊಳಿಸುವ ಹುನ್ನಾರ ಹೊಂದಿದ್ದರು. ಮುಸ್ಲಿಂ ದೊರೆಗಳನ್ನು ಪದಚ್ಯುತಗೊಳಿಸಿ ಅಧಿಕಾರಕ್ಕೆ ಬಂದ ಬ್ರಿಟಿಷ್ ಸಾಮ್ರಾಜ್ಯಶಾಹಿಗಳು ಸಹಜವಾಗಿಯೇ ಮುಸ್ಲಿಂ ವಿರೋಧಿ ಭಾವನೆಯನ್ನು ಬೆಳೆಸಲು ಪ್ರಯತ್ನಿಸಿದರು.
ಇದಲ್ಲದೆ, ಇಪ್ಪತ್ತನೇ ಶತಮಾನದ ಆರಂಭದಲ್ಲಿ, ಬ್ರಿಟಿಷ್ ಸಾಮ್ರಾಜ್ಯಶಾಹಿ ಆಳ್ವಿಕೆಯು ಒಡೆದು ಆಳುವ ನೀತಿಯನ್ನು ಜಾರಿಗೆ ತಂದಿತು. ಲಾರ್ಡ್ ಕರ್ಜನ್‌ನ ನೇರ ಬೆಂಬಲ ಮತ್ತು ಆರ್ಥಿಕ ಪ್ರೋತ್ಸಾಹದೊಂದಿಗೆ, 1906ರಲ್ಲಿ “ಮುಸ್ಲಿಂ ಲೀಗ್” ಢಾಕಾದಲ್ಲಿ ಸ್ಥಾಪನೆಯಾಯಿತು. ದುರಂತವೆಂದರೆ ಸೈಯದ್ ಅಹ್ಮದ್‌ಖಾನ್ ಅವರಂತಹ ಪ್ರಗತಿಪರ ಮುಸ್ಲಿಂ ಸಾಮಾಜಿಕ ಸುಧಾರಣಾ ಚಳುವಳಿಗಳ ನಾಯಕರು ಈ ಸಂಚಿಗೆ ಬಲಿಯಾದರು. ದೇಶದ ಸ್ವಾತಂತ್ರö್ಯ ಸಂಗ್ರಾಮದ ರಾಷ್ಟ್ರೀಯ ನಾಯಕರೂ ಕೂಡ ಈ ಸಾಮ್ರಾಜ್ಯಶಾಹಿ ತಂತ್ರದಿಂದ ದಾರಿತಪ್ಪಿದರು.
ಮಧ್ಯಕಾಲೀನ ಸಂಸ್ಕೃತಿ: ಹಿಂದೂ-ಮುಸ್ಲಿಂ ಸಂಘರ್ಷದ್ದಲ್ಲ, ಸಾಮರಸ್ಯದ್ದು
ಪ್ರಾದೇಶಿಕ ಸಂಘರ್ಷಗಳು ಮತ್ತು ರಾಜಕೀಯ ಇತಿಹಾಸದ ವ್ಯಾಖ್ಯಾನಗಳನ್ನು ಬದಿಗಿಟ್ಟರೂ ಮೊಘಲ್ ಯುಗವು ಭಾರತದ ಸಾಂಸ್ಕೃತಿಕ ಬೆಳವಣಿಗೆಯಲ್ಲಿನ ಒಂದು ಉಜ್ವಲ ಅಧ್ಯಾಯವಾಗಿದೆ. ಮೊಘಲ್ ಆಶ್ರಯದಲ್ಲಿ ಚಿತ್ರಕಲೆ ಅಭೂತಪೂರ್ವವಾಗಿ ಪ್ರವರ್ಧಮಾನಕ್ಕೆ ಬಂದಿತು. ಅಬುಲ್ ಫಜಲ್ ಅವರ ‘ಅಕ್ಬರ್‌ನಾಮಾ’ ಮತ್ತು ‘ಐನ್-ಇ-ಅಕ್ಬರಿ’, ಬಾಬರನ ‘ತಜುಕ್-ಇ-ಬಾಬರಿ’, ಗುಲ್ಬದನ್ ಬೇಗಂ ಅವರ ‘ಹುಮಾಯುನ್ನಾಮಾ’ ಮತ್ತು ಸೂರ್‌ದಾಸ್, ತುಕಾರಾಂ ಹಾಗೂ ತುಳಸಿದಾಸರ ಕೃತಿಗಳು ಈ ಸಂಗತಿಯನ್ನು ದೃಢೀಕರಿಸುತ್ತವೆ. ‘ವಾಕಿಯತ್-ಇ-ಬಾಬರಿ’ಯಲ್ಲಿ ಉಲ್ಲೇಖಿಸಲಾದ ಇಪ್ಪತ್ತೆರಡು ಕಲಾವಿದರಲ್ಲಿ ಮುಸ್ಲಿಮರು ಮೂವರು ಮಾತ್ರ. ಅಬುಲ್ ಫಜಲ್ ತನ್ನ ಸ್ವಂತ ಬರಹಗಳಲ್ಲಿ ಹದಿನೇಳು ಪ್ರಮುಖ ವರ್ಣಚಿತ್ರಕಾರರನ್ನು ಹೆಸರಿಸಿದ್ದಾನೆ, ಅವರಲ್ಲಿ ಕೇವಲ ನಾಲ್ವರು ಮುಸ್ಲಿಮರು. ಸಂಗೀತ ಕ್ಷೇತ್ರದಲ್ಲಿ, ಸಿತಾರ್ ವಾದನ ಹಿಂದೂ ಮತ್ತು ಮುಸ್ಲಿಂ ಸಂಗೀತ ಸಂಪ್ರದಾಯಗಳ ಸುಪ್ರಸಿದ್ಧ ಬೆಸುಗೆಯಾಗಿದೆ. ಎಸ್ರಾಜ್, ಸುರ್‌ಬಹಾರ್ ಮತ್ತು ಸಾರಂಗಿಯಂತಹ ವಾದ್ಯಗಳು ಎರಡೂ ಸಮುದಾಯಗಳ ಕಲಾತ್ಮಕ ಪ್ರಯತ್ನಗಳ ಉತ್ಪನ್ನಗಳಾಗಿವೆ.
ಭಾರತೀಯ ರಾಗಗಳಾದ ಹಿಂದೋಳ ಮತ್ತು ಪರ್ಷಿಯನ್ ರಾಗ ಮುಕಾಮಾಗಳನ್ನು ಒಟ್ಟುಗೂಡಿಸಿ ಯಮನ್ ರಾಗವನ್ನು ರಚಿಸಲಾಯಿತು. ಅಮೀರ್ ಖುಸ್ರೋ ಮೊದಲಾಗಿ ತಾನ್‌ಸೇನ್‌ವರೆಗೆ, ಮುಸ್ಲಿಂ ಸಂಗೀತ ಶಿಕ್ಷಕರು ತಮ್ಮ ಕಲಾತ್ಮಕತೆಯ ಗುಣಮಟ್ಟಕ್ಕಾಗಿ ಅಪಾರ ಜನಪ್ರಿಯತೆಯನ್ನು ಗಳಿಸಿದರು. ಭಾರತೀಯ ಶಾಸ್ತ್ರೀಯ ಸಂಗೀತದ ಅವಿಭಾಜ್ಯ ಸ್ವರೂಪಗಳಾದ ಧ್ರುಪದ್, ಖಯಾಲ್, ಟಪ್ಪಾ ಮತ್ತು ಟುಮ್ರಿಗಳಿಗೆ ಮುಸ್ಲಿಮರ ಕೊಡುಗೆಗಳನ್ನು ನಿರಾಕರಿಸುವುದು ಇತಿಹಾಸವನ್ನು ಉದ್ದೇಶಪೂರ್ವಕವಾಗಿ ವಿರೂಪಗೊಳಿಸಿದಂತಾಗುತ್ತದೆ. ಹಿಂದೂ ಮತ್ತು ಮುಸ್ಲಿಂ ಭಾಷಾ ಸಂಪ್ರದಾಯಗಳ ಪರಸ್ಪರ ಕೊಡುಕೊಳ್ಳುವಿಕೆಯ ಮೂಲಕ ಉರ್ದು ಭಾಷೆ ಹೊರಹೊಮ್ಮಿ ವಿಕಸನಗೊಂಡಿದ್ದು ಈ ಯುಗದಲ್ಲಿಯೇ. ಹೆಚ್ಚುಕಡಿಮೆ ಒಂದು ಶತಮಾನದ ಕಾಲ ಜಾಗತಿಕ ವೇದಿಕೆಯಿಂದ ದೂರವೇ ಇದ್ದ ಭಾರತೀಯ ನಾಗರಿಕತೆಯು, ಮೊಘಲ್ ಅವಧಿಯಲ್ಲಿ ವಿಶಾಲ ಜಗತ್ತಿನ ಸಂಪರ್ಕಕ್ಕೆ ತೆರೆದುಕೊಂಡಿತು. ಈ ಅವಧಿಯು ವಿವಿಧ ಪ್ರಾದೇಶಿಕ ಶಕ್ತಿಗಳು ಒಟ್ಟುಗೂಡುವುದಕ್ಕೂ ಸಾಕ್ಷಿಯಾಗಿ ರಾಷ್ಟ್ರೀಯ ಏಕತೆಯ ಪ್ರಜ್ಞೆಗೆ ಬುನಾದಿ ಹಾಕಿತು. ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್‌ರ ಅಜ್ಜ ಕ್ಷಿತಿಮೋಹನ್ ಸೇನ್ ಬರೆದ “ಹಿಂದೂ-ಮುಸ್ಲಿಮರ ಜಂಟಿ ಪ್ರಯತ್ನಗಳು” ಎಂಬ ಪುಸ್ತಕದಲ್ಲಿ ಇಂತಹ ಅನೇಕ ಉದಾಹರಣೆಗಳನ್ನು ಅವರು ವಿಸ್ತಾರವಾಗಿ ಪ್ರಸ್ತುತಪಡಿಸಿದ್ದಾರೆ.
ಕುರುಡು ರಾಷ್ಟ್ರವಾದಕ್ಕೆ ಉತ್ತೇಜನ!
ಮಂತ್ರಿಗಳು ಮತ್ತು ಅಧಿಕಾರಿಗಳು ಇತಿಹಾಸದ ಹೆಸರಿನಲ್ಲಿ ಸುಳ್ಳುಗಳನ್ನು ಪ್ರಚಾರ ಮಾಡಿ, ಅದಕ್ಕೆ ಧಾರ್ಮಿಕ ಗ್ರಂಥಗಳಲ್ಲಿ ವೈಜ್ಞಾನಿಕ ದೃಢೀಕರಣವನ್ನು ಕಂಡುಹಿಡಿಯಲು ಪ್ರಯತ್ನಿಸಿದಾಗ, ಅವರ ಕಾರ್ಯಸೂಚಿಯ ಆಳ ಸುಸ್ಪಷ್ಟವಾಗುತ್ತದೆ. ಪಶ್ಚಿಮ ಬಂಗಾಳದ ಹೌರಾದ ಐಐಇಎಸ್‌ಟಿ, ಶಿವಪುರದಂತಹ ಸಂಸ್ಥೆಗಳಲ್ಲಿ ಭಗವದ್ಗೀತೆಯ ಕುರಿತು ವಿಚಾರ ಸಂಕಿರಣಗಳು, ಇತಿಹಾಸ, ವಿಜ್ಞಾನ ಕಾಂಗ್ರೆಸ್‌ಗಳಲ್ಲಿ, ಪ್ರಾಚೀನ ಭಾರತವು ವಿಮಾನ, ಕಾಂಡಕೋಶ ಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ ಇತ್ಯಾದಿಗಳನ್ನು ಕಂಡು ಹಿಡಿದಿತ್ತು ಎಂಬ ಪ್ರಧಾನಿ ಮೋದಿ ಮತ್ತು ಅವರ ಅನುಯಾಯಿಗಳ ಹೇಳಿಕೆಗಳು; ಧಾರ್ಮಿಕ ಮೊಂಡುತನ ಮತ್ತು ಮತಾಂಧತೆಯ ಆಧಾರದ ಮೇಲೆ ವಾದಗಳ ನಿರೂಪಣೆ, ಚಲನಚಿತ್ರಗಳು ಮತ್ತು ದೂರದರ್ಶನಗಳಲ್ಲಿ ಮೂಢನಂಬಿಕೆಗಳು, ಹಿಂದೂ ಧರ್ಮಾಂಧತೆ, ಮತ್ತು ತಾಂತ್ರಿಕ ಆಚರಣೆಗಳ ವ್ಯಾಪಕ ಪ್ರಚಾರ; ಇವೆಲ್ಲವೂ ಜನರಲ್ಲಿ ತರ್ಕಬದ್ಧ ಚಿಂತನಾ ಪ್ರಕ್ರಿಯೆಯನ್ನು ಮೊಂಡಾಗಿಸುವ ಹಾಗೂ ಅಜ್ಞಾನ ಮತ್ತು ಕುರುಡು ನಂಬಿಕೆಗಳನ್ನು ಪ್ರಚೋದಿಸುವ ವ್ಯವಸ್ಥಿತ ಪ್ರಯತ್ನಗಳು-ಹೀಗೆ, ಹಿಂದುತ್ವ ಸಿದ್ಧಾಂತದ ಜೊತೆಗೆ ಹೊಂದಿಕೊಳ್ಳುವಂತೆ ಸಾಂಸ್ಕೃತಿಕ ಮತ್ತು ಸಾಮಾಜಿಕ ವಾತಾವರಣವನ್ನು ಮರುರೂಪಿಸುವ ಗುರಿ ಇದರಲ್ಲಿದೆ.
ಚಲನಚಿತ್ರಗಳು ಮತ್ತು ದೂರದರ್ಶನಗಳಲ್ಲಿ ಮುಸ್ಲಿಂ ಆಳ್ವಿಕರನ್ನು ಕ್ರೂರಿಗಳು ಹಾಗೂ ಸ್ವೇಚ್ಛಾಚಾರಿಗಳು ಎಂದೂ, ಇದಕ್ಕೆ ವ್ಯತಿರಿಕ್ತವಾಗಿ ಹಿಂದೂರಾಜರ ಶೌರ್ಯ ಮತ್ತು ಶ್ರೇಷ್ಠತೆಯನ್ನು ವೈಭವೀಕರಿಸುವುದೂ ಈ ಕಾರ್ಯಸೂಚಿಯ ಮುಂದುವರಿದ ಭಾಗವೇ ಆಗಿದೆ. ಪರಿಸ್ಥಿತಿ ಇಷ್ಟು ಆತಂಕಕಾರಿಯಾಗಿದ್ದರೂ, ದೇಶದ ಗಣ್ಯ ಇತಿಹಾಸಕಾರರು ಈಗಾಗಲೇ ತಮ್ಮ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂಬುದು ಭರವಸೆ ಮೂಡಿಸುವ ಅಂಶ. ಇರ್ಫಾನ್ ಹಬೀಬ್ , ರೊಮಿಲಾ ಥಾಪರ್‌ರಂತಹ ಇತಿಹಾಸಕಾರರು ಮತ್ತು ಇತರ ಗಣ್ಯ ವ್ಯಕ್ತಿಗಳು ಮತ್ತು ಶಿಕ್ಷಣಪ್ರೇಮಿಗಳು ಇತಿಹಾಸದ ಈ ವಿಕೃತಿಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸುದ್ದಿ ಪತ್ರಿಕೆಗಳಲ್ಲಿ ವರದಿಯಾಗಿದೆ. ದೇಶದ ಎಲ್ಲಾ ಪ್ರಜಾತಾಂತ್ರಿಕ ಮನೋಭಾವದ ನಾಗರಿಕರು ಈಗ ಜಾಗೃತರಾಗುವುದು ಮತ್ತು ಇತಿಹಾಸವನ್ನು ತಿರುಚುವ ಹುನ್ನಾರವನ್ನು ವಿರೋಧಿಸುವಲ್ಲಿ ಸಕ್ರಿಯ ಪಾತ್ರ ವಹಿಸುವುದು ಅತ್ಯಗತ್ಯ.